Army Day 2021 | ‘ನೆಲದ ಋಣಕ್ಕೆ ಗಂಡು-ಹೆಣ್ಣು ಭೇದವುಂಟೇ’-ಇಲ್ಲಿದೆ ಗಣರಾಜ್ಯೋತ್ಸವ ಪರೇಡ್ ಮುನ್ನಡೆಸಿದ ಕ್ಯಾಪ್ಟನ್ ತಾನಿಯಾ ಶೇರ್ಗಿಲ್ ಕಥೆ

‘ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ಪುರುಷರಿಗೆ ಇರುವಂತೆ ಮಹಿಳೆಯರಿಗೂ ಇದೆ. ಇದರಲ್ಲಿ ಭೇದಭಾವ ಸಲ್ಲದು’ ಎಂದು ಸುಪ್ರೀಂಕೋರ್ಟ್​ ಸರ್ಕಾರಕ್ಕೆ ಬುದ್ಧಿ ಹೇಳಿದ ನಂತರ ಬಂದಿರುವ ಮೊದಲ ಭೂಸೇನಾ ದಿನ ಇದು. ಇದೇ ಕಾರಣಕ್ಕೆ ಈ ದಿನಕ್ಕೆ ವಿಶೇಷ ಮಹತ್ವ ಬಂದಿದೆ.

  • TV9 Web Team
  • Published On - 19:42 PM, 15 Jan 2021
Army Day 2021 | ‘ನೆಲದ ಋಣಕ್ಕೆ ಗಂಡು-ಹೆಣ್ಣು ಭೇದವುಂಟೇ’-ಇಲ್ಲಿದೆ ಗಣರಾಜ್ಯೋತ್ಸವ ಪರೇಡ್ ಮುನ್ನಡೆಸಿದ ಕ್ಯಾಪ್ಟನ್ ತಾನಿಯಾ ಶೇರ್ಗಿಲ್ ಕಥೆ
ಕಳೆದ ವರ್ಷದ ಗಣರಾಜ್ಯೋತ್ಸವ ಪೆರೇಡ್ ಮುಂದುವರಿಸಿದ ಕ್ಯಾಪ್ಟನ್ ತಾನಿಯಾ ಶೆರ್ಗಿಲ್

ಇಂದು (ಜ.15) ಭೂಸೇನಾ ದಿನ. ದೇಶದ ಸಮಗ್ರತೆ ಮತ್ತು ಏಕತೆಯನ್ನು ಕಾಪಾಡುವಲ್ಲಿ ಭೂಸೇನೆಯ ಕೊಡುಗೆಯನ್ನು, ಮೊದಲ ಜನರಲ್ ಕಾರಿಯಪ್ಪ ಅವರ ಬುದ್ಧಿವಂತಿಕೆ, ತ್ಯಾಗವನ್ನು ಸ್ಮರಿಸುವ ದಿನ. ಭೂಸೇನೆಯೂ ಸೇರಿದಂತೆ ದೇಶದ ಮೂರೂ ಸಶಸ್ತ್ರಪಡೆಗಳಲ್ಲಿ ಪುರುಷರಂತೆ ಮಹಿಳೆಯರೂ ಬಹುಕಾಲದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಮುಂಚೂಣಿ ನೆಲೆಗಳಲ್ಲಿ ಕಾದಾಟಕ್ಕೆ ನಿಯೋಜನೆಗೊಳ್ಳುವ, ಸಾಮರ್ಥ್ಯವಿದ್ದರೂ ಕಮಾಂಡಿಂಗ್ ಆಫೀಸರ್​ಗಳಾಗುವ ಅವಕಾಶವನ್ನು ಮಹಿಳೆಯರಿಗೆ ಬಹುಕಾಲದಿಂದ ನಿರಾಕರಿಸುತ್ತಲೇ ಬರಲಾಗಿತ್ತು. ಆದರೆ ಕಳೆದ ವರ್ಷ ಹೆಚ್ಚೂಕಡಿಮೆ ಇದೇ ಸಮಯದಲ್ಲಿ (ಫೆ.17) ಸುಪ್ರೀಂಕೋರ್ಟ್​ ಈ ವಿಚಾರದಲ್ಲಿ ಸ್ಪಷ್ಟ ನಿಲುವು ತಳೆಯಿತು.

‘ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶ ಪುರುಷರಿಗೆ ಇರುವಂತೆ ಮಹಿಳೆಯರಿಗೂ ಇದೆ. ಇದರಲ್ಲಿ ಭೇದಭಾವ ಸಲ್ಲದು’ ಎಂದು ಸುಪ್ರೀಂಕೋರ್ಟ್​ ಸರ್ಕಾರಕ್ಕೆ ಬುದ್ಧಿ ಹೇಳಿದ ನಂತರ ಬಂದಿರುವ ಮೊದಲ ಭೂಸೇನಾ ದಿನ ಇದು. ಇದೇ ಕಾರಣಕ್ಕೆ ಈ ದಿನಕ್ಕೆ ವಿಶೇಷ ಮಹತ್ವ ಬಂದಿದೆ.

ಸುಪ್ರೀಂಕೋರ್ಟ್​ ಹೀಗೆ ಹೇಳುವ ಮೊದಲು ಸರ್ಕಾರದ ಪರ ನ್ಯಾಯಾಲಯದಲ್ಲಿ ವಾದಿಸಿದ್ದವರು ‘ಯುದ್ಧಭೂಮಿಯ ಮುಂಚೂಣಿ ನೆಲೆಗಳಲ್ಲಿ ಕಾದಾಡುವ ದಾಳಿ ರೆಜಿಮೆಂಟ್​ಗಳ ಸೈನಿಕರು ಮಹಿಳೆಯರನ್ನು ಆದೇಶ ನೀಡುವ ಅಧಿಕಾರಿಗಳನ್ನಾಗಿ (ಕಮಾಂಡಿಂಗ್ ಆಫೀಸರ್) ಒಪ್ಪಿಕೊಳ್ಳುವುದಿಲ್ಲ. ಅವರ ಮನಃಸ್ಥಿತಿ ಬದಲಾಗದೆ ಮಹಿಳೆಯರನ್ನು ಕಮಾಂಡಿಂಗ್ ಆಫೀಸರ್ ಮಾಡಲು ಆಗದು’ ಎಂದು ವಾದಿಸಿದ್ದರು. ಸರ್ಕಾರದ ವಾದವನ್ನು ಸುಪ್ರೀಂಕೋರ್ಟ್​ ಸಾರಾಸಗಟಾಗಿ ತಳ್ಳಿಹಾಕಿತ್ತು. ಮಾತ್ರವಲ್ಲ, ‘ಜಗತ್ತು ಸಾಕಷ್ಟು ಬದಲಾಗಿದೆ. ನಮ್ಮ ಸೈನಿಕರ ಮನಃಸ್ಥಿಯೂ ಅದಕ್ಕೆ ಅನುಗುಣವಾಗಿರಬೇಕು ಎಂದು ಮಹಿಳೆಯರಿಂದ ಕಮಾಂಡ್ ಪಡೆಯಲು ಸೈನಿಕರನ್ನು ಮಾನಸಿಕವಾಗಿ ಸನ್ನದ್ಧಗೊಳಿಸಿ. ಅದು ಅವಮಾನವಲ್ಲ ಎಂದು ಮನದಟ್ಟು ಮಾಡಿಸಿ’ ಎಂದು ಸರ್ಕಾರದ ಕಿವಿಹಿಂಡಿತ್ತು.

ಹೀಗಾಗಿಯೇ ನಮಗೆ ಕಳೆದ ವರ್ಷ ಗಣರಾಜ್ಯೋತ್ಸವ ಪರೇಡ್ ಮುನ್ನಡೆಸಿ ಇತಿಹಾಸ ಬರೆದ ಸೇನಾಧಿಕಾರಿ ಕ್ಯಾಪ್ಟನ್​ ತಾನಿಯಾ ಹೆಚ್ಚು ಮುಖ್ಯ ಎನ್ನಿಸುವುದು. ಅವರಿಗೆ ಪರೇಡ್​ ನಡೆಸಲು ಅವಕಾಶ ನೀಡುವ ಮೂಲಕ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು ಪುರುಷರಿಗೆ ಸರಿಸಮನಾಗಿ ಕೆಲಸ ಮಾಡಬಲ್ಲರು, ಸಶಸ್ತ್ರಪಡೆಗಳು ಮತ್ತು ರಕ್ಷಣಾ ಇಲಾಖೆ ಸ್ತ್ರೀ-ಪುರುಷರ ಪ್ರತಿಭೆಯನ್ನು ಸಮಾನವಾಗಿ ಗೌರವಿಸುತ್ತದೆ ಎಂಬ ಸಂದೇಶವನ್ನು ಸರ್ಕಾರ ದೇಶಕ್ಕೆ ರವಾನಿಸಿತ್ತು. ಅಧಿಕಾರಿಗಳ ತೀವ್ರ ಕೊರತೆ ಎದುರಿಸುತ್ತಿರುವ ಭೂಸೇನೆ ಹೊಸ ಚಿಂತನೆಗೆ ತೆಗೆದುಕೊಳ್ಳಲು ಸಿದ್ಧವಿದೆ ಎಂದು ಸಾರಿಹೇಳಿತು.

ಇದೀಗ ಭೂಸೇನಾ ಮುಖ್ಯಸ್ಥ ಎಂ.ಎಂ.ನರವಾಣೆ ಅವರು ಸೇನೆಯ ವಾಯುದಳದಲ್ಲಿ ಮಹಿಳಾ ಪೈಲಟ್​ಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಈಚೆಗಷ್ಟೇ ನೌಕಾಪಡೆಯೂ ಯುದ್ಧನೌಕೆಯಲ್ಲಿ ಕಾರ್ಯನಿರ್ವಹಿಸುವ ಹೆಲಿಕಾಪ್ಟರ್​ಗಳಿಗೆ ಮಹಿಳಾ ಪೈಲಟ್ ನಿಯೋಜನೆಗೆ ಸಮ್ಮತಿಸಿತ್ತು, ವಾಯುಪಡೆಯು ಯುದ್ಧವಿಮಾನಗಳಲ್ಲಿ ಮಹಿಳಾ ಪೈಲಟ್​ಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಲು ಒಪ್ಪಿಕೊಂಡಿತ್ತು. ಮೂರೂ ಸಶಸ್ತ್ರಪಡೆಗಳಲ್ಲಿ ಆಗಿರುವ ಆಲೋಚನಾ ಪಲ್ಲಟಗಳನ್ನು ಇದು ಸೂಚಿಸುತ್ತದೆ.

ಈ ಎಲ್ಲ ಬೆಳವಣಿಗೆಗಳ ಮುಖ ಎನಿಸಿದವರು ತಾನಿಯಾ ಶೆರ್ಗಿಲ್. ಮಹಿಳೆಯರ ಬಗ್ಗೆ ಸಶಸ್ತ್ರ ಪಡೆಗಳ ಚಿಂತನೆಗಳು ಹೇಗೆ ಬದಲಾಗಿವೆ ಎಂಬುದನ್ನು ತನ್ನ ನಡವಳಿಕೆ-ಮಾತುಗಳಿಂದ ಸಾರಿಹೇಳಿ, ದೇಶದ ಲಕ್ಷಾಂತರ ಯುವತಿಯರಲ್ಲಿ ಆತ್ಮವಿಶ್ವಾಸದ ದೀಪ ಬೆಳಗಿದವರು ತಾನಿಯಾ. ಅವರು ನಡೆದುಬಂದ ಹಾದಿಯ ಇಣುಕುನೋಟ ಇಲ್ಲಿದೆ.

ಕ್ಯಾಪ್ಟನ್ ತಾನಿಯಾ ಮಿಲಿಟರಿ ಡ್ರಿಲ್

ಯಾರು ಕ್ಯಾಪ್ಟನ್ ತಾನಿಯಾ?
ನಾಗ್ಪುರ್ ವಿಶ್ವವಿದ್ಯಾಲಯದಲ್ಲಿ ಇಲೆಕ್ಟ್ರಾನಿಕ್ಸ್ ಮತ್ತು ಟೆಲಿ ಕಮ್ಯುನಿಕೇಷನ್ಸ್ ವಿಷಯದಲ್ಲಿ ಬಿ.ಟೆಕ್ ಪದವಿ ಪಡೆದಿರುವ ತಾನಿಯಾ 2017ರಲ್ಲಿ ಸೇನಾಪಡೆಗೆ ಸೇರಿದ್ದರು. 2020 ಗಣರಾಜ್ಯೋತ್ಸವದ ಪರೇಡ್ ಅನ್ನು ತಾನಿಯಾ ಮುನ್ನಡೆಸಿದ್ದರು.

‘ನಾನು ಅಂತಿಮ ವರ್ಷ ಪದವಿಯಲ್ಲಿದ್ದಾಗ ಸೇನೆಗೆ ಸೇರಲು ಅರ್ಜಿ ಸಲ್ಲಿಸಿದ್ದು, ಆಯ್ಕೆಯಾದೆ. ಚೆನ್ನೈನಲ್ಲಿ ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದ ನಂತರ 2017ರಲ್ಲಿ ಕಾರ್ಪ್ಸ್ ಆಫ್ ಸಿಗ್ನಲ್ಸ್​​ನಲ್ಲಿ (Corps of Signals) ನಿಯೋಜಿಸಲಾಯಿತು. ಪರೇಡ್ ಮುನ್ನಡೆಸಲು ಆಯ್ಕೆ ಮಾಡುವ ಹೊತ್ತಲ್ಲಿ, ಒಂದು ವೇಳೆ ನಾನು ಆಯ್ಕೆಯಾದರೆ ಪರೇಡ್​ಗೆ ನೇತೃತ್ವ ನೀಡಿದ ಮೊದಲ ಮಹಿಳೆ ನಾನಾಗುತ್ತೇನೆ ಎಂದು ನನಗೆ ಗೊತ್ತಿತ್ತು. ನಾನು ತುಂಬಾ ಚಿಕ್ಕವಳಿದ್ದಾಗ ನನ್ನ ಅಪ್ಪ ಇದೇ ಯುನಿಫಾರಂ ಧರಿಸಿದ್ದು ನಾನು ನೋಡಿದ್ದೆ. ಒಬ್ಬ ಸೇನಾಧಿಕಾರಿ ಆಗಬೇಕಾದರೆ ನೀವು ಎಲ್ಲ ರೀತಿಯಲ್ಲಿಯೂ ಉತ್ತಮರಾಗಿರಬೇಕು ಎಂದು ನಾನು ಅರಿತುಕೊಂಡಿದ್ದೆ’ ಎಂದು ಟೈಮ್ಸ್ ನೌ ಜತೆ ಮಾತನಾಡಿದ್ದ ತಾನಿಯಾ ಹೇಳಿದ್ದರು.

ಹೋಶಿಯಾರ್​ಪುರ್​ನಲ್ಲಿ ಜನಿಸಿದ ತಾನಿಯಾ ಶೆರ್ಗಿಲ್ ಮುಂಬೈನಲ್ಲಿಯೇ ಹೆಚ್ಚು ಕಾಲ ವಾಸವಾಗಿದ್ದರು. ಅಪ್ಪ ನಿವೃತ್ತರಾದ ನಂತರ 10 ವರ್ಷಗಳ ಹಿಂದೆಯೇ ಅವರು ಪಂಜಾಬ್​ನ ಹೋಶಿಯಾರ್​ಪುರ್ ಜಿಲ್ಲೆಯ ಗರ್ಹ್ ದಿವಲಾದಲ್ಲಿ ನೆಲೆಸಿದ್ದಾರೆ. ತಾನಿಯಾ ಅವರ ಅಪ್ಪ 101 ಮೀಡಿಯಂ ರೆಜಿಮೆಂಟ್- ಫಿರಂಗಿದಳದಲ್ಲಿದ್ದರು. ಈಕೆಯ ತಾತ 14ನೇ ಸಶಸ್ತ್ರ ರೆಜಿಮೆಂಟ್​ನ ಅಶ್ವದಳದಲ್ಲಿದ್ದರು. ಮತ್ತಜ್ಜ ಸಿಖ್ ರೆಜಿಮೆಂಟ್​ನಲ್ಲಿದ್ದರು. ಅಪ್ಪ 6 ಅಡಿ ಎತ್ತರವಿದ್ದಾರೆ, ಮಗಳಿಗೂ ಅದೇ ಮೈಕಟ್ಟು-ಸ್ವಭಾವ ಒದಗಿಬಂದಿದೆ. ತಾನಿಯಾ 5 ಅಡಿ 10 ಇಂಚು ಎತ್ತರವಿದ್ದಾರೆ.

ಟಿಸಿಎಸ್​ನಲ್ಲಿ ಕೆಲಸ ಸಿಕ್ಕಿತ್ತು
ಪದವಿ ಮುಗಿದ ಕೂಡಲೇ ಟಿಸಿಎಸ್ ಕಂಪನಿಯಲ್ಲಿ ಕೆಲಸವೂ ಸಿಕ್ಕಿತ್ತು. ಆದರೆ ನನಗೆ ಭಾರತೀಯ ಸೇನೆ ಸೇರಬೇಕು ಎಂದಿತ್ತು. ಹಾಗಾಗಿ ನಾನು ಟಿಸಿಎಸ್ ಕೆಲಸದ ಅವಕಾಶವನ್ನು ಬಿಟ್ಟು ಸೇನೆ ಸೇರಿದೆ. ಇಲ್ಲಿನ ತರಬೇತಿ ಅಷ್ಟು ಸುಲಭವಲ್ಲ. ಅಕಾಡೆಮಿಯಲ್ಲಿ ಒಂದು ವರ್ಷ ಕಲಿತದ್ದು ಜೀವನಪೂರ್ತಿ ನೆನಪಿಟ್ಟುಕೊಳ್ಳಬೇಕಾಗುತ್ತದೆ. ತರಬೇತಿಯಲ್ಲಿ ನಮ್ಮ ಜತೆ ಇರುವವರೊಂದಿಗೆ ನಾವು ಗಟ್ಟಿಯಾದ ಸಂಬಂಧ ಹೊಂದಿರುತ್ತೇವೆ. ನಾನು ತರಬೇತಿ ಮುಗಿಸಿ ಹೊರಬಂದಾಗ ನಮ್ಮ ಅಪ್ಪ ಭಾವುಕರಾಗಿದ್ದರು. ಅಪ್ಪನೂ ಚೆನ್ನೈಯ ಅಕಾಡೆಮಿಯಿಂದಲೇ ತರಬೇತಿ ಪಡೆದಿದ್ದು. ನಮ್ಮ ಪಾಸಿಂಗ್ ಔಟ್ ಕಾರ್ಯಕ್ರಮದ ವೇಳೆ ಅವರು ಎಷ್ಟು ಭಾವುಕರಾಗಿದ್ದರು ಎಂದರೆ ಅದನ್ನೇ ಮತ್ತೆಮತ್ತೆ ನೋಡುತ್ತಿರುತ್ತಾರೆ ಎಂದು ನೆನಪಿಸಿಕೊಳ್ಳುತ್ತಾರೆ ಅವರು.

ಸ್ಟಾರ್ ಗಳಿಸುವುದೇ ದೊಡ್ಡ ಸಂಗತಿ
ನನಗೆ ಸ್ಟಾರ್​ಗಳಿಸುವುದು ದೊಡ್ಡ ಸಂಗತಿ. ನಾನು ಸೇನೆ ಸೇರಬೇಕೆಂಬ ಕನಸು ಹೊತ್ತವಳು. ಸೇನಾ ಸಮವಸ್ತ್ರ ಧರಿಸಬೇಕು ಎಂಬ ಆಸೆ ಈಡೇರಿದ್ದು 11 ಮಾರ್ಚ್ 2017ರಲ್ಲಿ. ಗಣರಾಜ್ಯೋತ್ಸವದಂದು ಪರೇಡ್ ಮುನ್ನಡೆಸಲು ನಾವು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿರುತ್ತೇವೆ. ಇಡೀ ದೇಶವೇ ಈ ಮಹಿಳಾ ಸೇನಾಧಿಕಾರಿಯನ್ನು ಕೊಂಡಾಡುತ್ತಿದೆ. ಆಕೆಯ ಹೆಗಲ ಮೇಲೆ ಜವಾಬ್ದಾರಿಗಳೂ ಇವೆ. ಏನೇ ಸಾಧನೆ ಮಾಡಿದರೂ  ಕೊನೆಗೆ ಉಳಿಯುವುದು ನಾಮ್ (ಹೆಸರು), ನಮಕ್ (ನೆಲದ ಋಣ) ಮತ್ತು ನಿಶಾನ್ (ಗುರುತು) ಅಂತಾರೆ ತಾನಿಯಾ.

ಈ ನಾಮ್, ನಮಕ್ ಮತ್ತು ನಿಶಾನ್​ಗೆ ಗಂಡು-ಹೆಣ್ಣು ಎಂಬ ಭೇದವುಂಟೇ? ತಾನಿಯಾ ಬಗ್ಗೆ ತಿಳಿದವರು ಇದೆ ಎಂದು ಖಂಡಿತ ಉತ್ತರಿಸಲಾರರು.

ಸ್ಯಾನ್​ ಫ್ರಾನ್ಸಿಸ್ಕೋ ಟು ಬೆಂಗಳೂರು; 17 ಗಂಟೆಗಳ ನಾನ್​ಸ್ಟಾಪ್ ವಿಮಾನಯಾನದ ನೇತೃತ್ವ ವಹಿಸಿದ ಏರ್ ಇಂಡಿಯಾ ಮಹಿಳಾ ಪೈಲಟ್ ತಂಡ