ಆಸಿಸ್ ವಿರುದ್ಧದ T-20 ಹಾಗೂ ಏಕದಿನ ಸರಣಿಗೆ ಆಯ್ಕೆಯಾಗದ ಬಗ್ಗೆ ಮೌನಮುರಿದ ಹಿಟ್​ಮ್ಯಾನ್!

  • pruthvi Shankar
  • Published On - 13:04 PM, 22 Nov 2020

ಬೆಂಗಳೂರಿನ ಎನ್​ಸಿಎನಲ್ಲಿ ತರಬೇತಿ ಪಡೆಯುತ್ತಿರೋ ರೋಹಿತ್ ಶರ್ಮಾ ಬಗ್ಗೆ ಸಾಕಷ್ಟು ಆರೋಪಗಳು ಕೇಳಿ ಬಂದಿದ್ವು. ಹಾಗೇ, ಆಸಿಸ್ ಪ್ರವಾಸಕ್ಕೆ ತನ್ನನ್ನ ಆಯ್ಕೆ ಮಾಡದಿರಲು ಕಾರಣವೇನು ಅನ್ನೋದನ್ನ ಹಿಟ್​ಮ್ಯಾನ್ ಬಹಿರಂಗ ಪಡಿಸಿದ್ದಾರೆ.

ಟೀಂ ಇಂಡಿಯಾ ಓಪನರ್, ಹಿಟ್​ಮ್ಯಾನ್ ರೋಹಿತ್ ಶರ್ಮಾ, ಆಸ್ಟ್ರೇಲಿಯಾ ವಿರುದ್ಧದ ಟಿ-ಟ್ವೆಂಟಿ ಹಾಗೂ ಏಕದಿನ ಸರಣಿಗೆ ಆಯ್ಕೆ ಮಾಡದಿರೋದಕ್ಕೆ ಸಾಕಷ್ಟು ಆಕ್ರೋಶ ವ್ಯಕ್ತವಾಗಿತ್ತು. ರೋಹಿತ್​ನನ್ನ ಆಸಿಸ್ ಪ್ರವಾಸಕ್ಕೆ ಆಯ್ಕೆ ಮಾಡದ್ದಕ್ಕೆ ಕೆಲ ಮಾಜಿ ಕ್ರಿಕೆಟಿಗರು ಸಹ, ಬಿಸಿಸಿಐ ವಿರುದ್ಧ ಗರಂ ಆಗಿದ್ರು.. ಆದ್ರೀಗ, ಆಸಿಸ್ ವಿರುದ್ಧ ಸೀಮಿತ ಓವರ್​ಗಳ ಸರಣಿಗೆ ಆಯ್ಕೆಯಾಗದ ಬಗ್ಗೆ ಸ್ವತಃ ರೋಹಿತ್ ಶರ್ಮಾ, ಕಾರಣವನ್ನ ಬಿಚ್ಚಿಟ್ಟಿದ್ದಾರೆ.

ಐಪಿಎಲ್ ಮುಗಿದ ನಂತ್ರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ ಆಗಮಿಸಿರೋ ರೋಹಿತ್, ರಾಹುಲ್ ದ್ರಾವಿಡ್ ಮಾರ್ಗದರ್ಶನದಲ್ಲಿ ಕೋಚಿಂಗ್ ಪಡೆಯುತ್ತಿದ್ದಾರೆ. ಇದೇ ವೇಳೆ ರೋಹಿತ್ ಶರ್ಮಾ, ತನ್ನನ್ನ ಆಸಿಸ್ ಪ್ರವಾಸಕ್ಕೆ ಯಾಕೆ ಆಯ್ಕೆ ಮಾಡಿಲ್ಲ ಅನ್ನೋ ಕಾರಣವನ್ನ ಬಹಿರಂಗ ಪಡಿಸಿದ್ದಾರೆ.

ಪ್ರಾಮಾಣಿಕವಾಗಿ ಹೇಳಬೇಕೆಂದರೆ ಏನು ನಡೆಯುತ್ತಿದೆ ಎಂಬ ಬಗ್ಗೆ ನನಗೆ ಗೊತ್ತಿಲ್ಲ. ಸಾಕಷ್ಟು ಜನರು ನಾನು ಆಯ್ಕೆಯಾಗದ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಅಂದಿನಿಂದ ಇಲ್ಲಿಯವರೆಗೂ ಬಿಸಿಸಿಐ ಹಾಗೂ ಮುಂಬೈ ಇಂಡಿಯನ್ಸ್ ಜತೆ ನಿಯಮಿತವಾಗಿ ಸಂವಹನದಲ್ಲಿದ್ದೇನೆ ಅಂತ ಹಿಟ್​ಮ್ಯಾನ್ ಹೇಳಿದ್ದಾರೆ.

6 ಪಂದ್ಯ ಆಡುವುದು ಕಷ್ಟ..!
‘‘ ಸ್ನಾಯುಸೆಳೆತದಿಂದ ಗುಣಮುಖನಾಗಿದ್ದೇನೆ. ಬಲಿಷ್ಠ ಹಾಗೂ ಫಿಟ್‌ ಆಗುವ ಪ್ರಕ್ರಿಯೆಯಲ್ಲಿ ತೊಡಗಿದ್ದೇನೆ. ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಸರಣಿ ಆಡುವುದಕ್ಕೂ ಮುನ್ನ ನನ್ನ ಮನಸ್ಸಿನಲ್ಲಿ ಸ್ಪಷ್ಟತೆ ಇರಬೇಕು. ಈ ಭಾವನೆ ಇದ್ದಾಗ ಮಾತ್ರ ಪೂರ್ಣ ಪ್ರಮಾಣದ ಮನಸಿನಲ್ಲಿ ಆಡಲು ಸಾಧ್ಯ. ಈ ಕಾರಣದಿಂದಾಗಿ ನಾನು ಎನ್‌ಸಿಎಯಲ್ಲಿದ್ದೇನೆ. ನನ್ನ ಸ್ನಾಯುಸೆಳೆತದ ಗಾಯಕ್ಕೆ ಇನ್ನೂ ಸ್ವಲ್ಪ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ. ಕೇವಲ 11 ದಿನಗಳಲ್ಲಿ ಸತತವಾಗಿ 6 ಪಂದ್ಯಗಳನ್ನು ಆಡುವುದು ಕಷ್ಟ.”
– ರೋಹಿತ್ ಶರ್ಮಾ, ಟೀಂ ಇಂಡಿಯಾ ಕ್ರಿಕೆಟಿಗ

ಇನ್ನೂ ಗಾಯಗೊಂಡಿದ್ರೂ, ಮುಂಬೈ ಪರ ಪ್ಲೇ ಆಫ್ ಪಂದ್ಯಗಳಲ್ಲಿ ಆಡಿದ್ದ ರೋಹಿತ್, ಬಿಸಿಸಿಐ ಕೆಂಗಣ್ಣಿಗೂ ಗುರಿಯಾಗಿದ್ರು. ಈ ಬಗ್ಗೆ ಪ್ರತಿಕ್ರಿಯಿಸಿರೋ ರೋಹಿತ್, ಚುಟುಕು ಕ್ರಿಕೆಟ್‌ ಆಗಿದ್ದರಿಂದ ಅಂಗಳಕ್ಕೆ ಇಳಿಯುತ್ತೇನೆ. ಎಲ್ಲವನ್ನು ಆರಾಮದಾಯಕವಾಗಿ ನಿರ್ವಹಿಸುತ್ತೇನೆಂದು ಐಪಿಎಲ್‌ ಸಮಯದಲ್ಲಿ ಮುಂಬೈ ಇಂಡಿಯನ್ಸ್‌ಗೆ ಹೇಳಿದ್ದೆ. ನನ್ನ ಮನಸ್ಸಲ್ಲಿ ಏನಾದರೂ ಅಂದುಕೊಂಡರೆ ಅದನ್ನು ಸ್ಪಷ್ಟವಾಗಿ ಮಾಡುವ ಕಡೆಗೆ ಗಮನ ಕೇಂದ್ರಿಕರಿಸುತ್ತೇನೆ ಎಂದು ತಿಳಿಸಿದ್ದಾರೆ.

ಆಸ್ಟ್ರೇಲಿಯಾ ಪ್ರವಾಸಕ್ಕೆ ನನ್ನನ್ನು ಆಯ್ಕೆ ಮಾಡದ ಬಗ್ಗೆ ಎಕ್ಸ್, ವೈ ಅಥವಾ ಝಡ್‌ ಏನೇ ಹೇಳಿದರೂ ನಾನು ಅದನ್ನು ಪರಿಗಣಿಸುವುದಿಲ್ಲ. ಗಾಯಕ್ಕೆ ತುತ್ತಾದ ಎರಡು ದಿನಗಳಲ್ಲಿ ಮುಂದಿನ 10 ದಿನಗಳಲ್ಲಿ ನಾನು ಏನು ಮಾಡಬಹುದು ಎಂಬ ಬಗ್ಗೆ ಯೋಚಿಸುತ್ತೇನೆ ಹಾಗೂ ಆಡಬಹುದಾ ಅಥವಾ ಇಲ್ಲವೇ ಎಂಬುದನ್ನು ಅರಿತುಕೊಳ್ಳುತ್ತೇನೆ ಎಂದು ತಿಳಿಸೋದ್ರೊಂದಿಗೆ ರೋಹಿತ್‌ ಶರ್ಮಾ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ.