ಮರಳಿ ಬನ್ನಿ ಚಿತ್ರಮಂದಿರಗಳಿಗೆ.. ಕಲಾವಿದರಿಂದ ಪ್ರೇಕ್ಷಕ ಮಹಾಪ್ರಭುಗೆ ವೀಡಿಯೊ ಆಹ್ವಾನ!

  • sadhu srinath
  • Published On - 11:55 AM, 17 Nov 2020

ಶುಕ್ರವಾರ ಬಂತೆಂದರೆ ಸಿನಿಪ್ರೇಮಿಗಳಿಗೆ ಹಬ್ಬ. ತಮ್ಮ ನೆಚ್ಚಿನ ನಟ, ನಟಿ, ಕಲಾವಿದರನ್ನು ದೊಡ್ಡ ಪರದೆಯಲ್ಲಿ ಕಂಡು ಕಣ್ತುಂಬಿಕೊಳ್ಳಲು ಚಿತ್ರಮಂದಿರಗಳ ಮುಂದೆ ಮುಂಜಾವಿನಿಂದಲೇ ಕಾದು ನಿಲ್ಲುವ ಜನರ ಪ್ರೀತಿಯೇ ಸಿನಿಮಾ ಜಗತ್ತಿನ ಶಕ್ತಿ. ಸೋಲಿಸಿದರೂ, ಗೆಲ್ಲಿಸಿದರೂ ಕಲಾವಿದರಿಗೆ ಅಭಿಮಾನಿಗಳೇ ದೇವರುಗಳು. ಆದರೆ ಈಗ ಅತ್ತು, ನಕ್ಕು, ಕೇಕೆ ಹೊಡೆಯುತ್ತಿದ್ದ, ತಮ್ಮ ನೆಚ್ಚಿನ ನಟ ಪರದೆಯ ಮೇಲೆ ಏಟು ತಿಂದಾಗ ಅದನ್ನು ತಾವೇ ಅನುಭವಿಸುವಷ್ಟು ಆಳವಾಗಿ ಸಿನಿಮಾವನ್ನು ಅನುಭವಿಸುತ್ತಿದ್ದ, ಫಸ್ಟ್ ಡೇ ಫಸ್ಟ್ ಶೋನಿಂದ ನೂರು ದಿನ ತುಂಬುವ ತನಕವೂ ಸಿನಿಮಾ ಮಂದಿರಕ್ಕೆ ಮೆರುಗು ತುಂಬುತ್ತಿದ್ದ ಪ್ರೇಕ್ಷಕ ಮಹಾಪ್ರಭುಗಳಿಲ್ಲದೇ ಚಿತ್ರಮಂದಿರಗಳು ಖಾಲಿ ಬಿದ್ದು ಭರ್ಜರಿ ಎಂಟು ತಿಂಗಳು ತುಂಬಿದೆ.

Celebrate Cinema Again: ಕೊರೊನಾ ಬಾರದಿದ್ದರೆ ಅದೆಷ್ಟೋ ಸಿನಿಮಾಗಳು ಈ ಅವಧಿಯಲ್ಲಿ ಬಂದು ಹೋಗಬೇಕಿತ್ತು. ಅದೆಷ್ಟೋ ಹೊಸ ಕಲಾವಿದರು ಪರದೆಯ ಮೇಲೆ ಕಾಣಿಸಿಕೊಳ್ಳಬೇಕಿತ್ತು. ಪ್ರತಿ ಶುಕ್ರವಾರ ಪತ್ರಿಕೆಯ ಪುಟಪುಟಗಳಲ್ಲಿ ಸಿನಿ ಸುದ್ದಿ ರಾರಾಜಿಸಬೇಕಿತ್ತು. ಆದರೆ, ಕೊರೊನಾ ದೆಸೆಯಿಂದ ಎಲ್ಲವೂ ಖಾಲಿ ಖಾಲಿ.

ಇದೀಗ ಸರ್ಕಾರ ಕೊರೊನಾ ತಡೆಗಟ್ಟಲು ಹೇರಿದ್ದ ನಿಯಮಗಳನ್ನು ಹಂತಹಂತವಾಗಿ ಸಡಿಲಿಸಿದೆ. ತಿಂಗಳುಗಟ್ಟಲೆ ಬಾಗಿಲೆಳೆದಿದ್ದ ಸಿನಿ ಮಂದಿರಗಳಿಗೆ ನಿಧಾನಕ್ಕೆ ಜೀವ ಬರುತ್ತಿದೆ. ಅದೇನೇ ಆದರೂ ಜನರಲ್ಲಿ ಕೊರೊನಾ ಭಯ ದಟ್ಟವಾಗಿರುವುದರಿಂದ ಮೊದಲಿನಂತೆ ಥಿಯೇಟರ್​ಗಳು ಕಳೆಗಟ್ಟುತ್ತಿಲ್ಲ. ಪರಿಸ್ಥಿತಿ ಹೀಗಿರುವಾಗ ಸಿನಿ ಪ್ರೇಮಿಗಳನ್ನು ಚಿತ್ರಮಂದಿರತ್ತ ಮರಳಿ ಕರೆಯಲು ಕೆಆರ್​ಜಿ ಕನೆಕ್ಟ್ಸ್ ಹೊಸ ವೀಡಿಯೋವನ್ನು ಬಿಡುಗಡೆಮಾಡಿದೆ.

ಯೋಗಿ ಜಿ ರಾಜ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಈ ಆಮಂತ್ರಣ ವೀಡಿಯೋದಲ್ಲಿ ಕಲಾವಿದರಾದ ಗಿರೀಶ್ ಜಟ್ಟಿ ಹಾಗೂ ಬಿ.ಪಿ.ಗೋಪಾಲ ತೆರೆಯ ಮೇಲೆ ಕಾಣಿಸಿಕೊಂಡಿದ್ದು ಧೂಳು ತುಂಬಿದ್ದ ಚಿತ್ರ ಮಂದಿರವೊಂದನ್ನು ಪುನಃ ತೆರೆಯುತ್ತಿರುವ ಪರಿಕಲ್ಪನೆಯಲ್ಲಿ ಚಿತ್ರಿಸಲಾಗಿದೆ. ನಡುವಲ್ಲಿ ಚಿತ್ರಮಂದಿರದ ಗತಕಾಲದ ವೈಭವಗಳನ್ನು ನೆನಪಿಸುವ ಪ್ರೇಕ್ಷಕರ ಗುಂಪು, ಸಂಭ್ರಮಗಳನ್ನು ತೋರಿಸಲಾಗಿರುವ ವೀಡಿಯೋ ಮಾಸ್ಕ್ ಧರಿಸಿ ಪ್ರೇಕ್ಷಕರು ಚಿತ್ರ ಮಂದಿರಗಳಿಗೆ ಧಾವಿಸುವ ಆಶಾವಾದದೊಂದಿಗೆ ಕೊನೆಗೊಂಡಿದೆ.

ವೀಡಿಯೋದ ಅಂತ್ಯದಲ್ಲಿ ನಟರಾದ ಡಾ.ಶಿವರಾಜ್​ ಕುಮಾರ್, ದುನಿಯಾ ವಿಜಯ್, ಶ್ರೀ ಮುರುಳಿ, ಧನಂಜಯ್​, ಗಣೇಶ್​, ಪುನೀತ್ ರಾಜ್​ಕುಮಾರ್ ಪ್ರೇಕ್ಷಕ ಪ್ರಭುಗಳನ್ನು ಚಿತ್ರಮಂದಿರಗಳಿಗೆ ಆಹ್ವಾನಿಸಿದ್ದು ಮರಳಿ ಬನ್ನಿ ಮತ್ತೆ ಸಂಭ್ರಮಿಸೋಣ ಎಂದಿದ್ದಾರೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 15,000ಕ್ಕೂ ಅಧಿಕ ವೀಕ್ಷಣೆ ಗಳಿಸಿದ ವೀಡಿಯೋ ಮನಮುಟ್ಟುವಂತೆ ಮೂಡಿಬಂದಿದೆ.