ಅಮೆರಿಕಾದ ಈ ಕಾಮ ಪಿಪಾಸು ಮಹಿಳೆಯರನ್ನು ಸೆಕ್ಸ್ ಗುಲಾಮರನ್ನಾಗಿ ಮಾಡಿಕೊಂಡಿದ್ದ!

  • Arun Belly
  • Published On - 21:15 PM, 28 Oct 2020

ಅಮೆರಿಕಾದಂಥ ಅತ್ಯಂತ ಮುಂದುವರಿದಿರುವ ದೇಶದಲ್ಲೂ ಢೋಂಗಿ ಬಾಬಾಗಳು, ಸ್ವಯಂಘೋಷಿತ ಅವತಾರ ಪುರುಷರು ಜನರನ್ನು ವಂಚಿಸುತ್ತಿದ್ದಾರೆ ಮತ್ತು ಅವರನ್ನು ನಂಬಿ ಕಷ್ಟಪರಿಹಾರಕ್ಕಾಗಿ ಬರುವ ಅಮಾಯಕ ಮಹಿಳೆಯರನ್ನು ಕಾಮದ ಬೊಂಬೆಗಳಾಗಿ ಉಪಯೋಗಿಸುತ್ತಿದ್ದಾರೆ.

ಮಂಗಳವಾರದಂದು ನ್ಯೂಯಾರ್ಕ್​ನ ಒಂದು ಕೋರ್ಟಿನ ನ್ಯಾಯಾಧೀಶರು ನೆಕ್ಸಿಯಮ್ ಹೆಸರಿನ ಒಂದು ಧಾರ್ಮಿಕ ಸಂಸ್ಥೆ ನಡೆಸುತ್ತಿದ್ದ ಕೀತ್ ರೆನೀರ್ ಹೆಸರಿನ ಕಾಮ ಪಿಪಾಸುವನ್ನು 120 ವರ್ಷಗಳ ಸೆರೆವಾಸದ ಶಿಕ್ಷೆ ವಿಧಿಸಿದ್ದಾರೆ. ಅವನ ಮೇಲಿದ್ದ ಎಲ್ಲ 7 ಆರೋಪಗಳು ಸಾಬೀತಾದ ನಂತರ ಜಡ್ಜ್ ಶಿಕ್ಷೆ ಪ್ರಕಟಿಸಿದರು. ವಂಚನೆ, ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರಶೋಷಣೆ, ಅಪರಾಧಿ ಕುತಂತ್ರ, ಬಲವಂತವಾಗಿ ಹಣ ಕೀಳುವುದು ಮೊದಲಾದ ಪ್ರಕರಣಗಳು ಅವನ ವಿರುದ್ಧ ದಾಖಲಾಗಿದ್ದವು.

ಶ್ರೀಮಂತ ಮಹಿಳೆಯರನ್ನು ಬಲೆಗೆ ಹಾಕಿಕೊಂಡು ಅವರನ್ನು ಸೆಕ್ಸ್​ಗಾಗಿ ಬಳಸಿ, ಅವರಿಗೆ ಗೊತ್ತಿಲ್ಲದಂತೆ ಅದನ್ನು ರೆಕಾರ್ಡ್ ಮಾಡಿ ನಂತರ ಬ್ಲ್ಯಾಕ್​ಮೇಲ್ ಮಾಡುವುದು ರೆನೀರ್​ನ ತಂತ್ರವಾಗಿತ್ತು. ಅವನಿಂದ ಶೋಷಣೆಗೊಳಗಾದ 13 ಮಹಿಳೆಯರು ಬ್ರೂಕ್ಲಿನ್ ಕೋರ್ಟಿನಲ್ಲಿ ತಾವು ಅನುಭವಿಸಿದ ಹಿಂಸೆಯನ್ನು ಹೇಳಿದರು. ಅವರಲ್ಲಿ ಒಬ್ಬಳು ಕೇವಲ 15 ವರ್ಷದ ಬಾಲಕಿ.

ಕೋರ್ಟಿನಲ್ಲಿ ಸಾಕ್ಷ್ಯ ಹೇಳುವಾಗ ಈ ಬಾಲಕಿ, ‘‘ಅವನು ನನ್ನ ಯೌವನವನ್ನೇ ದೋಚಿಬಿಟ್ಟ,’’ ಎಂದು ಹೇಳಿ ಬಿಕ್ಕಿ ಬಿಕ್ಕಿ ಅತ್ತಳಂತೆ. ಈ ಮಹಿಳೆಯರ ಹೇಳಿಕೆಗಳಲ್ಲದೆ, ಇತರ 90 ನೊಂದ ಮಹಿಳೆಯರು ನ್ಯಾಯಲಯಕ್ಕೆ ಬರೆದ ಪತ್ರಗಳನ್ನು ಸಹ ನ್ಯಾಯಾಧೀಶರು ಸಾಕ್ಷ್ಯವಾಗಿ ಪರಿಗಣಿಸಿದರು.

5 ದಿನಗಳ ಸ್ವ-ಸಹಾಯ ಕೋರ್ಸ್ ಒಂದನ್ನು ರೆನೀರ್ ನಡೆಸುತ್ತಿದ್ದ. ಅದಕ್ಕಾಗಿ ಅವನ ತೆಗೆದುಕೊಳ್ಳುತ್ತಿದ್ದ ಶುಲ್ಕ 5,000 ಡಾಲರ್. ನೂರಾರು ಮಹಿಳೆಯರು ಕೋರ್ಸ್​ಗೆ ಸೇರುತ್ತಿದ್ದರು, ಆದರೆ ಒಂದರೆಡು ದಿನಗಳಲ್ಲೇ ಅವರಿಗೆ ಅವನ ಹಕೀಕತ್ತು ಗೊತ್ತಾಗಿ ಬಿಡುತ್ತಿತ್ತು. ಅಷ್ಟರಲ್ಲಾಗಲೇ ರೆನೀರ್ ಕೆಲವರನ್ನು ಬಲೆಗೆ ಹಾಕಿಕೊಂಡುಬಿಟ್ಟಿರುತ್ತಿದ್ದ.

ಹಾಗೆ ಬುಟ್ಟಿಗೆ ಹಾಕಿಕೊಂಡ ಸ್ತ್ರೀಯರನ್ನು ರೆನೀರ್ ಅಕ್ಷರಶಃ ಸೆಕ್ಸ್ ಗುಲಾಮರನ್ನಾಗಿ ಮಾಡಿಕೊಂಡು ಅವರಿಗೆ ಸರಿಯಾಗಿ ಆಹಾರ ನೀಡದೆ ಅರೆಹೊಟ್ಟೆಯಲ್ಲಿ ಮಲಗಿಸುತ್ತಿದ್ದ. ಪಿಱಮಿಡ್ ಸ್ವರೂಪದ ಒಂದು ರಚನೆಯನ್ನು ಅವನು ಮಾಡಿಕೊಂಡಿದ್ದನೆಂದು ನೊಂದ ಮಹಿಳೆಯರು ಹೇಳಿದ್ದಾರೆ. ಆ ಪಿಱಮಿಡ್ ತುದಿಯಲ್ಲಿರುತ್ತಿದ್ದ ರೇನೀರ್ ಕೆಳಗಿದ್ದ ಮಹಿಳೆಯರನ್ನು ತನ್ನ ಗುಲಾಮರಂತೆ, ಪಶುಗಳಂತೆ ನಡೆಸಿಕೊಳ್ಳುತ್ತಿದ್ದ. ಪಶುಗಳಿಗೆ ಬ್ರ್ಯಾಂಡ್ ಮಾಡುವಂತೆ ಆ ಅಸಹಾಯಕ ಮಹಿಳೆಯರನ್ನು ಸಹ ಬ್ರ್ಯಾಂಡ್ ಮಾಡುತ್ತಿದ್ದ ಎಂದು ನೊಂದವರು ಕೋರ್ಟಿಗೆ ಹೇಳಿದ್ದಾರೆ.

ರೆನೀರ್ ತನ್ನ ಪರ ವಾದಿಸಲು ವಕೀಲರ ಪಡೆಯನ್ನು ಹೈರ್ ಮಾಡಿದ್ದ, ಆದರೆ ಅವರು ಅವನಿಗೆ ವಿಧಿಸಿರುವ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಿ ಎಂದು ವಾದಿಸಿದ್ದು ಬಿಟ್ಟರೆ ಬೇರೇನೂ ಮಾಡಲಾಗಲಿಲ್ಲ.