Covid Diary : ಕವಲಕ್ಕಿ ಮೇಲ್ ; ಗುರುಮಲೆಯ ಗುರೂಜಿಯ ‘ಮಶಕ ಮಾರಣ ಮಂತ್ರ’
Conflicts : ನನ್ನದು ಅವರದು ಪರೋಕ್ಷ ವಿಲೋಮ ಸಂಬಂಧ. ನಾನೇನು ಮಾಡಿ, ಮಾಡಿ ಎನ್ನುವೆನೋ ಅವರು ಅದನ್ನು ಮಾಡಬೇಡಿ, ಬೇಡಿ ಎನ್ನುವರು. ಅವರೇನು ಮಾಡಿ ಎಂದು ಸೂಚಿಸುವರೋ, ‘ಅದು ಅಪಾಯ, ಕೂಡದು’ ಎನ್ನುವವಳು ನಾನು. ಎಷ್ಟೋಸಲ ನಮ್ಮಿಬ್ಬರ ನಡುವೆ ಸಿಲುಕಿ ಜನ ದ್ವಂದ್ವಗೊಂಡಿದ್ದಾರೆ. ಕೊನೆಗೆ ತಮಗೆ ಯಾವುದು ಸಾಧ್ಯವೋ, ಯಾವುದು ಆಪ್ತವೋ ಅದನ್ನಷ್ಟೇ ಮಾಡಿದ್ದಾರೆ.
ಲಾಕ್‌ಡೌನ್ ಎನ್ನುವುದು ದಿನಚರಿಯನ್ನೇ ಬದಲಿಸಿದಾಗ ಗುಳ್ಳೆಪೀಪಿಗೆ ಸೂಜಿ ಚುಚ್ಚಿದರೆ ಹೇಗೋ ಹಾಗೆ ಅವರ ತಲೆ ಕೆಟ್ಟು ಹೋಯಿತಂತೆ. ಕೈಕಾಲಿಗೆ ಬೀಳುವವರಿಲ್ಲ, ಆಶೀರ್ವದಿಸಲು ಜನರಿಲ್ಲ. ವಿದೇಶದ ಪ್ರಜೆಗಳೂ ಸೇರಿ ಒಬ್ಬರಾದ ಮೇಲೊಬ್ಬರು, ಎಲ್ಲ ಅಂದರೆ ಎಲ್ಲರೂ ಆಶ್ರಮವನ್ನು ತೊರೆದು ಹೋದರು. ಆದರೆ ಆ ವಿಶಾಲ ಸಮುಚ್ಚಯವನ್ನು ಬಿಟ್ಟು ಹೋಗಲು ಅವರಿಗೆ ಮನಸ್ಸಿಲ್ಲ. ಸಂಸಾರವನ್ನು ಮೂಲಮನೆಯಲ್ಲಿ ಬಿಟ್ಟು ತಾವಿಲ್ಲೇ ಒಬ್ಬ ಸಹಾಯಕನೊಂದಿಗೆ ಇದ್ದಾರೆ. ಅವ ಬೇಡಬೇಡವೆಂದರೂ ಮೊನ್ನೆಯೀಚೆ ಬೆಂಗಳೂರಿಗೆ ಹೋಗಿಬಂದರು. ಅಲ್ಲಿಂದ ಬಂದದ್ದೇ ಏಳಲಾಗದಷ್ಟು ಜ್ವರ ಬಂದು ಮಲಗಿದರು. ಇದ್ದಬದ್ದ ಗುಳಿಗೆ ನುಂಗಿದರು. ಏನೇನೋ ಕಷಾಯ ಕುಡಿದರು. ಶ್ವಾಸ ಹೆಚ್ಚಾಗಿ ಏಳಲಾರದಷ್ಟು ನಿತ್ರಾಣವಾದಾಗ ಆಪ್ತ ಸಹಾಯಕ ಗಾಬರಿಯಾದ. ಆಸ್ಪತ್ರೆಗೆ ಹೋಗೋಣವೆಂದರೆ ಅವರು ಒಪ್ಪುತ್ತಿಲ್ಲ. ಮಾಸ್ಕ್ ಹಾಕಲು ಅವನಿಗೂ ಬಿಡುತ್ತಿಲ್ಲ. ಪ್ರಾಣಭಯ ಒಂದು ಕಡೆ; ಅವರಿಗೇನಾದರೂ ಆದರೆ ತನ್ನ ಮೇಲೆ ಬಂದೀತೆನ್ನುವುದು ಇನ್ನೊಂದು ಕಡೆ ಅವನನ್ನು ಆತಂಕಗೊಳಿಸಿದವು. ಕೂಡಲೇ ಕೊರೊನಾ ವಾರಿಯರ್ಸ್‌ಗೆ, ಟಿವಿ-7ಗೆ ಫೋನು ಮಾಡಿ ಎಲ್ಲರನ್ನು ಕರೆಸಿಬಿಟ್ಟ.
*
‘ಗುರುಮಲೆಯ ಗುರೂಜಿಗೆ ಕೊರೊನಾ ದೃಢ, ಆರೋಗ್ಯಸ್ಥಿತಿ ಗಂಭೀರ’
ಅವತ್ತು ವಾಟ್ಸಪ್ಪಿನಲ್ಲಿ, ಟಿವಿ ಚಾನೆಲ್ಲುಗಳ ವಾರ್ತೆಯಲ್ಲಿ ಹರಿದಾಡಿದ ಸುದ್ದಿ ಕೇಳಿ ಆ ಕಾಡು, ಕಣಿವೆಯ ಜನ ದಿಗ್ಭ್ರಮೆಗೊಂಡರು. ಇದು ಹೇಗಾದರೂ ಸಾಧ್ಯ?
ಕೊರೊನಾ ಎಂಬ ಕಾಯಿಲೆಯೇ ಇಲ್ಲ, ತನಗೆ ಬರುವುದೇ ಇಲ್ಲ ಎಂದು ಏನು ಮಾಡಿದರೂ ಮಾಸ್ಕ್ ಹಾಕದ ಗುರೂಜಿ; ಕೊರೊನಾ ಆದವರು ತಮ್ಮ ಬಳಿ ಬಂದರೆ ಅವರನ್ನಪ್ಪಿ ‘ಗುಣ ಆಗ್ತದೆ, ಹೆದರಬೇಡ’ ಎಂದು ಹರಸಿ ಕಳಿಸಿದ ಗುರೂಜಿ; ತಮ್ಮ ಹತ್ತಿರದ ಬಂಧುಗಳು, ಸಂಸಾರವನ್ನು ಹಚ್ಚಿಕೊಳ್ಳದೇ ಸದಾ ಭಕ್ತಾದಿಗಳ ಕಷ್ಟ ಆಲಿಸುತ್ತಾ, ಮೈಮೇಲೆ ಬರುವ ಭೈರವೇಶ್ವರನನ್ನು ಪರಿಹಾರ ಕೇಳಿ ದೇವರಿಗೆ ಸೇತುವೆಯಾಗಿರುವ ಗುರೂಜಿ ಹೇಗೆ ತಾನೇ ಕೋವಿಡ್ ಪಾಸಿಟಿವ್ ಆಗಲು ಸಾಧ್ಯ? ಅವರು ಸಾಕ್ಷಾತ್ ಶಿವನಂದಿಯ ಅವತಾರವಂತೆ. ಹಾಗಂತ ಕಳೆದ ಬಾರಿ ಗುರುಮಲೆಗೆ ಬಂದಿದ್ದ ಮುಖ್ಯಮಂತ್ರಿಗಳೇ ಹೇಳುತ್ತ ಅವರ ಕಾಲಿಗೆ ಬಿದ್ದಿದ್ದರು. ಪೊಲೀಸರು, ವಕೀಲರು ದರ್ಶನಕ್ಕೆ ಕ್ಯೂನಲ್ಲಿ ನಿಂತು ಕಾಯುವರು. ಅವರ ಮೈಮೇಲೆ ಇತ್ತೀಚೆಗೆ ಆಂಜನೇಯನೇ ಬರತೊಡಗಿದ್ದು, ಥೇಟ್ ಮಂಗಗಳ ತರಹ ಕುಂಚಟ್ ಹಾರಿ ಹಲ್ಕಿರಿದು ಕೈಕಾಲು ಬಡಿಯುವ ಘಳಿಗೆಯನ್ನು ಲೈವ್ ಸುದ್ದಿಯಾಗಿ ಪ್ರಸಾರ ಮಾಡಲು ಟಿವಿ ಚಾನೆಲ್ಲಿನವರು ಕಾಯುವರು. ಊರಿಗೂರಿಗೇ ಚಿಕುನ್‌ಗುನ್ಯ ಬಂದಾಗ ‘ಮಶಕ ಮಾರಣ ಮಂತ್ರ’ ಪಠಿಸಲು ಹೇಳಿಕೊಟ್ಟು ಕಾಯಿಸಿಪ್ಪೆಯ ಯಜ್ಞ ಮಾಡಿ ಹೊಗೆ ಹಾಕಿ ಸೊಳ್ಳೆ ಹತ್ತಿರ ಬರದಂತೆ ಓಡಿಸಿದ್ದ ಗುರೂಜಿ ಈಗ ‘ಕೋವಿಡ್ ಮಾರಣ ಮಂತ್ರ’ ಸಿದ್ಧಪಡಿಸುವೆನೆಂದು ಹೇಳಿದ ವೀಡಿಯೊ ವೈರಲ್ ಆಗಿತ್ತು. ಕೋವಿಡ್, ಲಾಕ್‌ಡೌನ್ ತಮಗೆ ಸಂಬಂಧಿಸಿದ್ದಲ್ಲ ಎಂಬಂತೆ ಬರಿಮುಖದಲ್ಲಿ ವಿಧಾನಸೌಧಕ್ಕೆ ಹೋಗಿ, ಸಿಎಂ ಕಂಡು, ‘ಮುಂದಿನ ಅಲೆ ಏಳದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ. ಅದಕ್ಕಾಗಿ ಬರಿಯ ಇಂಗ್ಲಿಷ್ ಔಷಧ ನೆಚ್ಚದೆ ಯಜ್ಞಯಾಗ, ಹೋಮಹವನಗಳನ್ನೂ ಸರ್ಕಾರ ಊರು ಕೇರಿಗಳಲ್ಲಿ ನಡೆಸಬೇಕಿದೆ’ ಎಂದು ಹೇಳಿಬಂದಿದ್ದರು. ಸಿಎಂ ಜೊತೆ ಫೋಟೋಗೆ ನಿಂತಾಗ ಸೆಕ್ಯುರಿಟಿಯವರು ದೂರ ದೂರ ಎನ್ನುತ್ತಿದ್ದರೂ, ಮಾಸ್ಕು ಮಾಸ್ಕು ಎನ್ನುತ್ತಿದ್ದರೂ ಅವರ ಕಡೆ ಉರಿಗಣ್ಣಲ್ಲಿ ನೋಡಿ ಸಿಎಂ ಕೈ ತಾಗುವಂತೆ ನಿಂತಿದ್ದು ಟೀವಿಯಲ್ಲಿ ಕಂಡುಬಿಟ್ಟಿತ್ತು.
ಇಂಥ ಗುರೂಜಿಗೆ ಕೊರೊನಾ ಬರುವುದೆಂದರೆ?!
ಕಾಡುಕಣಿವೆಯ ಜನವೆಲ್ಲ ತಾವು ಯಾರನ್ನು ದೇವಮಾನವನೆಂದು ಬಗೆದಿದ್ದರೋ, ಅಲ್ಲಲ್ಲ ಸಾಕ್ಷಾತ್ ದೇವರೇ ಎಂದು ನಂಬಿದ್ದರೋ, ಅವರು ದೇವಮಾನವರಲ್ಲ, ತಮಗಿಂತ ಪುಕ್ಕಲ, ದುರ್ಬಲ ಮನುಷ್ಯ ಎನ್ನುವುದು ಅವರಿಗೆ ಈಗ ವಿಡಿಯೋ ನೋಡಿ ಗೊತ್ತಾಗಿಹೋಯಿತು. ಅವರ ಸಹಾಯಕನಿಂದ ಸಂಗ್ರಹಿಸಿದ ಸುದ್ದಿಯನ್ನು ವರದಿಗಾರ್ತಿ ಎಳೆಎಳೆಯಾಗಿ ಬಿಡಿಸಿ ಹೇಳುತ್ತಿದ್ದಾಳೆ.
ಲಾಕ್‌ಡೌನ್ ಎನ್ನುವುದು ದಿನಚರಿಯನ್ನೇ ಬದಲಿಸಿದಾಗ ಗುಳ್ಳೆಪೀಪಿಗೆ ಸೂಜಿ ಚುಚ್ಚಿದರೆ ಹೇಗೋ ಹಾಗೆ ಅವರ ತಲೆ ಕೆಟ್ಟು ಹೋಯಿತಂತೆ. ಕೈಕಾಲಿಗೆ ಬೀಳುವವರಿಲ್ಲ, ಆಶೀರ್ವದಿಸಲು ಜನರಿಲ್ಲ. ವಿದೇಶದ ಪ್ರಜೆಗಳೂ ಸೇರಿ ಒಬ್ಬರಾದ ಮೇಲೊಬ್ಬರು, ಎಲ್ಲ ಅಂದರೆ ಎಲ್ಲರೂ ಆಶ್ರಮವನ್ನು ತೊರೆದು ಹೋದರು. ಆದರೆ ಆ ವಿಶಾಲ ಸಮುಚ್ಚಯವನ್ನು ಬಿಟ್ಟು ಹೋಗಲು ಅವರಿಗೆ ಮನಸ್ಸಿಲ್ಲ. ಸಂಸಾರವನ್ನು ಮೂಲಮನೆಯಲ್ಲಿ ಬಿಟ್ಟು ತಾವಿಲ್ಲೇ ಒಬ್ಬ ಸಹಾಯಕನೊಂದಿಗೆ ಇದ್ದಾರೆ. ಅವ ಬೇಡಬೇಡವೆಂದರೂ ಮೊನ್ನೆಯೀಚೆ ಬೆಂಗಳೂರಿಗೆ ಹೋಗಿಬಂದರು. ಅಲ್ಲಿಂದ ಬಂದದ್ದೇ ಏಳಲಾಗದಷ್ಟು ಜ್ವರ ಬಂದು ಮಲಗಿದರು. ಇದ್ದಬದ್ದ ಗುಳಿಗೆ ನುಂಗಿದರು. ಏನೇನೋ ಕಷಾಯ ಕುಡಿದರು. ಶ್ವಾಸ ಹೆಚ್ಚಾಗಿ ಏಳಲಾರದಷ್ಟು ನಿತ್ರಾಣವಾದಾಗ ಆಪ್ತ ಸಹಾಯಕ ಗಾಬರಿಯಾದ. ಆಸ್ಪತ್ರೆಗೆ ಹೋಗೋಣವೆಂದರೆ ಅವರು ಒಪ್ಪುತ್ತಿಲ್ಲ. ಮಾಸ್ಕ್ ಹಾಕಲು ಅವನಿಗೂ ಬಿಡುತ್ತಿಲ್ಲ. ಪ್ರಾಣಭಯ ಒಂದು ಕಡೆ; ಅವರಿಗೇನಾದರೂ ಆದರೆ ತನ್ನ ಮೇಲೆ ಬಂದೀತೆನ್ನುವುದು ಇನ್ನೊಂದು ಕಡೆ ಅವನನ್ನು ಆತಂಕಗೊಳಿಸಿದವು. ಕೂಡಲೇ ಕೊರೊನಾ ವಾರಿಯರ್ಸ್‌ಗೆ, ಟಿವಿ-7ಗೆ ಫೋನು ಮಾಡಿ ಎಲ್ಲರನ್ನು ಕರೆಸಿಬಿಟ್ಟ.
ಫೋನಿನ ಕರೆಗೆ ತಕ್ಷಣ ಸ್ಪಂದಿಸಿ ಉಂಯ್ಞ್ ಉಂಯ್ಞ್ ಎಂದು ಸೈರನ್ ಕೂಗಿಸುತ್ತ ಎಲ್ಲ ಬಂದೇಬಿಟ್ಟರು. ಪಿಪಿಇ ಕಿಟ್ ಹಾಕಿಕೊಂಡ ಸಿಬ್ಬಂದಿ ಕೊರೊನಾ ಟೆಸ್ಟ್ ಮಾಡಲು ಹೋದರೆ ಗುರೂಜಿ ಮಲಗಿದಲ್ಲಿಂದಲೇ ಕೈಯಲ್ಲಾಡಿಸಿ ದೊಡ್ಡ ಬಾಯಿ ತೆಗೆದು ಅಳತೊಡಗಿದರು. ‘ಅಯ್ಯಯ್ಯೋ, ಬ್ಯಾಡ ಬ್ಯಾಡ. ನಂಗೆ ಕೊರೊನಾ ಬಂದಿಲ್ಲ. ನನ್ನ ಒಯ್ಯಬ್ಯಾಡ್ರಿ’ ಎಂದು ಕೈಮುಗಿದು ಕೂಗುತ್ತಿದ್ದಾರೆ. ಕೆಮ್ಮುತ್ತ ಮಾತನಾಡುವ, ಏದುಸಿರು ಬಿಡುವ ಅವರ ಮುಖಕ್ಕೆ ಸಿಬ್ಬಂದಿ ಮಾಸ್ಕ್ ಹಾಕಿದರೆ, ‘ಅಯ್ಯಯ್ಯ, ಅಯ್ಯಯ್ಯ, ಉಸ್ರು ಕಟ್ತದೆ, ತೆಗಿರಿ, ತೆಗಿರಿ’ ಎಂದು ಕಿತ್ತು ಹಾಕುತ್ತಿದ್ದಾರೆ. ಎದ್ದು ಕೂರಿಸಿದರೆ ಮತ್ತೆ ಧೊಪ್ಪನೆ ಬೀಳುತ್ತಿದ್ದಾರೆ. ಉಳಿದವರಂತೆ ಬೈದು, ಹೆದರಿಸಿ ಆಂಬುಲೆನ್ಸಿಗೆ ಹತ್ತಿಸಲು ಅವರು ಯಾರು? ದೇವಮಾನವ. ಸಾಕ್ಷಾತ್ ಶಿವನಂದಿಯ ಅವತಾರ. ಬಾಲ ಹನುಮಂತನ ತಂದೆ. ಅವರು ಕೂತದ್ದು ಎದ್ದದ್ದು ಎಲ್ಲ ವೀಡಿಯೋ ರೆಕಾರ್ಡ್ ಆಗುವ ಹಾಗೆ ಇದೂ ಆಯಿತು.
ಜನ ಬಿಟ್ಟ ಬಾಯಿ ಬಿಟ್ಟುಕೊಂಡು ನೋಡುತ್ತಿದ್ದಾರೆ.
ಗುರೂಜಿಯನ್ನು ಶಂಕಿತ ಕೋವಿಡ್ ಚಿಕಿತ್ಸೆಗೆ ಐಸಿಯುಗೆ ಒಯ್ಯುತ್ತಿದ್ದಾರೆ ಎಂದು ಟಿವಿ-7 ನಿರೂಪಕಿ ಹೇಳುತ್ತಿದ್ದಾಳೆ. ಅವರು ರೋದಿಸುತ್ತಿರುವ ದೃಶ್ಯವನ್ನು ಮತ್ತೆಮತ್ತೆ ತೋರಿಸುತ್ತಿದ್ದಾಳೆ. ಅವರ ಆಕ್ಸಿಜನ್ ಸ್ಯಾಚುರೇಷನ್ ಶೇ. 75 ಮುಟ್ಟಿದ್ದರಿಂದ ನಡೆಸಿಕೊಂಡು ಹೋಗುವಂತಿಲ್ಲ. ವೀಲ್‌ಚೇರ್‌ನಲ್ಲಿ ಅವರ ದೇಹ ತೂರುತ್ತಿಲ್ಲ. ಮರಿ ಆನೆಯಂತಿರುವ ಗುರೂಜಿಯನ್ನು ಸ್ಟ್ರೆಚರಿನಲ್ಲಿ ಎತ್ತಿ ಆ್ಯಂಬುಲೆನ್ಸಿಗೆ ಹಾಕಲು ಕೊರೊನಾ ವಾರಿಯರ್ಸ್ ಕಷ್ಟ ಪಡುತ್ತಿರುವುದನ್ನು ತೋರಿಸುತ್ತಿದ್ದಾಳೆ. ಸ್ಟ್ರೆಚರಿನ ಹಿಂದೆ ಹಿಂದೆ ಮೈಕ್ ಹಿಡಿದು ಓಡುತ್ತಿದ್ದಾಳೆ. ಸಿಕ್ಕಾಪಟ್ಟೆ ಬೈಟ್ ಸಿಗುವ ಸುದ್ದಿಯೊಂದನ್ನು ಕವರ್ ಮಾಡಲು ತನಗೆ ಸಿಕ್ಕದ್ದಕ್ಕೆ ಅವಳಿಗೆ ಭಯಂಕರ ಉದ್ವೇಗ.
ಆಶಾ ಕಾರ್ಯಕರ್ತೆಯ ಎದುರು ಮೈಕ್ ಹಿಡಿದು ಕೇಳಿದಳು:
‘ಮೇಡಾಂ, ನೀವೇ ಮೊದಲು ಗುರೂಜಿಯವರನ್ನು ನೋಡಿದ್ದು. ನಿಮ್ಮಂಥ ವಾರಿಯರ್ಸ್ ಇಲ್ಲದಿದ್ರೆ ದೇಶ ಇಷ್ಟೊತ್ಗೆ ಹೊತ್ತುರಿತಿತ್ತು ಮೇಡಾಂ. ಹೇಳಿ, ನೀವ್ ನೋಡ್ದಾಗ ಅವ್ರ ಪರಿಸ್ಥಿತಿ ಹೇಗಿತ್ತು?’
ಆಶಾಗೆ ಪೇಶೆಂಟ್ ಬಗೆಗೆ ಮಾತನಾಡಬಾರದೆಂದು, ಗುರುತು ತಿಳಿಸಬಾರದೆಂದು ಟ್ರೈನಿಂಗಿನಲ್ಲಿ ಹೇಳಿದ್ದು ನೆನಪಾಯಿತು. ಆದರೆ ಇದೇನಾಗುತ್ತಿದೆ ಎಂದು ಗಾಬರಿಯಾಗಿ ತಲೆಯಲ್ಲಾಡಿಸಿದಳು. ಈ ಇವಳು ಉಪಯೋಗವಿಲ್ಲೆಂದು ವರದಿಗಾರ್ತಿ ಸ್ಟ್ರೆಚರನ್ನು ಒಯ್ಯುವವರ ಹಿಂದೋಡಿ ಪ್ರಶ್ನಿಸಿದಳು:
‘ಸರ್ ಸರ್, ಒನ್ನಿಮಿಷ, ಈ ಪೇಶೆಂಟಿನ ಕಂಡಿಷನ್ ಹೇಗಿದೆ ಅಂತ ನಿಮಗನಿಸ್ತಿದೆ? ಅವರು ‘ಕೋವಿಡ್ ಮಾರಣ ಮಂತ್ರ’ ಪಠಿಸಿದವರಾದ್ದರಿಂದ ಗುಣವಾಗುವ ಭರವಸೆ ಹೆಚ್ಚಿದೆಯೆ?’
ಒಂದೂವರೆ ಕ್ವಿಂಟಾಲಿನ ವ್ಯಕ್ತಿಯನ್ನು ಹೊತ್ತೊಯ್ಯುತ್ತ ಬ್ಯಾಲೆನ್ಸ್ ಮಾಡುವವರಿಗೆ ಅವಳ ಮಾತು ಕಿವಿಯ ಮೇಲೇ ಬೀಳಲಿಲ್ಲ. ಯಾರೂ ಮಾತಾಡುವುದಿಲ್ಲವಲ್ಲ? ಕೊನೆಯ ಅವಕಾಶವೆಂದು ಗಾಡಿ ಚಾಲೂ ಮಾಡಿ, ಬ್ರೇಕ್ ಮೇಲೆ ಕಾಲಿಟ್ಟು ಕೂತ ಡ್ರೈವರನ ಬಳಿ ಓಡಿದಳು.
‘ಅಣ್ಣಾ, ನೀವು ಇದುವರೆಗೆ ಹೀಗೆ ಎಷ್ಟು ಜನರನ್ನು ಸಾಗ್ಸಿದೀರಿ? ಭಾರದ ಪೇಶೆಂಟನ್ನು ಸಾಗಿಸುವುದು, ಹಗುರವಿರುವ ಪೇಶೆಂಟನ್ನು ಸಾಗಿಸುವುದು ಒಂದೇ ಎಕ್ಸ್‌ಪೀರಿಯೆನ್ಸ್ ಕೊಡುತ್ತಾ? ವಿದೇಶಗಳಿಂದೆಲ್ಲ ಬರುವ ಭಕ್ತರ ಆರಾಧ್ಯದೈವ ಗುರೂಜಿಯನ್ನು ಕರೆದೊಯ್ಯುತ್ತಿರುವ ಆಂಬುಲೆನ್ಸಿನಲ್ಲಿದೀರಿ. ಪ್ರಪಂಚಾನೇ ನಿಮ್ಮನ್ನ ನೋಡ್ತಿದೆ. ಹೇಳಿ, ಈಗ್ಯಾವ ಫೀಲ್ ಆಗ್ತಿದೆ?’
ದೂರದೂರಿನ ಅವ ಮನೆಯ ಮುಖ ಕಾಣದೇ ಕೋವಿಡ್ ಕೋವಿಡ್ ಎಂದು ಇಲ್ಲೇ ಇದ್ದು ಬೇಸತ್ತಿದ್ದ.
‘ಮೇಡಂ, ಮೊದ್ಲು ಮಾಸ್ಕ್ ಮೇಲೆ ಮಾಡ್ಕಳಿ, ಸರೀ ಹಾಕ್ಕಳಿ. ನಾವು ಡ್ರೈವರ‍್ಸು. ನಮಿಗೆ ಆಂಬುಲೆನ್ಸಲ್ಲಿ ಯಾರ್ ಹತ್ತಿದ್ರೂ ಒಂದೇ. ಬಸುರಿ ಬಾಣಂತಿ ಆಗ್ಲಿ, ರೋಗಿ ಆಗ್ಲಿ, ಡೆಡ್‌ಬಾಡಿನೇ ಆಗ್ಲಿ, ನಂ ಕರ್ತವ್ಯ ಬೇಗ ಗುರಿ ಮುಟ್ಟಿಸೋದು ಅಷ್ಟೆ. ಈಗ್ ನೀವ್ ಸ್ವಲ್ಪ ಆಕಡೆ ಓಯ್ತಿರಾ? ಗಾಡಿ ಟರ್ನ್ ಮಾಡ್ಕ್ಯಬೇಕು…’
ಗುರೂಜಿಯ ಕಾಯ ಒಳಬಂದಿದ್ದೇ ತಾನೇನು ವಿಮಾನವೋ ಎಂಬಂತೆ ಆಂಬುಲೆನ್ಸ್ ನೆತ್ತಿಮೇಲೆ ಕೆಂಪು ಲೈಟು ತಿರುಗಿಸುತ್ತ ಊಂಯ್ಞ್ ಎಂದು ಉದ್ದನೆಯ ಒಂದು ಶಿಳ್ಳು ಹೊಡೆದು ನಾಗಾಲೋಟ ಹೊಡೆಯಿತು. ಗುರೂಜಿ ಜೊತೆಗೆ ಅವರ ಸಹಾಯಕನೂ ಹೋದಮೇಲೆ ಅಲ್ಲಿ ಯಾರೂ ಉಳಿಯಲಿಲ್ಲ. ದೂರದಲ್ಲಿ ಕಂಪೌಂಡ್ ಏರಿ ಇಣುಕುವ ಒಕ್ಕಲೆದ್ದ ಬಡವರು ಬಿಟ್ಟರೆ ಬೇರೆ ಯಾರೂ ಇಲ್ಲ.
ನಿಂತಲ್ಲೇ ಒಂದು ಸುತ್ತು ಹೊಡೆದು ನಿರ್ಜನ ಆಶ್ರಮ, ಧೂಳು ಹಿಡಿದ ಪ್ರಾರ್ಥನಾ ವೇದಿಕೆ, ಗುಡಿಸದೆ ಎಲೆಯುದುರಿ ಕಾಡಿನ ನೆಲದಂತೆ ಕಾಣುವ ವಿಶಾಲ ಪ್ರಾಂಗಣ, ತುಕ್ಕು ಹಿಡಿದ ಗೇಟು, ಗಾಳಿಗೆ ಧಡಧಡ ಹೊಡೆದುಕೊಳ್ಳುತ್ತಿರುವ ಹನ್ನೊಂದನೆಯ ಅಂತಸ್ತಿನ ಗುರೂಜಿ ಕೋಣೆಯ ಕಿಟಕಿ ಬಾಗಿಲುಗಳು, ನಾಚಿಕೆ ಮುಳ್ಳು ಕಳೆ ಗಿಡಗಳು ಬೆಳೆದ ಗುಲಾಬಿ ತೋಟ ಇವೆಲ್ಲವನ್ನು ಸೆರೆ ಹಿಡಿದು, ‘ನೋಡಿ ವೀಕ್ಷಕರೇ, ಒಂದು ಕಾಲದಲ್ಲಿ ಸಾವ್ರಾರು ಜನ್ರು ಈಗ ನೋಡೇವು, ಇನ್ನೊಂದು ಚಣಕ್ಕೆ ನೋಡೇವು ಅಂತ ಕಾಯುತ್ತಿದ್ದ ಗುರೂಜಿ ಇಂಥಾ ನಿರ್ಜನ ಪ್ರದೇಶದಲ್ಲಿ ಏಕಾಂಗಿಯಾಗಿದ್ರು. ಕೋವಿಡ್‌ನ ಕರಾಳ ಮುಖ ಹೇಗಿದೆ ನೋಡುದ್ರಾ? ಈಗ ಹೊರಡೋಣ ಬನ್ನಿ ಗುರೂಜಿಯ ಮುಂದಿನ ಪಯಣದ ಜೊತೆಗೆ’ ಎಂದು ಕ್ಯಾಮೆರಾ ತುಂಬಿಕೊಂಡು ಸ್ಕೂಟಿ ಏರಿ ರೊಂಯ್ಞನೆ ಹೊರಟಳು.
‘ಗುರೂಜಿ ಸ್ಟೋರಿ’ ನೋಡುತ್ತಿದ್ದ ವೀಕ್ಷಕರು ತಮ್ಮ ಗುರೂಜಿಯನ್ನೂ ಬಿಡದ ಕೊರೊನಾ ಇನ್ನು ತಮ್ಮನ್ನು ಬಿಟ್ಟೀತೇ ಎಂದು ತಂತಮ್ಮ ಬಟ್ಟೆಬರೆ, ಮಾಸ್ಕು ಹುಡುಕತೊಡಗಿದರು. ಗಂಟಲುನೋವು, ಜ್ವರ, ಕೆಮ್ಮು ಇದ್ದರೂ ಅದು ಕೊರೊನಾ ಅಲ್ಲವೆಂದು ತಮಗೆ ತಾವೇ ನಿರ್ಧರಿಸಿಕೊಂಡವರು ಆಸ್ಪತ್ರೆಗೆ ಹೋಗಿ ತಾವೂ ಬೇಗ ಟೆಸ್ಟ್ ಮಾಡಿಸಿಕೊಳ್ಳುವುದೇ ಸೂಕ್ತ ಎಂದು ಚರ್ಚಿಸತೊಡಗಿದರು. ಸಣ್ಣಮಕ್ಕಳು ಒಂದಕ್ಕೊಂದು ಸ್ಪರ್ಧೆ ಮಾಡುತ್ತಿರುವವರಂತೆ ಮಾಸ್ಕು ಹಾಕಿಕೊಂಡು ‘ಗೇರ್ ಗೇರ್ ಮಂಗಣ್ಣ’ ಎಂದು ಗುರೂಜಿ ಮಂಗನಂತೆ ಹೇಗೆ ಹಾರುತ್ತಿದ್ದರೋ ತಾವೂ ಹಾಗೆ ಹಾರತೊಡಗಿದವು.
***
ಇದು ಯಾರು ಈ ಗುರೂಜಿ ಎನ್ನುವಿರಾ?
ಗುರೂಜಿ ಹೆಸರು ಎಲ್ಲಿ ಹುಟ್ಟಿತೆಂದು ನೀವು ಹುಡುಕಲು ಶುರುಮಾಡಿದರೆ ಅದು ಅಲ್ಲಿಂದ ಇಲ್ಲಿ, ಇಲ್ಲಿಂದ ಅಲ್ಲಿ ಎಂದು ಊರೆಲ್ಲ ಓಡಾಡಿ ಕೊನೆಗೆ ಅವರ ಅಪ್ಪನ ಕನಸಿಗೆ ಬಂದು ನಿಲ್ಲುತ್ತದೆ. ಅವರ ಅಪ್ಪ ಮಹಾ ಚಾಲಾಕಿ. ಕುಟಿಲ ಭಯಂಕರ. ಯಾಕೋ ಯಾವ ವ್ಯವಹಾರವೂ ಕೈಗೆ ಹತ್ತದೆ ಕೈಕೈ ಮಸೆದುಕೊಳ್ಳುತ್ತ ಯೋಜನೆ ಮೇಲೆ ಯೋಜನೆ ಹಾಕುತ್ತಿದ್ದ ವ್ಯಕ್ತಿ. ಕೊನೆಗೆ ಯಾರೋ ಲಾಭದಾಯಕವಾದ, ಯಾವ ಹೂಡಿಕೆಯೂ ಬೇಡದ ಒಂದು ಅವಕಾಶದ ಕಡೆಗೆ ಗಮನ ಸೆಳೆದರು. ಅಯಸ್ಕಾಂತ ಶಿಲೆಯು ಕಬ್ಬಿಣವನ್ನು ಹಿಡಿದುಬಿಡುವಂತೆ ಅವರಪ್ಪ ಆ ಸಲಹೆಯನ್ನು ಹಿಡಿದುಬಿಟ್ಟ ಪರಿಣಾಮ ದಟ್ಟ ಕಾನನದ ನಡುವೆ ದೇವರು ಮೈದುಂಬುವ ತಾಣವೊಂದು ಹುಟ್ಟಿಕೊಂಡಿತು. ಅಪ್ಪನಿಗೆ ಕನಸಿನಲ್ಲಿ ಬಂದ ಶಿವನು, ‘ತನ್ನ ಮೂರ್ತಿ ಇಲ್ಲೇ ಈ ಕಾಡಿನೊಳಗೆ ಬಿದ್ದಿದೆ, ಅದಕ್ಕೆ ಪೂಜೆಪುನಸ್ಕಾರವಿಲ್ಲದೆ ನೊಂದಿರುವೆ. ಪ್ರಸಕ್ತ ಸ್ಥಳ ಅರಸಿ, ನೀನು ನನ್ನನ್ನು ಸೇವಿಸಿದಲ್ಲಿ ಈ ಸ್ಥಳಕ್ಕೆ ಉತ್ತರೋತ್ತರ ಅಭಿವೃದ್ಧಿಯನ್ನುಂಟುಮಾಡುವೆ’ ಎಂದನು. ಆ ಸ್ಥಳ ಅಭಿವೃದ್ಧಿ ಕಂಡಿತೋ ಇಲ್ಲವೋ, ಅಪ್ಪ ಮಾತ್ರ ಊಹಿಸದಷ್ಟು ವೇಗದಲ್ಲಿ ಬೆಳೆದು ನಿಂತರು. ಮೊದಲು ಒಂದು ಸಣ್ಣ ಮನೆಯ ಉಪ್ಪರಿಗೆಯಲ್ಲಿ ನಡೆಯುತ್ತಿದ್ದ ‘ದರ್ಶನ’ವು ಬರಬರುತ್ತ ದೊಡ್ಡದೊಡ್ಡ ಸ್ಥಳಗಳಿಗೆ ಸ್ಥಳಾಂತರಗೊಂಡು, ಒಂದು ದೇವಾಲಯವೇ ಎದ್ದು ಈಗ ಅದೊಂದು ಸಾಮ್ರಾಜ್ಯವೇ ಆಗಿ ಬೆಳೆದು ನಿಂತಿದೆ.
ಕಾಡಿನ ನಡುವಿನ ಒಂದು ಐನ್ ಜಾಗದಲ್ಲಿ – ಅದನ್ನು ಘಟ್ಟದ ವ್ಯೂ ಪಾಯಿಂಟ್ ಅಂತ ಬೇಕಾದರೆ ಕರೆಯಬಹುದು, ಅಂಥಲ್ಲಿ ಒಂದು ದಿನ ಕಪ್ಪು ಕಲ್ಲಿನ ಲಿಂಗವು ರಸ್ತೆಪಕ್ಕ ಬಂದು ಕೂತಿತು. ಇಟ್ಟವರೇ ಬಂದು ಯಾರೂ ನೋಡದ ಹೊತ್ತಿನಲ್ಲಿ ಪೂಜೆ ಮಾಡಿ ಹೋಗುತ್ತಿದ್ದರು. ಬರಬರುತ್ತ ಘಟ್ಟದ ವಾಹನಗಳ ಚಾಲಕರು ಹೂವು, ವಿಭೂತಿ, ಕುಂಕುಮ ಬಳಿದ ಲಿಂಗಕ್ಕೆ ಗಾಡಿ ನಿಲ್ಲಿಸಿ ಕೈಮುಗಿದರು. ಅದರ ಸುತ್ತ ಸೋಗೆಯ ಗುಡಿಸಲೆದ್ದಿತು. ಸಣ್ಣ ಬಿಡಾರ ಆಗಿಯೇ ಹೋಯಿತು. ಕೆಲಕಾಲ ಕಳೆಯುವುದರಲ್ಲಿ ಒಂದು ಸಣ್ಣಗುಡಿ ಎದ್ದೇ ಬಿಟ್ಟಿತು. ಪಯಣಿಗರು ಅಲ್ಲಿ ನಿಂತು ನಮಿಸಿಯೇ ಹೋಗುವರು. ಅಷ್ಟುದಿನ ಕಳೆದ ಮೇಲೆ ಅದನ್ನಿಟ್ಟವರು ಕಾಣಿಸಿಕೊಂಡರು. ಅಲ್ಲಿಂದ ಮಾರು ದೂರದಲ್ಲಿ ಕಾಡಿನೊಳಗಿದ್ದ ತಮ್ಮ ಮನೆಯ ಕಡೆಗೆ ಕೈತೋರುವ ಬೋರ್ಡು ಹಾಕಿಕೊಂಡರು. ಹೀಗೆ ‘ಶ್ರೀ ಗಟ್ಟದ ಕರಿಕಾಲ ಭೈರವೇಶ್ವರ ಸ್ವಾಮಿ ಗುಡಿ’ಯ ದರ್ಶನಕ್ಕೆ ಬರುವವರು, ಪ್ರಶ್ನೋತ್ತರ ಪ್ರಸಾದ ಕೇಳಬಯಸುವವರು ಬರುವ ದಾರಿ’ ಎಂಬ ಫಲಕ ರಸ್ತೆ ಪಕ್ಕ ಎದ್ದಿತು.
ಅವರಿಗೊಬ್ಬನೇ ಮಗ. ಕಾಡುಪಾಪದಂತೆ ಮರದ ಮೇಲೇ ಬೆಳೆದವ. ಅವನ ಜಾತಕದಲ್ಲಿ ವಿದ್ಯೆ ಬರೆದಿಲ್ಲವೆಂದು ಭಾವಿಸಿದ ಅಪ್ಪ ‘ಗುರು’ವಾಗಿ ಮಾಡಲು ಪಣ ತೊಟ್ಟರು. ದರ್ಶನ ರಹಸ್ಯಗಳನ್ನು ಹೇಳಿಕೊಟ್ಟರು. ಇದುವರೆಗೆ ಅಪ್ಪನಿಗೆ ಭೈರವ ಮೈದುಂಬುತ್ತಿದ್ದರೆ ಅವರ ಮಗನಿಗೀಗ ಹನುಮಂತನೂ ಮೈದುಂಬತೊಡಗಿದ. ಪುಂಡು ಹುಡುಗನಾಗಿದ್ದ ಯೋಗೇಶ ಅಂತೂ ಇಂತೂ ಎಸ್ಸೆಲ್ಸಿ ಮುಗಿಸಿ ಒಂದೆರೆಡು ವರ್ಷ ಅಲ್ಲಿಲ್ಲಿ ಹೋಗಿ ಒಂದಷ್ಟು ಹಿಂದಿ, ಅಷ್ಟಿಷ್ಟು ಇಂಗ್ಲೀಷು, ಜೊತೆಗೆ ಕಾಟಪೂಟಿ ಸಂಸ್ಕೃತವನ್ನೂ ಕಲಿತು ಮನೆಗೆ ಬಂದು ಯೋಗೇಶ ಗುರೂಜಿಯಾಗಿಬಿಟ್ಟ.
ಗುರೂಜಿ ಹೊಸತಲೆಮಾರಿನವರು. ತನಗೊಂದು ಪಡೆ ಕಟ್ಟಿಕೊಂಡರು. ಕೂತುಕೂತು ಮೈ ಬೆಳೆದೇ ಬೆಳೆಯಿತು. ಮೊದಮೊದಲು ತಮ್ಮ ಗುರೂಜಿ ಜೈಹನುಮಾನನಂತೆ ಬಲಶಾಲಿ ಎಂದು ಭಾವಿಸಿದ್ದ ಭಕ್ತಾದಿಗಳು ಈಗ ಜೈಗಣೇಶನಂತೆ ಅವರಾಗಿರುವುದು ನೋಡಿ ಅಚ್ಚರಿಪಡುವರು. ಆದರೆ ಆ ಮೈ ಹೊತ್ತೂ ಅವರು ಕುಣಿಯುವುದೇನು!? ಜಾಲತಾಣದ ಎಲ್ಲಿ ನೋಡಿದರೂ ಅವರ ಪವಾಡದ ಜಾಹೀರಾತುಗಳು, ಅಲ್ಲಿಗೆ ಬಂದು ಹೋದಮೇಲೆ ಆದ ಬದಲಾವಣೆಗಳನ್ನು ಹೊಗಳುವ ಬರಹಗಳು ತುಂಬಿದವು. ಆ ತಾಣದ ಶಕ್ತಿ, ಸೌಂದರ್ಯ, ವ್ಯವಸ್ಥೆ ಮುಂತಾದ ವಿಷಯಗಳ ವೀಡಿಯೋ ತುಣುಕುಗಳು ಮಳೆಗಾಲದ ಕಳೆಗಿಡದಂತೆ ದಿನದಿಂದ ದಿನಕ್ಕೆ ಅಂತರ್ಜಾಲದಲ್ಲಿ ತುಂಬಿದವು. ಗುರೂಜಿಯ ಸಿನಿಮಾ ಮಾಡುವುದೊಂದು ಬಾಕಿ.
ಹೀಗೆ ಪುಂಡ ಯೋಗೇಶ ಯೋಗೇಶ ಗುರೂಜಿ ಆದರು.
ಗುರೂಜಿ ಭವಿಷ್ಯ ಹೇಳತೊಡಗಿದರು. ಊರುಕೇರಿ, ವ್ಯಕ್ತಿಗಳ ಹಿಂದುಮುಂದೆಲ್ಲ ಹೇಳತೊಡಗಿದರು. ಭವಿಷ್ಯ ಅರಿಯಲು ಜನ ಹುಚ್ಚೆದ್ದು ಬಂದರು. ಜನರನ್ನು ನಿಯಂತ್ರಿಸುವುದು ಕಷ್ಟವಾದಾಗ ಗುರೂಜಿ ಎಷ್ಟೆಷ್ಟೋ ಜನರನ್ನು ಎಲ್ಲೆಲ್ಲಿಂದಲೋ ಕೆಲಸಕ್ಕೆ ಕರೆತಂದರು. ಸಾವಿರಾರು ಜನ ಬಂದಮೇಲೆ ರಾಜಕಾರಣಿಗಳು ಬಿಡುವರೇ? ಸಣ್ಣಹಂತದಿಂದ ಶುರುವಾಗಿ ವಿಧಾನಸೌಧದವರೆಗೆ ಚುನಾವಣೆಗೆ ನಿಂತವರು ಪ್ರಶ್ನೆ ಕೇಳಲು ಬಂದರು. ಕಾಲಿಗೆ ಬಿದ್ದು ಶಾಲು ಹೊದಿಸಿ ಸನ್ಮಾನ ಮಾಡಿದರು. ‘ಕರ್ನಾಟಕ ವಿಭೂತಿ’ ಪ್ರಶಸ್ತಿಯೂ ಸಿಕ್ಕಿತು. ಬಂದವರಿಗೆಲ್ಲ ಗೆಲ್ಲುವಿರಿ ಎಂಬ ಅಭಯ. ಗೆಲುವಿನ ಮಾರ್ಗಗಳ ಅನಾವರಣ. ದರ್ಶನ-ಪ್ರಸಾದ ಆದವರಲ್ಲಿ ಕೆಲವರು ಗೆದ್ದೂ ಬಿಟ್ಟಾಗ ಮುಗಿದೇ ಹೋಯ್ತು. ಗುರೂಜಿಯ ಖ್ಯಾತಿಯ ಗ್ರಾಫು ಮುಗಿಲು ಮುಟ್ಟಿತು. ಅಂಥಂಥವರೇ ಬರುವರೆಂದ ಮೇಲೆ ನಮ್ಮದೇನು? ಜನಸಾಮಾನ್ಯರು ಕಿತ್ತೆದ್ದು ಬಂದರು.
ಈಗ ಗುರೂಜಿಗೆ ಯೋಗಿಯಾಗುವ ಹಂಬಲ ಬೆಳೆಯಿತು. ಅವರ ಅಂತಃಪುರದ ಕತೆಗಳು, ಭೋಗಜೀವನದ ಲಾಲಸೆಗಳ ಬಗೆಗೆ ದನಿಯೆತ್ತುವ ಧೈರ್ಯ ಅವರ ಎಳೆಯ ಹೆಂಡತಿಗಾಗಲೀ, ಮಾತು ಬಿದ್ದುಹೋದ ಸೇವಕರಿಗಾಗಲೀ, ಊರ ಜನರಿಗಾಗಲೀ, ಅವರು ಕೂತದ್ದು ನಿಂತದ್ದು ಕವರ್ ಮಾಡುವ ವರದಿಗಾರರಿಗಾಗಲೀ ಇದೆಯೆ? ಇಲ್ಲ. ಹಾಗಾಗಿ ಬರುವ ವರ್ಷ ನೀವಲ್ಲಿ ಹೋದರೆ ಒಂದುಬೆಟ್ಟದ ತಲೆ ಸವರಿ ಸಪಾಟಾಗಿಸಿ ನಿಲ್ಲಿಸಿದ ನೂರು ಮೀಟರ್ ಎತ್ತರದ ಯೋಗಿಯ ಪ್ರತಿಮೆ ಕಾಣಲಿರುವಿರಿ.
‘ಜಡೆ ಬಿಚ್ಚಿ ಹರಡಿ ನಿಂತ ಅರೆ ಧ್ಯಾನಾವಸ್ಥೆಯ ಶಿವನ ಮೂರ್ತಿ ಬರ್ತದ. ಆಕಾಶ ನೋಡಕೋತ ಸೂರ್ಯಚಂದ್ರರನ್ನೇ ತನ್ನ ಕಣ್ಣೊಳಗ ಇಟಗೊಂಡ ಶಿವ. ಅದರ ಎದುರು ಹತ್ತತ್ತಿರ ಸಾವಿರ ಜನ ಕೂರಬೌದು. ಧೋಡ್ಡ ಬಯಲು. ಶಿವನ ಗಂಟಲ ಮೂಳಿ ತಳಗ ವೇದಿಕೆ. ಅಲ್ಲಿ ಹಾಡು, ನರ್ತನ, ಧ್ಯಾನ, ಸಾಮೂಹಿಕ ಪ್ರಾರ್ಥನೆ ಎಲ್ಲಾನೂ ನಡೀತಾವ’ ಎಂದು ಅದರ ಗುದ್ದಲಿಪೂಜೆ ನೆರವೇರಿಸಿದ ಮಾನ್ಯ ಗೃಹಮಂತ್ರಿಗಳೇ ಹೇಳಿ ಹೋಗಿದ್ದರು.
ಸಮುದ್ರ ತೀರದಲ್ಲಿ ಹಾದುಹೋಗುವ ಹೈವೇಯಿಂದ ಕಡಲಿಗೆ ಬೆನ್ನು ಹಾಕಿ ನಡೆದರೆ ಸೀದಾ ಘಟ್ಟಪ್ರದೇಶ ಶುರುವಾಗುತ್ತದೆ. ಅಂತಹ ಘಟ್ಟದ ನಟ್ಟನಡುವಲ್ಲಿ ಇರುವ ಇರುಳಮಲೆ ಬೆಟ್ಟದ ತಪ್ಪಲಲ್ಲಿ ಗುರೂಜಿಯ ಸಾಮ್ರಾಜ್ಯ ಎದ್ದು ನಿಂತಿದೆ. ಹೈವೇಯಿಂದ ಎಂಭತ್ತು ಕಿಲೋಮೀಟರು ಒಳಗೆ ಗುರೂಜಿ ಹುಟ್ಟಿದ ಕತ್ಲಕಾನಿನ ನಡುವಿನಲ್ಲಿ ಇದ್ದ ಬೆಟ್ಟ ಪ್ರದೇಶದಲ್ಲಿ ಅವರ ವ್ಯವಹಾರ ಬೆಳೆದಿದೆ. ಬಂದವರಿಗೆ ಉಳಿದುಕೊಳ್ಳಲು ವಸತಿ ಸಮುಚ್ಚಯವಾಗಿ ಹದಿನಾಲ್ಕು ಅಂತಸ್ತಿನ ದೊಡ್ಡ ಕಟ್ಟಡ ಎಬ್ಬಿಸಿದ್ದಾರೆ. ಅವರು ಯಾರನ್ನೂ ಕೇಳಲಿಲ್ಲ, ಹೇಳಲಿಲ್ಲ. ಅವರ ಸಹಾಯಕ್ಕೆ ದೊಡ್ಡದೊಡ್ಡ ಯಂತ್ರಗಳು ಇದ್ದವು. ದುಡ್ಡು ಇತ್ತು. ಪ್ರಭಾವಿ ಭಕ್ತಾದಿಗಳಿದ್ದರು. ಆ ಜಾಗದ ಆದಿವಾಸಿ ಇರುಳರ ಮಲೆ ಈಗ ಗುರುಮಲೆ ಆಗಿಬಿಟ್ಟಿತು.
***
ತಾನೇ ದೇವರೆಂದುಕೊಂಡ ಈ ಮೂರ್ಖ ಗುರೂಜಿಯ ಕತೆ ನಾನೇಕೆ ಬರೆಯಬೇಕು?
ಯಾಕೆಂದರೆ ನನ್ನದು ಅವರದು ಪರೋಕ್ಷ ವಿಲೋಮ ಸಂಬಂಧ. ನಾನೇನು ಮಾಡಿ, ಮಾಡಿ ಎನ್ನುವೆನೋ ಅವರು ಅದನ್ನು ಮಾಡಬೇಡಿ, ಬೇಡಿ ಎನ್ನುವರು. ಅವರೇನು ಮಾಡಿ ಎಂದು ಸೂಚಿಸುವರೋ, ‘ಅದು ಅಪಾಯ, ಕೂಡದು’ ಎನ್ನುವವಳು ನಾನು. ಎಷ್ಟೋಸಲ ನಮ್ಮಿಬ್ಬರ ನಡುವೆ ಸಿಲುಕಿ ಜನ ದ್ವಂದ್ವಗೊಂಡಿದ್ದಾರೆ. ಕೊನೆಗೆ ತಮಗೆ ಯಾವುದು ಸಾಧ್ಯವೋ, ಯಾವುದು ಆಪ್ತವೋ ಅದನ್ನಷ್ಟೇ ಮಾಡಿದ್ದಾರೆ.
ಪರಸ್ಪರರ ಚಪ್ಪಲಿಯನ್ನು ಚಣ ಮಾತ್ರಕ್ಕಾದರೂ ಅದಲುಬದಲು ಮಾಡಿಕೊಂಡು ನಡೆಯದ ಪಾದದಳತೆಯವರು ನಾವು. ಆದರೆ ಕೋವಿಡ್ ಎಂಬ ಬೆಂಕಿಮಳೆಯು ಸುರಿದರೆ ಯಾರನ್ನೂ ಬಿಡದೆ ಸುಡುವುದು ಎಂದು ಹೇಳಲು ಇಷ್ಟು ಸಾಲುಗಳು.
* ಫೋಟೋ : ಎಸ್. ವಿಷ್ಣುಕುಮಾರ್
* ನಾಳೆ ನಿರೀಕ್ಷಿಸಿ : ‘ಕವಲಕ್ಕಿ ಮೇಲ್’ ಉಪಸಂಹಾರ
ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ಮುದುಕವಿರೋಧಿ ಡೌಟಮ್ಮನೂ ಮತ್ತವಳ ವಿಚಿತ್ರಶಾಸ್ತ್ರವು
Published On - 11:15 am, Wed, 30 June 21