ಈಗೀಗ ಓದುವವರು ಕಡಿಮೆ, ಬರೆಯುವವರೇ ಹೆಚ್ಚು; ದಶಕಗಳಿಂದ ಸಾಹಿತ್ಯ ವಲಯದಿಂದ ಕೇಳಿಬರುತ್ತಿರುವ ಪುನರಾವರ್ತಿತ ಸಾಲು ಇದು. ಹಾಗಿದ್ದರೆ ನಾವೇಕೆ ಓದುತ್ತೇವೆ, ನಾವೇಕೆ ಬರೆಯುತ್ತೇವೆ? ಕಾರಣ ಹುಡುಕುತ್ತ ಹೊರಟರೆ ನೂರೆಂಟಿರಬಹುದು, ಒಂದೇ ವಾಕ್ಯದಲ್ಲಿ ಹೇಳಬೇಕೆಂದರೆ ನಮ್ಮೊಳಗನ್ನು ನಾವು ಹುಡುಕಿಕೊಳ್ಳುತ್ತ ಜೀವಿಸಲು. ಈ ಜೀವಯಾನದಲ್ಲಿ ನಮ್ಮ ಅಭಿವ್ಯಕ್ತಿಗೆ ಸಾಕಷ್ಟು ಮಾರ್ಗಗಳಿದ್ದರೂ ಬರೆವಣಿಗೆಯನ್ನೇ ಯಾಕೆ ಆಯ್ಕೆ ಮಾಡಿಕೊಳ್ಳುತ್ತೇವೆ? ಉತ್ತರಗಳು ಸಾಕಷ್ಟಿದ್ದರೂ ಅಂತಿಮ ಸತ್ಯ ಜೀವದಿಂದ ಜೀವಕ್ಕೆ ತಲುಪಲು. ಈ ತಲುಪುವಿಕೆಗೆ ತಂತ್ರಜ್ಞಾನ ಎನ್ನುವ ಹಕ್ಕಿ ಇಂದು ಅನೇಕ ಸ್ವರೂಪಗಳಲ್ಲಿ ರೆಕ್ಕೆಬಲವನ್ನೂ ವೇಗವನ್ನೂ ತಂದುಕೊಟ್ಟಿರಬಹುದು. ಆದರೆ, ನಿಜವಾದ ಸೃಜನಶೀಲ ಕೃತಿಯೊಂದರ ಆಯುಷ್ಯ ಓದುಗರ ಮನಸ್ಸಿನಾಳದೊಳಗೆ ಕಾಲದ ಹಂಗು ತೊರೆದು ವೃದ್ಧಿಸುತ್ತಲೇ ಇರುತ್ತದೆ.
ಟಿವಿ9 ಕನ್ನಡ ಡಿಜಿಟಲ್ – ಅಚ್ಚಿಗೂ ಮೊದಲು ಈ ಅಂಕಣದಲ್ಲಿ ಮುದ್ರಣ ಹಂತದಲ್ಲಿರುವ ಅಥವಾ ಓದುಗರ ಕೈಸೇರಲು ಸಿದ್ಧವಾಗಿರುವ ಪುಸ್ತಕಗಳ ಆಯ್ದ ಭಾಗವನ್ನು ಪ್ರಕಟಿಸಲಾಗುವುದು. ನಿಮ್ಮ ಹೊಸ ಪುಸ್ತಕದ ಒಂದೆಸಳು ಜಗತ್ತಿನಾದ್ಯಂತ ಪಸರಿಸಿರುವ ಕನ್ನಡಪ್ರಿಯರಿಗೆಲ್ಲ ತಲುಪಲಿ ಎನ್ನುವುದು ನಮ್ಮ ಆಕಾಂಕ್ಷೆ. ಪುಸ್ತಕದ ಪ್ರಕಾರ, ಸಾರಾಂಶ, ಮುಖಪುಟ ಮತ್ತು ನಿಮ್ಮ ಮೊಬೈಲ್ ನಂಬರ್ಅನ್ನು ನಮಗೆ ಕಳುಹಿಸಿದಲ್ಲಿ ನಾವೇ ನಿಮ್ಮನ್ನು ಖುದ್ದಾಗಿ ಸಂಪರ್ಕಿಸುತ್ತೇವೆ. ಇ- ಮೇಲ್ tv9kannadadigital@gmail.com
ಪರಿಕಲ್ಪನೆ : ಶ್ರೀದೇವಿ ಕಳಸದ
ಕೃತಿ : ಒಳಕಲ್ಲ ಒಡಲು (ಕಾದಂಬರಿ)
ಲೇಖಕರು : ಕಾವ್ಯಶ್ರೀ ಮಹಾಗಾಂವಕರ
ಪುಟ : 216
ಬೆಲೆ : 200
ಮುಖಪುಟ ವಿನ್ಯಾಸ : ಮುರಳೀಧರ ರಾಠೋಡ
ಪ್ರಕಾಶನ : ಸಾಂಗತ್ಯ ಪ್ರಕಾಶನ, ಕಲಬುರ್ಗಿ
*
ಈ ಕಾದಂಬರಿಯಲ್ಲಿ ಮಧ್ಯಮ ವರ್ಗದ ಸಂಗೀತಗಾರ್ತಿ ಲಯ ಎಂಬ ನಾಯಕಿಯ ಬದುಕಿನ ಸುತ್ತ ಕಥೆ ಆವರಿಸಿದೆ. ಗಂಡನ ಮಾನಸಿಕ ಹಿಂಸೆಯನ್ನು ಹುಚ್ಚಳಂತೆ ಸಹಿಸಿಕೊಳ್ಳುತ್ತ ಸಾಗುವುದು ವಿಚಿತ್ರವೆನಿಸುತ್ತದೆ. ಸಹನೆ ಕೂಡ ದೌರ್ಬಲ್ಯ ಎಂದು ಅರಿಯುವ ಹೊತ್ತಿನಲ್ಲಿ ಆಕೆಗೆ ‘ಅರಿವು’ ಪರಿಚಯವಾಗಿ ಬದುಕಿನ ಅರಿವಿನ ಕ್ರಮವನ್ನು ಬದಲಿಸುತ್ತಾನೆ. ಪಾತ್ರಗಳ ವಯೋಮಾನದಿಂದಾಗಿ ಪ್ರೇಮ, ಕಾಮ ಕಾಣಿಸದೇ ಬದುಕು ಕಟ್ಟಿಕೊಳ್ಳುವ ಮನೋಮಿಲನದ ಅಗತ್ಯ ಎದ್ದು ಕಾಣುತ್ತದೆ. ವಸ್ತು ಹಳೆಯದಾದರೂ ಚುರುಕಾದ ನಿರೂಪಣೆಯಿಂದ ಓದಿಸಿಕೊಂಡು ಹೋಗುತ್ತದೆ. ಸಾಂಸ್ಕೃತಿಕ ಲೋಕದ ಅನೇಕ ‘ವಿಕಾರಗಳು, ವಿಚಾರಗಳು ಮತ್ತು ಇಸ್ಂ’ನ ಅಪಾಯಗಳನ್ನು ಕಾವ್ಯಶ್ರೀ ಸೂಕ್ಷ್ಮವಾಗಿ ಪ್ರಸ್ತಾಪಿಸಿದ್ದಾರೆ. ಕಲ್ಯಾಣ ಕರ್ನಾಟಕದ ಅನೇಕ ಮಹಿಳೆಯರ ಬವಣೆಗಳು ಇಲ್ಲಿ ಗೋಚರವಾಗುತ್ತವೆ.
ಪ್ರೊ. ಸಿದ್ದು ಯಾಪಲಪರವಿ, ಇಂಗ್ಲಿಷ್ ಪ್ರಾಧ್ಯಾಪಕ, ಲೇಖಕ.
ಇಂತಹ ಅನೇಕ ವಸ್ತುಗಳ ಮೇಲೆ ಹತ್ತಾರು ಕೃತಿಗಳು ಬಂದಿದ್ದರೂ, ವರ್ತಮಾನದ ಅನೇಕ ಸಂಗತಿಗಳ ಮೇಲೆ ಬೆಳಕು ಚೆಲ್ಲುವ ತಾಜಾತನ ಇಲ್ಲಿದೆ. ಭಾಷೆ, ನಿರೂಪಣೆ ಮತ್ತು ಪಾತ್ರ ಪೋಷಣೆ ಆಕರ್ಷಕವಾಗಿದೆ. ಲಯ ಕೊನೆಗೆ ತನ್ನ ದಿಟ್ಟತನದಿಂದ ಎಲ್ಲರಿಗೂ ಆಘಾತ ನೀಡುತ್ತಾಳೆ. ಬದುಕಿನಲ್ಲಿ ಸರಿ ತಪ್ಪು ಎನ್ನುವುದು ನಮ್ಮನಮ್ಮ ದೃಷ್ಟಿಕೋನಕ್ಕೆ ಸಂಬಂಧಿಸಿದ್ದು. ಸಾಂಪ್ರದಾಯಿಕ ದೃಷ್ಟಿಕೋನ ಬದಿಗಿರಿಸಿ ಲಯಾಳ ನಿಲುವನ್ನು ಓದುಗ ಬೆಂಬಲಿಸುವಂತಾಗುತ್ತದೆ.
ಡಾ.ಜಿ.ಬಿ.ಪಾಟೀಲ, ಸಂಸ್ಕೃತಿ ಚಿಂತಕರು, ಗದಗ.
*
ಒಂದು ತಿಂಗಳ ನಂತರ…
ವಿನೋದ ಲಯಳನ್ನು ಅಮೆರಿಕಾಗೆ ಕಳುಹಿಸುವ ಕುರಿತು ಪರಸ್ಪರ ಆಲೋಚಿಸಿ, ಚರ್ಚಿಸಿ ನಿರ್ಧಾರಕ್ಕೆ ಬರಬೇಕಾಗಿತ್ತು. ಆದರೆ ಅವನು ತಮ್ಮಿಬ್ಬರ ನಡುವೆ ನಡೆದ ಮನಸ್ತಾಪದ ಮೇಲೆಯೇ ನಿಶ್ಚಯಿಸಿಬಿಟ್ಟಿದ್ದ. ತನ್ನ ಪರಿಚಯದ ಟ್ರಾವೆಲಿಂಗ್ ಏಜೆನ್ಸಿಯ ಮೂಲಕ ಅವಳ ಪ್ರವಾಸದ ವ್ಯವಸ್ಥೆ ಮಾಡಿಸಿದ. ಪೀಡೆ ತೊಲಗಲಿ ಎನ್ನುವ ರೀತಿಯಲ್ಲಿ ಅವಸರದ ಪ್ರವಾಸ ಸಿದ್ದತೆ. ಲಯಳಿಗೂ ಅದೇ ಬೇಕಾದುದರಿಂದ ಸುಮ್ಮನೆ ಮುಂದುವರಿದಳು.
ಮನುಷ್ಯ ಮನುಷ್ಯನನ್ನು ದ್ವೇಷಿಸುವುದು ಎಷ್ಟು ತಪ್ಪು. ಒಮ್ಮೆ ಕೆಡುತ್ತ ಹೋದರೆ ಸಾಕು, ಅದು ಸರಿಹೋಗುವುದೆಂಬ ಮಾತೇ ಇಲ್ಲ. ಅಸಹಿಷ್ಣುತೆಯವರೆಗೆ ಬೆಳೆದು ಮನದ ಮೃದುತನದ ಕೊಲೆ. ಯಾಕಿಷ್ಟು ಅವಳನ್ನು ಕಂಡರೆ ದ್ವೇಷವೊ? ಅವಳಿಗೂ ತಿಳಿಯದು.
‘ಗಂಡ ಸತ್ತಾಗ ಯಾಕೆ ಅಳುತ್ತಿರುವೆ ಮಗಳೇ ಎಂದು ಕೇಳಿದರೆ, ಲೋಕಾಚಾರಕ್ಕೆ ಎಂದಿದ್ದಳಂತೆ’ ಹಾಗೆ ವಿನೋದ ಲಯಳನ್ನು ಅಮೆರಿಕಾಗೆ ಕಳುಹಿಸುತ್ತಿರುವುದು ತನ್ನ ಇಚ್ಛೆಯಂತೆ ಎಂದು ಲೋಕದೆದುರು ಪ್ರದರ್ಶಿಸಲೆಂದು ಹಾಗೆ ಮಾಡಿದ್ದ. ಇನ್ನೂ ಏನೆಲ್ಲಾ ನಾಟಕವಾಡಿದ್ದ.
ಇತ್ತೀಚೆಗೆ ನಡೆದ ಘಟನಾವಳಿಗಳಿಂದಾಗಿ ಅವಳಿಗೂ ಯಾಕೋ ವೈರಾಗ್ಯ ಮೊದಲೇ ಮನೆ ಮಾಡಿಕೊಂಡಿತ್ತು. ಈ ಬದುಕು ಇಷ್ಟೇನೆ… ಎನ್ನುವ ನಿರ್ಲಿಪ್ತ ಭಾವ. ಮೊದಲು ಮಗಳ ಬಳಿ ಹೋಗುವುದೆಂದು ಮನದಲ್ಲೇ ನಿರ್ಧರಿಸಿದಳು. ಮುಂದೆ ಏನು ಮಾಡಬೇಕೆಂದು ಆಲೋಚಿಸಿ ತೀರ್ಮಾನಿಸಲು ದಾರಿಗಳನ್ನು ತೆರೆದಿಟ್ಟಳು. ಬದುಕಿನ ದಾರಿಗೊಂದು ಭರವಸೆಯ ಎಳೆ. ಆ ಎಳೆಯನ್ನೇ ಹಿಡಿದುಕೊಂಡು, ಈ ದೇಹದಲ್ಲಿ ಜೀವ ಇರುವವರೆಗೆ ಏನಾದರೂ ಮಾಡಬೇಕೆಂಬ ತುಡಿತ.
ಲಯಳಿಗೆ ಈ ಬದುಕಿನಲ್ಲಿ ಬೇಕು ಬೇಕು ಎನ್ನುವ ಹಂತ ದಾಟಿದ್ದೇನೆ ಎನಿಸಿತು. ಮೋಕ್ಷದ ದಾರಿ ಹುಡುಕಿಕೊಂಡು ಹೋಗುವುದು ಅರ್ಥಪೂರ್ಣ ಎನ್ನುವ ಮಾತು ಅವಳ ಮನಸಿಗೆ ಹಿಡಿಸಿತು. ಧರ್ಮ, ಅರ್ಥ, ಕಾಮ, ಮೋಕ್ಷಗಳ ನೆಲೆಯಲ್ಲಿ ನೋಡಿದಾಗ ಮನುಷ್ಯನ ಅಸೆ ಆಕಾಂಕ್ಷೆಗಳು ಚಿಗುರೊಡೆಯುತ್ತಲೇ ಇರುತ್ತವೆಯಲ್ಲ. ಅದಕ್ಕೆ ಕೊನೆಯೆಂಬುದೇ ಇಲ್ಲ. ಧರ್ಮದ ನೆಲೆಯಲ್ಲಿ ನಿಂತು ವಿವೇಚಿಸಿದಾಗ ಜನ ಸಮೂಹ ತಮ್ಮ ತಮ್ಮ ಸ್ವಾರ್ಥಕ್ಕೆ ಮಾತ್ರ ಬಳಸಿಕೊಂಡಿದ್ದು, ಬಳಸಿಕೊಳ್ಳುತ್ತಿರುವುದು, ಬಳಸುತ್ತಲೇ ಇರುವುದು ಸಮಾಜದ ದುರಂತ. ಅದು ರೂಢಿಯಷ್ಟೇ ಅಲ್ಲ ಪರಂಪರೆಯಾಗಿ ಬೆಳೆದು, ಹೆಮ್ಮರವಾಗಿ ಬೇರು ಬಿಟ್ಟಿರುವುದು ದುರಂತ. ಈ ಮಧ್ಯದಲ್ಲಿ ಅರ್ಥ ಮತ್ತು ಕಾಮದ ಹಿಂದೆ ಇಡೀ ಜಗತ್ತು ಬೆನ್ನು ಹತ್ತಿರುವುದು ವಿಪರ್ಯಾಸ. ಮೋಕ್ಷದ ಚಿಂತನೆಯಂತೂ ಆಂತರ್ಯದ ಒಳಗೆ ಸುಳಿಯುವುದೇ ಇಲ್ಲ. ನರಜನ್ಮದ ಅಂತ್ಯವನ್ನು ತಲುಪಿದಾಗ ಮಾನವ ಎಚ್ಚೆತ್ತುಕೊಳ್ಳುವನು. ವ್ಯಕ್ತಿಯ ತಿಳುವಳಿಕೆಗೆ ಅದು ಬರುವ ಹೊತ್ತಿಗೆ ತಡವಾಗಿ ಹೋಗಿರುತ್ತದೆ. ಅದನ್ನು ಅರಿಯುವಾಗ ಮನುಷ್ಯ ಕೊನೆಯ ಕ್ಷಣದ ಶಯ್ಯೆಯ ಮೇಲೆ ಸಾವು ಬದುಕಿನ ಹೋರಾಟ. ಹೋರಾಟ ಎನ್ನುವುದಕ್ಕಿಂತ ಒದ್ದಾಟವೇ ಸರಿ. ಇಡೀ ಬದುಕೇ ವ್ಯರ್ಥ. ಈ ಜೀವ, ದೇಹ ನಶ್ವರ.
ತನ್ನದಂತೂ ಅರ್ಧ ಆಯಸ್ಸು ಕಳೆದು ಹೋಯಿತು. ಇಡೀ ಜೀವನ ಕಷ್ಟ ಸುಖದ, ಬಿಸಿಲು ನೆಳಲಿನಾಟದಂತೆ ಸರಿದು ಹೋಯಿತು. ಅವ್ವ ಅಪ್ಪನ ಮಡಿಲಲ್ಲಿ ಅರ್ಥವತ್ತಾದ ಬಾಲ್ಯ ಮತ್ತು ಯೌವನ ಬಿಟ್ಟರೆ, ಲಯ ಸಂಸಾರದಲ್ಲೇ ಹೆಚ್ಚು ಸಮಯ ಕಳೆದಿದ್ದಳು. ಮಧ್ಯ ವಯಸ್ಸಿನಲ್ಲಿ ಚಿಗುರೊಡೆದ ಉತ್ಸಾಹಕ್ಕೆ ಹಾಡುವ ಕೋಗಿಲೆಯ ಕನಸು. ಸಂಗೀತದಲ್ಲಿ ಸಿಗುವ ಶಾಂತಿಯ ಹುಡುಕಾಟಕ್ಕೂ ಅಂತ್ಯ ಹಾಡಿದ್ದಳು. ಅದೇಕೊ ತೀರಾ ಬೇಸರದ ನಿರುತ್ಸಾಹ ಅವಳನ್ನಾವರಿಸಿತ್ತು. ಮಗಳ ಮತ್ತು ಮೊಮ್ಮಕ್ಕಳ ನೆನಪು ಸದ್ಯಕ್ಕೆ ಹಿತವೆನಿಸಿತು. ಮನಸಿಗೆ ಮುದ ನೀಡುವ ಸ್ಮೃತಿಗಳಿಂದ ಸಿದ್ಧತೆ ಆರಂಭಿಸಿದಳು. ಒಂದಿಷ್ಟು ಶಾಪಿಂಗ್ ಮುಗಿಸಿದಳು.
ಹೊರಡುವ ದಿನ ಹತ್ತಿರ ಬಂದಿತು. ವಿನೋದ ಕಣ್ಣಿಗೆ ಕಾಣದಂತೆ ಮಾಯವಾಗಿದ್ದ. ಬಹುಶಃ ಉದ್ದೇಶಪೂರ್ವಕವಾಗಿಯೇ ಇರಬೇಕು. ಇಷ್ಟು ಬೇಡವಾದ ಮೇಲೂ, ಇನ್ನೂ ನಿರೀಕ್ಷಿಸುತ್ತಿರುವೆನಲ್ಲ ಎಂದು ಅವಳಿಗೆ ತನ್ನ ಮೇಲೆ ತನಗೇ ಅಸಮಾಧಾನವಾಯಿತು. ಅದಕ್ಕೆ ಹೇಳೋದು, ‘ಅಂಗಾಲಿಗೆ ಹೇಸಿಗೆ ಇಲ್ಲ ಕರುಳಿಗೆ ನಾಚಿಕೆ ಇಲ್ಲ’ ಅಂತ.
ಈಗ…
ಒಂಟಿ ಪಯಣದ ಆರಂಭ…
ಇಡೀ ಬದುಕಿನಲ್ಲಿ ಎಲ್ಲರ ಮಧ್ಯೆ ಇದ್ದು ಒಂಟಿತನ ಕಾಡಿತ್ತು.
ಲಯ ತನಗೆ ತಾನೇ ಸಾಂತ್ವನಿಸಿಕೊಂಡಳು. ತನ್ನದೇ ಆಯ್ಕೆ ಆಗಿರುವುದರಿಂದ ವಿಷಾದ ಬೇಡವೆಂದು ಮನಸು ಗಟ್ಟಿಗೊಳಿಸಿದಳು. ಸದಾ ಈ ಕೊಚ್ಚೆಯಲ್ಲೇ ಮುಳುಗಿ ಮುಳುಗಿ ಸಾಕಾಗಿ ಹೋಗಿರುವಾಗ, ಸಿಕ್ಕ ಒಳ್ಳೆ ಮಾರ್ಗದಲ್ಲಿ ನಡೆಯುವುದರಲ್ಲಿ ತಪ್ಪಿಲ್ಲ. ಹೊಲಸು ಹತ್ತಿತೆಂದು ಪದೇಪದೇ ತೊಳೆದುಕೊಂಡು ರೋಸಿ ಹೋಗಿದ್ದಳು. ಒಮ್ಮೆ ಬೇರು ಸಮೇತ ಕಿತ್ತುಕೊಂಡು ಹೋದರೆ ಮಾತ್ರ ಬಿಡುಗಡೆ ಸಾಧ್ಯ ಎಂದು ಮನಗಾಣಲು ಅರ್ಧ ಜೀವನ ಸವೆಸಬೇಕಾದುದೇ ದುರಂತ.
ಕೊಚ್ಚೆಯಿಂದ ದೂರಾಗದ ಹೊರತು ಸ್ವಚ್ಛ ಆಗುವುದಿಲ್ಲ. ಮನೆಯಿಂದ ಹೊರ ಹೊರಟಾಗ, ಹೇಳಿಕೊಳ್ಳಲಾಗದ ಅವ್ಯಕ್ತ ಸಂಕಟ. ಹೊಸ್ತಿಲು ದಾಟಿಕೊಂಡು ಹೊರಬಂದು ಹಿಂತಿರುಗಿ ನೋಡಿದಳು. ತನಗೆ ಬದುಕು ಕೊಟ್ಟ ಮನೆ… ಜೀವನ ಸಂಗಾತಿಯೊಂದಿಗೆ ಇಡೀ ಜೀವನ ಕಳೆದ ಮನೆ… ತನಗೆ ಕರುಳ ಕುಡಿಗಳನ್ನು ಕರುಣಿಸಿದ ಮನೆ. ಮಗಳ ಮದುವೆಯಾದ ಮನೆ. ತನ್ನ ಸಂಗೀತಕ್ಕೆ ಆಶ್ರಯ ನೀಡಿದ ಮನೆ. ಈ ಮನೆಗೆ ತಾನು ಕೊಟ್ಟದ್ದೇನು, ಅದರಿಂದ ಪಡೆದದ್ದೇನು? ಎಲ್ಲವೂ ವಿಚಿತ್ರವೆನಿಸಿತು.
ಮನೆ ಮನೆಯಾಗಿ ಇತ್ತೇ ಹೊರತು ಮನಸು ಕಟ್ಟಲಿಲ್ಲ.
ಲಯ ನಿಸ್ವಾರ್ಥವಾಗಿ ತನ್ನಿಂದಾದಷ್ಟು ಸೇವೆ ಮಾಡಿದ್ದಳು. ಅವಳಿಗೆ ಹಿಂದಿರುಗಿ ಪಡೆಯುವ ಹಿರಿದಾದ ಆಸೆಗಳೇನೂ ಇರಲಿಲ್ಲ. ಜೀವನದಲ್ಲಿ ಸಣ್ಣಸಣ್ಣ ಆಸೆಗಳನ್ನಿಟ್ಟುಕೊಂಡು ಆಶಾವಾದಿಯಾಗಿ ಬದುಕುತ್ತಾ ಬಂದಿದ್ದಳು. ತನಗೆ ನಿರಾಸೆಯೇ ಕಟ್ಟಿಟ್ಟ ಬುತ್ತಿ ಎಂದು ತಿಳಿದಾಗ ‘ಇರಲಿ ಬಿಡು’ ಎನ್ನುವ ವೈರಾಗ್ಯ ತಾಳಿದಳು.
ಲಯಳ ಬದುಕು ಎಲ್ಲಾ ಇದ್ದರೂ ಏನೂ ಇಲ್ಲದಂತೆ, ಏನೂ ಇಲ್ಲದೆ ಎಲ್ಲಾ ಇದ್ದಂತೆ.
ತನ್ನ ಮನಕ್ಕೆ ತಾನೇ ಆಸರೆಯಾಗುತ್ತ, ಒಂಟಿಯಾಗಿ ಮುಂಬೈ ಕಡೆ ಪಯಣ. ಸುಲ್ತಾನ್ ಪೇಟೆ ಸ್ಟೇಶನ್ ಬಿಟ್ಟ ಮೇಲೆ ಒಳಗಿನ ದುಗುಡ ಕಡಿಮೆ. ಮಗಳು, ಅಳಿಯ ಇಬ್ಬರೂ ಮಾತನಾಡಿದರು. ಅವಳಿಗೂ ಸಮಾಧಾನವೆನಿಸಿತು. ಒಳಗೊಳಗೆ ಅರಿವು ನೆನಪು ತೀವ್ರವಾಗಿ ಕಾಡುತ್ತಲೇ ಇತ್ತು. ಮನಕ್ಕೆ ಲಗಾಮು ಹಾಕಿ ಹಿಡಿದಿದ್ದಳು. ಅವನಿಗೆ ಕಾಲ್ ಮಾಡುವುದೆಂದರೆ ಗಾಯದ ಮೇಲೆ ಬರೆ ಎಳೆದಂತೆ. ಆ ಬರೆಯ ಮೇಲೆ ಉಪ್ಪೆರಚಿದಂತೆ. ಅವನೊಂದಿಗೆ ಮಾತನಾಡುವ ಸಾಹಸವಂತೂ ತನ್ನಲಿಲ್ಲ. ಸುಮ್ಮನೆ ಮಾತಾಡಿ ನೋವು ಕೊಟ್ಟಂತಾಗುವುದು. ಮೌನವಾಗಿರುವುದೇ ವಾಸಿ ಎನಿಸಿತು.
ಅವನೊಂದಿಗೆ ಪಯಣ ಮಾಡಿದ ಸಂದರ್ಭಗಳೆಲ್ಲ ನೆನಪಿನ ಸುರುಳಿಯಾಗಿ ಬಿಚ್ಚಿಕೊಂಡವು. ನಿಜ. ಇಡೀ ಬದುಕಿನಲ್ಲೇ ನಗದಷ್ಟು ಅವನೊಂದಿಗೆ ನಕ್ಕಿದ್ದಾಯಿತು. ರೈಲು ಪ್ರಯಾಣ ಮುಗಿದದ್ದೇ ತಿಳಿಯುತ್ತಿರಲಿಲ್ಲ. ಸಮಯ ನಕ್ಕು ನಗಿಸಿ ನಲಿದು ಕುಣಿದು ಜಾರಿ ಹೋಗಿರುವುದು ಗಮನಕ್ಕೆ ಬರುತ್ತಿರಲಿಲ್ಲ. ಎಂತಹ ಹೆಂಗರುಳಿನ ಮನುಷ್ಯ! ನನ್ನೊಳಗೆ ಅಡಗಿದ ದುಃಖವನ್ನೆಲ್ಲ ಕಕ್ಕಿಸಿ ನಿರಾಳಗೊಳಿಸಿದ್ದ. ಮನಸನ್ನೇ ಓದುವ ಅವನಲ್ಲಿ ಹೃದಯ ಶ್ರೀಮಂತಿಕೆ.
ತನಗಾಗಿಯೇ ಹೇಳಲಿ, ಲಯಳಿಗಾಗಿಯೇ ಹೇಳಲಿ, ಅವನ ಮಾತು ನಡೆಸಿಕೊಡಲೇಬೇಕಿತ್ತು. ಆದರೆ ಲಯಳಿಗೆ ದಿಟ್ಟ ಹೆಜ್ಜೆ ಇಟ್ಟು ಮುಂದೆ ಹೋಗಲು ಮನಸು ಗಟ್ಟಿಗೊಂಡಿರಲಿಲ್ಲ. ವಯೋಮಾನದ ನೆಪವೊಡ್ಡಿ ಹಿಂದೆ ಸರಿದಿದ್ದಳು. ಆ ಹಳಹಳಿಕೆ ಮನದ ಮೂಲೆಯಲ್ಲಿ ಕಾಡುತ್ತಲೇ ಇತ್ತು. ಇಡೀ ಮನಸನ್ನು ಅರಿವು ಆವರಿಸಿಕೊಂಡಿದ್ದ. ಜಡತ್ವದ ಅನುಭವವಾಗಿ ಅಲ್ಲೇ ಅಡ್ಡಾದಳು. ಓಡುವ ರೈಲು ಅರಿವು ಇದ್ದಲ್ಲಿಗೆ ಕರೆದುಕೊಂಡು ಹೋಗಬಾರದೆ? ಮನಸು ಆಸೆಪಟ್ಟಿತು. ತಾನೇ ದೂರ ಸರಿದು ಪಶ್ಚಾತಾಪ ಪಡುವುದರಲ್ಲಿ ಏನಿದೆ? ಕಣ್ಣಂಚಿನಲ್ಲಿ ಕಂಬನಿ ಹನಿಗೂಡಿದವು. ಹಾಗೇ ನಿದ್ರಿಸಿದಳು.
ಸುಲ್ತಾನ್ ಪೇಟಿನಿಂದ ಮುಂಬೈನತ್ತ ರೈಲು ಓಡುತ್ತಲೇ ಇತ್ತು…
*
ಪರಿಚಯ: ‘ಸಿಕಾ’ ಕಾವ್ಯನಾಮದ ಕಾವ್ಯಶ್ರೀ ಮಹಾಗಾಂವಕರ ಅವರು ಬೀದರಿನವರು. ಮೈಸೂರಿನ ನಿರ್ಮಲ ಕಾನ್ವೆಂಟ್ ನಲ್ಲಿ ಪ್ರಾಥಮಿಕ ಶಿಕ್ಷಣ, ನಾರ್ಮ ಫೆಂಡ್ರಿಕ್ ಶಾಲೆಯಲ್ಲಿ ಮುಂದಿನ ಶಿಕ್ಷಣ, ಸರಕಾರಿ ಪಾಲಿಟೆಕ್ನಿಕ್ ಕಾಲೇಜ್ ಬೀದರಿನಲ್ಲಿ ಡಿಪ್ಲೊಮಾ ಇನ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್. ಸಾಹಿತ್ಯದ ತೀವ್ರ ಆಸಕ್ತಿಯಿಂದಾಗಿ ಮೈಸೂರು ಮುಕ್ತ ವಿಶ್ವವಿದ್ಯಾಲಯದಿಂದ ಕನ್ನಡ ಸ್ನಾತಕೋತ್ತರ ಪದವಿ. ‘ಪ್ರೇಮ ಕಾವ್ಯ’ ಕಾದಂಬರಿ, ‘ಬೆಳಕಿನೆಡೆಗೆ’ ಕಥಾ ಸಂಕಲನ, ‘ಪ್ರಳಯದಲ್ಲೊಂದು ಪ್ರಣತಿ’ ಕಥಾ ಸಂಕಲನ, ‘ಜೀವಜಗತ್ತಿಗೆ ಜೇನಹನಿ’ ವಿಮರ್ಶಾ ಬರಹ, ‘ಪಿಸುಮಾತುಗಳ ಜುಗಲ್’ ಕಾವ್ಯಾನುಸಂಧಾನ, ಕವಿ ಸಿದ್ದು ಯಾಪಲಪರವಿ ಅವರೊಡನೆ ಕಾವ್ಯ ಜುಗಲ್ಬಂದಿ, ‘ಬ್ಯಾಸರಿಲ್ಲದ ಜೀವ’ ಜೀವನ ಚರಿತ್ರೆ, ‘ಅಡುಗೆ ನಡುವೆ ಬಿಡುವು’ ವಿಮರ್ಶಾ ಬರಹ, ‘ನಾನೇ ಅವನು’ ಕಥಾಸಂಕಲನ, ‘ಅಕ್ಕನೆಡೆಗೆ’ – ಅಕ್ಕಮಹಾದೇವಿ ವಚನಾನುಸಂಧಾನ, ‘ಮೈ ಕಪ್ ಆಫ್ ಕಾಫಿ’ – ಕನಸುಗಳ ಕಲರವ (ಅಂಕಣ), ‘ವಾಸ್ತವದ ಒಡಲು’ – ಸತ್ಯ ಘಟನೆಗಳು (ಅಂಕಣ), ‘ಕಲ್ಯಾಣದಿಂದ ಕ್ಯಾಲಿಫೋರ್ನಿಯಾ’ – ಪ್ರವಾಸ ಕಥನ
*
ಈ ಕಾದಂಬರಿಯ ಪ್ರತಿಗಳಿಗಾಗಿ ಸಂಪರ್ಕಿಸಿ : 9448358040/ 9343456704
(ಒಂದು ವಾರದ ನಂತರ ರಾಜ್ಯದ ಪ್ರಮುಖ ಪುಸ್ತಕ ಮಳಿಗೆಗಳು ಮತ್ತು ಆನ್ಲೈನ್ನಲ್ಲಿಯೂ ಲಭ್ಯ)
https:www.navakarnatakaonline.com
https:www.sapnaonline.com
ಇದನ್ನೂ ಓದಿ : ಅಚ್ಚಿಗೂ ಮೊದಲು ; ಒರೆಗಲ್ಲಿಗೆ ತಿಕ್ಕಿ ಚೊಕ್ಕವಾದರೆ ಚೊಕ್ಕಾಡಿ : ಸುಬ್ರಾಯರ ಅನುಭವಕಥನ ಬಿಡುಗಡೆ
Acchigoo modhalu an excerpt from new kannada novel Valakal Vadalu by writer Kavyashree Mahagaonkar
Published On - 3:15 pm, Sat, 3 April 21