Poetry; ಅವಿತಕವಿತೆ: ಥಣಾರನೆ ಕೋಲ್ಮಿಂಚು ಕುಳಿಯೊಳಗೆ ಬೆಳಕು

‘ಕವಿತೆಯೆಂಬ ಹೊರದಾರಿ ಸಿಗದೇ ಹೋಗಿದ್ದರೆ ಎಂಬ ಪ್ರಶ್ನೆ ಹುಟ್ಟಿದಾಗೆಲ್ಲ ಆತಂಕ. ಕವಿತೆ ಬಹಳ ಕಾಲ ಮುನಿಸಿಕೊಂಡಾಗ ಬದುಕಿನೆಡೆಗೇ ನಿರಾಸಕ್ತಿ. ಈಮಟ್ಟಿಗೆ 'ನನ್ನ ಹಚ್ಚಿಕೊಳ್ಳುವುದು ಸರಿಯಲ್ಲ' ಎನ್ನುವ ಕಾವ್ಯದ ಬುದ್ದಿಮಾತಿಗೆ ನನ್ನದು ಜಾಣಕಿವುಡು. ಕಾವ್ಯಕ್ಕೆ ಮಾರುಕಟ್ಟೆ ಇಲ್ಲ ಎನ್ನುವ ಮಾತಿದ್ದರೂ ಕಾವ್ಯದ ಹೊರತಾಗಿ ನಾನು ಅಪೂರ್ಣ. ಕಾವ್ಯ ನಿರಂತರತೆಯನ್ನು ಉಳಿಸಿಕೊಳ್ಳುವ ಸವಾಲಿಗೆ ಸದಾ ನನ್ನ ಬದುಕೂ ಅತೃಪ್ತ. ಯಾವತ್ತೂ ಕಾವ್ಯ ನನ್ನ ಮೋಹದ ಸೆರಗಿಂದ ಆಚೆ ಹೋಗದಿರಲಿ ಎಂಬ ಹುಚ್ಚು ಹಂಬಲ ನನ್ನ ಪ್ರಾರ್ಥನೆಯ ಮೊದಲ ಸಾಲು.‘ ನಂದಿನಿ ಹೆದ್ದುರ್ಗ

Poetry; ಅವಿತಕವಿತೆ: ಥಣಾರನೆ ಕೋಲ್ಮಿಂಚು ಕುಳಿಯೊಳಗೆ ಬೆಳಕು
ನಂದಿನಿ ಹೆದ್ದುರ್ಗ
Follow us
ಶ್ರೀದೇವಿ ಕಳಸದ
|

Updated on:Mar 14, 2021 | 4:57 PM

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಕವಿ ನಂದಿನಿ ಹೆದ್ದುರ್ಗ ಅವರ ಕವಿತೆಗಳು ನಿಮ್ಮ ಓದಿಗೆ.

ಪರಿಕಲ್ಪನೆ : ಶ್ರೀದೇವಿ ಕಳಸದ

ಪ್ರೇಮ, ವಿರಹ, ವ್ಯಾಮೋಹ ಮತ್ತು ಕಾಮದ ಕುರಿತು ಬರೆಯುವುದು ಸಾಧ್ಯವೇ ಇಲ್ಲ ಎಂಬಂಥ ಕಾವ್ಯಪರಿಸರದಲ್ಲಿ, ನಂದಿನಿ ಹೆದ್ದುರ್ಗ ಬರೆದಿರುವ ಕವಿತೆಗಳು ಗಂಡುಹೆಣ್ಣಿನ ಸಂಬಂಧದ ಸಂಕೀರ್ಣತೆಯನ್ನು ಕಟ್ಟಿಕೊಡುತ್ತವೆ. ಕನ್ನಡದ ಮಟ್ಟಿಗೆ ಪ್ರೇಮವನ್ನು ಮತ್ತೊಂದು ಎತ್ತರಕ್ಕೆ ಒಯ್ಯತ್ತವೆ. ಪ್ರೇಮದ ಕುರಿತು ಹೇಳುತ್ತಲೇ ಅದನ್ನು ಕಾವ್ಯಕ್ಕೆ, ಬದುಕಿಗೆ ಮತ್ತು ನಶ್ವರತೆಗೆ ಒಗ್ಗಿಸುವಂಥ ರೂಪಕಗಳು ಮತ್ತೆ ಮತ್ತೆ ಎದುರಾಗುವುದನ್ನು ಈ ಪದ್ಯಗಳಲ್ಲಿ ಕಾಣಬಹುದು. ಬೊಗಸೆ ನೋವನ್ನು ಕಡ ಕೇಳುವ ಆತ್ಮವಿಶ್ವಾಸ , ಉಮೆಯನ್ನೂ ಉಮರನನ್ನೂ ಅಮರರನ್ನಾಗಿಸುವ ರೀತಿ, ಕವಿತೆಯ ಜೊತೆ ಸಫಲ ಪ್ರೇಮದ ನಿಟ್ಟುಸಿರನ್ನೂ ಅಘಟಿತ ಪ್ರಣಯದ ಚೀತ್ಕಾರವನ್ನೂ ತಳುಕುಹಾಕುವ ರೀತಿ- ಈ ಕವಿತೆಗಳನ್ನು ಮಧುರಗೊಳಿಸುತ್ತಲೇ ಹುರಿಗೊಳಿಸಿದೆ. ಪ್ರತಿಭಟನೆ, ನೋವು, ಸಮಾನತೆ, ಅಸಹಾಯಕತೆ, ಶೋಷಣೆ ಮತ್ತು ಅಧ್ಯಾತ್ಮಿಕತೆಯೇ ಕಾವ್ಯದ ವಸ್ತುವಾಗುತ್ತಿರುವ ಈ ದಿನಮಾನದಲ್ಲಿ ನಂದಿನಿಯವರ ಕವಿತೆಗಳು ತಮ್ಮ ಅಭಿವ್ಯಕ್ತಿಯ ವೈಶಿಷ್ಟ್ಯದಿಂದ ಬೇರೆಯಾಗಿ ನಿಲ್ಲುತ್ತವೆ. ಅವರು ಬೇಂದ್ರೆಯವರ ಜೋಗಿ ಕವಿತೆಯ ನಾಯಕಿಯಂತೆ, ಕಿನ್ನರಿ ನುಡಿಸುವ ಮರುಳಸಿದ್ಧನ ರಾಣಿಯಂತೆ ಈ ಕವಿತೆಗಳ ಕನ್ನಡಿಯಲ್ಲಿ ನನಗೆ ಕಾಣಿಸುತ್ತಾರೆ. ಕಾವ್ಯದ ಮರುಳುತನ, ಉತ್ಕಟತೆ, ಮುಕ್ತತೆ- ಮೂರೂ ಬೆರೆತ ಈ ಪದ್ಯಗಳ ಓದು ನನ್ನನ್ನು ಆಕಸ್ಮಿಕ ಪ್ರೇಮದಂತೆ ಮುದಗೊಳಿಸಿದೆ. ಜೋಗಿ 

ಶೃಂಗಾರ ರಸದಲ್ಲದ್ದಿ ತೆಗೆದಂತಹ ಕಾವ್ಯವೇನು ಭಾರತೀಯರಿಗೆ ಹೊಸದಲ್ಲ. ಆದರೆ ಕನ್ನಡ ಕವಯತ್ರಿಯೊಬ್ಬರು ಬಹುಪಾಲು ಕವಿತೆಗಳನ್ನು ಉನ್ಮತ್ತ ಶೃಂಗಾರಕ್ಕೆ ಅಂಕಿತಗೊಳಿಸುವುದು, ಅದನ್ನು ಸೊಗಸಾಗಿ ನಿಭಾಯಿಸುವುದು ಇದು ನಾನು ಕಂಡಂತೆ ಮೊದಲು. ಸಾಹಿತ್ಯದಲ್ಲಿ ಶೃಂಗಾರವೇನು ನಮಗೆ ಹೊಸದಲ್ಲ ಅದು ನಿಷೇಧವೂ ಅಲ್ಲ. ಆದರೆ ಅದು ಹೆಣ್ಣೊಬ್ಬಳ ಲೇಖನಿಯಿಂದ ಮೂಡಿದಾಗ ಈ ಅದು ಇರುಸುಮುರುಸು. ಗಂಡುಕವಿಯ ಶೃಂಗಾರ ಸಂದರ್ಭದ ನಾಯಕ ನಾಯಕಿಯರು ದೈವಾಂಶ ಸಂಭೂತರಾಗಿರುವುದೇ ಹೆಚ್ಚು. ಈ ಹುಸಿಮುಸುಕಿಲ್ಲದೆ ಶೃಂಗಾರವನ್ನು ಮುಖ್ಯರಸವೆಂದು ಒಪ್ಪಿಕೊಳ್ಳಲು ಭಾರತೀಯ ಮಡಿವಂತ ಮನಸ್ಸುಗಳಿಗೆ ಆಗಲೇ ಇಲ್ಲ. ಇದೇ ಕಾರಣವಾಗಿ ಮೀರಾ, ಆಂಡಾಳ್, ಅಕ್ಕ ಒಂದು ದೈವವನ್ನು ತಮ್ಮ ನಲ್ಲನನ್ನಾಗಿಸಿಕೊಂಡು ಆ ಅಂಕಿತಗಳಡಿಯಲ್ಲಿ ವ್ಯಕ್ತವಾದರೇನೋ. ಈ ಮೂವರ ಕಾವ್ಯವೆಂದರೆ ತೀವ್ರ ಪ್ರೇಮ, ಕಾಮ ವಿರಹ, ಸಮರ್ಪಣಭಾವದ ಅತ್ಯುಚ್ಛ ಸ್ತ್ರೀ ಮಾದರಿಗಳು. ನಂದಿನಿ ಹೆದ್ದುರ್ಗ ಅವರ ಕಾವ್ಯ ಈ ಹುಸಿಮುಸುಕನ್ನು ಕಿತ್ತೆಸೆಯುವ ಕೆಲಸ ಮಾಡಿದೆ. ಹೆಣ್ಣಿನ ಲೈಂಗಿಕ ಬಯಕೆಯನ್ನು ಪ್ರಧಾನವಸ್ತುವಾಗಿರಿಸಿಕೊಂಡು ಬಹು ಪ್ರಾಮಾಣಿಕತೆಯಿಂದ ಅವರು ಕವನಗಳನ್ನು ಕಟ್ಟಿಕೊಡುತ್ತಿದ್ದಾರೆ. ಇವರ ಸೀಮಿತ ವಸ್ತು ಆಯ್ಕೆಯೇ ಅವರ ಮಿತಿ. ಅವರಿಗೆ ಸಿದ್ಧಿಸಿರುವ ಚಿತ್ರಕ ಶಕ್ತಿ ಒಂದು ಬಲ. ಲಲಿತಾ ಸಿದ್ಧಬಸವಯ್ಯ

avitha kavithe

ಕೆಲದಿನಗಳಲ್ಲೇ ವಿಕಾಸ ಪ್ರಕಾಶನದಿಂದ ಹೊರಬರಲಿರುವ ‘ರತಿಯ ಕಂಬನಿ‘ ಕವನ ಸಂಕಲನದ ಮುಖಪುಟದೊಂದಿಗೆ ನಂದಿನಿ.

‘ಕಾಲ ಜಾಲಿಸುತ್ತದೆ ಕಾಲಿಗೆ ಸಿಕ್ಕ ಎಲ್ಲವನ್ನೂ’

ನಾಳೆಯರಿವಿಲ್ಲದೇ ಜೊತೆ ಕೂತು ಪರಿಚಿತರಾದ ಬೆಚ್ಚನೆ ನೆನಪುಗಳ ಕನವರಿಸುತ್ತಿದ್ದವಳಿಗೆ ಯಾರೋ ಹೇಳಿದ್ದು ಕೇಳಿ ಕ್ಷೋಭೆ ಹುಟ್ಟಿ ದಿಗಿಲು ಮೆಟ್ಟಿ ನಾಡಿ ಢವಢವ ಹೊಡೆದು ಕೇಡಿನ ಚಿತ್ರ ತೆರೆಯಲ್ಲಿ ಸರಿದು ಅಂಗಾಲು ನೀರೆದ್ದು ಉಟ್ಟ ಬಟ್ಟೆ ತೋಯ್ದು

ನೇರ ದಾರಿಯಂತೆ ಸಮ ಅಸಮದವರು ನಾವು ದಿಢೀರನೆ ಕವಲೊಡೆದು ಕೂಡಿ ಒಡನೆ ಹೊರಳಿ ಎರಡಾಗಿ ಎರವಿರದೆ ಎರಡೊಂದಾಗಿ ನಡುವೊಂದು ಹೂಸಾಲಿದೆ ಈಗ

ಏನಿರುವುದಿಲ್ಲ ಕೆಲವೊಮ್ಮೆ ಉರಿಯಿಲ್ಲ ಸುರಿವಿಲ್ಲ ಮೊರೆಯಿಲ್ಲ ಹರಿವಿಲ್ಲ ಮಾತಿಲ್ಲ … ಉದಾಸವಿಲ್ಲ ಉತ್ಕಂಠವಲ್ಲ ಅನಾಸಕ್ತಿಯೂ ಅಲ್ಲ ಒಡಲು ಖಾಲಿ ಕಡಲು ಉಸಿರು ಕೆಸರು ಸೆಳೆಸೆಳೆದು ಸೃಷ್ಟಿ ಕಪ್ಪು ಕುಳಿ

ಕಾಲವೂ ಕಾಲವಾಗುವಂತೆ ತೋಯ್ದವರು ನಾವು ತಿಳಿವಾಯಿತು ಕೈಮೀರಿದ್ದು ವಿಧಿಯೆದಿರು ವಿವರಣೆಯೆ? ಕಾಯಬೇಕು ಕಾವಿಗೆ ಆವಿಗೆ ಥಣಾರನೆ ಕೋಲ್ಮಿಂಚು ಕುಳಿಯೊಳಗೆ ಬೆಳಕು. ನಿಟ್ಟುಸಿರು ಬಳ್ಳಿ ಹಸಿರು ವಿರಹ ತಹತಹ ಗಿರಗಿರ ಭ್ರಮರ ಚಿತ್ತಾರ ತುಂಬಿ ಕುಂಭ… ಗುಂಭ

ಕಡಲೇ ಕಣ್ಣೊಳಗಿಳಿದು ಬಯಸಿ ಅವನೆದಿರು ಹನಿದೆ ಕಣ್ಣಬಿಂದುವೀಗ ಅವನ ತುದಿಬೆರಳ ಬೆಳಗು ‘ಯಾವುದೀ ಮೋಹ ಯಾಕಿಷ್ಟು ಸಂದೇಹ’ ಆತ್ಮ ನವುರಾಗಿಸಿಕೊಂಡವನ ಮಾತೆಷ್ಟು ಮೆತ್ತೆ ಧುಮ್ಮಿಸಿ ಮೊಗ ತುಟಿ ಡೊಂಕು ಹೆಚ್ಚಾಗಿ ಉಕ್ಕಿ ಮುದ್ದು ಮುತ್ತು ತೂರಿ ತುಂಬಿಕೊಂಡೆ ಮತ್ತೆ ಅದು ಸಂಧಿದಿವ್ಯದ ಹೊತ್ತು

ಮುತ್ತು ಹಿಡಿದವನು ಉಸಿರೊತ್ತಿ ತತ್ತರಿನಲಿ ಕೇಳಿದ ‘ಏನಾಗಬೇಕೇ ನಾನು ನಿನಗೆ’ ಸುಖದ ಕ್ಷಣಗಳನ್ನು ಕಾಲ ತೂಗುತ್ತದೆ ಅದು ಅದರ ಲೀಲೆ ಎಷ್ಟಾದರೂ ಎಳೆಸೂರ್ಯ ಎದೆಗಿಳಿದವಳು ನಾನು ಉಸಿರಿದೆ ‘ಏನೂ ಅಲ್ಲ’ ನೆತ್ತರಲಿ ಹುಚ್ಚು ಭರತ ಕಾಲ ಜಾಲಿಸುವಾಗ ಕಣ್ತಪ್ಪಿ ಕೆಳಗೇ ಉಳಿದ ಪ್ರೇಮಿಗಳು ನಾವು ಹೇಳಿದ ‘ಏನಾದರೂ‌ ಮಾಡಿಕೋ ದಮ್ಮಯ್ಯ…’

avitha kavithe

ನಂದಿನಿ ಹೆದ್ದುರ್ಗ ಕೈಬರಹದೊಂದಿಗೆ

ನಾವು ಹೆಂಗಸರೇ ಹೀಗೆ  ಹೆಜ್ಜೆ ಕೊಳಕೆಂಬುದು ತಿಳಿದಿದ್ದರೂ ತೊಳೆದ ನೆಲವನ್ನು ಮತ್ತೆ ಒರೆಸಿ ಥಳಥಳಿಸುತ್ತೇವೆ ನಾಳೆ ಬರುವ ಅವರ ಸಲುವಾಗಿ. ಬಂದವರು ಹೋದ ಮೇಲೆ ಹೊಳೆದಿದ್ದ ನೆಲದ ಮೇಲೆ ಹಾವು ಹೊರಳಿದ ಹಾಗೆ ಇದು ಒರೆಸಲಾಗದ ಕುರುಹು ಭರಿಸಲಾಗದ ನೋವು!

ಸೆಜ್ಜೆಯೊಳಗೂ ಉಜ್ಜಿ ಮೆತ್ತಿದ್ದ ದಾರಿಗುಂಟದ ಕೆಸರು. ಎದೆ… ಆಗ ತಾನೆ ಸಾರಿಸಿದ ಹಸಿ ನೆಲ. ಹೀಗೆ ಬಂದವರು ಹಾಗೆ ಹೋದ ಮೇಲೆ ಮನ… ತಳ ಒಡೆದ ತಪ್ಪಲೆ ಉಳಿಯುವುದು ಇಲ್ಲಿ ಬರೀ ಕಲೆ!

ನಾವು ಹೆಂಗಸರೇ ಹೀಗೆ

ಹೊಸಿಲಿನೊಳಗಡೆ ಹಠದ ಜೊತೆಗೆ ಹಗೆಯ ಮೊಳಕೆ ಕಟ್ಟಿ ದಣಿಯುತ್ತೇವೆ ಉಸಿರುಗಟ್ಟಿ. ಆಸರಕೆ ಹೊಸಿಲಾಚೆ ಹೊರಟು ನಿಂತು ಒಣಮರದ ಕೆಳಗೆ ಬೇಡುತ್ತೇವೆ ನೆರಳು ಭ್ರಮಿಸುತ್ತೇವೆ ಹೂ ಘಮಲು. ಹಣ್ಣಿಗಾಗಿ ಟೊಂಗೆ ತುದಿಯೇರಿ ನೆಲಕುರುಳಿ ನಲುಗಿ ಮನೆ ತಲುಪಿ ಮಾಡುತ್ತೇವೆ ತಲಾಶು. ಎಂದೋ ಇಟ್ಟು ಮರೆತಿದ್ದ ಒಂದು ಪಕಳೆ ಕಳಚಿದ್ದ ಹೂವು. ನೆನಪು ನೀರೊಲೆಯ ಉರಿಯೊಳಗೆ. ಉಳಿಯುವುದು ಬರೀ ಬೇಗೆ

ನಾವು ಹೆಂಗಸರೇ ಹೀಗೆ

ಜೀನ್ಸು ತೊಟ್ಟು ತೆಗೆಯುತ್ತೇವೆ ಜ್ವರಕ್ಕೆ ದೃಷ್ಟಿ. ತುಂಡುಗೂದಲಿಗೇ ದುಂಡು ಮಲ್ಲಿಗೆ ಹಿಡಿದು ಓದುತ್ತೇವೆ ಪರಿಮಳದ ಕವಿತೆ. ಕಿವಿಯಿದ್ದರೆ ಮೂರು ದಾರಿ ಕೂಡುವಲ್ಲೂ ಪ್ರವರ ಬಿಚ್ಚುತ್ತೇವೆ. ನಕ್ಕು ಮಾತಾಡಿದವನ ದುಃಖಕ್ಕೆ ಬಿಡುವಾಗಿ ಸೋಗನ್ನೆ ಮಾಗಿದ ಮನವೆಂದು ಒಳಗಿರಲಾಗದೆ ತಳಮಳಿಸಿ ತಿರುವಿನಲಿ ದಿಕ್ಕು ಬದಲಿಸಿ ದಯೆಗಾಗಿ ಗುಡಿಯ ನೋಡಿ…

ಕೊನೆಗಿಲ್ಲಿ ಉಳಿಯುವುದಾದರೂ ಏನು? ಹೀಗೆ ತಳಮಳಿಸುವ ಹೃದಯವಷ್ಟೇ ತನ್ನಲ್ಲಿ ತಾನು! ***

avitha kavithe

ನಂದಿನಿಯವರ ಪ್ರಕಟಿತ ಪುಸ್ತಕಗಳು

ಹಸಿವಾದಾಗೆಲ್ಲಾ ಹೊಸಿಲು ನೋಡುತ್ತೇನೆ ನಾಕು ಚುಕ್ಕಿ ಸೇರಿ ಹೆಸರಿರದ ಹೂವು ಇಟ್ಟ ಅರಿಷಿಣ ಕುಂಕುಮ ಎಡಬಲಕೆ ಕಣಗಿಲೆ ಈಗ ಒಣಗಿರುವ ಎಂದೋ ಹಸಿರಿದ್ದ ತೋರಣ ಒಳಕೋಣೆಗೆ ತಲುಪದ ಅಂಗಳದ ದುಂಡುಮಲ್ಲಿಗೆ ಘಮಲು

ದಾಟುವುದು ಸುಲಭವಲ್ಲ ಯಾವುದನ್ನೂ ಇಲ್ಲಿ

ಹಣೆಯ‌ನೆರಿಗೆ ಹೆಚ್ಚಿ ಕಂಗಳು ತುಂಬಿಕೊಳ್ಳು ವ ಹೊತ್ತಿನಲ್ಲಿ ಕುಕ್ಕರ್ರು ಸಿಳ್ಳೆ ಹೊಡೆಯುತ್ತದೆ. ಮೂರು ಮುಗಿಯಲಿ ಎಂದು ಕಾಯುತ್ತೇನೆ ನಿಶ್ಯಕ್ತಿ ಮತ್ತು ನೀರಡಿಕೆಗೆ ಇಲ್ಲಿ ಮದ್ದು ಸಿಗುವುದಿಲ್ಲ ಗೊತ್ತಿದೆಯೇ ನಿಮಗೆ? ***

ನಾನೇಕೆ ಬರೆಯುತ್ತೇನೆ? ಇಂದು ಸರಾಗವಾಗಿ ಬರೆಯಲು ಸಾಧ್ಯವಾಗಿದ್ದನ್ನು ನಾಳೆಯೂ ನಾನು ಬರೆಯಬಹುದು, ಬರೆಯಬಲ್ಲೆ ಎನ್ನುವ ಭ್ರಮೆಯನ್ನು ಅಕ್ಷರಗಳು ಆಗಾಗ ಮುರಿಯುತ್ತಿರುತ್ತವೆ. ನೆತ್ತಿಗೇರುವ ಹಾದಿಯಲ್ಲಿದ್ದ ಅಹಂನ್ನು ಆಗಾಗಲೇ ತಗ್ಗಿಸಿ ಕುಗ್ಗಿಸಿ ಹದದಲ್ಲಿ ಇರಿಸುತ್ತದೆ. ಬುದ್ದಿಪೂರ್ವಕವಾಗಿ ಬರೆಯಹೊರಟಾಗಲೆಲ್ಲ ಅಸಂಬದ್ದವಾದದ್ದೇನೋ ಬರೆದಂತೆನಿಸಿ ಕಿರಿಕಿರಿಯಾಗುತ್ತದೆ. ಅಪರೂಪಕ್ಕೆ ಸಾಲುಗಳು ಸರಾಗವಾಗಿ ಹುಟ್ಟಿ ಬರೆದದ್ದು ಕವಿತೆಯಾಯಿತೇ ಎಂಬ ಅನುಮಾನ ಹುಟ್ಟಿ, ಹುಟ್ಟಿದ ಸಾಲುಗಳ ಚಂದಕ್ಕೆ ಮರುಳಾಗುತ್ತೇನೆ.

ಕವಿತೆಯೇ ಹಾಗಲ್ಲವೇ? ಮಹಾಕವಿಗಳಿಗೂ ಬರೆದದ್ದು ಕವಿತೆಯಾಯಿತೇ ಇಲ್ಲವೇ ಎಂಬ ಗೊಂದಲ ಹುಟ್ಟಿ ಅದನ್ನು ಮತ್ತೊಬ್ಬರ ಸೆರಗಿಗೆ ಸುರಿದು ಅಲ್ಲಿಂದ ಹೌದು ಅಥವಾ ಇಲ್ಲ ಎನ್ನುವ ಉತ್ತರ ಬಂದಮೇಲೆ ನೆಮ್ಮದಿ ಪಡೆಯುತ್ತಾರೆ. ಹರಿವಿಗಾಗಿ, ಹರವಿಗಾಗಿ ಹುಟ್ಟುತ್ತವೆ ನನ್ನ ಸಾಲುಗಳು. ಬಹುತೇಕ ಒಳಕುದಿಯ ಹೊರಸುರಿಯುತ್ತೇವೆ ಎಂಬ ಹಠದಿಂದ ಹುಟ್ಟುವ ಈ ಸಾಲುಗಳು ಪ್ರಸವದ ನಂತರದ ಸುಖಕ್ಕೆ ಪ್ರಸನ್ನ. ಕವಿತೆಯೆಂಬ ಹೊರದಾರಿ ಸಿಗದೇ ಹೋಗಿದ್ದರೆ ಎಂಬ ಪ್ರಶ್ನೆ ಹುಟ್ಟಿದಾಗೆಲ್ಲ ಆತಂಕ. ಕವಿತೆ ಬಹಳ ಕಾಲ ಮುನಿಸಿಕೊಂಡಾಗ ಬದುಕಿನೆಡೆಗೇ ನಿರಾಸಕ್ತಿ. ಈಮಟ್ಟಿಗೆ ‘ನನ್ನ ಹಚ್ಚಿಕೊಳ್ಳುವುದು ಸರಿಯಲ್ಲ’ ಎನ್ನುವ ಕಾವ್ಯದ ಬುದ್ದಿಮಾತಿಗೆ ನನ್ನದು ಜಾಣಕಿವುಡು. ಕಾವ್ಯಕ್ಕೆ ಮಾರುಕಟ್ಟೆ ಇಲ್ಲ ಎನ್ನುವ ಮಾತಿದ್ದರೂ ಕಾವ್ಯದ ಹೊರತಾಗಿ ನಾನು ಅಪೂರ್ಣ. ಕಾವ್ಯಕ್ಕೆ ಮಾರುಕಟ್ಟೆ ಇಲ್ಲ ಎನ್ನುವುದೂ ಎಂಥಾ ಸುಳ್ಳು? ಕಾವ್ಯ ನಿರಂತರತೆಯನ್ನು ಉಳಿಸಿಕೊಳ್ಳುವ ಸವಾಲಿಗೆ ಸದಾ ನನ್ನ ಬದುಕೂ ಅತೃಪ್ತ. ಯಾವತ್ತೂ ಕಾವ್ಯ ನನ್ನ ಮೋಹದ ಸೆರಗಿಂದ ಆಚೆ ಹೋಗದಿರಲಿ ಎಂಬ ಹುಚ್ಚು ಹಂಬಲ ನನ್ನ ಪ್ರಾರ್ಥನೆಯ ಮೊದಲ ಸಾಲು.

ಹಾಗೆ ಅಂದುಕೊಂಡ ಮೊದಲ ದಿನ ಅದು ಮಾಮೂಲಿನಂತಿದ್ದೆ

ಮೂರನೇ ದಿನ ಬರೀ ಹುಃಗುಟ್ಟೆ ಮನಸ್ಸೆಲ್ಲಿದೆ ಎಂದ ಆರನೇ ದಿನ ನಡುನಡುವೆ ಆಕಳಿಸಿದೆ ಆರಾಮಿಲ್ಲವೇ ಎಂದ

‘ಚಿನ್ನಾ ಮುದ್ದು ಪುಟ್ಟು’ ಎಂದ ಸೊಟ್ಟಗೆ ನಕ್ಕೆ ಆತ್ಮವೆಂದ ಆಯಾಸವೆಂದೆ ವಿಧಿಚಿತ್ತವೆಂದ ವಿಷಯಾಂತರಗೈದೆ

ಹತ್ತನೇ ದಿನಕ್ಕೆ ರೆಕ್ಕೆ ಬಲಿಯಿತು ಎಂದೆ

ಏನು ಮಾಡಲಿ ಎಂದ ಬಿಡುವಿಲ್ಲವೆಂದೆ ಕಾಯುತ್ತೇನೆ ಎಂದ ಖಾಲಿ ಮಾಡಿದೆ ಎಂದೆ

ತಿಂಗಳು ತುಂಬುವಷ್ಟರಲ್ಲಿ ತಣ್ಣಗಾದ. ಕಣ್ಣೀರಾದ ಸಾವರಿಸಿಕೊಂಡ ಸಂಕಟವ ಹೇಳಿದ ಸುಳ್ಳಾಡಬೇಡೆಂದ

ಮೆಟ್ಟಿಲುಗಳಲೀಗ ಹೊಸಹಾಡು ಎಂದೆ ಕಡಿದ ಬಾಳೆಯಂತಾದ ಮರೆಯಲಾರೆ ಎಂದ ಮೀಸಲು ನಿನಗೆಂದ

ಎಲ್ಲಕ್ಕೂ ಇಲ್ಲ ಎಂದೆ ನಲ್ಲೆ ಎಂದ ಒಲ್ಲೆ ಎಂದೆ ಕೊಂದೆ ಎಂದ ವೃಥಾ ಬಂಧವೆಂದೆ

ಅಯ್ಯೋ… ನನ್ನ ಹುಚ್ಚೇ ಅವನಿರದ ದಿನಗಳಲಿ ಖರೆ ನನ್ನಿರುವು ತಿಳಿಯಬೇಕಿತ್ತು ಸಾಸಿವೆ ಹೊಲದಲ್ಲಿ ಸಾಲಕ್ಕೆ ಸಾವು ಕೇಳಬೇಕಿತ್ತು ***

ಪರಿಚಯ: ಹಾಸನ ಜಿಲ್ಲೆಯ ಆಲೂರು ತಾಲೂಕಿನ ಪುಟ್ಟಹಳ್ಳಿ ಹೆದ್ದುರ್ಗದಲ್ಲಿ ವಾಸವಾಗಿರುವ ನಂದಿನಿ ಹೆದ್ದುರ್ಗ ಅವರದು ಭೂಮಿಯನ್ನು ನಂಬಿದ ಬದುಕು. ಮೆಣಸು ಮತ್ತು ಕಾಫಿ ಬೆಳೆಗಾರ್ತಿಯಾಗಿರುವ ಅವರು ‘ಅಸ್ಮಿತೆ’ ಮತ್ತು ‘ಒಳಸೆಲೆ’ ಕವನ ಸಂಕಲನ, ‘ಬ್ರೂನೋ ದಿ ಡಾರ್ಲಿಂಗ್’ ಲವಲವಿಕೆಯ ಬರಹಗಳ ಸಂಕಲನ ಪ್ರಕಟ. ‘ರತಿಯ ಕಂಬನಿ’ ಬಿಡುಗಡೆಯಾಗಲಿರುವ ಕವನ ಸಂಕಲನ. ಪ್ಲ್ಯಾಂಟೇಷನ್ ಪತ್ರಿಕೆಗೆ ನಿಯಮಿತ ಬರಹ. ಸದ್ಯದಲ್ಲೇ ಅವರ ಹೊಸ ಕವನ ಸಂಕಲನ ಬಿಡುಗಡೆಗೊಳ್ಳಲಿದೆ.

ಇದನ್ನೂ ಓದಿ : Poetry; ಅವಿತಕವಿತೆ: ರೆಕ್ಕೆಗಳು ಮಾತ್ರ ನಿನ್ನ ಆತ್ಮಸಂಗಾತ

Published On - 12:33 pm, Sun, 14 March 21

Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್