Fatherhood; ಅಪ್ಪನಾಗುವುದೆಂದರೆ: ಉಡಾಳ ಆಗಬೇಕಂತ ಎಷ್ಟ ಪ್ರಯತ್ನ ಮಾಡಿದೆ ಅಂತೀರಿ…

Fatherhood; ಅಪ್ಪನಾಗುವುದೆಂದರೆ: ಉಡಾಳ ಆಗಬೇಕಂತ ಎಷ್ಟ ಪ್ರಯತ್ನ ಮಾಡಿದೆ ಅಂತೀರಿ...
ಸುಧೀಂದ್ರ ದೇಶಪಾಂಡೆ (ಸುನಾಥ)

Generation Gap: ‘ನನ್ನ ಅಜ್ಜ ಅಂದರೆ ತಾಯಿಯ ತಂದೆ; ನನ್ನನ್ನು ಹಾಳು ಮಾಡಿದವರಲ್ಲಿ ಇವನದೂ ಮಹತ್ವದ ಪಾತ್ರವಿದೆ. ನನಗೂ ಸಹ ಯಾವಾಗಲೂ, ‘Be good, do good’ ಎಂದು ಬೋಧಿಸುತ್ತಿದ್ದ. ಅವನ ಉಪದೇಶವನ್ನು ಮನಸಾ ಪಾಲಿಸಿದ ನಾನು ಹಾಳಾಗಿ ಹೋದೆ!‘ ಸುಧೀಂದ್ರ ದೇಶಪಾಂಡೆ (ಸುನಾಥ)

ಶ್ರೀದೇವಿ ಕಳಸದ | Shridevi Kalasad

|

Feb 17, 2021 | 2:11 PM

ಪ್ರಿಯ ಅಪ್ಪಂದಿರೇ, ಎರಡು ತಲೆಮಾರುಗಳ ಮಧ್ಯೆ ನೀವಿದ್ದೀರಿ. ಬೆನ್ನ ಹಿಂದೆ ನಿಮ್ಮ ಅಪ್ಪ-ಅಮ್ಮ, ಕಣ್ಣ ಮುಂದೆ ನಿಮ್ಮ ಮಕ್ಕಳು-ಕುಟುಂಬ. ನೀವು ಸಾಗಿಬಂದ, ಸಾಗಿಬರುತ್ತಿರುವ ಹಾದಿಯಲ್ಲಿ ಯಾವುದೇ ನೆನಪುಗಳು ಕೈಮಾಡಿ ನಿಲ್ಲಿಸಬಹುದು. ವಾಸ್ತವ ಸಂಗತಿಗಳು ಕಾಲಿಗೆ ಚಕ್ರ ಕಟ್ಟಲು ನೋಡಬಹುದು. ಈ ಎರಡರ ಮಧ್ಯೆ ಹೃದಯ-ಮೆದುಳು ಗುದ್ದಾಟಕ್ಕೆ ಬಿದ್ದಿರಬಹುದು, ಬಿದ್ದರೂ ನಾವು ನಡೆದಿದ್ದೇ ಹಾದಿ ಎಂದೂ ಸಾಗುತ್ತಿರಲೂಬಹುದು. ಹೀಗೆ ನೀವು ಸಾಕಷ್ಟು ವಿಧದಲ್ಲಿ ಆಂತರಿಕವಾಗಿ ಬೆಳೆದಿದ್ದೀರಿ, ಬೆಳೆಯುತ್ತಲೂ ಇದ್ದೀರಿ. ಹಾಗಿದ್ದರೆ ಅಪ್ಪನಾಗುತ್ತಿದ್ದಂತೆ ನಿಮ್ಮೊಳಗಿನ ನೀವು ರೂಪಾಂತರಕ್ಕೆ ಒಳಗಾದಿರೇ? ಅಪ್ಪನಾಗುವುದೆಂದರೆ ಅನುಭವವೇ, ಅವಕಾಶವೇ, ಆದರ್ಶವೇ, ಅನಿವಾರ್ಯವೇ, ಜವಾಬ್ದಾರಿಯೇ, ಸಹಜ ಪ್ರಕ್ರಿಯೆಯೆ ಅಥವಾ ಇದ್ಯಾವುದೂ ಅಲ್ಲವಾಗಿದ್ದರೆ ಇನ್ನೂ ಏನೇನು? ಒಮ್ಮೆ ಹಿಂತಿರುಗಿ ನೋಡಬಹುದೆ ಎಂದು ಕೆಲ ಅಪ್ಪಂದಿರಿಗೆ ‘ಟಿವಿ9 ಕನ್ನಡ ಡಿಜಿಟಲ್’ ಕೇಳಿತು. ಇದೋ ಹೊಸ ಸರಣಿ ‘ಅಪ್ಪನಾಗುವುದೆಂದರೆ’ ಇಂದಿನಿಂದ ಪ್ರಾರಂಭ.

ನಿಮಗೂ ಈ ಸರಣಿಯಲ್ಲಿ ಪಾಲ್ಗೊಳ್ಳಬೇಕು ಎನ್ನಿಸಿದರೆ ದಯವಿಟ್ಟು ಬರೆಯಿರಿ. ಕನಿಷ್ಟ 1000 ಪದಗಳಿರಲಿ, ನಾಲ್ಕೈದು ಭಾವಚಿತ್ರಗಳು ಮತ್ತು ಸ್ವವಿವರವೂ ಇರಲಿ. ಇ- ಮೇಲ್ tv9kannadadigital@gmail.com ಪರಿಕಲ್ಪನೆ: ಶ್ರೀದೇವಿ ಕಳಸದ

ಧಾರವಾಡದಲ್ಲಿ ವಾಸಿಸುತ್ತಿರುವ ಸುಧೀಂದ್ರ ದೇಶಪಾಂಡೆ ಅವರು ನಿವೃತ್ತ ಎಂಜಿನಿಯರ್. ಸುಮಾರು ಹದಿಮೂರು ವರ್ಷಗಳ ಹಿಂದೆ ಸುನಾಥ ಕಾವ್ಯನಾಮದಲ್ಲಿ ಸಲ್ಲಾಪ ಬ್ಲಾಗ್​ ಮೂಲಕ ಎಳೆಯರಿಗೆ ಬೇಂದ್ರೆ ಕಾವ್ಯದ ರುಚಿ ಹಚ್ಚಿಸಿದರು, ಹೆಚ್ಚಿಸಿದರು. ‘ಕರ್ನಾಟಕದ ಸ್ಥಳನಾಮಗಳು’ ಮತ್ತು ‘ಬೇಂದ್ರೆ ಶರೀಫರ ಕಾವ್ಯಯಾನ’ ಇವರ ಪ್ರಕಟಿತ ಪುಸ್ತಕಗಳು.

ಪೀಳಿಗೆಯ ಅಂತರವೆಂಬ ಜಾಲದೊಳಗಿನ ತೊಳಲಾಟಗಳ ಕೆನೆಪದರವನ್ನು ಮೆಲುದನಿಯಲ್ಲಿ ಅವರಿಲ್ಲಿ ಹಂಚಿಕೊಂಡಿದ್ದಾರೆ. 

ನಾನು ಮಗುವಿದ್ದಾಗಿನ ಜಗತ್ತು ನಾನು ಅಪ್ಪನಾದಾಗ ಇರಲಿಲ್ಲ. ಅಪ್ಪ, ಅಮ್ಮರ ಬಗೆಗೆ ಭಕ್ತಿ ಇರಬೇಕೆಂದು ನಮಗೆ ಅಂದರೆ ಮಕ್ಕಳಿಗೆ ಕಲಿಸಲಾಗುತ್ತಿತ್ತು. ನಮ್ಮ ಅಪ್ಪ ಅಮ್ಮಂದಿರೂ ಸಹ ಮಕ್ಕಳಿಗೆ ಸಲಿಗೆಯನ್ನು ಕೊಡುತ್ತಿರಲಿಲ್ಲ. ಮಕ್ಕಳ ಬಗೆಗೆ ಮಮತೆ ಎಷ್ಟೇ ಇದ್ದರೂ ಸಹ ರೀತಿ-ನೀತಿಗೆ ಮೊದಲ ಮನ್ನಣೆಯನ್ನು ಕೊಡಲಾಗುತ್ತಿತ್ತು. ಹೀಗಾಗಿ ನಾನು ಅಪ್ಪ, ಅಮ್ಮರ ಕಣ್ಣೋಟದ ಸೂಚನೆಗಾಗಿ ಕಾಯುವ ಹುಡುಗನಾಗಿ ಬೆಳೆದೆ. ಇದರ ಒಂದು ಒಳ್ಳೆಯ ಪರಿಣಾಮವೆಂದರೆ, ನಾನು ಹದಿಹರೆಯದಲ್ಲಿ ತಥಾಕಥಿತ ಕೆಟ್ಟ ಚಟಗಳಿಗೆ ಬಲಿಯಾಗಲಿಲ್ಲ! ಆದರೆ, ದೇವರ ದಯದಿಂದ ನನ್ನ ಕಾಲೇಜು ಜೀವನದಲ್ಲಿ, ತಂದೆತಾಯಿಯರಿಂದ ದೂರವಾದ ಮುಕ್ತ ವಾತಾವರಣಕ್ಕೆ ತೆರೆದುಕೊಳ್ಳುವ ಅವಕಾಶ ನನಗೆ ದೊರೆಯಿತು. ಅಲ್ಲಿ ನಾನು ಉಡಾಳನಾಗಲು ಬಹಳ ಪ್ರಯತ್ನಿಸಿದೆ. ಆದರೆ ಅದು ನನ್ನಿಂದ ಸಾಧ್ಯವಾಗಲಿಲ್ಲ. (ತಂದೆತಾಯಿಯರು ನನ್ನಲ್ಲಿ ಡ್ರಿಲ್ ಮಾಡಿದ ವಿವೇಕಪ್ರಜ್ಞೆಯ ದುಷ್ಪರಿಣಾಮವಿದು.) ಆದರೂ ಸಾರ್ವತ್ರಿಕವಾಗಿ ಪ್ರಸಾರದಲ್ಲಿದ್ದ ಕೆಲವೊಂದು ಸಣ್ಣಪುಟ್ಟ ಕೆಟ್ಟ (?)  ಚಟಗಳನ್ನು ಸಂಪಾದಿಸಲು ಸಹಪಾಠಿ ಗೆಳೆಯರ ಸಹವಾಸದಿಂದ ಸಾಧ್ಯವಾಯಿತು. ಅವರಿಗೆ ನನ್ನ ಕೃತಜ್ಞತೆಗಳು.

ನನ್ನ ಮದುವೆಯಾದ ಮೊದಲ ವರ್ಷ, ನಾವು ಕುಟುಂಬಯೋಜನೆಯನ್ನು ಅನುಸರಿಸಿದೆವು. ಎರಡನೆಯ ವರ್ಷದಲ್ಲಿ, ನಮ್ಮ ಕುಟುಂಬದ ದೊಡ್ಡವರೆಲ್ಲರ ವರಾತ ಸುರುವಾಯಿತು. ‘ಎನೀ ಗುಡ್ ನ್ಯೂಝ್​?’ ಅವರ ಪ್ರಶ್ನೆ. ‘ನೋ ನ್ಯೂಝ್ ಈಝ್ ಗುಡ್ ನ್ಯೂಝ್!’ ನಮ್ಮ ಉತ್ತರ. ಅವರಿಗೆ ನಿರಾಶೆ, (ಯಾಕೋ)!

ಕೊನೆಗೂ ವರಾತದ ಕಿರಾತಕರಿಗೆ ಶರಣಾಗಿ, ನಾವು ನಮ್ಮ ಮೊದಲ ಮಗುವಿನ ಆಗಮನವನ್ನು ಎದುರು ನೋಡತೊಡಗಿದೆವು. ಏನೇ ಅನ್ನಿರಿ, ಈ ನಿರೀಕ್ಷೆಯ ಅವಧಿ ಬಹಳ ಉತ್ಸುಕತೆಯ ಸಮಯ. ಹುಟ್ಟುವ ಕೂಸು ಗಂಡಾಗಿರುತ್ತದೆಯೋ, ಹೆಣ್ಣಾಗಿರುತ್ತದೆಯೋ ಎನ್ನುವದೇ ಕುತೂಹಲದ ಮೂಲ. ಉಚಿತ ಸಮಯದಲ್ಲಿ ನಮ್ಮ ಕುತೂಹಲಕ್ಕೆ ಉತ್ತರವಾಗಿ ನಮಗೊಂದು ಹೆಣ್ಣುಮಗು ಸಿಕ್ಕಿತು. ನಾವು ಸಂತೋಷದ ಶಿಖರವನ್ನು ಏರಿದೆವು. ಆದರೆ ನನ್ನ ಮಗುವನ್ನು ನನ್ನ ತಂದೆತಾಯಿಯರ ಎದುರಿಗೆ ಎತ್ತಿಕೊಳ್ಳಲೂ ಸಹ ನಾನು ನಾಚುತ್ತಿದ್ದೆ! ಅದು ಆ ಕಾಲದ ಸಂಪ್ರದಾಯ.

ಇದನ್ನೂ ಓದಿ : Fatherhood: ಕಮಲ ಅಪ್ಪನಿಗೆ ಬಸವ ಅಮ್ಮನಿಗೆ ಯಾಕೆ ಸಹಾಯ ಮಾಡಬಾರದು?

ಮಗು ಇನ್ನೂ ಪುಟ್ಟ ಕೂಸಾಗಿದ್ದಾಗ, ಅಪ್ಪನ ಜವಾಬುದಾರಿ ಕಡಿಮೆ. ಅದನ್ನು ಎತ್ತಿಕೊಳ್ಳಲೂ ಸಹ ಅವಕಾಶ ಕಡಿಮೆ. ‘ಗೋಣು ಇನ್ನೂ ನಿಂತಿಲ್ಲ; ಎಲ್ಲೆರೆ ಒಗದ ಬಿಟ್ಟೀ’ ಎನ್ನುವದು ಹಿರಿಯರ ಆಕ್ಷೇಪ. ಆಟದ ಅಂಗಡಿಯಿಂದ ಹೊಸ ಆಟಿಗೆಯನ್ನು ತಂದು, ಆಡಲು ಪುಟ್ಟ ಬಾಲನ ಕೈಯಲ್ಲಿ ಕೊಡದಿದ್ದರೆ, ಆ ಬಾಲನಿಗೆ ಸಿಟ್ಟು ಬರುವದಿಲ್ಲವೆ? ನನಗೂ ಹಾಗೆಯೇ ಆಗುತ್ತಿತ್ತು. ಅಂತೂ ನನ್ನ ಪುಟ್ಟ ಆಟದ ಗೊಂಬೆ ಬೆಳೆದು ನನ್ನ ಕೈಗೆ ಆಗೊಮ್ಮೆ ಈಗೊಮ್ಮೆ ಬರಲಾರಂಭಿಸಿತು. ಕೊನೆ ಕೊನೆಗಂತೂ, ನನ್ನ ಅರ್ಧಾಂಗಿನಿಯು, ‘ನೀನೂ ಸ್ವಲ್ಪ ಎತ್ತಿಗೋಳೋ; ನಾ ಒಬ್ಬಾಕೀನs ಎಷ್ಟಂತ ಹಿಡೀಲಿ’, ಎಂದು ನನ್ನನ್ನು ಬೈಯತೊಡಗಿದಳು. ಎಂಥಾ ಪರಿವರ್ತನೆ!

appanaguvudendare

ಪತ್ನಿ ವನಮಾಲಾ ಅವರೊಂದಿಗೆ

ನನಗೋ ಇದು ಖುಶಿಯ ಕರ್ತವ್ಯ. ಕುವೆಂಪುರವರು ಹೇಳಿಲ್ಲವೆ?

‘ತೇಜಸ್ವಿ, ನೀನು ಎರಡು ವರ್ಷದ ಮಗು; ನಾನು ಎರಡು ವರ್ಷದ ತಂದೆ!’

ನಾನೂ ಸಹ ಮಗುವಿನೊಡನೆಯೇ ಬೆಳೆಯತೊಡಗಿದ್ದೆ. ಅದರೊಡನೆ ಆಡುವುದು, ಓಡುವುದು, ಸಿಕ್ಕಲ್ಲೆಲ್ಲಾ ಗೀಚುವುದು, ಸಿಕ್ಕದ್ದನ್ನೆಲ್ಲಾ ಹರವುವುದು ಇವು ನಮ್ಮ ಪ್ರೀತಿಯ  ಆಟಗಳಾಗಿದ್ದವು. ನನ್ನ ತಂದೆಗೆ ಇದೆಲ್ಲಾ ಬೇಜವಾಬುದಾರಿ ವರ್ತನೆಯಂತೆ ಕಾಣಿಸುತಿತ್ತು! ನನ್ನ ಅರ್ಧಾಂಗಿನಿಯಂತೂ ನನ್ನೊಬ್ಬನನ್ನೇ ಬಯ್ಯುತ್ತಿದ್ದಳು : ‘ಆ ಕೂಸಿಗೆ ಬುದ್ಧಿ ಇಲ್ಲಾ ಅಂದರ, ನಿನಗೂ ಬುದ್ಧಿ ಇಲ್ಲೇನು?’  ನನಗ ಬುದ್ಧಿ ಇಲ್ಲ ಅನ್ನೋದು ಅವಳಿಗೆ ಈಗಷ್ಟೇ ಗೊತ್ತಾಗಿತ್ತು! ಮಗುವಿಗೆ ಮಾತ್ರ ಅವಳಿಂದ ಸರ್ವಸೇವೆ ದೊರೆಯುತ್ತಿತ್ತು.

‘ಆಡಿ ಬಾ, ನನ ಕಂದ ಅಂಗಾಲು ತೊಳೆದೇನು’ ಎನ್ನುವ ಅವಳು, ನನ್ನನ್ನು ಕಣ್ಣೆತ್ತಿಯೂ ನೋಡುತ್ತಿರಲಿಲ್ಲ. ‘ಬಂದದ್ದೆಲ್ಲಾ ಬರಲಿ, ಗೋವಿಂದನ ದಯೆಯೊಂದಿರಲಿ’ ಎಂದು ನಾನೂ ಸಮಾಧಾನದಿಂದಲೇ ಇದ್ದೆ. ಮಗಳು ದೊಡ್ಡವಳಾದಂತೆ, ಅವಳ ಆಟಪಾಟ ವಿಸ್ತಾರವಾದವು. ಅವಳು ನಾಲ್ಕು ವರ್ಷದವಳಿದ್ದಾಗ. ರಸ್ತೆ ಬದಿಯ ಒಂದು ನಾಯಿಕುನ್ನಿಯನ್ನು ಹಿಡಿದುಕೊಂಡು ಬಂದಳು. ಆ ಕುನ್ನಿಗೆ ಗೋಣೀಚೀಲದಿಂದ ಮೆತ್ತೆಯನ್ನು ಮಾಡಿಕೊಡುವುದು ನನ್ನ ಕರ್ತವ್ಯವಾಯಿತು, ಅದರ ಊಟೋಪಚಾರ ನನ್ನ ಮಗಳದೇ ಜವಾಬುದಾರಿ. ನನ್ನ ಹೆಂಡತಿಯಿಂದ ಬೈಸಿಕೊಳ್ಳುತ್ತಲೇ, ಆ ಕುನ್ನಿಯ ಪರಿಚಾರಿಕೆಯನ್ನು ಮಾಡಿದೆ.

ನಾನು ಚಿಕ್ಕವನಿದ್ದಾಗ, ನನಗೆ ತಂದೆಯೊಂದಿಗೆ ಸಲುಗೆ ಇರಲಿಲ್ಲ. (ಆ ಮೇಲೆಯೂ ಇರಲಿಲ್ಲ)  ಆ ಕೊರತೆಯನ್ನು ಈ ರೀತಿಯಾಗಿ ನಾನು ತುಂಬಿಕೊಳ್ಳುತ್ತಿರಬಹುದು ಎಂದು ನನಗೆ ಭಾಸವಾಗುತ್ತದೆ. ನನ್ನ ತಂದೆ ನೋಡಲು ಹೀರೋ ಇದ್ದಂತೆ ಇದ್ದರು. ಅವರ ಸ್ವಭಾವವೂ ಸಹ ಉದಾರವಾದದ್ದೇ. ತಮ್ಮ ಮಕ್ಕಳನ್ನು ಅವರೆಂದೂ ಬಯ್ಯಲಿಲ್ಲ ಅಥವಾ ಹೊಡೆಯಲಿಲ್ಲ. ಆದರೆ ನಮ್ಮ ತಾಯಿ ಅವರ ಬಗೆಗೆ ನಮ್ಮಲ್ಲಿ ಸಿಕ್ಕಾಪಟ್ಟೆ ಭಯಭಕ್ತಿಯನ್ನು ತುಂಬಿಬಿಟ್ಟಿದ್ದಳು. ಇದು ಆ ಕಾಲದಲ್ಲಿ ಸಹಜವಾದ ಸಂಗತಿಯಾಗಿತ್ತು. ಹೀಗಾಗಿ ನನ್ನ ಪಾಲಿಗೆ ನಮ್ಮ ತಂದೆ ‘ದೂರಶಿಖರದಲ್ಲಿ ಇರುವ ಸುಂದರಾಂಗ ಜಾಣಾ’.

ದೊಡ್ಡವರಿಗೆ ವಿಧೇಯವಾಗಿರುವುದು ನನ್ನ ವ್ಯಕ್ತಿತ್ವದ ಭಾಗವಾಗಿತ್ತು. ಸಹಜವಾಗಿಯೇ, ಹಿರಿಯರೆಲ್ಲರೂ ನನ್ನ ಈ ಗುಣವನ್ನು ತುಂಬಾ ಮೆಚ್ಚಿಕೊಳ್ಳುತ್ತಿದ್ದರು. ನನ್ನ ಹದಿಹರೆಯದ ಕೊನೆಯ ಭಾಗದಲ್ಲಿ ನಮ್ಮ ತಂದೆಯನ್ನು ನೋಡುವ ನನ್ನ ದೃಷ್ಟಿ ಬದಲಾಯಿತು. ನಾನು, ನನ್ನ ತಮ್ಮ ಅವರನ್ನು ‘ಗಡವಾ ಕೋತಿ’ ಎನ್ನುವ ಸಂಕೇತನಾಮದಿಂದ ಕರೆಯಲು ಪ್ರಾರಂಭಿಸಿದೆವು. ಕನ್ನಡದ ಹಾಸ್ಯಪಿತಾಮಹ ರಾ.ಶಿ. ಇವರು ಈ ಸಂಕೇತನಾಮಕ್ಕೆ ಪ್ರೇರಣೆಯಾಗಿದ್ದರು.

ನಮ್ಮ ತಾಯಿಯ ಪ್ರಭಾವ ನನ್ನ ಮೇಲೆ ವಿಪರೀತವಾಗಿದೆ. ನನ್ನಲ್ಲಿ, ನನ್ನ ಬೆನ್ನ ಮೇಲೆ ಹುಟ್ಟಿದವರಲ್ಲಿ ಸಾಹಿತ್ಯಪ್ರೀತಿಯನ್ನು ತುಂಬಿದವಳೇ ಅವಳು. ತನ್ನ ತಾರುಣ್ಯದಲ್ಲಿ ಮಾನಸಿಕ ವೇದನೆ, ಆರ್ಥಿಕ ಸಂಕಷ್ಟಗಳನ್ನು ಪಟ್ಟವಳು ಅವಳು; ಆದರೂ ಸಹ ಅವಳಲ್ಲಿ ಸ್ವಪ್ರತಿಷ್ಠಿಕೆ ಇತ್ತು. ಇದು ನನ್ನಲ್ಲಿ ವಿರುದ್ಧ ಪರಿಣಾಮವನ್ನು ಉಂಟುಮಾಡಿತು. ನಾನು ವ್ಯಕ್ತಿತ್ವಹೀನನಾಗಿ ಇರಲು ಇಷ್ಟಪಟ್ಟೆ.

appanaguvudendare

ಮೊಮ್ಮಕ್ಕಳೊಂದಿಗೆ

ಇನ್ನು ನನ್ನ ಅಜ್ಜ ಅಂದರೆ ತಾಯಿಯ ತಂದೆ; ನನ್ನನ್ನು ಹಾಳು ಮಾಡಿದವರಲ್ಲಿ ಇವನದೂ ಮಹತ್ವದ ಪಾತ್ರವಿದೆ. ಇವನು ಗಾಂಧೀಜಿಯ ಅನುಚರ. ನನಗೂ ಸಹ ಯಾವಾಗಲೂ, ‘Be good, do good’ ಎಂದು ಬೋಧಿಸುತ್ತಿದ್ದ. ಅವನ ಉಪದೇಶವನ್ನು ಮನಸಾ ಪಾಲಿಸಿದ ನಾನು ಹಾಳಾಗಿ ಹೋದೆ!

‘ಆಟದ ಗೊಂಬಿ ನಿಜವೆಂದು ನಂಬಿ, ಮಗ್ಗಲಲಿ ಮಲಗಿಸಿಕೊಂಡ ದಿನವೇಸೊ                                                              (ಬೇಂದ್ರೆ) ಮಗಳು ಏಳು ವರುಷದವಳಾದ ಮೇಲೆ, ಅವಳಿಗೆ ಆಟದ ಗೊಂಬಿಗಳಿಂದ ಬೇಜಾರಾಗತೊಡಗಿತು. ಅವಳೇ ಇದೀಗ ನಮಗೆ ವರಾತ ಹಚ್ಚಿದಳು: ‘ಅಪ್ಪಾ, ಅಮ್ಮಾ, ನನಗೊಬ್ಬ ತಂಗಿ ಬೇಕು; ದೇವರಿಗೆ ಬೇಡಿಕೊಳ್ರಿ.’ ಸರಿ, ಮಗಳ ಮಾತನ್ನು ಮೀರುವುದುಂಟೆ? ನಾವು ಬೇಡಿಕೊಂಡೆವು. ನಮ್ಮ ಮಗಳಿಗೆ ತಂಗಿಯೊಬ್ಬಳು ದೊರೆತಳು! ಮೊದಲನೆಯ ಮಗಳ ಶಾಲೆಯ ಚಟುವಟಿಕೆಗಳು ಮತ್ತು ಎರಡನೆಯ ಮಗಳ ಬಾಲ್ಯದ ಚಟುವಟಿಕೆಗಳು ನಮ್ಮಲ್ಲಿ ಸಂತಸವನ್ನೇ ತುಂಬುತ್ತಿದ್ದವು. ನನ್ನ ತಂದೆತಾಯಿಯ ಜೊತೆಗೆ ನನಗಿದ್ದ ವಿಧೇಯ ವರ್ತನೆಯಿಂದ ನನಗೆ ಬೇಜಾರಾಗಿತ್ತು. ನನ್ನ ಮಕ್ಕಳ ಜೊತೆಗೆ ನನಗೆ ಅಂತಹ ವರ್ತನೆ ಬೇಡ; ನಮ್ಮಲ್ಲಿ ಸಮಾನತೆ ಇರಲಿ ಎನ್ನುವ ವಿಚಾರ ನನ್ನಲ್ಲಿತ್ತು. ಹೀಗಾಗಿ ನನ್ನ ಮಕ್ಕಳು ನನ್ನ ಜೊತೆಗೆ ಸಲಿಗೆಯಿಂದಲೇ ಇದ್ದರು. ಎಲ್ಲ ಅಪ್ಪಂದಿರೂ ತಮ್ಮ ಹೆಣ್ಣುಮಕ್ಕಳಿಗೆ ವಿಶೇಷ ಪ್ರೀತಿಯನ್ನು ತೋರಿಸುತ್ತಾರೆ. ಆದರೂ ಸಹ ಅವರಿಗೆ ತಾಯಿಯ ಜೊತೆಗೆ ಜಾಸ್ತಿ ಒಡನಾಟ ಇರುತ್ತಿತ್ತು. ಈಗಲೂ ಸಹ ತಮ್ಮ ತಾಯಿಗೆ ಅವರು ತುಂಬ ಹತ್ತಿರವಾಗಿದ್ದಾರೆ.

ಇದನ್ನೂ ಓದಿ : Girl Child; ಅಪ್ಪನಾಗುವುದೆಂದರೆ: ಮೈಗಂಟಿದ ಚರ್ಮದಂತಹಾ ಕರ್ಮ ಫಲ

ನಾನು ಪಿ.ಯು.ಸಿ. ಕಲಿಯುತ್ತಿರುವಾಗ, ನಾನು ಡಾಕ್ಟರ ಆಗಬೇಕೆನ್ನುವುದು ನನ್ನ ತಂದೆತಾಯಿಯರ ಬಯಕೆ ಆಗಿತ್ತು. ಅದ್ಯಾವಾಗಲೋ ಅದನ್ನು ಅವರು ಬದಲಾಯಿಸಿದ್ದರು. ಈ ವಿಷಯ ನನಗೆ ಗೊತ್ತಿರಲಿಲ್ಲ. ನಮ್ಮ ಮನೆಗೆ ಒಂದು ದಿನ ನನ್ನ ಕಾಕಾ ಒಬ್ಬರು ಬಂದಿದ್ದರು. ಎಲ್ಲ ಹಿರಿಯರಂತೆ ಇವರೂ ಸಹ ನನ್ನನ್ನು ಪ್ರಶ್ನಿಸಿದರು : ‘ಏನಪಾ, ಮುಂದ ಏನ ಆಗಾಂವ ಇದ್ದೀ?’ ನಾನು ಉತ್ತರಿಸಿದೆ: ‘ಕಾಕಾ, ಮುಂದ ನಾ ಡಾಕ್ಟರ ಆಗತೇನ್ರಿ.’ ನಮ್ಮಪ್ಪ ನಡುವೆ ಬಾಯಿ ಹಾಕಿದರು : ‘ನೋ, ನೋ! ಇಂವಾ ಮುಂದ ಎಂಜಿನಿಯರ ಆಗ್ತಾನ. ನಾವು ‘ಡಾಕ್ಟರ’ ಅಂತ ಮಾತಾಡೋದ ಕೇಳಿ, ಹಂಗ ತಿಳಕೊಂಡಾನ!’ ನಾನು ಮೂಕಬಸವನಂತೆ ಗೋಣು ಹಾಕಿದೆ.

ನನ್ನ ಮದುವೆಯ ವಿಷಯದಲ್ಲೂ ಸಹ ನನ್ನ ಅವ್ವನದೇ ಕೊನೆಯ ನಿರ್ಣಯ. ಬಹುಶಃ ನನ್ನ ತಾಯಿಗೆ ಒಂದುನೂರು ಕನ್ಯೆಯರನ್ನು ನೋಡಿ, ಶತಕ ಹೊಡೆಯುವ ಮಹತ್ವಾಕಾಂಕ್ಷೆ ಇತ್ತೇನೊ? ಮದುವೆಗಾಗಿ ನಾನು ಮನದಲ್ಲಿ ಕೊರಗುತ್ತಲೇ ಇದ್ದರೆ, ನನ್ನ ಅವ್ವ ತನ್ನ ‘ಬಲಿ’ಗಳನ್ನು ಎಣಿಸುತ್ತ ಕಾಲ ಕಳೆಯುತ್ತಿದ್ದಳು. ಏನೇ ಆದರೂ ಒಳ್ಳೆಯದಕ್ಕೇ ಆಗುತ್ತದೆ ಎನ್ನುತ್ತಾರಲ್ಲ, ಹಾಗೆ ಆಯಿತು. ನನಗೆ ಹೊಂದಿಕೆಯಾಗುವ ಹುಡುಗಿಯೊಬ್ಬಳು ನನಗೆ ಸಿಕ್ಕಳು. ನನ್ನ ಬಾಳು ಸುಖದಿಂದ ಸಾಗುತ್ತಲಿದೆ.

ಬದಲಾದ ಕಾಲಕ್ಕೆ ತಕ್ಕಂತೆ, ಇಂತಹ ನಿರ್ಧಾರಗಳನ್ನು ನಾನು ನನ್ನ ಮಕ್ಕಳ ಮೇಲೆ ಹೇರಲಿಲ್ಲ. ಅವರು ತಮಗೆ ಇಷ್ಟವಾದ ವಿಷಯಗಳನ್ನು ಆರಿಸಿಕೊಂಡು, ಪದವಿಯನ್ನು ಪಡೆದು, ಜೀವನದಲ್ಲಿ ಪ್ರಗತಿಯನ್ನು ಸಾಧಿಸಿದ್ದಾರೆ. ನಾನು ಅವರಿಗೆ ಮೊದಲೇ ಹೇಳಿ ಬಿಟ್ಟಿದ್ದೆ: ‘ನಿಮಗ ಯಾವ ಹುಡುಗ ಸೇರತಾನೋ, ಅವನ ಜೋಡೀನ ನಿಮ್ಮ ಮದುವಿ ಮಾಡ್ತೇನಿ. ಅವನ ಜಾತಿ, ಧರ್ಮ, ಅಂತಸ್ತು ಯಾವುದೂ ನನಗ ಬೇಕಾಗಿಲ್ಲ.’

ಕಾಲಕ್ಕೆ ತಕ್ಕಂತೆ ನಡೆಯಲೇ ಬೇಕರೀ. ಮಕ್ಕಳೂ ಸಹ ತಮಗೆ ಬೇಕಾದವರನ್ನ ಆರಿಸಿಕೊಂಡು ಸುಖವಾಗಿ ಇದ್ದಾರ. ‘ಬಹಾದ್ದೂರ ಗಂಡು’ ಚಿತ್ರದಲ್ಲಿ ರಾಜಕುಮಾರರ ಹಾಡೊಂದು ಹೀಗಿದೆ:

‘ಮುತ್ತಿನಂಥಾ ಮಾತೊಂದು ಗೊತ್ತೇನಮ್ಮಾ, ನಿನಗೆ ಗೊತ್ತೇನಮ್ಮಾ, ತಾಳಕ್ಕೆ ತಕ್ಕಂತೆ ಕುಣಿಯಬೇಕಮ್ಮಾ, ನೀನು ಕಾಲಕ್ಕೆ ತಕ್ಕಂತೆ ಮಣಿಯಬೇಕಮ್ಮಾ!’

ನಾನೂ ಸಹ ಕಾಲದ ಜೊತೆಗೆ ಹೆಜ್ಜೆ ಹಾಕಿದೆ. ನನ್ನ ಕಾಲಕ್ಕೂ ಈಗಿನ ಕಾಲಕ್ಕೂ ಭಾಳ ವ್ಯತ್ಯಾಸ. ನನ್ನ ಕಾಲದಲ್ಲಿ ತಾಂತ್ರಿಕ ಸೌಲಭ್ಯಗಳು ಕಡಿಮೆ ಇದ್ದವು. ಈಗ ಹುಟ್ಟಿದ ಕೂಸುಗಳ ಕೈಯಾಗ ಮೊಬೈಲ್ ಬಂದಾವ. ನಮ್ಮ ಕಾಲದಾಗ ಸಾಹಿತ್ಯ, ಸಿನೆಮಾ ನೀತಿಬೋಧಕ ಆಗಿರತಿದ್ದವು. ಈಗಲಾದರೋ, ಹೊಡಿ, ಬಡಿ, ಕುಡಿ, ಕುಣಿ ತರಹದ ಸಿನೆಮಾ ಹಾಗು ವಿಡಿಯೋಗಳ ಹಾರಾಟ ನಡದದ. ನನ್ನ ಮಕ್ಕಳು ಈ ಮಧ್ಯಂತರದ ಅವಧಿಯಲ್ಲಿ ಹುಟ್ಟಿ, ಬೆಳೆದವರು. ಹೀಗಾಗಿ ಅವರ ಮೇಲೆ ಇಂತಹ ಅನೈತಿಕ, ಸಮಾಜವಿರೋಧೀ ವಾತಾವರಣದ ಪ್ರಭಾವ ಆಗದಂತೆ ನೋಡಿಕೊಳ್ಳಲು ನಮಗೆ ಸಾಧ್ಯವಾಯಿತು. ಆದರೆ, ಅವರ ಮಕ್ಕಳ ಮೇಲೆ?

ಕಾಲಪಕ್ಷಿ ಹಾರುತ್ತಲೇ ಇದೆ. ನಮ್ಮ ತಂದೆ ತಾಯಿ ಭೂತಕಾಲಕ್ಕೆ ಸೇರಿ ಹೋದರು; ನಾವು ವರ್ತಮಾನದಲ್ಲಿ ಇದ್ದೇವೆ. ನಮ್ಮ ಮಕ್ಕಳೇ ನಮ್ಮ ಭವಿಷ್ಯ. ವರಕವಿ ಬೇಂದ್ರೆಯವರ ಕವನದ ನುಡಿಯೊಂದರಲ್ಲಿ ನನಗೆ ಅದಮ್ಯ ವಿಶ್ವಾಸವಿದೆ:

‘ಯುಗ-ಯುಗಗಳ ಹಣೆಬರಹವ ಒರಸಿ ಮನ್ವಂತರಗಳ ಭಾಗ್ಯವ ತೆರೆಸಿ ರೆಕ್ಕೆಯ ಬೀಸುತ ಚೇತನಗೊಳಿಸಿ ಹೊಸಗಾಲದ ಹಸುಮಕ್ಕಳ ಹರಸಿ ಹಕ್ಕಿ ಹಾರುತಿದೆ ನೋಡಿದಿರಾ?’

 ನಾವು ಹೊಸ ಕಾಲವನ್ನು ವಿಶ್ವಾಸದಿಂದ ಸ್ವಾಗತಿಸೋಣ!

 

Follow us on

Related Stories

Most Read Stories

Click on your DTH Provider to Add TV9 Kannada