ಧೋನಿ ಮಾತು ಕೇಳಿದ್ರೆ ರೋಹಿತ್ ದ್ವಿಶತಕ ವೀರನಾಗ್ತಿರಲಿಲ್ಲ, ರೋಹಿತ್ ಬಿಚ್ಚಿಟ್ಟ ರೋಚಕ ಸ್ಟೋರಿ..

ರೋಹಿತ್ ಶರ್ಮಾ.. ಸದ್ಯ ಟೀಮ್ ಇಂಡಿಯಾ ಪರ ಮೂರು ಫಾರ್ಮೆಟ್​ನಲ್ಲೂ ರನ್ ಮಳೆ ಹರಿಸೋ ಸಾಮ್ರಾಟ. ಅದ್ರಲ್ಲೂ ಏಕದಿನ ಕ್ರಿಕೆಟ್​ನಲ್ಲಿ ಒಂದಲ್ಲಾ ಎರಡಲ್ಲಾ ಬರೊಬ್ಬರಿ ಮೂರು ದ್ವಿಶತಕಗಳನ್ನ ಸಿಡಿಸಿ ದಾಖಲೆ ಬರೆದಿರುವ ವಿಶ್ವದ ಏಕೈಕ ಬ್ಯಾಟ್ಸ್​ಮನ್.

ಡಬಲ್ ಸೆಂಚುರಿ ಸಿಡಿಸೋದು ಅಂದ್ರೆ ಹಿಟ್​ಮ್ಯಾನ್ ರೋಹಿತ್ ಶರ್ಮಾಗೆ, ನೀರು ಕುಡಿದಷ್ಟೇ ಸುಲಭ. ಕಳೆದ ವರ್ಷ ಟೆಸ್ಟ್ ಕ್ರಿಕೆಟ್​ನಲ್ಲೂ ಮತ್ತೊಮ್ಮೆ ಅಬ್ಬರಿಸೋದಕ್ಕೆ ಶುರುಮಾಡಿದ್ದ ರೋಹಿತ್ ಶರ್ಮಾ, ದಕ್ಷಿಣ ಆಫ್ರಿಕಾ ವಿರುದ್ಧದ ರಾಂಚಿ ಟೆಸ್ಟ್ ಪಂದ್ಯದಲ್ಲೂ ಭರ್ಜರಿ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ರು.

ಧೋನಿ ಮಾತನ್ನ ತಿರಸ್ಕರಿಸಿ ಚೊಚ್ಚಲ ದ್ವಿಶತಕ:
ಆದ್ರೀಗ ರೋಹಿತ್ ಶರ್ಮಾ, 2013ರಲ್ಲಿ ಏಕದಿನ ಕ್ರಿಕೆಟ್​ನಲ್ಲಿ ಚೊಚ್ಚಲ ದ್ವಿಶತಕ ಸಿಡಿಸೋ ಸಮಯದಲ್ಲಿ ನಡೆದಿದ್ದ ರೋಚಕ ಸ್ಟೋರಿಯೊಂದನ್ನ ಬಾಯ್ಬಿಟ್ಟಿದ್ದಾರೆ. ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಜೊತೆ ಲೈವ್ ಶೋನಲ್ಲಿ ಮಾತನಾಡುವಾಗ ರೋಹಿತ್, ಮಹೇಂದ್ರ ಸಿಂಗ್ ಧೋನಿ ಮಾತನ್ನ ತಿರಸ್ಕರಿಸಿ ಚೊಚ್ಚಲ ದ್ವಿಶತಕ ಸಿಡಿಸಿದ್ದೇಗೆ ಅನ್ನೋದನ್ನ ಬಾಯ್ಬಿಟ್ಟಿದ್ದಾರೆ.

ಅದು 2013, ನವೆಂಬರ್ 2. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರೋಹಿತ್, ಸುನಾಮಿ ಎಬ್ಬಿಸಿದ್ರು. ಅಂದು ಆಸ್ಟ್ರೇಲಿಯಾ ಬೌಲರ್​ಗಳನ್ನ ಅಟ್ಟಾಡಿಸಿಕೊಂಡು ಹೊಡೆದ ರೋಹಿತ್, ಉದ್ಯಾನ ನಗರಿಯಲ್ಲಿ ವಿಶ್ವದಾಖಲೆ ನಿರ್ಮಿಸಿದ್ರು. ಕೇವಲ 158 ಎಸೆತಗಳಲ್ಲೇ 12 ಬೌಂಡರಿ ಮತ್ತು 16 ಸಿಕ್ಸರ್ ಸಹಿತ 209 ರನ್​ಗಳಿಸಿದ್ರು.

ನೀನು ಸೆಟ್ ಬ್ಯಾಟ್ಸ್​ಮನ್:
ಇದೆ ಚೊಚ್ಚಲ ದ್ವಿಶತಕದ ಬಗ್ಗೆ ರೋಚಕ ಸ್ಟೋರಿಯನ್ನ ಬಿಚ್ಚಿಟ್ಟಿರೋ ರೋಹಿತ್ ಶರ್ಮಾ, ಆವತ್ತು ನಾನು ಮಹೇಂದ್ರ ಸಿಂಗ್ ಧೋನಿ ಮಾತನ್ನ ಕೇಳಿದ್ದೆ ಆಗಿದ್ರೆ, ದ್ವಿಶತಕ ಸಿಡಿಸುತ್ತಲೇ ಇರಲಿಲ್ಲ ಎಂದಿದ್ದಾರೆ. ಧೋನಿ ನನಗೆ ಹೇಳುತ್ತಲೇ ಇದ್ದರು. ನೀನು ಸೆಟ್ ಬ್ಯಾಟ್ಸ್​ಮನ್. ನಾನು ನಿನ್ನ ಜೊತೆಗೆ 48, 49ಮತ್ತು ಕೊನೆ ಓವರ್​ವರೆಗೂ ಬ್ಯಾಟಿಂಗ್ ಮಾಡಬೇಕು. ನೀನು, ನಿನಗೆ ಬೇಕಾದ ಕಡೆ ರನ್​ಗಳಿಸಬಹುದು. ಹೀಗಾಗಿ ನಾನು ಅವಕಾಶ ಪಡೆದುಕೊಳ್ಳುತ್ತೇನೆ. ನೀನು ಸುಮ್ಮನೆ ಸಿಂಗಲ್ಸ್ ಆಡುತ್ತಾ, ಬಾಲ್ ಅನ್ನ ಗ್ಯಾಪ್​ನಲ್ಲಿ ತಳ್ಳುತ್ತಿರು ಎಂದು ಸಲಹೆ ನೀಡಿದ್ರು.

ಆದ್ರೆ ರೋಹಿತ್, ಅಂದು ನಾಯಕನಾಗಿದ್ದ ಧೋನಿ ಮಾತು ಕೇಳಲಿಲ್ಲ. ತನಗೆ ಬೇಕಾದ ಹಾಗೇ ದಂಡಿಸಿದ ರೋಹಿತ್, ಚಿನ್ನಸ್ವಾಮಿ ಅಂಗಳದಲ್ಲಿ ಚೊಚ್ಚಲ ದ್ವಿಶತಕ ಸಿಡಿಸಿ ಮಿಂಚಿದ್ರು. ಒಂದೆಡೆ ಧೋನಿ ಸಲಹೆ ನೀಡುತ್ತಿದ್ರೂ, ಬೌಲರ್​ಗಳ ಮೇಲೆ ಒತ್ತಡ ಹೇರಿದ್ದ ರೋಹಿತ್, ಡಬಲ್ ಸೆಂಚುರಿ ಸ್ಟಾರ್ ಆಗಿ ಹೊರ ಹೊಮ್ಮಿದ್ದ ರೋಚಕ ಸ್ಟೋರಿಯನ್ನ ಬಾಯ್ಬಿಟ್ಟಿದ್ದಾರೆ.

ಒಟ್ನಲ್ಲಿ ಆವತ್ತು ಮಹೇಂದ್ರ ಸಿಂಗ್ ಧೋನಿ ಮಾತನ್ನ ರೋಹಿತ್ ಶರ್ಮಾ ಕೇಳಿದ್ದೇ ಆಗಿದ್ರೆ, ಚೊಚ್ಚಲ ದ್ವಿಶತಕ ಸಿಡಿಸ್ತಾನೇ ಇರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ನಾನು ಏಕದಿನ ಕ್ರಿಕೆಟ್​ನಲ್ಲಿ ದ್ವಿಶತಕ ಸಿಡಿಸಬಹುದು ಅನ್ನೋ ಕಲ್ಪನೆ ಸನಿಹಕ್ಕೂ ಸುಳಿಯುತ್ತಲೂ ಇರುತ್ತಿರಲಿಲ್ವೇನೋ? ಎಂದಿದ್ದಾರೆ.

Related Posts :

Category:

error: Content is protected !!