ಸಂಜನಾಗೆ ಸಿಗಲಿಲ್ಲ ರಿಲೀಫ್.. ಪರಪ್ಪನ ಅಗ್ರಹಾರ ಜೈಲೇ ಗಟ್ಟಿ

ಬೆಂಗಳೂರು: ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣಕ್ಕೆ ಸಂಬಂಧಿಸಿದಂತೆ CCB ಯಿಂದ ಬಂಧನಕ್ಕೊಳಗಾಗಿರುವ ನಟಿ ಸಂಜನಾ ಗಲ್ರಾನಿಯ ಜಾಮೀನು ಅರ್ಜಿ ವಿಚಾರಣೆ ನಡೆಸಿದ 1ನೇ ಎಸಿಎಂಎಂ ‌ಕೋರ್ಟ್‌ ಸಂಜನಾಗೆ ಜಾಮೀನು ನಿರಾಕರಿಸಿದೆ.

ಈ ಮಧ್ಯೆ, ಆರೋಪಿ ಸಂಜನಾರನ್ನು ತನ್ನ ಕಸ್ಟಡಿಗೆ ನೀಡುವುದು ಬೇಡ ಎಂದು ಸಿಸಿಬಿ ಕೋರ್ಟ್ ಗಮನಕ್ಕೆ ತಂದ ಕಾರಣ, ಸಂಜನಾಗೆ 2 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಕೋರ್ಟ್ ಆದೇಶ ಹೊರಡಿಸಿದೆ. ಹಾಗಾಗಿ, ಸಂಜನಾ ಇಂದೇ ಪರಪ್ಪನ ಅಗ್ರಹಾರ ಜೈಲಿಗೆ ತೆರಳಬೇಕಾಗಿದೆ.

ಈ ಪ್ರಕರಣವನ್ನು 1ನೇ ಎಸಿಎಂಎಂ ಕೋರ್ಟ್​ನಿಂದ 33 ನೇ ಎಸಿಎಂಎಂಗೆ ವರ್ಗಾಯಿಸಿ ಆದೇಶ ಹೊರಡಿಸಲಾಗಿದೆ. ಸೆ.18 ರಂದು ಸಂಜನಾರನ್ನು ವಿಶೇಷ ಕೋರ್ಟ್ ಗೆ ಹಾಜರುಪಡಿಸಲು ಸೂಚನೆ ನೀಡಲಾಗಿದ್ದು, ಜಾಮೀನು ಅರ್ಜಿಯನ್ನು ಅಲ್ಲಿಯೇ ತೀರ್ಮಾನ ಮಾಡುವಂತೆ ಆದೇಶದಲ್ಲಿ ಹೇಳಲಾಗಿದೆ.

ಸಂಜನಾ ಪರ ವಕೀಲರ ವಾದ ಹೀಗಿತ್ತು..
ನಟಿ ಸಂಜನಾ ಗಲ್ರಾನಿ ಪರ ವಕೀಲರಾದ ಶ್ರೀನಿವಾಸರಾವ್ ಅವರಿಂದ ವಾದ ಮಂಡನೆ ಮಾಡಲಾಯಿತು. ಸಿಸಿಬಿ ಪೊಲೀಸರ ಕ್ರಮಕ್ಕೆ ತಕರಾರು ಎತ್ತಿದ ವಕೀಲರು, ಪ್ರಕರಣವನ್ನು NDPS ವಿಶೇಷ ಕೋರ್ಟ್‌ಗೆ ವರ್ಗಾಯಿಸಬೇಕಿತ್ತು. ಆದರೆ ಜಾಮೀನು ತಪ್ಪಿಸುವ ಉದ್ದೇಶದಿಂದ 1ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದ್ದಾರೆ ಎಂದು ಸಿಸಿಬಿ ಪೊಲೀಸರ ಕ್ರಮಕ್ಕೆ ತಕರಾರು ಎತ್ತಿದರು.

ಇದು NDPS ಕೇಸ್ ಆಗಿರುವುದರಿಂದ ವಿಶೇಷ ಕೋರ್ಟ್‌ ಇದೆ. ಅಲ್ಲಿ ಜಾಮೀನು ಅರ್ಜಿಯೂ ವಿಚಾರಣೆಗೆ ಬಾಕಿ ಇದೆ. ಅಲ್ಲೇ ಹಾಜರುಪಡಿಸಿದ್ದರೆ ಜಾಮೀನಿಗೆ ಮನವಿ ಸಲ್ಲಿಸಬಹುದಿತ್ತು ಎಂದರು.

ಜೊತೆಗೆ ಸಂಜನಾ ಮೇಲಿನ ಆರೋಪವೇನು ಎಂಬುದನ್ನು ಸಿಸಿಬಿ ತಿಳಿಸಿಲ್ಲ ಹಾಗೂ ಯಾವ ಸೆಕ್ಷನ್ ಅಡಿ ಸಂಜನಾ ಆರೋಪವಿದೆ ಎಂಬುದನ್ನೂ ತಿಳಿಸಿಲ್ಲ. ಹೀಗಾಗಿ ಇದು ವಿಶೇಷ ಕೋರ್ಟ್ ವ್ಯಾಪ್ತಿಗೆ ಬರುತ್ತದೋ ಇಲ್ಲವೋ ತಿಳಿದಿಲ್ಲ. ಇದರಿಂದ ಸಿಸಿಬಿ ಆರೋಪವೇ ಅಸ್ಪಷ್ಟವಾಗಿರುವುದರಿಂದ ನ್ಯಾಯಾಂಗ ಬಂಧನ ಬೇಡ ಎಂದರು. ಜೊತೆಗೆ 3 ವರ್ಷಕ್ಕಿಂತ ಕಡಿಮೆ ಶಿಕ್ಷೆಯಿದ್ದರೆ ಇಲ್ಲೇ ಜಾಮೀನು ನೀಡಬಹುದು. ಹೀಗಾಗಿ ಸಂಜನಾರಿಗೆ ಜಾಮೀನು ನೀಡಲು ಸಂಜನಾ ಪರ ವಕೀಲರು ವಾದ ಮಂಡಿಸಿದರು.

Related Tags:

Related Posts :

Category: