Poetry : ಅವಿತಕವಿತೆ ; ‘ಈಗ ಆ ಗಾಳಿ ನನ್ನ ಪೂರ್ವಿಕರ ದಿವ್ಯ ಪ್ರಾರ್ಥನೆಯಂತೆ ಕೇಳಿಸುತ್ತಿದೆ’

|

Updated on: Jul 11, 2021 | 12:08 PM

Childhood : ‘ಓರಗೆಯ ಹುಡುಗರೆಲ್ಲ ಆಟವಾಡುತ್ತಿದ್ದರೆ ನಾನು ನಮ್ಮನೆ ಎದುರಿನ ಲೈಟುಕಂಬದ ಕೆಳಗೆ ಕೂತು ದಿನಕ್ಕೆ ಎರಡು ಮೂರು ತೆಲುಗು-ಕನ್ನಡ ಕಾದಂಬರಿಗಳ ಓದಿ ಮುಗಿಸಿಬಿಡುತ್ತಿದ್ದೆ. ತಮಾಷೆ ಎಂದರೆ ಎಂಟನೆಯ ತರಗತಿಯವರೆಗೆ ನಾನು ಶಾಲೆ ಮೆಟ್ಟಿಲು ಹತ್ತಿದವನಲ್ಲ.’ ಕುಮಾರ್ ಎಸ್. ಡಿ.

Poetry : ಅವಿತಕವಿತೆ ; ‘ಈಗ ಆ ಗಾಳಿ ನನ್ನ ಪೂರ್ವಿಕರ ದಿವ್ಯ ಪ್ರಾರ್ಥನೆಯಂತೆ ಕೇಳಿಸುತ್ತಿದೆ’
Follow us on

ಪ್ರತೀ ಭಾನುವಾರ ನಿಮ್ಮ ಬೆರಳತುದಿಯಿಂದ ನಿಮ್ಮ ಅಂತರಂಗವನ್ನು ಪ್ರವೇಶಿಸುತ್ತಿದೆ ‘ಅವಿತಕವಿತೆ’. ಇಲ್ಲಿ ಕವಿತೆಯೊಂದಿಗೆ ಕವಿಯೊಂದಿಗೆ ಕವಿಯ ಮಾತಿನೊಂದಿಗೆ ಕವಿಯ ಕೈಬರಹವೂ ಇರುತ್ತದೆ ಜೊತೆಗೆ ಅವರ ಕವಿತ್ವದ ಬಗ್ಗೆ ಸಹೃದಯರು ಬರೆದ ಆಪ್ತಸಾಲುಗಳೂ ಇರುತ್ತವೆ. ಈಗಿಲ್ಲಿ ಅನುವಾದಕ ಕುಮಾರ್ ಎಸ್. ಡಿ. ಅವರು ತೆಲುಗಿನ ಪ್ರಮುಖ ಕವಿಗಳಾದ ಎಂ. ಎಸ್. ನಾಯುಡು, ಊರ್ಮಿಳಾ, ಸಿದ್ಧಾರ್ಥ, ಮರ್ಸಿ ಮಾರ್ಗರೇಟ್ ಅವರ ಕವನಗಳನ್ನು ಭಾವಾನುವಾದ ಮಾಡಿದ್ದಾರೆ. ‘ಮೊದಲಿಂದಲೂ ನನಗೆ ಕಾವ್ಯ ಪ್ರೀತಿ. ಕಾವ್ಯಾನುವಾದವೆಂದರೆ ನನ್ನ ಅಭಿಪ್ರಾಯದಲ್ಲಿ ಮೂಲ ಭಾಷೆಗಿಂತಲೂ ಅನುವಾದಿಸುವ ಭಾಷೆಯ ಮೇಲೆ ಹಿಡಿತವಿದ್ದು, ಅದರ ಆತ್ಮವನ್ನು ಗ್ರಹಿಸಿ ಮತ್ತೊಂದು ಭಾಷೆಗೆ ರೂಪಾಂತರ ಮಾಡುವ ಸೃಜನಶೀಲಕ್ರಮ. ಇದಕ್ಕೆ ಯಾವ ಗುರುವಿನ ಅಗತ್ಯವೂ ಇಲ್ಲ. ನಿರಂತರ ಓದನ್ನು ಇದು ಬಯಸುತ್ತದೆ. ಒಂದರ್ಥದಲ್ಲಿ ನಿನ್ನ ಹಾದಿಯನ್ನು ನೀನೇ ಬೆದಕಾಡಬೇಕಾದ ಕ್ರಿಯೆ’ ಎನ್ನುತ್ತಾರೆ ಕುಮಾರ್. ಎಸ್. ಡಿ.

*

ತೆಲುಗು ಕವಿತೆಗಳನ್ನು ಅತ್ಯಂತ ಶಿಸ್ತಿನಿಂದ, ವೇಗದಿಂದ ಮೂಲ ಭಾವಕ್ಕೆ ಯಾವುದೇ ರೀತಿಯ ಧಕ್ಕೆಯಾಗದಂತೆ ಅನುವಾದ ಮಾಡುವ ಕುಮಾರ್ ಎಸ್. ಡಿ. ನಮ್ಮ ನಡುವಿನ ಅತ್ಯಂತ ವಿಶಿಷ್ಟ ಅನುವಾದಕರು. ಎಂ. ಎಸ್. ನಾಯುಡು, ಮೌಳಿ, ಶ್ರೀಧರ್ ಚಂದು ಪಟ್ಲ, ಉಮಾ ನೂತಕ್ಕಿ, ಅರಣ್ಯ ಕೃಷ್ಣ, ತಿಲಕ್ , ಕಾಶಿ ಭಟ್ಲ ವೇಣು ಗೋಪಾಲ್, ಮರ್ಸಿ ಮಾರ್ಗರೇಟ್ ರಂತಹ ಕವಿತೆಗಳನ್ನು ಕುಮಾರ್ ತಮ್ಮ ಅನುವಾದದ ಮೂಲಕ ಕನ್ನಡಕ್ಕೆ ಪರಕಾಯ ಪ್ರವೇಶ ಮಾಡಿಸಿದ್ದಾರೆ.

80-90ರ ದಶಕದಿಂದ ಕುಮಾರ್ ತಮ್ಮ ಅನುವಾದಗಳಿಂದ ನನಗೆ ಪರಿಚಿತರು. ನಾನು ಮೊದಲು ಓದಿದ ಕಿರು ಅನುವಾದ ಕತೆ ’70 ಎಂಎಂ ದೋಸೆ’. ತೆಲುಗಿನ ಖ್ಯಾತ ಲೇಖಕ ಮಲ್ಲಾದಿ ವೆಂಕಟಕೃಷ್ಣಮೂರ್ತಿಯವರದು. ನಂತರ ತರಂಗ, ಸುಧಾ, ಮಯೂರ, ಮಂಗಳ ಮತ್ತು ರಾಗಸಂಗಮಗಳಂಥ ಖ್ಯಾತ ಪತ್ರಿಕೆಗಳಲ್ಲಿ ಕುಮಾರ್ ನಿರಂತರ ಅನುವಾದಗಳ ಮಹಾಪೂರವನ್ನೇ ಹರಿಸಿದರು. ಅವರಿಂದ ಯಂಡಮೂರಿ ವೀರೇಂದ್ರನಾಥ್, ಮಲ್ಲಾದಿ ವೆಂಕಟಕೃಷ್ಣಮೂರ್ತಿ, ಸೂರ್ಯದೇವರ ರಾಮಮೋಹನ್ರಾವ್ರಂಥ ಲೇಖಕರು ಕನ್ನಡ ಓದುಗರಿಗೆ ಮತ್ತಷ್ಟು ಹತ್ತಿರ ಬಂದದ್ದು.

ಹಾಗೆಯೇ ಲಂಕೇಶ್, ಯು. ಆರ್. ಅನಂತಮೂರ್ತಿ, ಎಸ್. ದಿವಾಕರ್, ಪಿ. ಚಂದ್ರಿಕಾ, ಆನಂದ್ ಋಗ್ವೇದಿ, ರೇಣುಕಾ ರಮಾನಂದ ಇವರ ಕವಿತೆಗಳನ್ನು ಅಷ್ಟೇ ಸೊಗಸಾಗಿ ತೆಲುಗಿಗೆ ಅನುವಾದ ಮಾಡಿದ್ದಾರೆ. ನೇರ ಮತ್ತು ಸರಳ ಭಾಷೆ ಕುಮಾರರ ಅನುವಾದದ ವೈಶಿಷ್ಟ್ಯ. ನಿತ್ಯ ಕಾಯಕದಂತೆ ಪ್ರತಿದಿನ ಇವರು ತುಂಬು ಉತ್ಸಾಹದಿಂದ ಪ್ರತಿದಿನ ಹಲವಾರು ಅತ್ಯುತ್ತಮ ಕವಿತೆಗಳನ್ನು ಅನುವಾದ ಮಾಡುತ್ತ ಹೈಸ್ಪೀಡ್ ಅನುವಾದಕರು ಎಂದೆನ್ನಿಸಿಕೊಂಡಿದ್ದಾರೆ. ಕನ್ನಡದಿಂದ ತೆಲುಗಿಗೂ ತೆಲುಗಿನಿಂದ ಕನ್ನಡಕ್ಕೆ ಅನುವಾದದ ಮೂಲಕ ಎರಡೂ ಭಾಷೆಯ ಸಾಹಿತ್ಯವನ್ನು ಶ್ರೀಮಂತ ಗೊಳಿಸುತ್ತಿದ್ದಾರೆ.
ಸೃಜನ್, ಕಲಾವಿದರು, ಅನುವಾದಕರು, ಬಳ್ಳಾರಿ

*
ಒಂದು ಕವಿತೆಯನ್ನು ಅನುವಾದಿಸುವುದೆಂದರೆ, ಮೂಲ ಕವಿತೆಯ ಸೂಕ್ಷ್ಮ ಪದರಗಳನ್ನು ಘಾಸಿಗೊಳಿಸದೆ ಉಳಿಸಿಕೊಳ್ಳುವ ಕಲಾತ್ಮಕ ಪ್ರಯೋಗ. ಇನ್ನೊಂದು ಭಾಷೆಯಲ್ಲಿ ಅದೊಂದು ಹೊಸ ಕವಿತೆ. ಕಸಿ (graft) ಮಾಡಿದಂತೆ ಈ ಕಲೆ. ಇದನ್ನು ಒಲಿಸಿಕೊಂಡು, ಕನ್ನಡದಿಂದ ತೆಲುಗಿಗೆ, ತೆಲುಗಿನಿಂದ ಕನ್ನಡಕ್ಕೆ ಅನೇಕ ಪದ್ಯಗಳನ್ನು ಅನುವಾದಿಸುತ್ತಿರುವ ಕುಮಾರ್ ಅವರು ನಿರ್ಮಿಸುತ್ತಿರುವ ಸೇತುವೆ ಮೆಚ್ಚುವಂತಹದ್ದು.
ಎಂ.ಎಸ್. ರುದ್ರೇಶ್ವರಸ್ವಾಮಿ, ಕವಿ, ಲೇಖಕರು, ಬೆಂಗಳೂರು

*

ನೀನಿಲ್ಲ ಅನ್ನಿಸದೇ

ಮೂಲ : ಎಂ. ಎಸ್. ನಾಯುಡು

ಕೈಗಳೆಂದರೆ ಕಣ್ಣುಗಳಿಗೆ ಭಯ
ಕೈಗಳು ಮೀನುಗಳಾಗುತ್ತವೆಯೇ?
ದಿಗ್ಭ್ರಮೆಗೊಂಡ ಮಾತುಗಳೇ
ಕತ್ತರಿಸಿ ಒಗೆದ ಪಿಂಡಗಳು
ನಿಂತುಬಿಡಬೇಕು ಕೇಳಿದರೇನೇ
ಕಾವಳವನ್ನು ಆರಿಸಿಬಿಡಬೇಕು
ತಿರುಗಿ ನೋಡಬೇಡ
ಮನದೊಳಗಿನ ಮಾತುಗಳಿಗೆ ಬೆಂಕಿ ಹಚ್ಚಬೇಕು
ಆತುರತೆ, ಮೀನಿನ ಕಂಗಳು, ಹಸಿವು
ಭೂಮಿಯೊಳಗೆ ಇಣುಕಿನೋಡುವ ಚುಕ್ಕಿಗಳು.

ನಿಲ್ಲಿಸಿದೆ.
ಮಧ್ಯಾಹ್ನದ ಹೆಜ್ಜೆಗಳಲ್ಲಿ
ಮುಸ್ಸಂಜೆಯನ್ನು ಬೆದಕಾಡುವ ಬಯಕೆ ಬರದೆ
ತಂದದ್ದೆಲ್ಲ ನೀರ ನೆರಳೊಳಗಿನ ಒರಟು ನೆರಳೇ
ಬಿಟ್ಟುಬಿಟ್ಟೆ.
ಸ್ವಲ್ಪ ಹುಳಿಯಾಗಿ
ನೆರಳೊಳಗಿನ ನೀರನ್ನು ತುಸು ಕದ್ದುಬಿಟ್ಟೆ.

ಬಾಗಿಲು ತೆರೆದ ಪದಗಳಿಂದಲೇ ಮುಚ್ಚಿದೆ ಬಾಗಿಲು
ಕಣ್ಣಿರದ ಪದಗಳು ಕುಳಿತಿವೆ ಚಪ್ಪಲಿಗಳಲಿ
ನಿಂತವು ಎಲ್ಲೋ.
ಅತ್ತಿತ್ತ ಚಕಚಕ ತಪ್ಪಿಹೋಗುವ ಬಿಳಲುಗಳು
ಗಾಳಿಗೆ ಬರಲು ಹೇಳಿದೆ
ಪದಗಳ ಜೊತೆ ಬರುವುದು ಬೇಡವೆಂದೆ.

ತಡೆದುಬಿಟ್ಟೆ.
ಅಡ್ಡಗೋಡೆಯಂತೆ ನಿಶ್ಯಬ್ದವನ್ನು ನಿಲ್ಲಿಸಿದೆ
ಗೋಡೆಯ ಅಡಿಯಲಿ ಗೋಡೆ
ಪಾರದರ್ಶಕತೆ ಗುರಿ ತಪ್ಪಿತು
ತಪ್ಪಿಸಿಕೊಂಡಿತು
ತಪ್ಪಿದ ಗುರಿಯತ್ತಲೇ ನೋಡುತ್ತಿಲ್ಲ
ತುಟಿಗಳಿಲ್ಲದ ರಕ್ತ ಪದಗಳಲ್ಲೇ.

ಕದಲಿತು.
ಕದಲುತ್ತಿದೆ ಗೋಚರಿಸದೆ
ಬಂದಿತೋ ಇಲ್ಲವೋ ಯಾರಿಗೆ ಕಾಣುತ್ತದೆ
ವಾಸನೆ, ಅರಚಾಟ, ಬಣ್ಣಗಳಲ್ಲಿಯ ಸುಳಿಗಳು
ತೆಳ್ಳನೆಯ ನಿರೀಕ್ಷೆ, ವೈರಾಗ್ಯ ಪ್ರಕೃತಿ
ಮುಂದಿರುವ ನಿಶ್ಚಲ ಶೋಕ
ಬಾಗಿಲೊಳಗೆ ಸಮುದ್ರ
ಭಯವೇ ಇಲ್ಲ.

ಚಪ್ಪಾಳೆ, ನಿದ್ದೆ.
ಬೂಜುಹಿಡಿದ ನಗುವಿನಲೆಗಳು
ಕುರುಡು ನಾಲಿಗೆಗಳು
ಕಿಬ್ಬೊಟ್ಟೆ ತುಂಡಾಗದ ಕನ್ನಡಿ
ಮುದಿಯಾಗುವುದಿಲ್ಲ
ಬರಲಿರುವ ಕೈಗಳು.

*

ಕವಿಗಳಾದ ಎಂ. ಎಸ್. ನಾಯ್ದು ಮತ್ತು ಊರ್ಮಿಳಾ

ಲೋಲಕ

ಮೂಲ : ಊರ್ಮಿಳಾ

ಮುಸ್ಸಂಜೆಯ ಬೆಳಕಲ್ಲಿ
ಕರಗಿಹೋಗುತ್ತಿರುವ ಕಾಲ
ಹಿಂತಿರುಗಿ ನೋಡಿದರೆ
ಚೆದುರಿದ ಕಾಲಿನ ಗುರುತುಗಳು
ಗಜಿಬಿಜಿಯಾಗಿ ಹೆಣೆದುಕೊಂಡ
ಅಂತರಂಗದ ಅನುಭವಗಳು
ಅಗುಳಿ ಹಾಕಿದ ಆ ಮೂಲೆ ಕೋಣೆಯಲ್ಲಿ
ವಲಯಾಕೃತಿಯಲ್ಲಿ ತಿರುಗುತ್ತಿರುವ ಲೋಲಕ
ಚಿಕ್ಕಮುಳ್ಳಿನ ಅಂಚಿನಿಂದ
ಜಾರಿಹೋದ ಹಿಮದ ತುಂಡು
ನಿಶಿತವಾಗಿ ಗಮನಿಸಿದರೆ ಬೊಗಸೆ ಒಣಗಿ
ಚೂರುಚೂರಾದ ಆಸೆಗಳ ಕುರುಹುಗಳು
ಒಂದು ಹಿಡಿ ತೇವ ಆರದ
ಅನುಭೂತಿಗಳ ನೆನಪಿನ ಮೊಮೆಂಟೋಗಳು

ಬಾಗಿಲು ತೆರೆದು ಹೊಸಿಲಿಗೆ ಬರಬೇಕು
ಅಂದರೆ ಹಿಂಜರಿಕೆ
ಎಲೆಗಳುದುರಿದ ಕಾಲದಲ್ಲಿ
ದುಂಬಿಗಳ ಸರಸ ಸಲ್ಲಾಪಗಳು
ಭಯಗೊಂಡಿರುವ ಬೆಂಗಾಡಿನ ಪುಷ್ಪಗಳು
ಆಶಾದೀಪಗಳನು ಆಗಸದಲ್ಲಿ ಹಾರಲುಬಿಟ್ಟು
ಸ್ವಪ್ನ ಸಮುದ್ರಗಳ ಆ ಬದಿಯ ತೀರವನು
ತಲುಪಲು ಹೂಡಿದ ಬಾಣ
ಸಂದಿಗ್ಧತೆಯಲ್ಲಿ ಕತ್ತಲು ಬೆಳಕಿನ ಸಂಧಿಯಲ್ಲಿ

ಮತ್ತೆ ಮತ್ತೆ ನಾನೇ

*

ಕವಿಗಳಾದ ಸಿದ್ಧಾರ್ಥ ಮತ್ತು ಮರ್ಸಿ ಮಾರ್ಗರೇಟ್

ತುಳಿತಕ್ಕೊಳಗಾಗುವುದು ಮತ್ತು ಗೆಲ್ಲುವುದರ ನಡುವೆ

ಮೂಲ : ಮರ್ಸಿ ಮಾರ್ಗರೇಟ್

ನೆನ್ನೆ ರಾತ್ರಿ
ಗಾಳಿ ಹಾಕಿದ ಆರ್ತನಾದ ಕೇಳಿದೆ
ತನ್ನನು ತಾನು ವಿಮುಕ್ತಿಗೊಳಿಸಿಕೊಳ್ಳಲು
ಕೈಗಳನ್ನು ವ್ಯಾಪ್ತಿಗೊಳಿಸಿ
ಶಾಖೆಗಳು ಮತ್ತು ಎಲೆಗಳು ಹೋಗದಂತೆ
ಮರಗಳು ಹಾಕಿದ ಸಂಕೋಲೆಗಳನು
ಮುರಿದುಹಾಕಲು
ನೆನ್ನೆ ರಾತ್ರಿ
ಸ್ವೇಚ್ಛೆಗಾಗಿ
ಗಾಳಿ ಹಾಕಿದ ಆರ್ತನಾದ ಕೇಳಿದೆ

ತಡೆದುಕೊಳ್ಳಲಾಗದ ಆಗ್ರಹ ಆವೇಶಗಳಲ್ಲಿ
ಕಾಲುಗಳು, ಕೈಗಳು, ದೇಹವಿಡಿಯಾಗಿ ಆಕ್ರಮಿಸಲಾದ
ಆ ಮರದ ಅಧಿಕಾರದ ಬಲಪ್ರಯೋಗದಿಂದ
ವಿಮೋಚನೆಗೊಳ್ಳಲು
ಹೋರಾಟ ಮಾಡಿ ಜೀವತೊರೆದ
ಗಾಳಿಯ ಆರ್ತನಾದ ಕೇಳಿದೆ

ಈವತ್ತು ಬೆಳಗ್ಗೆ ಕಣ್ತೆರೆದು ನೋಡಿದರೆ
ಚೆಲ್ಲಾಪಿಲ್ಲಿಯಾಗಿ ಬಿದ್ದಿರುವ ಶಿಥಿಲಗಳು
ಗೇಲಿ ಮಾಡುತ್ತಾ ನಕ್ಕ ಎಲೆಗಳ ಮೇಲೆ ತೂತುಗಳು
ಬಿದ್ದು
ಆಗಷ್ಟೇ ಹೊಸದಾಗಿ ಜನಿಸಿದ ಹೂಗಳು
ನೆಲಕ್ಕುದುರಿ
ಮಳೆಯಿಂದ ತುಳಿಸಲ್ಪಟ್ಟರೂ
ಅಲುಗಾಡದೇ ಸ್ಥಿರವಾಗಿ ನಿಂತ ಮರಗಳು
ನಗುತ್ತಿವೆ ಸನ್ನೆ ಮಾಡಿಕೊಳ್ಳುತ್ತಾ

ಆದರೆ,
ಗಾಳಿ ಮಾತ್ರ
ಯುದ್ಧದಲಿ ಪರಾಜಿತನಾದ ಸಿಪಾಯಿಯಂತೆ
ತುಳಿತಕ್ಕೊಳಗಾಗಿ ಅಲ್ಲೇ ಮರಗಳ
ನಡುವೆ
ಯಾವತ್ತೋ ಒಂದು ದಿನ ತಪ್ಪದೇ
ಗೆಲ್ಲುತ್ತೇನೆ ಎಂಬ ನಿರೀಕ್ಷೆಯಲ್ಲಿರುವಂತಿದೆ

ಇದೀಗ
ಆ ಗಾಳಿ
ಸ್ವೇಚ್ಛೆಗಾಗಿ ಮರಗಳ ಮೂಲೆಗಳಲ್ಲಿ
ನನ್ನ ಪೂರ್ವಿಕರು ಮಾಡಿದ ದಿವ್ಯ ಪ್ರಾರ್ಥನೆಯಂತೆ
ಕೇಳಿಸುತ್ತಿದೆ

*

ಕುಮಾರ್ ಎಸ್ . ಡಿ. ಅವರ ಕೈಬರಹ

ಬಡತನದ ಕಾರಣ ಪೇಪರ್ ಹಂಚುವ ಕೆಲಸ ಮಾಡುತ್ತಿದ್ದೆ. ತಂದೆಯವರು ಆಗಾಗ ತರುತ್ತಿದ್ದ ತೆಲುಗು ಮತ್ತು ಕನ್ನಡ ಪತ್ರಿಕೆಗಳು ಒಂದರ್ಥದಲ್ಲಿ ಸ್ಫೂರ್ತಿ. ಪೇಪರ್ ಏಜೆನ್ಸಿಯವರ ಮಳಿಗೆಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದದ್ದು. ಅಲ್ಲಿ ತರಿಸುವ ಬಹುತೇಕ ಎಲ್ಲ ತೆಲುಗು ಮತ್ತು ಕನ್ನಡ ದಿನ ವಾರ ಮಾಸಿಕಗಳ ಓದುತ್ತಿದ್ದದ್ದು. ಜೊತೆಗೆ ಆಗಿನ ಹತ್ತಾರು ಗ್ರಂಥಾಲಯಗಳು. ಪ್ರೀತಿಯಿಂದ ನನಗೆ ಓದಲು ಪುಸ್ತಕಗಳನ್ನು ಕೊಡುತ್ತಿದ್ದ ಫ್ಲೋರ್ ಮಿಲ್ಲಿನ ಸಾಹೇಬರು, ಅಭಿಮಾನದಿಂದ ಗದರಿಕೊಳ್ಳುತ್ತಲೇ ಎಲ್ಲ ಪುಸ್ತಕಗಳನ್ನು ಓದಲು ನೀಡುತ್ತಿದ್ದ ಬಾರಕೂರು ಗಣಪತಿ ಕಾಮತ್ ನ್ಯೂಸ್ ಪೇಪರ್ ಏಜೆನ್ಸಿಯ ಕುಟುಂಬ, ಕತೆ ಕಾದಂಬರಿಗಳನ್ನು ಕೊಟ್ಟು ಮೊದಲು ನೀನು ಓದಿಬಿಡೋ ಕುಮಾರ ಎಂದು ಬೆನ್ನುತಟ್ಟುತ್ತಿದ್ದ ಎಷ್ಟೋ ಮಂದಿ ಅಕ್ಕಂದಿರಿದ್ದಾರೆ.

ನನ್ನ ಓರಗೆಯ ಹುಡುಗರೆಲ್ಲ ಆಟವಾಡುತ್ತಿದ್ದರೆ ನಾನು ನಮ್ಮನೆ ಎದುರಿನ ಲೈಟುಕಂಬದ ಕೆಳಗೆ ಕೂತು ದಿನಕ್ಕೆ ಎರಡು ಮೂರು ತೆಲುಗು – ಕನ್ನಡ ಕಾದಂಬರಿಗಳ ಓದಿ ಮುಗಿಸಿಬಿಡುತ್ತಿದ್ದೆ. ತಮಾಷೆ ಎಂದರೆ ಎಂಟನೆಯ ತರಗತಿಯವರೆಗೆ ನಾನು ಶಾಲೆ ಮೆಟ್ಟಿಲು ಹತ್ತಿದವನಲ್ಲ. ಅಪಾರ ಆಸ್ತಿಯನ್ನು ಕಳೆದುಕೊಂಡ ನನ್ನ ತಂದೆ ಸ್ಥಿಮಿತ ಕಳಕೊಂಡಂತೆ ಅಲ್ಲಿ ಇಲ್ಲಿ ತಾತ್ಕಾಲಿಕ ನೆಲೆಯಲ್ಲಿದ್ದುದರಿಂದ ಏಳನೆಯ ತರಗತಿಯವರೆಗೆ ಶಾಲೆ ಇಲ್ಲ. ಕನ್ನಡ – ತೆಲುಗು ಹಾಗೇ ಕೂಡಿಸಿಕೊಂಡು ಕೂಡಿಸಿಕೊಂಡು ಮನೆಯಲ್ಲೇ ಕಲಿತದ್ದು. ನಾನು ಏನು ಓದಿದರೂ ಹೆತ್ತವರಿಂದ ನೋ ಆಬ್ಜೆಕ್ಷನ್!

ಆರಂಭಿಕ ಓದುಗರಂತೆ ನಾನು ಕೂಡ ತೆಲುಗು ಮತ್ತು ಕನ್ನಡ ಪತ್ತೇದಾರಿ ಕಾದಂಬರಿಗಳ ಓದುತ್ತಿದ್ದೆ. ಲಂಕೇಶ್ ಮತ್ತು ತೆಲುಗಿನ ಚಲಂ ನಮ್ಮೆಲ್ಲರ ಓದಿನ ಕ್ರಮದ ಮೇಲೆ ಬೀರಿದ ಪ್ರಭಾವ ದೊಡ್ಡದು. ಬಡತನ ನೀಡುವ ಸಮೃದ್ಧ ಸ್ಫೂರ್ತಿಯೇ ವಿಶಿಷ್ಟ ಮತ್ತು ಅನುವಾದಕ್ಕೆ ತೊಡಗಿಕೊಳ್ಳಲು ಮುಖ್ಯ ಕಾರಣ. ಕಾದಂಬರಿಗಳನ್ನು ಅನುವಾದಿಸಲು ನಾನು ನನ್ನ ಅರೆಬರೆ ಇಂಗ್ಲಿಷಿನಲ್ಲಿ ತೆಲುಗಿನ ಯಂಡಮೂರಿ, ಮಲ್ಲಾದಿಯವರಿಗೆ ಪತ್ರ ಬರೆದಾಗ ಅವರು ಮೊದಲು ನೀನು ಸಣ್ಣ ಕಥೆಗಳನ್ನು ಅನುವಾದಿಸು ಎಂದು ಸಲಹೆ ನೀಡಿದರು. ಆ ಪ್ರಯಾಣ ಇದೀಗ ನೂರಾರು ಕಥೆ ಮತ್ತು ಕಾದಂಬರಿಗಳು, ಕಾವ್ಯ ಅನುವಾದಿಸುವಲ್ಲಿಗೆ ತಲುಪಿದೆ.

*

ಕಾಪಾಡಿ ಈ ಮಣ್ಣಿನ ಪಿಂಡವನು

ಮೂಲ : ಸಿದ್ಧಾರ್ಥ

ಇನ್ನೊಂದು
ನದಿ ತೀರಿಕೊಂಡಿತು ರಾತ್ರಿ
ನಗರವನ್ನು ಹಂದಿಯ ಬಾಲವಾಗಿ
ಸುತ್ತಿಕೊಂಡಿತು
ಇರುವುದೊಂದೇ ಮರುಭೂಮಿ
ಸಮಸ್ತ ಧಾರಾ ಭೂಮಿಯ ತುಪ್ಪಳದ ಸುತ್ತಲೂ
ಒಳಗೊಳಗಿನ ಕಾಯದಲಿ
ಹೊರಗೆ ಹದಿನಾರು ಸಾವಿರ ಪಂಜರಗಳಲ್ಲಿ
ಗುಡುಗುವ ಮರುಭೂಮಿ
ಕೋಗಿಲೆಯಾದ ಕಾಗೆ ಕೂಡ ಗಂಟಲೆತ್ತುವುದಿಲ್ಲ
ಬೇವಿನೆಣ್ಣೆಯೂ ಬೆಳಗುವುದಿಲ್ಲ
ಆದಿಮ ಚರ್ಮಕಾರನ ಹಚ್ಚನೆಯ ಕಾಡು
ಉಗಿದ
ಈ ಉಸಿರಿನ ಶಿಲಾಜಾಲ
ಕಮಟು ಸದ್ದುಗಳು
ಲೋಹ ದಹನಗಳು
ಋತು ಛಿದ್ರಗಳು
ನರಕ ಭಯಾನಕ
ಎಲ್ಲ ಸಮುದ್ರಗಳು ಇಂಗಿದ ಕೆಸರುಗಳಲ್ಲಿ
ಗುಡ್ಡಗಳು ಹಕ್ಕಿಗಳು ಒಡೆದ ಬಾಯಾರಿಕೆ
ಹರಿವ ಬಾಯಾರಿಕೆ
ಭೂಮಿಯ ಒಡಲಾಳದೊಳಗೆ
ಕಾರ್ಬನ್ ಗಾಯಗಳಾಗಿ
ಸಿಡಿದ
ನರ್ಮದೆಯ ಕಾಲುವೆಗಳ ರೋದನಗಳು
ಕಿಲಿಮಾಂಜರೋ ಪರ್ವತ ಮೈದಾನಗಳು
ಗಂಗಾ ಕಣಿವೆಗಳ ಕೊಳಕು ಮಂತ್ರಗಳ
ಚಿತೆಗಳು – ಇರುಳ ಕಾಷ್ಟಗಳು
ಹೂಗಳಿನ್ನು ಒಂದು ಚಿಟಿಕೆಯೂ
ಅರಳುವುದಿಲ್ಲ
ಒಂದು ಗುಟುಕು ಹನಿಯೂ ಹುಟ್ಟುವುದಿಲ್ಲ

ನನ್ನ ಕರಿಕರಿ ಹೊಸಕಿಹಾಕಲ್ಪಟ್ಟ ಹಳ್ಳಿಯ
ನಾಲಿಗೆ
ಈ ಹೆಣ್ಣನ್ನು
ಹೇಗೆ ಬಿಕರಿಗಿಡುತ್ತಿದ್ದೇವೋ ಬೆಲೆವೆಣ್ಣಾಗಿ
ದ್ರೋಹಿಗಳಾಗುತ್ತಿದ್ದೇವೋ
ಜಾಲಿಪೊದೆಗಳ ಡೊಂಕುಗಳಲ್ಲಿ
ಕಮರಿಹೋದ ಜಿರಲೆ ಹುಳಗಳು ನಾವು
ಇನ್ನು ಬರುವುದೇ ಇಲ್ಲ
ನೈಋತ್ಯದ ಗಾಳಿ ಗುಬುರಿ

ಅಸಹಾಯಕರು ನಾವು
ನಮ್ಮ ಸೀಮೆಗಳ ಸ್ಥಳಕಾಲಗಳು
ಸುಟ್ಟುಹೋಗ್ತಿರುವ ಉಪ್ಪಿನ ಗುಡ್ಡಗಳು

ಕಾಪಾಡು ಸ್ವಾಮೀ
ಈ ಮಣ್ಣ ಪಿಂಡವನು
ಮರಗಳಿಂದ ಹೂಗಳಿಂದ ನದಿಗಳಿಂದ
ಮಳೆಗಳೊಳಗಿನ ವನಗಳೊಂದಿಗೆ

ಅನಂತಾನಂತ ಅಭಯ ಚರ್ಮಗಳಿಂದ.

*
ಪರಿಚಯ :  ಬೆಂಗಳೂರಿನಲ್ಲಿ ವಾಸಿಸುವ ಕುಮಾರ್ ಎಸ್. ಡಿ. ಅವರು ಜನಪ್ರಿಯ ಅನುವಾದಕರು. ನೂರಾರು ಕಾದಂಬರಿಗಳನ್ನು, ಕಥೆಗಳನ್ನು ತೆಲುಗು ಮತ್ತು ಇಂಗ್ಲಿಷಿನಿಂದ ಅನುವಾದ ಮಾಡಿದ್ಧಾರೆ. ಕನ್ನಡದಲ್ಲಿಯೂ ಕಾದಂಬರಿಗಳನ್ನು ರಚಿಸಿದ್ದಾರೆ. ಕಿರುಚಿತ್ರ, ಸಿನೆಮಾಗಳಿಗೆ ಕಥೆ, ಚಿತ್ರಕಥೆ, ನಿರ್ದೇಶನದ ಅನುಭವವಿದೆ. ಇಲ್ಲಿಯತನಕ ಸುಮಾರು 4,500 ಕವನಗಳನ್ನು ತೆಲುಗು ಕನ್ನಡ ಮತ್ತು ಇಂಗ್ಲಿಷಿಗೆ ಅನುವಾದಿಸಿ ಫೇಸ್​ಬುಕ್​ಗೆ ಟಂಕಿಸಿದ್ದಾರೆ.

*

ಎಂ. ಎಸ್. ನಾಯುಡು : ನಾಯುಡುರವರ ಪ್ರತಿಯೊಂದೂ ವಾಕ್ಯದೊಳಗೂ ಶೂನ್ಯಜ್ವಾಲೆ ಗೋಚರಿಸುತ್ತದೆ. ಮನದೊಳಗಿನ ಇರುಳ ಕೋಣೆಗಳಲ್ಲಿ ಸುಳಿತಿರುಗುವ ನಿರಾಸೆಯನ್ನು ಕ್ಯಾನ್ವಾಸಿನ ಮೇಲೆ ಕಾವ್ಯದಂತೆ ಚಿತ್ರಿಸುವ ಕಲಾವಿದರು ಇವರು. ಅಂತೆಯೇ ಇವರನ್ನು ತೆಲುಗಿನ ಕವಿಗಳು ‘ವಿನ್ಸೆಂಟ್ ವ್ಯಾಂಗೋ’ ಎಂದು ಕರೆಯುತ್ತಾರೆ. ಅಂಗೈಯಲ್ಲಿ ಮೋಂಬತ್ತಿ ಇರಿಸಿಕೊಂಡು ಆತ್ಮಹನನಕ್ಕೊಳಪಡುವ ಪ್ರಕ್ರಿಯೆಯಂತೆ ಇವರ ಕವಿತೆಗಳು. Magnificent obsessive compulsive disorder ಅನ್ನು ಒಂದು ಕ್ರಮದಲ್ಲಿರಿಸುವ ಪ್ರಯತ್ನ ಇವರ ಕವಿತೆಗಳಲ್ಲಿ ಕಾಣುತ್ತದೆ; ಮೌನ, ನೀರವತೆ, ನಿರ್ಮೋಹ. ನಿರ್ವಾಕ್ಯ ಕವಿ, ವಿಷಾದಾಶ್ರು ತುಷಾರಗಳ ನಶೆ ಏರಿಸುವ ಕವಿ ಎಂದೂ ಕರೆಯಲಾಗುತ್ತದೆ. ತೆಲುಗಿನ ಸಮಕಾಲೀನ ಕವಿಗಳಲ್ಲಿ ಮಹತ್ವದ ಕವಿ ಇವರು.

*

ಮರ್ಸಿ ಮಾರ್ಗರೇಟ್ : ಹೈದರಾಬಾದಿನಲ್ಲಿ ವಾಸಿಸುತ್ತಿರುವ ಇವರು ಸಾಹಿತ್ಯ ಅಕಾಡೆಮಿಯ ಯುವ ಪುರಸ್ಕಾರ ಪ್ರಶಸ್ತಿ ವಿಜೇತೆ. ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡ ಇವರು ಕವಿತೆ ಮತ್ತು ಸಣ್ಣಕಥೆಗಳನ್ನು ಬರೆಯುತ್ತಾರೆ. ಮಾಟಲ ಮಡುಗು, ಕಾಲಂ ವಲಿಪೋಟುನ್ನಾ ವೈಪು ಇವರ ಕೃತಿಗಳು.

*

ಊರ್ಮಿಳಾ:  ಶೋಭಾ ಭಟ್ ಇವರ ಕಾವ್ಯನಾಮ ಊರ್ಮಿಳಾ. ‘ಅಂಗಾರ ಸ್ವಪ್ನ’ ಇವರ ಕಾವ್ಯ ಸಂಪುಟ. ಮಹಿಳೆಯರ ಸಂಕಟಗಳಿಗೆ ರಾಗ ಕಟ್ಟಿದಂತೆ ಇವರ ಕವನಗಳು. ಒಂದೊಂದು ಭಾವವನ್ನೂ ಅರೆದು ಸೋಸಿ ಅನುಭೂತಿ ನೀಡುತ್ತವೆ ಇವರ ಕವನಗಳು. ಮೂರು ದಶಕಗಳ ಹಿಂದೆ ಕಡು ಹೆಮ್ಮೆಯಿಂದ ತೆಲುಗು ಸ್ತ್ರೀವಾದ ಕಾವ್ಯದಲ್ಲಿ ನೂತನ ಸುಸ್ವರ ಕೇಳಿಸಿದ ಕವಿ.

*

ಸಿದ್ಧಾರ್ಥ : ಕವಿಯಷ್ಟೇ ಅಲ್ಲ. ಸಂಗೀತಗಾರ, ನೃತ್ಯಕಾರ, ಚಿತ್ರಕಾರ, ಸಿನೆಮಾಗಳ ಕಥೆ ಚಿತ್ರಕತೆ ಸಂಭಾಷಣೆಗಳಲ್ಲಿ ತೊಡಗಿಕೊಂಡವರು ಕೂಡ. ಆ ಕಾರಣದಿಂದಲೋ ಏನೋ ಅವರ ಕಾವ್ಯದಲ್ಲಿ ವಾದ್ಯಗಳ ನಿನಾದ, ನರ್ತಕಿಯ ವಿಲಾಸ, ಚಿತ್ರಕಲಾವಿದನ ಇಮೇಜರಿ ಕಾಣುತ್ತವೆ. ತೆಲಂಗಾಣಾ ರಾಜ್ಯದ ಪ್ರಥಮ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಭಾಜನರು ಇವರು.

ಇದನ್ನೂ ಓದಿ : Poetry : ಅವಿತಕವಿತೆ ; ನಾನೆಂದೂ ಕೇಳುವುದಿಲ್ಲ ಯಾವುದು ನಿನ್ನ ದೇಶ ಅಥವಾ ಅಲ್ಲೂ ಉಂಟಾ ಗಂಡಸರ ಪದಕೋಶ?

Published On - 10:57 am, Sun, 11 July 21