ಇದು ಅಂತಿಂಥ ಗ್ರಾಮವಲ್ಲ: ನಮ್ಮನ್ನು ಆಳಿದ ಬ್ರಿಟಿಷರ ಸಮಾಧಿಗಳು ಈ ಗ್ರಾಮದಲ್ಲಿವೆ.. ಕೈ ಬೀಸಿ ಕರೆಯುತ್ತವೆ..!
ಕಲಾದಗಿಯಲ್ಲಿ ಒಟ್ಟು 64 ಫಿರಂಗಿ ಗೋರಿಗಳಿದ್ದು, ಒಂದಕ್ಕಿಂತ ಒಂದು ಗೋರಿಯನ್ನು ವಿಭಿನ್ನ ಶೈಲಿಯಲ್ಲಿ ಕಟ್ಟಿಸಲಾಗಿದೆ. ಸಮಾಧಿಗಳ ಮೇಲೆ ತಮ್ಮನ್ನಗಲಿದ ವ್ಯಕ್ತಿಗಳ ಬಗ್ಗೆ ದುಃಖ ವ್ಯಕ್ತಪಡಿಸಲು ಇಂಗ್ಲೀಷಿನಲ್ಲಿ ಶೋಕಗೀತೆಗಳನ್ನು ಕೆತ್ತಿಸಲಾಗಿದೆ.
ಬಾಗಲಕೋಟೆ: ಸ್ಮಶಾನ ಅಂದರೆ ಸಾಕು ಎಲ್ಲರಿಗೂ ಒಂದು ಕ್ಷಣ ಭಯ ಶುರುವಾಗುತ್ತದೆ. ಕೆಲವರಂತೂ ಆ ಹೆಸರನ್ನು ಹೇಳಲೇ ಹಿಂಜರಿಯುತ್ತಾರೆ. ಸ್ಮಶಾನಕ್ಕೆ ಕಾಲಿಡಲು ಹಗಲು ಸಮಯದಲ್ಲೂ ಯಾರೂ ಮುಂದಾಗುವುದಿಲ್ಲ. ಆದರೆ, ಈ ಗ್ರಾಮದಲ್ಲಿ ಇರುವ ಸ್ಮಶಾನ ಅಂದರೆ ಯಾರಿಗೂ ಭಯವೇ ಆಗುವುದಿಲ್ಲ. ಬದಲಾಗಿ, ಆ ಸ್ಮಶಾನದಲ್ಲಿನ ಸಮಾಧಿಗಳೇ ಎಲ್ಲರನ್ನೂ ಕೈ ಮಾಡಿ ಕರೆಯುತ್ತವೆ.
ಹೌದು, ಇಂಥದ್ದೊಂದು ಸ್ಮಶಾನ ಇರುವುದು ಬಾಗಲಕೋಟೆ ತಾಲೂಕಿನ ಕಲಾದಗಿ ಹೋಬಳಿ ಗ್ರಾಮದಲ್ಲಿ. ಇಲ್ಲಿ ಇರುವ ಸ್ಮಶಾನ ಅಂದರೆ ಜನರಿಗೆ ಯಾಕೆ ಭಯವಿಲ್ಲ. ಸಮಾಧಿಗಳು ಏಕೆ ಕೈ ಮಾಡಿ ಕರೆಯುತ್ತವೆ ಎಂಬ ಪ್ರಶ್ನೆಗೆ ಇಲ್ಲಿ ಉತ್ತರವಿದೆ. ಬಾಗಲಕೋಟೆ ತಾಲೂಕಿನ ಕಲಾದಗಿ ಹೋಬಳಿ ಗ್ರಾಮದಲ್ಲಿ ಇರುವುದು ನಮ್ಮನ್ನು ಆಳ್ವಿಕೆ ಮಾಡಿದ ಬ್ರಿಟಿಷರ ಸಮಾಧಿಗಳು! 18ನೇ ಶತಮಾನದಲ್ಲಿ ಮೃತಪಟ್ಟ ಬ್ರಿಟಿಷ್ ಅಧಿಕಾರಿಗಳು ಹಾಗೂ ಅವರ ಸಂಬಂಧಿಕರ ಶವಗಳನ್ನು ಇಲ್ಲಿ ಹೂಳಲಾಗಿದೆ. ಆ ಸಮಾಧಿಗಳು ಎಲ್ಲರನ್ನೂ ಸೆಳೆಯುತ್ತಿವೆ.
18ನೇ ಶತಮಾನದ 64 ಫಿರಂಗಿ ಗೋರಿಗಳು ಕಲಾದಗಿಯಲ್ಲಿ ಇರುವುದೇಕೆ? ಕಲಾದಗಿ ಗ್ರಾಮದ ಬಳಿ ಬ್ರಿಟಿಷರ ಫಿರಂಗಿ ಗೋರಿಗಳು ಇರುವುದೇಕೆ ಎಂದು ಬಹಳಷ್ಟು ಮಂದಿಗೆ ಗೊತ್ತಿಲ್ಲ. ಕಲಾದಗಿ ಹಾಗೂ ಬ್ರಿಟಿಷರ ಗೋರಿಗಳಿಗೆ ಇರುವ ಸಂಬಂಧದ ಬಗ್ಗೆಯೂ ತಿಳಿದಿರಲಿಕ್ಕಿಲ್ಲ. ಕಲಾದಗಿ ಸದ್ಯ ಹಣ್ಣುಗಳ ಗ್ರಾಮ ಎಂದು ಹೆಸರಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ ಅತಿ ಹೆಚ್ಚು ದಾಳಿಂಬೆ, ಚಿಕ್ಕು ಹಣ್ಣುಗಳನ್ನು ಬೆಳೆದು ದೇಶ-ವಿದೇಶಕ್ಕೂ ಕಲಾದಗಿಯಿಂದ ಹಣ್ಣುಗಳು ಮಾರಾಟವಾಗುತ್ತವೆ. ಇಂತಹ ಗ್ರಾಮ ಅದೊಂದು ಕಾಲದಲ್ಲಿ ಜಿಲ್ಲಾ ಕೇಂದ್ರವಾಗಿತ್ತು.
ಕಲಾದಗಿ ಗ್ರಾಮ, ಹದಿನೆಂಟನೇ ಶತಮಾನದ ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಜಿಲ್ಲಾ ಕೇಂದ್ರವಾಗಿತ್ತು. ಆ ಸಂದರ್ಭದಲ್ಲಿ ಮೃತಪಟ್ಟ ಬ್ರಿಟಿಷ್ ಅಧಿಕಾರಿಗಳನ್ನು ಹಾಗೂ ಅಧಿಕಾರಿಗಳ ಸಂಬಂಧಿಕರನ್ನು ಇದೇ ಜಾಗದಲ್ಲಿ ಹೂಳಲಾಗುತ್ತ್ತಿತ್ತು. ಅಂದು ಜಿಲ್ಲಾ ಕೇಂದ್ರವಾಗಿದ್ದ ಕಲಾದಗಿಯಲ್ಲಿ ಬ್ರಿಟಿಷ್ ಅಧಿಕಾರಿಗಳು ವಾಸ ಮಾಡುತ್ತಿದ್ದರು. ಇಲ್ಲಿಂದಲೇ ಈ ಭಾಗದ ಆಡಳಿತ ನಡೆಸುತ್ತಿದ್ದರು. ಹಾಗಾಗಿ, ಮೃತಪಟ್ಟವರನ್ನು ಇದೇ ಜಾಗದಲ್ಲಿ ಹೂಳುತ್ತಿದ್ದರು. ಒಂದಕ್ಕಿಂತ ಒಂದು ವಿಭಿನ್ನವಾದ ಸಮಾಧಿ ರೂಪಿಸುತ್ತಿದ್ದರು.
ಗಮನ ಸೆಳೆಯುತ್ತವೆ ಫಿರಂಗಿ ಗೋರಿಗಳು, ಗೋರಿಗಳ ಮೇಲಿವೆ ಶೋಕ ಗೀತೆಗಳು Epitaph ಕಲಾದಗಿಯಲ್ಲಿ ಈ ವಿದೇಶೀಯರ ಒಟ್ಟು 64 ಗೋರಿಗಳಿದ್ದು, ಒಂದಕ್ಕಿಂತ ಒಂದು ಗೋರಿಯನ್ನು ವಿಭಿನ್ನ ಶೈಲಿಯಲ್ಲಿ ಕಟ್ಟಿಸಲಾಗಿದೆ. ಸಮಾಧಿಗಳ ಮೇಲೆ ತಮ್ಮನ್ನಗಲಿದ ವ್ಯಕ್ತಿಗಳ ಬಗ್ಗೆ ದುಃಖ ವ್ಯಕ್ತಪಡಿಸಲು ಇಂಗ್ಲೀಷಿನಲ್ಲಿ ಶೋಕಗೀತೆಗಳನ್ನು (Epitaph) ಕೆತ್ತಿಸಲಾಗಿದೆ. ಕಟ್ಟಿಸಿದ ಗೋರಿಗಳ ಮೇಲೆ ಆಂಗ್ಲ ಭಾಷೆಯಲ್ಲಿ ಮೃತಪಟ್ಟವರ ಹೆಸರು, ಮೃತಪಟ್ಟವರ ತಂದೆಯ ಹೆಸರು ಹಾಗೂ ಮೃತಪಟ್ಟ ದಿನಾಂಕ, ವರ್ಷ, ಮೃತಪಟ್ಟವರ ವಯಸ್ಸನ್ನು ಕಲ್ಲಿನಲ್ಲಿ ಕೆತ್ತಿಸಲಾಗಿದೆ.
ಕೆಲವರು ಕಲ್ಲಿನ ಮೇಲೆ ತಮಗಾದ ದುಃಖವನ್ನು ಬರವಣಿಗೆ ಮೂಲಕ ವ್ಯಕ್ತಪಡಿಸಿ ಶೋಕಭರಿತ ಸಾಲುಗಳನ್ನು ಬರೆಸಿದ್ದಾರೆ. ಗೋರಿಗಳಲ್ಲಿ ಹದಿನೇಳು ತಿಂಗಳ ಮಕ್ಕಳು, ಹತ್ತು ತಿಂಗಳ ಮಕ್ಕಳ ಸಮಾಧಿಗಳು ಸೇರಿದಂತೆ ಎಲ್ಲ ವಯೋಮಾನದವರ ಸಮಾಧಿಗಳಿವೆ. ಕೆಲ ಸಮಾಧಿಗಳಲ್ಲಿ ಸಂಬಂಧಿಕರ ಅಗಲಿಕೆಯನ್ನು ಅಕ್ಷರದಲ್ಲಿ ನಮೂದಿಸಿರುವ ಶೈಲಿ ಮನಕಲುಕುವಂತಿದೆ. ಈಗಲೂ ಇಂಗ್ಲೆಂಡಿನಿಂದ ಮೃತರ ಸಂಬಂಧಿಕರು ಕಲಾದಗಿ ಪಟ್ಟಣಕ್ಕೆ ಬಂದು ಇಲ್ಲಿ ಪ್ರಾರ್ಥನೆ ಮಾಡಿ ಹೋಗುತ್ತಾರಂತೆ. ಈ ಸಮಾಧಿಗಳು ಇಂದಿಗೂ ತಮ್ಮದೇ ಆದ ಮಹತ್ವವನ್ನು ಕಾಯ್ದುಕೊಂಡಿವೆ.
ಶಿಥಿಲಾವಸ್ಥೆಗೆ ತಲುಪುತ್ತಿವೆ ಗೋರಿಗಳು ಐತಿಹಾಸಿಕ ಹಿನ್ನೆಲೆ ಹೊಂದಿರುವ ಸಮಾಧಿಗಳು ಪ್ರಾಚೀನ ಸ್ಮಾರಕ ಇದ್ದಂತೆ. ಬ್ರಿಟಿಷರು ನಮ್ಮನ್ನಾಳಿ, ನಮ್ಮನ್ನು ಗುಲಾಮರನ್ನಾಗಿ ಮಾಡಿಕೊಂಡಿರಬಹುದು. ಆದರೂ ಈ ಸಮಾಧಿಗಳು ನಮ್ಮ ನೆಲದ ಐತಿಹಾಸಿಕ ಕುರುಹುಗಳೆಂಬುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ಆದರೆ, ಅಂತಹ ಮಹತ್ವದ ಆಂಗ್ಲರ ಸಮಾಧಿಗಳು ಇಂದು ನಿರ್ಲಕ್ಷ್ಯಕ್ಕೆ ಒಳಗಾಗಿವೆ.
ತಮ್ಮ ಪೂರ್ವಜರ ನೆನಪಿಗಾಗಿ ಬ್ರಿಟಿಷರು ನಿರ್ಮಿಸಿದ ಸಮಾಧಿಗಳು ಅಸ್ತಿತ್ವ ಕಳೆದುಕೊಳ್ಳುತ್ತಿವೆ. ಸೂಕ್ತ ರಕ್ಷಣೆಯಿಲ್ಲದೆ ಶಿಥಿಲಾವಸ್ಥೆಗೆ ತಲುಪುತ್ತಿವೆ. ಗೋರಿಗಳು ಒಡೆದು ನೆಲಸಮವಾಗುತ್ತಿವೆ. ಸ್ಮಶಾನದ ಆವರಣದಲ್ಲಿ ಕುರಿಮೇಕೆಗಳು ಮೇಯುತ್ತಿವೆ. ಕಸ, ಕಂಟಿ, ಜಾಲಿಗಿಡಗಳು ಬೆಳೆದು ಹಾಳುಕೊಂಪೆಯಾಗಿ ಸ್ಮಶಾನ ಬದಲಾಗುತ್ತಿದೆ.
ಸಮಾಧಿಗಳ ಮೇಲೆ ಚರಮಗೀತೆ ಬರೆದು ಅಳವಡಿಸಿದ ಕಲ್ಲುಗಳು ಕಳ್ಳರ ಪಾಲಾಗುತ್ತಿವೆ. ಆದರೂ ಇದರ ಕಡೆ ಯಾರೂ ಗಮನಹರಿಸುತ್ತಿಲ್ಲ. ಫಿರಂಗಿ ಗೋರಿಗಳು ಅವನತಿ ಅಂಚಿಗೆ ತಲುಪುತ್ತಿವೆ. ಇವುಗಳನ್ನು ಸಂರಕ್ಷಣೆ ಮಾಡಬೇಕು. ಇದನ್ನೊಂದು ಪ್ರವಾಸಿ ತಾಣವನ್ನಾಗಿ ಮಾಡಬೇಕು ಎಂಬುದು ಸ್ಥಳೀಯರ ಆಗ್ರಹವಾಗಿದೆ.
ಬ್ರಿಟಿಷರ ಗೋರಿಗಳು ನಮ್ಮ ನಾಡಿನ ಇತಿಹಾಸಕ್ಕೆ ಸಾಕ್ಷಿಯಾಗಿವೆ. ನಮ್ಮನ್ನು ಬ್ರಿಟಿಷರು ಆಳ್ವಿಕೆ ಮಾಡಿರಬಹುದು, ಅವರಿಂದ ನಾವು ಹಿಂಸೆಗೆ ಒಳಪಟ್ಟಿರಬಹುದು. ಆದರೆ, ಇತಿಹಾಸ ಯಾವಾಗಲೂ ಅಜರಾಮರವಾಗಿ ನೆನಪಿನಲ್ಲಿರಬೇಕು. ಇತಿಹಾಸಕ್ಕೆ ಈ ಸಮಾಧಿಗಳು ಸದಾ ಸಾಕ್ಷಿಯಾಗಿರಬೇಕು. ಇವುಗಳು ನಮ್ಮ ಇತಿಹಾಸ ಅಧ್ಯಯನಕ್ಕೆ ವಿದ್ಯಾರ್ಥಿಗಳಿಗೆ ಅನುಕೂಲ ಆಗಬೇಕು. ಆದ್ದರಿಂದ ಇವುಗಳನ್ನು ರಕ್ಷಣೆ ಮಾಡಬೇಕು ಎಂದು ಸ್ಥಳೀಯ ನಿವಾಸಿ ದತ್ತಾತ್ರೇಯ ಪುರೋಹಿತರು ಹೇಳುತ್ತಾರೆ.
ಸ್ಮಶಾನದ ಭೂಮಿ ಇರುವುದು ವಕ್ಫ್ ಇಲಾಖೆಯ ಭೂಮಿಯಲ್ಲಿ ! ಫಿರಂಗಿ ಗೋರಿಗಳು ಇರುವ ಸ್ಮಶಾನದ ಭೂಮಿ ಇರುವುದು ವಕ್ಫ್ ಬೋರ್ಡ್ ಹೆಸರಲ್ಲಿ. ಆದರೆ, ಇದುವರೆಗೂ ಇಲ್ಲಿ ವಕ್ಫ್ ಬೋರ್ಡ್ನ ಅಧಿಕಾರಿಗಳು, ಸಿಬ್ಬಂದಿಗಳು ಸ್ಮಶಾನ, ಗೋರಿಗಳನ್ನು ರಕ್ಷಣೆ ಮಾಡುವ ಬಗ್ಗೆ ಗಂಭೀರ ಕ್ರಮ ಕೈಗೊಂಡಿಲ್ಲ. ಇದರಿಂದ ಆಂಗ್ಲರ ಸಮಾಧಿ, ಸ್ಮಶಾನಕ್ಕೆ ರಕ್ಷಣೆಯಿಲ್ಲದಂತಾಗಿದೆ. ಸ್ಥಳೀಯರು ಇಲ್ಲಿ ಮೇಕೆ ಮೇಯಿಸುತ್ತಾರೆ. ಮೇಕೆಗಳ ಕೊಟ್ಟಿಗೆಯಾಗಿ, ಅನೈತಿಕ ಚಟುವಟಿಕೆಗಳ ತಾಣವಾಗಿ ಸ್ಮಶಾನ ಬದಲಾಗುತ್ತಿದೆ.
ಬ್ರಿಟಿಷರ ಕಾಲದ ಇತಿಹಾಸಕ್ಕೆ ಸಾಕ್ಷಿಯಾದ ಈ ಫಿರಂಗಿಗಳನ್ನು ರಕ್ಷಣೆ ಮಾಡಿ ಹೆಚ್ಚಿನ ಪ್ರವಾಸಿಗರಿಗೆ ಇವುಗಳನ್ನು ಪರಿಚಯಿಸಬೇಕಾಗಿದೆ. ಇವುಗಳ ಬಗ್ಗೆ ವಕ್ಫ್ ಬೋರ್ಡ್ ಜಿಲ್ಲಾ ಮಟ್ಟದ ಆಧಿಕಾರಿ, ರಹಮತ್ ಪೆಂಡಾರಿಯವರನ್ನು ಕೇಳಿದರೆ, ಅದು ನಮಗೆ ಸಂಬಂಧ ಪಡುವುದಿಲ್ಲ ಎನ್ನುತ್ತಾರೆ. ಆಸ್ತಿ ವಕ್ಫ್ ಬೋರ್ಡ್ ಹೆಸರಲ್ಲಿದೆಯಲ್ಲ ಅಂದ ತಕ್ಷಣ, ನಾವು ಆದಷ್ಟು ಬೇಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಅಲ್ಲಿ ಏನೆಲ್ಲಾ ಕಾರ್ಯ ಮಾಡಬೇಕಾಗಿದೆ ಎಂದು ಪರಿಶೀಲಿಸಿ, ಆ ಕಾರ್ಯಗಳಿಗಾಗಿ ಒಂದು ಬಜೆಟ್ ಮಾಡಿ, ರಾಜ್ಯ ವಕ್ಫ್ ಬೋರ್ಡ್ಗೆ ಕಳುಹಿಸಲಾಗುವುದು. ನಂತರ ಮುಂದಿನ ಕಾರ್ಯ ಕೈಗೊಳ್ಳುತ್ತೇವೆ ಎನ್ನುತ್ತಾರೆ.
ನಮ್ಮ ನಾಡಿನಲ್ಲಿನ ಹಳೆಯ ಕಾಲದ ಕುರುಹುಗಳೆಲ್ಲವೂ ನಮ್ಮ ಐತಿಹಾಸಿಕ ಹಿನ್ನೆಲೆಗೆ ಸಾಕ್ಷಿಯಾಗಿವೆ. ಅಂತಹ ಕುರುಹುಗಳನ್ನು ಕಾಪಾಡಿ ರಕ್ಷಿಸಬೇಕೆಂಬುದು ಎಲ್ಲರ ಅಭಿಪ್ರಾಯ. ಹಾಗಾದಾಗ ಮಾತ್ರ ನಮ್ಮ ಇತಿಹಾಸವನ್ನು ಗೌರವಿಸಿದಂತೆ. ಆದ್ದರಿಂದ ಕೂಡಲೆ ಇವುಗಳ ರಕ್ಷಣೆ ಕಡೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಲಿ ಎಂಬುದು ಎಲ್ಲರ ಆಶಯವಾಗಿದೆ.
Published On - 5:20 pm, Tue, 19 January 21