ಸಿದ್ದರಾಮಯ್ಯ ತನಿಖೆಯ ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಿದ್ದಾರೆ: ಬೊಮ್ಮಾಯಿ

ಸ್ಯಾಂಡಲ್‌ವುಡ್‌ಗೆ ಡ್ರಗ್ಸ್ ಜಾಲದ ನಂಟು ಪ್ರಕರಣ ಕುರಿತು ಮಾಜಿ ಮುಖ್ಯಮಂತ್ರಿ ಹಾಗೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಗೆ ಮಾಧ್ಯಮ ಪ್ರಕಟಣೆ ಮೂಲಕ ಪ್ರತಿಕ್ರಿಯಿಸಿರುವ ಗೃಹ ಸಚಿವ ಬಸವರಾಜ ಬೊಮ್ಮಾಯಿ, ಸಿದ್ದರಾಮಯ್ಯನವರ ಹೇಳಿಕೆ ಆಧಾರರಹಿತ, ಅವರ ಬಳಿ ಯಾವುದಾದರೂ ಸಾಕ್ಷ್ಯಗಳಿದ್ರೆ ನೀಡಲಿ, ಅವರು ನೀಡುವ ಸಾಕ್ಷ್ಯಗಳನ್ನು ಖಂಡಿತವಾಗಿ ತನಿಖೆಗೆ ಬಳಸಿಕೊಳ್ಳಲಾಗುವುದೆಂದು ಹೇಳಿದ್ದಾರೆ.

‘‘ಡ್ರಗ್ಸ್ ಕೇಸ್ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಸರ್ಕಾರದಿದ ಸಂಪೂರ್ಣ ಸ್ವಾತಂತ್ರ್ಯ ನೀಡಲಾಗಿದೆ, ತಪ್ಪಿತಸ್ಥರನ್ನು ರಕ್ಷಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಹಾಗೆ ನೋಡಿದರೆ, 2018ರಲ್ಲೇ ಬೆಂಗಳೂರಿನಲ್ಲಿ ಅಪಾರ ಪ್ರಮಾಣದ ಡ್ರಗ್ಸ್ ಸಿಕ್ಕಿದ್ದವು, ಆಗ ಸಿದ್ದರಾಮಯ್ಯನವರು ತನಿಖೆಯನ್ನು ಸರಿಯಾಗಿ ಮಾಡಿಸಿದ್ದರೆ ನಗರದಲ್ಲಿ ಡ್ರಗ್ಸ್ ದಂಧೆ ಹತೋಟಿಯಲ್ಲಿರುತ್ತಿತ್ತು. ತನಿಖಾಧಿಕಾರಿಗಳ ಕೈಕಟ್ಟಿಹಾಕಿದ್ದ ಆರೋಪಗಳು ಆಗ ಕೇಳಿಬಂದಿದ್ದವು, ಇದನ್ನು ಹಿರಿಯ ಕಾಗ್ರೆಸ್ ನಾಯಕರು ಅದ್ಹೇಗೆ ಸಮರ್ಥಿಸಿಕೊಳ್ಳುತ್ತಾರೆಯೋ?’’ ಎಂದು ಬೊಮ್ಮಾಯಿ ಪ್ರಶ್ನಿಸಿದ್ದಾರೆ.

ಡ್ರಗ್ಸ್ ದಂಧೆ ಕೇಸ್ ತನಿಖೆ ಆರಂಭಗೊಂಡು 2 ವಾರ ಮಾತ್ರ ಆಗಿದೆ ಮತ್ತು 2 ಪ್ರಕರಣಗಳಲ್ಲಿ ಒಟ್ಟು 13 ಆರೋಪಿಗಳನ್ನು ಬಂಧಿಸಲಾಗಿದೆ, ಉಳಿದವರನ್ನು ಕೂಡ ಶೀಘ್ರದಲ್ಲಿಯೇ ಬಂಧಿಸಲಾಗುವುದು ಎಂದಿರುವ ಬೊಮ್ಮಾಯಿ, ‘‘ತನಿಖೆ ಸಂಪೂರ್ಣ ಪಾರದರ್ಶಕವಾಗಿ ನಡೆಯುತ್ತಿದೆ, ಪದೇಪದೆ ಪೊಲೀಸ್ ಕಾರ್ಯಕ್ಷಮತೆಯ ಬಗ್ಗೆ ಸಂಶಯಾಸ್ಪದ ಹೇಳಿಕೆ ನೀಡುವುದು ಯಾರನ್ನೋ ರಕ್ಷಣೆ ಮಾಡುತ್ತಿರುವಂತೆ ಮತ್ತು ತನಿಖೆಯ ದಾರಿ ತಪ್ಪಿಸುವ ಪ್ರಯತ್ನದಂತಿದೆ. ಸರ್ಕಾರ ಡ್ರಗ್ಸ್ ವಿಷಯದಲ್ಲಿ ನಿಷ್ಠುರವಾಗಿ, ನ್ಯಾಯಸಮ್ಮತವಾಗಿ ತನಿಖೆಯನ್ನು ಮುಂದುವರಿಸಿದೆ, ಸಿದ್ದರಾಮಯ್ಯನವರ ಮಾತುಗಳು ಪೊಲೀಸರ ಆತ್ಮಸ್ಥೈರ್ಯವನ್ನು ಅಲುಗಾಡಿಸಲಾರವು,’’ ಅಂತ ಕುಟಕಿದ್ದಾರೆ.

Related Tags:

Related Posts :

Category:

error: Content is protected !!