ಸಂಶೋಧನೆಗಾಗಿ.. ದಿನಾ 5 ಸಾವಿರ ಸೊಳ್ಳೆಗಳಿಂದ ಕಚ್ಚಿಸಿಕೊಳ್ತಾನೆ ಈ ವಿಜ್ಞಾನಿ!

ದಿನವೆಲ್ಲಾ ದುಡಿದು ಸುಸ್ತಾಗಿ ಮನೆಗೆ ಬಂದ ಮೇಲೆ ಹಾಯಾಗಿ ಮಲಗಬೇಕೆಂದು ಬಯಸೋ ಪ್ರತಿಯೊಬ್ಬ ವ್ಯಕ್ತಿಯ ಪರಮ ವೈರಿ ಅಂದ್ರೆ ಅದು ಸೊಳ್ಳೆ. ನೆಮ್ಮದಿಯಾಗಿ ನಿದ್ದೆ ಮಾಡೋಣ ಅಂತಾ ದಿಂಬಿನ ಮೇಲೆ ತಲೆ ಇಟ್ಟರೇ ಸಾಕು ಗುಯ್​ ಅಂತಾ ಕಿವಿಗಳ ಬಳಿ ಕೇಳಿ ಬರುವ ಸೊಳ್ಳೆಗಳ ನಿನಾದ ಶುರು. ಸಾಕಪ್ಪಾ ಸಾಕು ಈ ಸೊಳ್ಳೆಕಾಟ ಎಂದು ಹಲವರು ಬೇಸಗೊಳ್ಳುವುದೂ ಉಂಟು.

ಆದರೆ, ಇಲ್ಲೊಬ್ಬ ವಿಜ್ಞಾನಿ ತನ್ನ ಸಂಶೋಧನೆಗೋಸ್ಕರ ಪ್ರತಿ ನಿತ್ಯ ಒಂದಲ್ಲ, ಎರಡಲ್ಲ ಸರಿಸುಮಾರು 5 ಸಾವಿರ ಸೊಳ್ಳೆಗಳಿಂದ ಕಚ್ಚಿಸಿಕೊಳ್ಳುತ್ತಾನೆ ಗೊತ್ತಾ. ಹೌದು, ಆಸ್ಟ್ರೇಲಿಯಾದ ವಿಜ್ಞಾನಿ ಪೆರಾನ್​ ರಾಸ್​ ತನ್ನ ವೈಜ್ಞಾನಿಕ ಸಂಶೋಧನೆಗಾಗಿ ಸೊಳ್ಳೆಗಳ ಕೈಯಲ್ಲಿ ಕಚ್ಚಿಸಿಕೊಳ್ಳುತ್ತಾನೆ.

ಅಂದ ಹಾಗೆ, ತನ್ನ ಸಂಶೋಧನೆಗಾಗಿ ರಾಸ್​ ಬಳಸುವ ಸೊಳ್ಳೆಗಳು ಅಂತಿಂಥದ್ದು ಅಲ್ಲ. ಈ ಸೊಳ್ಳೆಗಳು ವೋಲ್​ಬ್ಯಾಖಿಯಾ (Wolbachia) ಎಂಬ ಬ್ಯಾಕ್ಟೀರಿಯಾ ಅಥವಾ ಕೀಟಾಣುವನ್ನು ಹೊಂದಿದೆ. ಈ ವೋಲ್​ಬ್ಯಾಖಿಯಾ ಕೀಟಾಣು ಸೊಳ್ಳೆಗಳ ಮೂಲಕ ಹರಡುವ ಡೆಂಗಿ ರೋಗವನ್ನು ತಡೆಗಟ್ಟಲು ಬಹಳ ಪರಿಣಾಮಕಾರಿ.

ಹಾಗಾಗಿ, ರಾಸ್ ಈ ಪ್ರಜಾತಿಯ ಸೊಳ್ಳೆಗಳ ಮೊಟ್ಟೆಗಳಲ್ಲಿ ಈ ಕೀಟಾಣುವನ್ನು ಅಳವಡಿಸಿ ಬೆಳೆಸುತ್ತಿದ್ದಾರೆ. ಆದ್ದರಿಂದ, ಡೆಂಗಿ ರೋಗದ ಹರಡುವಿಕೆಯನ್ನು ಮೊಳಕೆಯಲ್ಲಿ ಚಿವುಟಬಹುದು ಅನ್ನೋ ಯೋಚನೆಯಲ್ಲಿ ಪೆರಾನ್​ ಈ ಸಂಶೋಧನೆಗೆ ಮುಂದಾಗಿದ್ದಾರೆ. ಹಾಗಾಗಿ, ಪೆರಾನ್​ ರಾಸ್​ ಈ ರೀತಿ ವೋಲಬ್ಯಾಖಿಯಾ ಇರುವ ಸೊಳ್ಳೆಗಳಿಂದ ಕಚ್ಚಿಸಿಕೊಂಡು ಡೆಂಗಿಯ ವಿರುದ್ಧ ಈ ಕೀಟಾಣು ಎಷ್ಟು ಪರಿಣಾಮಕಾರಿ ಎಂದು ಪ್ರಯೋಗ ನಡೆಸುತ್ತಿದ್ದಾರೆ.

Related Tags:

Related Posts :

Category:

error: Content is protected !!