Adoption; ಅಪ್ಪನಾಗುವುದೆಂದರೆ: ಇದರಾಗ ಅಂಥಾ ದೊಡ್ಡಿಸ್ತನಾ ಇಲ್ಲರೀ, ರಗಡ ಮಂದಿಯೊಳಗ ನಾವೂ ಒಬ್ರು…

Casteism : ‘ಜನ ದಿನದಿನಕ್ಕ ವಿಚಿತ್ರನ ಯಾವಾಗಲೂ ಇಂಥಾ ವಿಷಯಕ್ಕ. ನನ್ನ ಹೆಂಡತಿಯ ಹಳೇ ಕೊಲೀಗ್ ಒಬ್ಬ ತನ್ನ ಗೆಳ್ಯಾರನ್ನ ಮನೀಗೆ ಕರ್ಕೊಂಡು ಬಂದ. ಅವರಿಗೂ ಕೂಸಿನ್ನ ಅಡಾಪ್ಟ್ ಮಾಡ್ಕೊಳ್ಳೂ ಆಲೋಚನಾ ಇತ್ತು. ಅವರ ಕೇಳಿದ ಪ್ರಶ್ನಿ ಭಾರಿ ಮಜಾ ಇತ್ತು, ‘ಸರs ಆ ಸಂಸ್ಥಾದಾವರು ನಮ್ಮ ಜಾತೀ ಕೂಸಿನ್ನ ಕೊಡ್ತಾರೋ ಹೆಂಗ?’ ನಂಗ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ.‘ ಉಮೇಶ ದೇಸಾಯಿ

Adoption; ಅಪ್ಪನಾಗುವುದೆಂದರೆ: ಇದರಾಗ ಅಂಥಾ ದೊಡ್ಡಿಸ್ತನಾ ಇಲ್ಲರೀ, ರಗಡ ಮಂದಿಯೊಳಗ ನಾವೂ ಒಬ್ರು...
ಉಮೇಶ ದೇಸಾಯಿ
Follow us
ಶ್ರೀದೇವಿ ಕಳಸದ
|

Updated on:Feb 21, 2021 | 4:34 PM

ಪ್ರಿಯ ಅಪ್ಪಂದಿರೇ, ಎರಡು ತಲೆಮಾರುಗಳ ಮಧ್ಯೆ ನೀವಿದ್ದೀರಿ. ಬೆನ್ನ ಹಿಂದೆ ನಿಮ್ಮ ಅಪ್ಪ-ಅಮ್ಮ, ಕಣ್ಣ ಮುಂದೆ ನಿಮ್ಮ ಮಕ್ಕಳು-ಕುಟುಂಬ. ನೀವು ಸಾಗಿಬಂದ, ಸಾಗಿಬರುತ್ತಿರುವ ಹಾದಿಯಲ್ಲಿ ಯಾವುದೇ ನೆನಪುಗಳು ಕೈಮಾಡಿ ನಿಲ್ಲಿಸಬಹುದು. ವಾಸ್ತವ ಸಂಗತಿಗಳು ಕಾಲಿಗೆ ಚಕ್ರ ಕಟ್ಟಲು ನೋಡಬಹುದು. ಈ ಎರಡರ ಮಧ್ಯೆ ಹೃದಯ-ಮೆದುಳು ಗುದ್ದಾಟಕ್ಕೆ ಬಿದ್ದಿರಬಹುದು, ಬಿದ್ದರೂ ನಾವು ನಡೆದಿದ್ದೇ ಹಾದಿ ಎಂದೂ ಸಾಗುತ್ತಿರಲೂಬಹುದು. ಹೀಗೆ ನೀವು ಸಾಕಷ್ಟು ವಿಧದಲ್ಲಿ ಆಂತರಿಕವಾಗಿ ಬೆಳೆದಿದ್ದೀರಿ, ಬೆಳೆಯುತ್ತಲೂ ಇದ್ದೀರಿ. ಹಾಗಿದ್ದರೆ ಅಪ್ಪನಾಗುತ್ತಿದ್ದಂತೆ ನಿಮ್ಮೊಳಗಿನ ನೀವು ರೂಪಾಂತರಕ್ಕೆ ಒಳಗಾದಿರೇ? ಅಪ್ಪನಾಗುವುದೆಂದರೆ ಅನುಭವವೇ, ಅವಕಾಶವೇ, ಆದರ್ಶವೇ, ಅನಿವಾರ್ಯವೇ, ಜವಾಬ್ದಾರಿಯೇ, ಸಹಜ ಪ್ರಕ್ರಿಯೆಯೆ ಅಥವಾ ಇದ್ಯಾವುದೂ ಅಲ್ಲವಾಗಿದ್ದರೆ ಇನ್ನೂ ಏನೇನು? ಒಮ್ಮೆ ಹಿಂತಿರುಗಿ ನೋಡಬಹುದೆ ಎಂದು ಕೆಲ ಅಪ್ಪಂದಿರಿಗೆ ‘ಟಿವಿ9 ಕನ್ನಡ ಡಿಜಿಟಲ್’ ಕೇಳಿತು. ಇದೋ ಹೊಸ ಸರಣಿ ‘ಅಪ್ಪನಾಗುವುದೆಂದರೆ’ ಇಂದಿನಿಂದ ಪ್ರಾರಂಭ.

ನಿಮಗೂ ಈ ಸರಣಿಯಲ್ಲಿ ಪಾಲ್ಗೊಳ್ಳಬೇಕು ಎನ್ನಿಸಿದರೆ ದಯವಿಟ್ಟು ಬರೆಯಿರಿ. ಕನಿಷ್ಟ 1000 ಪದಗಳಿರಲಿ, ನಾಲ್ಕೈದು ಭಾವಚಿತ್ರಗಳು ಮತ್ತು ಸ್ವವಿವರವೂ ಇರಲಿ. ಇ- ಮೇಲ್ tv9kannadadigital@gmail.com ಪರಿಕಲ್ಪನೆ: ಶ್ರೀದೇವಿ ಕಳಸದ

ಪರಿಚಯ : ಹುಬ್ಬಳ್ಳಿಯ ಉಮೇಶ ದೇಸಾಯಿ ಅವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ. ವೃತ್ತಿಯಿಂದ ಅಕೌಂಟಂಟ್​. ಪ್ರವೃತ್ತಿಯಿಂದ ಪ್ರಕಾಶಕರು ಮತ್ತು ಲೇಖಕರು. 

ಈ ಅಪ್ಪ ಆಗೂದಂದ್ರ ರಗಡ ಚಾಲೆಂಜಿನ ಸಂಗತಿ ಅದ. ಉಳದವರದು ಹೆಂಗೋ ಗೊತ್ತಿಲ್ಲ ನನ್ನಂಥ ದತ್ತು ಅಪ್ಪಂದಿರ ಕಥಿ ಬ್ಯಾರೇನ ಇರತದ. ಈ ಪಟ್ಟ ನಾನು ಬೇಡಿ ಬಯಸಿ ಪಡೆದಿದ್ದು. ಒಂದಿನಿತೂ ಪಶ್ಚಾತ್ತಾಪ ಇಲ್ಲ ಆ ಮಾತು ಬ್ಯಾರೆ. ಆದರ ಒಂದು ನಡದಾರಿಯೊಳಗ ನಿಂತು ಅವಲೋಕನಾ ಮಾಡಿದರ ಯೇ ವೋ ಮಂಜಿಲ ನಂಹೀ ಅಂತ ಅನಸತದಲ್ಲ ಅದು ಬಹಳ ವಿಚಿತ್ರ ತಳಮಳ ತರತದ.

ನನ್ನಪ್ಪನ ಜೋಡಿ ನಂದೇನು ಅಂಥಾ ದೋಸ್ತಿ ಇರಲಿಲ್ಲ. ಒಂದು ಕೊರಕಲು ನಮ್ಮಿಬ್ಬರ ನಡುವ ಯಾವಾಗೂ ಇತ್ತು ಅಂತ ಅನಸತದ. ಗೊತ್ತಿಲ್ಲ ಇಳಿವಯಸ್ಸಿನ್ಯಾಗ ಅಚಾನಕ್ಕಾಗಿ ನಾ ಬಂದಾಗ ಅವ ಸ್ವಲ್ಪ ಕಕ್ಕಾಬಿಕ್ಕಿಯಾಗಿದ್ದಿರಬಹುದು. ಆಮ್ಯಾಲೆ ಈ ಕೊರಕಲ ದಾಟುವ ಪ್ರಯತ್ನ ಇಬ್ಬರೂ ಮಾಡಲಿಲ್ಲ. ಮೂಲತಃ ಅವನೊಬ್ಬ ಗಾಂಧಿವಾದಿಯಾಗಿದ್ದ. ಸರ್ಕಾರಿ ಕೆಲಸಕ್ಕ ಲಂಚಾಗಿಂಚಾ ಕೊಡೂದಂದ್ರ ಅವಗ ಆಗಿಬರ್ತಿರಲಿಲ್ಲ. ಎಂಪ್ಲಾಯಮೆಂಟ್ ಎಕ್ಸಚೇಂಜ್​ದೊಳಗ ನನ್ನ ಫೈಲು ಮ್ಯಾಲ ಇಡಲಿಕ್ಕೆ ಅಲ್ಲಿಯ ಕ್ಲರ್ಕ್​ ಒಬ್ಬಾವ ಮೂರುನೂರು ರೂಪಾಯಿ ಕೇಳಿದ. ಅಲ್ಲಿಯ ಆಫೀಸರ ಒಬ್ಬರು ಪರಿಚಯದವರ ಇದ್ರು. ಅವರು ನಾ ಏನೂ ಕೇಳೂದಿಲ್ಲ ಆದರ ಅವಗ ನಾ ರೊಕ್ಕ ತಗೋಬೇಡ ಅಂತ ಹೇಳಲಿಕ್ಕೆ ಆಗೂದಿಲ್ಲ ಅಂತ ಅಲವತ್ತುಗೊಂಡರು. ನಮ್ಮಪ್ಪನ ಮೈಯಾಗ ಗಾಂಧಿ ಆವಾಹನಾ ಆದ. ನಾ ಸತ್ತರೂ ರೊಕ್ಕ ಕೊಡುವುದಿಲ್ಲ ಅಂತ ಹಟ. ಆಗಿನ ವಯಸ್ಸಿನ ತಿಳಿವಳಿಕಿ ಪ್ರಕಾರ ಇದು ನನಗ ಲುಕ್ಸಾನು. ಇಂಥಾ ಸಾಕಷ್ಟು ಕೊರಕಲು ನಮ್ಮ ನಡುವ ಇರ್ತಾನ ಇದ್ರು. ಇದು ಒಂದು ಉದಾಹರಣಿ ಅಷ್ಟ. ಹಿಂಗಾಗಿ ನನಗೆಂದೂ ಅವನ ಮಾತು ಕೇಳೂ ಮನಸಾಗಲಿಲ್ಲ. ನನ್ನ ಮಾತು ಇವ ಕೇಳೂದಿಲ್ಲ ವಾಂಡಾ ಇದ್ದಾನ ಅಂತ ನಮ್ಮಪ್ಪ ಬಳಗದವರ ಮುಂದ ಹೇಳಿ ಅಳತಿದ್ದ. ಅಂತೂ ಇಂತೂ ಸಾಯೂ ಕಾಲದಾಗೂ ಸೇತುವೆ ಕಟ್ಟಲಿಕ್ಕಿ ಅವನೂ ಪ್ರಯತ್ನ ಪಡಲಿಲ್ಲ ನಾನೂ ಕೂಡ. ಇದು ಸರಿನೋ ತಪ್ಪೋ ಗೊತ್ತಿಲ್ಲ ಯಾಕಂದ್ರ ಈಗ ಅದರ ಬಗ್ಗೆ ಹಳಹಳಿ ಮಾಡಕೊಂಡರೂ ಫಾಯದಾ ಇಲ್ಲ. ಆದರ ಒಂದು ಅಪರಾಧಿ ಭಾವ ಸ್ಥಾಯಿಯಾಗಿ ಉಳೀತು ನಾ ಇನ್ನಷ್ಟು ಛಲೋ ಮಗಾ ಆಗಬಹುದಿತ್ತೇನೋ! ಈ ಒಂದು ಭಾವ ಇತ್ತು.

ಖರೇ, ಆದರ ಜೀವನ ಪ್ರವಾಹ ಹರೀತಾನ ಇತ್ತು. ಮುಂದ ನನ್ನ ಮದುವಿ ಆತು ಯಾವಾಗ ಹೊಸಾ ಸುದ್ದಿ ಅಂತ ಕಾಡುವ ಹಿರೇಮನಷ್ಯಾರೇನೂ ಇರಲಿಲ್ಲ ಅನ್ನೂದು ಬ್ಯಾರೇ ಮಾತು. ಆದರ ಯಾಕೋ ಎಲ್ಲೋ ಏನೋ ತಪ್ಪತಿತ್ತು. ಡಾಕ್ಟರಗೋಳು ಬದಲಾದರು ಔಷಧ ಬದಲಾದವು ಆದರ ಹಣೆಬರಹ ಬದಲಾಗಲಿಲ್ಲ. ಇಂತಹ ನಿರಾಶಾದಾಗನ ಒಂದು ಹೊಸಾ ವಿಚಾರ ಮೂಡಿತು. ಆದರ ಹೆಂಡತಿಗೆ ಒಪ್ಪಸೂದು ಸುಲಭ ಆಗಿರಲಿಲ್ಲ. ಅದರಾಗ ನಾನು ದತ್ತು ತಗೊಂಡರ ಹೆಣ್ಣು ಕೂಸಿಗೆ ತಗೊಳ್ಳೋದು ಅಂತ ಹಟ ಹಿಡಿದಿದ್ದೆ. ಗೊತ್ತಿಲ್ಲ ಒಂದು ಹುಚ್ಚು ಆದರ್ಶ ಅಂತಿರೋ ಅಥವಾ ಮತ್ತೇನೋ, ನಾ ಠಾಮ ಆಗಿದ್ದೆ. ವಿಷಯನೂ ನಾಜೂಕಿಂದು ಜುಲುಮಿ ಮಾಡುವ ಹಾಗಿರಲಿಲ್ಲ. ಅಕಿ ತವರು ಮನಿ ಕಡೆಯಿಂದ ಬೆಂಬಲ ಸಿಕ್ಕಿರಲಿಲ್ಲ. ನನ್ನ ಬಾವ ಸಹ ಇಷ್ಟುದ್ದ ಪತ್ರ ಬರದರು ನಮ್ಮನ್ನು ಈ ನಿರ್ಧಾರದಿಂದ ಹಿಂದ ಸರಸೂದಕ್ಕಂತ. ಆದರ ನಾ ಹಟ ಹಿಡದೆ. ಕಡೀಕೂ ನಾ ಗೆದ್ದೆ. ಆದರ ನನ್ನ ಹಂಬಲ ಕಡಿಕೂ ಫಲಸುವ ಕಾಲ ಬಂತು. ಮುಖ್ಯವಾಗಿ ನನ್ನ ಹೆಂಡತಿನೂ ನನ್ನ ಯೋಜನಾಕ್ಕ ಬೆಂಬಲ ಕೊಟ್ಳು ಹಂಗಾಗಿ ಆನಿಬಲ ಬಂತು.

appanaguvudendare

ಚೆಂದನೆಯ ಹಟದಲ್ಲಿ ಅರಳಿದ ಈ ಹೂ

ನನಗ ನೆನಪದ ಅವತ್ತು ರವಿವಾರ. ಮುಂಜಾನೆ 10.30ರ ವ್ಯಾಳ್ಯಾ. ಡಿಡಿ ಚಂದನದಾಗ ದತ್ತು ತಗೊಂಡವರ ಸಂದರ್ಶನ ನಡದಿತ್ತು. ನಾವಿಬ್ಬರೂ ಭಾಳ ಆಸಕ್ತಿಯಿಂದ ನೋಡಿದ್ವಿ. ಅವರಿವರಿಂದ ದತ್ತು ತಗೊಂಡವರ ವಿಳಾಸ ಸಿಕ್ಕು ಅವರಿಗೆ ಫೋನ್​ ಮಾಡಿ ಅವರ ಮನಿಗೆ ಹೋಗಿ ಮಾತಾಡಿಸಿ ದತ್ತುತನ ಹೆಂಗಿರಬಹುದು ಅಂತ ಒಂದು ಅಂದಾಜು ಮಾಡಿಕೊಂಡು ಬಂದ್ವಿ. ನಂತರ ಬೆಂಗಳೂರಿನ ಒಂದೆರಡು ದತ್ತು ಸಂಸ್ಥೆಗಳಿಗೆ ಸಂದರ್ಶನ ಕೊಟ್ಟು ಬಂದ್ವಿ. ಸಂಸ್ಥಾ ಕಡಿಯಿಂದ ಆಪ್ತಸಲಹಾಗಾರರೊಬ್ರು ನಮ್ಮ ಮನೀಗೆ ಬಂದು, ಕೂಸಿನ ಆರೈಕಿ, ಬೆಳವಣಿಗಿ, ಭವಿಷ್ಯಕ್ಕ ಬೇಕಾಗೂವಂಥ ಎಲ್ಲಾ ವ್ಯವಸ್ಥಾ, ಪರಿಸರ ಅದನೋ ಇಲ್ಲೋ ಅಂತ ನೋಡಿಕೊಂಡು ಹೋದ್ರು. ಕೊನಿಗೂ ದಿನಾ ಕೂಡಿ ಬಂತು. ಮರದಿನ ಸಂಸ್ಥೆಗೆ ಹೋಗಿ ಒಂದ ತಾಸಿನ ತನಕಾ ಫಾರ್ಮ್ಯಾಲಿಟೀಸ್ ಮುಗಿಸಿ ಹೆಣ್ಣುಕೂಸಿನ್ನ ಕರ್ಕೊಂಬಂದ್ರು. ಹುಟ್ಟಿ ಹನ್ನೆರಡ ದಿನಾ ಆಗಿತ್ತು. ಅದಕ್ಕೊಂದು ಹೆಸರೂ ಇಟ್ಟಿದ್ರು. ಕರದಕೂಡಲೇ ಗುಲಾಬಿ ಕಣ್ಣ ಪಕಳಿ ಅರ್ಧಾಮರ್ಧಾ ತಗದು ಹಗರ್ಕ ನೋಡ್ತು. ಆ ಘಳಿಗಿ ಭಾಳ ಅನಂತ ಆಗಿತ್ತು. ಮಾಡಿಕೊಂಡು ಬಂದ ಟ್ಯಾಕ್ಸಿಯೊಳಗ ಕೂಸಿನ್ನ ಕರ್ಕೊಂಡು ಹೊಂಟ್ವಿ. ಅಕ್ಕನ ಆಶಾದ್ಹಂಗ ಹನಮಂತನಗರದಾಗ ಅಕಿ ಮನಿ ಹತ್ರ ಇದ್ದ ಪಂಚಮುಖಿ ಗಣಪತಿಯ ಎದುರು ಕೂಸಿನ್ನ ಮಲಗಿಸಿ ನಾವೂ ಅಡ್ಡಬಿದ್ದು ಇನ್ನು ಎಲ್ಲ ನಿನ್ನ ಕೈಯಲ್ಲೇ ನೋಡ್ಪಾ ಅಂದು ನಮ್ ಊರು ಹುಬ್ಬಳ್ಳಿಗೆ ಹೊಂಟ್ವಿ.

ಅಪ್ಪ ಅಂತ ಅನಿಸಿಕೊಂಡಾತು! ಜೋಡಿ ಬೆನ್ನಿಗೆ ಬಿದ್ದಿದ್ದು ಜವಾಬ್ದಾರಿ. ನನ್ನ ಹೆಂಡತಿ ಕೆಲಸ ಬಿಡಬೇಕಾತು ಮನಿಯೊಳಗ ಯಾರೂ ಹಿರೇರ ಇರಲಿಲ್ಲ. ಬಳಗದ ಭಾಳಷ್ಟ ಮಂದಿ ಬೆನ್​ ತಟ್ಟಿ ಹುರಿದುಂಬಿಸಿದರು. ಉಳದ ಮಂದಿ ಕೊಂಕ ತಗದ ಮಾತಾಡಿದ್ರು. ನನಗ ನೆನಪದ ಒಮ್ಮೆ ನಮ್ಮ ಕೊಲೀಗ್​ ಒಬ್ಬ ಮನಿಗೆ ಕರದಿದ್ದ. ನಾವು ಮಗಳಿಗೆ ಎತಗೊಂಡು (ಅವಾಗ ಅಕಿಗೆ ಆರು ತಿಂಗಳು) ಹೋಗಿದ್ವಿ. ನಾವು ಹೋದ ಸ್ವಲ್ಪ ಹೊತ್ತಿನ್ಯಾಗ ಅವರ ಮನೀಗೆ ಬೇರೆ ದಂಪತಿ ಬಂದ್ರು. ಧಡಗ್ನ ಅವ ಅವರಿಬ್ಬರಿಗೂ ನಮ್ಮನ್ನ ಪರಿಚಯ ಮಾಡಿಸಿದ ರೀತಿ ಭಾಳ ವಿಚಿತ್ರ ಅನ್ನಿಸ್ತು; ‘ಇವರ ನೋಡ್ರಿ ಮೊನ್ನೆ ನಾ ಹೇಳತಿದ್ದೆನಲ್ಲ ಹೆಣ್ಣಕೂಸಿಗೆ ಅಡಾಪ್ಟ್​ ಮಾಡಕೊಂಡಾರಂತ…’ ಅವರಿಬ್ರೂ ನಮ್ಮನ್ನ ಒಂದ ನಮೂನಿ ಝೂದಾಗ ಇದ್ದ ಪ್ರಾಣಿಗತೇ ನೋಡಲಿಕ್ಕೆ ಸುರು ಮಾಡಿದ್ರು. ಅಲ್ಲೇ ನನ್ನ ಕೊಲೀಗ್​ಗ ಝಾಡಸಬೇಕನ್ನಿಸ್ತು. ಆದರೂ ತಡಕೊಂಡೆ. ಹಂಗಂತ ನಾವು ದತ್ತು ತಗೊಂಡಿದ್ದು ಯಾರ ಮುಂದನೂ ಮುಚ್ಚಿಟ್ಟಿರಲಿಲ್ಲ. ಎಲ್ಲಾ ಕಾನೂನು ಪ್ರಕಾರ ನಡದಿತ್ತು. ನಮ್ಮ ಆಜೂಬಾಜೂ ಮನಿಯವರಂತೂ ಭಾಳ ಖುಷಿಪಟ್ಟಿದ್ರು. ಮಗಳ ಹೆಸರು ಇಡೂವಾಗ, ಅಕಿ ವರ್ಷದ ಹುಟ್ಟಿದ ಹಬ್ಬ ಹಿಂಗ ನಮ್ಮ ಸಂಭ್ರಮದೊಳಗೂ ಒಂದಾಗಿದ್ರು. ನಮ್ಮ ಆ ಕೊಲೀಗ ವರ್ತನಾ ಮಾತ್ರ ದೊಡ್ಡ ಪಾಠ ಕಲಿಸಿತ್ತು. ಇಂಥಾ ಜನರಿಂದ ದೂರ ಇರೂದ ಹೆಂಗ ಮತ್ತ ನಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳೂದ ಹೆಂಗ ಅಂತೆಲ್ಲಾ. ಪಾಠ ಅಂದಮ್ಯಾಲ ದಿನಕ್​ ಒಂದೊಂದ ಇರೂವನ. ಜನ ದಿನದಿನಕ್ಕ ವಿಚಿತ್ರನ ಯಾವಾಗಲೂ ಇಂಥಾ ವಿಷಯಕ್ಕ. ಇನ್ನೊಮ್ಮೆ ನನ್ನ ಹೆಂಡತಿಯ ಹಳೇ ಕೊಲೀಗ್ ಒಬ್ಬ ತನ್ನ ಗೆಳ್ಯಾರನ್ನ ಮನೀಗೆ ಕರ್ಕೊಂಡು ಬಂದ. ಅವರಿಗೂ ಕೂಸಿನ್ನ ಅಡಾಪ್ಟ್ ಮಾಡ್ಕೊಳ್ಳೂ ಆಲೋಚನಾ ಇತ್ತು. ಅವರ ಕೇಳಿದ ಪ್ರಶ್ನಿ ಭಾರಿ ಮಜಾ ಇತ್ತು. ‘ಸರ ಆ ಸಂಸ್ಥಾದಾವರು ನಮ್ಮ ಜಾತೀ ಕೂಸಿನ್ನ ಕೊಡ್ತಾರೋ ಹೆಂಗ?’ ನಂಗ ನಗಬೇಕೋ ಅಳಬೇಕೋ ಗೊತ್ತಾಗಲಿಲ್ಲ.

appanaguvudendare

ನಿನ್ನಂಥ ಅಪ್ಪಾ ಇಲ್ಲಾ!

ಭಾಳ ಮಂದಿ ಗುರುತಿದ್ದವ್ರು ನಮ್ಮ ಕಡೆ ವಿಶೇಷ ರೀತಿಯಿಂದ ನೋಡತಿದ್ರು ನಾವೇನೋ ಒಂದು ಮಹತ್ಕಾರ್ಯ ಮಾಡೇವಿ ನಾವು ಆದರ್ಶವಾದಿಗಳು ಇತ್ಯಾದಿ ಇತ್ಯಾದಿ. ನಾ ಒಂದು ವಿಚಾರ ಅಗದಿ ನಕ್ಕಿ ಮಾಡಿಕೊಂಡೆ ನನ್ನ ಹೆಂಡತಿಗೂ ಅದನ್ನ ಪಟಾಯಿಸಿದೆ. ದತ್ತು ತಗದಕೊಳ್ಳೂದು ಒಂದು ದಾರಿ ಆಗಿತ್ತು ನಮಗ ಅಷ್ಟ. ಅದರಾಗೇನ ಯಾವ ದೊಡ್ಡಿಸ್ತನ ಇಲ್ಲ. ಆದರೂ ರಗಡ ಮಂದಿ ಈ ಹೆಜ್ಜಿ ಇಡಲಿಕ್ಕೆ ಹಿಂಜರೀತಾರ ಖರೆ ಹಂಗಂತ ನಾವು ಇಟ್ವಿ ಅನ್ನೂದು ಅಂಥಾ ವಿಶೇಷ ಏನೂ ಅಲ್ಲ ಅಂತ. ಈ ಎಚ್ಚರಿಕಿ ಆಗೂ ಇತ್ತು ಈಗೂ ಉಳದದ.

ಈ ಪೇರೆಂಟ್​ಹುಡ್​ ನಮ್ಮಿಬ್ಬರಿಗೂ ಹೊಸದು, ಅದರಾಗ ನಾ ಗಡಿಬಿಡಿ ಗಿರಾಕಿ ಸಣ್ಣಸಣ್ಣ ಸಂಗತಿಗಳಿಗೂ ಟೆನ್ಶನ್​ ಮಾಡ್ಕೊಳೋ ಆಸಾಮಿ. ರಾತ್ರಿ ಮಗಳು ಎದ್ದು ಅಳೂವಾಗ ಕೆಲವೊಮ್ಮೆ ನಾನು ಕೆಲವೊಮ್ಮೆ ನನ್ನ ಹೆಂಡತಿ ಹಿಂಗ ಹಾಲು ತಯಾರಿಸಿ ಅದನ್ನ ಒಂದು ಹದಕ್ಕ ಆರಿಸಿ ಬಾಟಲಿಯಲ್ಲಿ ತುಂಬಿ ಕುಡಿಸೂದು, ನಿಪ್ಪಲ್ ತೊಳಿಯೂದು, ದುಬಟಿ ಬದಲಾಯಿಸೂದು ಹಿಂಗ ಕೆಲಸ ಹಂಚಿಕೋಬೇಕಾತು. ಅದರಾಗ ನಮ್ಮ ಮನಿಯೊಳಗ ಯಾರೂ ಸಣ್ಣ ಕೂಸು ಇರಲಿಲ್ಲ. ಹಿಂಗಾಗಿ ನನಗಂತೂ ಇದು ಹೊಚ್ಚಹೊಸಾ ಅನುಭವ. ರಗಡ ರಾತ್ರಿಗೋಳನ್ನ ನಿದ್ದಿ ಮಾಡದ ಕಳೀಬೇಕಾತು. ಹಗರ್ಕ ಈ ಅನುಭವ ಖುಷಿ ಕೊಡಲಿಕ್ಕೆ ಹತ್ತಿತು. ನಾವಿದ್ದದ್ದು ಅಪಾರ್ಟಮೆಂಟ್​ನೊಳಗ. ಸುತ್ತಲಿನ ಮನಿಯವರಿಗೂ ಸುನಿಧಿ, ಹಾಂ! ಇದು ನಾ ಆರಿಸಿದ ಹೆಸರು. ಆಗ ಸುನಿಧಿ ಚೌಹಾಣ ಹಾಡು ಬಹಳ ಸೇರ್ತಿತ್ತು ಆಗ. ಹಿಂಗ ಸುನಿಧಿ ಅಚ್ಛಾದ ಮಗಳಾದಳು.

appanaguvudendare

ಮೈತ್ರಿ ಪ್ರಕಾಶನದ ಪುಸ್ತಕ ಬಿಡುಗಡೆ ಕಾರ್ಯಕ್ರಮ

ಆತಂಕದ ದಿನ ಇರಲೇ ಇಲ್ಲ ಅಂತಲ್ಲ ಸುಮಾರು ದೀಡವರ್ಷದಾಕಿ ಇರಬೇಕು ರಾತ್ರಿ ಜ್ವರ ವಿಪರೀತ ನೆತ್ತಿಗೇರ್ತು. ನಮ್ಮ ಫ್ಲ್ಯಾಟ್​ ಎದರ್ಗೇನ ಇದ್ದ ಡಾಕ್ಟರರ ಬಾಗಲಾನ ಅಪರಾತ್ರಿಯೊಳಗ ಬಾರಿಸಿದೆ. ಬೆಲ್ ‌ಬಂದ ಮಾಡಿ ಮಲಗಿದ್ರು. ಇಡೀರಾತ್ರಿ ಮಗಳಿಗೆ ತೊಡಿಮ್ಯಾಲ ಪಾಳಿ ಪ್ರಕಾರ ಮಲಗಿಸಿಕೊಂಡು ಥಣ್ಣೀರ ಬಟ್ಟಿ ಬದಲಾಯಿಸ್ಕೋತ ಕಾಲ ಕಳದ್ವಿ. ಬೆಳಗಿನ ಐದೂವರಿಯಾಗಿತ್ತು. ಅಕಿಗೆ ಎತಗೊಂಡು ಎದುರಿನ ಓಣಿಯ ಡಾಕ್ಟರ ಮನೀಗೆ ಓಡಿದ್ವಿ. ದೇವರ ದಯಾ ಮಗಳು ಆರಾಮ ಆದಳು.

ಮಗಳು ನರ್ಸರಿ, ಎಲ್​ಕೆಜಿಗೆ ವ್ಯಾನಿನೊಳಗ ಹೋಗುವಾಗಿನ ದೃಶ್ಯಗಳು ಕಣ್ಣಿಗೆ ಕಟ್ಟಿದಹಂಗ ಅವ. ಒಂದಿನಾನೂ ಸಾಲಿಗೆ ಹೋಗೂವಾಗ ಅತ್ತಿದ್ದ ಇಲ್ಲ. ಮುಂದ ನಾವು ಹುಬ್ಬಳ್ಳಿ ಬಿಟ್ಟು ಬೆಂಗಳೂರಿಗೆ ಬಂದಾಗ ಮಗಳಿಗೆ ಒಂದನೇ ಕ್ಲಾಸು. ನೀರಾಗಿನ ಮೀನಗತೆ ಬೆಂಗಳೂರಿಗೆ ಒಗ್ಗಿಕೊಂಡ್ಲು.

ನನ್ನ ತಂದಿಗೆ ಮಗಾ ಆಗಿದ್ದಾಗ ನನ್ನ ವರ್ತನಾ ಹೆಂಗಿತ್ತು, ನಾ ಯಾಕ ರೆಬೆಲ್‌ ಆದೆ? ಅಂತ ಈಗ ಯೋಚಿಸಿದ್ರ ಉತ್ತರ ಬಹಳ ಸರಳ; ಯಾಕೋ ಅಪ್ಪನ ಮಾತು ಮೀರುದ್ರೊಳಗ ಇದ್ದ ಖುಶಿ ಬ್ಯಾರೇನ ಇತ್ತು. ನಮ್ಮಪ್ಪಗ ಅಧ್ಯಾತ್ಮದ ಹಂಬಲ ಭಾಳ ಅಂದರ ಭಾಳ. ಸ್ವಾಮಿ ಚಿನ್ಮಯಾನಂದರು ಮಾತ್ರ ಅಲ್ಲ ಬ್ಯಾರೇ ಬ್ಯಾರೇ ಗುರುಗಳೂ ಇದ್ದರು. ರವಿವಾರ ಸಹ ನಾವು ಹುಬ್ಬಳ್ಳಿ ಕಿಲ್ಲಾದ ದತ್ತಮಂದಿರಕ್ಕ ಹೋಗಿ ಭಜನಿ ಹೇಳಬೇಕಾಗತಿತ್ತು. ಅವಾಗ ಏನೂ ಅನ್ನಿಸ್ತಿರಲಿಲ್ಲ. ಆದ್ರ ಹದಿವಯಸಿಗೆ ಬರ್ತಿದ್ದ ಹಂಗ ಅದು ಮೂರ್ಖತನ ಅನ್ನಿಸಲಿಕ್ಕೆ ಶುರುವಾತು. ಸೋ ಅವಾಗ ಡಿಸೈಡ್ ಮಾಡಿದೆ, ಮಕ್ಕಳಿಗೆ ಎಂದೂ ಜುಲುಮಿ ಮಾಡಬಾರದು ಅಂತ. ಮಗಳ ವಿಷಯದಾಗ ಅದನ್ನ ಪಾಲಿಸಿದ್ದೂ ಹೆಂಡತಿಯ ತೀವ್ರ ವಿರೋಧ ಎದರಿಸೇನ.

appanaguvudendare

ಉಮೇಶ ದೇಸಾಯಿಯವರ ಪುಸ್ತಕಗಳು

ವಯಸ್ಸು ಮಾಗಿತು ಹಂಗ ಮಗಳ ಮ್ಯಾಲೆ ಅಪೇಕ್ಷಾನೂ ಹೆಚ್ಚಾದವು. ಕುಂಕುಮ, ಬಳಿ ಹಾಕೊಂಡರ ಛಂದ ಅಂತ ನನಗನಿಸಿತು ಆದರ ಮಗಳು ನಾ ಯಾಕ ಅನ್ನಾಕಿ. ದೇವರಿಗೆ ಮುಂಜಾನೆ ಸ್ನಾನ ಮಾಡಿ ಕೈ ಮುಗಿ ಅಂತ ನಾನು. ದೇವರು ಮನಸಿನ್ಯಾಗ ಇದ್ದಾನ ಬಿಡು ಅಂತ ಅಕಿ. ಒಂದು ಗ್ಯಾಪ್ ಅದ ನನಗ ನನ್ನ ಮಗಳ ನಡೂವ. ನನಗ ಸೇರುವ ಹಾಡು, ಸಂಗೀತ ಅಕಿಗೆ ಸೇರೂದಿಲ್ಲ. ಅಕಿಗೆ ಟೇಸ್ಟ್​ ಇಲ್ಲ ಅಂತ ನನ್ನ ವಾದ. ಆದರ ಅಕಿ ಈಗಿನ ಪೀಳಿಗಿಯಾಕಿ, ‘ಗ್ರೋ ಅಪ್‌ ಬ್ರೋ…’ ಅಕಿ ನನಗ ಯಾವಾಗಲೂ ಅನ್ನುವ ಮಾತಿದು. ನಾ ಪುಸ್ತಕದ ಹುಳ. ಅಕಿ ಕಾಲೇಜು ಪುಸ್ತಕ ಸಹ ಕೈಯ್ಯಾಗ ಹಿಡೀಲಿಕ್ಕೆ ಬ್ಯಾಸರ ಮಾಡಕೊಳ್ಳಾಕಿ. ಹಿಂಗ ಮಾಡು ಹಿಂಗ ಮಾಡಬ್ಯಾಡ ಅಂತ ಹೇಳುವ ಅಧಿಕಾರ ಇಲ್ಲೇನು ನನಗ ಅಕಿಗೆ ಅಂತ ನಾ ಯಾವಾಗಲೂ ಕೇಳುವ ಪ್ರಶ್ನಿ. ‘ಅಪ್ಪ ನಾ ಹೆಂಗ ಇರಬೇಕು ನಂಗ ಗೊತ್ತದ ನನಗ ಹಿಂಗ ಇರೂದು ಸೇರತದ’ ಅಂತ ಅಕಿ ವಾದ. ಕೆಲವೊಮ್ಮೆ ಈ ವಾದಗೋಳು ತಾರಕಕ್ಕೇರತಾವ. ನನ್ನ ಹೆಂಡತಿ ನಡುವ ಬಂದು ಸಂಭಾಳಿಸತಾಳ.

ಈಗ ಮಗಳಿಗಿ ಇಪ್ಪತ್ತ ವರ್ಷ! ಈಗಿನ ಅಪ್ಪಂದ್ರು ನಾವು ಒಂದು ವಿಚಿತ್ರ ಸಂಕ್ರಮಣದ ಘಟ್ಟದಾಗ ಇದ್ದೀವೇನೋ ಅನ್ನಸ್ತದ. ಹಿಂದ ನಾವು ಪಾಲಿಸಿಕೊಂಡು ಬಂದ ಆಜ್ಞಾಧಾರಕ ಮಗನ ರೋಲ್ ಈಗ ಬ್ಯಾಡ ಅನಿಸಿ, ಏನೋ ಹೊಸಾ ಸಾಧನಾ ಮಾಡೂ ಹಂಬಲದಾಗ ನಮ್ಮ ಮಕ್ಕಳ ವಿಷಯಕ್ಕ ಪರಿಸ್ಥಿತಿ ಕೈಮೀರ್ತದನೋ ಏನೋ ಅಂತ ಹಳಹಳಿ ಆಗ್ತಾನ ಇರ್ತದ. ಅದರಾಗ ಈಗಿನ ಪೀಳಿಗಿಯವರಿಗೆ ಮೊಬೈಲ್​ ಅಂದ್ರ ಭರಪೂರ ಮಾಹಿತಿ ಕೋಶ. ಈ ಹೊಸ ಜಗತ್ತಿನೊಳಗ ಪ್ರಶ್ನಿ, ತರ್ಕ ಇಲ್ಲದ ಅವರು ಏನೂ ಒಪ್ಪಿಕೊಳ್ಳಲಿಕ್ಕೆ ಸಾಧ್ಯನ ಇಲ್ಲ. ಎಲ್ಲಾ ಅಜಬ್ ‌ಅನಸತದ ಖರೇ. ಏನ ಆಗಲೀ ನಾವು ತಿಂದ ನೋವು ನಮ್ಮ ಮಕ್ಕಳು ತಿನಬಾರದು. ಹಂಗಾಗಿ ನಾವು ಹೆಚ್ಚೆಚ್ಚ ಕಾಳಜಿ ಮಾಡಿದ್ದ ಮುಳುವಾಗ್ತದೇನೋ. ಇವರಿಗೆ ಕಷ್ಟದ ದರುಶನ ಮಾಡಸದ ತಪ್ಪಿದೆವೆನೋ ಅನ್ನೂ ಆತಂಕನೂ ಕಾಡತದ. ನಾಳೆ ಸೋಲು ಎದರಾದರ ಇವರು ಏನು ಮಾಡಬಹುದು, ತಮ್ಮನ್ನ ತಾವು ಹೆಂಗ ನಿಭಾಯಿಸಕೋಬಹುದು ಅನ್ನೂ ಆತಂಕ, ದ್ವಂದ್ವ, ಸಂಘರ್ಷ ಯಾವಾಗಲೂ ಮನಸಿನೊಳಗ ನಡೀತಾನ ಇರ್ತದ.

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ಪ್ರೀತಿಯನ್ನು ಆತುಕೊಂಡಿದ್ದಕ್ಕೆ ಇಂದು ನಿನ್ನ ಮುಂದೆ ಹೀಗಿದ್ದೇನೆ

ಇದನ್ನೂ ಓದಿ : ನಾನೆಂಬ ಪರಿಮಳದ ಹಾದಿಯಲಿ: ಮನಸ್ಸು ಅನ್ನೋ ಸ್ಪ್ರಿಂಗಿನ ಮಾಯಾ ಬಹಳ ದೊಡ್ಡದು 

Published On - 4:21 pm, Sun, 21 February 21

ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ