ವಿರಾಟ್​ಗೆ ಮೈದಾನಲ್ಲಿದ್ದರೂ ಪತ್ನಿಯ ಊಟದ ಬಗ್ಗೆ ಚಿಂತೆ!

  • Arun Belly
  • Published On - 20:14 PM, 29 Oct 2020

ರಾಯಲ್ ಚಾಲೆಂಜರ್ಸ್ ಬೆಂಗಳೂರು ಇತ್ತೀಚಿನ ಎರಡು ಪಂದ್ಯಗಳನ್ನು ಸೋತಿದ್ದು ಯಾಕೆ ಅಂತ ಗೊತ್ತುಂಟಾ ಮಾರಾಯ್ರೇ? ವಿಷಯ ಏನು ಅಂದರೆ, ಟೀಮಿನ ನಾಯಕ ಇದ್ದಾರಲ್ಲ, ವಿರಾಟ್ ಕೊಹ್ಲಿ, ಅವರಿಗೆ ಅಟಕ್ಕಿಂತ ತಮ್ಮ ಗರ್ಭಿಣಿ ಪತ್ನಿ ಅನುಷ್ಕಾ ಶರ್ಮ ಅವರ ಮೇಲೆಯೇ ಜಾಸ್ತಿ ಗಮನವಿರುವಂತಿದೆ ಮಾರಾಯ್ರೇ.

ಎಲ್ಲರಿಗೂ ತಮ್ಮ ಹೆಂಡತಿಯು ಬಗ್ಗೆ ಪ್ರೀತಿ, ಕಾಳಜಿ ಇದ್ದೇ ಇರುತ್ತೆ ವಿರಾಟ್ ಏನು ಬೇರೆ ಗ್ರಹದವರಾ ಅಂತ ನೀವು ಅಂದುಕೊಳ್ಳತ್ತಿರಬಹುದು, ಅಲ್ವಾ? ಆದರೆ ವ್ಯತ್ಯಾಸ ಇದೆ ಮಾರಾಯ್ರೇ.

ಏನು ಗೊತ್ತಾ, ಮೊನ್ನೆ ಚೆನೈ ಸೂಪರ್ ಕಿಂಗ್ಸ್ ವಿರುದ್ಧ ಆಡುವಾಗ ಮೈದಾನದಲ್ಲಿ ತಮ್ಮ ಟೀಮಿನ ಇತರ ಆಟಗಾರರೊಂದಿಗೆ ಪಂದ್ಯದ ಮುಂಚಿನ ಸಮಾಲೋಚನೆಯಲ್ಲಿ ವಿರಾಟ್ ತೊಡಗಿದ್ದರೂ ಆವರ ದೃಷ್ಟಿಯೆಲ್ಲ ಸ್ಟ್ಯಾಂಡ್​ನಲ್ಲಿ ಕೆಂಪುಡುಗೆ ಧರಿಸಿ ಬಹಳ ಚಂದವಾಗಿ ಕಾಣುತ್ತಿದ್ದ ಅನುಷ್ಕಾ ಮೇಲಿತ್ತು, ಗೊತ್ತುಂಟಾ?

ಸರಿ ಬಿಡಿ ಅವರ ಪತ್ನಿ ತಾನೆ, ನೋಡಲಿ ಅದರಲ್ಲೇನೂ ತಪ್ಪಿಲ್ಲ. ಆದರೆ ಮೈದಾನದಲ್ಲಿದ್ದುಕೊಂಡೇ ಅವರಿಗೆ ಊಟ ಮಾಡಿದಾ ಅಂತ ಕೇಳೋದಾ?

ಪತಿಯ ಕಾಳಜಿ ಕಂಡು ಭಾರಿ ಖುಷಿಪಡುವ ಅನುಷ್ಕಾ, ಹೌದು ಮಾಡಿಯಾಯ್ತು ಅಂತ ಎರಡು ಕೈಗಳಿಂದ ಥಮ್ಸ್ ಅಪ್ ಮಾಡಿ ಸೂಚಿಸುತ್ತಾರೆ ಮಾರಾಯ್ರೇ!

ಅಷ್ಟಕ್ಕೆ ಸುಮ್ಮನಾಗದ ವಿರಾಟ್ ಆಕೆಯತ್ತ ವ್ಯಥೆಯಿಂದ ನೋಡಿ ನನ್ನನ್ನು ಬಿಟ್ಟು ಊಟ ಮಾಡಿದಾ ಎನ್ನುವ ಅರ್ಥದಲ್ಲಿ ಸನ್ನೆ ಮಾಡುತ್ತಾರೆ.

ಅದಕ್ಕೆ ಅನುಷ್ಕಾ, ತೊಂದರೆಯಿಲ್ಲ, ನೀವು ಆಟ ಮುಗಿಸಿಕೊಂಡು ಬನ್ನಿ, ನಿಮ್ಮೊಂದಿಗೆ ಮತ್ತೊಮ್ಮೆ ಊಟ ಮಾಡ್ತೀನಿ ಅಂತ ಮೂಕ ಭಾಷೆಯಲ್ಲಿ ಹೇಳುತ್ತಾರೆ, ಮಾರಾಯ್ರೇ!

ವೆಲ್, ಮೇಲಿನ ಸನ್ನಿವೇಶವನ್ನು ವಿವರಿಸುವ ವಿಡಿಯೊವೊಂದು ವೈರಲ್ ಆಗಿದೆ. ಇದನ್ನೆಲ್ಲ ನಾವು ತಮಾಷೆಗೆ ಹೇಳಿದ್ದು. ವಿರಾಟ್ ಅವರ ಬದ್ಧತೆ, ಶಿಸ್ತು ಮತ್ತು ಕ್ರೀಡೆಯ ಬಗ್ಗೆ ಅವರಿಗಿರುವ ವ್ಯಾಮೋಹ ಯಾರಾದರೂ ಪಶ್ನಿಸುವುದು ಸಾಧ್ಯವೇ? ಮೊನ್ನೆಯಷ್ಟೇ ಅವರ ಕಮಿಟ್​ಮೆಂಟ್ ಬಗ್ಗೆ ದಕ್ಷಿಣ ಆಫ್ರಿಕಾದ ಶ್ರೇಷ್ಠ ಬೌಲರ್​ಗಳಲ್ಲಿ ಒಬ್ಬರಾಗಿರುವ ಶೌನ್ ಪೊಲ್ಲಾಕ್ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ. ಭಾರತದ ಕ್ರಿಕೆಟ್ ತಂಡ ದಕ್ಷಿಣ ಆಫ್ರಿಕ ಪ್ರವಾಸದಲ್ಲಿದ್ದಾಗ ದಿನದಾಟ ಮುಗಿದ ನಂತರ ಟೀಮಿನ ಇತರ ಸದಸ್ಯರೆಲ್ಲ ಪಾರ್ಟಿಯಲ್ಲಿ ಮುಳುಗಿದ್ದರೆ, ವಿರಾಟ್ ಮಾತ್ರ ಜಿಮ್​ನಲ್ಲಿದ್ದರಂತೆ. ಅಂಥ ಕಮಿಟ್​ಮೆಂಟ್ ಇರುವ ಆಟಗಾರನ ಬಗ್ಗೆ ಹಗುರವಾಗಿ ಮಾತಾಡುವದು ಸಾಧ್ಯವೇ ಇಲ್ಲ.

ಅವರಿಗೆ ಪತ್ನಿಯ ಮೇಲಿನ ಪ್ರೀತಿ ಇನ್ನಷ್ಟು ಹೆಚ್ಚಲಿ, ಅನುಷ್ಕಾ ಮೈದಾನದಲ್ಲಿರಲಿ, ಇಲ್ಲದಿರಲಿ ಭಾರತಕ್ಕೆ ಮತ್ತು ಆರ್​ಸಿಬಿಗೆ ಟನ್​ಗಟ್ಟಲೆ ರನ್ ಗಳಿಸುವುದನ್ನು ಮುಂದುವರಿಸಲಿ.

ಅಂದಹಾಗೆ, ಕೊಹ್ಲಿ ಕುಟುಂಬದಲ್ಲಿ ಹೊಸ ಅತಿಥಿಯ ಆಗಮನ ಮುಂದಿನ ವರ್ಷ ಜನೆವರಿ ತಿಂಗಳಿನ ನಾಲ್ಕನೆ ವಾರದಲ್ಲಿ ಆಗಲಿದೆಯಂತೆ.