Poetry; ಅವಿತ ಕವಿತೆ : ಪ್ರೀತಿ ಎಂಬ ಜೀವಾಮೃತಕ್ಕೆ ಹಂಬಲಿಸುವಾಗ ಕವಿತೆ ಹುಟ್ಟುತ್ತದೆ

‘ನಾನು ಯಾರಿಗಾಗಿ ಬರೆಯುತ್ತೇನೆ ಅಂತ ಟಾಲ್​ಸ್ಟಾಯ್ ಬಹಳ ವಿಷಾದದಿಂದ ಕೇಳಿಕೊಂಡಿದ್ದರಂತೆ. ಅಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಕವಿತೆ ಹುಟ್ಟುವುದು ಕೂಡಾ ಅತೀವ ವಿಷಾದದ ನೆರಳಲ್ಲಿ, ದುಃಖದ ಪರಮಾವಧಿಯಲ್ಲಿ ಇಲ್ಲವೇ ಸಂತೋಷದ ಉತ್ತುಂಗದಲ್ಲಿ. ಅದು ವೈಯಕ್ತಿಕ ಸಂದರ್ಭವೇ ಆಗಿರಬಹುದು ಇಲ್ಲ ಸಾಮಾಜಿಕ ಸಾಂಸ್ಕೃತಿಕ ನೆಲೆಗಳಲ್ಲಿ ಉಂಟಾದ ವಿಪ್ಲವದ ಸಂದರ್ಭವೇ ಆಗಿರಬಹುದು. ಪ್ರಕೃತಿಯಲ್ಲಿ ಮೈ ಮರೆತಾಗ, ಅನ್ಯಾಯ ಕಂಡಾಗ, ಅಸಹಾಯಕತೆ ಉಂಟಾದಾಗ, ಪ್ರೀತಿ ಎಂಬ ಜೀವಾಮೃತಕ್ಕೆ ಹಂಬಲಿಸುವಾಗ, ಕವಿತೆ ಹುಟ್ಟುತ್ತದೆ.‘ ನಾಗರೇಖಾ ಗಾಂವಕರ

Poetry; ಅವಿತ ಕವಿತೆ : ಪ್ರೀತಿ ಎಂಬ ಜೀವಾಮೃತಕ್ಕೆ ಹಂಬಲಿಸುವಾಗ ಕವಿತೆ ಹುಟ್ಟುತ್ತದೆ
ಕವಿ ನಾಗರೇಖಾ ಗಾಂವಕರ
Follow us
ಶ್ರೀದೇವಿ ಕಳಸದ
|

Updated on:Apr 04, 2021 | 11:21 AM

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಕವಿ ನಾಗರೇಖಾ ಗಾಂವಕರ ಅವರ ಕವಿತೆಗಳು ನಿಮ್ಮ ಓದಿಗೆ.

ಪರಿಕಲ್ಪನೆ : ಶ್ರೀದೇವಿ ಕಳಸದ

ಸ್ವಭಾವತಃ ಭಾವಜೀವಿಯಾದ ನಾಗರೇಖಾ ಗಾಂವಕರ ಜೀವನದ ವಿವಿಧ ಅನುಭವಗಳನ್ನು ಕುತೂಹಲದಿಂದ ಅರಗಿಸಿಕೊಳ್ಳುತ್ತ, ಪದಗಳನ್ನು ತಮ್ಮ ಅನುಭವಕ್ಕೆ ಒಗ್ಗಿಸಿಕೊಳ್ಳುತ್ತ, ಹಾಗೆಯೇ ಕಾವ್ಯದ ಲಯಗಳನ್ನು ಒಂದು ಹದಕ್ಕೆ ಹೊಂದಿಸಿಕೊಳ್ಳುತ್ತ ಹೇಗೆಯೇ ಬರೆಯಲಿ, ಶೈಥಿಲ್ಯಕ್ಕೆ ಎಡೆ ಕೊಡದಂತೆ ಕಾವ್ಯಶಿಲ್ಪವನ್ನು ಸೃಷ್ಟಿಸುತ್ತಿರುವುದು ವಿಶೇಷವಾಗಿದೆ. ವಿಶೇಷವಾಗಿ ಒಂದು ವಸ್ತುವನ್ನು ಕುರಿತು ಬರೆಯುವಾಗ ನಾಗರೇಖಾ ಆ ವಸ್ತುವನ್ನು ಅನುಭವದ ಸಾಚಾತನದಿಂದ ನಮ್ಮ ಕಣ್ಣ ಮುಂದೆ ತಂದು ನಿಲ್ಲಿಸುತ್ತಾರೆ. ವರ್ಣಚಿತ್ರದಂತೆ ಅವರ ಶಬ್ದಚಿತ್ರ ಓದುಗರ ಗಮನ ಸೆಳೆಯುತ್ತದೆ. ಯಾವ ವಸ್ತುವನ್ನೇ ಆಯ್ದುಕೊಳ್ಳಲಿ ಆ ವಸ್ತುವನ್ನು ಸಮರ್ಪಕವಾಗಿ ಕವಿತೆಯಾಗಿಸುವ ಸಾಮರ್ಥ್ಯವುಳ್ಳವರಾಗಿರುವುದು ಗಮನಿಸುವಂತಹಾದಾಗಿದೆ. ಈ ಸಂಕಲನದಲ್ಲಿಯ ವಸ್ತುವೈವಿಧ್ಯ ಹಲವು ಬಣ್ಣಗಳಿಂದ ಕೂಡಿದೆ. ಕೆಲವು ಕವಿತೆಗಳಲ್ಲಿ ಬೆರಗುಗೊಳಿಸುವ ನಾವಿನ್ಯತೆಯೂ ಇದೆ. ಅಂತಃಕರಣದ ರೇಷ್ಮೆ ಎಳೆ ಇದೆ. ಜೀವನದ ಎಲ್ಲ ಮಗ್ಗಲುಗಳನ್ನು ದಿಟ್ಟಿಸಿ ನೋಡುವ, ಅದರೊಳಗಿರುವ ಕಪ್ಪು ಬಿಳಿ ಬಣ್ಣಗಳನ್ನು ತೆರೆದು ತೋರಿಸುವ, ಸಭ್ಯತೆಯ ಎಲ್ಲೆಯೊಳಗೆ ಸತ್ಯವನ್ನು ಗುರುತಿಸುವ ಕವಯತ್ರಿಯ ಜಾಣ್ಮೆ ಬೆರಗುಗೊಳಿಸುವಂಥದು. ಇವರು ಯಾವುದನ್ನೂ ನಿರಾಕರಿಸುವುದಿಲ್ಲ. ಅವರದು ತೆರೆದ ಮನಸ್ಸು. ವಿಶೇಷವೆಂದರೆ ಅವರು ವೈಚಾರಿಕ ನೆಲೆಯಲ್ಲಿ ನಿಂತು ವಿಷಯವನ್ನು ಗ್ರಹಿಸುತ್ತಾರೆ. ಚಿಂತನೆಯ ಮೂಸೆಯಲ್ಲಿಟ್ಟು ವಸ್ತುವನ್ನು ಪರೀಕ್ಷಿಸುತ್ತಾರೆ. ಈ ವೈಚಾರಿಕ ಮತ್ತು ಚಿಂತನೆಯ ಆಳದಲ್ಲಿ ಒಂದು ತಾತ್ವಿಕ ನೆಲೆಗಟ್ಟು ಇದೆ. ಡಾ. ಗುರುಲಿಂಗ ಕಾಪಸೆ, ಹಿರಿಯ ಸಾಹಿತಿ.

ನಾಗರೇಖಾ ಅವರ ಕವಿತೆಗಳು ಗಂಭೀರ ಕಾಳಜಿಯುಳ್ಳವು. ‘ಅವಳೇ’ ಕವಿತೆಯ ಕೇಂದ್ರಬಿಂದು. ಅವಳ ಮೂಲಕವೇ ಎಲ್ಲ ತೊಡಕು, ತೀವ್ರತೆಗಳು ದನಿ ಪಡೆಯುತ್ತವೆ. ತಂಪಿರಲಿ, ತಾಪವಿರಲಿ ಅದರ ಗರಿಷ್ಠ ಹದದಲ್ಲಿ ಅವು ವಿರುದ್ಧ ಭಾವವಾಗಬಹುದು. ಇಲ್ಲವೇ ಗುಣವಿಹೀನ ಸ್ಥಿತಿ ತಲುಪಬಹುದು ಎಂಬ ಸೂಕ್ಷ್ಮ ತಿಳಿವಳಿಕೆಯಲ್ಲಿ ಮೂಡಿರುವ ಹಾಗೆ ಕಾಣುವ ಕವನಗಳು ಬೆಂಕಿ ಮತ್ತು ಬೆಳಕನ್ನು ಸ್ಥಾಯಿರೂಪಕಗಳ ಹಾಗೆ ಇರಿಸಿಕೊಂಡಿವೆ. ಈ ಎರಡೂ ಒಳಗೂ ತಾಳಬೇಕಿದೆ, ಹೊರಗೂ ಕಾಣಬೇಕಿದೆ. ತಾಳುವ ಮತ್ತು ಕಾಣಿಸುವ ದ್ವಂದ್ವದಲ್ಲಿ ಅಕ್ಷರ ಪಡೆಯಲು ಕಾತರಿಸುವ ಸಾಲುಗಳು ಧ್ವನಿಪೂರ್ಣವಾಗಿವೆ. ದ್ವಂದ್ವ ಉಪಮೆಗಳ ಮೂಲಕ ಸ್ಥಿತಿಯನ್ನು ಹಿಡಿದಿಟ್ಟು ಬದುಕಿನ ಶೋಧ ನಡೆಸುವ ಹಂಬಲ ಇವರ ರಚನೆಗಳಲ್ಲಿದೆ. ಕವಿತೆಯು ಎಚ್ಚರವಾಗಿರಬೇಕಾದ ಗಂಭೀರ ನಡಿಗೆ ಎಂಬ ತಿಳಿವು ಇಲ್ಲಿಯ ಕವನಗಳಲ್ಲಿದೆ. ಈಪ್ರಯತ್ನವೇ ಮುಂದಿನ ಭರವಸೆಯಾಗಿದೆ. ಜಿ.ಕೆ.ರವೀಂದ್ರಕುಮಾರ, ಹಿರಿಯ ಕವಿ.

*

ಒಮ್ಮೊಮ್ಮೆ ಹೀಗೂ ಆಗುವುದು

ಹಿಂದೊಮ್ಮೆ ಕೂಡಾ ಹೀಗೆ ಆಗಿತ್ತಲ್ಲ ಗಂಟುಗಂಟಾಗಿ ಸಿಕ್ಕು ಬಿದ್ದು ಅ- ಕ್ಷರದ ತಾರೆಗಳೆಲ್ಲ ನೆಲಕ್ಕೆ ಚೆಲ್ಲಿದಂತೆ ಜ್ಞಾನಪಾತ್ರೆಯ ಎದುರು ಹಸಿದ ಕಂಗಳು ಮೂರ್ಛೆಗೊಂಡ ಮನಸ್ಸು ನಗ್ನವಾಗಿ ನಿಂತುಬಿಟ್ಟವು ಕಾಲ ಚಲಿಸಲಿಲ್ಲ.

ಆದರೆ ಮಜ್ಜಿಗೆಯೂಡಿದ ಮರುಗಳಿಗೆ ಅಮಲು ಇಳಿಯುವುದು ಕಣ್ಣುಗಳ ಮಂಜು ಮಬ್ಬು ಕರಗುವುದು. ಒಳದೃಷ್ಟಿ ಬೆಳಗುವುದು ಹೆಚ್ಚು ಹೆಚ್ಚು ವ್ಯಾಖ್ಯಾನಿಸಿದಷ್ಟು ಒಳಾರ್ಥದ ಕುದಿ ಕಂದಿಹೋಗುವುದು ಮಿತಿಯ ಗತಿ ಸೆಳೆದಷ್ಟು ಮರ್ಮ ಬೆಳೆಯುವುದು.

ಭವದ ಬಲೆಯಲ್ಲಿ ತೂಗುತ್ತ ಹಾಲಾಹಲ ಚೂರು ಚೂರೇ ಸಂಗಾತಕ್ಕೆ ಸರಿಗಟ್ಟಿತು. ಜೀವ ನಿಲ್ಲುವುದಿಲ್ಲ ನೆಲ ನೀರು ಕೂಡಿತೆಂದರೆ ಬರಡು ಮಲೆಯಾಯಿತು. ಕಾಷ್ಠದ ತೊಗಲಿಗೂ ಮಿಂಚುಹುಳುಗಳು ಮುಕುರಿ ಜಗ್ಗನೇ ಹೊಳಪು ಹೊದ್ದ ಮನ ಮಿರುಗಿತು. ಶಮನಗೊಂಡಿತು ಉರಿ. ಹೊಲದ ಅಂಚು ಹೊದ್ದ ಬೇಲಿಗಂಬವನ್ನು ಬಿಡದೆ ಅಂಟಿಕೊಂಡರೂ ಗೆದ್ದಲು ಚಿಗುರುಕ್ಕಿ ನಸುನಕ್ಕಿತು.

avitha kavithe

ನಾಗರೇಖಾ ಗಾಂವಕರ ಕೈಬರಹದೊಂದಿಗೆ

ಹೆಸರಿಲ್ಲದ ಬಂಧ

ನವಿಲುಗರಿ ತೊಟ್ಟ ಹಸ್ತದ ಮೋಹನಾಂಗನ ಕಂಡಾಗಲೆಲ್ಲಾ ನನಗೋ ನವಿಲಾಗುವ ಬಯಕೆ ಕುಣಿವ ಮನದ ತಹಬದಿಯ ತಂತು ಅದೇಕೋ ಬಿದಿರು ಕೋಲಿಗೆ ದಕ್ಕಿದ್ದು.

ಹುಸಿಭರವಸೆಗಳ ಕಪಟಮಾತುಗಳೊಡಯ ಅದೆಷ್ಟು ನಂಬುವೆ ನಾನು ನಿನ್ನ. ಯಮುನೆ ತಟದ ಜುಳುಜುಳು ಗಾನದ ಹೊರತಾಗಿಯೂ ಯಾವ ಝರಿಯ ನಾದ ನಿನ್ನ ಕಾಡುತಿದೆಯೋ ಅದ ಕೇಳಬೇಕೆನ್ನಿಸುವುದಿಲ್ಲ.

ಗೆಜ್ಜೆ ಹಿಡಿಯುವ ಕಲೆ ನಿನಗೆ ಕಲಿಸಬೇಕೆಂದಿಲ್ಲ. ನೀನು ಉಸಿರಿಟ್ಟ ಕಡೆಗೆಲ್ಲಾ ಸುಳಿವ ನೀಳನಾಸಿಕದ ಗೋಪಿಯರ ಸಪೂರ ಸೊಂಟದ ಸುತ್ತ ಬಳಸಿದ ನಿನ್ನ ಕೈಗಳ ಕಟ್ಟಿಹಾಕಬೇಕೆನ್ನಿಸುವುದಿಲ್ಲ.

ಉನ್ಮತ್ತ ಶೃಂಗದ ಹಾಸು ಸಿಕ್ಕಿದ ಭ್ರಮೆಯಲ್ಲಿ ಕಾಡಾನೆ ಮದವೇರಿ ತನ್ನ ಬುಡವನ್ನೇ ಹೊಸಕಿಹಾಕಿದಂತೆ ಮನ ಮಾರಿಕೊಂಡಾದ ಮೇಲೆ ಬೇಲಿ ಗಟ್ಟಿಗೊಳಿಸಬೇಕೆನ್ನಿಸುವುದಿಲ್ಲ .

ಆದರೂ ಸುಖಾತೀಸುಖದ ಹೆಮ್ಮೆ ಹೊತ್ತ ಮುಖಗಳ ಸವರಿಕೊಂಡು ಬಂದ ಗಾಳಿ ಕಾರಣವೇ ಇಲ್ಲದೇ ನನ್ನ ಕೆಣಕುತ್ತದೆ. ನನ್ನ ಪೇಲವ ಮುಖದ ಮ್ಲಾನತೆಗೆ ನಿನ್ನ ನಿರಾಕರಣೆ ಕಾರಣ ಎನ್ನಬೇಕೆನ್ನಿಸುವುದಿಲ್ಲ.

ಮುಂಗುರುಳ ಹೆರಳುಗಳು ನಿನ್ನ ಕೈ ಬೆರಳ ಸಂದಿಯಲ್ಲಿ ಹೊರಳಿ ನರಳಿ ಬೆಳಕಾದವಂತೆ. ನನಗೇನೂ ಈ ಬಂಧಕ್ಕೆ ಹೆಸರಿಡಬೇಕೆಂದು ಅನ್ನಿಸುವುದೇ ಇಲ್ಲ.

avitha kavithe

ನಾಗರೇಖಾ ಅವರ ಪುಸ್ತಕಗಳು

ನಿನ್ನ ಕಂಡ ಲಾಗಾಯ್ತಿನಿಂದ

ನನ್ನ ಪ್ರೇಮದ ಕಡ ಎಷ್ಟು ದಿನ ಇಟ್ಟುಕೊಳ್ಳುವಿ ನೀ ಬಿದಿರಕೋಲಿನ ಸಖನೇ ನಾಳೆಗಾದರೂ ತೀರಿಸಿಬಿಡು ಹನಿಮುತ್ತಿದ ಕೆಂದಾವರೆಗಳು ನನ್ನ ತುಟಿಯಲ್ಲರಳಲಿ.

ಬಿದಿರುಗಣೆ ಉಲಿತ ಸದ್ದಾಗದಂತೆ ನನ್ನಾತ್ಮವನ್ನೆ ಕಬಳಿಸುತ್ತಿದೆ. ಯಮುನೆ ತೀರದ ಕುಳಿರ್ಗಾಳಿ ತಣ್ಣಗಿನ ಒಳಕೋಲಾಹಲಕ್ಕೆ ಜೊತೆಯಾಗಿದೆ ಮನನೆಲದ ಬೇರುಗಳೇ ಉರುಳಾಗಿ ರಕ್ತದ ಹಾಸು ಗೋರಿಯ ಗುಲಾಬಿ ನಾ ಹೆಜ್ಜೆ ಇಟ್ಟಲ್ಲೆಲ್ಲಾ ಪವಡಿಸಿವೆ.

ಪ್ರೇಮದಂಟಿನ ಉಂಡೆಯೊಳಗೆ ಕ್ಷಣಕ್ಷಣಕ್ಕೂ ಕರಗಿಸಿಬಿಡುವ ಸಕ್ಕರೆಯ ಸವಿಯಂತವನೇ ನಿನ್ನ ಕಂಡ ಲಾಗಾಯ್ತಿನಿಂದ ನನ್ನ ಕಣ್ಣುಗಳು ನಿದ್ರಿಸುವದನ್ನೆ ಮರೆತಿವೆ.

ಈ ಲೋಕದೊಳಗಿನ ಎಲ್ಲ ಸದ್ದುಗಳನ್ನು ಸೆಣಬಿನ ಚೀಲದಲ್ಲಿಟ್ಟು ಬಾಯಿಕಟ್ಟಿ, ನಿನ್ನುಸಿರಿನ ಜೊತೆ ಗದ್ದೆಬದಿಯಲ್ಲೊಂದು ಕಳೆ ಗಿಡವಾಗಿ ಗಡದ್ದಾಗಿ ಉಸಿರಾಡಬೇಕೆನಿಸುತ್ತಿದೆ.

ಕಾಲದ ಗಡಿಯಾರಕ್ಕೆ ಕತ್ತಿಗಳೇ ಮುಳ್ಳುಗಳಾಗಿ ಕೆದಕಿ ಕತ್ತರಿಸಿ ಹಾಕುವ ಮುನ್ನ ಒಮ್ಮೆ ಬಂದುಬಿಡು. ಬೆಚ್ಚಗಿನ ಬಯಲ ಗಾಳಿಗೆ ಬೀಸಿಬೀಸಿ ನಾಲ್ಕು ಹೆಜ್ಜೆ ಹಾಕಿಬಿಡುವೆ.

*

ಬದುಕಿಗೆ ಜೀವಂತಿಕೆಯನ್ನು ತುಂಬುವಂತಹ ಎಷ್ಟೆಷ್ಟೋ ಪ್ರಯತ್ನಗಳಿವೆ. ಭಾವಜೀವಿಯಾದ ಸಂವೇದನೆಗಳ ತಾಕಲಾಟದಲ್ಲಿ ವೈಯಕ್ತಿಕ ದರ್ಶನಗಳ ಕಂಡುಕೊಳ್ಳುವತ್ತ ಹಾಗೂ ಅದನ್ನು ಒಡಮೂಡಿಸುವಲ್ಲಿ ಇದೊಂದು ಮಾರ್ಗ ಹಿಡಿಯುವುದಿದೆ. ಹಾಗಾಗಿ ಕವಿತೆ ನನ್ನನ್ನು ಜೀವಂತವಾಗಿಡುವಲ್ಲಿ ಸಹಕರಿಸುತ್ತದೆ. ಯಾಂತ್ರಿಕ ಬದುಕಿನ ಏಕತಾನತೆಗೆ ಬೇಸತ್ತಾಗ ಕವಿತೆ ಕೈಹಿಡಿಯುತ್ತದೆ. ನಾನು ಯಾರಿಗಾಗಿ ಬರೆಯುತ್ತೇನೆ ಅಂತ ಟಾಲ್​ಸ್ಟಾಯ್ ಬಹಳ ವಿಷಾದದಿಂದ ಕೇಳಿಕೊಂಡಿದ್ದರಂತೆ. ಅಂತಹ ಕಾಲಘಟ್ಟದಲ್ಲಿ ನಾವಿದ್ದೇವೆ. ಹಾಗಾಗಿ ಈ ಸಂದರ್ಭದಲ್ಲಿ ನಾನು ಹೇಳಬಯಸುವುದಿಷ್ಟೇ; ದ್ವಂದ್ವಗಳನ್ನು ಮೀರಲು, ನನ್ನ ನಾನು ಕಳೆದುಕೊಳ್ಳಲು, ನಿರಾಳವಾಗಲು ಕವಿತೆಗಳನ್ನು ಬರೆದದ್ದು ಇದೆ. ಬರೆಯುತ್ತಿರುವೆ. ಕವಿತೆ ಹುಟ್ಟುವುದು ಕೂಡಾ ಅತೀವ ವಿಷಾದದ ನೆರಳಲ್ಲಿ, ದುಃಖದ ಪರಮಾವಧಿಯಲ್ಲಿ ಇಲ್ಲವೇ ಸಂತೋಷದ ಉತ್ತುಂಗದಲ್ಲಿ. ಅದು ವೈಯಕ್ತಿಕ ಸಂದರ್ಭವೇ ಆಗಿರಬಹುದು ಇಲ್ಲ ಸಾಮಾಜಿಕ ಸಾಂಸ್ಕೃತಿಕ ನೆಲೆಗಳಲ್ಲಿ ಉಂಟಾದ ವಿಪ್ಲವದ ಸಂದರ್ಭವೇ ಆಗಿರಬಹುದು. ಪ್ರಕೃತಿಯಲ್ಲಿ ಮೈ ಮರೆತಾಗ, ಅನ್ಯಾಯ ಕಂಡಾಗ, ಅಸಹಾಯಕತೆ ಉಂಟಾದಾಗ, ಪ್ರೀತಿ ಎಂಬ ಜೀವಾಮೃತಕ್ಕೆ ಹಂಬಲಿಸುವಾಗ, ಕವಿತೆ ಹುಟ್ಟುತ್ತದೆ.

ಅರಿ ಮತ್ತು ಸರಿ

‘ಅರಿ’ ಎನ್ನುವಲ್ಲೇ ಪದಾರ್ಥ ದ್ವಂದ್ವ. ‘ಸರಿ’ ಎಂದು ಹೇಳಬಹುದೇ? ಇದೆಂದಿಗೂ ಸರಿಯಲ್ಲ. ಅರಿತ ಮೇಲೆ ವೈರತ್ವಕ್ಕೆ ಇಂಬಿಲ್ಲ ಅರಿತು ಬೆರೆಯುವ ಸೊಗಸಿಗೆ ವಿವರ ಬೇಕಿಲ್ಲ. ಮತ್ತಿನ್ನು ಅರಿತು ‘ಸರಿಯುವ’ ನೋವು ಅರಿತವಗೆ ಸಹನೀಯವಂತೂ ಅಲ್ಲವೇ ಅಲ್ಲ!

ಅರಿವನ್ನು ಬೆಚ್ಚಗೆ ಎದೆಯೊಳಗೆ ಇಳಿಸಿಕೊಳ್ಳುತ್ತಾ ಲವಲವಿಕೆಯ ಹಾಸಿಗೆಯಲ್ಲಿ ಹಗುರ ಪವಡಿಸುವ ಮನಸ್ಸು ಮರುಗಳಿಗೆ ಎದುರು ನೋಡುವುದು ಅದೇ ಅರಿವಿನ ಬತ್ತಿ ಹೊಸೆವ ಹಸನು ಪ್ರೀತಿಗಾಗಿ ಚಿಟಿಕೆಯಷ್ಟು ಕನಸ ಕಡಕ್ಕಾಗಿ.

ಆದರೇಕೆ ಅನುದಿನದ ಅರಿವಿನ ನಾದದಲ್ಲಿ ಅಪಲಾಪದ ರಾಗ ಹೊಮ್ಮುತ್ತಿದೆ ಅರಿವಿನ ರಾಗವೂ ಉಗ್ಗಡಿಸುತ್ತಿದೆ ಅರಿವಿನ ತಾಣವೂ ಮಗ್ಗಲು ಬದಲಾಯಿಸುವಂತಿದೆ. ಕೊಳಲ ಅರಿವಿನ ಕಂಠ ಅಪಶೃತಿ ಹೊಮ್ಮಿಸುವುದ ತಾಲೀಮು ನಡೆಸುತ್ತಿದೆ. ಅರಿವಿನ ಕಣ್ಣಲ್ಲಿ ಮಸುಕಾಗುತ್ತಿದೆ ಇರುವಿಕೆಯ ಅರಿವು.

ಇಹಪರದ ನಡುವೆ ಬಯಕೆ ಕೋರಿಕೆ ಕನವರಿಕೆ ಕಾಣಲಾಗದ್ದ ಕಾಣುವ ಬಯಕೆ ಕಂಡಿದ್ದ ಉಂಡಿದ್ದ ಮನಗಂಡೆನೆಂದುಕೊಂಡಿದ್ದ ಖಂಡಿಸುವ ಹಲಬುವಿಕೆ.

ಸೋಗಿನ ಅರಿವಿರಬಹುದೇ? ಸೊಗಸಾಗಿ ಹೆಣೆದ ಬದ್ಧತೆಯ ಪ್ರ ಬುದ್ಧನ ಚಿತ್ರಪಟ ಚಂಚಲಚಿತ್ತದ ಎದೆಯೊಳಗೆ.

‘ಇರುವೆ’ ಎನ್ನುವ ಮರುಕ್ಷಣದಿ ‘ಸರಿವೆ’ನೆಂಬ ಇರದುದರೆಡೆಗೆ ತುಡಿಯುವ ಅರಿವೆಂಬ ಹರಕು ಅರಿವೆಯ ತೊಟ್ಟು ಅನವರತ ಇರಿವ, ಕೊರೆವ, ಸರಿವ, ಅರಿಯ ಸಹಿಸುವುದೇ ಬದುಕೇ?

avitha kavithe

ನಾಗರೇಖಾ ಅವರ ಪುಸ್ತಕಗಳು

ಪರಿಚಯ: ನಾಗರೇಖಾ ಗಾಂವಕರ ಕೃಷಿ ಕುಟುಂಬದಿಂದ ಬಂದವರು. ಹುಟ್ಟಿದ್ದು ಉತ್ತರಕನ್ನಡ ಜಿಲ್ಲೆಯ ಅಡ್ಲೂರು ಎಂಬ ಗ್ರಾಮದಲ್ಲಿ. ಓದಿದ್ದು ಕನ್ನಡ ಮತ್ತು ಇಂಗ್ಲಿಷ ಭಾಷೆಯಲ್ಲಿ ಎಂ.ಎ ಪದವಿ. ವೃತ್ತಿಯಿಂದ ಉಪನ್ಯಾಸಕಿಯಾಗಿದ್ದು, ಸದ್ಯ ಸರಕಾರಿ ಪದವಿಪೂರ್ವ ಕಾಲೇಜು ದಾಂಡೇಲಿಯಲ್ಲಿ ಉಪನ್ಯಾಸಕಿಯಾಗಿರುತ್ತಾರೆ. ಪ್ರಕಟಿತ ಕೃತಿಗಳು: ಏಣಿ, ಪದಗಳೊಂದಿಗೆ ನಾನು, ಬರ್ಫದ ಬೆಂಕಿ (ಕವನ ಸಂಕಲನಗಳು) ಪಾಶ್ಚಿಮಾತ್ಯ ಸಾಹಿತ್ಯ ಲೋಕ, ಆಂಗ್ಲ ಸಾಹಿತ್ಯ ಲೋಕ (ಅಂಕಣ ಬರಹ ಕೃತಿ) ಕವಾಟ- ಪುಸ್ತಕ ಪರಿಚಯ ಕೃತಿ. ಪ್ರಶಸ್ತಿಗಳು: ‘ಏಣಿ’ ಕವನ ಸಂಕಲನಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಶ್ರೀಮತಿ ಶಾರದಾರಾಮಲಿಂಗಪ್ಪ ದತ್ತಿ ಪ್ರಶಸ್ತಿ, ‘ಬರ್ಫದ ಬೆಂಕಿ’ ಸಂಕಲನಕ್ಕೆ ಬೆಟಗೇರಿ ಕೃಷ್ಣಶರ್ಮ ಯುವ ಕಾವ್ಯ ಪ್ರಶಸ್ತಿ ಹಾಗೂ ಕರ್ನಾಟಕ ಲೇಖಕಿಯರ ಸಂಘ ಕಾವ್ಯಕ್ಕೆ ನೀಡುವ ಗೀತಾ ದೇಸಾಯಿ ದತ್ತಿಬಹುಮಾನ ಲಭಿಸಿದೆ. ‘ಮೌನದೊಳಗೊಂದು ಅಂತರ್ಧಾನ’ ಕಥಾ ಸಂಕಲನ ಹಸ್ತಪ್ರತಿಗೆ ಜಗಜ್ಯೋತಿ ಕಲಾವೃಂದ ಡೊಂಬಿವಿಲಿ, ಮುಂಬೈ ಇವರು ಕೊಡಮಾಡುವ ಸುಶೀಲಾ ಶೆಟ್ಟಿ ಕಥಾ ಪ್ರಶಸ್ತಿ ಲಭಿಸಿದೆ.

ಇದನ್ನೂ ಓದಿ : Poetry ; ಅವಿತ ಕವಿತೆ : ಅಡಿಗೆ ಆಟದ ಕಲ್ಲು ಎಲೆಚೂರು ಹೂವಿನ ಚಟ್ನಿ ಇಂದೇ ನಿಮ್ಮ ಅಂಗೈಯಲ್ಲಿ

Avitha Kavithe A poetry column by Nagarekha Gaonkar

Published On - 11:09 am, Sun, 4 April 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ