ದಾದಾನಿಂದ ಭೇಷ್ ಎನಿಸಿಕೊಂಡ ಶಾರ್ಜಾ ಕ್ರಿಕೆಟ್ ಮೈದಾನ

ವಿಶ್ವದಲ್ಲೇ ಅತಿಹೆಚ್ಚು ಒಂದು ದಿನದ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸಿದ ದಾಖಲೆ ಹೊಂದಿರುವ ಯುನೈಟೆಡ್ ಅರಬ್ ಎಮಿರೇಟ್ಸ್​ನ (ಯುಎಈ) ಶಾರ್ಜಾ ಕ್ರಿಕೆಟ್ ಮೈದಾನದ ಹೊಸ ಸ್ವರೂಪವನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸೌರವ್ ಗಂಗೂಲಿ ಮನಸಾರೆ ಕೊಂಡಾಡಿದ್ದಾರೆ.

ಕೇವಲ 40 ವರ್ಷಗಳ ಹಿಂದೆ ನಿರ್ಮಿಸಲಾಗಿರುವ ಶಾರ್ಜಾ ಕ್ರಿಕೆಟ್ ಮೈದಾನದಲ್ಲಿ ಇದುವರೆಗೆ ದಾಖಲೆಯ 236 ಒಂದು ದಿನದ ಆಂತರರಾಷ್ಟ್ರೀಯ ಪಂದ್ಯಗಳು ನಡೆದಿವೆ. ಎರಡನೇ ಸ್ಥಾನದಲ್ಲಿರುವ ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ (ಎಸ್​ಸಿಜಿ) ಇಲ್ಲಿಯವರೆಗೆ 154 ಪಂದ್ಯಗಳು ನಡೆದಿವೆ. ಸಂಖ್ಯೆಗಳ ಆಧಾರದಲ್ಲಿ ಈ ಎರಡು ಮೈದಾನಗಳಲ್ಲಿ ನಡೆದಿರುವ ಪಂದ್ಯಗಳ ವ್ಯತ್ಯಾಸವನ್ನು ಗಮನಿಸಿ.

ಇಂಡಿಯನ್ ಪ್ರೀಮಿಯರ್ ಲೀಗ್​ನ 13 ನೇ ಆವೃತಿಯು, ಯುಎಈಯ ಮೂರು ಪ್ರಮುಖ ನಗರಗಳಾಗಿರುವ ಶಾರ್ಜಾ, ಅಬು ಧಾಬಿ ಮತ್ತು ದುಬೈಯಲ್ಲಿ ನಡೆಯಲಿವೆ. ಐಪಿಎಲ್ ಪಂದ್ಯಗಳ ಆಯೋಜನೆಗೆ ಸಿದ್ಧತೆಗಳನ್ನು ವೀಕ್ಷಿಸಲು ಹೋಗಿರುವ ಗಂಗೂಲಿ, ಶಾರ್ಜಾ ಕ್ರಿಕೆಟ್ ಮೈದಾನ ಮಾಡಿಕೊಂಡಿರುವ ತಯಾರಿಗಳನ್ನು ನೋಡಿ ತುಂಬಾ ಪ್ರಭಾವಿತರಾಗಿದ್ದಾರೆ.

ಕೊವಿಡ್-19 ಸೋಂಕಿನ ಹಿನ್ನೆಲೆಯಲ್ಲಿ ಶಾರ್ಜಾ ಮೈದಾನದಲ್ಲಿ ಶಿಷ್ಟಾಚಾರಕ್ಕನುಗುಣವಾಗಿ ಹಲವು ಮಾರ್ಪಾಟುಗಳನ್ನು ಮಾಡಲಾಗಿದೆ. ಹೊಸ ಟೆಂಟ್​ಗಳು (ಕ್ಯಾನೊಪಿ), ನವೀಕರಿಸಲಾಗಿರುವ ಕೋಣೆ, ವಿಐಪಿ ಸ್ಯೂಟ್​, ಕಾಮೆಂಟರಿ ಬಾಕ್ಸ್, ವಿಐಪಿಗಳಿಗಾಗಿ ಪ್ರತ್ಯೇಕಿಸಲ್ಪಟ್ಟ ಬಾಕ್ಸ್ ​ಮೊದಲಾದವುಗಳನ್ನು ನೋಡಿ ಗಂಗೂಲಿ ಬೆರಗಾಗಿದ್ದಾರೆ.

ಭಾರತದ ಮಾಜಿ ನಾಯಕ ಖುದ್ದು ಶಾರ್ಜಾ ಮೈದಾನದಲ್ಲಿ 26 ಒಂದು ದಿನದ ಪಂದ್ಯಗಳನ್ನಾಡಿ 1 ಶತಕ ಹಾಗೂ 5 ಅರ್ಧಶತಕಗಳೊಂದಿಗೆ 725 ರನ್ ಗಳಿಸಿದ್ದಾರೆ. ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರು ಈ ಮೈದಾನದಲ್ಲಿ 7 ಶತಕ ಹಾಗೂ 7 ಅರ್ಧ ಶತಕಗಳೊಂದಿಗೆ 1778 ರನ್ ಕಲೆ ಹಾಕಿದ್ದಾರೆ. ಅವರ ‘ಡೆಸರ್ಟ್ ಸ್ಟಾರ್ಮ್’ (ಆಸ್ಟ್ರೇಲಿಯಾ ವಿರುದ್ಧ, 1998 ರಲ್ಲಿ) ಇನ್ನಿಂಗ್ಸನ್ನು ಯಾರಾದರೂ ಮರೆಯಲು ಸಾಧ್ಯವೇ?

ಅಂದಹಾಗೆ, ಶಾರ್ಜಾದಲ್ಲಿ ಒಟ್ಟು 12 ಐಪಿಎಲ್ ಪಂದ್ಯಗಳು ನಡೆಯಲಿವೆ.

Related Tags:

Related Posts :

Category: