ಶೂಟಿಂಗ್​ಗೆ ಅನುಮತಿ ಸಿಗದಿದ್ರೆ ಮುತ್ತಿನನಗರಿ ಹೈದ್ರಾಬಾದ್‌ನತ್ತ ಸ್ಯಾಂಡಲ್‌ವುಡ್‌ ಚಿತ್ತ!

ಬೆಂಗಳೂರು: ಲಾಕ್‌ಡೌನ್‌ ನಿಯಮಗಳು ಸಡಿಲವಾಗುತ್ತಿದ್ದಂತೆ ಕನ್ನಡ ಚಿತ್ರರಂಗವೂ ಮೈಕೊಡವಿ ಎದ್ದಿದೆ. ಚಿತ್ರರಂಗದ ಚಟುವಟಿಕೆಗಳ ಆರಂಭಕ್ಕೆ ಅಗತ್ಯ ತಯಾರಿ ಶುರುವಾಗಿವೆ. ಇದಕ್ಕಾಗಿ ಕೊರೊನಾ ವೈರಸ್‌ ಆರ್ಭಟದ ನಂತರ ಕೆಲ ಅನಿವಾರ್ಯ ಬದಲಾವಣೆಗಳನ್ನ ಮಾಡಿಕೊಳ್ಳಲೇಬೇಕಾಗಿದೆ. ಇದಕ್ಕಾಗಿ ಅಗತ್ಯ ಸೂತ್ರಗಳ ತಯಾರಿ ಆರಂಭವಾಗಿದೆ.

ಸಪ್ತ ನಿರ್ದೇಶಕರ ಸಪ್ತ ಸೂತ್ರಗಳು
ಹೌದು ಕೊರೊನಾದಿಂದ ಇಡೀ ಜಗತ್ತೇ ನಡುಗಿದೆ. ಬದಲಾದ ಪರಿಸ್ಥಿತಿಗೆ ತಕ್ಕಂತೆ ಸ್ಯಾಂಡಲ್‌ವುಡ್‌ ಕೂಡಾ ಬದಲಾಗುತ್ತಿದೆ. ಇದಕ್ಕಾಗಿ ಕೆಲ ಅಗತ್ಯ ಸೂತ್ರಗಳನ್ನ ಹೆಣೆಯುತ್ತಿದೆ. ಸುಮಾರು ಏಳು ಮಂದಿ ಹಿರಿಯ ನಿರ್ದೇಶಕರು ಸೇರಿ ಸುಗಮ ಶೂಟಿಂಗ್‌ಗೆ ಸಪ್ತ ಸೂತ್ರಗಳನ್ನ ಹೆಣೆಯುತ್ತಿದ್ದಾರೆ.

ಇದು ಅಂತಿಮವಾದ ನಂತರ ಚಿತ್ರರಂಗದ ಪ್ರಮುಖರು ಈ ಸೂತ್ರಗಳನ್ನು ಸರ್ಕಾರದ ಮುಂದೆ ಪ್ರಸ್ತುತ ಪಡಿಸಲಿದ್ದಾರೆ. ಈ ಸೂತ್ರಗಳಿಗೆ ರಾಜ್ಯ ಸರ್ಕಾರ ಒಪ್ಪಿಗೆ ಸೂಚಿಸಿದ್ರೆ ಸಿನಿಮಾ ಚಟುವಟಿಕೆಗಳು ಶುರುವಾಗಲಿವೆ. ಒಂದು ವೇಳೆ ರಾಜ್ಯ ಸರ್ಕಾರ ಗ್ರೀನ್‌ ಸಿಗ್ನಲ್‌ ತೋರಿಸದೇ, ರೆಡ್‌ ಸಿಗ್ನಲ್‌ ಕೊಟ್ಟರೆ ಬೆಂಗಳೂರಲ್ಲಿ ಯಾವುದೇ ಶೂಟಿಂಗ್‌ಗಳು ನಡೆಯೋದಿಲ್ಲ.

ಹೈದ್ರಾಬಾದ್‌ನತ್ತ ಪಯಣ ಪಕ್ಕಾ
ಒಂದು ವೇಳೆ ರಾಜ್ಯ ಸರ್ಕಾರ ಶೂಟಿಂಗ್‌ ಸೇರಿದಂತೆ ಯಾವುದೇ ಸ್ಯಾಂಡಲ್‌ವುಡ್‌ ಕಾರ್ಯಗಳಿಗೆ ಒಪ್ಪಿಗೆ ಸೂಚಿಸದಿದ್ರೆ, ಚಿತ್ರರಂಗ ಹೈದ್ರಾಬಾದ್‌ನತ್ತ ಪಯಣ ಬೆಳೆಸಲಿದೆ. ಯಾಕಂದ್ರೆ, ಹೈದ್ರಾಬಾದ್‌ನಲ್ಲಿ ಜೂನ್‌ 15ರಿಂದ ಚಿತ್ರೀಕರಣಕ್ಕೆ ಅನುಮತಿಯನ್ನ ಅಲ್ಲಿನ ಸರ್ಕಾರ ಕೊಟ್ಟಾಗಿದೆ.

ಈಗಾಗಲೇ ರಾಜ್ಯ ಸರ್ಕಾರದ ಉಸಾಬರಿಯೇ ಬೇಡ ಅಂತಾ ಕೆಲ ನಿರ್ಮಾಪಕರು ತಮ್ಮ ಚಿತ್ರಗಳ ಶೂಟಿಂಗ್‌ಗೆ ಹೈದ್ರಾಬಾದ್‌ನತ್ತ ಮುಖ ಮಾಡಿದ್ದಾರೆ. ಇದರಲ್ಲಿ ಪ್ರಮುಖವಾಗಿ ಧ್ರುವ ಸರ್ಜಾ ಅಭಿನಯದ ‘ಪೊಗರು’, ‘ಮದಗಜ’ ಚಿತ್ರಗಳು ಪ್ರಮುಖವಾದವು. ಜುಲೈ 1ರ ನಂತರ ಅನುಮತಿ ಸಿಗದಿದ್ರೆ ಇನ್ನುಳಿದವರೂ ಕೂಡಾ ಮುತ್ತಿನನಗರಿ ಹೈದ್ರಾಬಾದ್‌ಗೆ ಪಯಣಿಸಿಲಿದ್ದಾರೆ.

Related Tags:

Related Posts :

Category:

error: Content is protected !!