Poetry : ಅವಿತಕವಿತೆ ; ನಾನೆಂದೂ ಕೇಳುವುದಿಲ್ಲ ಯಾವುದು ನಿನ್ನ ದೇಶ ಅಥವಾ ಅಲ್ಲೂ ಉಂಟಾ ಗಂಡಸರ ಪದಕೋಶ?

Poem : ‘ಒಂದು ವಾಕ್ಯದ ಗಾಳಕ್ಕೆ ಸಿಗದ ಮೀನು; ಬಲೆಯನ್ನು ಹರಿದು ಪಾರಾಗುವ ಹಕ್ಕಿ ಈ ಕವಿತೆ. ನಿದ್ರೆ ಮತ್ತು ನಿದ್ರಾಹೀನತೆಯಲ್ಲಿ, ಪ್ರಜ್ಞೆ ಮತ್ತು ಪ್ರಜ್ಞಾಹೀನತೆಯಲ್ಲಿ, ಹಸಿವು ಮತ್ತು ಹೊಟ್ಟೆ ತುಂಬಿದ ಸ್ಥಿತಿಯಲ್ಲಿ ಕವಿತೆ ಹುಟ್ಟುತ್ತದೆ. ಒಂದು ಬೈಝಾಂಟಿಯಂ ಯಾನದಂತೆ, ಸೆಕೆಂಡ್ ಕಮಿಂಗ್​ನಂತೆ!‘ ಡಾ. ರಮೇಶ ಅರೋಲಿ

Poetry : ಅವಿತಕವಿತೆ ; ನಾನೆಂದೂ ಕೇಳುವುದಿಲ್ಲ ಯಾವುದು ನಿನ್ನ ದೇಶ ಅಥವಾ ಅಲ್ಲೂ ಉಂಟಾ ಗಂಡಸರ ಪದಕೋಶ?
Follow us
ಶ್ರೀದೇವಿ ಕಳಸದ
|

Updated on:Jul 04, 2021 | 7:30 PM

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈ ವಾರ ಕವಿ, ಅನುವಾದಕ ಡಾ. ರಮೇಶ ಅರೋಲಿ ಅವರ ಕವಿತೆಗಳು ನಿಮ್ಮ ಓದಿಗೆ. ಇವರು ರಾಯಚೂರಿನವರು. ದೆಹಲಿ ವಿಶ್ವವಿದ್ಯಾಲಯದ ಕಮಲಾ ನೆಹರು ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿದ್ದಾರೆ. ‘ಎಳೆಯ ಪಾಪದ ಹೆಸರು ನಿಮ್ಮಿಚ್ಛೆಯಂತೆ ಇಟ್ಟುಕೊಳ್ಳಿ’, ‘ಜುಲುಮೆ’, ‘ಬಿಡು ಸಾಕು ಈ ಕೇಡುಗಾಲಕ್ಕಿಷ್ಟು’ ಕವನ ಸಂಕಲನಗಳು. ತೆಲುಗಿನ ಗುಡಿಪಾಟಿ ವೆಂಕಟಾಚಲಂರ ‘ಮೈದಾನಂ’ ಅನ್ನು ಕನ್ನಡಕ್ಕೆ ತಂದಿದ್ದಾರೆ. ಬಂಡಾಯದ ಬೋಳಬಂಡೆಪ್ಪ (ರಾಯಚೂರಿನ ದಲಿತ-ಬಂಡಾಯ ಚಳವಳಿಯ ದಿ. ಬೋಳಬಂಡೆಪ್ಪನ ಕುರಿತಾದ ಬರಹ) ಪ್ರಕಟಿತ ಕೃತಿಗಳು. ಶಿವಮೊಗ್ಗದ ಕರ್ನಾಟಕ ಸಂಘದ ‘ಡಾ.ಜಿ. ಎಸ್.ಶಿವರುದ್ರಪ್ಪ ಕಾವ್ಯ ಪ್ರಶಸ್ತಿ’, ‘ಡಾ. ಪುತಿನ ಕಾವ್ಯ ನಾಟಕ ಪುರಸ್ಕಾರ’ ಇವರಿಗೆ ಲಭಿಸಿವೆ. * ಆಧುನಿಕ (ನವ್ಯ, ನವೋದಯ) ಕವಿತೆಗಳನ್ನು ಒಂದೆಡೆಗಿರಿಸಿ, ದೇಸೀ ಶೈಲಿಯ ಹಾಡುಗಳನ್ನೂ ಗೇಯ ಗೀತೆಗಳನ್ನೂ ಇನ್ನೊಂದೆಡೆಗಿರಿಸಿ ಪರಸ್ಪರ ವಿರೋಧಿಗಳಾಗಿ ಕಾಣುವ ಪರಿಪಾಠವೊಂದಿದೆ. ಇದಕ್ಕೆ ಬದಲಾಗಿ ಇವೆರಡನ್ನೂ ಕಾವ್ಯದ ಎರಡು ವಲಯಗಳನ್ನಾಗಿ ನೋಡುವುದು ಸಾಧ್ಯವಿಲ್ಲವೇ ಎಂಬ ಪ್ರಶ್ನೆಯನ್ನು ರಮೇಶರ ಕಾವ್ಯಧರ್ಮ ಕೇಳುವಂತಿದೆ. ಈ ವಲಯಗಳು ಕಾಮನಬಿಲ್ಲಿನ ರಂಗುಗಳಂತೆ ಇವುಗಳ ನಡುವಿನ ಗಡಿಗಳನ್ನು ನಿಖರವಾಗಿ ಹೇಳುವಂತಿಲ್ಲ. ಗಡಿಯಲ್ಲಿ ಅವು ಒಂದರ ಜತೆ ಇನ್ನೊಂದು ಬೆರೆತುಕೊಳ್ಳುತ್ತವೆ. ಇದಕ್ಕೆ ಸಂವಾದಿಯೆಂಬಂತೆ, ಅರ್ಥ (ವೈಚಾರಿಕತೆ) ಮತ್ತು ಭಾವ ಎಂಬ ಪರಿಕಲ್ಪನೆಗಳು ಸಹ ಸಮಸ್ಯಾತ್ಮಕವಾಗಿರುವುದೇ ಇಲ್ಲ. ಯಾವುದು ಅರ್ಥ, ಯಾವುದು ಭಾವ? ಡಾಂಟೆಯ ‘ಡಿವೈನ್ ಕಾಮೆಡಿ’ಯಲ್ಲಿ ತನ್ನನ್ನು ಸ್ವರ್ಗಕ್ಕೆ ಕರೆದೊಯ್ಯಲು ಬಂದ ಬಿಯಾಟ್ರಿಸಳನ್ನು ಕಂಡು ಅವಳ ಕಣ್ಣುಗಳನ್ನೇ ನೋಡುವ ಕವಿಗೆ ಆಕೆ ಹೇಳುತ್ತಾಳೆ, ಸ್ವರ್ಗವಿರುವುದು ನನ್ನ ಕಣ್ಣುಗಳಲ್ಲಿ ಅಲ್ಲ ಎಂಬುದಾಗಿ. ಆ ಸಂದರ್ಭಕ್ಕೆ ಅತ್ಯಂತ ಸೊಗಸಾದ ಮಾತು ಇದು.  ಅರ್ಥ-ಭಾವ ವಿಂಗಡಿಸುತ್ತ ಕೂರುವುದು ಶುಷ್ಕ ಕಾರ್ಯವಾಗುತ್ತದೆ. ಈ ಮಾತು ಬಹುತೇಕ ಕಾವ್ಯಲೋಕಕ್ಕೆ ಒಪ್ಪೀತು. ಕೆ.ವಿ ತಿರುಮಲೇಶ, ಹಿರಿಯ ಸಾಹಿತಿ, ವಿಮರ್ಶಕರು

*

ನಿಮ್ಮ ಕವನಗಳಲ್ಲಿ ಹೊಮ್ಮುವ ವಿದ್ರಾವಕ ಸನ್ನಿವೇಶದ ಹಿನ್ನೆಲೆಯೊಂದು ಕಾವ್ಯವಾಗಿ ನುಡಿಯುವ ರೀತಿ ಸತ್ವಯುತ ಮತ್ತು ಕಾಡಿಸುವಷ್ಟು ಪರಿಣಾಮಕಾರಿಯೂ ಆಗಿದೆ. ಬದುಕಿನ ಪ್ರೇಮವನ್ನು ತಲ್ಲೀನವಾಗಿ ವರ್ಣಿಸುವ ನಿಮ್ಮ ಕವಿತೆಗಳು ತಳಮಳಗಳನ್ನೂ ಅಷ್ಟೇ ಆಳವಾಗಿ ಬಗೆದು ತೋರಬಲ್ಲವು. ಬದುಕಿನ ಸೌಂದರ್ಯವನ್ನು ಗ್ರಹಿಸುವಾಗ ಉಂಟಾಗುವ ವಿಹ್ವಲತೆ ಮತ್ತು ಅದಕ್ಕೆ ಕಟ್ಟಿಕೊಡುವ ರೂಪಕಗಳೂ ಅಷ್ಟೇ ಮಾರ್ಮಿಕ.  ಪ್ರೇಮವನ್ನು-ಹೋರಾಟವನ್ನು, ನ್ಯಾಯಾನ್ಯಾಯಗಳ ತಾಕಲಾಟವನ್ನು ಈವರೆಗೆ ಬಂದಿರುವ ‘ಪ್ರತಿಭಟನಾ’ ಕಾವ್ಯದ ಜಾಡಿಗಿಂತ ಭಿನ್ನವಾದ, ಶಕ್ತವಾದ ವಿಧಾನದಲ್ಲಿ ನಿಮ್ಮ ಕವನಗಳು ಅಭಿವ್ಯಕ್ತಿಸಿವೆ. ಇನ್ನು ಮಧುಬಟ್ಟಲಿಗೆ ನೀವು ಸುರಿಯುವ ಹೊಸ ಕಾವ್ಯಮದಿರೆ ಕಳಪೆ ಹೂಜಿಯಿಂದ ಬಗ್ಗಿಸಿ ತಂದದ್ದಲ್ಲ ಎಂಬುದನ್ನು ನಾನು ಮನಸಾರೆ ಹೇಳುತ್ತೇನೆ. ಕಾವ್ಯವಾಗಿ ಕೆನೆಗಟ್ಟಿದ ಇಷ್ಟೊಂದು ನಿದರ್ಶನಗಳು ಸಿಕ್ಕಿದ್ದರಿಂದ ಸಂತೋಷ ಹುಟ್ಟಿ, ನಿಮ್ಮ ಕೆಲ ಅಶಕ್ತ ಕವಿತೆಗಳ ಬಗ್ಗೆ ಜಗಳ ತೆಗೆಯುವುದನ್ನೇ ಕೈಬಿಟ್ಟಿದ್ದೇನೆ. ಸೋತ ಮಾತುಗಳ ಜೊತೆ ನನಗೇನು ಕೆಲಸ! ಹೊಸ ತಲೆಮಾರಿನ ಕವಿಗಳಲ್ಲಿ ಬನಿಯುಳ್ಳ ಮತ್ತೊಂದು ಯುವ ಕವಿ ಧ್ವನಿ ರಾಯಚೂರಿನ ಬಿಸಿಲ ಸೀಮೆಯ ತಳಾರದ ನೆಲದಿಂದ ಮೂಡಿಬಂದಿದೆ ಎಂಬುದು ಎಲ್ಲರಿಗೂ ಗೊತ್ತಾಗುವಷ್ಟು ಬರೆಯಿರಿ. ಬರೆಯುತ್ತಲೇ ಇರಿ. ಡಾ. ಬಂಜಗೆರೆ ಜಯಪ್ರಕಾಶ, ಹಿರಿಯ ವಿಮರ್ಶಕರು *

ನಿಜ ಹೇಳಬೇಕೆಂದರೆ

ನನ್ನ ಕಣ್ಣುಗಳಲ್ಲಿ ಒಂದು ರಾತ್ರಿಯನ್ನು ಸುಟ್ಟಿದ್ದೇನೆ ನಿನ್ನ ಕಣ್ಣುಗಳಲ್ಲಿ ಒಂದು ಚಳಿಗಾಲವನ್ನು ಕಾಯಿಸಿದ್ದೇನೆ ನನ್ನ ಬೊಗಸೆಗೆ ಸಿಕ್ಕ ಮಿಣುಕು ಹುಳಗಳನ್ನು ಹೆಕ್ಕಿ ‘ಇಗೋ ಇವು ನಮ್ಮ ಮಕ್ಕಳು, ಸರಿಯಾಗಿ ಜೋಪಾನ ಮಾಡು’ ಎಂದು ನಿನ್ನ ಉಡಿಯೊಳಗೆ ಹಾಕಿದ ಹೊತ್ತು ನಾವು ಬಿಕ್ಕಿಳಿಸಿ ಅತ್ತಿದ್ದು ಈಗ ಸುಳ್ಳೆನ್ನಲಾರೆ!

ನಿನಗೆ ಕೇಳಿಸದ ಒಂದು ಹಾಡಿನ ಬೀಜಯಿತ್ತು ನನ್ನ ಬಳಿ ನಾನದನ್ನು ಮಣ್ಣಿನಲ್ಲಿ ಹೂತು; ನನ್ನ ಕಣ್ಣುಗಳಿಂದ ನೀರೆರೆದು ಮರವಾಗಿಸಿ, ಎಲೆಗಳಿಗೆ ಕೊರಳೆತ್ತಿ ಕೂಗಲು ಕಲಿಸಿದೆ, ಆದರೆ ನಿನ್ನ ಕಿವಿಗಳು ಇಂದು ಇಯರ್ ಫೋನಿನಲ್ಲಿ ಇನ್ಯಾವುದೋ ಹಾಡು ಕೇಳುವುದನು ಊಹಿಸಲಾರೆ!

ಗಾಳಿಗೂ ಒಂದು ದರ ನಿಗದಿ ಮಾಡಿದ ಈ ಹಗಲಿಗೆ ತಲೆ ಮೇಲೆ ಕೈಯಿಟ್ಟು ಇಲ್ಲವೆ ಎದೆ ಮೇಲೆ ಕೈಯಿಟ್ಟು ಬೇರೆ ಬೇರೆ ಮಾತಾಡಲಾರೆ ನನ್ನ ಕೊರಳು ನಿನಗೆ ಪರಾಯ ಅನಿಸಿದ ದಿನ ಆಣೆಗಳಿಗಾಗಿ ಮತ್ತೆಂದೂ ಕೈಯಿಗಳನು ಎತ್ತಲಾರೆ!

ಗುಡಿ ಗುಂಡಾರ, ಕಟಕಟೆಯಲ್ಲಿ ಈ ಪ್ರಕರಣ ವಿಚಾರಣೆಯಾಗಿ ಇತ್ಯರ್ಥವಾಗುವ ಹಾಗಿದ್ದಿದ್ದರೆ, ಮರದ ಹಕ್ಕಿ ನನಗೊಂದು ಜಾಮೀನು ಕೊಡಿಸಬಹುದಿತ್ತು ನಾಲಗೆಯಿಂದ ನನ್ನನ್ನು ತುಂಡರಿಸಿದವಳೆದುರು ಹೇಳು ಈಗ, ಅಂದರೆ ನಾನೇನೂ ಹೇಳಲಾರೆ!

ಜೋಳದ ಅಳತೆಯ ದೂರನು ಉರಿಗಡಾಯಿಯಲ್ಲಿ ಸುರಿದು ಇವು ನನ್ನವು, ಅವು ನಿನ್ನವು ಎಂದು ಎಣಿಸಲಾರೆ! ಇಲ್ಲಿ ಒಳ್ಳೆಯ ಕಾಲದಿ ಕೆಟ್ಟ ನಿರ್ಣಯಗಳನ್ನು; ಕೆಟ್ಟ ಕಾಲದಿ ಒಳ್ಳೆಯ ನಿರ್ಣಯಗಳನ್ನು ತೆಗೆದುಕೊಂಡವರಿಗೂ ನೆಲ ನಡೆಯುವ ಹಕ್ಕು ದಯಪಾಲಿಸಲೇ ಇಲ್ಲ ಅನ್ನಲಾರೆ! ಅದಕ್ಕಾಗಿ, ನಿದ್ರೆಯಲ್ಲಿ ನಡೆಯುವವರಿಗಾಗಿಯೇ ಇಲ್ಲೊಂದು ನ್ಯಾಯಾಲಯ ಬೇಕು ಎಂಥ ಪಾಪಿಷ್ಟರಿಗೂ ಒಂದು ದಿನಾಂಕ ಕೊಡಬೇಕು ಅವರವರ ಅಹವಾಲಿಗೆ ಅವರವರೇ ವಕೀಲರಾಗಬೇಕು ನಿಜ ಹೇಳಬೇಕೆಂದರೆ… ನಮ್ಮ ಪಾಪದ ತೀರ್ಪನು ಅನುಮಾನಿಸಿ ಮೇಲ್ಮನವಿ ಹೋಗುವಂತಿರಬೇಕು!

*

avitha kavithe

ರಮೇಶ ಅರೋಲಿ ಕೈಬರಹದೊಂದಿಗೆ

ಒಂದು ವಾಕ್ಯದ ಗಾಳಕ್ಕೆ ಸಿಗದ ಮೀನು; ಬಲೆಯನ್ನು ಹರಿದು ಪಾರಾಗುವ ಹಕ್ಕಿ ಈ ಕವಿತೆ. ನಿದ್ರೆ ಮತ್ತು ನಿದ್ರಾಹೀನತೆಯಲ್ಲಿ, ಪ್ರಜ್ಞೆ ಮತ್ತು ಪ್ರಜ್ಞಾಹೀನತೆಯಲ್ಲಿ, ಹಸಿವು ಮತ್ತು ಹೊಟ್ಟೆ ತುಂಬಿದ ಸ್ಥಿತಿಯಲ್ಲಿ ಕವಿತೆ ಹುಟ್ಟುತ್ತದೆ. ಒಂದು ಬೈಝಾಂಟಿಯಂ ಯಾನದಂತೆ, ಸೆಕೆಂಡ್ ಕಮಿಂಗ್​ನಂತೆ! ಎಚ್ಚರದಲ್ಲಿ ಈ ಲೋಕದ ದಂದುಗಳಿಗೆ ಮಿಡಿಯುವಂತೆ, ನಿದ್ದೆಯಲ್ಲಿ ಬೇರೊಂದು ಲೋಕಕ್ಕೆ ಹಾರುವಂತೆ, ಪ್ರಜ್ಞೆಯಲ್ಲಿ ಕೋರೆಗಳನ್ನು ತಿದ್ದುವಂತೆ, ಅದರ ರಹಿತತೆಯಲ್ಲಿ ನಮ್ಮನ್ನು ನಾವು ತಿವಿದುಕೊಳ್ಳುವಂತೆ, ನೀರಡಿಕೆ, ಹಸಿವು ಕರುಳಿನ ಖಾಲಿ ಸದ್ದನ್ನು ಬಾಯಿ ಇಲ್ಲದೆಯೂ ಹೊರಡಿಸುವಂತೆ ಕವಿತೆ ಒದಗಿ ಬರುತ್ತದೆ. ತೇಗಲು ಸರಿಯಾದ ಪದಕ್ಕೆ ತಿಣುಕುವುದು ಬೇರೆಯ ಮಾತು. ಇದು ಸದಾ ನಡೆಯುವ ಕ್ರಿಯೆ. ಕವಿತೆಯೆಂದರೆ ದೂರಲ್ಲ, ಬರಿ ಬಣ್ಣದ ಪದಗಳ ತೇರಲ್ಲ. ಅದೊಂದು ತಮಟೆ ಮತ್ತು ಕೋಲಿಗೆ ಅಂಟಿದ ನಂಟು. *

ನಿನ್ನ ಗುರುತುಗಳ ಗೈರು ಹಾಜರಿಯಲ್ಲಿ

ನಾನಿದೆಲ್ಲವನ್ನು ನಂಬಬಾರದು ಅಂದುಕೊಳ್ಳುತ್ತೇನೆ ಆದರೆ ಅವನು ಕರೆವ ಪರಿಗೆ ಕನ್ನಡಿಯಲಿ ಪಾತಿ ಮಾಡಿದ ಕಣ್ಣು ಒಮ್ಮೆ ಅನುಮತಿಸಿ ಹೋಗಿ ಬಾ ಅನ್ನುತ್ತವೆ ಇದರ ಕುರಿತು ಬರೆದು ಹರಿದೆಸೆದ ಹಾಳೆಯನು ನನ್ನ ಬೆರಳುಗಳು ಒಟ್ಟು ಮಾಡಿ ಅವಕ್ಕೆ ಪುಪ್ಪುಸ ಮೂಡಿಸುತ್ತವೆ ಮತ್ತವು ಸ್ವಲ್ಪ ಕಾಡಿಗೆ ಮೆತ್ತಿಕೊಳ್ಳಲು ಸೂಚಿಸುತ್ತವೆ ಹಾರಿ ಬರುತ್ತವೆ ಮಳೆಗಾಲದ ತೂಮು ನನ್ನತ್ತ ಅವನು ನಗರಕ್ಕೆ ಬಂದ ಸುದ್ದಿಯನು ಬಿತ್ತರಿಸುತ್ತ!

ಒಂದು ಮಧ್ಯಾನ ತನಗಾಗದ ವಾರ್ತೆಗಳನ್ನು ಎಂದೂ ಕೇಳದ ಆದರೆ ಟೀವಿಗಳ ಎದುರು ತುಟಿ ಬಿಗಿಯುತ್ತಿರುವ ನಾಯಕನಟನ ಆಗಮನಕ್ಕೆ ಮನೆಮಂದಿ ಕಾಯುವಾಗ ನಾನೊಂದು ಸಾಕುನೊಣದಂತೆ ಅವನೆಡೆಗೆ ಹಾರುತ್ತೇನೆ ನೇತು ಹಾಕಿಕೊಂಡು ಹೋಗುವುದಿಲ್ಲ ನಾಮಫಲಕವನ್ನು ಆದರೆ ಅವನ ಕಣ್ಣಗುಡ್ಡೆಗಳು ನೆಟ್ಟಿರುತ್ತವೆ ಓದಲಾಗದ ಸೂಚನೆಪತ್ರವೊಂದು ಮೆತ್ತಿಕೊಂಡಂತೆ ಬೆನ್ನುಗೋಡೆಗೆ

ಎದುರು ನಿಂತವನೆದುರು ತುಟಿ ಚೀಲದಲಿ ನಗುವು ಗಂಟಿಕ್ಕಿ ನದುರು ಬಿಡುತ್ತೇನೆ ಮತ್ತು ಯಾರ ಕಣ್ಣು ಬೀಳದಿರಲೆಂದು ನದುರು ತೆಗೆಯುತ್ತೇನೆ! ನಾನೆಂದೂ ಕೇಳುವುದಿಲ್ಲ ಯಾವುದು ನಿನ್ನ ದೇಶ, ಅಥವಾ ಅಲ್ಲೂ ಉಂಟಾ ಗಂಡಸರ ಪದಕೋಶ? ಒಮ್ಮೆ ಶಾಲೆಯಲಿ ‘ಚಿನಾಲಿ ‘ ಪದಕ್ಕೆ ಪುಲ್ಲಿಂಗವೇನೆಂದಾಗ ಕೊನೆ ಸಾಲಿನಿಂದ ‘ಚಿನಾಲಿ ಮಗ ‘ ಎಂದು ತೂರಿ ಬಂದಾಗಿನಿಂದ ನಾನು ಕೇಳುವುದಿಲ್ಲ ನಿನ್ನ ಹೆತ್ತ ನೆಲ ಅದೃಷ್ಟಶಾಲಿಯೇ ಎಂದು!

ನಮ್ಮ ನಿರಂತರ ಭೇಟಿಗಳಲ್ಲಿ ಬೇಡಿಕೊಳ್ಳುವ ಆ ಮೊದಲ ಮುತ್ತುಗಳು ಘಟಿಸುವುದಿಲ್ಲವೆಂದಲ್ಲ ತುಟಿಗೆ ಒತ್ತಬೇಕಾದುದನ್ನು ಭುಜಗಳು ನುಂಗಿಬಿಡುತ್ತವೆ ಅಷ್ಟೆ ಮತ್ತದರ ಮಾತು ಅಸುನೀಗುತ್ತದೆ ಕಿರುನಾಲಗೆಯಲಿ ಈ ಸಲ ಬಿಡುವುದೇ ಇಲ್ಲ, ಎಳೆದು ಮಾಡಿಬಿಡುವೆ ಗಡಿಬಿಡಿ ಎಂದೆಲ್ಲ ಗುಣಿಸಿಕೊಂಡವಳಿಗೆ ಅಂದು ತಡೆಯಲಾಗದ ನೆಗಡಿ!

ನಿನ್ನ ಹೃದಯ ಒಂದು ಕತ್ತಲ ಪುಷ್ಕರಣಿ ಅಂದವನ ಕಣ್ಣು ನೀರಿನಲಿ ತೇಲುವ ನಕ್ಷತ್ರಗಳನು ಎಣಿಸುತ್ತಿರುವಾಗ ದಾರಿಯಲಿ ಎದುರಾದ ಬೆಕ್ಕುಗಳಿಗೆ ಬಿಸ್ಕೀಟು ನೀಡುವ ಥರ ಕೇಳುತ್ತಾಳೆ ಮತ್ತೆ ತನ್ನನ್ನೇ ತನ್ನ ಕುರಿತು ಚುಕ್ಕಿಯಾಗುವ ಇರುವೆ ಇರಾದೆಯನು ಅಳಿಯಬಹುದೇ ಮರ?

ಅವನ ಹಣ್ಣುಗೂದಲಿಗೆ ನನ್ನ ಬೆರಳು ತಾಕಿದರೆ ಅವು ಕಂದುಬಣ್ಣಕ್ಕೆ ತಿರುಗುತ್ತವೆ, ನಾನು ರಂಗಿನ ಪತಂಗವಾಗುತ್ತೇನೆ ಎಂದಾದರು ನಂಬಿಸಲಾಗದವನ ಮಾತುಗಳಲ್ಲಿ ಬೊಗಸೆ ಹೆಕ್ಕಿ ನನ್ನ ಕೂದಲೆಳೆಗೆ ಪೋಣಿಸುತ್ತೇನೆ ಮತ್ತು; ಅವನ ಕೈಯಿಗಿಟ್ಟು ಕೊರಳಿಗೆ ತೊಡಿಸಲು ಹೇಳುತ್ತೇನೆ. ಈವ್ ಮರಿಮೊಮ್ಮಗಳು ಆಡಮ್ನ ಮರಿಮೊಮ್ಮಗನನ್ನು ಗೊತ್ತುಪಡಿಸುವ ರೀತಿ; ಇಲ್ಲ ಮತ್ತೆ ಅಗಲಿದರೆ ನೆನಪಿಸುವ ರೀತಿ ಆಗ ಅವನ ರೆಪ್ಪೆಗಳಿಂದ ಸುರಿವ ಮುತ್ತುಗಳನ್ನು ನನ್ನ ದುಪ್ಪಟ್ಟಾದಲ್ಲಿ ಉಡಿ ತುಂಬಿಕೊಳ್ಳುತ್ತೇನೆ ರಾತ್ರಿ ಆಕಾಶದಲ್ಲಿ ನಿಷೇಧ ಘೋಷಿಸುವ ಮುನ್ನ ಹಿಂದುರುಗುತ್ತೇನೆ!

*

ಗಝಲ್ -1 ಎಣಿಸಿಕೊಡು ನನ್ನ ಪಾಲಿನ ಆ ಕಡೆ ಘಳಿಗೆಯನು, ನಾ ಕೇಳಲು ಮರೆತು ಬಿಟ್ಟರೇನು ಗತಿ ಯಾರಿಗೆ ಗೊತ್ತು ಹಿಂಪಡೆಯಲು ತಡವಾದಲ್ಲಿ, ನನ್ನನ್ನೇ ನೀನು ಮರೆತು ಬಿಟ್ಟರೇನು ಗತಿ!

ನಿನ್ನ ಕಣ್ಣುಗಳ ನಿಟ್ಟಿಸಿರು ನನ್ನ ಕಣ್ಣಿಗೆ ದಯಪಾಲಿಸಲು, ನನಗೊಂದಿಷ್ಟು ಉಳಿಸಿಕೊಡು ಯಾರಿಗೆ ಗೊತ್ತು ನಾಳೆ ನಡು ರಾತ್ರಿಯ ನಗೆಕೂಟದ ನಡುವೆ, ಅವು ಇಂಗಿ ಬಿಟ್ಟರೇನು ಗತಿ!

ನಿನ್ನ ಬಿಕ್ಕಳಿಕೆಯಲಿ ನನ್ನ ಲೆಕ್ಕ ಚುಕ್ತಾ ಮಾಡು, ಉಳಿದ ನನ್ನ ಆಯುಷ್ಯವನು ಉಳಿಸಿಕೊಡು ಯಾರಿಗೆ ಗೊತ್ತು ನನ್ನ ಪಾಪ ನಿವೇದನೆಯ ದಿನ, ತೀರ್ಪಿಗೂ ಪರಿಗಣಿಸದೆ ಬಿಟ್ಟರೇನು ಗತಿ!

ಹೊತ್ತಾದ ಹೊತ್ತಲ್ಲಿ ತುಟಿಗೆ ತುಟಿ ಒತ್ತಿದ ಅಚ್ಚು ಮುದ್ರೆಗಳಲಿ, ನನ್ನವು ಏಸೆಂದು ತಿಳಿಸಿಕೊಡು ಯಾರಿಗೆ ಗೊತ್ತು ನಾಳೆ ಚಳಿಗಾಲದ ಹಸಿ ಗಾಳಿ ನಿನ್ನ ತುಟಿ ರಂಗನು ಅಳಿಸಿ ಬಿಟ್ಟರೇನು ಗತಿ!

ಬಿಗಿದಪ್ಪಿ ಕೆಡವಿದ ಆ ಎದೆ ಢವಢವಗಳಲಿ, ನನ್ನರ್ಧವನು ನನಗೆ ಗುಣಿಸಿ, ಭಾಗಿಸಿ ಕೊಡು ಯಾರಿಗೆ ಗೊತ್ತು ನಾಳೆ ನಾ ಬಳಿ ಸುಳಿದಾಗ ಎದೆ ಗುರುತಿಸದೆ ಮರೆತು ಬಿಟ್ಟರೇನು ಗತಿ!

ನಿನ್ನ ಮೊಲೆ ತೊಟ್ಟಿಗೆ ಹಸಿದ ಹಸುಳೆ ಆತುರದ, ಆ ಕಾತರವನು ನನಗಿಂದೇ ಅಳಿದು ಕೊಡು ಯಾರಿಗೆ ಗೊತ್ತು ರಾತ್ರಿ ನನ್ನ ನಾಲೆಗೆ ಮೇಲಿನ ಕರಿಮಚ್ಚೆ ಗುರುತು ಕರಗಿ ಬಿಟ್ಟರೇನು ಗತಿ!

avitha kavithe

ರಮೇಶ ಅವರ ಪುಸ್ತಕಗಳು

ಗಝಲ್- 2

ಇಲ್ಲಿ ಹುಯ್ದ ಧೋ ಮಳೆ ಎಲ್ಲಿಯ ಮೋಡದ್ದೆಂದು ತೊಯ್ದ ನೆಲ ಕೇಳಬಹುದು ಒಂದು ದಿನ ಈ ನಿಟ್ಟಿಸಿರು ಬಿಕ್ಕಳಿಕೆ ಅದ್ಯಾರ ರಂಗೋಲಿಯದೆಂದು ಬೆರಳ ತುದಿ ಕೇಳಬಹುದು ಒಂದು ದಿನ

ಇಬ್ಬನಿಯ ಸೆರಗಿನಲಿ ಒಬ್ಬಂಟಿ ನಾ, ತುಳಿದ ಹಾದಿಯ ತುಂಬ ಅದೆಲ್ಲಿಯ ಪರಿಚಿತ ಹೆಜ್ಜೆಗಳು? ತೊರೆದ ಊರಿಗೆ ಕರೆದು ತಂದ ನೆನಪು ಯಾರವೆಂದು ಕೂತ ಬಸ್ಸು ಕೇಳಬಹುದು ಒಂದು ದಿನ

ಮುರಿದ ಮುಳ್ಳು ಚಪ್ಪಲಿಯ ಹೊಕ್ಕು, ಕುಟುಕಿ ಕೆಣಕಿ ಕೇಳುವಾಗ ಹೇಳದಾದೆನು ಒಂದು ಸುಳ್ಳು ಎದೆ ಸೇರಿದ ಬಿದಿಗೆ ಚಂದಿರ ಕೊರಗುತಿಹನ್ಯಾಕೆಂದು ಹುಣಿವಿ ಕಣ್ಣು ಕೇಳಬಹುದು ಒಂದು ದಿನ

ದೂಷಿಸಲು ನಾನ್ಯಾರು ಈ ಸರಿಹೊತ್ತಿನ ಕತ್ತಲ ಕಟಕಟೆಯಲಿ, ಇಬ್ಬರೂ ದೋಷಿಗಳೆ ನಾಳೆ ಹಗಲಿಗೆ ‘ಅರೋಲಿ’ ಸಮಾಧಾನಿಸಿಕೊ, ಸಂಜೆ ಬಿಕ್ಕಳಿಕೆಯ ಕಾರಣ ಯಾರಾದರು ಕೇಳಬಹುದು ಒಂದು ದಿನ! * ಇದನ್ನೂ ಓದಿ : Poetry : ಅವಿತಕವಿತೆ ; ಸತ್ತಾಗ ಜನ ಹೇಳುವರು ಇಂತವರ ‘ತಾಯಿ’ ತೀರಿಹೋದಳೆಂದು

Published On - 11:08 am, Sun, 4 July 21

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ