ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆಗೆ ಸ್ಕಾಟ್ಲೆಂಡ್ ಸರ್ಕಾರ ನಿರ್ಧಾರ

ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್​ಗಳು ಅತ್ಯಗತ್ಯ. ನೈರ್ಮಲ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಪ್ರತಿ ಹುಡುಗಿಯರು, ಮಹಿಳೆಯರು ಪ್ಯಾಡ್​ ಬಳಸುವುದು ಒಳ್ಳೆಯದು. ಈ ನಿಟ್ಟಿನಲ್ಲಿ ಎಲ್ಲ ವರ್ಗದ ಮಹಿಳೆಯರಿಗೂ ಅನುಕೂಲವಾಗುವಂತ ಮಹತ್ಕಾರ್ಯವನ್ನು ಸ್ಕಾಟ್ಲೆಂಡ್ ಸರ್ಕಾರ ಮಾಡಿದೆ.

  • Lakshmi Hegde
  • Published On - 18:35 PM, 25 Nov 2020

ಸ್ಕಾಟ್ಲೆಂಡ್​ : ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಸ್ಯಾನಿಟರಿ ಪ್ಯಾಡ್​ಗಳು ಅತ್ಯಗತ್ಯ. ನೈರ್ಮಲ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಪ್ರತಿ ಹುಡುಗಿಯರು, ಮಹಿಳೆಯರು ಪ್ಯಾಡ್​ ಬಳಸುವುದು ಒಳ್ಳೆಯದು. ಆದರೆ ಇದರ ಬೆಲೆ ಬಡವರಿಗೆ ದುಬಾರಿ. ಅದೆಷ್ಟೋ ಬಡ ಯುವತಿಯರು, ಮಹಿಳೆಯರು ಪ್ಯಾಡ್​ ಕೊಳ್ಳಲಾಗದೆ ಕಷ್ಟಪಡುತ್ತಾರೆ. ಆದರೆ ಅಂಥ ಮಹಿಳೆಯರಿಗೂ ಅನುಕೂಲವಾಗುವಂಥ ಮಹತ್ಕಾರ್ಯವನ್ನು ಸ್ಕಾಟ್ಲೆಂಡ್ ಸರ್ಕಾರ ಮಾಡಿದೆ.

ಎಲ್ಲ ವರ್ಗದ ಮಹಿಳೆಯರಿಗೂ ಸ್ಯಾನಿಟರಿ ಪ್ಯಾಡ್​ ಹಾಗೂ ಟ್ಯಾಂಪೂನ್​ಗಳನ್ನು ಉಚಿತವಾಗಿ ನೀಡುವ ಘೋಷಣೆಯನ್ನು ಸ್ಕಾಟ್ಲೆಂಡ್​ ಮಾಡಿದೆ. ಈ ಮೂಲಕ ಜಗತ್ತಿನಲ್ಲೇ ಮಹಿಳೆಯರ ಪೀರಿಯಡ್ಸ್​ಗೆ ಅಗತ್ಯ ಇರುವ ವಸ್ತುಗಳನ್ನು ಉಚಿತವಾಗಿ ನೀಡಿದ ಮೊದಲ ದೇಶ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ. ಇನ್ನು ಶಾಲೆ, ಕಾಲೇಜು, ಯೂನಿವರ್ಸಿಟಿಗಳಲ್ಲೂ ಈ ಪ್ಯಾಡ್​ಗಳು ಉಚಿತವಾಗಿ ಲಭ್ಯ ಇರಲಿವೆ.

ಬಡವರ್ಗದ ಯುವತಿಯರು, ಮಹಿಳೆಯರು ಮುಟ್ಟಿನ ದಿನಗಳಲ್ಲಿ ಪ್ಯಾಡ್​ ಇಲ್ಲದೆ ಕಷ್ಟಪಡುವುದನ್ನು ತಪ್ಪಿಸಲು ಸಂಸದೆ ಮೋನಿಕಾ ಲೆನ್ನನ್​ ಅವರು 2016ರಿಂದಲೂ ಅಭಿಯಾನ ನಡೆಸುತ್ತಿದ್ದರು. 2019ರ ಏಪ್ರಿಲ್​ 23ರಂದು ‘ಪೀರಿಯಡ್ಸ್​ ಪ್ರಾಡಕ್ಟ್ಸ್​ (ಫ್ರೀ ಪ್ರಾವಿಸನ್​)(ಸ್ಕಾಟ್ಲೆಂಡ್​) [ಪೀರಿಯಡ್ಸ್​ ಉತ್ಪನ್ನಗಳು (ಉಚಿತ ಹಂಚಿಕೆ)(ಸ್ಕಾಟ್ಲೆಂಡ್​)] ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸಿದ್ದರು. ಆ ಮಸೂದೆಯನ್ನು ಇಂದು (ನ.25) ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿದೆ. ಇದರ ಅನ್ವಯ ಪ್ರತಿ ಹಳ್ಳಿ, ಹಿಂದುಳಿದ ಪ್ರದೇಶಗಳ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಅಗತ್ಯ ಇರುವ ಪ್ಯಾಡ್​ಗಳನ್ನು ವಿತರಿಸುವ ಕೆಲಸವನ್ನು ಆಯಾ ಸ್ಥಳೀಯ ಆಡಳಿತಗಳು ಮಾಡಬೇಕಿದೆ.

ಮಸೂದೆ ಅಂಗೀಕಾರ ಆಗುತ್ತಿದ್ದಂತೆ ಲೆನ್ನನ್​ ತುಂಬ ಖುಷಿ ವ್ಯಕ್ತಪಡಿಸಿದ್ದಾರೆ. ಮುಟ್ಟಿನ ದಿನಗಳಲ್ಲಿ ಸ್ಯಾನಿಟೈಸರ್​ ಪ್ಯಾಡ್​ ಸೇರಿ ಕೆಲವು ವಸ್ತುಗಳು ಅತ್ಯಗತ್ಯವಾಗಿ ಬೇಕಾಗಿರುತ್ತದೆ. ಆದರೆ ಅದೆಷ್ಟೋ ಬಡ ಮಹಿಳೆಯರು ಇದರಿಂದ ವಂಚಿತರಾಗುತ್ತಾರೆ. ಈಗ ಸ್ಕಾಟ್ಲೆಂಡ್​ನಲ್ಲಿ ಪ್ರತಿ ಮಹಿಳೆಯೂ ಉಚಿತವಾಗಿ ಪ್ಯಾಡ್​ ಪಡೆಯುವಂತಾಗಿದೆ. ಅವರ ಅಗತ್ಯತೆ ಪೂರೈಕೆ ಆದಂತಾಗಿದೆ.

ಮುಟ್ಟು ಐದು ದಿನ ಇರುತ್ತದೆ. ಈ ಅವಧಿಗೆ ಪ್ಯಾಡ್ ಖರೀದಿ ಮಾಡಲು ಸರಾಸರಿ 8 ಪೌಂಡ್​ಗಳಷ್ಟು ವೆಚ್ಚ ಆಗಬಹುದು. ಆದರೆ ಪ್ರಸ್ತುತ ಶಾಲೆ, ಕಾಲೇಜು, ವಿಶ್ವ ವಿದ್ಯಾಲಯಗಳಲ್ಲಿ ಸ್ಯಾನಿಟರಿ ಪ್ಯಾಡ್​, ಟ್ಯಾಂಪೂನ್​​ಗಳನ್ನು ಮತ್ತು ಕೆಲವು ಮರುಬಳಕೆ ಮಾಡಬಹುದಾದ ಉತ್ಪನ್ನಗಳು ಒದಗಿಸಲು ಸ್ಕಾಟಿಷ್​ ಸರ್ಕಾರ 52 ಲಕ್ಷ ಪೌಂಡ್ (ಸುಮಾರು ₹ 51.36 ಕೋಟಿ) ಮೀಸಲಿಟ್ಟಿದೆ ಎಂದು ತಿಳಿಸಿದ್ದಾರೆ. ಹಾಗೇ, ಎಲ್ಲ ಸಾರ್ವಜನಿಕ ಸ್ಥಳಗಳಲ್ಲಿ ಲಭ್ಯವಾಗುವಂತೆ ವ್ಯವಸ್ಥೆ ಮಾಡಲು 40 ಲಕ್ಷ ಪೌಂಡ್​ (ಸುಮಾರು ₹ 31.51 ಕೋಟಿ)ನ್ನು ನೀಡಲಾಗುವುದು ಎಂದು ತಿಳಿಸಿದ್ದಾರೆ.