ಕರ್ನಾಟಕದಲ್ಲಿ ಆಪಲ್ ಕೃಷಿ: ಹಿಂದೇನು? ಮುಂದೇನು? ನಿಜಕ್ಕೂ ಲಾಭದಾಯಕವೇ?
Apple Farming In Karnataka: ಹೊಸಕೋಟೆಯ ರೈತರೊಬ್ಬರು ತಮ್ಮ ಜಮೀನಿನಲ್ಲಿ ಆಪಲ್ ಬೆಳೆದ ಸುದ್ದಿ ಯೂಟ್ಯೂಬ್ ಚಾನೆಲ್, ಸುದ್ದಿ ವಾಹಿನಿಗಳಲ್ಲಿ ಬಹಳ ಟ್ರೆಂಡ್ ಆಯ್ತು. ಕಾಶ್ಮೀರಿ ಆಪಲ್ ಅನ್ನು ಬೆಂಗಳೂರಿನಲ್ಲಿ ಬೆಳೆದ ರೈತ ಎಂದೆಲ್ಲ ಸಂಭ್ರಮಿಸಲಾಯ್ತು. ಅಸಲಿಗೆ ಆಪಲ್ ಕೃಷಿ ಕರ್ನಾಟಕಕ್ಕೆ ಬಹಳ ಹಳೆಯದು. ಆದರೆ ಅದು ನಶಿಸಿದ್ದೇಕೆ? ಆಪಲ್ ಕೃಷಿ ನಿಜಕ್ಕೂ ಲಾಭದಾಯಕವೇ? ಇಲ್ಲಿದೆ ಪೂರ್ಣ ಮಾಹಿತಿ.
ಇತ್ತೀಚೆಗಿನ ಕೆಲ ಯೂಟ್ಯೂಬ್ ವಿಡಿಯೋ ಥಂಬ್ನೈಲ್ಗಳಲ್ಲಿ ನೋಡಿಯೇ ಇರುತ್ತೀರಿ, ‘ಆಪಲ್ ಬೆಳೆಯಿರಿ ಎಕರೆಗೆ 20 ಲಕ್ಷ ಗಳಿಸಿ’, ‘ಕಾಶ್ಮೀರದ ಆಪಲ್ ಅನ್ನು ಬಿಸಿಲ ನಾಡಿನಲ್ಲಿ ಬೆಳೆದು ಯಶಸ್ವಿಯಾದ ರೈತ’ ಎಂದೆಲ್ಲ. ಆದರೆ ಇದು ಅರ್ಧ ಸತ್ಯವಷ್ಟೆ. ಶೀಥ ಹವಾಮಾನದ ಬೆಳೆಯಾದ ಆಪಲ್ ಅನ್ನು ಬಿಜಾಪುರದಂಥಹಾ ಬಿಸಿಲು ನಾಡಿನಲ್ಲಿಯೂ ಬೆಳೆದಿದ್ದಾರೆ. ಚಿಕ್ಕಬಳ್ಳಾಪುರ, ಹೊಸಕೋಟೆ, ತುಮಕೂರು, ಶಿರಾಗಳಲ್ಲಿಯೂ ಕೆಲ ರೈತರು ಬೆಳೆದಿರುವುದು ನಿಜ, ಹಾಗೆಂದು ಎಲ್ಲ ರೈತರೂ ಆಪಲ್ ಬೆಳೆ ಬೆಳೆಯಲು ತೊಡಗುವ ಮುನ್ನ ತುಸು ನಿಂತು ಯೋಚಿಸಬೇಕಿದೆ. ಪೂರ್ಣ ಮಾಹಿತಿ ಪಡೆದ ಮೇಲಷ್ಟೆ ಆಪಲ್ ಕೃಷಿಗೆ ಇಳಿಯಬೇಕಿದೆ. ಏಕೆಂದರೆ ಆಪಲ್ ಕೃಷಿ ಎಲ್ಲರ ಕೈ ಹಿಡಿದಿಲ್ಲ.
ಹಿಮಾಚಲ ಪ್ರದೇಶ, ಕಾಶ್ಮೀರಗಳಂಥಹಾ ಶೀತ ಪ್ರದೇಶದಲ್ಲಿ ಬೆಳೆಯುವ ಆಪಲ್ ಅನ್ನು ಬಿಸಿಲ ನಾಡಾದ ಬಿಜಾಪುರದಲ್ಲಿ ಹೇಗೆ ಬೆಳೆದರು? ಬರದ ಜಿಲ್ಲೆಗಳಾದ ಚಿಕ್ಕಬಳ್ಳಾಪುರ, ಕೋಲಾರಗಳಲ್ಲಿ ಹೇಗೆ ಬೆಳೆದರು ಎಂದು ಆಶ್ಚರ್ಯ ಪಡುವ ಮುನ್ನ ತಿಳಿದುಕೊಳ್ಳಬೇಕಾದ ವಿಷಯವೆಂದರೆ ಹಿಮಾಚಲ ಪ್ರದೇಶ, ಕಾಶ್ಮೀರಗಳಲ್ಲಿ ಬೆಳೆಯುವ ಆಪಲ್ಗೂ ಕರ್ನಾಟಕದಲ್ಲಿ ಬೆಳೆಯಲಾಗುತ್ತಿರುವ ಆಪಲ್ಗೂ ವ್ಯತ್ಯಾಸವಿದೆ. ಕರ್ನಾಟಕದಲ್ಲಿ ಬೆಳೆಯಲಾಗುತ್ತಿರುವ ಆಪಲ್ಗಳು ಹಾಟ್ ವೆದರ್ ಆಪಲ್ಗಳು. ಅಂದರೆ ಉಷ್ಣ ಅಥವಾ ಅರೆ ಉಷ್ಣ ಹವಾಗುಣ ಇದ್ದಲ್ಲಿ ಬೆಳೆಯಲೆಂದು ವಿಶೇಷವಾಗಿ ಕಸಿ ಮಾಡಲಾದ ಆಪಲ್ ಗಿಡಗಳು. ಉಷ್ಣ ಹವಾಗುಣದಲ್ಲಿ ಬೆಳೆಯಲಾಗುವ ಆಪಲ್ ಹಾಗೂ ಹಿಮಾಚಲ, ಕಾಶ್ಮೀರ ಆಪಲ್ಗಳಲ್ಲಿ ರುಚಿ, ಬಣ್ಣ, ಆಕಾರ, ತೂಕಗಳಲ್ಲಿ ಮಹತ್ವದ ಭಿನ್ನತೆಯಿದೆ.
ಇತ್ತೀಚೆಗೆ ಐದಾರು ವರ್ಷಗಳಿಂದಲೂ ಕರ್ನಾಟಕದಲ್ಲಿ ಅಲ್ಲಲ್ಲಿ ಆಪಲ್ ಕೃಷಿಯ ಸುದ್ದಿಗಳು ಅಲ್ಲಲ್ಲಿ ಕಾಣಿಸಿಕೊಳ್ಳುತ್ತಿವೆ. ತುಮಕೂರು, ಶಿರ, ಚಿಕ್ಕಬಳ್ಳಾಪುರ, ಬಿಜಾಪುರಗಳಲ್ಲಿ ಐದಾರು ವರ್ಷಗಳ ಹಿಂದೆ ಕೆಲ ರೈತರು ಆಪಲ್ ಬೆಳೆದರು. ಇದು ದೊಡ್ಡ ಮಟ್ಟದಲ್ಲಿ ಸುದ್ದಿಯಾಯ್ತು. ಎಲ್ಲವನ್ನೂ ಆಶ್ಚರ್ಯದ ದೃಷ್ಟಿಯಿಂದಲೇ ಕಾಣುವ ಯೂಟ್ಯೂಬರ್ಗಳು ಆಪಲ್ ಬೆಳೆದ ರೈತರನ್ನು ಕೊಂಡಾಡಿದರು. ಅಸಲಿಗೆ ಆಪಲ್ ಕೃಷಿ ಕರ್ನಾಟಕಕ್ಕೆ ಹೊಸದಲ್ಲ ಬಹಳ ಹಳೆಯದು. ಸುಮಾರು 100-150 ವರ್ಷದ ಹಿಂದೆಯೇ ಕರ್ನಾಟಕದಲ್ಲಿ ಆಪಲ್ ಕೃಷಿ ಮಾಡಲಾಗಿತ್ತು.
ತೋಟಗಾರಿಕಾ ಇಲಾಖೆಯ ನಿವೃತ್ತ ಅಧಿಕಾರಿ ನಾರಾಯಣಸ್ವಾಮಿ ಅವರು ಹೇಳುವಂತೆ, ಕರ್ನಾಟಕಕ್ಕೆ ಆಪಲ್ ಕೃಷಿ ಹೊಸದೇನೂ ಅಲ್ಲ. ಬ್ರಿಟೀಷರ ಕಾಲದಲ್ಲಿ ಬೆಂಗಳೂರಿನ ಈಗಿನ ಅರಮನೆ ಮೈದಾನ, ಲಾಲ್ ಬಾಗ್ ಹಾಗೂ ಬೆಂಗಳೂರಿನ ಸುತ್ತಲಿನ ಕೆಲವು ಹಳ್ಳಿಗಳಲ್ಲಿ ಆಪಲ್ ಕೃಷಿ ಮಾಡಲಾಗಿತ್ತು. ಒಂದು ಹಂತಕ್ಕೆ ಅದು ಯಶಸ್ವಿಯೂ ಆಗಿತ್ತು. ಆದರೆ ಯಾವಾಗ ಬೆಂಗಳೂರಿಗೆ ರೈಲ್ವೆ ಲೈನ್ ಬಂತೋ ಆಗಿನಿಂದ ಇಲ್ಲಿನ ಆಪಲ್ ಕೃಷಿ ಕ್ಷೀಣಿಸತೊಡಗಿತು ಎಂದು ಗುರುತಿಸುತ್ತಾರೆ ಅವರು. ಬೆಂಗಳೂರಿಗೆ 1864 ರಲ್ಲಿ ರೈಲ್ವೆ ಲೈನ್ ಬಂತಾದರೂ ಅದರ ಮೂಲಕ ಗೂಡ್ಸ್ ಗಳು ಬರಲು ಸುಮಾರು 50 ವರ್ಷಗಳೇ ಹಿಡಿದವು. ಆದರೆ ಗೂಡ್ಸ್ ಪ್ರಾರಂಭವಾದ ಬಳಿಕ ಹಿಮಾಚಲ ಪ್ರದೇಶ, ಕಾಶ್ಮೀರ, ಊಟಿಯ ಆಪಲ್ಗಳು ಟನ್ಗಟ್ಟಲೆ ಬೆಂಗಳೂರಿಗೆ ಬರಲು ಆರಂಭವಾದವು. ಗುಣಮಟ್ಟದಲ್ಲಿ, ರುಚಿಯಲ್ಲಿ ಶೀತ ಹವಾಗುಣದಲ್ಲಿ ಬೆಳೆದ ಆಪಲ್ಗಳು ಉತ್ಕೃಷ್ಟವಾಗಿದ್ದರಿಂದ ಸ್ಥಳೀಯ ಆಪಲ್ಗಳಿಗೆ ಬೇಡಿಕೆ ಕುಸಿಯಿತು. ಹಾಗಾಗಿ ಆಪಲ್ ಕೃಷಿ ನಿಧಾನಕ್ಕೆ ಅಸ್ತಂಗತವಾಯ್ತು ಎನ್ನುತ್ತಾರೆ ಅವರು.
ಅಲ್ಲದೆ, ಆಗ ಬೆಳೆಯುತ್ತಿದ್ದ ಆಪಲ್ಗಳು ಬಹುಷಃ ಬ್ರಿಟೀಷರು ಮತ್ತು ಕೆಲವು ಶ್ರೀಮಂತ ಕುಟುಂಬಗಳಿಗಷ್ಟೆ ಆಗಿತ್ತು. ಸಾಮಾನ್ಯರು ಆಗಲೂ ಆಪಲ್ ಕೊಳ್ಳುವುದು ಸೇವಿಸುವುದು ಕಡಿಮೆಯೇ ಆಗಿತ್ತು. ಬೇರೆ ರಾಜ್ಯಗಳಿಂದ ಬಂದ ಆಪಲ್ಗಳು ಇಲ್ಲಿನ ಬೇಡಿಕೆ ಪೂರೈಸಿದ ಕಾರಣ ಸ್ಥಳೀಯ ಆಪಲ್ ಕೃಷಿ ಕ್ಷೀಣಿಸಿರಬಹುದು ಎನ್ನುತ್ತಾರೆ ಅವರು.
ಇನ್ನು ಈಗಿನ ಆಪಲ್ ಕೃಷಿಗೆ ಮರಳುವುದಾದರೆ, ಆಪಲ್ನಲ್ಲಿ ಸುಮಾರು 1500 ಕ್ಕೂ ಹೆಚ್ಚು ತಳಿಗಳಿವೆ ಆದರೆ ಕರ್ನಾಟಕ ಸೇರಿದಂತೆ ಬಹುತೇಕ ಉಷ್ಣ ಹವಾಗುಣ ಹೊಂದಿದ ಪ್ರದೇಶಗಳಲ್ಲಿ ಅನ್ನಾ, ಹರ್ಮನ್ 99, ಡೋರ್ಸೆಟ್ ತಳಿಗಳನ್ನು ಮಾತ್ರವೇ ಬೆಳೆಯಲಾಗುತ್ತದೆ. ಉಷ್ಣ ಹವಾಗುಣಕ್ಕೆ ಹೊಂದಿಕೊಂಡು ಬೆಳೆಯಲೆಂದೇ ಈ ತಳಿಗಳನ್ನು ಕಸಿ ಮೂಲಕ ಸೃಷ್ಟಿಸಲಾಗಿದೆ. ಅದರಲ್ಲೂ ಕರ್ನಾಟಕದಲ್ಲಿ ಅನ್ನಾ ಹಾಗೂ ಹರ್ಮನ್ 99 ಕೃಷಿಯನ್ನು ಹೆಚ್ಚು ಮಾಡಲಾಗುತ್ತಿದೆ. ಇತ್ತೀಚೆಗಿನ ವರ್ಷಗಳಲ್ಲಿ ರಾಜ್ಯದಲ್ಲಿ ಆಪಲ್ ಕೃಷಿಗೆ ಹಲವರಿಗೆ ಸ್ಪೂರ್ತಿ ತುಂಬಿದವರಲ್ಲಿ ಬಿಜಾಪುರದ ಯುವ ರೈತ ಸಚಿನ್ ಬಾಲಕೊಂಡ ಒಬ್ಬರು. ನರ್ಸರಿ ಹೊಂದಿರುವ ಸಚಿನ್, ಸ್ವತಃ ಆಪಲ್ ಕೃಷಿ ಮಾಡಿದ್ದಾರೆ.
ಟಿವಿ9 ಜೊತೆ ಮಾತನಾಡಿದ ಸಚಿನ್ ಬಾಲಕೊಂಡ, ಆಪಲ್ ಕೃಷಿಯ ಕೆಲವು ಪ್ರಾಕ್ಟಿಕ್ಯಾಲಿಟಿ ಬಗ್ಗೆ ಮಾಹಿತಿ ನೀಡಿದರು. ಆರು ವರ್ಷದ ಹಿಂದೆ ಎರಡು ಎಕರೆಗೆ ಸ್ವತಃ ಆಪಲ್ ಗಿಡಗಳನ್ನು ಹಾಕಿದ್ದ ಸಚಿನ್ಗೆ ಆಪಲ್ ಗಿಡಗಳಿಂದ ತೀರಾ ಆಶಾದಾಯಕ ಲಾಭ ಬಂದಿಲ್ಲ. ಆರು ವರ್ಷದ ಹಿಂದೆ ಒಂದು ಎಕರೆಗೆ ಗಿಡ ಹಾಕಿದ್ದ ಸಚಿನ್, ಈಗ ಅರ್ಧ ಎಕರೆಯನ್ನಷ್ಟೆ ಉಳಿಸಿಕೊಂಡಿದ್ದಾರೆ. ಅದಕ್ಕೆ ಮುಖ್ಯ ಕಾರಣ ಫಸಲು ಕಡಿಮೆಯಾಗಿದ್ದು, ಮಾರುಕಟ್ಟೆಯಲ್ಲಿ ಸೂಕ್ತ ಬೆಲೆ ಸಿಗದೆ ಇದ್ದದ್ದು ಹಾಗೂ ಬೇರು ಕೊಳೆ ರೋಗ. ಗಿಡ ಹಾಕಿದ ಬಳಿಕ ಮೊದಲ ಫಸಲು ಚೆನ್ನಾಗಿಯೇ ಬಂತಂತೆ ಆದರೆ ಆ ನಂತರದ ವರ್ಷಗಳಲ್ಲಿ ಫಸಲು ಕ್ಷೀಣಿಸಿದೆ. ಬೇರು ಕೊಳೆ ರೋಗದಿಂದ ಕೆಲ ಗಿಡಗಳು ಸಹ ನಾಶವಾಗಿವೆ. ಇದರಿಂದಾಗಿ ಅನಿವಾರ್ಯವಾಗಿ ಗಿಡಗಳನ್ನು ತೆಗೆದಿದ್ದಾರೆ ಸಚಿನ್.
‘ಆಪಲ್ ಫಸಲು ಬಂದ ಮೊದಲ ವರ್ಷ ಸುಮಾರು 2.50 ಲಕ್ಷ ಆದಾಯ ಬಂತು ಎರಡನೇ ವರ್ಷಕ್ಕೆ ಎರಡು ಲಕ್ಷ ಬಂತು ಎಂದಿರುವ ಸಚಿನ್, ಇಲ್ಲಿಯ ಆಪಲ್ಗೆ ಹೆಚ್ಚು ಬೆಲೆಯನ್ನು ಮಾರುಕಟ್ಟೆಯಲ್ಲಿ ನೀಡುವುದಿಲ್ಲ. ಎರಡು ವರ್ಷದ ಹಿಂದೆ ನಾನು ಕೆಜಿಗೆ ಕೇವಲ 65-70 ರೂಪಾಯಿಗೆ ಮಾರಾಟ ಮಾಡಿದೆ. ಹೊಸಕೋಟೆಯಲ್ಲಿ ಇತ್ತೀಚೆಗೆ ಒಬ್ಬರು ರೈತರು ಆಪಲ್ ಬೆಳೆದಿದ್ದಾರೆ ಅವರು ಗ್ರಾಹಕರಿಗೆ ನೇರವಾಗಿ ಮಾರಾಟ ಮಾಡಿದ್ದು 120 ರಿಂದ 150 ರೂಪಾಯಿ ವರೆಗೂ ಮಾರಾಟ ಮಾಡಿದ್ದಾರೆ. ಉಷ್ಣ ಹವಾಗುಣದ ಆಪಲ್ಗಳು ತೂಕ ಸಹ ಕಡಿಮೆ ಬರುತ್ತವೆ. ಇದು ಸಹ ಬೆಳೆದ ರೈತನಿಗೆ ಹೆಚ್ಚು ಹಣ ಸಿಗದೇ ಇರಲು ಕಾರಣಗಳಲ್ಲಿ ಒಂದು’ ಎನ್ನುತ್ತಾರೆ ಸಚಿನ್.
‘ಈಗ ರಾಜ್ಯದ ಕೆಲವು ನರ್ಸರಿಗಳಲ್ಲಿ ಆಪಲ್ ಗಿಡಗಳನ್ನು ಮಾರಲಾಗುತ್ತಿದೆ. ಆದರೆ ಅವುಗಳ ಆರೈಕೆ ಬಗ್ಗೆ ರೈತರಿಗೆ ಇನ್ನಷ್ಟು ಮಾಹಿತಿ ಲಭ್ಯವಾಗಬೇಕು. ಅಲ್ಲದೆ ಆಪಲ್ ಗಿಡಕ್ಕೆ ತಗುಲುವ ರೋಗಗಳನ್ನು ನಿಯಂತ್ರಿಸುವ ಪರಿಣಾಮಕಾರಿ ಪದ್ಧತಿಯ ಬಗ್ಗೆಯೂ ರೈತರು ತರಬೇತಿ ಪಡೆಯಬೇಕು. ಬಹುತೇಕ ರೈತರು ‘ಸಾಹಸಮಯ’ ಎಂಬ ಕಾರಣಕ್ಕೆ ಆಪಲ್ ಕೃಷಿಗೆ ಧುಮುಕುತ್ತಿದ್ದಾರೆ. ಕಳೆದ ಐದಾರು ವರ್ಷಗಳಲ್ಲಿ ಹೀಗೆ ಅತಿ ಉತ್ಸಾಹದಿಂದ ಆಪಲ್ ಕೃಷಿಗೆ ಧುಮುಕಿದ ಹಲವರು ಇಂದು ಆಪಲ್ ಕೃಷಿಯನ್ನು ನಾನಾ ಕಾರಣಗಳಿಂದ ಕೈಬಿಟ್ಟಿದ್ದಾರೆ. ನಾನು ಈಗ ಮರಳಿ ಯತ್ನವನ್ನು ಮಾಡುವ ಉತ್ಸಾಹದಲ್ಲಿದ್ದೇನೆ’ ಎನ್ನುತ್ತಾರೆ ಸಚಿನ್.
ಹೊಸಕೋಟೆಯ ಸಿದ್ದೇನಳ್ಳೀ ಗ್ರಾಮದ ರೈತ ಬಸವರಾಜು ಯಶಸ್ವಿಯಾಗಿ ಆಪಲ್ ಬೆಳೆದಿರುವ ಬಗ್ಗೆ ಮಾತನಾಡಿದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಗುಣವಂತ, ‘ಆಪಲ್ ಕೃಷಿ ಒಣಹವೆ ಪ್ರದೇಶದಲ್ಲಿ ವಾಣಿಜ್ಯಿಕ ಯಶಸ್ಸು ಗಳಿಸುವುದು ಕಷ್ಟ. ಒಣ ಹವೆಯಲ್ಲಿ ಬೆಳೆಯಬಹುದಾದ ಆಪಲ್ ತಳಿಗಳು ಇವೆ. ಅವನ್ನು ಬೆಳೆಯಬಹುದು ಆದರೆ ಅವನ್ನು ಬೆಳೆದು ದೊಡ್ಡ ಮಟ್ಟದ ಲಾಭ ಗಳಿಸುವುದು ತುಸು ಕಷ್ಟ. ಹಿಂದೆಲ್ಲ ಈ ಪ್ರಯೋಗಗಳು ಆಗಿದ್ದವು, ಬೆಂಗಳೂರಿನಲ್ಲಿ ಆಪಲ್ ಬೆಳೆಯಲಾಗಿತ್ತು, ಈಗಲೂ ಲಾಲ್ಬಾಗ್ನಲ್ಲಿ ಎರಡು ಆಪಲ್ ಗಿಡಗಳಿವೆ. ಆದರೆ ಇಲ್ಲಿ ಬೆಳೆಯುವ ಆಪಲ್ಗಳು ಗುಣಮಟ್ಟದಲ್ಲಿ ಶೀತಪ್ರದೇಶದ ಆಪಲ್ಗಳಷ್ಟು ಉತ್ತಮವಾಗಿರುವುದಿಲ್ಲ. ಬೇಕಿದ್ದರೆ ಪಾಲಿ ಹೌಸ್ಗಳನ್ನು ಬಳಸಿ ನಿಯಂತ್ರಿತ ಹವಾಗುಣದಲ್ಲಿ ಬೇಕಿದ್ದರೆ ಬೆಳೆದು ಯಶಸ್ವಿಯಾಗಬಹುದು ಆದರೆ ಅದಕ್ಕೆ ಬಹಳ ಹಣ ಖರ್ಚಾಗುತ್ತದೆ. ಕಡಿಮೆ ಜಾಗದಲ್ಲಿ ಹೆಚ್ಚು ಫಲ ಕೊಡುವ ಹೂವು ಇನ್ನಿತರೆಗಳನ್ನು ಬೆಳೆಯಲು ಪಾಲಿ ಹೌಸ್ ಸೂಕ್ತ. ಕರ್ನಾಟಕದಲ್ಲಿ ಕೆಲವು ರೈತರು ಸ್ವಂತ ಆಸಕ್ತಿಯಿಂದ ಈ ಸಾಹಸಮಯ ಪ್ರಯೋಗ ಮಾಡಿದ್ದಾರೆ. ಆದರೆ ಈ ಆಪಲ್ ಕೃಷಿ ದೀರ್ಘ ಸಮಯದಲ್ಲಿ ಅವರಿಗೆ ಹೇಗೆ ಫಲ ನೀಡುತ್ತದೆ ನೋಡಬೇಕಿದೆ’ ಎಂದಿದ್ದಾರೆ.
ಒಟ್ಟಾರೆಯಾಗಿ ನೋಡುವುದಾದರೆ ಆಪಲ್ ಕೃಷಿ ಕರ್ನಾಟಕಕ್ಕೆ ಹೊಸದಲ್ಲ, ಇಲ್ಲಿ ಬೆಳೆಯಲಾಗದ್ದೂ ಏನಲ್ಲ. ಅಲ್ಲದೆ ಆಪಲ್ ಅನ್ನು ಕರ್ನಾಟಕದಲ್ಲಿ ಬೆಳೆಯಲು ಬಹಳ ಶ್ರಮ ಪಡಬೇಕು ಎಂದೇನೂ ಸಹ ಇಲ್ಲ. ಆದರೆ ಬೆಳೆದರೆ ರೈತರಿಗೆ ಗಿಟ್ಟುತ್ತದೆಯೇ ಎಂಬುದೇ ಮುಖ್ಯ. ಕಮರ್ಶಿಯಲಿ ಯಶಸ್ಸು ಗಳಿಸದ ಯಾವುದೇ ಕ್ರಾಪು ರೈತನಿಗೆ ಹಾನಿಕಾರಕ. ಹಾಗಾಗಿ ರೈತರು ಸೂಕ್ತ ಮಾಹಿತಿ ಪಡೆದ ಬಳಿಕವಷ್ಟೆ ಆಪಲ್ ಕೃಷಿಗೆ ಕೈ ಹಾಕುವುದು ಉತ್ತಮ.
ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ