ಜೂಲಿಯೋ ಎಂಬ ಮಂಗನಿಗೇ ಗುಂಡಿಯೊತ್ತಿ ಬಾಳೆಹಣ್ಣು ಪಡೆದುಕೊಳ್ಳುವುದು ಗೊತ್ತಾಗುತ್ತದೆ ಎಂದರೆ…

'ವ್ಯಸನಗಳಿಗೆ ಜನರು ಏಕೆ ದಾಸರಾಗುತ್ತಾರೆ ಎಂಬುದಕ್ಕೂ ಈ ಹ್ಯಾಬಿಟ್ ಲೂಪ್ ಕಾರಣವಾಗುತ್ತದೆ. ಇಲ್ಲಿಯೂ ಕೂಡ ಸಂಕೇತಗಳು ಸೂಚನೆಗಳು ಕೆಲಸ ಮಾಡುತ್ತವೆ. ನಾವು ಮೊದಲೇ ಮಾತನಾಡಿದಂತೆ, ಚಟಗಳಿಂದ ಸಿಗುವ ತಾತ್ಕಾಲಿಕ ಉಪಶಮನ, ಸಿಗರೇಟು ಸೇದಿದರೆ ಸಿಗುತ್ತದೆ ಎಂದುಕೊಳ್ಳುವ ನಿರಾಳತೆಯ ಭಾವ, ಕುಡಿತದಿಂದ ದುಗುಡ ಮರೆಯಬಹುದೆನ್ನುವ ನಂಬಿಕೆ ಇಂತಹವುಗಳಿಂದ ನಮಗೆ ಅದರ ಹಂಬಲ ಹೆಚ್ಚಾಗಿರುತ್ತದೆ. ಅವು ಆ ವ್ಯಸನದಿಂದ ಸಿಗುವ ಉತ್ತೇಜನಗಳಿಗೆ ನೇರವಾಗಿ ಮಿದುಳನ್ನು ಸಂಪರ್ಕ ಮಾಡುತ್ತವೆ. ಅದು ಅಭ್ಯಾಸಕ್ಕೆ ನಾಂದಿ ಹಾಡುತ್ತವೆ. ಮುಂದೆ ಆ ಅಭ್ಯಾಸವೇ ಒಳಿತು ಕೆಡಕುಗಳನ್ನು ವಿಶ್ಲೇಷಿಸಲು ಹೋಗದೆ, ಚಟವಾಗಿ ಬದಲಾಗುತ್ತವೆ. ಬುದ್ಧಿಪೂರ್ವಕವಲ್ಲದ ಕ್ರಿಯೆಗಳಾಗಿ ಬಿಡುತ್ತವೆ.' ಗುರುಪಾದ ಬೇಲೂರು

ಜೂಲಿಯೋ ಎಂಬ ಮಂಗನಿಗೇ ಗುಂಡಿಯೊತ್ತಿ ಬಾಳೆಹಣ್ಣು ಪಡೆದುಕೊಳ್ಳುವುದು ಗೊತ್ತಾಗುತ್ತದೆ ಎಂದರೆ...
ಗುರುಪಾದ ಬೇಲೂರು
Follow us
ಶ್ರೀದೇವಿ ಕಳಸದ
|

Updated on:Mar 25, 2021 | 5:27 PM

ಯಾವುದೇ ಅಭ್ಯಾಸ ನಮಗೆ ರೂಢಿಯಾಗಬೇಕೆಂದರೆ ಅದರ ಫಲಶ್ರುತಿಯ ಬಗ್ಗೆ ನಮಗೆ ಸ್ಪಷ್ಟ ಅರಿವಿರಬೇಕು. ತಕ್ಷಣದ ಸುಖ ನೀಡುವ ಕೆಟ್ಟ ಅಭ್ಯಾಸಗಳು ಬೇಗ ಚಟವಾಗಿ ಬಿಡುತ್ತವೆ. ಅವುಗಳಿಂದ ಹೊರಬರುವುದು ಕಷ್ಟ. ದೀರ್ಘಕಾಲಿಕ ಉಪಯೋಗ ತರುವ ಅಭ್ಯಾಸಗಳು ಪರಿಶ್ರಮವನ್ನೂ, ಏಕಾಗ್ರತೆಯನ್ನೂ ಬೇಡುತ್ತವೆ. ಅಂತಹ ಒಳ್ಳೆಯ ಅಭ್ಯಾಸಗಳನ್ನು ಅಳವಡಿಸಿಕೊಳ್ಳುವುದು ಕಷ್ಟ. ಆದರೆ ಈ ಅಭ್ಯಾಸಗಳು ಹೇಗೆ ಹುಟ್ಟುತ್ತವೆ ಮತ್ತು ಹೇಗೆ ಬೆಳೆಯುತ್ತವೆ ಎಂಬುದನ್ನು ಅರ್ಥ ಮಾಡಿಕೊಂಡರೆ ಅವುಗಳನ್ನು ನಮ್ಮ ಒಳಿತಿಗಾಗಿ ಕೆಲಸ ಮಾಡುವಂತೆ ಪಳಗಿಸಿಕೊಳ್ಳುವುದು ನಮಗೆ ಕೆಡಕುಂಟು ಮಾಡುವ ಅಭ್ಯಾಸಗಳಿಂದ ದೂರವಿರುವುದು ಸಾಧ್ಯವಾಗುತ್ತದೆ. ರೂಢಿ ಇಲ್ಲ ಎಂಬ ಕಾರಣಕ್ಕೆ ಪ್ರಯತ್ನ ಮಾಡುವುದನ್ನು ಬಿಡುವವರೇ ಜಾಸ್ತಿ. ರೂಢಿಯನ್ನು ಬದಲಾಯಿಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿತಾಗ ನಮ್ಮ ನಡೆವಳಿಕೆಯೂ ಬದಲಾಗುತ್ತದೆ. ನಡೆವಳಿಕೆಗಳ ಮೇಲಿನ ಪ್ರಭುತ್ವದಿಂದ ನಮ್ಮ ವ್ಯಕ್ತಿತ್ವವೂ ರೂಪಿತವಾಗುತ್ತದೆ. ಅದಕ್ಕಾಗಿ ನಮಗೆ ಬೇಕಾಗಿರುವುದು ಸಂಕಲ್ಪ ಶಕ್ತಿ. ಆ ಸಂಕಲ್ಪ ಶಕ್ತಿಯನ್ನು ರೂಢಿಸಿಕೊಳ್ಳುವ ವಿಧಾನಗಳನ್ನು ಈ ಪುಸ್ತಕದಲ್ಲಿ ಸವಿವರವಾಗಿ ಚರ್ಚಿಸಲಾಗಿದೆ. 

ಪುಸ್ತಕ : ರೂಢಿ ಆವರ್ತನ (ಜೀವನ ರೂಪಿಸಿಕೊಳ್ಳುವ ಬಗೆ) ಬೆಲೆ : ರೂ. 145 ಮುಖಪುಟ ವಿನ್ಯಾಸ : ರವಿ ಅಜ್ಜೀಪುರ ಪ್ರಕಾಶನ : ನವಕರ್ನಾಟಕ ಪ್ರಕಾಶನ

ದೇವರ ಕಾಡು, ಅಗರ್ತ, ಫೋರ್ಡಿ, ಬರ್ಬರಿಕ ಕಥೆ, ಕಾದಂಬರಿಗಳನ್ನು ರಚಿಸಿದ ಲೇಖಕ ಗುರುಪಾದ ಬೇಲೂರು (ಬಿ.ಜಿ. ಗುರುಪಾದಸ್ವಾಮಿ) ಅವರು ವೃತ್ತಿಯಿಂದ ಎಂಜಿನಿಯರ್. ಮೂಲತಃ ಹಾಸನ ಜಿಲ್ಲೆಯ ಬೇಲೂರಿನವರು. ಕರ್ನಾಟಕ ಸರ್ಕಾರದಲ್ಲಿ ಕಳೆದ 33 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಬೃಹತ್ ನೀರಾವರಿ ಯೋಜನೆಗಳನ್ನು ಹೊಂದಿರುವ ಜಲಸಂಪನ್ಮೂಲ ಇಲಾಖೆಯಲ್ಲಿ ಏಳು ವರ್ಷಗಳ ಕಾಲ ಸರ್ಕಾರದ ಕಾರ್ಯದರ್ಶಿಯಾಗಿ ಕೆಲಸ ನಿರ್ವಹಿಸಿದ್ದಾರೆ. ಪ್ರಸ್ತುತ ಅಚ್ಚುಕಟ್ಟು ಪ್ರದೇಶ ಪ್ರಾಧಿಕಾರಗಳ ನಿರ್ದೇಶನಾಲಯದ ನಿರ್ದೇಶಕರಾಗಿದ್ದಾರೆ. ‘ರೂಢಿ ಆವರ್ತನ’ ಇವರ ಹೊಸ ಪುಸ್ತಕವು ಬೆಂಗಳೂರಿನಲ್ಲಿ ಇದೇ 31ರಂದು ಬಿಡುಗಡೆಯಾಗಲಿದೆ. ಪುಸ್ತಕದ ಆಯ್ದ ಅಧ್ಯಾಯ ನಿಮ್ಮ ಓದಿಗೆ.

***

ಕಾಂತಮ್ಮನವರ ಸಾಧನೆಯನ್ನು ಹಲವಾರು ಮಂದಿ ಮಾಡಿದ್ದಾರೆ, ಮಾಡುತ್ತಿದ್ದಾರೆ. ಅದಕ್ಕೆ ಆಯಾ ವೈದ್ಯರು ಹೇಳುವ ಔಷಧಿಗಳೋ, ಮಾತ್ರೆಗಳೋ, ಹೆಲ್ತ್ ಡ್ರಿಂಕ್‍ಗಳೋ, ಪಥ್ಯವೋ ಅದು ಒಂದು ಕಡೆ ಇರಲಿ. ಈ ಪ್ರಕರಣದಲ್ಲಿ ನಾವು ತೂಕ ಕಳೆದುಕೊಳ್ಳಲು ಯಾವ ಚಿಕಿತ್ಸೆಗಳನ್ನು ತೆಗೆದುಕೊಳ್ಳಬೇಕು ಎಂಬುದನ್ನು ವಿಚಾರ ಮಾಡುತ್ತಿಲ್ಲ. ಬದಲಿಗೆ ತೂಕ ಕಳೆದುಕೊಳ್ಳಲೇಬೇಕು ಎಂಬ ನಿರ್ಧಾರ ತೆಗೆದುಕೊಂಡ ನಂತರ ನಮ್ಮ ಜೀವನ ಶೈಲಿಯನ್ನು ಬದಲಾಯಿಸಿಕೊಳ್ಳಲು ಬೇಕಾದ ಅತ್ಯಗತ್ಯವಾದ ಹೊಸ ಅಭ್ಯಾಸಗಳನ್ನು ಕಾಂತಮ್ಮ ರೂಢಿಸಿಕೊಂಡಿದ್ದು ಹೇಗೆ ಎಂಬುದನ್ನು ನೋಡುತ್ತಿದ್ದೇವೆ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದ ವಿಷಯವೆಂದರೆ ಅವರ ಹಳೆಯ ಅಭ್ಯಾಸಗಳನ್ನು ಬಿಟ್ಟು ಅವರು ಹೊಸ ಅಭ್ಯಾಸಗಳನ್ನು ಅಳವಡಿಸಿಕೊಂಡಿದ್ದು. ಈ ರೀತಿ ಹಳೆಯ ಅಭ್ಯಾಸಗಳ ಜಾಗದಲ್ಲಿ ಹೊಸ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ಪ್ರಕ್ರಿಯೆ ಅಷ್ಟು ಸುಲಭವಾಗಿ ಆಗುವುದಿಲ್ಲ. ಅದಕ್ಕೆ ಒಂದು ಪ್ರೇರಕ ಶಕ್ತಿಯ ಅಗತ್ಯವಿರುತ್ತದೆ ಮತ್ತು ಗುರಿಯನ್ನು ಸಾಧಿಸುವ ಬಲವಾದ ಇಚ್ಛೆಯ ಮೇಲೆ ಅವಲಂಬಿತವಾಗಿರುತ್ತದೆ.

ಇದನ್ನು ಚಾರ್ಲ್ಸ್​ ‘ರೂಢಿ ಆವರ್ತನ’ ಎಂದು ಕರೆಯುತ್ತಾರೆ. ಒಂದು ಗುರಿಯ ಲಾಭವನ್ನು ಪಡೆದುಕೊಳ್ಳಬೇಕು ಎಂದರೆ, ಈ ಪ್ರಕರಣದಲ್ಲಿ, ಬೊಜ್ಜನ್ನು ಕರಗಿಸಿಕೊಳ್ಳುವುದು ಅಂತಿಮ ಗುರಿಯಾಗಿರುವುದರಿಂದ, ಅದಕ್ಕೆ ಹೊಸ ಅಭ್ಯಾಸಗಳನ್ನು ಅಳವಡಿಸಿಕೊಳ್ಳಲೇಬೇಕು. ಈ ಹೊಸ ಅಭ್ಯಾಸಗಳನ್ನು, ಹಳೆಯ ಅಭ್ಯಾಸಗಳ ಜಾಗದಲ್ಲಿ ರೂಢಿಗೆ ತರಲು ನಮಗೆ ಕೆಲವು ಸೂಚನೆಗಳೂ, ಸಂಕೇತಗಳೂ ಕಾಲಕಾಲಕ್ಕೆ ಕೆಲಸ ಮಾಡಬೇಕು. ಅವುಗಳಿಂದ ಅಭ್ಯಾಸಗಳು ಹುಟ್ಟುತ್ತವೆ. ಈ ಅಭ್ಯಾಸಗಳಿಂದ ನಮಗೆ ಗುರಿ ಸಾಧನೆಯ ಸಂತೋಷ ಸಿಗುತ್ತದೆ. ಅಂದರೆ 1. ಸಂಕೇತಗಳು 2. ಪ್ರತಿಕ್ರಿಯೆ 3. ಪುರಸ್ಕಾರ ಇವು ರೂಢಿ ಆವರ್ತನದ ಮೂರು ಪ್ರಮುಖ ಘಟ್ಟಗಳು.

ಹಾಗಾದರೆ ಒಂದು ಅಭ್ಯಾಸವನ್ನು ರೂಢಿಸಿಕೊಳ್ಳಲು ಬೇಕಾದ ಮಾನಸಿಕ ಸ್ಥಿತಿಯನ್ನು ರೂಢಿಸಿಕೊಳ್ಳುವುದು ಹೇಗೆ? ನಾವು ಸಂಕೇತಗಳನ್ನು ಗುರುತಿಸುವ ಕ್ರಿಯೆ ಹೇಗೆ ನಡೆಯುತ್ತದೆ. ಆ ಸಂಕೇತಗಳಿಂದ ನಮ್ಮಲ್ಲಿ ಹಂಬಲ ಹೇಗೆ ಉಂಟಾಗುತ್ತದೆ ಎಂಬುದನ್ನು ತಿಳಿಯಲು ವಿಜ್ಞಾನಿಗಳು ಹಲವಾರು ಸಿದ್ಧಾಂತಗಳನ್ನು ಮಂಡಿಸುತ್ತಾರೆ. ಅಭ್ಯಾಸಗಳನ್ನು ಉಂಟುಮಾಡುವ ಮಾನಸಿಕ ಸ್ಥಿತಿಯ ಬಗ್ಗೆ ಅಧ್ಯಯನ ಮಾಡಲು ಮನಶ್ಶಾಸ್ತ್ರಜ್ಞರು ಒಂದು ಪ್ರಯೋಗವನ್ನು ನಡೆಸಿದರು. ಜೂಲಿಯೋ ಎಂಬ ಮಂಗನೊಂದಿಗೆ ಮಾಡಿದ ಪ್ರಯೋಗದಲ್ಲಿ ಅದರ ಮುಂದೆ ಬಾಳೆಹಣ್ಣನ್ನು ಗಾಜಿನ ಪೆಟ್ಟಿಗೆಯಲ್ಲಿ ಇಡಲಾಗಿತ್ತು. ಅದರ ಮುಚ್ಚಳವನ್ನು ತೆಗೆಯಬೇಕೆಂದರೆ, ಮಂಗವು ತನ್ನ ಮುಂದಿದ್ದ ಕಂಪ್ಯೂಟರ್‍ನ ಸ್ಕ್ರೀನ್ ಮೇಲೆ ಒಂದು ನಿರ್ದಿಷ್ಟ ಆಕಾರ ಬಂದಾಗ, ಸ್ವಿಚ್ ಒಂದನ್ನು ಒತ್ತಬೇಕಿತ್ತು. ಸ್ವಿಚ್ ಒತ್ತಿದ ಕೂಡಲೇ ಪೆಟ್ಟಿಗೆಯ ಮುಚ್ಚಳ ತೆರೆದುಕೊಳ್ಳುತ್ತಿತ್ತು. ಅದಕ್ಕೆ ಪ್ರಿಯವಾದ ಬಾಳೆಹಣ್ಣು ಸಿಗುತ್ತಿತ್ತು. ಕೆಲವು ಸಮಯದ ಪ್ರಯತ್ನಗಳ ನಂತರ ಮಂಗವು ಮಾನಿಟರ್ ಮೇಲೆ ನಿರ್ದಿಷ್ಟ ಆಕಾರ ಬಂದ ಕೂಡಲೇ ಸ್ವಿಚ್ ಒತ್ತಲು ಕಲಿಯಿತು. ಸ್ವಿಚ್ ಒತ್ತಿದಾಗ ಬಾಳೆಹಣ್ಣು ಸಿಗುತ್ತದೆ ಎನ್ನುವುದು ಅದಕ್ಕೆ ಖಾತ್ರಿಯಾಯಿತು. ಆ ಪ್ರತಿಕ್ರಿಯೆಯಲ್ಲಿ ಪಳಗಿದ ನಂತರ ಮಂಗವು ಮಾನಿಟರ್ ಮೇಲೆ ಚಿತ್ರ ಮೂಡುತ್ತಿದ್ದಂತೆ ಸ್ವಿಚ್‍ಅನ್ನು ಒತ್ತುತ್ತಿತ್ತು. ಇದೇ ಪ್ರಯೋಗವನ್ನು ಮುಂದುವರೆಸುತ್ತಾ ಜೂಲಿಯೋ ಸ್ವಿಚ್‍ಅನ್ನು ಒತ್ತಿದ ನಂತರ ತೆರೆಯುತ್ತಿದ್ದ ಪೆಟ್ಟಿಗೆಯಿಂದ ಬಾಳೆಹಣ್ಣನ್ನು ತೆಗೆದುಹಾಕಲಾಯಿತು. ಸಂಕೇತ ಮತ್ತು ಹಂಬಲಗಳ ಅಭ್ಯಾಸ ಈಗಾಗಲೇ ಆಗಿಬಿಟ್ಟಿದ್ದರಿಂದ ಜೂಲಿಯೋ ಮಾನಿಟರ್ ಮೇಲೆ ಚಿತ್ರ ಬಂದ ಕೂಡಲೇ ಸ್ವಿಚ್ ಒತ್ತುವುದನ್ನು ಬಿಡಲಿಲ್ಲ. ಮೊದಲಿಗಿಂತಲೂ ಹೆಚ್ಚು ಬಾರಿ ಒತ್ತಿ ಬಾಳೆಹಣ್ಣಿಗಾಗಿ ಹುಡುಕಾಡುತ್ತಿತ್ತು. ಇಲ್ಲಿ ಮಂಗನಲ್ಲಿ ಒಂದು ರೂಢಿಯ ಆವರ್ತನವನ್ನು ಕಲ್ಪಿಸಲಾಗಿತ್ತು. ಮಾನಿಟರ್​ ಮೇಲೆ ಮೂಡುವ ಚಿತ್ರ ಜೂಲಿಯೋಗೆ ಸಂಕೇತವಾದರೆ, ಸ್ವಿಚ್ ಒತ್ತುವುದು ಅಭ್ಯಾಸವಾಗಿ ಪರಿವರ್ತನೆ ಆಯಿತು. ಅದಕ್ಕೆ ಅಂತಿಮ ಕಾರಣ ಅಂತ್ಯದಲ್ಲಿ ಬಾಳೆಹಣ್ಣು ದೊರೆಯುವುದು. ಇನ್ನೂ ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಮಾನಿಟರ್​ನ ಚಿತ್ರವನ್ನು (ಸಂಕೇತ) ನೋಡಿದ ಕೂಡಲೇ ಮಂಗನಿಗೆ ಬಾಳೆಹಣ್ಣಿನ (ಫಲಶ್ರುತಿಯ) ನೆನಪಾಗುತ್ತಿತ್ತು. ಪ್ರತಿಫಲ ಸಿಗುತ್ತದೆ ಎನ್ನುವ ತವಕದಲ್ಲಿ ನಾವು ಸಂಕೇತಗಳನ್ನು ಅನುಸರಿಸಿದಾಗ ಪ್ರತಿಕ್ರಿಯೆ ತಾವಾಗಿಯೇ ಆವಿರ್ಭವಿಸುತ್ತವೆ ಎಂದಾಯಿತು.

new book

ಸೌಜನ್ಯ : ಅಂತರ್ಜಾಲ

ಚಾರ್ಲ್ಸ್​ನ ಈ ಥಿಯರಿಯನ್ನು ಇನ್ನೂ ಮುಂದುವರೆಸುತ್ತಾ, ಈ ಮೂರು ಅಂಶಗಳ ಜೊತೆಗೆ, ನಾಲ್ಕನೆ ಘಟ್ಟವನ್ನು ಸೇರಿಸುತ್ತಾ ಜೇಮ್ಸ್ ಕ್ಲಿಯರ್ ತನ್ನ ‘ಅಟಾಮಿಕ್ ಹ್ಯಾಬಿಟ್ಸ್’ ಎಂಬ ಪುಸ್ತಕದಲ್ಲಿ, ‘ರೂಢಿ ಆವರ್ತನ’ ನಾಲ್ಕು ಅಂಶಗಳಿಂದ ಕೂಡಿದೆ ಎಂದು ವಿವರಿಸುತ್ತಾನೆ. ಅವು;

1. ಸಂಕೇತ 2. ಹಂಬಲ 3. ಪ್ರತಿಕ್ರಿಯೆ 4. ಪುರಸ್ಕಾರ

ಅಂದರೆ ಹಂಬಲವನ್ನು ಈ ಆವರ್ತನದಲ್ಲಿ ಹೆಚ್ಚುವರಿಯಾಗಿ ಸೇರಿಸಲಾಗಿದೆ. ಜೇಮ್ಸ್​ನ ದೃಷ್ಟಿಯಲ್ಲಿ ಸಂಕೇತಗಳು ಗುರಿಯೆಡೆಗೆ ಕರೆದೊಯ್ಯುತ್ತವೆ. ಈ ಗುರಿಯು ಕೊನೆಯಲ್ಲಿ ಸಿಗುವ ಪುರಸ್ಕಾರವಾಗಿರುವುದರಿಂದ, ಪ್ರತಿಯೊಂದು ಜೀವಿಯು ಪುರಸ್ಕಾರ ಸಿಗುವ ಸಂಕೇತಗಳನ್ನು ಹುಡುಕುತ್ತಲೇ ಇರುತ್ತದೆ. ಎರಡನೇ ಹಂತವಾದ ಹಂಬಲವಿಲ್ಲದೆ ಯಾವ ಅಭ್ಯಾಸವೂ ಹುಟ್ಟುವುದಿಲ್ಲ ಎಂಬುದು ಜೇಮ್ಸ್​ನ ವಾದ.

ಸಿಗರೇಟನ್ನು ನಿಕೋಟಿನ್‍ಗಾಗಿ ಯಾರೂ ಸೇದುವುದಿಲ್ಲ. ಸಿಗರೇಟು ಸೇದುವುದರಿಂದ ಶರೀರದಲ್ಲಿನ ನಿರುತ್ಸಾಹ ಉಪಶಮನವಾಗುತ್ತದೆ, ನಿರಾಳತೆ ಸಿಗುತ್ತದೆ ಎಂಬ ನಂಬಿಕೆಗಾಗಿ ಸೇದುತ್ತಾರೆ. ಇಲ್ಲಿ ಸಿಗರೇಟ್ ಸಂಕೇತವಾದರೆ, ಅದರಿಂದ ಸಿಗುವ ರಿಲ್ಯಾಕ್ಸೇಷನ್ ಪುರಸ್ಕಾರ. ಈ ಪುರಸ್ಕಾರದ ಹಂಬಲ ಹೆಚ್ಚಾದಾಗ ಸಿಗರೇಟು ಸೇದುವ ಅಭ್ಯಾಸ ಬೆಳೆಯುತ್ತದೆ. ಹಾಗೆಯೇ ಹಲ್ಲುಜ್ಜುವುದು, ಬ್ರಶ್ ಬಳಸಬೇಕೆಂದಲ್ಲ, ಅದರಿಂದ ಬಾಯಿ ಶುಚಿಯಾಗುತ್ತದೆ ಎಂದು. ಟೂಥ್ ಬ್ರಶ್ ಸಂಕೇತವಾದರೆ, ಬ್ರಶ್ ಮಾಡುವುದರಿಂದ ಉಂಟಾಗುವ ಸುಗಂಧದ ಉಸಿರು ಪುರಸ್ಕಾರವಾಗುತ್ತದೆ. ಅದಕ್ಕಾಗಿ ಬ್ರಶ್ ಮಾಡುವ ಅಭ್ಯಾಸ ಹುಟ್ಟುತ್ತದೆ. ಹಾಗೆಂದು ಎಲ್ಲಾ ಸಂಕೇತಗಳು ಎಲ್ಲರಿಗೂ ಒಂದೇ ರೀತಿಯ ಹಂಬಲವನ್ನು ಮೂಡಿಸುವುದಿಲ್ಲ. ಜೂಜಾಡುವವನಿಗೆ ಇಸ್ಪೀಟು ಕಾರ್ಡ್‍ಗಳನ್ನು ನೋಡಿದ ಕೂಡಲೇ ಹಂಬಲ ಮೂಡಬಹುದು, ಆದರೆ ಆ ಅಭ್ಯಾಸವಿಲ್ಲದವರಿಗೆ ಅದು ನಿಷ್ಕ್ರಿಯ, ಸಂಬಂಧಪಡದ ವಿಷಯವಾಗಬಹುದು. ಸಂಕೇತ ಮತ್ತು ಹಂಬಲದಿಂದ ಪ್ರೇರಿತವಾದರೂ ಅಭ್ಯಾಸವನ್ನು ರೂಢಿಸಿಕೊಳ್ಳುವುದು ವೈಯಕ್ತಿಕ ಸಾಮರ್ಥ್ಯದ ಮೇಲೂ ಅವಲಂಬಿಸಿದೆ. ನಮ್ಮ ಮಾನಸಿಕ ಹಾಗೂ ದೈಹಿಕ ಸಾಮರ್ಥ್ಯಗಳ ಆಧಾರದ ಮೇಲೆ ಅಭ್ಯಾಸಗಳು ರೂಪಿತವಾಗುತ್ತವೆ. ಕೆಲವೊಮ್ಮೆ ಪುರಸ್ಕಾರದ ಹಂಬಲ ತೀವ್ರವಾದಾಗ ಈ ಸಾಮರ್ಥ್ಯದ ಮಿತಿಗಳನ್ನೂ ಮೀರಿ ವಿಶಿಷ್ಟ ಸಾಧನೆ ಮಾಡಿರುವವರು ಅನೇಕ ಜನರಿದ್ದಾರೆ.

ಒಂದು ಸಲ ಗುರಿ ಸಾಧನೆಯಾದ ಮೇಲೆ, ಪ್ರತಿಕ್ರಿಯೆ ಬಿಟ್ಟು ಹೋಗುವುದಿಲ್ಲ. ಅದು ಅವಿಚ್ಛಿನ್ನವಾಗಿ ಉಳಿದುಬಿಡುತ್ತದೆ. ಸಾಧಿಸಿದ ಗುರಿಯನ್ನು ಅದೇ ಹಂತದಲ್ಲಿ ನಿರ್ವಹಿಸಲು ಅದು ಅಭ್ಯಾಸವಾಗಿ ಪರಿವರ್ತನೆಯಾಗುತ್ತದೆ. ಆದರೆ ಅಭ್ಯಾಸ ಸಾಧಿಸಿದ ನಂತರ ಅದರ ಪ್ರಜ್ಞಾಪೂರ್ವಕ ಅರಿವು ಇರುವುದಿಲ್ಲ. ಯಾಂತ್ರಿಕವಾಗಿ ಅದೇ ಅಭ್ಯಾಸಗಳು ತಪ್ಪಿಹೋಗದಂತೆ ಮುಂದುವರೆದುಬಿಡುತ್ತವೆ.

ರಾಮಮೂರ್ತಿ ಎಂಬ ಸರ್ಕಾರದ ಉನ್ನತ ಮಟ್ಟದ ಅಧಿಕಾರಿ ಬಳಿ ನಾನು ಕೆಲಸ ಮಾಡುತ್ತಿದ್ದೆ. ಈಗ ನಿವೃತ್ತರಾಗಿದ್ದಾರೆ. ನೀಳ ಮೈಕಟ್ಟಿನ, ಆಕರ್ಷಕ ವ್ಯಕ್ತಿತ್ವದವರು. ಅವರ ಅಭ್ಯಾಸವೆಂದರೆ ಸಣ್ಣ ಅವಕಾಶವಿದ್ದರೂ ವಾಕಿಂಗ್ ಮಾಡುವುದು. ರೈಲ್ವೆ ನಿಲ್ದಾಣದಲ್ಲಿ, ರೈಲಿಗಾಗಿ ಕಾಯುತ್ತಿರುವಾಗ, ಆ ಸಿಕ್ಕ ಸಮಯದಲ್ಲಿ, ಬನ್ನಿ ಸ್ವಲ್ಪ ದೂರ ವಾಕ್ ಮಾಡೋಣ ಎಂದು ಜೊತೆಗಿದ್ದವರನ್ನು ಕರೆದುಕೊಂಡು ಪ್ಲಾಟ್​ಫಾರಂನ ಆ ತುದಿಯಿಂದ ಈ ತುದಿಗೆ ನಡೆಯುತ್ತಿದ್ದರು. ಅದು ಏರ್​ಪೋರ್ಟ್​ ಆಗಲಿ, ದೇವಸ್ಥಾನವಾಗಲಿ ಕೊನೆಗೆ ಆಫೀಸ್‍ನ ಕ್ಯಾಂಪಸ್ ಆಗಲಿ ಆ ಅಭ್ಯಾಸ ಅವರಲ್ಲಿ ನಿರಂತರವಾಗಿ ಇತ್ತು. ಅಂದರೆ ಅಭ್ಯಾಸಗಳು ಮನುಷ್ಯನಿಗೆ ಒಮ್ಮೆ ಅಂಟಿಕೊಂಡು ಬಿಟ್ಟರೆ ಅವು ದೈನಂದಿನ ಚಟುವಟಿಕೆಗಳಲ್ಲಿ ಬೇರೂರಿ ಯಾಂತ್ರಿಕವಾಗಿ ಬಿಡುತ್ತವೆ. ಅವುಗಳನ್ನು ನಿರಂತರವಾಗಿ ರೂಢಿಸಿಕೊಳ್ಳಲು ಸಂಕೇತಗಳನ್ನು ಸೂಚನೆಗಳನ್ನು ಬಳಸುವುದನ್ನು ಬಿಡಬಾರದು.

ಬೆಳಿಗ್ಗೆ ವಾಕಿಂಗ್ ಹೋಗುವ ಅಭ್ಯಾಸ ನಿರಂತರವಾಗಿರಬೇಕೆಂದು ಬಯಸಿದಲ್ಲಿ ಅದರ ಸಂಕೇತಗಳನ್ನು, ಸೂಚನೆಗಳನ್ನು ದೃಷ್ಟಿಗೆ ಕಾಣುವ ಹಾಗೆ ಇಟ್ಟುಕೊಳ್ಳಬೇಕು. ಜಾಗಿಂಗ್ ಟೀಷರ್ಟ್, ಜಾಗಿಂಗ್ ಷೂಸ್, ಬೆಳಿಗ್ಗೆ ಎದ್ದ ಕೂಡಲೇ ಕಣ್ಣಿಗೆ ಬೀಳುವ ಹಾಗೆ ಸಿದ್ಧಪಡಿಸಿಟ್ಟುಕೊಳ್ಳಬೇಕು. ಹಾಗೆಯೇ ಕಾಲಕಾಲಕ್ಕೆ ಊಟ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕೆಂದರೆ ಅದರ ಸಂಕೇತಗಳನ್ನು ಸೃಜಿಸಿಕೊಳ್ಳಬೇಕು. ಪ್ರತಿ ಬಾರಿ ಊಟವಾದ ನಂತರ, ಪ್ಲೇಟ್‍ಗಳನ್ನು ಊಟದ ಮೇಜಿನಿಂದ ತೆಗೆಯುವುದು, ಮೇಜು ಶುಚಿಗೊಳಿಸಿ, ತೊಳೆದ ತಟ್ಟೆಗಳನ್ನು ಮೇಜಿನ ಮೇಲೆ ಜೋಡಿಸುವುದು ಮಾಡಿದಲ್ಲಿ, ಮುಂದಿನ ಊಟದ ಸಮಯಕ್ಕೆ ಆ ಸಿದ್ಧಪಡಿಸಿದ ಡೈನಿಂಗ್ ಟೇಬಲ್ ಸಂಕೇತವಾಗಿ ಕೆಲಸ ಮಾಡುತ್ತದೆ. ಬೆಳಿಗ್ಗೆ ನಿದ್ದೆಯಿಂದ ಎದ್ದ ಕೂಡಲೇ ಹಾಸಿಗೆಯನ್ನು, ಬೆಡ್‍ಷೀಟ್‍ಗಳನ್ನು, ದಿಂಬುಗಳನ್ನು, ಓರಣವಾಗಿ ಜೋಡಿಸಿಟ್ಟು ಬಿಟ್ಟರೆ, ರಾತ್ರಿಯ ವೇಳೆಗೆ ಬಳಲಿರುವ ದೇಹವು ವಿಶ್ರಾಂತಿ ಪಡೆಯಲು ಸಂಕೇತವನ್ನು ಸಿದ್ಧ ಮಾಡಿಟ್ಟ ಹಾಗೆ ಆಗುತ್ತದೆ. ಇವು ಕೊನೆಗೆ ಬಿಡಲಾರದ ಅಭ್ಯಾಸಗಳಾಗುತ್ತವೆ ಮತ್ತು ಅದರ ಪ್ರತಿಫಲ ಉತ್ತಮ ಫಲಿತಾಂಶವನ್ನು ಖಂಡಿತ ನೀಡುತ್ತದೆ.

new book

ಸೌಜನ್ಯ : ಅಂತರ್ಜಾಲ

ಸಾಧನೆಯ ಗುರಿ ಕಷ್ಟವಾಗಿರಬಹುದು ಹಾದಿಯನ್ನು ಸುಲಭ ಮಾಡಿಕೊಳ್ಳಬಹುದು ಬಾಡಿ ಬಿಲ್ಡರ್ ಆಗಬೇಕೆಂಬ ಕನಸೊಂದೇ ಯಾರನ್ನೂ ಜಿಮ್‍ಗಳಿಗೆ ಕಳಿಸುವುದಿಲ್ಲ. ಆ ಉತ್ಸುಕತೆ ಯೊಂದರಿಂದಲೇ ವ್ಯಾಯಾಮದ ಕಸರತ್ತನ್ನು ಪ್ರಾರಂಭ ಮಾಡಿದರೆ, ಮೂರು ತಿಂಗಳಲ್ಲಿ ಅಥವಾ ಆರು ತಿಂಗಳಲ್ಲಿ ಜೀವನದಲ್ಲಿ ಎದುರಾಗುವ ಬೇರೆ ಬೇರೆ ಪ್ರಸಂಗಗಳು ಅವರನ್ನು ಈ ಉತ್ಸುಕತೆಯಿಂದ ದೂರ ತಳ್ಳಿಬಿಡುತ್ತವೆ. ಬೇರೆ ವಿಷಯಗಳಿಗೆ ಇದಕ್ಕಿಂತ ಹೆಚ್ಚು ಪ್ರಾಮುಖ್ಯ ಕೊಟ್ಟು ಬಿಡುತ್ತೇವೆ ಹಾಗೂ ವ್ಯಾಯಾಮದ ಕೆಲಸವನ್ನು ನಿಲ್ಲಿಸುವ ಅಥವಾ ಅದನ್ನು ಮುಂದಕ್ಕೆ ಹಾಕುವ ಕೆಲಸ ಮಾಡಿಬಿಡುತ್ತೇವೆ. ಕಚೇರಿಯಲ್ಲಿ ವಿಪರೀತ ಕೆಲಸಗಳಿವೆ ಎಂದೋ ವ್ಯವಹಾರದ ನಿಮಿತ್ತ ಹೊರಗಡೆ ಸುತ್ತುವುದಿದೆ ಎಂದೋ, ಮಕ್ಕಳನ್ನು ನೋಡಿಕೊಳ್ಳಬೇಕಾಗಿದೆ ಎಂದೋ ಬೇರೆ ಎಲ್ಲಾ ಕಾರಣಗಳಿಗೆ ವ್ಯಾಯಾಮದ ಕೆಲಸವನ್ನು ಬಲಿಪಶು ಮಾಡಲಾಗುತ್ತದೆ. ಇದರಿಂದ ಹೊರಬರಬೇಕೆಂದರೆ ಹ್ಯಾಬಿಟ್ ಲೂಪ್‍ಅನ್ನು ಬಲಪಡಿಸಿಕೊಳ್ಳುವುದು ಬಹಳ ಮುಖ್ಯ.

ವ್ಯಾಯಾಮದಿಂದಾಗುವ ಲಾಭವನ್ನು ಗುರಿಮಾಡಿಕೊಳ್ಳುವುದು ಆ ಪ್ರತಿಫಲ ಪಡೆಯುವ ಸಲುವಾಗಿ ಸಂಕೇತಗಳನ್ನು ಪಡೆಯುತ್ತಾ ಹೋಗುವುದು. ಆ ಸಂಕೇತಗಳಿಂದ ಹಂಬಲವನ್ನು ಬೆಳೆಸಿಕೊಳ್ಳುವುದು ಮತ್ತು ಅಭ್ಯಾಸವನ್ನು ರೂಢಿಸಿಕೊಳ್ಳುವುದೊಂದೇ ಮಾರ್ಗ. ಈ ಸಂಕೇತಗಳು ಯಾವುದು ಬೇಕಾದರೂ ಆಗಬಹುದು. ಬೆಳಿಗ್ಗೆ ರಿಂಗಣಿಸುವ ಅಲಾರಾಂ ಆಗಬಹುದು. ಅಲಾರಾಂ ಸದ್ದಿಗೆ ಕಣ್ಣು ಬಿಟ್ಟಾಗ ಕಾಣುವ ಜಾಗಿಂಗ್ ಜರ್ಸಿ ಆಗಬಹುದು, ಜೋಡಿಸಿಟ್ಟ ಸ್ಪೋಟ್ರ್ಸ್ ಷೂ ಆಗಬಹುದು. ಈ ಸಂಕೇತಗಳು ನೇರವಾಗಿ ವ್ಯಾಯಾಮದ ಪ್ರತಿಫಲಕ್ಕೆ ಕನೆಕ್ಟ್ ಆಗಿ ಬಿಡಬೇಕು. ವ್ಯಾಯಾಮದ ನಂತರ ಸಿಗುವ ಹಿತವಾದ ನೋವು, ತಲೆಯೆತ್ತಿ, ಎದೆಯುಬ್ಬಿಸಿ ನಡೆಯುವ ಬಿಗಿಮೈ, ಹುರಿಗೊಂಡ ಸ್ನಾಯುಗಳು ಮತ್ತು ಅದರಿಂದ ಉಂಟಾಗುವ ಆತ್ಮವಿಶ್ವಾಸ ಆ ಪ್ರತಿಫಲಗಳಾಗಿದ್ದಲ್ಲಿ, ಬೆಳಗಿನ ಅಲಾರಾಂ ನೇರವಾಗಿ ಇವುಗಳನ್ನು ನೆನಪಿಗೆ ತರಬೇಕು. ಆಗ ಜಾಗಿಂಗ್, ವ್ಯಾಯಾಮಗಳು ಪ್ರತಿನಿತ್ಯದ ಬಿಡದ ಅಭ್ಯಾಸವಾಗಿ ಬದಲಾಗಿ ಬಿಡುತ್ತವೆ. ಮುಂದೆ ಯಾವ ಪ್ರೇರೇಪಣೆಯೂ ಬೇಕಿಲ್ಲದೆ ಅನೈಚ್ಛಿಕವಾಗಿ ನಡೆದುಕೊಂಡು ಹೋಗುತ್ತವೆ.

ಸಣ್ಣ ಬದಲಾವಣೆ; ಗಣನೀಯ ಫಲಿತಾಂಶ ಆದರೆ ಇಂತಹ ಅಭ್ಯಾಸಗಳು ಮತ್ತು ಅಭ್ಯಾಸದ ಪ್ರತಿಫಲ ರಾತ್ರೋರಾತ್ರಿ ಸಿದ್ಧಿಸುತ್ತವೆ ಎಂದು ಅಂದುಕೊಳ್ಳಬೇಡಿ. ಜೇಮ್ಸ್ ಕ್ಲಿಯರ್ “ಅಟಾಮಿಕ್ ಹ್ಯಾಬಿಟ್ಸ್” ಎನ್ನುವ ತಮ್ಮ ಪುಸ್ತಕದಲ್ಲಿ ಈ ಅಭ್ಯಾಸಗಳ ಬಗ್ಗೆ ವಿವರಿಸುತ್ತಾರೆ. ಅಭ್ಯಾಸಗಳು ವ್ಯಕ್ತಿತ್ವದ ಸ್ವಯಂ ಬೆಳವಣಿಗೆಗೆ ಸಿಗುವ ಚಕ್ರಬಡ್ಡಿಯಂತೆ. ಈ ಅಭ್ಯಾಸಗಳ ಪ್ರತಿಫಲವೂ ಚಕ್ರಬಡ್ಡಿಯಂತೆ ಬೆಳೆಯುತ್ತಲೇ ಹೋಗುತ್ತದೆ. ಮತ್ತೆ ಮತ್ತೆ ಅಭ್ಯಾಸ ಮಾಡಿದಷ್ಟು ಅದರ ಪರಿಣಾಮ ನಿಧಾನವಾಗಿ ಗೋಚರವಾಗುತ್ತಾ, ಕೊನೆಗೆ ನಮಗೆ ಅಚ್ಚರಿಯಾಗುವಷ್ಟು ದೊಡ್ಡ ಫಲಿತಾಂಶವನ್ನು ನೀಡುತ್ತದೆ. ಆರಂಭದಲ್ಲಿ ಫಲಿತಾಂಶ ಗಣನೆಗೆ ಬರದಷ್ಟು ಚಿಕ್ಕದಿರುತ್ತದೆ. ಆದರೆ ಆ ಚಿಕ್ಕ ಚಿಕ್ಕ ಬದಲಾವಣೆಗಳನ್ನು ಗಮನಿಸುತ್ತಾ ಹೋದಲ್ಲಿ, ಅಭ್ಯಾಸಗಳು, ಮತ್ತೆ ಮತ್ತೆ ಮಾಡುವ ಅದೇ ರೂಢಿಗಳು ಅವು ದೀರ್ಘಕಾಲೀನ ಉಪಯೋಗಗಳನ್ನು ತರುತ್ತವೆ. ಯಶಸ್ಸು ಎನ್ನುವುದು ನಮ್ಮ ದಿನನಿತ್ಯದ ಅಭ್ಯಾಸಗಳ ಪ್ರತಿಫಲವೇ ಹೊರತು, ಇಡೀ ಜೀವನದ ಒಂದು ಬಾರಿಯ ಪರಿವರ್ತನೆಯಲ್ಲ. ತೂಕ ಇಳಿಸಿಕೊಳ್ಳುವ, ಕನಸನ್ನು ಹೊಂದಿದ್ದಂತಹ ಕಾಂತಮ್ಮ ಮಾಡಿದ್ದು ಇದನ್ನೇ. ಚಿಕ್ಕ ಚಿಕ್ಕ ಬದಲಾವಣೆಗಳನ್ನು ಆಕೆ ಗುರುತಿಸುತ್ತಾ ಹೋದರು. ಇಂದು ನಾಲ್ಕು ಮೆಟ್ಟಿಲು ಹತ್ತಿದೆ ಎನ್ನುವುದೇ ಆಕೆಗೆ ಅಂದಿನ ಬದಲಾವಣೆಯಾಗಿತ್ತು. ನಂತರ ನಾಲ್ಕು ಕಿಲೋಮೀಟರ್ ನಡೆದೆ ಎನ್ನುವಲ್ಲಿಗೆ ಆ ಉತ್ಸುಕತೆ ಏರುತ್ತಾ ಹೋಯಿತು. ಕೊನೆಗೆ ಯುವಕ ಯುವತಿಯರೂ ನಾಚುವಂತೆ ಆಟ, ಓಟ, ನೃತ್ಯಗಳಲ್ಲಿ ಭಾಗವಹಿಸುವಾಗ ಅವರ ಪರಿಶ್ರಮದ ಸಾರ್ಥಕತೆ ಅವರಿಗೆ ಅರಿವಾಗಿತ್ತು. ಈ ಮಾತನ್ನು ವ್ಯಸನಿಗಳಿಗೆ ಹೇಳುವುದಕ್ಕೆ ಆಗುವುದಿಲ್ಲ. ಅವರಲ್ಲಿ ದುಶ್ಚಟಗಳು ಬೆಳೆಯಲು ಸಮಯಾವಕಾಶ ಬೇಕಾಗುವುದಿಲ್ಲ. ಒಳ್ಳೆಯ ಅಭ್ಯಾಸಗಳನ್ನು ಬೆಳೆಸಿಕೊಳ್ಳಲು ಕಷ್ಟಪಡಬೇಕಾಗುತ್ತದೆ. ಆದರೆ ಕೆಲವು ದುಶ್ಚಟಗಳಿಗೆ ಬಹಳ ಬೇಗ ಬಲಿಯಾಗಿ ಬಿಡಬಹುದು. ಅಂತಹ ದುಶ್ಚಟಗಳಿಂದ ಹೊರಬರಲು ಮಾತ್ರ ಬಹಳವೇ ಕಷ್ಟಪಡಬೇಕಾಗುತ್ತದೆ.

ವ್ಯಸನಗಳಿಗೆ ಜನರು ಏಕೆ ದಾಸರಾಗುತ್ತಾರೆ ಎಂಬುದಕ್ಕೂ ಈ ಹ್ಯಾಬಿಟ್ ಲೂಪ್ ಕಾರಣವಾಗುತ್ತದೆ. ಇಲ್ಲಿಯೂ ಕೂಡ ಸಂಕೇತಗಳು ಸೂಚನೆಗಳು ಕೆಲಸ ಮಾಡುತ್ತವೆ. ನಾವು ಮೊದಲೇ ಮಾತನಾಡಿದಂತೆ, ಚಟಗಳಿಂದ ಸಿಗುವ ತಾತ್ಕಾಲಿಕ ಉಪಶಮನ, ಸಿಗರೇಟು ಸೇದಿದರೆ ಸಿಗುತ್ತದೆ ಎಂದುಕೊಳ್ಳುವ ನಿರಾಳತೆಯ ಭಾವ, ಕುಡಿತದಿಂದ ದುಗುಡ ಮರೆಯಬಹುದೆನ್ನುವ ನಂಬಿಕೆ ಇಂತಹವುಗಳಿಂದ ನಮಗೆ ಅದರ ಹಂಬಲ ಹೆಚ್ಚಾಗಿರುತ್ತದೆ. ಅವು ಆ ವ್ಯಸನದಿಂದ ಸಿಗುವ ಉತ್ತೇಜನಗಳಿಗೆ ನೇರವಾಗಿ ಮಿದುಳನ್ನು ಸಂಪರ್ಕ ಮಾಡುತ್ತವೆ. ಅದು ಅಭ್ಯಾಸಕ್ಕೆ ನಾಂದಿ ಹಾಡುತ್ತವೆ. ಮುಂದೆ ಆ ಅಭ್ಯಾಸವೇ ಒಳಿತು ಕೆಡಕುಗಳನ್ನು ವಿಶ್ಲೇಷಿಸಲು ಹೋಗದೆ, ಚಟವಾಗಿ ಬದಲಾಗುತ್ತವೆ. ಬುದ್ಧಿಪೂರ್ವಕವಲ್ಲದ ಕ್ರಿಯೆಗಳಾಗಿ ಬಿಡುತ್ತವೆ.

ದೇಹದ ತೂಕ ಕಳೆದುಕೊಳ್ಳುವುದಾಗಲಿ, ವ್ಯಾಯಾಮದಿಂದ ದೇಹದಾರ್ಢ್ಯ ಹೆಚ್ಚಿಸುವುದಾಗಲಿ, ಓದುವ ಅಭ್ಯಾಸವಾಗಲಿ ತಕ್ಷಣ ಪ್ರತಿಫಲ ನೀಡುವಂತಹದ್ದಲ್ಲ. ಆದರೆ ಕುಡಿತ ಧೂಮಪಾನ ಇವು ಹಾಗಲ್ಲ. ಅವು ಎಷ್ಟೇ ತಾತ್ಕಾಲಿಕ ಎಂದರೂ ತಕ್ಷಣದ ಪ್ರತಿಫಲ ಕೊಡುತ್ತವೆ. ಹಾಗಾಗಿ ಒಳ್ಳೆಯ ಅಭ್ಯಾಸಗಳು ಪ್ರತಿಫಲ ನೀಡುವುದಕ್ಕೆ ಬಹಳ ಸಮಯ ತೆಗೆದುಕೊಳ್ಳುತ್ತವೆ ಎನ್ನುವ ಕಾರಣವೇ ಒಳ್ಳ್ಳೆಯದಲ್ಲದ ಅಭ್ಯಾಸಗಳು ಅವುಗಳ ಸ್ಥಾನ ಆಕ್ರಮಿಸಿಕೊಳ್ಳಲು ಕಾರಣವಾಗುತ್ತವೆ ಎಂಬುದು ಸತ್ಯ. ಹಾಗಾದರೆ ದೀರ್ಘಕಾಲಿಕ ರಿವಾರ್ಡ್ ನೀಡುವ ಅಭ್ಯಾಸಗಳನ್ನು ಬಿಟ್ಟು, ತಕ್ಷಣ ಉಪಶಮನ ನೀಡುವ ಅಭ್ಯಾಸಗಳ ಕಡೆ ತಿರುಗಿದರೆ ಏನಾಗುತ್ತದೆ? ಸತ್ವಯುತವಾದ ಆಹಾರ ಸೇವನೆಯ ಅಭ್ಯಾಸವಿದ್ದವರು ಒಂದು ದಿನ ಫಾಸ್ಟ್ ಫುಡ್‍ನಲ್ಲಿ ಕಳೆದರು ಎಂದರೆ ಅಂತಹ ಬದಲಾವಣೆ ಏನೂ ಆಗದು. ಕೆಲಸ ಜಾಸ್ತಿ ಇದ್ದ ಒಂದು ದಿನ ವ್ಯಾಯಾಮ ತಪ್ಪಿಸಿದರೆ ಏನೂ ಪರಿಣಾಮವಾಗಲಿಕ್ಕಿಲ್ಲ. ಆದರೆ ಇಂತಹ ಸಣ್ಣ ಸಣ್ಣ ಲೋಪಗಳು ಪದೇಪದೆ ಮರುಕಳಿಸಿದರೆ, ಕೊನೆಗೆ ಅವೇ ಪ್ರಾಮುಖ್ಯತೆ ಪಡೆದು ಬಿಟ್ಟರೆ, ಈ ಸಣ್ಣ ತಪ್ಪುಗಳು ಸರಮಾಲೆಯಾಗಿ, ಕೊನೆಗೆ ಒಳ್ಳೆಯ ಅಭ್ಯಾಸಗಳ ಕೊರಳು ಬಿಗಿದು ಬಿಡುತ್ತವೆ.

ಪೂರ್ಣ ಓದಿಗಾಗಿ ಆನ್​ಲೈನ್​ನಲ್ಲಿ ಪುಸ್ತಕ ಕೊಳ್ಳಿರಿ : https://www.navakarnatakaonline.com/roodhi-badalisuvudu-hege  ಕೊರಿಯರ್ ಮೂಲಕ ಖರೀದಿಸಲು ಸಂಪರ್ಕಿಸಿ : ಆನಂದ – 7353530805 

ಇದನ್ನೂ ಓದಿ : New Book; ಶೆಲ್ಫಿಗೇರುವ ಮುನ್ನ : ಎಷ್ಟೇ ನಷ್ಟ ಬಂದರೂ ಭರಿಸೋಣ ಯಾರೇ ವಿರೋಧಿಸಿದರೂ ಸರಿ ಪ್ರಜಾಧನ ಪೋಲಾಗಬಾರದು

Published On - 5:00 pm, Thu, 25 March 21

‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಬಾಗಲಕೋಟೆ: ಬೆಳೆಗೆ ಜನರ ದೃಷ್ಟಿ ತಾಗದಿರಲು ಚಿತ್ರ ನಟಿಯರು ಕಾವಲು!
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ಹಾಸ್ಟೆಲ್​ಗೆ ಕಾಲಿಟ್ಟರೆ ಕಾಲು ಕತ್ತರಿಸ್ತೀನಿ ಎಂದು ಗದರಿದ ಶಾಸಕ ದರ್ಶನ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್
ವೈಂಕುಠ ಏಕಾದಶಿ ದಿನ ತಿಮ್ಮಪ್ಪನ ದರ್ಶನ ಪಡೆದ ಅಶ್ವಿನಿ ಪುನೀತ್ ರಾಜ್​ಕುಮಾರ್