ಕೆಪಿಸಿಸಿ ಸ್ಥಾನ ಮಾನ: ಡಿಕೆಶಿ, ಸಿದ್ದರಾಮಯ್ಯ ನಡುವೆ ಜಿದ್ದಾಜಿದ್ದಿ

ಬೆಂಗಳೂರು: ಒಂದು ಕಡೆ ಎಐಸಿಸಿ ಅಧಿನಾಯಕಿ ಸೋನಿಯಾ ಗಾಂಧಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಕನಕಪುರ ಬಂಡೆ, ಪಕ್ಷದ ಟ್ರಬಲ್ ಶೂಟರ್ ಡಿ.ಕೆ.ಶಿವಕುಮಾರ್ ಹೆಸರನ್ನು ಅಂತಿಮಗೊಳಿಸುವಲ್ಲಿ ಸಫಲರಾಗಿದ್ದಾರೆ ಎಂದು ಪಕ್ಷದ ಮೂಲಗಳು ಹೇಳುತ್ತಿವೆಯಾದರೂ ರಾಜ್ಯದಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಸ್ಥಾನದ ಬಗ್ಗೆ ಸಿದ್ದರಾಮಯ್ಯ ತಮ್ಮ ಟವೆಲ್ ಹಾಕಿರುವುದರಿಂದ ಈ ವಿಷಯದಲ್ಲಿ ಸೋನಿಯಾ ಯಾವುದೇ ನಿರ್ಣಯಕ್ಕೆ ಬರುವಲ್ಲಿ ವಿಫಲರಾಗಿದ್ದಾರೆ ಎಂದು ತಿಳಿದುಬಂದಿದೆ. ಸಿದ್ದರಾಮಯ್ಯ ಕಾರ್ಯಾಧ್ಯಕ್ಷ ಸ್ಥಾನಕ್ಕೆ ತಮ್ಮ ಬೆಂಬಲಿಗರನ್ನು ನೇಮಿಸುವುದಕ್ಕೆ ಪಟ್ಟು ಹಿಡಿದಿದ್ದಾರೆ. ಹಾಗಾಗಿ ಕೆಪಿಸಿಸಿ ಅಧ್ಯಕ್ಷರ ಹೆಸರನ್ನು ಘೋಷಿಸುವಲ್ಲಿ ವಿಳಂಬವಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಿದ್ದರಾಮಯ್ಯಗೆ 2 ಸ್ಥಾನ ನೀಡಲು ಪಟ್ಟು:
ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸದ್ಯ ಭಾರಿ ಕಸರತ್ತು ನಡೆಯುತ್ತಿದೆ. ಈಗಾಗಲೇ ಕಾಂಗ್ರೆಸ್​ನ ಪ್ರಭಾವಿ ಶಾಸಕ ಡಿ.ಕೆ.ಶಿವಕುಮಾರ್ ಹೆಸರು ಬಹುತೇಕ ಫೈನಲ್ ಆಗಿದೆ ಎನ್ನಲಾಗಿದೆ. ಈ ಮಧ್ಯೆಯೇ ಕಾಂಗ್ರೆಸ್​ ಶಾಸಕಾಂಗ ಪಕ್ಷದ ನಾಯಕ ಸ್ಥಾನ ಮತ್ತು ವಿಪಕ್ಷ ನಾಯಕ ಸ್ಥಾನದಲ್ಲಿ ಸಿದ್ದರಾಮಯ್ಯ ಅವರನ್ನ ಮುಂದುವರಿಸುವಂತೆ ಬೆಂಬಲಿಗರು ಪಟ್ಟು ಹಿಡಿದಿದ್ದಾರೆ.

ಸಿದ್ದರಾಮಯ್ಯ ಕೇವಲ ವಿಪಕ್ಷ ನಾಯಕರಾಗಿ ಮುಂದುವರಿದ್ರೆ, ಕೇವಲ ಸರ್ಕಾರಿ ಕಾರು, ಬಂಗಲೆಗೆ ಮಾತ್ರ ಸೀಮಿತರಾಗುತ್ತಾರೆ. ಅಲ್ಲದೆ, ಪಕ್ಷದ ಮೇಲೆ ಮೊದಲಿದ್ದ ಹಿಡಿತ ತಪ್ಪುತ್ತದೆ ಎಂಬ ಭೀತಿ ಸಿದ್ದರಾಮಯ್ಯ ಬಣಕ್ಕೆ ಕಾಡುತ್ತಿದೆ. ಹೀಗಾಗಿ ಎರಡೂ ಸ್ಥಾನ ಸಿದ್ದರಾಮಯ್ಯಗೆ ನೀಡಲು ಒತ್ತಾಯಿಸಿದ್ದಾರೆ. ಒಂದು ವೇಳೆ ಸಿದ್ದರಾಮಯ್ಯಗೆ 2 ಸ್ಥಾನ ಸಿಗದಿದ್ರೆ ನೂತನ ಕೆಪಿಸಿಸಿ ಅಧ್ಯಕ್ಷರಿಗೆ ಬೆಂಬಲ ಘೋಷಿಸಿ ತಟಸ್ಥರಾಗಿರಲು ಸಿದ್ದರಾಮಯ್ಯ ಬಣ ಚಿಂತನೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

 

Related Posts :

Leave a Reply

Your email address will not be published. Required fields are marked *

ತಾಜಾ ಸುದ್ದಿ

error: Content is protected !!