22 ವರ್ಷಗಳ ಹಿಂದೆ ಪ್ರಮಿತ್ ಭಾರ್ಗವ್ ಹಿಂದೂಸ್ತಾನ್ ಯುನಿಲಿವರ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ವೈದ್ಯರ ನಿರ್ದೇಶನ ಪಡೆದು ಸಂಧಿವಾತ ಕಾಯಿಲೆಗಾಗಿ ಔಷಧಿಯೊಂದನ್ನು ಸೇವಿಸಿದ್ದರು. ಈ ಔಷಧಿ ಸೇವಿಸಿದ್ದೇ ತಡ ಅವರ ರೆಟಿನಾಗೆ (ಕಣ್ಣಿನಪೊರೆ) ಹಾನಿಯಾಯಿತು. ರಾತ್ರೋರಾತ್ರಿ ಪ್ರಮಿತ್ ದೃಷ್ಟಿ ಮಂದವಾಯಿತು. ಯಾವ ವೈದ್ಯರಿಗೂ ಇದನ್ನು ಸರಿಪಡಿಸಲು ಸಾಧ್ಯವಾಗಲಿಲ್ಲ. ಯಾಕೆಂದರೆ ಈ ರೀತಿ ನಡೆದಿರುವುದೇ ಅಪರೂಪ. ಈ ಪರಿಸ್ಥಿತಿಯನ್ನು ವೈದ್ಯಕೀಯ ಭಾಷೆಯಲ್ಲಿ ಹೈಡ್ರೋಕ್ಸಿಕ್ಲೊರೊಕ್ವಿನ್ ರಿಟಿನಲ್ ಟಾಕ್ಸಿಸಿಟಿ (hydroxychloroquine retinal toxicity) ಎನ್ನುತ್ತಾರೆ.
ಸುಮಾರು 10 ವರ್ಷಗಳ ಕಾಲ ಇದೇ ಕಾಯಿಲೆಯೊಂದಿಗೆ ಪ್ರಮಿತ್ ಮೊಟೊರೊಲಾ ಮತ್ತು ಕ್ವೆಸ್ಟ್ ಡಯಾಗ್ನಿಸ್ಟಿಕ್ಸ್ ಮೊದಲಾದ ಸಂಸ್ಥೆಗಳಲ್ಲಿ ಕೆಲಸ ಮಾಡಿದರು. ಆದರೆ ವರ್ಷ ಕಳೆದಂತೆ ದೃಷ್ಟಿ ಮಂದವಾಗುತ್ತಾ ಬಂತು. ಬನಾರಸ್ ಹಿಂದೂ ವಿಶ್ವವಿದ್ಯಾಲಯದಿಂದ ಐಐಟಿ ಪದವಿ ಬೆಂಗಳೂರಿನ ಐಐಎಂನಿದ ಎಂಬಿಎ ಶಿಕ್ಷಣ ಪಡೆದಿದ್ದರು ಪ್ರಮಿತ್. 9 ವರ್ಷಗಳ ಹಿಂದೆ ಯಾವುದೇ ಗಾತ್ರದ ಅಕ್ಷರವನ್ನು ಓದಲು ಸಾಧ್ಯವಾಗದು ಎಂಬ ಪರಿಸ್ಥಿತಿ ಬಂದುಬಿಟ್ಟಿತು. 2018 ಜೂನ್ ತಿಂಗಳಲ್ಲಿ ಪ್ರಮಿತ್ ಗುರುಗ್ರಾಮದಲ್ಲಿ ವಿಸಿಯೊಆ್ಯಪ್ಸ್ ಟೆಕ್ನಾಲಜಿ ಎಂಬ ಸ್ಟಾರ್ಟ್ ಅಪ್ ಆರಂಭಿಸಿದರು. ಮೂವರು ಡೆವಲಪರ್ಗಳ ಜತೆಗೂಡಿ ಆರಂಭಿಸಿದ ಈ ಕಂಪನಿಯಲ್ಲೀಗ 14 ಮಂದಿ ಇದ್ದಾರೆ. ಈ ಪೈಕಿ ಮೂವರು ದೃಷ್ಟಿದೋಷವಿರುವ ಡೆವಲಪರ್ಗಳು ಎನ್ನುವುದು ಉಲ್ಲೇಖಾರ್ಹ ಸಂಗತಿ.
ಈಗ ಪ್ರಮಿತ್ಗೆ 53 ವರ್ಷ. ಇವರ ವಿಸಿಯೊಆ್ಯಪ್ಸ್ ಕಂಪನಿ ದೃಷ್ಟಿದೋಷವುಳ್ಳವರಿಗೆ ಸಹಾಯ ಮಾಡುವ ವರ್ಚುವಲ್ ಫ್ರೆಂಡ್ ಎಂದೇ ಹೇಳಬಹುದಾದ ಲೂಯಿಸ್ ವಾಯ್ಸ್ ಕಂಟ್ರೋಲ್ ಆ್ಯಪ್ ಅಭಿವೃದ್ಧಿಪಡಿಸಿದೆ. ಈ ಆ್ಯಪ್ ಬಳಕೆದಾರರಿಗೆ ವಾಟ್ಸ್ಆ್ಯಪ್ನಲ್ಲಿ ಸಂದೇಶ ಅಥವಾ ಊಬರ್ ಆ್ಯಪ್ನಲ್ಲಿ ಧ್ವನಿ ಸಂದೇಶ ಕಳಿಸಿ ಕ್ಯಾಬ್ ಬುಕ್ ಮಾಡಲು ಸಹಾಯ ಮಾಡುತ್ತದೆ. ಸರಳವಾಗಿ ಹೇಳುವುದಾದರೆ ದೃಷ್ಟಿದೋಷವಿರುವ ವ್ಯಕ್ತಿಗಳು ತಮ್ಮ ಮೊಬೈಲ್ ಫೋನ್ನಲ್ಲಿರುವ ಆ್ಯಪ್ಗಳನ್ನು ಬಳಸಲು ಲೂಯಿಸ್ ವಾಯ್ಸ್ ಕಂಟ್ರೋಲ್ ಆ್ಯಪ್ ಸಹಾಯ ಮಾಡುತ್ತದೆ. ಈ ಆ್ಯಪ್ ಬಳಸಿ ಇತರ ಆ್ಯಪ್ಗಳಿಗೆ ವಾಯ್ಸ್ ಕಮಾಂಡ್ (ದನಿ ಮೂಲಕ ನಿರ್ದೇಶನ) ಮಾಡಬಹುದು.
ಮರಳಿ ಪಡೆದ ಆತ್ಮವಿಶ್ವಾಸ
ತಮ್ಮ ಬದುಕು ಸಾಗಿಬಂದ ಹಾದಿಯ ಕುರಿತು ಪ್ರಮಿತ್ ಭಾರ್ಗವ್ ಹೇಳುವುದು ಹೀಗೆ…
‘ನನ್ನ ದೃಷ್ಟಿ ನಿಧಾನವಾಗಿ ಕಡಿಮೆಯಾಗುತ್ತಾ ಬಂದು ಪೂರ್ತಿಯಾಗಿ ಕತ್ತಲೆ ಆವರಿಸಿತು. ದೃಷ್ಟಿಯ ಜತೆಗೆ ನಾನು ಆತ್ಮವಿಶ್ವಾಸವನ್ನೇ ಕಳೆದುಕೊಂಡುಬಿಟ್ಟೆ. ದೈನಂದಿನ ಸಣ್ಣಪುಟ್ಟ ಕೆಲಸಗಳನ್ನಾದರೂ ನನ್ನಿಂದ ಮಾಡಲು ಸಾಧ್ಯವೆ? ಉದಾಹರಣೆಗೆ ಫೋನ್ ಕರೆ ಸ್ವೀಕರಿಸುವುದು, ಆ ಕಡೆಯಿಂದ ಯಾರು ಮಾತನಾಡುತ್ತಿದ್ದಾರೆ ಎಂದು ಗಮನಿಸುವುದು ಒಂದೆಡೆಯಾದರೆ ಎಕ್ಸೆಲ್ ಶೀಟ್, ಪವರ್ ಪಾಯಿಂಟ್ ಪ್ರೆಸೆೆಂಟೇಷನ್ ಮಾಡಲು ಸಾಧ್ಯವೆ ಎಂಬ ಪ್ರಶ್ನೆ ನನ್ನ ಮನಸ್ಸಿನಲ್ಲಿ ಆಗಾಗ ಏಳುತ್ತಿತ್ತು. ನಾನು ಕೆಲಸ ಬಿಟ್ಟು 2015ಕ್ಕೆ ಮೂರು ವರ್ಷ ಆಗುತ್ತಾ ಬಂದಿತ್ತು. ಮಾನಸಿಕವಾಗಿ ಕುಗ್ಗಿ ಹೋಗಿದ್ದೆ. ನನಲ್ಲಿದ್ದ ಆತ್ಮವಿಶ್ವಾಸ ಕಳೆದುಹೋಗಿತ್ತು. ಆ ಹೊತ್ತಲ್ಲಿ ನನಗೆ ಬೆಂಬಲವಾಗಿ ನಿಂತಿದ್ದು ನನ್ನ ಸ್ನೇಹಿತರು.
‘2016ರಲ್ಲಿ ನಾನು ಬೇರೆಬೇರೆ ಕಂಪನಿಗಳಲ್ಲಿ ಕೆಲಸ ಮಾಡಲು ಹೋದೆ. ಅಲ್ಲಿ ದೃಷ್ಟಿದೋಷವಿರುವವರಿಗೆ ಸಹಾಯವಾಗುವಂತೆ ಇದ್ದ ವ್ಯವಸ್ಥೆ ಎಂದರೆ ಸ್ಕ್ರೀನ್ ರೀಡರ್. ಅದನ್ನು ಬಳಸಲು ನನಗೆ ಕಷ್ಟ ಆಗುತ್ತಿತ್ತು. ನಾಲ್ಕು ವರ್ಷಗಳ ಹಿಂದೆ ದೆಹಲಿ ಮೂಲದ ಕಂಪನಿಯೊಂದರ ವ್ಯವಸ್ಥಾಪಕ ನಿರ್ದೇಶಕ (ಎಂಡಿ) ಅವರನ್ನು ಭೇಟಿಯಾಗಲು ಹೋಗಿದ್ದೆ. ನಾನು ಸಮಾಲೋಚಕರಿಗಾಗಿ ಹುಡುಕುತ್ತಿದ್ದೆ. ನನ್ನ ಕತೆ ಕೇಳಿದ ಎಂಡಿ ದೃಷ್ಟಿದೋಷವುಳ್ಳವರಿಗಾಗಿ ಅಭಿವೃದ್ಧಿಪಡಿಸುವ ಆ್ಯಪ್ಗೆ ಸಹಾಯ ಮಾಡುವ ಅವಕಾಶವನ್ನು ನನಗೆ ನೀಡಿದರು. ಅವರ ಹೆಸರು ಹೇಳುವುದು ಬೇಡ ಎಂದು ಅವರೇ ಹೇಳಿದ್ದಾರೆ. ಎಂಡಿ ಜತೆ ಮಾತನಾಡಿದ ನಂತರ ನನಗೆ ಗೆಳೆಯನೊಬ್ಬನನ್ನು ಭೇಟಿಯಾಗುವುದಿತ್ತು. ದೆಹಲಿಯಲ್ಲಿರುವ ಕಚೇರಿಗೆ ಬಂದು ಬಿಡು ಎಂದು ಅವನು ನನಗೆ ಹೇಳಿದ್ದ. ಅವನನ್ನು ಭೇಟಿಯಾದ ಮೇಲೆ ಊಬರ್ ಕ್ಯಾಬ್ ಬುಕ್ ಮಾಡುವುದಿತ್ತು. ನನಗಾಗಿ ಕ್ಯಾಬ್ ಬುಕ್ ಮಾಡುವಾಗ ನನ್ನ ಗೆಳೆಯ ಬುಕಿಂಗ್ ಮಾಡುವ ಪ್ರತಿಯೊಂದು ಹಂತವನ್ನು ವಿವರಿಸಿ ಹೇಳಿದ. ಬುಕಿಂಗ್ ಆದ ಮೇಲೆ ಪ್ರಯಾಣವನ್ನು ದೃಢೀಕರಿಸಲು ಚಾಲಕನಿಗೆ ಕರೆ ಮಾಡುವಂತೆ ಹೇಳಿದ. ಈ ಎಲ್ಲ ಕೆಲಸಗಳನ್ನು ಮಾಡುವಾಗ ಗೆಳೆಯ ಜತೆಯಾದ.
‘ಊಬರ್ನಲ್ಲಿ ನಾನು ಮನೆಗೆ ಬರುತ್ತಿರುವಾಗ ನನ್ನ ಮನಸ್ಸಿನಲ್ಲಿ ಹೊಸ ಯೋಚನೆಯೊಂದು ಹೊಳೆಯಿತು. ಅದೇನೆಂದರೆ ಈಗ ನನ್ನ ಗೆಳೆಯ ನನಗೆ ಸಹಾಯ ಮಾಡಿದಂತೆ ‘ವರ್ಚುವಲ್ ಫ್ರೆಂಡ್’ ಯಾಕೆ ಇರಬಾರದು? ಸ್ಕ್ರೀನ್ನಲ್ಲಿ ನಾನು ವರ್ಚುವಲ್ ಫ್ರೆಂಡ್ ಜತೆ ಮಾತನಾಡಿದರೆ ಆ ದನಿಯನ್ನು ಬಳಸಿ ಇತರ ಕೆಲಸಗಳನ್ನು ಮಾಡುವಂತಿದ್ದರೆ? ದೃಷ್ಟಿಯಿರುವ ವ್ಯಕ್ತಿಗಳು ಆ್ಯಪ್ ಬಳಸುವಂತೆ ದೃಷ್ಟಿದೋಷವುಳ್ಳ ವ್ಯಕ್ತಿಯೊಬ್ಬರು ವಾಯ್ಸ್ ಕಮಾಂಡ್ ನೀಡಿ ಆ್ಯಪ್ ಬಳಸಲು ಸಾಧ್ಯವಾಗಬೇಕು ಎಂಬುದರ ಬಗ್ಗೆ ನಾನು ಪ್ರಯಾಣದುದ್ದಕ್ಕೂ ಯೋಚಿಸಿದೆ.
‘ಎರಡೂವರೆ ವರ್ಷಗಳ ಹಿಂದೆ ಕಂಪನಿಯೊಂದನ್ನು ಆರಂಭಿಸಿದೆ. ಲೂಯಿಸ್ ವಾಯ್ಸ್ ಕಂಟ್ರೋಲ್ ಆ್ಯಪ್ ಅಭಿವೃದ್ಧಿಪಡಿಸುವುದು ಸವಾಲಿನ ಕೆಲಸ ಎಂಬುದು ನನಗೆ ಗೊತ್ತಿತ್ತು. ದೃಷ್ಟಿದೋಷವುಳ್ಳವರಿಗಾಗಿ ಆ್ಯಪ್ ತಯಾರಿಸಲು ಯಾರೊಬ್ಬರೂ ಪ್ರಯತ್ನಿಸುವುದಿಲ್ಲ. ಈ ಸ್ಟಾರ್ಟ್ ಅಪ್ ಆರಂಭ ಮಾಡುವ ಮುನ್ನ ಪುಣೆ ಮತ್ತು ಗುರುಗ್ರಾಮದಲ್ಲಿರುವ ಸಂಸ್ಥೆಯಲ್ಲಿ ಕೆಲಸ ಮಾಡಿದ ಅನುಭವದಿಂದಾಗಿ 9 ತಿಂಗಳಲ್ಲಿ ಆ್ಯಪ್ ಸಿದ್ದಪಡಿಸಲು ಸಹಾಯವಾಯಿತು.
‘ಜೂನ್ 2018ರಲ್ಲಿ ವಿಸಿಯೊಆ್ಯಪ್ ಆರಂಭಿಸಿದ್ದರೂ 2018ರ ಅಕ್ಟೋಬರ್ ತಿಂಗಳವರೆಗೆ ಆ್ಯಪ್ ಅಭಿವೃದ್ಧಿಪಡಿಸಲು ಅಗತ್ಯವಿರುವ ಕೋಡ್ನ ಒಂದೇಒಂದು ಸಾಲು ಬರೆದಿರಲಿಲ್ಲ. ನಾವು ತಯಾರಿಸುವ ಆ್ಯಪ್ನಲ್ಲಿ ಸ್ಕ್ರೀನ್ ರೀಡಿಂಗ್ ಟೆಕ್ನಾಲಜಿ ಸಾಧ್ಯವಾದರೆ ಅರ್ಧ ಕೆಲಸ ಮುಗಿದಂತೆ. ನಮ್ಮ ಕಂಪನಿಯಲ್ಲಿರುವ ಅಂಡ್ರಾಯ್ಡ್ ಡೆವೆಲಪರ್ಗಳು ದೃಷ್ಟಿಯುಳ್ಳವರಾಗಿದ್ದರೂ ಕಣ್ಣಿಗೆ ಬಟ್ಟೆ ಕಟ್ಟಿ ದೃಷ್ಟಿದೋಷವುಳ್ಳವರಿಗೆ ಸಹಾಯ ಮಾಡಲು ಇದು ಸೂಕ್ತವೇ ಎಂಬುದನ್ನು ಮನವರಿಕೆ ಮಾಡಿಕೊಳ್ಳುವಂತೆ ಮಾಡುತ್ತಿದ್ದೆ. ಒಂದೂವರೆ ವರ್ಷದ ಹಿಂದೆ ಗೂಗಲ್ ಪ್ಲೇ ಸ್ಟೋರ್ನಲ್ಲಿ ನಮ್ಮ ಆ್ಯಪ್ನ ಬೀಟಾ ಆವೃತ್ತಿಯನ್ನು ಕೊಟ್ಟು, ಬಳಕೆದಾರರೇ ಅದನ್ನು ಪರೀಕ್ಷಿಸಲಿ ಎಂದು ಬಿಟ್ಟು ಬಿಟ್ಟೆವು.
‘ಪ್ರಸ್ತುತ 70 ದೇಶಗಳಲ್ಲಿ ನಮ್ಮ ಬಳಕೆದಾರರಿದ್ದಾರೆ. ಈ ಪೈಕಿ ಅರ್ಧದಷ್ಟು ಬಳಕೆದಾರರು ಭಾರತೀಯರಾಗಿದ್ದಾರೆ. ಬಳಕೆದಾರರು ನೀಡಿದ ಪ್ರತಿಕ್ರಿಯೆಯಿಂದ ನಾವು ಆ್ಯಪ್ನ್ನು ಮತ್ತಷ್ಟು ಸುಧಾರಿಸಿದೆವು. ನವೆಂಬರ್ 1, 2020ರಂದು ದೇಶಾದ್ಯಂತ ಈ ಆ್ಯಪ್ ಪರಿಚಯಿಸಲಾಯಿತು. ಕಳೆದ ಕೆಲವು ತಿಂಗಳಲ್ಲಿ ಆ್ಯಪ್ ಬಗ್ಗೆ ಹಲವಾರು ಸಂಸ್ಥೆ, ಕಂಪನಿಗಳಲ್ಲಿ ನಾವು ವೆಬಿನಾರ್, ಲೈವ್ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದೇವೆ. ಆ್ಯಪ್ ಬಗ್ಗೆ ಪ್ರತಿಕ್ರಿಯೆಗಳನ್ನು ನೀಡುವುದಕ್ಕಾಗಿ ಬಳಕೆದಾರರಿಗೆ ವಾಟ್ಸ್ ಆ್ಯಪ್ ಗ್ರೂಪ್ಗಳನ್ನೂ ಮಾಡಿದ್ದೇವೆ’ ಎಂದು ಹೇಳುತ್ತಾರೆ ಪ್ರಮಿತ್.
ಲೂಯಿಸ್ ವಾಯ್ಸ್ ಕಂಟ್ರೋಲ್ ಆ್ಯಪ್ ಎಂಬುದು ಸಿರಿ ಅಥವಾ ಅಲೆಕ್ಸಾ ಅಲ್ಲ
ವಾಯ್ಸ್ ಅಸಿಸ್ಟೆಂಟ್ (ದನಿ ಸಹಾಯಕ) ಅಲೆಕ್ಸಾ ಅಥವಾ ಸಿರಿ – ಇವುಗಳಿಂದ ಲೂಯಿಸ್ ಯಾವ ರೀತಿ ಭಿನ್ನ ಎಂಬುದರ ಬಗ್ಗೆ ಪ್ರಮಿತ್ ಉತ್ತರ ಹೀಗಿದೆ. ಲೂಯಿಸ್ ಆ್ಯಪ್ ಮೂಲಕ ಬಳಕೆದಾರರು ಜನಪ್ರಿಯ ಆ್ಯಪ್ಗಳಾದ ಊಬರ್, ವಾಟ್ಸ್ಆ್ಯಪ್ ಅಥವಾ ಯುಟ್ಯೂಬ್ ಬಳಸಬಹುದು. ಅಷ್ಟೇ ಅಲ್ಲದೆ ವಾಯ್ಸ್ ಕಮಾಂಡ್ ಮೂಲಕ ಕಾಂಟಾಕ್ಟ್ ಲಿಸ್ಟ್ ನಿರ್ವಹಿಸಬಹುದು, ಕರೆ ಮಾಡಬಹುದು. ಲೂಯಿಸ್ ಆ್ಯಪ್ ಬಳಸಿ ಊಬರ್ ಕ್ಯಾಬ್ ಬುಕ್ ಮಾಡುವುದನ್ನು ನೋಡೋಣ. ಇದು ಅಲೆಕ್ಸಾ ಮತ್ತು ಸಿರಿಯಿಂದ ಹೇಗೆ ಭಿನ್ನವಾಗಿ ಎಂಬುದನ್ನು ಹೇಳುತ್ತೇನೆ ಎಂದು ಪ್ರಮಿತ್ ವಿವರಿಸಲು ಆರಂಭಿಸಿದರು.
‘ಯಾವುದೇ ಆ್ಯಪ್ ನಲ್ಲಿ ಲೂಯಿಸ್ ವಾಯ್ಸ್ ಎನೇಬಲ್ ಆಗಿದ್ದರೆ ವಾಯ್ಸ್ ಕಮಾಂಡ್ ಬಳಸಿ ನೀವು ಎಲ್ಲ ಕಾರ್ಯಗಳನ್ನು ಮಾಡಬಹುದು. ಆದರೆ ಅಲೆಕ್ಸಾ, ಸಿರಿ ಅಥವಾ ಗೂಗಲ್ ಅಸಿಸ್ಟೆಂಟ್ ಬೆೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತದೆ. ಊಬರ್ ವಿಷಯಕ್ಕೆ ಬರೋಣ, ಊಬರ್ ಆ್ಯಪ್ ತೆರೆದು ನಮ್ಮ ಪ್ರಯಾಣದ ಸ್ಥಳ ಮತ್ತು ಗಮ್ಯ ಸ್ಥಳವನ್ನು ನಮೂದಿಸಬೇಕಾಗುತ್ತದೆ. ಇಲ್ಲಿ ಲೂಯಿಸ್ ನಿಮಗೆ ಎಲ್ಲಿ ಹೋಗಬೇಕು ಎಂದು ಕೇಳುತ್ತದೆ, ಅಲ್ಲಿ ಆಯ್ಕೆಗಳೂ ಇರುತ್ತವೆ. ವಾಯ್ಸ್ ಕಮಾಂಡ್ ಮೂಲಕ ನೀವು ಹೊರಡುವ ಜಾಗ, ಹೋಗಬೇಕಾಗಿರುವ ಜಾಗ ಎಲ್ಲವನ್ನೂ ನಮೂದಿಸಬಹುದು. ಯಾವ ರೀತಿಯ ರೈಡ್ ಬೇಕು, ಅದಕ್ಕೆಷ್ಟು ಹಣ ಬೇಕು? ಕಾರಿನ ಸಂಖ್ಯೆ, ಚಾಲಕನಿಗೆ ಕರೆ ಮಾಡುವ, ಪ್ರಯಾಣ ರದ್ದು ಮಾಡುವ ಎಲ್ಲ ಕೆಲಸಗಳನ್ನು ಲೂಯಿಸ್ ಬಳಸಿ ಮಾಡಬಹುದು. ಪ್ರಯಾಣ ಆರಂಭವಾದಾಗ ಪ್ರಯಾಣದ ಮಾಹಿತಿಯನ್ನು ಕುಟುಂಬದವರು, ಗೆಳೆಯರಿಗೆ ರವಾನಿಸಬಹುದು. ಪ್ರಯಾಣದ ಸ್ಥಳವನ್ನು ಬದಲಿಸಬಹುದು, ಒಂದಕ್ಕಿಂತ ಹೆಚ್ಚು ನಿಲ್ದಾಣಗಳನ್ನು ಆಯ್ಕೆ ಮಾಡಬಹುದು.
‘ಈ ರೀತಿ ಕೆಲಸ ಮಾಡಲು ಬಳಕೆದಾರರು ನಿರಂತರವಾಗಿ ಆ್ಯಪ್ ಜತೆ ಮಾತನಾಡುತ್ತಿರಬೇಕು. ಅಂದರೆ ಬಳಕೆದಾರರ ಜತೆ ಲೂಯಿಸ್ ಸಂವಹನ ನಡೆಸುತ್ತಿರುತ್ತದೆ. ಈ ರೀತಿ ಯಾವುದೇ ವಾಯ್ಸ್ ಅಸಿಸ್ಟೆಂಟ್ ಕಾರ್ಯವೆಸಗುವುದಿಲ್ಲ. ನಾವು ಎಲ್ಲಿ ಮಾತು ನಿಲ್ಲಿಸಿದ್ದೆವೆಯೋ ಅಲ್ಲಿಂದಲೇ ಮಾತು ಶುರು ಮಾಡುತ್ತದೆ ಲೂಯಿಸ್. ಈಗ ಊಬರ್ ಪ್ರಯಾಣವನ್ನೇ ತೆಗೆದುಕೊಳ್ಳಿ. ಕ್ಯಾಬ್ ಬುಕಿಂಗ್ ಮಾಡಿದ ಕೂಡಲೇ ನಿಮ್ಮ ವಾಹನ ಬರಲು 10 ನಿಮಿಷ ಇದೆ ಎಂದು ಲೂಯಿಸ್ ತಿಳಿಸುತ್ತದೆ. ನೀವು ಲೂಯಿಸ್ ಜತೆ ಮಾತು ನಿಲ್ಲಿಸಿ ಕ್ಯಾಬ್ ಬರುವುದನ್ನೇ ಕಾಯುತ್ತಿರುತ್ತೀರಿ. ಲೂಯಿಸ್ ಆಫ್ ಆಗಿರುತ್ತದೆ. ಕೆಲವು ನಿಮಿಷಗಳ ನಂತರ ಕ್ಯಾಬ್ ಎಲ್ಲಿಗೆ ಬಂತು? ಇನ್ನೆಷ್ಟು ಹೊತ್ತು ಕಾಯಬೇಕು ಎಂದು ನೀವು ಮತ್ತೆ ಲೂಯಿಸ್ಗೆ ಕೇಳಬೇಕು ಎಂದಿದ್ದರೆ ಎರಡು ಬಾರಿ ನಿಮ್ಮ ಫೋನ್ ಅಲುಗಾಡಿಸಿ (ಶೇಕ್ ಮಾಡಿ). ತಕ್ಷಣವೇ ಲೂಯಿಸ್ ಆನ್ ಆಗಿ ಊಬರ್ ಸ್ಕ್ರೀನ್ ಅನ್ನು ಗುರುತಿಸಿ ಕ್ಯಾಬ್ ಬರಲು ಎಷ್ಟು ಹೊತ್ತು ಇದೆ ಎಂದು ಹೇಳುತ್ತದೆ.
ಮುಂದಿನ ಯೋಜನೆಗಳೇನು?
ಪ್ರಮೀತ್ ಅವರಿಗೆ ತಮ್ಮ ಮುಂದಿನ ಹಾದಿಯ ಬಗ್ಗೆಯೂ ಸ್ಪಷ್ಟಕಲ್ಪನೆಯಿದೆ.
‘ದೃಷ್ಟಿದೋಷವುಳ್ಳವರಿಗೆ ಸಹಾಯ ಮಾಡುವ ಹಲವಾರು ಆ್ಯಪ್ಗಳಿವೆ. ಆದರೆ ಯಾರಿಗೆ ಯಾವ ರೀತಿಯ ಆ್ಯಪ್ ಸಹಾಯವಾಗುತ್ತದೆ ಎಂಬುದನ್ನು ಅರಿತು ಬಳಸಬೇಕಿದೆ. ಹೆಚ್ಚಿನ ಆ್ಯಪ್ಗಳಲ್ಲಿ ಒಸಿಆರ್ (Optical Character Recognition) ಬೇರೆಬೇರೆ ರೀತಿಯಲ್ಲಿ ಬಳಕೆಯಾಗಿರುತ್ತದೆ. ಆದರೆ ಇಡೀ ಕೆಲಸಗಳಿಗೆ ಜತೆಗಾರನಂತಿರುವ ಲೂಯಿಸ್ ಥರ ಬೇರೆ ಯಾವ ಆ್ಯಪ್ ಇದೆ? ಸದ್ಯ ನಾವು ಲೂಯಿಸ್ನಲ್ಲಿ ಗೂಗಲ್ ಸರ್ಚ್, ಬ್ರೌಸ್, ಡಾಕ್ಯುಮೆಂಟ್ನ್ನು ಓಪನ್ ಮಾಡಿ ಓದಲು ಸಹಾಯ ಮಾಡುವ, ಫೋನ್ ಕರೆಗಳನ್ನು ಸ್ವೀಕರಿಸುವ ಮತ್ತು ರದ್ದು ಮಾಡುವ ವೈಶಿಷ್ಟ್ಯಗಳನ್ನು ಸೇರಿಸುವ ಕೆಲಸ ಮಾಡುತ್ತಿದ್ದೇವೆ. ದನಿ ಸಂದೇಶ ಕಳಿಸಿ ಆಹಾರ ಆರ್ಡರ್ ಮಾಡಲು ಸಹಾಯ ಮಾಡುವ ಫೀಚರ್ ಬಗ್ಗೆಯೂ ಯೋಚಿಸಿದ್ದೇವೆ. ಪ್ರಸ್ತುತ ಈ ಆ್ಯಪ್ ಅಂಡ್ರಾಯ್ಡ್ ಫೋನ್ಗಳಲ್ಲಿ ಮಾತ್ರ ಕೆಲಸ ಮಾಡುತ್ತಿದೆ. ಈ ವರ್ಷದ ಮಧ್ಯಭಾಗದಲ್ಲಿ ಐಫೋನ್ಗಳಲ್ಲಿಯೂ ಲಭ್ಯವಾಗುವಂತೆ ಮಾಡುತ್ತೇವೆ. ಹಿಂದಿ ಮತ್ತು ಸ್ಪಾನಿಷ್ ಜತೆ ಹೆಚ್ಚಿನ ಪ್ರಾದೇಶಿಕ ಭಾಷೆಗಳಲ್ಲಿಯೂ ಲಭ್ಯವಾಗುವಂತೆ ಮಾಡಲು ನಾವು ಶ್ರಮಿಸುತ್ತಿದ್ದೇವೆ’ ಎಂಬ ಪ್ರಮೀತ್ ಅವರ ಕನಸನ್ನು ‘ಬೆಟರ್ ಇಂಡಿಯಾ’ ಜಾಲತಾಣ ವರದಿ ಮಾಡಿದೆ.
I am no Messiah: ಅದೆಷ್ಟೋ ವಲಸೆ ಕಾರ್ಮಿಕರಿಗೆ ಆಸರೆ ಆದ ನಟ ಸೋನು ಸೂದ್ ತನ್ನ ಬಗ್ಗೆಯೇ ಹೇಳಿಕೊಂಡ ಮಾತಿದು