ಕಂಗನಾಳ ಕಚೇರಿ ಒಡೆದಿದ್ದು ಶಿವ ಸೇನೆಯಲ್ಲ, ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಷನ್: ರಾವತ್

ಬಾಲಿವುಡ್ ನಟಿ ಕಂಗನಾ ರನೌತ್ ಅವರ ಕಟ್ಟಡ ಧ್ವಂಸ ಮತ್ತು ಶಿವ ಸೇನೆ ನಡುವೆ ಯಾವುದೇ ಸಂಬಂಧವಿಲ್ಲವೆಂದು ಪಕ್ಷದ ನಾಯಕ ಸಂಜಯ ರಾವತ್ ಇಂದು ಮುಂಬೈಯಲ್ಲಿ ಹೇಳಿದರು.

‘‘ಆಕೆಯ ಕಟ್ಟಡ ಒಡೆಯವ ವಿಷಯ ಬೃಹನ್ಮುಂಬಯಿ ಮುನಿಸಿಪಲ್ ಕಾರ್ಪೊರೇಷನ್​ಗೆ (ಬಿಎಮ್​ಸಿ) ಸಂಬಂಧಿರುವುದರಿಂದ ನಾನು ಆ ಬಗ್ಗೆ ಮಾತಾಡಲು ಇಚ್ಛಿಸುವುದಿಲ್ಲ,’’ ಎಂದು ಸುದ್ದಿಗಾರರಿಗೆ ಹೇಳಿದ ರಾವತ್, ‘‘ಸದರಿ ವಿಷಯ ಕುರಿತು ಹೆಚ್ಚಿನ ಮಾಹಿತಿ ಬೇಕಿದ್ದರೆ ಮೇಯರ್ ಇಲ್ಲವೇ ಬಿಎಮ್​ಸಿ ಕಮೀಷನರ್ ಜೊತೆ ಮಾತಾಡಿ,’’ ಎಂದರು.

ಬುಧವಾರದಂದು ತಾನು ಬಿಡುಗಡೆ ಮಾಡಿದ್ದ ವಿಡಿಯೊವೊಂದರಲ್ಲಿ ಮಹಾರಾಷ್ಟ್ರದ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ವಿರುದ್ದ ಏಕವಚನದಲ್ಲೇ ಕೂಗಾಡಿದ್ದ ಕಂಗನಾ, ‘‘ನೀನು ನನ್ನ ಮನೆ ನಾಶ ಮಾಡಿದಂತೆಯೇ ನಿನ್ನ ದುರಹಂಕಾರ ಕೂಡ ಒಂದು ದಿನ ನಾಶವಾಗಲಿದೆ.’’ ಎಂದಿದ್ದರು. ಠಾಕ್ರೆ ವಿರುದ್ಧ ಕಂಗನಾಳ ಆಕ್ರೋಶದ ಮಾತುಗಳ ನಂತರ ಮುಂಬೈ ಪೊಲೀಸ್ ಎಫ್ಐಆರ್ ದಾಖಲಿಸಿದೆ.

ಸುಶಾಂತ್ ಸಿಂಗ್ ರಜಪೂತ ಸಾವಿನ ಪ್ರಕರಣದ ತನಿಖೆಯನ್ನು ಮುಂಬೈ ಪೊಲೀಸ್ ನಿರ್ವಹಿಸುತ್ತಿರುವ ರೀತಿಯ ಬಗ್ಗೆ ಅಸಾಮಾಧಾನ ವ್ಯಕ್ತಪಡಿಸಿರುವ ಕಂಗನಾ ಪೊಲೀಸ್ ಹಾಗೂ ಮಹಾರಾಷ್ಟ್ರ ಸರ್ಕಾರದ ವಿರುದ್ಧ ಅಕ್ಷರಶಃ ಕಾದಾಟಕ್ಕಿಳಿದಿದ್ದಾಳೆ. ಮುಂಬೈ ನಗರವನ್ನು ಆಕೆ ಪಾಕಿಸ್ತಾನ ಆಕ್ರಮಿತ ಕಾಶ್ಮೀರಕ್ಕೆ ಹೋಲಿಸಿದ ನಂತರ ಶಿವ ಸೇನೆಯ ಕಾರ್ಯಕರ್ತರು ಆಕೆಗೆ ತಕ್ಕ ಶಾಸ್ತಿ ಮಾಡುವುದಾಗಿ ಪಣತೊಟ್ಟಿದ್ದಾರೆ. ಕೊವಿಡ್-19 ಸೋಂಕು ಶುರುವಾದಾಗಿನಿಂದ ಹಿಮಾಚಲ ಪ್ರದೇಶದಲಲ್ಲಿದ್ದ ಕಂಗನಾಗೆ ಮುಂಬೈಯಲ್ಲಿ ಕಾಲಿಡಲು ಬಿಡುವುದಿಲ್ಲ ಅಂತ ಸೇನೆಯ ಕಾರ್ಯಕರ್ತರು ಬೆದರಿಕೆಯೊಡ್ಡಿದ್ದರು. ಆದರೆ, ರಾಷ್ಟ್ರ ಪ್ರಶಸ್ತಿ ವಿಜೇತ ನಟಿಯು Z ಪ್ಲಸ್ ಭದ್ರತೆಯೊಂದಿಗೆ ನಿನ್ನೆ ಶಿಮ್ಲಾದಿಂದ ಮುಂಬೈಗೆ ಆಗಮಿಸಿದರು.

Related Tags:

Related Posts :

Category: