ಅಧಿವೇಶನ ಅವಧಿ ವಿಸ್ತರಣೆ ಕೋರಿ ಸ್ಪೀಕರ್​ಗೆ ಸಿದ್ದರಾಮಯ್ಯ ಪತ್ರ

  • TV9 Web Team
  • Published On - 18:51 PM, 9 Sep 2020
ವಿಪಕ್ಷ ನಾಯಕ ಸಿದ್ದರಾಮಯ್ಯ

ಸೆಪ್ಟೆಂಬರ್ 21ರಿಂದ ವಿಧಾನಮಂಡಲ ಅಧಿವೇಶನವನ್ನು ಕೇವಲ 8 ದಿನಗಳವರೆಗೆ ನಡೆಸಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ವಿಧಾನಸಭಾಧ್ಯಕ್ಷರಿಗೆ ಪತ್ರವೊಂದನ್ನು ಬರೆದಿದ್ದು ಅಧಿವೇಶನವನ್ನು ಕನಿಷ್ಠ ಮೂರು ವಾರಗಳವರೆಗೆ ವಿಸ್ತರಿಸಬೇಕೆಂದು ಕೋರಿದ್ದಾರೆ.

ರಾಜ್ಯ ಸರ್ಕಾರ ಸುಮಾರು 20 ಸುಗ್ರೀವಾಜ್ಞೆ ಸೇರಿದಂತೆ 35ಕ್ಕೂ ಅಧಿಕ ಮಸೂದೆಗಳನ್ನು ಮಂಡಿಸುವ ಇರಾದೆ ಇಟ್ಟುಕೊಂಡಿದೆ. ಕೇವಲ ಎಂಟು ದಿನಗಳ ಅಧಿವೇಶನದಲ್ಲಿ ಅಷ್ಟೆಲ್ಲ ವಿಷಯಗಳನ್ನು ಚರ್ಚಿಸುವುದು ಸಾಧ್ಯವಾಗುವುದಿಲ್ಲ, ಹಾಗಾಗಿ ಅಧಿವೇಶನದ ಅವಧಿಯನ್ನು ಮೂರು ವಾರಗಳಿಗೆ ವಿಸ್ತರಿಸಬೇಕೆಂದು ಮಾಜಿ ಮುಖ್ಯಮಂತ್ರಿಗಳು ಕೋರಿದ್ದಾರೆ.

‘‘ರಾಜ್ಯ ಈಗ ಅತ್ಯಂತ ಸಂಕಷ್ಟದ ಸಮಯದಲ್ಲಿದೆ, ಕೊವಿಡ್-19 ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದೆ. ಸೋಂಕಿಗೆ ಈಗಾಗಲೇ 6,500ಕ್ಕು ಹೆಚ್ಚು ಜನ ಬಲಿಯಾಗಿದ್ದಾರೆ. ಉತ್ತರ ಕರ್ನಾಟಕದ ಹಲವಾರು ಭಾಗಗಳಲ್ಲಿ ಜನ ನೆರೆ ಹಾವಳಿಯಿಂದ ತತ್ತರಿಸಿದ್ದಾರೆ. ಅಲ್ಲದೆ ಅಧಿವೇಶನವನ್ನು ಕನಿಷ್ಠ 60 ದಿನಗಳವರೆಗೆ ನಡೆಸಬೇಕೆಂದು ಕರ್ನಾಟಕ ರಾಜ್ಯ ವಿಧಾನಮಂಡಲ ಸರ್ಕಾರಿ ಕಾರ್ಯಕಲಾಪಗಳ ನಿರ್ವಹಣೆ ಅಧಿನಿಯಮ ಸೂಚಿಸುತ್ತದೆ. ಆದರೆ, ಸರ್ಕಾರ ಜ್ವಲಂತ ಸಮಸ್ಯೆಗಳನ್ನು ಚರ್ಚಿಸದೆ ಪಲಾಯನಗೈಯಲು ಪ್ರಯತ್ನಿಸುತ್ತಿದೆ. ಅದಕ್ಕೆ ಅವಕಾಶ ನೀಡದೆ ಅಧಿವೇಶನವನ್ನು ಮೂರು ವಾರಗಳಿಗೆ ವಿಸ್ತರಿಸಬೇಕೆಂದು ಮನವಿ ಮಾಡುತ್ತೇನೆ,’’ ಅಂತ ಸಿದ್ದರಾಮಯ್ಯ ಪತ್ರದಲ್ಲಿ ಬರೆದಿದ್ದಾರೆ.