ಸ್ವರ್ಗವಾಣಿ, ವಾರ್ತೆಗಳನ್ನು ಓದುತ್ತಿರುವವರು ಎ.ವಿ. ಚಿತ್ತರಂಜನ್ ದಾಸ್

‘ಚಿತ್ತರಂಜನ್‌ ಸದಾ ವ್ಯವಸ್ಥೆಯ ವಿರೋಧಿಯಾಗಿಯೇ ಬೆಳೆದರು. ಅವರೊಳಗಿನ ಪತ್ರಕರ್ತ ಅದಕ್ಕೆ ಕಾರಣ. ದೆಹಲಿಯಲ್ಲಿ ರೈತ ಚಳುವಳಿಯ ಕಾವೇರುತ್ತಿರುವಾಗ ಅವರು ಬರೆದದ್ದು ಹೀಗೆ, ‘ಪ್ರಾಮಾಣಿಕ ರೈತರ ಪ್ರೀತಿ, ಮುಗ್ಧತೆ, ದೇಶಾಭಿಮಾನ ಮತ್ತು ಧೈರ್ಯಕ್ಕೆ ಸರಿಸಾಟಿಯಾದದ್ದು ಇನ್ನೊಂದಿಲ್ಲ. ದ್ವೇಷ ಕಾರುವವರಿಗೆ, ಸ್ವಂತ ಸಾಧನೆ ಮಾಡದೇ ಇತರರ ಮೇಲೆ ನಿರಂತರ ಅಪವಾದ ಹಾಕುವವರಿಗೆ, ಸ್ವಂತದ ಡಂಗುರ ಸಾರುವವರಿಗೆ ರೈತರ ಸಮಸ್ಯೆಯ ಆಳ ಅರ್ಥವಾಗದು.ʼ ಡಾ. ಪುರುಷೋತ್ತಮ ಬಿಳಿಮಲೆ

  • TV9 Web Team
  • Published On - 11:27 AM, 31 Mar 2021
ಸ್ವರ್ಗವಾಣಿ, ವಾರ್ತೆಗಳನ್ನು ಓದುತ್ತಿರುವವರು ಎ.ವಿ. ಚಿತ್ತರಂಜನ್ ದಾಸ್
ಎ. ವಿ. ಚಿತ್ತರಂಜನ್ ದಾಸ್

ಆಕಾಶವಾಣಿ ಎಂಬ ಅದೃಶ್ಯಗುರುವಿನ ಸ್ಫೂರ್ತಿತರಂಗಗಳು ಮತ್ತದರ ಸಾಂಗತ್ಯ ಎಂದಿಗೂ ಆಪ್ತ. ಒಂದೊಂದು ಕಾರ್ಯಕ್ರಮಗಳಿಗೆ ಕಾಯ್ದು ಕಿವಿಯಾಗುತ್ತಿದ್ದುದನ್ನು ನೆನಪಿಸಿಕೊಂಡರೆ ಈಗಲೂ ರೋಮಾಂಚನವಾಗುತ್ತದೆ. ಬೆಳಗಿನ ಏಳು ನಲವತ್ತೈದಕ್ಕೆ ಆಕಾಶವಾಣಿ, ರಾಷ್ಟ್ರೀಯ ವಾರ್ತೆಗಳು ಎಂಬ ಧ್ವನಿ ಕೇಳುತ್ತಿದ್ದಂತೆ ಎಲ್ಲ ಭಾವಗಳನ್ನೂ ಕೊಡವಿಕೊಂಡು ನಮ್ಮ ಮನಸ್ಸೂ ಒಂದು ರೀತಿಯ ಗಂಭೀರತೆಗೆ ಪಕ್ಕಾಗಿಬಿಡುತ್ತಿತ್ತು. ನಿಮಗೆ ನೆನಪಿದೆಯಾ ಎ.ವಿ. ಚಿತ್ತರಂಜನ್ ದಾಸ್ ಎಂಬ ವಾರ್ತಾಮಾಂತ್ರಿಕನ ಧ್ವನಿ? ತಮ್ಮ ವಿಚಾರಗಳಿಗೆ ಬದ್ಧರಾಗಿಯೇ ಬದುಕಿದ ಅವರೀಗ ನಮಗೆ ಶಾಶ್ವತ ನೆನಪು. ದೆಹಲಿಯಲ್ಲಿ ವಾಸಿಸುತ್ತಿರುವ ಅವರ ಗುರುಗಳೂ ಮತ್ತು ಒಡನಾಡಿಯೂ ಆಗಿದ್ದ ಲೇಖಕ ಡಾ. ಪುರುಷೋತ್ತಮ ಬಿಳಿಮಲೆ ತಮ್ಮ ಪ್ರೀತಿಯ ಶಿಷ್ಯನೊಂದಿಗಿನ ನೆನಪುಗಳನ್ನಿಲ್ಲಿ ಹಂಚಿಕೊಂಡಿದ್ದಾರೆ.   

ಕಳೆದ ಸುಮಾರು ೨೦ ವರ್ಷಗಳಿಂದ ಬೆಳಗ್ಗಿನ ಜಾವ 7.45ಕ್ಕೆ ಅಥವಾ ಸಾಯಂಕಾಲ 7.45ಕ್ಕೆ ರೇಡಿಯೋದಲ್ಲಿ ವಾರ್ತೆ ಕೇಳುವಾಗ ಅದು ಹೀಗೆ ಆರಂಭವಾಗುತ್ತಿತ್ತು- ʼ ಆಕಾಶವಾಣಿ, ವಾರ್ತೆಗಳು, ಓದುತ್ತಿರುವವರು ಚಿತ್ತರಂಜನ ದಾಸ್‌.ʼ ಈ ಚಿತ್ತರಂಜನ್‌ ದಾಸರು ಮೊನ್ನೆ ಅಂದರೆ, ರವಿವಾರ, ಮಾರ್ಚ್‌ 28ರಂದು ಸಾಯಂಕಾಲ ಹೃದಯಾಘಾತದಿಂದ ತನ್ನ 61ನೇ ವರ್ಷದಲ್ಲಿ ತೀರಿಕೊಂಡಾಗ ಅನೇಕರು ಅವರು ವಾರ್ತೆ ಓದುವುದನ್ನು ನೆನಪಿಸಿಕೊಂಡು ಗೌರವ ಸಲ್ಲಿಸಿದರು.  ಕೆಲವು ವರ್ಷಗಳ ಹಿಂದೆ, ಆಕಾಶವಾಣಿಯು ವಾರ್ತಾಪ್ರಸಾರವನ್ನು ಬೆಂಗಳೂರಿಗೆ ವರ್ಗಾಯಿಸಿದ ಮೇಲೆ ದಾಸರ ಸ್ವರವನ್ನು ರೇಡಿಯೋದಲ್ಲಿ ಕೇಳದಾದೆವು. ಈ ಆಕಾಶವಾಣಿಯ ವಾರ್ತೆ ಓದುವ ಕೆಲಸ ಸುಲಭವೇನೂ ಆಗಿರಲಿಲ್ಲ. ಬೆಳಗ್ಗ ಐದು ಗಂಟೆಗೆ ಆಕಾಶವಾಣಿ ತಲುಪಬೇಕು. ಅಲ್ಲಿ ಹಿಂದಿಯಲ್ಲಿಯೋ ಇಂಗ್ಲಿಷಲ್ಲಿಯೂ ಇರುವ ಅಧಿಕೃತ ವಾರ್ತೆಗಳನ್ನು ಕನ್ನಡಕ್ಕೆ ಅನುವಾದಿಸಬೇಕು. ಸಮಯಕ್ಕೆ ಸರಿಯಾಗಿ ಅದನ್ನು ತಪ್ಪಿಲ್ಲದೆ ಓದಬೇಕು. ಆಕಾಶವಾಣಿಯಲ್ಲಿ ಮಾಡುತ್ತಿದ್ದ ಅನುವಾದದ ಕೆಲಸಗಳು ಚಿತ್ತರಂಜನರಿಗೆ ಆಕಾಶವಾಣಿ ಬಿಟ್ಟ ಮೇಲೆ ಬಹಳ ಪ್ರಯೋಜನಕ್ಕೆ ಬಂತು. ಮೊನ್ನೆ ಅವರು ತೀರಿಕೊಳ್ಳುವವರೆಗೆ ಅನುವಾದದ ಕೆಲಸಗಳಿಂದಲೇ ದೆಹಲಿಯಲ್ಲಿ ಜೀವಿಸುತ್ತಿದ್ದರು. ಕೇಂದ್ರ ಸರಕಾರದ ಆದೇಶಗಳು, ಖಾಸಗಿಯರ ಜಾಹೀರಾತುಗಳು ಇತ್ಯಾದಿಗಳನ್ನೆಲ್ಲಾ ಅವರು ಕ್ಷಣ ಮಾತ್ರದಲ್ಲಿ ಅನುವಾದಿಸಿ ಕಳಿಸುತ್ತಿದ್ದರು. 

ವೈಯಕ್ತಿಕವಾಗಿ ನನಗೆ ಚಿತ್ತರಂಜನರು 1979ರಿಂದಲೇ ಗೊತ್ತು. ಸುಳ್ಯ ಸಮೀಪದ ದೊಡ್ಡ ತೋಟದವರಾದ ಅವರು ಸುಳ್ಯ ನೆಹರೂ ಸ್ಮಾರಕ ಕಾಲೇಜಲ್ಲಿ ನನ್ನ ವಿದ್ಯಾರ್ಥಿಯಾಗಿದ್ದರು. ಬಿಕಾಂ ಓದುತ್ತಿದ್ದ ಅವರನ್ನು ತರಗತಿಯಲ್ಲಿ ಹಿಡಿದು ಕೂರಿಸುವುದೇ ದೊಡ್ಡ ಸಮಸ್ಯೆಯಾಗುತ್ತಿತ್ತು. ಸದಾ ಏನಾದರೂ ಹೇಳುತ್ತಾ ನಗುವುದು ಅವರ ಅಭ್ಯಾಸ.  ಒಂದು ಸಲ ನಾವಿಬ್ಬರೂ ಯಕ್ಷಗಾನದಲ್ಲಿ ವೇಷ ಹಾಕಿದ್ದೆವು. ಪ್ರಸಂಗ ಗದಾಯುದ್ಧ. ನನ್ನದು ಭೀಮ, ಚಿತ್ತರಂಜನ್‌ ಬೇಹಿನಚರ. ಬೇಹಿನಚರ ಭೀಮನ ಹತ್ತಿರ ಬಂದಾಗ ನಾನು ಕೇಳಿದೆ 

ನಾನು : ‘ಏಯ್‌ ಯಾರು ನೀನು?ʼ 

ಚರ : ಗೊತ್ತಾಗಲ್ಲಿಲ್ಲವಾ ನಾನು ನಿಮ್ಮ ಶಿಷ್ಯ? 

ನಾನು: ಹೌದಾ, ಗುರುತೇ ಸಿಗುವುದಿಲ್ಲವಲ್ಲಾ? 

ಚರ : (ಬಾಯ್ತಪ್ಪಿ) ನಾನೀಗ ಜನ ಚೇಂಜ್

ನಾನು : ಏನೋ ನಿನ್ನ ಬಾಯಲ್ಲಿ ಅಪದ್ಧ? 

ಚರ: ನೀವೇ ಕಲಿಸಿದ್ದು, ನಿಮ್ಮ ಶಿಷ್ಯ ನಾನು!

ಪ್ರೇಕ್ಷಕರು ಬಿದ್ದು ಬಿದ್ದು ನಗಲಾರಂಭಿಸಿದರು. ಯಕ್ಷಗಾನ ಮುಂದೆ ಬೆಳೆಯಿತು. 

ತೀವ್ರವಾದ ಬಡತನದಿಂದಾಗಿ ಅವರಿಗೆ ತಮ್ಮ ಓದನ್ನು ಮುಂದುವರೆಸಲಾಗಲಿಲ್ಲ. ಹಾಗಂತ ಅವರು ಸುಮ್ಮನೆ ಕುಳಿತುಕೊಳ್ಳುವ ಜಾಯಮಾನದವರಲ್ಲ. ಸುಳ್ಯದಲ್ಲಿ ಡಾ. ಯು. ಪಿ. ಶಿವಾನಂದರ ಜೊತೆ ಸೇರಿ ಬಳಕೆದಾರರ ಚಳವಳಿಯಲ್ಲಿ ಕೆಲಸ ಮಾಡಿದರು. ಒಂದಷ್ಟು ಲೇಖನಗಳನ್ನು ಬರೆದರು. ನಿಧಾನವಾಗಿ ಕೆಲಸ ಹುಡುಕುತ್ತಾ ದೆಹಲಿ ಸೇರಿದರು. ನಾನು 1998ಕ್ಕೆ ದೆಹಲಿ ಸೇರಿದಾಗ ದಾಸರು ಆಗಲೇ ದೆಹಲಿ ಕನ್ನಡಿಗರ ನಡುವೆ ಜನಪ್ರಿಯರಾಗಿದ್ದರು. ಆಕಾಶವಾಣಿಯ ವಾರ್ತೆ ಓದುವುದು, ಅನುವಾದದ ಕೆಲಸಗಳ ಜೊತೆ ಅವರು ದೆಹಲಿ ಕನ್ನಡಿಗರಿಗಾಗಿ ಶುಭನುಡಿ ಎಂಬ ನಾಲ್ಕು ಪುಟಗಳ ಒಂದು ಮಾಸಿಕವನ್ನೂ ತರುತ್ತಿದ್ದರು. ಆ ಪತ್ರಿಕೆಯಲ್ಲಿ ಅವರು ನಿರಂತರವಾಗಿ ಮಾಡುತ್ತಿದ್ದ ಕೆಲಸವೆಂದರೆ, ದೆಹಲಿಯ ಬಹಳ ಪ್ರಮುಖ ಮತ್ತು ಹೆಸರುವಾಸಿಯಾದ ಕನ್ನಡಿಗರನ್ನು ಕೆಣಕುವಂತೆ ಬರೆಯುವುದು. ಆಗ ದೆಹಲಿ ಕನ್ನಡಿಗರು ಒಟ್ಟು ಸೇರುತ್ತಿದ್ದ ಸ್ಥಳವೆಂದರೆ ದೆಹಲಿ ಕರ್ನಾಟಕ ಸಂಘವೇ. ದಾಸರು ಸಂಘದ ರಾಜಕೀಯವನ್ನು ಬಯಲಿಗೆಳೆಯುತ್ತಿದ್ದರು. ಇದರಿಂದ ಅವರಿಗೆ ಗೆಳೆಯರಿಗಿಂತ ವೈರಿಗಳೇ ಹೆಚ್ಚಾದರು.

chittaranjan das

ದೆಹಲಿಯಲ್ಲೀವತ್ತು ತುಂಬಾ ಸೆಖೆ ಇದೆ. ನೀವೀವತ್ತು ಇದ್ದಿದ್ದರೇ ಹೀಗೇ ಕುಳಿತು ಜಗತ್ತಿನ ಸುದ್ದಿಗಳ ಮೇಲೆ ಕಣ್ಣಾಡಿಸುತ್ತಿದ್ದಿರೇನೋ…

ಒಂದು ಸಲ ಅವರನ್ನು ಪೊಲೀಸರೂ ಎಳೆದೊಯ್ದರು. ಅವರ ಬಿಡುಗಡೆಗೆ ಯಾರೂ ಬರಲಿಲ್ಲ. ಆಗ ಗುರ್ಗಾಂವ್‌ ನಲ್ಲಿದ್ದ ನಾವು ಪೊಲೀಸ್‌ ಸ್ಟೇಶನ್‌ ತಲುಪುವಷ್ಟರಲ್ಲಿ ಹೇಗೋ ಹೊರಬಂದರು. ಅವರನ್ನು ದೆಹಲಿ ಕರ್ನಾಟಕ ಸಂಘದ ಸದಸ್ಯತ್ವದಿಂದ ಹೊರಹಾಕಲಾಯಿತು. ಈ ಘಟನೆಯ ಆನಂತರ ಅವರು ಇತರರ ಬಗ್ಗೆ ಕೆಟ್ಟದಾಗಿ ಬರೆಯುವುದನ್ನು ಕಡಿಮೆ ಮಾಡಿದರು. 2014ರಲ್ಲಿ ನಾನು ಸಂಘದ ಅಧ್ಯಕ್ಷನಾಗಿ ಬಂದಾಗ ಮತ್ತೆ ಸಂಘಕ್ಕೆ ಸೇರಿಸಿಕೊಂಡೆ. ಆದರೆ ಅವರು ನನ್ನನ್ನು ವಿಮರ್ಶೆಗೆ ಒಳಪಡಿಸುವುದನ್ನು ಬಿಡಲಿಲ್ಲ. ‘ನೀವು ಕರ್ನಾಟಕ ಸಂಘವನ್ನು ತುಳು ಸಂಘ ಮಾಡಿಕೊಂಡಿದ್ದೀರಿ, ದೆಹಲಿಯ ಎಲ್ಲಾ ಕನ್ನಡಿಗರೂ ಸಂಘಕ್ಕೆ ಬರುವಂತೆ ಮಾಡಿʼ ಎಂದು ಅವರು ಮತ್ತೆ ಮತ್ತೆ ಹೇಳುತ್ತಿದ್ದರು. ಹಾಗಂತ ನಾನೇ ವೈಯಕ್ತಿಕವಾಗಿ ಕರೆದರೂ ಅವರು ಸಂಘದ ಕಡೆ ಬರುತ್ತಿರಲಿಲ್ಲ. 

ದಾಸರ ಶ್ರೀಮತಿಯವರ ಹೆಸರು ಗಾಯತ್ರಿ. ತುಂಬ ಸಮಾಧಾನದ ಮತ್ತು ಕಷ್ಟಪಡುವ ಮಹಿಳೆ. ಅವರಿಗೆ ಇಬ್ಬರು ಹೆಣ್ಣುಮಕ್ಕಳೂ ಬಹಳ ಪ್ರತಿಭಾವಂತರು. ದಂಪತಿ ಬಹಳ ಕಷ್ಟಪಟ್ಟು ಅವರನ್ನು ದೆಹಲಿಯ ಒಳ್ಳೆಯ ಶಾಲೆಗಳಲ್ಲಿ ಓದಿಸಿದರು. ಅವರಲ್ಲಿ ಹಿರಿಯವಳು ಈಗ ಜರ್ಮನಿಯಲ್ಲಿ ಉದ್ಯೋಗದಲ್ಲಿದ್ದಾಳೆ, ಎರಡನೆಯವಳು ಬೆಂಗಳೂರಲ್ಲಿ. ಈ ಇಬ್ಬರ ಕುರಿತೂ ದಾಸರು ಬಹಳ ಹೆಮ್ಮೆಯಿಂದ ಮಾತಾಡುತ್ತಿದ್ದರು. 

ಚಿತ್ತರಂಜನ ದಾಸರ ಕನ್ನಡಪ್ರೇಮಕ್ಕೆ ಸೀಮೆಯೇ ಇರಲಿಲ್ಲ. ದೆಹಲಿಯಲ್ಲಿ ಅವರು ವಾಸವಾಗಿದ್ದ ಸ್ಥಳದ ಹೆಸರು ಚತ್ತರ್​ಪುರ್. ಅಲ್ಲೊಂದು ಪ್ರಸಿದ್ಧ ಆದಿ ಕಾತ್ಯಾಯನಿ ದೇವಳವಿದೆ. ದೇವಾಲಯ ಮತ್ತು ಅದರ ಸುತ್ತಮುತ್ತ ಯಾವುದೇ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದರೂ ದಾಸರು ಅಲ್ಲಿಗೆ ಹೋಗಿ ಕನ್ನಡ ಚಿತ್ತಗೀತೆಗಳನ್ನು ಹಾಡಿ, ಕುಣಿದು ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಒಂದೆರಡು ಬಾರಿ ಹರಿಕತೆಯನ್ನೂ ಮಾಡಿದ್ದರು. ದೆಹಲಿಗೆ ಬರುವ ಹಲವರಿಗೆ ತಮ್ಮ ಮನೆಯಲ್ಲಿ ವಾಸಕ್ಕೆ ಅವಕಾಶ ಮಾಡಿಕೊಡುತ್ತಿದ್ದರು. ಗಾಯತ್ರಿ ಊಟ ಹಾಕುತ್ತಿದ್ದರು. ದೆಹಲಿಯಲ್ಲಿ ಆಗಬೇಕಾಗಿದ್ದ ಕರ್ನಾಟಕದ ಹಲವರ ಕೆಲಸಗಳನ್ನು ತಾವೇ ಆಸ್ಥೆ ವಹಿಸಿ ಮಾಡಿಕೊಡುತ್ತಿದ್ದರು. ಪತ್ರಿಕೆಗಳ ನೋಂದಣಿ, ಯುಜಿಸಿ ಕೆಲಸಗಳು, ಎಂಪಿಗಳ ಮನೆಗೆ ಮನವಿ ಸಲ್ಲಿಸುವುದು ಇತ್ಯಾದಿ ಸೇವೆಗಳಲ್ಲಿ ಅವರು ಸದಾ ಮುಂದು. ಕೊರೊನಾ ಅವಧಿಯಲ್ಲಿ ಅವರು ಮಗಳೊಡನೆ ಇರಬಯಸಿ ಬೆಂಗಳೂರಿಗೆ ತೆರಳಿದರೂ ದೆಹಲಿ ನಂಟನ್ನು ಬಿಟ್ಟಿರಲಿಲ್ಲ. 

chittaranjan das

ಮಡದಿ ಗಾಯತ್ರಿಯೊಂದಿಗೆ

ಚಿತ್ತರಂಜನ್‌ ಸದಾ ವ್ಯವಸ್ಥೆಯ ವಿರೋಧಿಯಾಗಿಯೇ ಬೆಳೆದರು. ಅವರೊಳಗಿನ ಪತ್ರಕರ್ತ ಅದಕ್ಕೆ ಕಾರಣ. ದೆಹಲಿಯಲ್ಲಿ ರೈತ ಚಳುವಳಿಯ ಕಾವೇರುತ್ತಿರುವಾಗ ಅವರು ಬರೆದದ್ದು ಹೀಗೆ, ‘ಪ್ರಾಮಾಣಿಕ ರೈತರ ಪ್ರೀತಿ, ಮುಗ್ಧತೆ, ದೇಶಭಿಮಾನ ಮತ್ತು ಧೈರ್ಯಕ್ಕೆ ಸರಿಸಾಟಿಯಾದದ್ದು ಇನ್ನೊಂದಿಲ್ಲ. ದ್ವೇಷ ಕಾರುವವರಿಗೆ, ಸ್ವಂತ ಸಾಧನೆ ಮಾಡದೇ ಇತರರ ಮೇಲೆ ನಿರಂತರ ಅಪವಾದ ಹಾಕುವವರಿಗೆ, ಸ್ವಂತದ ಡಂಗುರ ಸಾರುವವರಿಗೆ ರೈತರ ಸಮಸ್ಯೆಯ ಆಳ ಅರ್ಥವಾಗದು.ʼ 

ದೆಹಲಿಯ ಆಮ್‌ ಅದ್ಮಿ ಪಕ್ಷವು ‘ಮನೆಮನೆಗೆ ಸೇವಾ ಯೋಜನೆಯನ್ನು ಆರಂಭಿಸಿದಾಗ ಗ್ರಾಹಕ ಚಳುವಳಿಯಲ್ಲಿ ಭಾಗವಹಿಸಿದ್ದ ದಾಸರು ಬರೆದದ್ದು ಹೀಗೆ, ‘ಜನತೆಗೆ ಸೇವೆ ನೀಡುವಲ್ಲಿ ಕೆಲವೊಂದು ರಾಜ್ಯ ಸರಕಾರಗಳು ಉತ್ತಮ ಸೇವೆ ಮತ್ತು ಉತ್ತಮ ಮುಂದಾಳತ್ವ ತೋರಿಸುತ್ತಿವೆ. ದೆಹಲಿಯ ಆಮ್ ಆದ್ಮಿ ಪಾರ್ಟಿ ಸರಕಾರ… 40 ಸೇವೆಗಳನ್ನು ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ಉತ್ತಮ ಕಾರ್ಯ ನಡೆಸುತ್ತಿದೆ. ಜನರು ಕೇವಲ ಫೋನ್ ಕರೆ ಮಾಡಿ ಮನೆ ಬಾಗಿಲಿಗೆ ಸೇವೆ ತರಿಸಿಕೊಳ್ಳಬಹುದಾಗಿದೆ. ಕಚೇರಿಗೆ ಅಲೆಯಬೇಕಾಗಿಲ್ಲ. ಕೊರೊನಾ ಸಂಕಷ್ಟದಿಂದ ತತ್ತರಿಸಿ ಹೋಗಿರುವ ಜನರಿಗೆ ಇಂತಹ ಕ್ರಮಗಳು ನೆರವಾಗಲಿವೆ ಎಂದು ಆಶಿಸೋಣ. ಯಾವುದೇ ರಾಜಕೀಯ ಪಕ್ಷ ಒಮ್ಮೆ ಆಡಳಿತಕ್ಕೆ ಬಂದರೆ, ಜನತೆಗೆ ಉತ್ತಮ ಸೇವೆ ನೀಡಿ ಅಧಿಕಾರ ಗಟ್ಟಿ ಮಾಡಿಕೊಳ್ಳುವುದು ಉತ್ತಮ. ವಿರೋಧಿಗಳನ್ನು ಪಾಕಿಸ್ತಾನದವರು, ದೇಶದ್ರೋಹಿಗಳು ಎಂದು ಜರೆಯುವುದು, ಅವರ ಮೇಲೆ ಐಟಿ ದಾಳಿ ನಡೆಸುವುದು ಹೇಡಿತನದ ಕೆಲಸ.ʼ 

chittaranjan das

ನಿಮ್ಮ ಕೋಟು ನನಗೆ ಕೊಟ್ಟು ಎಲ್ಲಿ ಹೋದಿರಿ?

ಚಿತ್ತರಂಜನ್‌ ಈಗ ಇಲ್ಲ. ಅವರು ನನ್ನ ವಿದ್ಯಾರ್ಥಿಯಾಗಿದ್ದವರು. ಅಂತವರ ಅಕಾಲಿಕ ಸಾವು ತುಂಬಾ ಕಾಡುತ್ತದೆ. ಬಡತನದಿಂದ ಮೇಲೆ ಬರಲು ಅವರು ನಿರಂತರವಾಗಿ ಹೋರಾಡಿದರು. ದೆಹಲಿಯಂಥ ಮಹಾನಗರದಲ್ಲಿ ಸ್ವಾಭಿಮಾನದಿಂದ ಬದುಕಿದರು. ಕಂಡುದನ್ನು ನೇರವಾಗಿ, ಧೈರ್ಯವಾಗಿ ಹೇಳಲು ಅವರೆಂದೂ ಹಿಂಜರಿಯಲಿಲ್ಲ. ಜಗಳ ಮಾಡುವಾಗಲೂ ಸ್ನೇಹವನ್ನು ಉಳಿಸಿಕೊಳ್ಳುತ್ತಿದ್ದರು. ಜೋರು ಜಗಳ ಮಾಡಿದ ಮರುದಿನ ಮನೆಗೆ ಬಂದು ಚಹಾ ಕುಡಿದು ಹಿಂದಿರುಗುತ್ತಿದ್ದರು. ದೆಹಲಿಯಲ್ಲಿ ಕನ್ನಡ ಉಳಿಸಲು ಅವರು ಮಾಡಿದ ಪ್ರಯತ್ನ ಅಷ್ಟಿಷ್ಟಲ್ಲ. ಬಡತನದ ನಡುವೆಯೂ ಅವರು ಮಕ್ಕಳಿಗೆ ಚಾಕಲೇಟ್‌ ಕೊಡಲು ಮರೆಯಲಿಲ್ಲ, ಮನೆಗೆ ಬಂದವರಿಗೆ ಊಟ ಹಾಕಲು ಹಿಂದೆ ಬೀಳಲಿಲ್ಲ. 

ಇದನ್ನೂ ಓದಿ : ವರ್ಷಾಂತ್ಯ ವಿಶೇಷ 2020: ‘ಓದಿನಂಗಳ’ದಲ್ಲಿ ಲೇಖಕ ಡಾ. ಪುರುಷೋತ್ತಮ ಬಿಳಿಮಲೆ