Fatherhood: ಕಮಲ ಅಪ್ಪನಿಗೆ ಬಸವ ಅಮ್ಮನಿಗೆ ಯಾಕೆ ಸಹಾಯ ಮಾಡಬಾರದು?

Father Daughter Relationship | ‘ಒಂದು ದಿನ ಅವಳ ಪುಟ್ಟ ಅಂಗೈಯನ್ನು ನನ್ನ ಅಂಗೈಯಲ್ಲಿಟ್ಟುಕೊಂಡು ಬೇಬಿ ಸಿಟ್ಟಿಂಗಿಗೆ ಕರೆದುಕೊಂಡು ಹೋಗುವಾಗ, ಅಲ್ಲೊಂದು ಕರು ಅಂಬಾ ಅಂಬಾ ಎಂದು ಕೂಗುತ್ತಿತ್ತು. ನನ್ನ ಮಗಳು, ಪಾಪ, ಅದರ ಅಮ್ಮ ಆಫೀಸಿಗೆ ಹೋಗಿರಬೇಕು. ಅಮ್ಮ ಬೇಕು ಅಂತ ಕರೀತಿದೆ. ಅಲ್ವಾ? ಎಂದು ಕೇಳಿದ್ದಳು.' ಪರಮೇಶ್ವರ ಗುರುಸ್ವಾಮಿ

Fatherhood: ಕಮಲ ಅಪ್ಪನಿಗೆ ಬಸವ ಅಮ್ಮನಿಗೆ ಯಾಕೆ ಸಹಾಯ ಮಾಡಬಾರದು?
ಕಿರುಚಿತ್ರ ನಿರ್ದೇಶಕ ಪರಮೇಶ್ವರ ಗುರುಸ್ವಾಮಿ ಮಗಳು ಅನಲಳೊಂದಿಗೆ
Follow us
ಶ್ರೀದೇವಿ ಕಳಸದ
|

Updated on:Feb 13, 2021 | 5:02 PM

ಪ್ರಿಯ ಅಪ್ಪಂದಿರೇ, ಎರಡು ತಲೆಮಾರುಗಳ ಮಧ್ಯೆ ನೀವಿದ್ದೀರಿ. ಬೆನ್ನ ಹಿಂದೆ ನಿಮ್ಮ ಅಪ್ಪ-ಅಮ್ಮ, ಕಣ್ಣ ಮುಂದೆ ನಿಮ್ಮ ಮಕ್ಕಳು-ಕುಟುಂಬ. ನೀವು ಸಾಗಿಬಂದ, ಸಾಗಿಬರುತ್ತಿರುವ ಹಾದಿಯಲ್ಲಿ ಯಾವುದೇ ನೆನಪುಗಳು ಕೈಮಾಡಿ ನಿಲ್ಲಿಸಬಹುದು. ವಾಸ್ತವ ಸಂಗತಿಗಳು ಕಾಲಿಗೆ ಚಕ್ರ ಕಟ್ಟಲು ನೋಡಬಹುದು. ಈ ಎರಡರ ಮಧ್ಯೆ ಹೃದಯ-ಮೆದುಳು ಗುದ್ದಾಟಕ್ಕೆ ಬಿದ್ದಿರಬಹುದು, ಬಿದ್ದರೂ ನಾವು ನಡೆದಿದ್ದೇ ಹಾದಿ ಎಂದೂ ಸಾಗುತ್ತಿರಲೂಬಹುದು. ಹೀಗೆ ನೀವು ಸಾಕಷ್ಟು ವಿಧದಲ್ಲಿ ಆಂತರಿಕವಾಗಿ ಬೆಳೆದಿದ್ದೀರಿ, ಬೆಳೆಯುತ್ತಲೂ ಇದ್ದೀರಿ. ಹಾಗಿದ್ದರೆ ಅಪ್ಪನಾಗುತ್ತಿದ್ದಂತೆ ನಿಮ್ಮೊಳಗಿನ ನೀವು ರೂಪಾಂತರಕ್ಕೆ ಒಳಗಾದಿರೇ? ಅಪ್ಪನಾಗುವುದೆಂದರೆ ಅನುಭವವೇ, ಅವಕಾಶವೇ, ಆದರ್ಶವೇ, ಅನಿವಾರ್ಯವೇ, ಜವಾಬ್ದಾರಿಯೇ, ಸಹಜ ಪ್ರಕ್ರಿಯೆಯೆ ಅಥವಾ ಇದ್ಯಾವುದೂ ಅಲ್ಲವಾಗಿದ್ದರೆ ಇನ್ನೂ ಏನೇನು? ಒಮ್ಮೆ ಹಿಂತಿರುಗಿ ನೋಡಬಹುದೆ ಎಂದು ಕೆಲ ಅಪ್ಪಂದಿರಿಗೆ ‘ಟಿವಿ9 ಕನ್ನಡ ಡಿಜಿಟಲ್’ ಕೇಳಿತು. ಇದೋ ಹೊಸ ಸರಣಿ  ‘ಅಪ್ಪನಾಗುವುದೆಂದರೆ’ ಇಂದಿನಿಂದ ಪ್ರಾರಂಭ.
ನಿಮಗೂ ಈ ಸರಣಿಯಲ್ಲಿ ಪಾಲ್ಗೊಳ್ಳಬೇಕು ಎನ್ನಿಸಿದರೆ ದಯವಿಟ್ಟು ಬರೆಯಿರಿ. ಕನಿಷ್ಟ 1000 ಪದಗಳಿರಲಿ, ನಾಲ್ಕೈದು ಭಾವಚಿತ್ರಗಳು ಮತ್ತು ಸ್ವವಿವರವೂ ಇರಲಿ. ಇ- ಮೇಲ್ tv9kannadadigital@gmail.comಪರಿಕಲ್ಪನೆ: ಶ್ರೀದೇವಿ ಕಳಸದ

ಬೆಂಗಳೂರಿನಲ್ಲಿ ವಾಸಿಸುತ್ತಿರುವ ಕಿರುಚಿತ್ರ ನಿರ್ದೇಶಕ ಪರಮೇಶ್ವರ ಗುರುಸ್ವಾಮಿ ಅವರು ತಮ್ಮ ಮಗಳೆಂಬ ಮಾಯಕಾತಿಯನ್ನು ಹೀಗಿಲ್ಲಿ ಪುಟ್ಟಪುಟ್ಟ ಚಿತ್ರಿಕೆಗಳಲ್ಲಿ ಕಟ್ಟಿಕೊಟ್ಟಿದ್ದಾರೆ.

ನಾನು, ನನ್ನ ಸಂಗಾತಿಯ ಅಕ್ಕ ಮತ್ತು ಕೋಟಿಗಾನಹಳ್ಳಿ ರಾಮಯ್ಯ ಸೇಂಟ್ ಫಿಲೋಮಿನಾ ಆಸ್ಪತ್ರೆಯ ಆಪರೇಷನ್ ಥಿಯೇಟರ್ ಮುಂದೆ ಅಷ್ಟು ದೂರದಲ್ಲಿ ಕಾಯುತ್ತಾ ನಿಂತಿದ್ದೆವು. ನಿಮ್ಮ ಪತ್ನಿಯ ಎತ್ತರ ಕಡಿಮೆಯಿರುವುದರಿಂದ ಸಹಜ ಹೆರಿಗೆ ಬಹಳ ಕಷ್ಟ. ಈಗಿರುವ ಆಯ್ಕೆ, ಸಿಸೇರಿಯನ್ ಎಂದರು. ಒಪ್ಪಿಕೊಂಡಿದ್ದೆವು. ಹೀಗಾಗಿ ತಾಯಿ ಮಗು ಬರುವುದನ್ನೇ ಕಾಯುತ್ತಾ ನಿಂತಿದ್ದೆವು. ನನ್ನ ಮಗಳನ್ನು ಜೋಪಾನವಾಗಿ ಎತ್ತಿಕೊಂಡು ಒಬ್ಬ ನರ್ಸು ಮತ್ತು ಅರೆವಳಿಕೆಯ ಪ್ರಭಾವದಲ್ಲಿದ್ದ ನನ್ನ ಸಂಗಾತಿಯನ್ನು ಸ್ಟ್ರೆಚರ್ ಒಂದರ ಮೇಲೆ ಮಲಗಿಸಿಕೊಂಡು ಇಬ್ಬರು ತಳ್ಳಿಕೊಂಡು ಬಂದರು. ತಾಯಿ ಮಗುವನ್ನು ನನ್ನ ಬಳಿ ತಂದರು. ಮಗಳನ್ನು ನನ್ನ ಕೈಗೆ ಕೊಟ್ಟರು. ಎರಡು ಅಂಗೈಗಳಲ್ಲಿ ನನ್ನ ಮಗಳನ್ನು ಹಿಡಿದುಕೊಂಡೆ. ಪ್ರಜ್ಞೆಯಿಲ್ಲದೆ ಮಲಗಿದ್ದ ನನ್ನ ಸಂಗಾತಿಯನ್ನು ಸ್ಟ್ರೆಚರ್ ತಳ್ಳಿಕೊಂಡು ವಾರ್ಡ್ ಕಡೆಗೆ ಹೊರಟುಬಿಟ್ಟರು. ನನಗೆ ಅಳು ಬಂದು ಬಿಟ್ಟಿತ್ತು. ‘ಪರಮೇಶದೇ ಝೆರಾಕ್ಸು’ ಅಂದರು ರಾಮಯ್ಯ. ಆಗಲೇ ನಾನು ದಿಟ್ಟಿಸಿ ನನ್ನ ಮಗಳನ್ನು ನೋಡಿದೆ. ಆ ಕ್ಷಣದಿಂದ ನಮ್ಮ ಮಗಳು ನಮ್ಮಿಬ್ಬರ ಭಾವಕೋಶದ ಪ್ರಮುಖ ಅಂಶವಾಗಿಬಿಟ್ಟಳು. ಮಗಳು ಬಿಕಾಂ ಓದುತ್ತಿದ್ದಾಗ ನಾನು ಬರೆದ ಪದ್ಯ ನಮ್ಮ ಅನುಬಂಧವನ್ನು ಹೀಗೆ ಹಿಡಿದಿಟ್ಟಿದೆ:

ನಾನು
ನನ್ನವಳ
ಜೋಡಿ ಪಯಣದ
ಬಾಳ ಬಂಡಿಗೆ
ಬೆಳುದಿಂಗಳ ಕಿಂಕಿಣಿಯಾಗಿ
ಬಂದವಳು
ಇವಳು
ಮಾತನಾಡಿದಾಗೆಲ್ಲ
ಮಂಜುಳನಾದ ನನ್ನ ಕಿವಿಗಳಿಗೆಮಗಳೆಂಬ ತಂತು ‘ಮಾಯ್ಕಾತಿ! ನನ್ ಮಗೂನ್ನ ಯಾವ್ ಮಾಯ್ದಲ್ಲೋ ಬುಟ್ಟಿಗಾಕ್ಕೊಂಬುಟ್ಲು’ ಅಂತ ನಮ್ಮಮ್ಮ ಮಾಯಮ್ಮ, ನನ್ನ ಸಂಗಾತಿಯನ್ನು ಬಯ್ಯುತ್ತಿದ್ದರು. ನನ್ನ ಸಂಗಾತಿಗಿಂತ ನನ್ನ ಮಗಳೇ ದೊಡ್ಡ ಮಾಯಕಾತಿ ಆಗಿದ್ದರಿಂದ ಇವಳಿಂದಾಗಿಯೇ ಮಾಯಮ್ಮನವರು ನನ್ನ ಸಂಗಾತಿಯನ್ನು ಒಪ್ಪಿಕೊಂಡರು. ‘ಅವುನ್ ಸಿಕ್ರೆ, ಕಡ್ಕತ್ತೀಲ್ ಕೊಂದಾಕ್ತೀನಿ’ ಅಂದಿದ್ದ ನಮ್ಮತ್ತೆಯವರೂ ಮಾವನವರೂ ನನ್ನ ಮಗಳ ದೆಸೆಯಿಂದಾಗಿಯೇ ನನ್ನನ್ನೂ ಒಪ್ಪಿಕೊಂಡರು.

ಈ ನವ ಮಾಯಕಾತಿ ಹುಟ್ಟುವ ಮೊದಲು ಒಂದು ಬಾಡಿಗೆ ಮನೆಯಲ್ಲಿ ನಮ್ಮ ಪಾಡಿಗೆ ನಮ್ಮ ವಾದಗಳು, ಚರ್ಚೆಗಳು ಮತ್ತು ಜಗಳಗಳನ್ನು ಪ್ರೀತಿಯ ಹೋಲ್ಡಾಲಿನೊಳಗೆ ಸುತ್ತಿಕೊಂಡು ಜೋಡಿಹಕ್ಕಿಗಳಂತೆ ನಾಲ್ಕು ವರ್ಷಗಳ ಕಾಲ ಬದುಕಿದ್ದೆವು. ಇಡೀ ಬೀದಿಯಲ್ಲಿ ನಮ್ಮ ಪಾಡಿಗೆ ನಾವು ಇದ್ದೆವು. ಉಳಿದ ಎಂಟೋ ಒಂಬತ್ತೋ ಮನೆಗಳವರೂ ನಮ್ಮ ವಿಷಯಕ್ಕೆ ತಲೆ ಹಾಕುತ್ತಿರಲಿಲ್ಲ. ನಮ್ಮ ಕೆಲಸ ಬೊಗಸೆ ನಮ್ಮದಷ್ಟೇ ಎಂಬಂತೆ ಇದ್ದೆವು. ನಮ್ಮಿಬ್ಬರ ಮನೆಯವರಿಗೆ ನಮ್ಮ ದಾಂಪತ್ಯ ಇಷ್ಟವಿರಲಿಲ್ಲ. ಅವರುಗಳು ಒಪ್ಪಿಕೊಂಡೂ ಇರದಿದ್ದರಿಂದ ನಮ್ಮ ಮನೆಗೆ ಯಾರ ಕಡೆಯ ಹಿರಿಯರೂ ಬರುತ್ತಿರಲಿಲ್ಲ. ಅಪರೂಪಕ್ಕೊಮ್ಮೆ ನಮ್ಮ ಒಡಹುಟ್ಟಿದವರು ಬಂದು ಒಂದೆರಡು ದಿನ ಇದ್ದು ಹೋಗುತ್ತಿದ್ದರಷ್ಟೆ. ನಮಗೆ ಮಗುವೊಂದು ಬೇಕು ಅಂದುಕೊಂಡಾಗ, ತಾಯಿತಂದೆ ಆಗುವ ಪೂರ್ವಸಿದ್ಧತೆಗಳ ಕುರಿತಂತೆ ಮತ್ತು ಮಗುವನ್ನು ಪಾಲಿಸುವ ಬೆಳೆಸುವ ಕುರಿತಂತೆ ಹಲವಾರು ಇಂಗ್ಲಿಷ್ ಮತ್ತು ಕನ್ನಡ ಪುಸ್ತಕಗಳನ್ನು ಕೊಂಡು ತಂದು ಓದಿದೆವು. ಗರ್ಭಿಣಿಯ ಆರೈಕೆಗಾಗಲಿ ಹೆರಿಗೆಗಾಗಲಿ ಬಾಣಂತನಕ್ಕಾಗಲಿ ಯಾರ ಸಹಾಯ ಸಹಕಾರವನ್ನೂ ಅಪೇಕ್ಷಿಸದೆ ನಮಗೆ ನಾವೇ ಎಂಬಂತೆ ಸಿದ್ಧವಾಗುತ್ತಿದ್ದೆವು. ದಿನ ಹತ್ತಿರವಾಗುತ್ತಿದ್ದಂತೆ ಎದುರು ಸಾಲಿನಲ್ಲಿದ್ದ ಆಟೋ ಅಂಕಲ್ (ಇದು ನಮ್ಮ ಮಗಳು ಕರೆದದ್ದು), ಪ್ರಿಯಾ ಡ್ಯಾಡಿ (ಇದೂ ನಮ್ಮ ಮಗಳು ಕರೆದದ್ದು), ಪಕ್ಕದ ಮನೆಯ ಮರಾಠಿ ಆಂಟಿ ಮತ್ತು ನಮ್ಮನೆ ಮಾಲೀಕರು ‘ಹಗಲಾಗಲಿ ರಾತ್ರಿಯಾಗಲಿ ಎಷ್ಟೊತ್ತಿಗಾದರೂ ನಮ್ಮನ್ನು ಕರೆಯಿರಿ. ನಾವು ಬರುತ್ತೇವೆ’ ಎಂಬಂಥ ಮಾತುಗಳನ್ನಾಡಿದ್ದರು. ಇವೆಲ್ಲಾ ಯಾಕೆ ಹೇಳಿದೆನೆಂದರೆ, ನಮ್ಮ ಮಗಳು ಅವಳಮ್ಮನ ಹೊಟ್ಟೆಯಲ್ಲಿದ್ದಾಗಲೇ ‘ನಮ್ಮ ಪಾಡಿಗೆ ನಾವು’ ಎಂಬಂತಿದ್ದ ನಮ್ಮನ್ನು ಇಡೀ ಬೀದಿಯ ಜನದೊಂದಿಗೆ ಬೆಸೆದಿದ್ದಳು. ಹುಟ್ಟಿದ ಮೇಲೆ ನಮ್ಮನ್ನು ನಮ್ಮ ತಂದೆ ತಾಯಿಗಳೊಂದಿಗೆ ಬೆಸೆದಳು ಎಂಬುದನ್ನು ತಿಳಿಸುವುದಕ್ಕಾಗಿ ಹೇಳಿದೆ.

ಇದನ್ನೂ ಓದಿ :ನಡೆಯಬೇಕಾದ ಹಾದಿ ತುಂಬಾ ದೂರವಿದೆ ಒಟ್ಟಿಗೇ ನಡೆಯುತ್ತಿದ್ದೇವೆ.

ಮೂರು ಮಾತೃಭಾಷೆಗಳು ನಮ್ಮಿಂದಾಗಿ ಮಗಳಿಗೆ ಕನ್ನಡ. ನಮ್ಮ ಮನೆ ಮಾಲೀಕರಿಂದಾಗಿ ತಮಿಳು. ಶಾಲೆಯಿಂದಾಗಿ ಇಂಗ್ಲಿಷ್. ನಮ್ಮಿಬ್ಬರ ಉದ್ಯೋಗಗಳ ದೆಸೆಯಿಂದಾಗಿ ಮಗಳೊಡನೆ ನಾನು ಹೆಚ್ಚು ಸಮಯ ಕಳೆದಿದ್ದೇನೆ. ಆದರೆ ನನಗಿಂತ ಹೆಚ್ಚಿನ ಉತ್ತಮ ಸಮಯವನ್ನು ನನ್ನ ಸಂಗಾತಿ ಮಗಳಿಗೆ ಕೊಟ್ಟಿದ್ದಾಳೆ. ಶಿಸ್ತು, ಜವಾಬ್ದಾರಿ ಮತ್ತು ವೃತ್ತಿನಿಷ್ಠೆ ಅವಳಮ್ಮನಿಂದಲೇ ಬಂದಿರುವುದು. ನಾನು ಅಪ್ಪನಿಗಿಂತ ಹೆಚ್ಚಾಗಿ ಗೆಳೆಯನಂತೆ ಬದುಕಿಬಿಟ್ಟಿದ್ದೇನೆ. ಮಗಳನ್ನು ಬೇಬಿ ಸಿಟ್ಟಿಂಗಿಗೆ ನಾನೇ ಹೆಚ್ಚು ಕರೆದೊದೊಯ್ಯುತ್ತಿದ್ದೆ. ಒಂದು ದಿನ ಅವಳ ಪುಟ್ಟ ಅಂಗೈಯನ್ನು ನನ್ನ ಅಂಗೈಯಲ್ಲಿಟ್ಟುಕೊಂಡು ಬೇಬಿ ಸಿಟ್ಟಿಂಗಿಗೆ ಕರೆದುಕೊಂಡು ಹೋಗುವಾಗ, ಅಲ್ಲೊಂದು ಕರು ಅಂಬಾ ಅಂಬಾ ಎಂದು ಕೂಗುತ್ತಿತ್ತು. ನನ್ನ ಮಗಳು, ‘ಪಾಪ. ಅದರ ಅಮ್ಮ ಆಫೀಸಿಗೆ ಹೋಗಿರಬೇಕು. ಅಮ್ಮ ಬೇಕು ಅಂತ ಕರೀತಿದೆ. ಅಲ್ವಾ?’ ಎಂದು ಕೇಳಿದ್ದಳು. ಈ ರೀತಿಯ ಪ್ರಾಣಿ ಪಕ್ಷಿ ಮನುಷ್ಯರ ಬಗೆಗಿನ ಅವಳ ಸಂವೇದನೆಗಳು ನನ್ನ ಮಾನವೀಯ ಸಂವೇದನೆಗಳನ್ನು ಹೆಚ್ಚು ಹೆಚ್ಚು ಸೂಕ್ಷ್ಮಗೊಳಿಸುತ್ತ ಹೋದವು.

ರಂಧ್ರಮಹಾತ್ಮೆಯೂ ಜೋತುನಾಲಗೆ ನಾಯಿಯೂ ಹೊಸದಾಗಿ ಕಟ್ಟಿಸಿದ ನಮ್ಮ ಮನೆಯ ಲಿವಿಂಗ್ ರೂಮಿಗೆ ಇನ್ನೂ ಸೀಲಿಂಗ್ ಫ್ಯಾನ್ ಹಾಕಿಸಿರಲಿಲ್ಲ. ಫ್ಯಾನ್​ಅನ್ನು ನೇತು ಹಾಕಬೇಕಿದ್ದ ಪೊಟರೆಯನ್ನೇ ಮನೆ ಮಾಡಿಕೊಂಡು ಗುಬ್ಬಚ್ಚಿಗಳು ಮೊಟ್ಟೆಯಿಟ್ಟು ಮರಿ ಮಾಡಿಕೊಳ್ಳುತ್ತಿದ್ದುವು. ಪಕ್ಕದ ಮನೆಯ ಇಬ್ಬರು ಮಾನಸಿಕ ಅಸ್ವಸ್ಥರು ಅವರ ತಾರಸಿಯಿಂದ ಮೊಟ್ಟೆಯ ಸಿಪ್ಪೆ ಕಸ ಕಡ್ಡಿಯನ್ನೆಲ್ಲ ನಮ್ಮ ಲಿವಿಂಗ್ ರೂಮಿನೊಳಕ್ಕೆ ಎಸೆಯುತ್ತಿದ್ದರು. ನಾವು ಸ್ವಚ್ಛ ಮಾಡಿಕೊಳ್ಳುತ್ತಿದ್ದೆವು. ಆದರೆ ಒಮ್ಮೆ ಉಚ್ಚೆಯನ್ನೇ ಪ್ರೋಕ್ಷಣೆ ಮಾಡಿಬಿಟ್ಟರು. ಕೊನೆಗೆ ಮಕ್ಕಳನ್ನು ನಿಮ್ಹಾನ್ಸಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಎಂದು ಅವರ ತಾಯಿಗೆ ಹೇಳಲೇಬೇಕಾಯಿತು. ಕದವಿರದಿದ್ದ ಗವಾಕ್ಷಗಳಿಗೆ ಪಾರದರ್ಶಕ ತಡೆಗಳನ್ನು ಹೊಡೆಸಿದೆವು. ಐದನೆಯ ತರಗತಿಯಲ್ಲಿ ಓದುತ್ತಿದ್ದ ಮಗಳು, ಸಂಜೆ ಶಾಲೆಯಿಂದ ಬಂದವಳೆ ಪೊಟರೆಯಲ್ಲಿ ಗುಬ್ಬಚ್ಚಿಗಳಿಲ್ಲದಿರುವುದನ್ನು ನೋಡಿ ಕಾರಣವನ್ನೂ ಕಂಡುಕೊಂಡು ಆ ಪಾರದರ್ಶಕ ತಡೆಗಳನ್ನು ತೆಗಿಸಿಬಿಡು ಎಂದು ಒಂದೇ ಸಮನೆ ಅಳತೊಡಗಿದಳು. ಕೊನೆಗೆ ಗುಬ್ಬಚ್ಚಿ ಹೋಗಿ ಬರುವಷ್ಟು ಅಳತೆಯ ರಂಧ್ರವನ್ನು ಕೊರೆಸಿದೆ. ಇನ್ನೂ ಎರಡನ್ನು ಕೊರೆಸು ಎಂದು ಹಠ ಹಿಡಿದಳು. ಒಂದೇ ರಂಧ್ರ ಸಾಕು ಎಂಬುದನ್ನು ಅವಳಿಗೆ ಮನವರಿಕೆ ಮಾಡಿಸುವಲ್ಲಿ ಸಾಕುಬೇಕಾಯಿತು.

ಮೊನ್ನೆ ಮೊನ್ನೆ ನಾವೆಲ್ಲ ಊರೆಲ್ಲ ಸುತ್ತಿಕೊಂಡು ವಾಪಾಸು ಮನೆಗೆ ಬರುವಷ್ಟರಲ್ಲಿ ಅಲ್ಲೊಂದು ಹೊಸ ನಾಯಿ ನಾಲಿಗೆ ಜೋತು ಬಿಟ್ಟುಕೊಂಡು ಕುಡಿದವರಂತೆ ತೂರಾಡುತ್ತಾ ಹೋಗುತ್ತಿತ್ತು. ನಾನು ಅದು ಹುಚ್ಚುನಾಯಿ ಇರಬಹುದೆಂಬ ಹೆದರಿಕೆಯಿಂದ ದೂರವೇ ಇದ್ದೆ. ಇವಳು, ‘ಪಾಪ’ ಎಂದುಕೊಂಡು ಅದರ ಹತ್ತಿರ ಹೋದಳು. ನಾನು ಕಚ್ಚಿಬಿಟ್ಟರೆ ಎಂಬ ಆತಂಕದಿಂದಲೇ, ‘ತುಂಬಾ ಹತ್ರ ಹೋಗ್ಬೇಡ’ ಎಂದೆ. ‘ಏನಾಗಿದ್ಯೋ… ನಿಂಗೆ?’ ಎನ್ನುತ್ತಾ ತೀರಾ ಹತ್ತಿರ ಹೋದಳು. ಅದು ಏನೂ ಪ್ರತಿಕ್ರಿಯಿಸಲಿಲ್ಲ. ಮನೆಯೊಳಕ್ಕೆ ಹೋಗಿ ಸ್ವಲ್ಪ ಹಾಲು ಅನ್ನ ಕಲಸಿಕೊಂಡು ಬಂದು, ‘ತಿನ್ನು’ ಎಂದು ಅದರ ಮುಂದೆ ಇಟ್ಟಳು. ಅದು ನಿಧಾನಕ್ಕೆ ಇವಳ ಮುಖ ನೋಡಿ ತಿಂದು ಚೇತರಿಸಿಕೊಂಡು ಹೋಯಿತು.

appnaguvudendare

ಅಂತರ್ಜಾಲ ಚಿತ್ರ

ಅಮ್ಮ ಬಕು ಅಮ್ಮ ಬಕು ಚಿಕ್ಕವಳಿದ್ದಾಗ, ‘ಅಮ್ಮ ಬಕು. ಅಮ್ಮ ಬಕು’ ಅನ್ನುತ್ತಿದ್ದಳು. ಜೊತೆಯ ಮಕ್ಕಳ ಅಮ್ಮಂದಿರು ಕೆಲಸದಿಂದ ಸಂಜೆಗೆ ಮನೆಗೆ ಬಂದುಬಿಡುತ್ತಿದ್ದರು. ಇವಳಮ್ಮ ಮನೆಗೆ ಬರುವುದು ರಾತ್ರಿ ಒಂಬತ್ತು ಗಂಟೆಯ ಮೇಲೆಯೇ. ಅಷ್ಟೊತ್ತಿಗೆ ಇವಳು ಮಲಗಿಬಿಟ್ಟಿರುತ್ತಿದ್ದಳು. ಇವಳಮ್ಮನಿಗೂ ಮಗಳನ್ನು ಕಾಣುವ ಕಾತರ. ನಮ್ಮ ಮಗಳು ಹಾಲು ಕುಡಿಯುವ ಎಳೆ ಮಗುವಾಗಿದ್ದಾಗ ನನ್ನ ಸಂಗಾತಿ, ಊಟದ ತಿಂಡಿಯ ಬ್ರೇಕ್​ಗಳಲ್ಲಿ ಸರಬರನೆ ಆಫೀಸಿನಿಂದ ಬಂದು ಮಗಳಿಗೆ ಹಾಲು ಕುಡಿಸಿ ಹಿಂದಿರುಗುತ್ತಿದ್ದಳು. ತಾಯಿ ಹೋಗುವಾಗ ಆ ಕಡೆಗೆ ಕೈ ಚಾಚಿಕೊಂಡು ನಮ್ಮ ಮಗಳು ಅವಳಮ್ಮನೆಡೆಗೆ ತನ್ನನ್ನೆತ್ತಿಕೊಂಡಿರುವ ನನ್ನನ್ನು cruise ಮಾಡಲು ಯತ್ನಿಸುತ್ತಿದ್ದಳು. ಇದರಿಂದ ನಾನು ಒಂದು ಹೊಸ ಅಭ್ಯಾಸ ರೂಢಿಸಿಕೊಂಡೆ. ಬೆಂಗಳೂರಿನಲ್ಲಿದ್ದಾಗ ರಾತ್ರಿ ಊಟ ಮುಗಿದ ಮೇಲೆ ಮಗಳನ್ನು ಕರೆದುಕೊಂಡು ಅವಳಮ್ಮನ ಆಫೀಸಿನ ಬಳಿ ಹೋಗತೊಡಗಿದೆ. ನನ್ನ ಸಂಗಾತಿ ಸಿ.ಜಿ. ಮಂಜುಳಾ ಕೆಲಸ ಮಾಡುತ್ತಿದ್ದ ಪ್ರಜಾವಾಣಿಯ ಕಾರ್ಯಾಲಯ ನಮ್ಮ ಮನೆಯಿಂದ ಹೆಚ್ಚೆಂದರೆ ಇಪ್ಪತ್ತು ಇಪ್ಪತ್ತೈದು ನಿಮಿಷಗಳ ನಡಿಗೆಯ ದೂರ. ಬ್ರಿಗೇಡ್ ರಸ್ತೆ ಹಾಯ್ದು ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ಪ್ರಜಾವಾಣಿ ಸ್ವಾಗತಕಟ್ಟೆಯಿಂದ ಫೋನ್ ಮಾಡಿದರೆ ಇವಳಮ್ಮ ಹೊರಕ್ಕೆ ಬರುವುದು ಎಷ್ಟು ಸಮಯವಾಗುತ್ತದೆ ಎಂದು ಹೇಳುತ್ತಿದ್ದಳು. ತಕ್ಷಣ ಬರುವ ಹಾಗಿದ್ದರೆ ಅಲ್ಲೇ ದೊಡ್ಡ ದೊಡ್ಡ ಕಿಟಕಿಗಳ ಯಾವುದಾದರೊಂದು ಜಗಲಿಯ ಮೇಲೆ ಆರಾಮಾಗಿ ಕುಳಿತು ಅಲ್ಲಿ ಅಡ್ಡಾಡುವ ಜನರ ವೇಶಭೂಷಣಗಳು, ಅವರ ಶೈಲಿಗಳು, ರಸ್ತೆಯಲ್ಲಿ ಓಡಾಡುವ ಕಾರುಗಳು ಅವುಗಳು ಹೊಮ್ಮಿಸುವ ಹೆಡ್ಲೈಟ್ ಬೆಳಿಕನ ಹಾಯುವ ರೀತಿ, ಇತ್ಯಾದಿಗಳನ್ನು ಅಭ್ಯಸಿಸುತ್ತ  ಕಾಯುತ್ತಿದ್ದೆವು. ಲೇಟಾಗುತ್ತದೆ ಎಂದರೆ ಮುಂದಕ್ಕೆ ಎಲ್ಐಸಿ ಕಟ್ಟಡದವರೆಗೂ ನಡೆದು ವಾಪಸ್ಸಾಗುತ್ತಿದ್ದೆವು. ಇನ್ನೂ ಸಮಯವಿದ್ದರೆ ಎದುರು ಬದಿಯ ಬುಲೆವಾರ್ಡ್ ತಲುಪಿ ಅಲ್ಲಿಂದ ಪ್ರಜಾವಾಣಿ ತಲುಪುತ್ತಿದ್ದೆವು. ಇವಳು ಎಳೆ ಮಗುವಾಗಿದ್ದಾಗ ಇವಳಮ್ಮ ಆಫೀಸಿನಿಂದ ಹೊರಬಂದವಳೆ ತನ್ನ ಬ್ಯಾಗನ್ನು ನನಗೆ ಕೊಟ್ಟು ಮಗಳನ್ನು ಅಪ್ಪಿ ಎತ್ತಿಕೊಳ್ಳುತ್ತಿದ್ದಳು. ಇನ್ನು ಮನೆ ತಲುಪುವವರೆಗೂ ಅಮ್ಮ ಮಗಳು ಮಾತಲ್ಲಿ ಮುಳುಗಿಹೋಗಿಬಿಡುತ್ತಿದ್ದರು.

ಇದನ್ನೂ ಓದಿ : ಅಮ್ಮನೆಂಬ ಪಂಜರದ ಹಕ್ಕಿ ರೆಕ್ಕೆ ಬಿಚ್ಚಿ ಹಾರುವಾಗ

ಹ್ಯಾಟ್​ಧಾರಿ ಗೊಂಬೆ ಕಥೆ ಹೀಗೆ ಮನೆಯಿಂದ ಪ್ರಜಾವಾಣಿಗೆ ಆ ದೇದೀಪ್ಯಮಾನ ರಸ್ತೆಯಲ್ಲಿ ನಡೆದುಕೊಂಡ ಹೋಗುವ ನಮ್ಮ ಯಾತ್ರೆಯಲ್ಲಿ ನನಗೆ ಗೊತ್ತಿರುವ ಕತೆಗಳ ಕಣಜ ಕರಗಿ ಹೋಗಿ ಹೊಸ ಹೊಸ ಕತೆಗಳನ್ನು ಕಟ್ಟುತ್ತಿದ್ದೆ. ಹಳೆ ಮತ್ತು ಹೊಸ ಕತೆಗಳ ವಿಶ್ಲೇಷಣೆಯನ್ನೂ ಮಾಡುತ್ತಿದ್ದೆ. ಅರಳುಗಣ್ಣುಗಳಲ್ಲಿ ನನ್ನ ಮಗಳು ಆ ಕಥಾಲೋಕವನ್ನು ಪ್ರವೇಶಿಸಿರುತ್ತಿದ್ದಳು. ನಾನು ಕಟ್ಟಿದ ಕತೆಗಳಲ್ಲಿ ಮತ್ತು ಹಳೆಯ ಕತೆಗಳ ವಿಶ್ಲೇಷಣೆಗಳಲ್ಲಿ, ‘ಕಮಲ ಯಾಕೆ ಅಪ್ಪನಿಗೆ ಮತ್ತು ಬಸವ ಯಾಕೆ ಅಮ್ಮನಿಗೆ ಸಹಾಯ ಮಾಡಬಾರದು’ ಎಂಬ ತತ್ವ ಆಯಾಚಿತವಾಗಿ ಅವಕಾಶವಾದಾಗಲೆಲ್ಲ ತಲೆಯೆತ್ತಿರುತ್ತಿತ್ತು. ಬ್ರಿಗೇಡ್ ರಸ್ತೆಯಲ್ಲಿ ಆಗ ಸಫೈರ್ ಎಂಬ ಮಕ್ಕಳ ಆಟಿಕೆ ಮತ್ತು ಪುಸ್ತಕಗಳ ದೊಡ್ಡದೊಂದು ಮಳಿಗೆ ಇತ್ತು. ಅದರ ಪ್ರದರ್ಶನ ಕಿಟಕಿಯ ಗಾಜಿನ ಮುಂದೆ ನಿಂತು ಅಲ್ಲಿರುವ ಆಟಿಕೆಗಳು ಮತ್ತು ಗೊಂಬೆಗಳನ್ನು ನೋಡುತ್ತಾ ಅವುಗಳ ಮೇಲೂ ನನ್ನ ಕತೆ, ವಿಶ್ಲೇಷಣೆ ನಡೆಯುತ್ತಿತ್ತು. Toy Gun ಮತ್ತಿತರ ಮಿಲಿಟರಿ ಆಟಿಕೆಗಳು ಸರಿಯಲ್ಲ. ಹಿಂಸೆಯನ್ನು ಉದ್ದೀಪಿಸುತ್ತವೆ ಇತ್ಯಾದಿ. ನನ್ನ ಮಗಳ ಬಳಿ ಒಂದೂ ಹಿಂಸಾತ್ಮಕ ಆಟಿಕೆಗಳಿಲ್ಲ. ಈ ನನ್ನ ವಿಶ್ಲೇಷಣೆಗಳನ್ನು ನಾನು ಪ್ರಯತ್ನಪೂರ್ವಕವಾಗಿ ಮಾಡಿದ್ದಲ್ಲ. ನಾನು ಮತ್ತು ನನ್ನ ಸಂಗಾತಿ ಬದುಕುತ್ತಿರುವದೇ ಹಾಗಾದ್ದರಿಂದ ಸಹಜವಾಗೆ ಪ್ರಕಟವಾದವು.

ನಮ್ಮ ಮಗಳು ನಾವು ಕೊಡಿಸಿದ್ದರೊಂದಿಗೆ ಆಟವಾಡುತ್ತಿದ್ದಳು. ಅವಳು ಆಸೆ ಪಟ್ಟಿದ್ದನ್ನೂ ಕೊಡಿಸುತ್ತಿದ್ದೆವು. ಅವಳು ಕೇಳಿದ್ದು ಸರಿಯಿಲ್ಲವೆಂದಾಗ ಯಾಕೆ ಬೇಡವೆಂದು ವಿವರಿಸುತ್ತಿದ್ದೆವು. ‘ವರ್ಷವಿಡೀ ದಿನಕ್ಕೊಂದು ಕತೆ’ ಎಂಬ ಪುಸ್ತಕದಿಂದ ಅವಳಮ್ಮ ಎಷ್ಟೇ ದಣಿವಿದ್ದರೂ ರಾತ್ರೆ ಮಲಗುವ ಮೊದಲು ದಿನಕ್ಕೊಂದು ಕತೆಯಂತೆ ಒಂದು ವರ್ಷ ಓದಿ ಹೇಳಿದ್ದಾಳೆ. ಹಟವಿಡಿದು ಕೊಡಿಸಿಕೊಂಡಿದ್ದು ಬಹುಶಃ ಎರಡೇ ಅನಿಸುತ್ತದೆ. ಒಂದು, ಅವಳಿಗಿಂತ ಎತ್ತರವಾದ ಕ್ಯಾಶಿಯೋ ಮತ್ತು ಊದ್ದೂದ್ದನೆಯ ಕೈಕಾಲುಗಳ ಹ್ಯಾಟ್ಧಾರಿಣಿ ಗೊಂಬೆ.

ಯಾಕ್ರೋ ನಾನೂ ಬರಬಾರದು? ಮುಂದೆ ಪಿಜಿಡಿಎಂ ಕೋರ್ಸಿಗಾಗಿ ವಸತಿಸಹಿತ ಶಿಕ್ಷಣಕ್ಕೆ ಮೈಸೂರಿನಲ್ಲಿರುವ ಪ್ರಸಿದ್ಧ ಶಿಕ್ಷಣ ಸಂಸ್ಥೆಯೊಂದರಲ್ಲಿ ಎರಡು ವರ್ಷ ಓದಿದಳು. ಆ ವಸತಿನಿಲಯದಲ್ಲಿ ಮಾಂಸಾಹಾರ ಖಡಕ್ಕಾಗಿ ನಿಷಿದ್ಧ. ಹೀಗಾಗಿ ಆಗಾಗ್ಗೆ ಸಂಜೆ ಹೊತ್ತು ಹತ್ತಿರದ ತಳ್ಳುಗಾಡಿ ಮಾಂಸಾಹಾರದವನ ಬಳಿ ಹೋಗಿ ತಿನ್ನುತ್ತಿದ್ದರಂತೆ ಮಕ್ಕಳು. ಮೊದಲ ಸಾರಿ ಹೋದಾಗ ತಳ್ಳುಗಾಡಿಯಿಂದ ದೂರದಲ್ಲಿ ಹುಡುಗಿಯರು ನಿಂತುಕೊಂಡರಂತೆ. ಹುಡುಗರು ತರಲು ಹೋದರಂತೆ. ಇವಳೂ ಹುಡುಗರ ಜೊತೆಯೇ ಹೋದಳಂತೆ. ಅದಕ್ಕೆ ಆ ಹುಡುಗರು, ‘ನೀನ್ಯಾಕೆ ಬಂದೆ? ನಾವೇ ತರ್ತಿದ್ವಲ್ಲ. ಹುಡುಗೀರು ಈ ತರಹ ಬರಬಾರದು’ ಅಂದರಂತೆ. ಅದಕ್ಕಿವಳು, ‘ಹೋಗ್ರೋಲೋ. ನಮ್ಮಪ್ಪ ಬೆಂಗಳೂರಿನ ಗಲ್ಲಿಗಲ್ಲಿಗಳಲ್ಲಿರುವ Crowded with Men ಹೋಟೆಲ್​ಗಳಲ್ಲಿ ರುಚಿರುಚಿಯಾಗಿ ಚಿಕ್ಕಂದಿನಿಂದ ತಿನಿಸಿದ್ದಾರೆ’ ಎಂದು ತನಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಂಡಳಂತೆ. ಅಲ್ಲಿಂದ ಈಗಲೂ ಆ ಗಾಡಿಯ ಬಳಿ ಹುಡುಗಹುಡುಗಿಯರು ಒಟ್ಟೊಟ್ಟಿಗೆ ಲಗ್ಗೆ ಇಡುತ್ತಿದ್ದಾರೆ.

ಇಂದೀವತ್ತು ನನ್ನ ಬೆರಳು ಅವಳ ಕೈಯ್ಯೊಳಗೆ ಅವಳು ಏಳೋ ಎಂಟನೆಯ ತರಗತಿಯಲ್ಲಿದ್ದಾಗ ಶಾಲೆಯಿಂದ ಬಂದವಳು ಅಟ್ಟದಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಮನ್ನಾಡೆಯವರ ಹಾಡುಗಳನ್ನು ಕೇಳುತ್ತಿದ್ದ ನನ್ನ ಪಕ್ಕ ಕುಳಿತಳು. ‘ಇದು ಯಾರು ಹಾಡ್ತಿರೋದು?’ ಕೇಳಿದಳು. ಅದು ಮನ್ನಾಡೆ, ಹಿಂದಿ ಚಿತ್ರಗಾಯಕರು ಎಂಬುದನ್ನು ತಿಳಿಸಿ, ‘ಮನ್ನಾಡೆಯವರು ನನಗೆ ಇಷ್ಟದ ಗಾಯಕ. ಅವರ ಹಾಡೊಂದನ್ನು ನಿನಗೆ ಕೇಳಿಸುತ್ತೇನೆ ತಾಳು’ ಎಂದು ಅವರು ‘ಏಕ್ ಫೂಲ್ ದೋ ಮಾಲಿ’ ಚಿತ್ರಕ್ಕೆ ಹಾಡಿರುವ ‘ತುಝೆ ಸೂರಜ್ ಕಹೂ ಯಾ ಚಾಂದ್. ತುಜೆ ದೀಪ್ ಕಹೂ ಯಾ ತಾರಾ. ಮೇರಾ ನಾಮ್ ಕರೇಗಾ ರೋಷನ್’ ಹಾಡನ್ನು ಕೇಳಿಸಿದೆ. ಅದರ ಅರ್ಥ ಕೇಳಿದಳು. ಅರ್ಥ ಹೇಳಿ ವಿವರಿಸುತ್ತಿದ್ದ ಹಾಗೇ ಆ ಹಾಡನ್ನು ನಾನೇ ಅವಳಿಗೆ ಹಾಡುತ್ತಿದ್ದೇನೆ ಎಂಬಂತೆ ಖುಷಿಯಿಂದ ಕೇಳಿದಳು. ಆ ಹಾಡು ನಮ್ಮಿಬ್ಬರದ್ದೇ ಆಗಿತ್ತು. ಈಗಲೂ ಭವಿಷ್ಯದ ಕುರಿತು ಬರುವ ಆ ಹಾಡಿನ ಸಾಲು, ‘ಈವತ್ತು ನಿನ್ನ ಬೆರಳ ಹಿಡಿದು ನಾನು ನಡೆಯುವುದ ಕಲಿಸುತ್ತೇನೆ. ನಾಳೆ ನೀನು ನನ್ನ ಕೈ ಹಿಡಿ ನಾನು ಮುದುಕನಾದಾಗ’ ಎಂಬ ಸಾಲುಗಳು ನಮ್ಮಿಬ್ಬರಿಗೂ ಅಕ್ಷರಶಃ ನಿಜವಾಗಿವೆ.

ವಯಸ್ಸಾಗಿದ್ದರೂ ನಾನೇನೂ ಮುದುಕನಾಗಿಲ್ಲ ಎಂಬುದು ನನ್ನ ಧೋರಣೆ. ಆದರೆ ಡಯಾಬಿಟಿಕ್ ರೆಟಿನೋಪತಿಯಿಂದಾಗಿ ನನ್ನ ದೃಷ್ಟಿ ಎರಡೂ ಪಾರ್ಶ್ವಗಳಲ್ಲಿ ಮತ್ತು ಕೆಳಗಿನ ಭಾಗದಲ್ಲಿ ಊನವಾಗಿದೆ. ಹೀಗಾಗಿ ಅಕ್ಕಪಕ್ಕದ ಯಾರಿಗಾದರೂ ಯಾವುದಕ್ಕಾದರೂ ಆಗಾಗ್ಗೆ ಡಿಕ್ಕಿ ಹೊಡೆದುಬಿಡುತ್ತೇನೆ. ಮುಂದಿರುವ ನೆಲ, ನೆಲದಲ್ಲಿರುವ ಹಳ್ಳ ಉಬ್ಬುಗಳು ನನಗೆ ಗೋಚರಿಸುವುದಿಲ್ಲ. ಎಡವಿ ಬಿದ್ದು ಬಿಟ್ಟಿರುವುದೂ ಉಂಟು. ಆತುರದಲ್ಲಿ ಹುಡುಗನಂತೆ ನುಗ್ಗಿಬಿಟ್ಟರೆ ನೆಲದ ಮೇಲಿರುವ ಒಂದು ಒಂದೂವರೆ ಅಡಿ ಎತ್ತರದ ವಸ್ತುಗಳಿಂದ ತರಚುಪರಚು, ಏಟು ಆಗುತ್ತದೆ. ಈಗ ನಾವು ಹೊರಗೆ ನಾವು ಹೋದಾಗಲೆಲ್ಲ ನನ್ನ ಮಗಳು ಅದೊಂದು  ಕಡ್ಡಾಯ ನಿಯಮ ಎಂಬಂತೆ ನನ್ನ ಪಕ್ಕದಲ್ಲಿ ಬೆರಳುಗಳಿಗೆ ಬೆರಳು ಹೆಣೆದು ನಡೆಸುತ್ತಾಳೆ. ಮುಂದೆ ಉಬ್ಬುತಗ್ಗುಗಳಿದ್ದರೆ ನನ್ನ ಕೈಯನ್ನು ಅವಳ ಕೈಯೊಳಗೇ ಎಡಕ್ಕೆ ಬಲಕ್ಕೆ ನಾಜೂಕಾಗಿ ನನ್ನನ್ನು ನಡೆಸಿಕೊಂಡು ಹೋಗುತ್ತಾಳೆ. ಆಕೆ ಮಗುವಾಗಿದ್ದಾಗ ನಾನು ಎತ್ತಿಕೊಂಡು ನಡೆಯುತ್ತಿದ್ದರೆ ಹೀಗೇ ಅವಳಿಗೆ ಬೇಕಾದ ಕಡೆಗೆ ಕೈತೋರಿ ನನ್ನನ್ನು ಕರೆದುಕೊಂಡು ಹೋಗುತ್ತಿದ್ದಳು.

ದಾರಿ ಎತ್ತ ಸಾಗುವುದೊ ನನಗೂ ಕುತೂಹಲವಿದೆ.

***
ಪರಿಚಯ: ಪರಮೇಶ್ವರ ಗುರುಸ್ವಾಮಿ ಅವರು ಮುನ್ನೂರಕ್ಕೂ ಮಿಕ್ಕಿ ಸಾಕ್ಷ್ಯ, ಶೈಕ್ಷಣಿಕ, ಅರಿವು ಮೂಡಿಸುವ, ಪ್ರೇರಣಾ ಮತ್ತು ಕಥಾ ಆಧಾರಿತ ಕಿರುಚಿತ್ರಗಳ ನಿರ್ದೇಶನ-ಛಾಯಾಗ್ರಹಣ ಮಾಡಿದ್ದಾರೆ. ಚಲನಚಿತ್ರ ನಿರ್ಮಾಣ ಮತ್ತು ರಸಗ್ರಹಣ ಕಮ್ಮಟಗಳನ್ನು ಆಯೋಜಿಸಿದ್ದಾರೆ. ಹಲವು ಶಿಕ್ಷಣ ಸಂಸ್ಥೆಗಳಲ್ಲಿ ಇಂಗ್ಲಿಷ್ ಮತ್ತು ಚಲನಚಿತ್ರ ಅಧ್ಯಯನ ತರಗತಿಗಳಿಗೆ ಪಾಠ ಮಾಡಿದ್ದಾರೆ. ಸಾಹಿತ್ಯ ಸಿನೆಮಾ ಮತ್ತಿತರ ಸಾಂಸ್ಕೃತಿಕ ಕಲೆಗಳಲ್ಲಿನ ಅಭಿವ್ಯಕ್ತಿಗಳಲ್ಲಿನ ತಾಂತ್ರಿಕ ಅಂಶಗಳ ಬಗ್ಗೆ ಇವರಿಗೆ ಸದಾ ಕುತೂಹಲ ಆಸಕ್ತಿ ಇರುವುದರಿಂದ ನಿರಂತರವಾಗಿ ಅಧ್ಯಯನದಲ್ಲಿ ತೊಡಗಿಕೊಂಡಿರುತ್ತಾರೆ.

Published On - 4:08 pm, Sat, 13 February 21

ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್