ಅವಿವೇಕಿ ಪುಂಡರ ದಾಳಿಗೆ ಬದುಕನ್ನೇ ಕಳೆದುಕೊಂಡಿವೆ ಈ ಕುಟುಂಬಗಳು

ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಗಲಭೆ, ದೊಂಬಿ ಹಾಗೂ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಕಿಚ್ಚು ಹಚ್ಚಿದ ಪ್ರಕರಣಗಳು ಹಲವಾರು ಕುಟುಂಬಗಳನ್ನು ಬೀದಿಪಾಲು ಮಾಡಿವೆ. ಆಟೋರಿಕ್ಷಾ ಓಡಿಸಿ ಜೀವನ ನಡೆಸುತ್ತಿದ್ದವರು, ತಳ್ಳುಗಾಡಿಗಳಲ್ಲಿ ತರಕಾರಿ, ಹಣ್ಣುಹಂಪಲು ಮಾರಿ ಬದುಕಿಗೆ ಆಸರೆ ಮಾಡಿಕೊಂಡಿದ್ದವರು, ತಮ್ಮ ಗಾಡಿಗಳು ಗಲಾಟೆಯಲ್ಲಿ ನುಜ್ಜುಗುಜ್ಜಾಗಿರುವುದರಿಂದ ಅಕ್ಷರಶಃ ಊಟಕ್ಕೂ ದೆಸೆಯಿಲ್ಲದಂತಾಗಿದ್ದಾರೆ.

ಬ್ಯಾಂಕ್​ನಿಂದ ಸಾಲ ಪಡೆದು ಖರೀದಿಸಿದ್ದ ಆಟೋ ಮತ್ತು ಕಾರುಗಳು ಬೆಂಕಿಗಾಹುತಿಯಾಗಿವೆ ಇಲ್ಲವೆ ಉಪಯೋಗಿಸಲು ಬಾರದಷ್ಟು ಜಖಂಗೊಂಡಿವೆ. ಕೊರೊನ ಪಿಡುಗು, ಲಾಕ್​ಡೌನ್​ಗಳಿಂದ ಅದಾಗಲೇ ಬೆಂಡೆದ್ದು ಹೋಗಿದ್ದ ಕುಟುಂಬಗಳಿಗೆ ಮೊನ್ನೆಯ ಗಲಭೆ ಹತಾಶೆಯ ಕೂಪಕ್ಕೆ ನೂಕಿದೆ. ಒಂದ್ಹೊತ್ತಿನ ಊಟಕ್ಕೂ ಪರಿತಪಿಸುವ ಸ್ಥಿತಿಯಲ್ಲಿದ್ದಾರೆ, ಅವರ ಮಕ್ಕಳು ಕಂಗಾಲಾಗಿದ್ದಾರೆ. ಅವರ ದಯನೀಯ ಸ್ಥಿತಿಗೆ ಸ್ಥಳೀಯ ನಾಯಕರಾಗಲೀ, ರಾಜ್ಯಮಟ್ಟದ ನಾಯಕರಾಗಲೀ ಒಣಮರುಕ ತೋರುತ್ತಾರೆಯೇ ಹೊರತು ಯಾವ ಸಹಾಯವನ್ನೂ ಮಾಡುತ್ತಿಲ್ಲ.

ಬದುಕು ಪುನಃ ಕಟ್ಟಿಕೊಳ್ಳಲು ಸರಕಾರದಿಂದ ಸಹಾಯ ದೊರಕೀತೆ ಎಂಬ ದೂರದ ಆಸೆ ಅವರಿಟ್ಟುಕೊಂಡಿದ್ದಾರೆ. ಕೈಯಲ್ಲಿ ಒಂದಷ್ಟು ಕಾಗದಗಳನ್ನು ಹಿಡಿದುಕೊಂಡು ಸರಕಾರಿ ಕಚೇರಿಗಳಿಗೆ ಪ್ರತಿದಿನ ಎಡತಾಕುತ್ತಿದ್ದಾರೆ. ಆದರೆ, ಸರಕಾರ ನಡೆಸುತ್ತಿರುವವರು ಹಾಗೂ ವಿರೋಧ ಪಕ್ಷದವರು ಗಲಭೆ ಕುರಿತಂತೆ ಕೆಸರೆರಚಾಟದಲ್ಲಿ ಮಗ್ನರಾಗಿದ್ದಾರೆ. ಅವರ ಪರದಾಟ, ಪರಿತಾಪ ಮತ್ತು ಕಂಗಾಲುತನ ನಿಲ್ಲುವ ಸೂಚನೆಗಳು ಸದ್ಯಕ್ಕಂತೂ ಇಲ್ಲ.

Related Tags:

Related Posts :

Category: