Bookmark : ಅಕ್ಷರ ಪ್ರಕಾಶನ ; ‘ಪುಸ್ತಕ ಪ್ರೀತಿ, ಓದುಗಪ್ರಜ್ಞೆ ಪೋಷಿಸುವುದೇ ನಮ್ಮ ಗುರಿ‘

Kannada Publication : ‘ಇಲ್ಲಿಯವರೆಗೆ 150 ಇ-ಪುಸ್ತಕಗಳು ಪೂರ್ಣಗೊಂಡಿವೆ. ಒಂದೂ ಕಾಲು ಲಕ್ಷ ರೂಪಾಯಿ ಮೌಲ್ಯದ ಪುಸ್ತಕಗಳನ್ನು ಮಾರಿಯೂ ಆಗಿದೆ. ಹಾಕಿದ ಶ್ರಮಕ್ಕೆ ಹೋಲಿಸಿದರೆ ಆ ಆದಾಯವೇನೂ ಹೆಚ್ಚಲ್ಲವಾದರೂ ಸುಮ್ಮನೆ ಕೂರಲಾಗದೆ ಮಾಡಿದ ಆ ಕೆಲಸವೀಗ ನಮ್ಮ ಕಾಲಕ್ಕೆ ತಕ್ಕುದಾದ ಮುಖ್ಯ ಹೆಜ್ಜೆಯೂ ಆಗಿದ್ದು ನಮಗೇ ಅನಿರೀಕ್ಷಿತ.’ ಕೆ. ವಿ. ಅಕ್ಷರ

Bookmark : ಅಕ್ಷರ ಪ್ರಕಾಶನ ; ‘ಪುಸ್ತಕ ಪ್ರೀತಿ, ಓದುಗಪ್ರಜ್ಞೆ ಪೋಷಿಸುವುದೇ ನಮ್ಮ ಗುರಿ‘
ಅಕ್ಷರ ಪ್ರಕಾಶನದ ಕೆ.ವಿ. ಅಕ್ಷರ
ಶ್ರೀದೇವಿ ಕಳಸದ | Shridevi Kalasad

|

Jul 16, 2021 | 2:34 PM

ಎಲ್ಲ ಅಸ್ತವ್ಯಸ್ತಗಳ ನಡುವೆಯೂ ನಮ್ಮ ಮನಸ್ಸನ್ನು ಉಲ್ಲಸಿತಗೊಳಿಸಿಕೊಳ್ಳುವುದು ನಮ್ಮಲ್ಲಿ ಅಂತರ್ಗತವಾಗಿರುವ ಅಭಿರುಚಿಗಳ ಮೂಲದಿಂದಲೇ. ಅಂಗಡಿಗಳು ಮುಚ್ಚಿದರೇನಂತೆ ಆನ್​ಲೈನ್​ ಇದೆಯಲ್ಲ ಎಂದು ಉತ್ಸಾಹದಿಂದ ಪುಸ್ತಕಗಳನ್ನೂ ತರಿಸಿಕೊಂಡೆವು. ಆದರೆ ಕೆಲ ತಿಂಗಳುಗಳ ನಂತರ ನಮ್ಮೆಲ್ಲರ ಸ್ಥಿತಿ, ಪಕ್ಷಿಯ ಕಾಲುಗಳನ್ನು ಗಟ್ಟಿಹಿಡಿದು ‘ಹಾರು ನೋಡೋಣ’ ಎಂಬಂತಾಗುತ್ತ ಬಂದಿತು. ನಮ್ಮ ಸುತ್ತಮುತ್ತಲಿನ ಪರಿಸರ ನೋವನ್ನೇ ನೇಯ್ದು ನೋವನ್ನೇ ತೊಟ್ಟುಕೊಳ್ಳುತ್ತಿರುವಾಗ ಮನಸ್ಸು ಚಿತ್ತೈಸುವುದಾದರೂ ಹೇಗೆ, ಏಕಾಂತಕ್ಕೆ ತೆರೆದುಕೊಳ್ಳದೆ ಬೌದ್ಧಿಕ ಹಸಿವು ತಣಿಯುವುದಾದರೂ ಹೇಗೆ?; ಅಂತೂ ಇದೆಲ್ಲ ಒಂದು ಹಂತಕ್ಕೆ ಮುಗಿದು ಪುಸ್ತಕದ ಅಂಗಡಿಗಳು ಮೆಲ್ಲಗೆ ಕಣ್ಬಿಟ್ಟಿವೆ. ಮತ್ತೆ ವಾರಾಂತ್ಯಕ್ಕೆ ಪುಸ್ತಕದಾತರನ್ನೂ ಮತ್ತವರ ಬಳಗವನ್ನೂ ಎದುರುಗೊಳ್ಳುತ್ತ ಬೇಕಾದ ಪುಸ್ತಕ ಖರೀದಿಸಬಹುದಾಗಿದೆ. ಮರಳಿ ಬರುವಾಗ ಅಚಾನಕ್ಕಾಗಿ ಬಾಗಿಲೊಳಗೆ ಸಿಕ್ಕ ಪರಿಚಿತರು ಮತ್ತು ಆ ಕ್ಷಣಗಳು ಆಪ್ತವಾಗುವ ಗಳಿಗೆಗಳನ್ನೂ ಸವಿಯಬಹುದಾಗಿದೆ.  

ಇಂಥ ಹೊತ್ತಿನಲ್ಲಿ ಕನ್ನಡದ ಪ್ರಮುಖ ಪ್ರಕಾಶಕರೊಂದಿಗೆ ನಡೆಸುವ ಮಾತುಕತೆಗಳು, ಪ್ರತೀ ಶುಕ್ರವಾರ ‘ಟಿವಿ9 ಕನ್ನಡ ಡಿಜಿಟಲ್ : ಬುಕ್​ಮಾರ್ಕ್​ – Bookmark’ ಸರಣಿ ಮೂಲಕ ನಿಮ್ಮನ್ನು ತಲುಪಲಿವೆ.

*

ರಂಗಚಳವಳಿಯನ್ನು ಹುಟ್ಟುಹಾಕುವ ಮೂಲಕ ರಂಗಭೂಮಿ, ಸಾಹಿತ್ಯ ಮತ್ತು ಸಾಂಸ್ಕೃತಿಕ ಲೋಕದಲ್ಲಿ ಸಂಚಲನ ಮೂಡಿಸಿದ ಕೆ.ವಿ. ಸುಬ್ಬಣ್ಣ ಅವರು ಇಲ್ಲವಾಗಿ ಇಂದಿಗೆ 16 ವರ್ಷಗಳು ಕಳೆದವು. ಅವರು ಕಟ್ಟಿದ  ಹೆಗ್ಗೋಡಿನ (ನೀಲಕಂಠೇಶ್ವರ ನಾಟ್ಯ ಸೇವಾ ಸಂಘ) ನೀನಾಸಂ ಮತ್ತು ಅಕ್ಷರ ಪ್ರಕಾಶನ ಇಂದಿಗೂ ತನ್ನ ಪ್ರಯೋಗಶೀಲತೆ, ಸಮಕಾಲೀನ ಸ್ಪಂದನೆ ಮತ್ತು ವಿಶಿಷ್ಟ ಆಲೋಚನೆಗಳ ಮೂಲಕ ಕನ್ನಡ ಸಾಂಸ್ಕೃತಿಕ ಲೋಕದಲ್ಲಿ ತನ್ನದೇ ಆದ ಸ್ಥಾನವನ್ನು ಕಾಯ್ದುಕೊಂಡು ಬಂದಿವೆ. ಅಲ್ಲದೆ, ಅಕ್ಷರ ಪ್ರಕಾಶನವು 65 ವಸಂತಗಳನ್ನು ಪೂರೈಸಿದೆ. ಈ ಸಂದರ್ಭದಲ್ಲಿ ಸಂಸ್ಥೆಯ ಆಶಯ, ಪ್ರಸ್ತುತ ಕಾರ್ಯಯೋಜನೆಗಳ ಬಗ್ಗೆ ರಂಗನಿರ್ದೇಶಕ, ಸಾಹಿತಿ ಮತ್ತು ಪ್ರಕಾಶಕ ಕೆ.ವಿ. ಅಕ್ಷರ ಅವರು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ.

*

ಕೊರೊನಾ ಕಾಲಿಡುತ್ತಿದ್ದಂತೆ ನಿಮ್ಮ ಪ್ರಕಾಶನದ ಕಾರ್ಯವಿಧಾನಗಳನ್ನು ಹೇಗೆ ಬದಲಾಯಿಸಿಕೊಂಡಿರಿ? ಎಲ್ಲರ ಹಾಗೆಯೇ ನಮಗೂ ಕೊರೋನಾ ಪಿಡುಗು ಆಕಸ್ಮಿಕ ಮಾತ್ರವಲ್ಲ, ಆಘಾತಕಾರಿಯೂ. ಮೊದಲ ಹಂತದಲ್ಲಿ ಕೆಲಸವನ್ನೇ ನಿಲ್ಲಿಸಿ ದಿಕ್ಕುತೋಚದೆ ನಿಂತಿದ್ದು. ಆದರೆ, ಕೆಲವೇ ವಾರಗಳಲ್ಲಿ ನಮ್ಮ ಮನಸ್ಸು, ಇಂಥ ಬಾಗಿಲು ಮುಚ್ಚಿದ ಸ್ಥಿತಿಯಲ್ಲೂ ಮಾಡಬಹುದಾದ್ದು ಏನು ಎಂದು ಯೋಚಿಸಿತು. ಹಾಗೆ, 2020ರ ಏಪ್ರಿಲ್​ನಿಂದ ನಮ್ಮ ಮುದ್ರಿತ ಪುಸ್ತಕಗಳನ್ನು ಇ-ಪುಸ್ತಕಗಳನ್ನಾಗಿ ಮಾಡುವ ಯೋಜನೆ ವೇಗ ಪಡೆಯಿತು; ಇಲ್ಲಿಯವರೆಗೆ 150 ಪುಸ್ತಕಗಳು ಪೂರ್ಣಗೊಂಡಿವೆ. ಒಂದೂ ಕಾಲು ಲಕ್ಷ ರೂಪಾಯಿ ಮೌಲ್ಯದ ಇ-ಪುಸ್ತಕಗಳನ್ನು ಮಾರಿಯೂ ಆಗಿದೆ.  ಹಾಕಿದ ಶ್ರಮಕ್ಕೆ ಹೋಲಿಸಿದರೆ ಆ ಆದಾಯವೇನೂ ಹೆಚ್ಚಲ್ಲವಾದರೂ ಸುಮ್ಮನೆ ಕೂರಲಾಗದೆ ಮಾಡಿದ ಆ ಕೆಲಸವೀಗ ನಮ್ಮ ಕಾಲಕ್ಕೆ ತಕ್ಕುದಾದ ಮುಖ್ಯ ಹೆಜ್ಜೆಯೂ ಆಗಿದ್ದು ನಮಗೇ ಅನಿರೀಕ್ಷಿತ.

ಲಾಕ್​ಡೌನ್​ ಸಂದರ್ಭವು ಹೊಸ ಕಾರ್ಯ ಯೋಜನೆಗಳಿಗೆ ಹಾದಿ ತೆರೆಯಿತೆ? ಈ ಕಾಲಾವಧಿಯು ಮತ್ತು ಡಿಜಿಟಲ್ ಮುದ್ರಣದ ಹೊಸ ತಂತ್ರಜ್ಞಾನವು ನಮ್ಮ ಹಳೆಯ ಪುಸ್ತಕಗಳನ್ನು ಕಡಿಮೆ ವೆಚ್ಚದಲ್ಲಿ ಮರುಮುದ್ರಿಸುವ ಯೋಜನೆಗೆ ಅವಕಾಶ ಕಲ್ಪಿಸಿತು. ಎರಡನೆಯ ಅಲೆಯ ಲಾಕ್‌ಡೌನಿನ ಸಮಯವನ್ನು ನಾವು ಈ ಕೆಲಸಕ್ಕೆ ಬಳಸಿಕೊಂಡು ಸುಮಾರು 30 ಹಳೆಯ ಅಲಭ್ಯ ಪುಸ್ತಕಗಳ ಮರುಮುದ್ರಣಕ್ಕೆ ಸಿದ್ಧತೆ ಮಾಡಿಕೊಂಡೆವು. ನಮ್ಮ ಪ್ರಕಾಶನವು ಔದ್ಯಮಿಕ ದೃಷ್ಟಿಕೋನದ ಹಿನ್ನೆಲೆಯಿಂದ ಕೂಡಿರದೇ ಇದ್ದ ಕಾರಣ ಮತ್ತು ನಮ್ಮ ಪ್ರಕಟಣೆಗಳು ಬಿಸಿಬಿಸಿಯಾಗಿ ಖರ್ಚಾಗುವಂಥವೂ ಅಲ್ಲವಾದ್ದರಿಂದ ನಮ್ಮ ಆಫ್‌ಲೈನ್ ಮತ್ತು ಆನ್‌ಲೈನ್ ಆದಾಯಗಳೆರಡೂ ಯಾವತ್ತೂ ಸೀಮಿತವೇ. ಅಲ್ಲೂ ನಾವು ಇದ್ದೇವೆಂಬುದೇ ನಮ್ಮ ಸಾಧನೆ. ಭವಿಷ್ಯದ ಬಗ್ಗೆ ನಮ್ಮ ನಿಲುವೂ ಸರಳ. ಬರುವ ಆಯಾ ಕಾಲಕ್ಕೆ ಹೊಂದಿಕೊಂಡು ನಮಗೆ ಯಾವಾಗ ಯಾವ್ಯಾವ ಕೆಲಸಗಳನ್ನು ಎಷ್ಟು ಮಾಡಲಿಕ್ಕೆ ಸಾಧ್ಯವೋ ಅಷ್ಟನ್ನು ಮಾಡುವುದು; ಸಾಧ್ಯವಾದಷ್ಟೂ ನಷ್ಟ ಮಾಡಿಕೊಳ್ಳದೆ ಬದುಕುವುದು. ಒಟ್ಟಾರೆಯಾಗಿ 2020ರಲ್ಲಿ ನಮ್ಮದೇ ಆದ ಇ-ಪುಸ್ತಕ ನಿರ್ಮಾಣ ಮತ್ತು ಮಾರಾಟದ ಯೋಜನೆಗೆ ಅಡಿಯಿಟ್ಟೆವು. 150 ಇ-ಪುಸ್ತಕಗಳು ಬೇರೆಬೇರೆ ಗಣಕ-ಟ್ಯಾಬ್‌-ಫೋನ್‌ಗಳಲ್ಲಿ ಸುಲಭವಾಗಿ ಓದಲು ಅನುಕೂಲವಾಗುವಂಥ ವಿನ್ಯಾಸದಲ್ಲಿ ಹೊರಬಂದಿದ್ದು, ಗೂಗಲ್ ಪ್ಲೇ ಬುಕ್ಸ್‌, ವಿವಿಡ್‌ಲಿಪಿ, ಋತುಮಾನ, ಮೈಲ್ಯಾಂಗ್‌ ಈ-ಪುಸ್ತಕ ತಾಣಗಳಲ್ಲಿ ಜಗತ್ತಿನಾದ್ಯಂತ ನೇರ ಖರೀದಿಗೆ ಲಭ್ಯವಾಗಿವೆ.

bookmark akshara prakashana kv subbanna

‘ಗೋರ್ಕಿಯ ಕಥೆಗಳು’ ಕೃತಿಗಾಗಿ ಸೋವಿಯತ್ ಲ್ಯಾಂಡ್ ನೆಹರು ಅವಾರ್ಡ್ ಪಡೆಯುತ್ತಿರುವ ಕೆ. ವಿ. ಸುಬ್ಬಣ್ಣ

ಇ-ಪುಸ್ತಕಗಳ ಪಟ್ಟಿಯಲ್ಲಿ ಯಾವ ವಿಷಯ ಮತ್ತು ಪ್ರಕಾರಗಳಿಗೆ ಆದ್ಯತೆ ಕೊಟ್ಟಿದ್ದೀರಿ? ಕಥೆಕಾದಂಬರಿಗಳೇ ಅಲ್ಲದೆ, ನಾಟಕ, ಕಾವ್ಯ, ಪ್ರಬಂಧ ಮೊದಲಾದ ಸಾಹಿತ್ಯ ಪ್ರಕಾರಗಳು ಸೇರಿವೆ. ಜತೆಗೆ ಪರಿಸರ ವಿಜ್ಞಾನಗಳಿಂದ ಪ್ರಾರಂಭಿಸಿ ಮಾನವಿಕ-ರಾಜಕೀಯ ಜಿಜ್ಞಾಸೆಗಳವರೆಗೆ ತತ್ತ್ವಶಾಸ್ತ್ರದಿಂದ ಕಾವ್ಯಮೀಮಾಂಸೆಯವರೆಗೆ ಬೇರೆಬೇರೆ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳಿವೆ. ಕೆ.ವಿ. ಸುಬ್ಬಣ್ಣ ನೆನಪಿನ ಮೊದಲ ಓದು ಮಾಲಿಕೆಯ ಸುಮಾರು 30 ಈ ಪುಸ್ತಕಗಳು ಮೊದಲ ಓದುಗರನ್ನು ಉದ್ದೇಶಿಸಿದ್ದರೆ ಇನ್ನುಳಿದ ಪುಸ್ತಕಗಳಲ್ಲಿ ವಿದ್ಯಾರ್ಥಿ ಮತ್ತು ವಿದ್ವಾಂಸರಿಬ್ಬರಿಗೂ ಬೇಕಾದ ಪುಸ್ತಕಗಳೂ ಮೂಲ ಕನ್ನಡ ಕೃತಿಗಳೂ ಅನುವಾದಗಳೂ ಸೇರಿವೆ. ಸಾಹಿತ್ಯವೊಂದೇ ಅಲ್ಲ, ಕನ್ನಡ ಭಾಷೆಯ ಬೇರೆ ವಲಯಗಳ ಸಾಧ್ಯತೆ ಮತ್ತು ಸಾಧನೆಯನ್ನು ಅರಿಯಲು ಈ ಪುಸ್ತಕಗಳು ಕಿಟಕಿಯಾಗಿವೆ.

ಅಕ್ಷರ ಪ್ರಕಾಶನವು 65 ವರ್ಷಗಳನ್ನು ಪೂರೈಸಿದೆ. ಈ ತನಕವೂ ತನ್ನ ವೈಶಿಷ್ಟ್ಯವನ್ನು ಉಳಿಸಿಕೊಂಡ ಬಗೆಯನ್ನು ವಿವರಿಸಬಹುದೆ? ಈತನಕ ಒಟ್ಟು ಐವತ್ತು ಸಾವಿರಕ್ಕೂ ಹೆಚ್ಚು ಪುಟಗಳ ವಿಸ್ತೃತ ಸಾಹಿತ್ಯವನ್ನು ಪ್ರಕಟಿಸಿದೆ; ಈ ಕಾಲದ ಕನ್ನಡದ ಪ್ರಮುಖ ಲೇಖಕರು ಚಿಂತಕರು ಈ ಸಂಸ್ಥೆಯೊಂದಿಗೆ ಕೈಜೋಡಿಸಿದ್ದಾರೆ. ಆರ್ಥಿಕವಾಗಿ ಲಾಭವನ್ನು ಗಳಿಸುವ ಉದ್ದೇಶವನ್ನು ಇಟ್ಟುಕೊಳ್ಳದ ಈ ಸಂಸ್ಥೆ ಬಹುಕಾಲ ನಷ್ಟದಲ್ಲೇ ನಡೆದಿದೆ; ಈಚಿನ ವರ್ಷಗಳಲ್ಲಿ ವಿಶೇಷ ನಷ್ಟಮಾಡಿಕೊಳ್ಳದೆ, ತಕ್ಕಮಟ್ಟಗೆ ತನ್ನ ಕಾಲ ಮೇಲೆ ದೃಢವಾಗಿ ನಿಲ್ಲುವ ಸಾಂಸ್ಥಿಕ ದಾರ್ಢ್ಯವನ್ನು ಸಾಧಿಸಿಕೊಳ್ಳಲು ಆರಂಭಿಸಿದೆ. ಕನ್ನಡದಲ್ಲಿ ‘ನವ್ಯಸಾಹಿತ್ಯ’ ಅಲೆ ಏಳುತ್ತಿದ್ದ ಸಂದರ್ಭದಲ್ಲಿ ಪ್ರಕಾಶನವು ತನ್ನ ಪ್ರಕಟಣೆಗಳ ಮೂಲಕ ಗುರುತಿಸಿಕೊಂಡಿತು. 1968ರಿಂದ 1978ರವರೆಗೆ ‘ಸಾಕ್ಷಿ’ ಪತ್ರಿಕೆಯನ್ನು ಪ್ರಕಟಿಸಿ ಆ ಕಾಲದ ಸಾಹಿತ್ಯ ಜಿಜ್ಞಾಸೆಗಳ ಕೇಂದ್ರವೂ ಆಗಿ ರೂಪುಗೊಂಡಿತು.

1970ರ ಹೊತ್ತಿಗೆ, ಈ ಸಂಸ್ಥೆಯು ಒಂದು ವಿಸ್ತೃತ ಸಂಘಟನೆಯಾಗಿ ಬೆಳೆದುಕೊಂಡಾಗ ಇದನ್ನು ಒಂದು ಅರೆ ಸಾರ್ವಜನಿಕ ಸಂಸ್ಥೆಯಾಗಿ ಬದಲಾಯಿಸುವ ಅಗತ್ಯ ಹುಟ್ಟಿತು. ಈ ಕಾರಣದಿಂದ 1975ರಲ್ಲಿ ಅಕ್ಷರ ಪ್ರಕಾಶನವನ್ನು ಒಂದು ಖಾಸಗಿ ಟ್ರಸ್ಟ್‌ ಆಗಿ ನೋಂದಾಯಿಸಲಾಯಿತು. ಈ ತನಕ 800ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದೆ (ಮರು ಮುದ್ರಣಗಳು ಸೇರಿ). 2021ರಲ್ಲಿ ಸುಮಾರು 160 ಪ್ರಕಟಣೆಗಳು ಮಾರಾಟಕ್ಕೆ ಲಭ್ಯವಿದ್ದರೆ ಉಳಿದ ಕೃತಿಗಳು ಪೂರ್ಣವಾಗಿ ಖರ್ಚಾಗಿವೆ.

bookmark kv akshara subbanna vaidehi

ಹಿರಿಯ ಕವಿ, ಕಥೆಗಾರರಾದ ವೈದೇಹಿಯವರ ‘ಮರ ಗಿಡ ಬಳ್ಳಿ’ ಕೃತಿ ಬಿಡುಗಡೆ ಸಂದರ್ಭದಲ್ಲಿ

ಬೇರೆ ಪ್ರಕಾಶಕರು ಸಾಧಾರಣವಾಗಿ ಪ್ರಕಟಿಸಲು ಹಿಂಜರಿಯುವ ಕಾವ್ಯಪ್ರಕಾರವನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಪ್ರಕಟಿಸಿದೆ. ಸಾಂಸ್ಕೃತಿಕ ಉದ್ದೇಶಗಳನ್ನು ಹಿನ್ನೆಲೆಯಾಗಿಟ್ಟುಕೊಂಡ ಪ್ರಕಾಶನವು, ಕಾಲದಿಂದ ಕಾಲಕ್ಕೆ ಬೇರೆಬೇರೆ ಪುಸ್ತಕ ಮಾಲೆಗಳನ್ನು ಪ್ರಕಟಿಸುತ್ತ ಬಂದಿದೆ. ಈ ಎಲ್ಲ ಮಾಲೆಗಳ ಮೂಲಕ ಮತ್ತು ಸತತವಾದ ಬಿಡಿ ಪ್ರಕಟಣೆಗಳ ಮೂಲಕ ತನ್ನ ಮಿತಿಗಳಲ್ಲಿಯೇ ಸಾಂಸ್ಕೃತಿಕ ಸಂವಾದವೊಂದನ್ನು ನಡೆಸುತ್ತ ಸಾಗಿದೆ. ಖಚಿತವಾದ ದೀರ್ಫಾವಧಿ ಮಾರ್ಗಸೂಚಿಗಳನ್ನೇನೂ ಇಟ್ಟುಕೊಳ್ಳದೇ ಕಾಲಕಾಲಕ್ಕೆ ವರ್ತಮಾನದ ಅಗತ್ಯಗಳಿಗೆ ಸ್ಪಂದಿಸುತ್ತ ಹೋಗುವ ‘ಪ್ರಕಟಣಾ ನೀತಿ’ ಈ ಎಲ್ಲ ಪ್ರಕಟಣೆಗಳ ಮೂಲಕ ಸಾಕ್ಷಾತ್ಕಾರಗೊಳ್ಳುತ್ತಿದೆ.

ಸರ್ಕಾರದ ಸಗಟು ಖರೀದಿಯಿಂದಾಗಿ ವಿಶೇಷ ನೆರವು ಪ್ರಕಾಶನಕ್ಕೆ ಒದಗಿದೆಯೆ? ಪ್ರಕಾಶನವು ಯಾವುದೇ ಸಂದರ್ಭದಲ್ಲಿ ಹೊರಗಿನ ನೇರ ಧನ ಸಹಾಯ ಪಡೆದಿಲ್ಲ. ಕೆಲವೇ ಪುಸ್ತಕಗಳಿಗೆ (ಉದಾ: ಭಾರತದ ಪರಿಸರ ಪರಿಸ್ಥಿತಿ, ಅಕ್ಷರ ಚಿಂತನ ಮಾಲೆ, ರಂಗಪ್ರಪಂಚ) ಭಾಗಶಃ ಸಹಾಯಧನ ಬಂದಿದ್ದರೂ ಆಯಾ ಸಹಾಯವನ್ನು ಆಯಾ ಪುಸ್ತಕದ ಮಾರಾಟದ ಬೆಲೆಯನ್ನು ಇಳಿಸಲಿಕ್ಕೆ ಬಳಸಿಕೊಳ್ಳಲಾಗಿದೆ. ಕನ್ನಡದ ಪ್ರಕಟಣೆಯ ಪ್ರಪಂಚವನ್ನು ಸ್ಥೂಲವಾಗಿ ಬಲ್ಲವರಿಗೂ ಗೊತ್ತಿರುವ ಹಾಗೆ, ಕನ್ನಡದಲ್ಲಿ ಜನಪ್ರಿಯವಲ್ಲದ ಬರಹಗಳನ್ನು ಪ್ರಕಟಿಸುವುದು-ಮಾರುವುದು ಕಠಿಣವಾದ ಕೆಲಸ. ಇದಕ್ಕೆ ಕಾರಣ ಪುಸ್ತಕದ ಮಾರಾಟ ಕೇಂದ್ರಗಳ ವಿಸ್ತೃತವಾದ ಜಾಲ ಇಲ್ಲದೇ ಇರುವುದು. ಹಾಗಿದ್ದರೂ ಪುಸ್ತಕ ಪ್ರೀತಿಯು ಇರುವ ಬೆರಳೆಣಿಕೆಯ ಪುಸ್ತಕ ವ್ಯಾಪಾರಿಗಳ ವಿಶ್ವಾಸದಿಂದಾಗಿ ಪ್ರಕಾಶನದ ವ್ಯವಹಾರ ನಡೆಯುತ್ತಿದೆ. ಪುಸ್ತಕದಂಗಡಿಗಳ ಹೊರತಾಗಿ, ಗ್ರಂಥಾಲಯಗಳಿಂದಾಗಲೀ, ಸರಕಾರದ ಸಗಟು ಖರೀದಿಗಳಿಂದಾಗಲೀ ಅಕ್ಷರ ಪ್ರಕಾಶನಕ್ಕೆ ವಿಶೇಷ ನೆರವು ಒದಗಿಲ್ಲ. ಸ್ಥೂಲ ಅಂದಾಜಿನಂತೆ, ಪ್ರಕಾಶನದ ಒಟ್ಟೂ ವ್ಯಾಪಾರದಲ್ಲಿ ಸಗಟು ಖರೀದಿ ಮತ್ತು ಗ್ರಂಥಾಲಯ ಖರೀದಿಯ ಪಾಲು ಶೇ. 10ಕ್ಕೂ ಕಡಿಮೆ. ಕೆಲವು ವರ್ಷಗಳಲ್ಲಂತೂ ಅದು ಇಲ್ಲವೇ ಇಲ್ಲ.

bookmark ninasam akshara prakashana kv subbanna

ಕೆ.ವಿ. ಸುಬ್ಬಣ್ಣ ಮತ್ತು ನೀನಾಸಂನ ಶಿವರಾಮ ಕಾರಂತ ರಂಗಮಂದಿರ

ಆರಂಭದಲ್ಲಿ ಹೇಳಿದಂತೆ, ದೊಡ್ಡ ಪ್ರಮಾಣದಲ್ಲಿ ಲಾಭ ತರುವ ಉದ್ಯಮವಾಗಿ ಬೆಳೆಯುವ ಗುರಿ ಪ್ರಕಾಶನಕ್ಕಿಲ್ಲ. ಈಗಿರುವ ಪ್ರಮಾಣದಲ್ಲಿಯೇ ಪುಸ್ತಕ ಪ್ರೀತಿಯನ್ನೂ ಉಳಿಸಿಕೊಂಡು, ಆದರೆ ನಷ್ಟದ ಸಂಸ್ಥೆಯಾಗದೇ ಓದುಗಪ್ರಜ್ಞೆಯನ್ನು ಪೋಷಿಸುವ ಸಂಘಟನೆಯಾಗುವುದು ಪ್ರಕಾಶನದ ಗುರಿ. ಜೊತೆಗೆ ಪುಸ್ತಕದ ನಿರ್ಮಾಣ ಹಾಗೂ ಮಾರಾಟದ ವ್ಯವಸ್ಥೆಗಳನ್ನು ಇನ್ನಷ್ಟು ಅಚ್ಚುಕಟ್ಟಾಗುವಂತೆ ಉತ್ತಮಪಡಿಸುವ ಆಶಯ ಪ್ರಕಾಶನಕ್ಕಿದೆ.

ಅಂತರ್ಜಾಲದ ಅಂಗಡಿ ಮತ್ತು ಈ-ಪುಸ್ತಕಗಳಿಗಾಗಿ ಸಂಪರ್ಕಿಸಿ : ಅಕ್ಷರ ಪ್ರಕಾಶನ

ಇದನ್ನೂ ಓದಿ Bookmark: ‘ಪುಸ್ತಕೋದ್ಯಮ ಪೂರ್ಣಪ್ರಮಾಣದ ಉದ್ಯಮವಾಗಿಲ್ಲ ಎನ್ನುವುದು ಅಭಿನಂದನೀಯ’

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada