ಕೊಹ್ಲಿ, ನೀವು ಆಸ್ಟ್ರೇಲಿಯಾದಲ್ಲಿ ಗೆಲ್ಲಲೇಬೇಕು ಅನ್ನೋ ನಿರೀಕ್ಷೆಯಿದೆ! ದಾದಾ ಹೀಗೆ ಹೇಳಿದ್ಯಾಕೆ?

IPL ಇನ್ನೂ ಪ್ರಾರಂಭವಾಗಿಲ್ಲ. ಆಗಲೇ ಅದರ ಬಳಿಕ ಅಕ್ಟೋಬರ್​ನಲ್ಲಿ ಟೀಮ್ ಇಂಡಿಯಾ ಕೈಗೊಳ್ಳೋ ಆಸ್ಟ್ರೇಲಿಯಾ ಪ್ರವಾಸದ ಬಗ್ಗೆ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಕೊರೊನಾ ಕೋಲಾಹಲ ಮುಗಿದ ನಂತರ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಬೇಕಿದೆ. ಈ ಮುನ್ನ BCCI ಅಧ್ಯಕ್ಷ ಸೌರವ್ ಗಂಗೂಲಿ ಗೆಲುವಿನ ಬಗ್ಗೆ ಮಾತನಾಡಿದ್ದಾರೆ.

ಕಳೆದ ಬಾರಿ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಭಾರತ ತಂಡ, ಕಾಂಗರೂಗಳ ನಾಡಿನಲ್ಲಿ ಟೆಸ್ಟ್ ಸರಣಿ ಗೆದ್ದು ಐತಿಹಾಸಿಕ ದಾಖಲೆ ಬರೆದಿತ್ತು. ಅಷ್ಟೇ ಅಲ್ಲಾ, ಆಸ್ಟ್ರೇಲಿಯಾ ನೆಲದಲ್ಲಿ ಟೆಸ್ಟ್ ಸರಣಿ ಗೆದ್ದ ಏಷ್ಯಾದ ಮೊದಲ ತಂಡ ಅನ್ನೋ ಹಿರಿಮೆಗೂ ಪಾತ್ರವಾಗಿತ್ತು.

ಆದರೆ, ಇಲ್ಲೊಂದು ವಿಷಯವನ್ನ ಅಭಿಮಾನಿಗಳು ಗಮನದಲ್ಲಿಟ್ಟುಕೊಳ್ಳಬೇಕು. ಅದೇನಂದ್ರೆ, ಕಳೆದ ಬಾರಿ ಆಸ್ಟ್ರೇಲಿಯಾ ತಂಡದಲ್ಲಿ ಸ್ಟೀವನ್ ಸ್ಮಿತ್ ಮತ್ತು ಡೇವಿಡ್ ವಾರ್ನರ್ ಇರಲಿಲ್ಲ. ಇದು ಕೊಹ್ಲಿ ಪಡೆಯ ಗೆಲುವಿಗೆ ನೆರವಾಯ್ತು ಅಂತಾ ಕ್ರಿಕೆಟ್ ಪಂಡಿತರು ಈ ಹಿಂದೆ ವಿಶ್ಲೇಷಣೆ ಮಾಡಿದ್ರು.

ಆದರೆ ಈಗ ಇದಕ್ಕೆ ಪ್ರತಿಕ್ರಿಯೆ ನೀಡಿರೋ ಸೌರವ್ ಗಂಗೂಲಿ, ಈ ಸರಣಿಯ ಬಗ್ಗೆ ನಾನು ಈಗಾಗಲೇ ಕೊಹ್ಲಿಯೊಂದಿಗೆ ಮಾತನಾಡಿದ್ದೇನೆ. ಜೊತೆಗೆ, ಈ ವರ್ಷವೂ ಕೊಹ್ಲಿ ಪಡೆ ಆಸ್ಟ್ರೇಲಿಯಾದಲ್ಲಿ ಗೆಲುವು ಸಾಧಿಸುತ್ತೆ ಅನ್ನೋ ನಿರೀಕ್ಷೆಯಿದೆ ಎಂದಿದ್ದಾರೆ.

ನೀವು ವಿರಾಟ್ ಕೊಹ್ಲಿ ಆಗಿರೋದ್ರಿಂದ ನಿಮ್ಮ ಆಟದ ಗುಣಮಟ್ಟ ಚೆನ್ನಾಗಿದೆ. ಆದರೆ ಆಸ್ಟ್ರೇಲಿಯಾದ ವಿರುದ್ಧ ಆಡಲು ನೀವು ಫೀಲ್ಡ್​ಗೆ ಇಳಿದಾಗ ಅಥವಾ ನಿಮ್ಮ ತಂಡದವರೊಂದಿಗೆ ಸಂವಹನ ನಡೆಸುವಾಗ ನಾನು ಟಿವಿಯಲ್ಲಿ ನಿಮ್ಮನ್ನು ಸದಾ ಗಮನಿಸುತ್ತಾ ಇರುತ್ತೇನೆ. ಹಾಗಾಗಿ, ಆಸ್ಟ್ರೇಲಿಯಾ ವಿರುದ್ಧ ಕೇವಲ ಚೆನ್ನಾಗಿ ಆಡೋದು ಮಾತ್ರ ಅಲ್ಲ, ನೀವು ಗೆಲ್ಲಲೇಬೇಕು ಎಂದು ನಿರೀಕ್ಷಿಸುತ್ತೇನೆ ಎಂದು ದಾದಾ ಕ್ಲಿಯರ್​ ಕಟ್​ ಆಗಿ ಕೊಹ್ಲಿಗೆ ಹೇಳಿದ್ದಾರಂತೆ.

ಅಕ್ಟೋಬರ್​ನಲ್ಲಿ, ಕಾಂಗರೂಗಳ ನಾಡಿನಲ್ಲಿ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ ನಾಲ್ಕು ಪಂದ್ಯಗಳು, ಮೂರು T20 ಮ್ಯಾಚ್​ಗಳು ಹಾಗೂ ಮೂರು ಏಕದಿನ ಪಂದ್ಯಗಳಲ್ಲಿ ಆಡಲಿದೆ. ಇದೀಗ, ದಾದಾ ನೀಡಿರುವ ಈ ಕಿವಿಮಾತಿನಿಂದ ಕೊಹ್ಲಿ ಮೇಲೆ ಮತ್ತೊಂದು ಗೆಲುವಿನ ನಿರೀಕ್ಷೆ ಇಮ್ಮಡಿಯಾಗಿದೆ.

Related Tags:

Related Posts :

Category:

error: Content is protected !!