ಕನ್ನಡಕ್ಕೆ ಸಿಕ್ತು ತಂತ್ರಜ್ಞಾನದ ಬಲ: ‘ಕ-ನಾದ’ ಕೀಲಿಮಣೆಯಿಂದ ಈಗ ಕನ್ನಡ ಟೈಪಿಂಗ್​ ಬಹು ಸುಲಭ!

ಕ-ನಾದ ಕನ್ನಡ ಕೀಲಿಮಣೆಯಲ್ಲಿ ಕನ್ನಡದ ಎಲ್ಲಾ 50 ಅಕ್ಷರಗಳೂ ಇದ್ದು, ವಾಕ್ಯಗಳನ್ನು ಟಂಕಿಸಲು ಸರಳವಾಗುವ ರೀತಿ ರೂಪಿಸಲಾಗಿದೆ.

  • Lakshmi Hegde
  • Published On - 16:21 PM, 24 Nov 2020
ಕ-ನಾದ ಕೀಲಿಮಣೆ

ಕ-ನಾದ ಕನ್ನಡ ಕೀಲಿಮಣೆಯ ಹೆಸರನ್ನು ನೀವು ಕೇಳಿರಬಹುದು. ಈ ವಿನೂತನ ಕೀಲಿಮಣೆ ಅಥವಾ ಕೀಬೋರ್ಡ್​ ಆಗಸ್ಟ್ 15ರಂದು ಅಧಿಕೃತವಾಗಿ ಲಾಂಚ್ ಆಗಿದೆ. ಬೆಂಗಳೂರು ಟೆಕ್ ಶೃಂಗದ ವಸ್ತುಪ್ರದರ್ಶನದಲ್ಲೂ ಇದು ಪ್ರಮುಖ ಆಕರ್ಷಣೆಯಾಗಿತ್ತು. ಅದೆಷ್ಟೋ ಜನರು ಈಗಾಗಲೇ ಖರೀದಿ ಕೂಡ ಮಾಡಿದ್ದಾರೆ! ಕ-ನಾದ ಕನ್ನಡ ಕೀಲಿಮಣೆಯಲ್ಲಿ ಕನ್ನಡದ ಎಲ್ಲಾ 50 ಅಕ್ಷರಗಳೂ ಇದ್ದು, ವಾಕ್ಯಗಳನ್ನು ಟಂಕಿಸಲು ಸರಳವಾಗುವ ರೀತಿ ರೂಪಿಸಲಾಗಿದೆ. ಒತ್ತಕ್ಷರಗಳನ್ನು ಕೂಡ ಸುಲಭವಾಗಿ ಬರೆಯಬಹುದಾಗಿದೆ.

ಕನ್ನಡ ಭಾಷಾಭಿವೃದ್ಧಿಯನ್ನು ಗುರಿಯಾಗಿಟ್ಟುಕೊಂಡು ಇಂಥದ್ದೊಂದು ಕೀ ಬೋರ್ಡ್ ಆವಿಷ್ಕಾರ ಮಾಡಿದ್ದು ಉಡುಪಿ ಮೂಲದ ಗುರುಪ್ರಸಾದ್. ಇವರು 2017ರಲ್ಲಿ ಕ-ನಾದ ಫೊನೆಟಿಕ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯನ್ನು ಸಂಸ್ಥಾಪನೆ ಮಾಡಿ, ಅದರ ಮೂಲಕವೇ ಕೀ ಬೋರ್ಡ್ ಅಭಿವೃದ್ಧಿಪಡಿಸಿದ್ದಾರೆ. ಅಂದ ಹಾಗೆ, ಗುರುಪ್ರಸಾದ್ ಸದ್ಯ ಅಮೆರಿಕದಲ್ಲಿ ವಿಜ್ಞಾನಿಯಾಗಿದ್ದಾರೆ. ಅಮೆರಿಕಕ್ಕೆ ತೆರಳುವ ಮೊದಲು, ಎರಡು ವರ್ಷ ಇಸ್ರೋದಲ್ಲೂ ಕೆಲಸ ಮಾಡಿದ್ದಾರೆ. ಸದ್ಯ ಅವರೊಂದಿಗೆ 12 ಜನರು ‘ಕ-ನಾದ’ಕ್ಕಾಗಿ ಶ್ರಮಿಸುತ್ತಿದ್ದಾರೆ.

ಈ ಕನ್ನಡ ಕೀಲಿಮಣೆ ಆವಿಷ್ಕಾರ ಹೇಗಾಯಿತು? ಅದರಲ್ಲೂ ಇಂಗ್ಲಿಷ್ ಪ್ರಮುಖ ಭಾಷೆಯಾಗಿರುವ ಅಮೆರಿಕದಲ್ಲಿ ಇದ್ದ ಗುರುಪ್ರಸಾದ್​ರಿಗೆ ಕನ್ನಡ ಕೀಲಿಮಣೆಯ ಅಗತ್ಯವಾದರೂ ಏನಿತ್ತು? ಎಂಬ ಬಗ್ಗೆ ಅವರೇ ವಿವರಿಸಿದ್ದಾರೆ.

ಕ-ನಾದ ಫೊನೆಟಿಕ್ಸ್ ಸಂಸ್ಥಾಪಕ ಗುರುಪ್ರಸಾದ್​

‘ಮಕ್ಕಳಿಂದಲೇ ಬಂತು ಕೀಲಿಮಣೆ ಯೋಚನೆ’
ಅಮೆರಿಕದಲ್ಲಿ ಇದ್ದಾಗ ನನ್ನ ಮಕ್ಕಳಿಗೆ ಕನ್ನಡವನ್ನು ಭಾರತದಿಂದ ಓರ್ವ ಟೀಚರ್ ಆನ್​ಲೈನ್​ ಮೂಲಕ ಕಲಿಸುತ್ತಿದ್ದರು. ಹೀಗೆ ಒಂದು ದಿನ ಮಗನ ಬಳಿ ಕನ್ನಡ ಲಿಪಿ ಕಲಿ ಎಂದು ಹೇಳಿದ್ದಕ್ಕೆ ಅವನು, ನನಗೆ ಕನ್ನಡ ಮಾತನಾಡಲು ಬರುತ್ತೆ. ಕನ್ನಡ ಅಕ್ಷರಗಳನ್ನೂ ಇಂಗ್ಲಿಷ್ ಕೀಬೋರ್ಡ್​ನಲ್ಲೇ ಟೈಪ್ ಮಾಡುತ್ತಿದ್ದೇನೆ. ಮತ್ಯಾಕೆ ಲಿಪಿ ಕಲಿಯಬೇಕು ಎಂದು ಪ್ರಶ್ನಿಸಿದ. ಆಗ ನನಗೆ ನಮ್ಮ ಮಾತೃಭಾಷೆಯ ಲಿಪಿ ಬಗ್ಗೆ ಕಳವಳ ಉಂಟಾಯಿತು. ಹೀಗೆ ಮುಂದೊಂದು ದಿನ ಭಾರತದ ಮಕ್ಕಳೂ ಕನ್ನಡ ಲಿಪಿಯನ್ನು ಕಲಿಯದಿದ್ದರೆ ಇದು ಬಹುಬೇಗ ನಶಿಸಿಹೋಗುತ್ತದೆ ಎಂಬ ಆತಂಕವೇ ಈ ಕೀಲಿಮಣೆ ಹುಟ್ಟಿಗೆ ಕಾರಣವಾಯ್ತು. ನಮ್ಮ ಭಾಷೆ ಡಿಜಿಟಲೀಕರಣಕ್ಕೆ ಒಳಪಟ್ಟರೆ ಕನ್ನಡ ಲಿಪಿ ಚಾಲನೆಯಲ್ಲಿ ಇರುತ್ತದೆ ಎಂದು ಗುರುಪ್ರಸಾದ್​ ಹೇಳಿದರು.

ಕ-ನಾದ ಕನ್ನಡ ಕೀಲಿಮಣೆ ಆವಿಷ್ಕಾರಕ್ಕೆ ಜತೆಯಾದವರು ಹಿಂದೂ ಯೂನಿವರ್ಸಿಟಿಯ ಪ್ರಾಧ್ಯಾಪಕ, ಲಿಪಿತಜ್ಞ ಡಾ. ವೆಂಕಟಕೃಷ್ಣ ಶಾಸ್ತ್ರಿ. ಇಬ್ಬರೂ ಸೇರಿ ನಮ್ಮ ಭಾಷೆಯ ಲಿಪಿಗೆ ಅನುಗುಣವಾಗಿ ಕೀಬೋರ್ಡ್ ವಿನ್ಯಾಸ ಹೇಗಿರಬೇಕು ಎಂದು ಚರ್ಚಿಸಿ, ಸಂಶೋಧನೆ ಮಾಡಿದೆವು. ಆಗ ನಮಗೆ ಪಾಣಿನಿಯ ಶಿಕ್ಷಾ ಶಾಸ್ತ್ರದಲ್ಲಿ, ಬ್ರಾಹ್ಮಿ ಲಿಪಿ, ಸ್ವರ, ವ್ಯಂಜನಗಳ ಸಮೂಹದ ವಿನ್ಯಾಸ ಸಿಕ್ಕಿತು. ಅದರ ಅನ್ವಯ ಹಾರ್ಡ್​ವೇರ್ ಮಾಡಿದೆವು. ಅಮೆರಿಕದಲ್ಲಿದ್ದರೂ ಪ್ರತಿವರ್ಷದಲ್ಲಿ ಮೂರು ತಿಂಗಳು ಭಾರತಕ್ಕೆ ಬಂದು ಕೀಲಿಮಣೆ ತಯಾರಿಕೆ ಕೆಲಸದಲ್ಲಿ ತೊಡಗುತ್ತಿದ್ದೆ. ಆದರೆ ಕೆಲಸ ವಿಳಂಬವಾಗತೊಡಗಿತು. ಹಾಗಾಗಿ ಭಾರತಕ್ಕೆ ಬಂದು, ಇಲ್ಲಿಯೇ ಒಂದು ಸಂಸ್ಥೆ ಸ್ಥಾಪನೆ ಮಾಡಿ, ಕೀಬೋರ್ಡ್​ಗೆ ಅಗತ್ಯ ಇರುವ ಎಲೆಕ್ಟ್ರಾನಿಕ್ ಮತ್ತಿತರ ವ್ಯವಸ್ಥೆಯನ್ನೂ ಮಾಡಿದೆವು. ಯಾಕೆಂದರೆ ಕ-ನಾದ ಕನ್ನಡ ಕೀಲಿಮಣೆ ನಮ್ಮ ದೇಶದಲ್ಲೇ ತಯಾರಾಗಬೇಕು ಎಂಬುದು ನನ್ನ ಆಸೆಯಾಗಿತ್ತು.

ಆರಂಭದಲ್ಲಿ ನಾವು ರೂಪಿಸಿದ ಕೀಪ್ಯಾಡ್​ಗೆ ಸಾಫ್ಟ್​ವೇರ್ ಉದ್ಯಮದಲ್ಲಿರುವ ಕೆಲವರು ಸಹಕಾರ ನೀಡಿದರು. ಅದು ಚೌಕಾಕಾರದಲ್ಲಿದ್ದು ಬಟನ್​ಗಳು ಹೆಚ್ಚು ಇದ್ದುದರಿಂದ ಜನರಿಗೆ ಅಷ್ಟೊಂದು ಇಷ್ಟವಾಗಿರಲಿಲ್ಲ. ಇಂಗ್ಲಿಷ್ ಕೀಲಿಮಣೆ ತರಹದ ವಿನ್ಯಾಸದಲ್ಲೇ ಬೇಕು ಎಂಬ ಒತ್ತಾಯ ಜಾಸ್ತಿ ಆಯಿತು. ಹಾಗಾಗಿ ಮತ್ತೆ ಅದೇ ಅಚ್ಚುಗಳನ್ನು ತಯಾರು ಮಾಡತೊಡಗಿದೆ. ಅದಕ್ಕೆ ಕರ್ನಾಟಕ ಸರ್ಕಾರದಿಂದಲೂ ಸ್ವಲ್ಪಮಟ್ಟಿನ ಸಹಾಯ ಸಿಕ್ಕಿತು. ಬೆಂಗಳೂರಿನ ಕೆಲವು ಅಚ್ಚು ತಯಾರಕರ ಜತೆ ಚರ್ಚಿಸಿ, ಸತತ ಎರಡೂವರೆ ವರ್ಷ ನಿರಂತರ ಪರಿಶ್ರಮದಿಂದ ಇಂಗ್ಲಿಷ್ ಕೀಬೋರ್ಡ್ ಮಾದರಿಯಲ್ಲೇ ನಮ್ಮ ಕನ್ನಡ ಕೀಲಿಮಣೆ ಸಿದ್ಧಪಡಿಸಿದ್ದೇವೆ. ಕಂಪನಿ ಶುರುವಾಗಿದ್ದು ಮೂರು ವರ್ಷಗಳ ಹಿಂದೆ ಆದರೂ, ಕೀಲಿಮಣೆಯ ಕೆಲಸ 2012ರಿಂದಲೇ ಶುರುವಾಗಿತ್ತು ಎಂದು ನೆನಪಿಸಿಕೊಳ್ಳುತ್ತಾರೆ ಗುರುಪ್ರಸಾದ್.

ಬೆಂಗಳೂರು ಟೆಕ್ ಸಮಿಟ್ನಲ್ಲಿ ಗಮನ ಸೆಳೆದ ಕೀಲಿಮಣೆ
ಬೆಂಗಳೂರು ಟೆಕ್ ಶೃಂಗದಲ್ಲಿ ಕ-ನಾದ ಕೀಲಿಮಣೆ ಸರ್ಕಾರದ ಗಮನ ಸೆಳೆದಿದೆ. ಸರ್ಕಾರ ಗ್ರಾಮೀಣ ಭಾಗದಲ್ಲಿ ಉದ್ಯೋಗ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ. ಅದರಲ್ಲಿ ಭಾಷೆ ಪ್ರಮುಖವಾಗಿರುವುದರಿಂದ ನಮ್ಮ ಮಾತೃಭಾಷೆ ಕನ್ನಡಕ್ಕೆ ತಂತ್ರಾಂಶ ಅಳವಡಿಸಬೇಕಾಗುತ್ತದೆ. ಆಗ ನಮ್ಮ ಕೀಲಿಮಣೆ ಹೆಚ್ಚಿನ ಅನುಕೂಲವಾಗುತ್ತದೆ. ಈ ಶೃಂಗದಲ್ಲಿ ಕೀ ಬೋರ್ಡ್ ಮೇಲೆ ಸರ್ಕಾರಕ್ಕೂ ಧೈರ್ಯ ಬಂದಿದೆ. ನಾವು ಅಭಿವೃದ್ಧಿಪಡಿಸಿದ ತಂತ್ರಾಂಶದಿಂದ ವೆಬ್​ಸೈಟ್​ ಮಾಡಬಹುದು ಎಂದೂ ಗೊತ್ತಾಗಿದೆ ಎಂದು ಗುರುಪ್ರಸಾದ್ ಹೇಳುತ್ತಾರೆ.

ಕೀಲಿಮಣೆಯ ಹಳೇ ಮಾದರಿ.

ಶಾಲೆಗಳಲ್ಲಿ ಅಳವಡಿಕೆ
ಫೊನೆಟಿಕ್ಸ್ ಕೀಲಿಮಣೆಯೊಟ್ಟಿಗೆ ಪಾಕೆಟ್ ಕಂಪ್ಯೂಟರ್​ಗಳನ್ನೂ ಕ-ನಾದ ಅಭಿವೃದ್ಧಿಪಡಿಸಿದೆ. ನಗರ ಹಾಗೂ ಕೆಲವು ಹಳ್ಳಿಗಳ 60 ಶಾಲೆಗಳಲ್ಲಿ ಇದನ್ನು ಅಳವಡಿಸಿದೆ. ಮೊಬೈಲ್ ಚಾರ್ಜರ್ ಮೂಲಕವೇ ಚಾರ್ಜ್ ಮಾಡಿಕೊಳ್ಳುವ ವ್ಯವಸ್ಥೆ ಇಡಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಹಳ್ಳಿಯ ಜನರಿಗೆ ಗ್ರಾಮೀಣ ಉದ್ಯೋಗಕ್ಕೆ ನೆರವಾಗುವ ಯೋಜನೆಯಿದೆ. ಅವರಿಗೆ ಗುಡಿ ಕೈಗಾರಿಕೆ, ಬ್ಯಾಂಕಿಂಗ್ ಸೇರಿ ಎಲ್ಲ ವ್ಯವಹಾರಗಳನ್ನು ಕನ್ನಡದಲ್ಲೇ ನಡೆಸಲು ಅನುಕೂಲವಾಗುವಂತೆ ತರಬೇತಿ ನೀಡುವ ಉದ್ದೇಶವೂ ನಮಗಿದೆ. ಆದರೆ ನಮ್ಮದು ಸಣ್ಣ ಸಂಸ್ಥೆ, ಸರ್ಕಾರದ ಸಹಾಯ ಬೇಕಾಗುತ್ತದೆ ಎನ್ನುತ್ತಾರೆ ಗುರುಪ್ರಸಾದ್.

ವಿಶಿಷ್ಟ ವಿನ್ಯಾಸ
ಕ-ನಾದ ಕೀಲಿಮಣೆಯ ವೈಶಿಷ್ಟ್ಯತೆಯೆಂದರೆ, ಹಿಂದಿ ಸೇರಿ ಸುಮಾರು 10 ಭಾಷೆಗಳನ್ನು ಈ ಕನ್ನಡ ಕೀಲಿಮಣೆಯ ಮೂಲಕವೇ ಟಂಕಿಸಬಹುದಾದ ವಿನ್ಯಾಸ. ಇದರ ಮೂಲಕ ಇತರ ಭಾಷಿಕರು ಕನ್ನಡ ಕಲಿಯಬಹುದು. ಕೀಬೋರ್ಡ್ ಲೇಔಟ್​ನಲ್ಲಿ ನಮಗೆ ಬೇಕಾದ ಭಾಷೆಯನ್ನು ಅಳವಡಿಸಿಕೊಂಡು, ಕೀಬೋರ್ಡಿನಲ್ಲಿರುವ ಒಂದು ಬಟನ್ ಮೂಲಕ ಭಾಷೆ ಬದಲಾವಣೆ ಮಾಡಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಇಂಗ್ಲಿಷ್ ಕೀಲಿಮಣೆಗಿಂತ ಇದರಲ್ಲಿ ಶೇ.30ರಷ್ಟು ಹೆಚ್ಚು ವೇಗವಾಗಿ ಟೈಪ್ ಮಾಡಬಹುದು. ಕನ್ನಡ ಅಕ್ಷರಗಳುಳ್ಳ ಕೀಲಿಮಣೆಯ ಜತೆ ಅದೇ ಮಾದರಿಯಲ್ಲಿ ಹಿಂದಿ, ಬೆಂಗಾಳಿ, ತೆಲುಗು, ತಮಿಳು, ತುಳು ಅಕ್ಷರಗಳುಳ್ಳ ಕೀಲಿಮಣೆಯನ್ನೂ ಗುರುಪ್ರಸಾದ್ ಮತ್ತು ಟೀಂ ಅಭಿವೃದ್ಧಿ ಪಡಿಸಿದೆ. ಆಯಾ ಮಾತೃಭಾಷಿಕರು ತಮ್ಮ ಭಾಷೆಗಳ ಕೀಲಿಮಣೆಯಿಂದಲೇ ಉಳಿದ ಭಾಷೆಗಳನ್ನೂ ಟೈಪ್ ಮಾಡಬಹುದಾಗಿದೆ. ಕನ್ನಡ ಕೀಬೋರ್ಡ್​ನಲ್ಲಿ ‘ಅ’ ಅಕ್ಷರ ಇರುವ ಜಾಗದಲ್ಲೇ ಉಳಿದ ಭಾಷೆಗಳ ಕೀಬೋರ್ಡ್ನಲ್ಲೂ ‘ಅ’ ಇರುವುದರಿಂದ ಹೊಸದಾಗಿ ಬೇರೆ ಭಾಷೆ ಕಲಿಯುವರಿಗೆ ತುಂಬ ಸುಲಭ ಆಗಲಿದೆ. ಇನ್ನುಳಿದಂತೆ 10 ಶಿಫ್ಟ್ ಕೀಗಳು ಇವೆ. ಕಂಟ್ರೋಲ್, ಆಲ್ಟ್ ಕೀಗಳು, ಕನ್ನಡ ಅಂಕಿಗಳ ಕೀಗಳನ್ನೂ ಒಳಗೊಂಡಿದೆ. ಕೀಲಿಮಣೆಯನ್ನು ಡಾಟಾ ಕೇಬಲ್ ಮೂಲಕ ಮೊಬೈಲ್ಗೂ ಅಳವಡಿಸಿಕೊಳ್ಳಬಹುದು.

ಕೀ ಬೋರ್ಡ್ ಪರೀಕ್ಷೆಗಾಗಿ, ಕೃತಕ ಕೈಗಳನ್ನು ಅಳವಡಿಸಿಕೊಂಡವರಿಗೆ ಅನುಕೂಲವಾಗುವಂತೆ ರೊಬೋಟ್ ವ್ಯವಸ್ಥೆ ಮಾಡಲಾಗಿದೆ. ಕೀಬೋರ್ಡ್ ಗುಂಡಿಗಳ ಪರಿಶೀಲನೆಗಾಗಿ 3ಡಿ ಪ್ರಿಂಟರ್ಗಳನ್ನು ಅಭಿವೃದ್ಧಿಪಡಿಸಲಾಗಿದೆ.
-ಲಕ್ಷ್ಮೀ ಹೆಗಡೆ

ಕೀಲಿಮಣೆ ಪರಿಶೀಲನೆಗಾಗಿ ಅಭಿವೃದ್ಧಿ ಪಡಿಸಿರುವ ರೋಬೋಟ್ ಯಂತ್ರ

 

ಕೀಲಿಮಣೆ ಗುಂಡಿಗಳ ಪರಿಶೀಲನೆ ಮಾಡುವ 3ಡಿ ಪ್ರಿಂಟರ್​

 

ಕನ್ನಡ, ಹಿಂದಿ, ತೆಲುಗು ಭಾಷೆಗಳ ಕೀಬೋರ್ಡ್​