Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid Diary : ಕವಲಕ್ಕಿ ಮೇಲ್ : ಕೊಡುವಾಗ ಕೈನೋಡು, ತಗೊಳ್ಳುವಾಗ ಮುಖನೋಡು…

Money : ಒಂದು ಕಾಗದದ ತುಂಡಿಗೆ, ಲೋಹದ ಚೂರಿಗೆ ಇಷ್ಟು ಬೆಲೆ, ಇದಕ್ಕೆ ಇಷ್ಟು ವಸ್ತು ಬರುತ್ತೆ ಅಂತ ಹೇಳಿಟ್ಟುಕೊಂಡಿದೀವಲ್ಲ, ನಮ್ಮ ಮಿದುಳೇ ವಿಚಿತ್ರ. ಈ ನಾಯಿ ಎದುರು ಎರಡು ಸಾವಿರ ರೂಪಾಯಿ ನೋಟು ಹಿಡಿರಿ. ಒಂದು ತಿಂಗಳಿಗಾಗುವಷ್ಟು ಚಿಕನ್ ಇದರಿಂದ ಬರುತ್ತೆ ಅಂತ ಕೊಟ್ರೆ ಅದಕ್ಕೆ ಅರ್ಥನೇ ಆಗಲ್ಲ, ಕೊಟ್ಟ ಮರುಗಳಿಗೆನೇ ಕಚ್ಚಿ ಹರಿದು ಹಾಕುತ್ತೆ. ಆದರೆ ನಾವು?

Covid Diary : ಕವಲಕ್ಕಿ ಮೇಲ್ : ಕೊಡುವಾಗ ಕೈನೋಡು, ತಗೊಳ್ಳುವಾಗ ಮುಖನೋಡು...
Follow us
ಶ್ರೀದೇವಿ ಕಳಸದ
|

Updated on:Jun 22, 2021 | 11:53 AM

‘ಇದು ಕೆರೆ ನೀರನ್ನ ಕೆರೆಗೆ ಚೆಲ್ಲೋದು. ಬಿರುಬೇಸಿಗೇಲಿ ಎಲ್ಲಕಡೆ ಕೆರೆ, ಹಳ್ಳ, ಬಾವಿ ಒಣಕ್ಕಂಡರ‍್ತಾವೆ. ಅವು ತುಂಬಕ್ಕೆ ಮಳೆನೇ ಸುರೀಬೇಕು. ನಾವು ನಮ್ಮ ಹಳ್ಳದ ನೀರು ಬತ್ತಿಲ್ಲದೇ ಇರೋದ್ರಿಂದ ಬೇಕಾದವ್ರು ಕುಡಿಯೋ ನೀರು ತಗಳಿ ಅಂದಂಗೆ ಇದು. ಗೊತ್ತಾಯ್ತಾ? ಅಷ್ಟಕ್ಕೂ ಈ ಹಳ್ಳದ ನೀರು ಯಾರ‍್ದು? ಇದರಲ್ಲಿ ನಿಮ್ಮೆಲ್ಲರ ಪಾಲೂ ಇದೆ. ಅದಕ್ಕೇ ನೀವೆ ಎಲ್ಲ ಹೋಗಿ ಕೊಟ್ಟು ಬರಬೇಕು. ಬಂಧುಗಳ ಮನೆಗೆ ಹೋಗ್ತಾ ಏನಾದರೂ ಒಯ್ಯಲ್ವ? ಇದೂ ಹಾಗೆ ಪ್ರೀತಿಯಿಂದ ಒಯ್ದಿರೋದು ಅಂತ ತಿಳೀಬೇಕು. ಇದು ನಮಗಷ್ಟೇ ಬಂದ ಯೋಚನೆ ಅಲ್ಲ. ಎಷ್ಟೆಷ್ಟು ಕಡೆ, ಎಷ್ಟೆಷ್ಟು ರೀತಿಯ ಸಹಾಯಗಳು ಹರಿದು ಬರ‍್ತಿದಾವೆ ವಾಟ್ಸಪ್ಪಿನಲ್ಲಿ ನೋಡ್ತೀರಲ? ಜಾತಿ, ಧರ್ಮ ಅಂತ ಜನರನ್ನ ಮೂರ್ಖರಾಗಿಸೋ ರಾಜಕಾರಣಿಗಳನ್ನ ಮೀರಿ ಆಸ್ಪತ್ರೆ ವಾರ್ಡುಗಳಲ್ಲಿ, ಶವಾಗಾರದಲ್ಲಿ, ಸ್ಮಶಾನದಲ್ಲಿ, ಅಪಾರ್ಟ್ಮೆಂಟುಗಳಲ್ಲಿ, ಊರುಕೇರೀಲಿ ಜನ ಒಳ್ಳೇತನ ತೋರಿಸ್ತಾ ಇದಾರೆ. ಕಷ್ಟ ಕಾಲದಲ್ಲೇ ಮನುಷ್ಯರ ಮನಸ್ಸಿನ ಮತ್ತೊಂದು ಒಳ್ಳೇ ಮುಖ ಹೊರಗೆ ಬರ‍್ತಾ ಇದೆ. ನಾವೂ ನಮ್ಮ ಕೈಲಾದ್ದು ಮಾಡಣ, ಅಡ್ಡಿಲ್ಲಲ?’ *

‘ಈ ಹಣ ಅನ್ನೋದೊಂದು ವಿಚಿತ್ರ. ಕೈಗೆ ಹತ್ತೋದು ಕಷ್ಟ. ಎಷ್ಟೋ ಜೀವಗಳು ರಕ್ತ ನೀರು ಮಾಡಿದರೂ, ದೇಹ ದಣಿದು ಹಣ್ಣಾದರೂ ಹೊಟ್ಟೆ ತುಂಬುವಷ್ಟು ದುಡ್ಡೂ ಒಟ್ಟಾಗಲ್ಲ. ಮತ್ತೆ ಕೆಲವರಿಗೆ ಕೂತಲ್ಲೇ ಬಂದು ರಾಶಿ ಬೀಳುತ್ತೆ. ಅಥವಾ ಹೀಗಲ್ಲ. ದುಡ್ಡು ವಿಚಿತ್ರ ಅಲ್ಲ, ಅಂಥದೊಂದು ಕಟ್ಟುಕತೆ ಕಟ್ಟಿಕೊಂಡ ಮನುಷ್ಯರೇ ವಿಚಿತ್ರ ಅಂತಾನೆ ಹರಾರಿ ಅನ್ನೋನು. ಒಂದು ಕಾಗದದ ತುಂಡಿಗೆ, ಲೋಹದ ಚೂರಿಗೆ ಇಷ್ಟು ಬೆಲೆ, ಇದಕ್ಕೆ ಇಷ್ಟು ವಸ್ತು ಬರುತ್ತೆ ಅಂತ ಹೇಳಿಟ್ಟುಕೊಂಡಿದೀವಲ್ಲ, ನಮ್ಮ ಮಿದುಳೇ ವಿಚಿತ್ರ. ಈ ನಾಯಿ ಎದುರು ಎರಡು ಸಾವಿರ ರೂಪಾಯಿ ನೋಟು ಹಿಡಿರಿ. ಒಂದು ತಿಂಗಳಿಗಾಗುವಷ್ಟು ಚಿಕನ್ ಇದರಿಂದ ಬರುತ್ತೆ ಅಂತ ಕೊಟ್ರೆ ಅದಕ್ಕೆ ಅರ್ಥನೇ ಆಗಲ್ಲ, ಕೊಟ್ಟ ಮರುಗಳಿಗೆನೇ ಕಚ್ಚಿ ಹರಿದು ಹಾಕುತ್ತೆ. ಆದರೆ ನಾವು? ದುಡ್ಡು ಅಂತೊಂದು ಸೃಷ್ಟಿ ಮಾಡಿ, ಅದನ್ನ ಕೊಟ್ಟರಷ್ಟೇ ವಸ್ತು ಅಂತ ಅದಕ್ಕೆ ಬೆಲೆ ಇಟ್ಟಿದೀವಿ. ಇದು ವಿಚಿತ್ರ ಯಾಕಂದ್ರೆ ಇದು ಇಲ್ಲದಿದ್ದರೆ ಹೇಗೆ ಬದುಕೇ ಅಸಾಧ್ಯವಾಗಿ, ಅಸಹಾಯಕವಾಗಿ ಕಾಣುತ್ತೋ ಹಾಗೇನೇ ಅಗತ್ಯಕ್ಕಿಂತ ಹೆಚ್ಚು ಸಂಗ್ರಹ ಆದ್ರೂ ತಲೆನೋವು ಬರುತ್ತೆ. ನಮ್ಮನೆ ಮಾವಿನಮರ ನಮಗೆ ತಿನ್ನಕ್ಕಾಗದಷ್ಟು ಹಣ್ಣು ಬಿಡ್ತೂಂತ ಇಟ್ಕೊಳಿ. ಏನು ಮಾಡ್ತೀವಿ? ಹಂಚಲೇಬೇಕು. ಅಷ್ಟು ನೆಲಕ್ಕೆ, ಅಷ್ಟು ದನಕ್ಕೆ, ಅಷ್ಟು ಹುಳಕ್ಕೆ, ಉಳಿದದ್ದು ಮನುಷ್ಯರಿಗೆ. ಅಲ್ಲವ? ಇದೂ ಹಾಗೆ.’

ಕ್ಲಿನಿಕ್ ವೇಳೆ ಮುಗಿದ ಬಳಿಕ ಮೇಡಂ ತಮ್ಮ ಸಿಬ್ಬಂದಿಗಳನ್ನು ಒಂದೆಡೆ ಸೇರಿಸಿ ಹೇಳುತ್ತಿದ್ದರು. ಅವರಿಗೆ ತಾವೇನು ಹೇಳುತ್ತಿದ್ದೇನೆ, ಮಾಡುತ್ತಿದ್ದೇನೆಯೋ ಅದನ್ನು ತನ್ನ ಜೊತೆ ಇರುವವರಿಗೆ ಅರ್ಥ ಮಾಡಿಸಬೇಕು ಎಂಬ ಹಂಬಲ. ಅವರ ಕ್ಲಿನಿಕ್ಕಿನಲ್ಲಿ ಕೈತೊಳೆಯುವಾಗ ಇಂಥ ಮಾತುಕತೆಗಳು ಆಗುತ್ತಿರುತ್ತವೆ. ತರುಣ ಮನಸುಗಳು ಏನಾದರೊಂದು ಕೇಳುತ್ತಿರುತ್ತವೆ. ಸಂಶಯ, ಭಿನ್ನಮತ ಹೇಳುತ್ತವೆ. ಅದಕ್ಕೆ ಸೂಕ್ತ ಉತ್ತರದ ಹುಡುಕಾಟ ನಡೆಯುತ್ತದೆ.

ಮೇಲಿನ ದೀರ್ಘ ಪೀಠಿಕೆಯನ್ನು ಮೇಡಂ ಹಾಕಲು ಕಾರಣವಿದೆ. ಅವರ ಕ್ಲಿನಿಕ್ ಮಳೆಗಾಲ ಬಂದರೆ ತುಂಬಿ ಹರಿಯುತ್ತದೆ. ಚೀಟಿ ಮಾಡಿಸಲು ಶುಲ್ಕವಿಲ್ಲ. ಬರಿಯ ಪರೀಕ್ಷೆ ಮಾಡಿಸಿದ್ದಕ್ಕೆ, ಬಿಪಿ ತೋರಿಸಿದ್ದಕ್ಕೆ, ಆಪ್ತಸಲಹೆಗೆ ದುಡ್ಡು ಇಲ್ಲ. ಕೆಲವು ಪೇಶೆಂಟುಗಳಿಂದ ಹಣ ಪಡೆಯುವುದಿಲ್ಲ. ಆದರೆ ಮುಕ್ಕಾಲು ಭಾಗ ಪೇಶೆಂಟುಗಳು ಔಷಧಿಯ ಹಣ ಕೊಡಲು ಸಾಧ್ಯವಿರುವವರು. ಅವರಿಂದ ಔಷಧದ ಬೆಲೆ ಪಡೆದು ಚಿಕಿತ್ಸೆ ಕೊಡುತ್ತಾರೆ. ಇದರಿಂದ ಅವರ ಅಗತ್ಯಕ್ಕಿಂತ ಹೆಚ್ಚು ದುಡಿಮೆಯಾಗುತ್ತದೆ. ‘ನಮ್ಮ ಅಗತ್ಯಗಳನ್ನು ಅತಿ ಮಿತಗೊಳಿಸಿಕೊಂಡ ಮೇಲೆ, ಇವತ್ತು ನಾಳೆಯ ತುರ್ತಿಗೆ ಹಣ ತೆಗೆದಿಟ್ಟುಕೊಂಡಮೇಲೆ ಮತ್ತೇಕೆ ಹಣ? ಹಾಗಂತ ಹಣವೇ ಬೇಡವೆಂದರೆ ದುಡಿಮೆ ಬೇಡ ಎಂದಂತಾಗುತ್ತದೆ. ಪೂರಾ ಉಚಿತವಾಗಿ ಕೊಟ್ಟರೆ ಔಷಧಕ್ಕೆ ಬೆಲೆಯಿರುವುದಿಲ್ಲ. ಕೆಲ ಬಡವರೂ ಸಹ ಕಡಿಮೆ ದುಡ್ಡು ತಗೊಂಡರೆ, ‘ಒಳ್ಳೇ ಮದ್ದೇ ಕೊಡ್ರ ಅಮಾ’ ಎನ್ನುತ್ತಾರೆ. ಉಚಿತ ಸೇವೆ ಕಾಲಾಂತರದಲ್ಲಿ ಪೇಶೆಂಟುಗಳ ವಿಶ್ವಾಸ, ಸಿಬ್ಬಂದಿಯ ಉತ್ಸಾಹ, ಸೇವೆಯ ಕ್ವಾಲಿಟಿಯನ್ನು ತಗ್ಗಿಸಬಹುದು. ಹಾಗಾಗಿ ಯಾರು ಸಮರ್ಥರೋ ಅವರಿಂದ ಔಷಧದ ಕನಿಷ್ಟ ಬೆಲೆಯನ್ನಾದರೂ ಪಡೆಯಬೇಕು. ಬಂದದ್ದು ವಿನಿಯೋಗಿಸಬೇಕು’ ಎನ್ನುವ ಮಧ್ಯಮ ದಾರಿಯನ್ನು ಡೈರಿ ಬರೆಯುತ್ತಾ ಕಂಡುಕೊಂಡಿದ್ದಾರೆ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಆದರೆ ಇಂಥ ಅರ್ಥಜಿಜ್ಞಾಸೆ ಹುಟ್ಟಿಸುವ ನೈತಿಕ ತಲೆಬಿಸಿಯು ಟ್ಯಾಕ್ಸ್ ಕಟ್ಟಿದ ಮಾತ್ರಕ್ಕೆ ಹೋಗುವುದಿಲ್ಲ. ಅಗತ್ಯವಿರುವ ವಿದ್ಯಾರ್ಥಿಗಳು, ಸಂಘಸಂಸ್ಥೆಗಳು, ರೋಗಿಗಳು, ಬಂಧುಗಳ ಜೊತೆ ನಿಲ್ಲುವುದರಿಂದಲೂ ಮುಗಿಯುವುದಿಲ್ಲ. ಅದರಲ್ಲೂ ಕೋವಿಡ್ ಪಿಡುಗು ಬಡತನವನ್ನು ದಾರುಣವಾಗಿ ಹೇರಿಬಿಟ್ಟಿದೆ. ಲಾಕ್‌ಡೌನ್ ಎನ್ನುವುದು ರೋಗಕ್ಕೆ ಬಿದ್ದ ಕಡಿವಾಣ ಆಗುವ ಬದಲು ಹಣದ ಚಲನೆಗೆ ಹಾಕುವ ಕಡಿವಾಣವಾಗಿ ಒಂದು ಹೊಸ ಬಡವರ ವರ್ಗ ಹುಟ್ಟಿಕೊಂಡಿದೆ. ಏನು ಮಾಡುವುದು? ಏನು ಮಾಡುವುದು? ಎನ್ನುವುದು ಅವರನ್ನು ಅನುದಿನ ಕಾಡುತ್ತಿದೆ. ಕೋವಿಡ್ ಬಡತನ ವೈದ್ಯರ ಅನುಭವಕ್ಕೆ ಬರದೇ? ಅದನ್ನೇ ನಿತ್ಯ ನೋಡಿನೋಡಿ ಅವರ ಯೋಚನೆ ಬೇರೆಯೇ ದಿಕ್ಕಿಗೆ ತಿರುಗಿದೆ.

ರೇಷನ್ನಿನಲ್ಲಿ, ದಿನಗೂಲಿಗೆ ಕೊಡುವ ಕೊಚ್ಚುವಿನಲ್ಲಿ ಜನರ ಅಕ್ಕಿಯ ಚಿಂತೆ ಕಳೆಯುತ್ತದೆ. ಹೊಳೆಹಳ್ಳ, ಸಮುದ್ರ ಇರುವುದರಿಂದ ಮೀನು, ಬಳಚೂ ಸಿಗುತ್ತವೆ. ಅಷ್ಟಾದರೆ ಆಯಿತೇ? ಉಪ್ಪು ಹುಳಿ ಕಾರ ಬೆಲ್ಲ ಸೋಪು ಪೇಸ್ಟು ಗರಂಮಸಾಲೆ ರವೆ ಬೇಳೆಕಾಳು ಬೆಂಕಿಪೆಟ್ಟಿಗೆ ಅವಲಕ್ಕಿ ಸಕ್ಕರೆ ಮುಂತಾಗಿ ದಿನನಿತ್ಯಕ್ಕೆ ಬೇಕೇ ಆದ ವಸ್ತುಗಳಿವೆ. ಕೂಲಿಕೆಲಸ ಸಿಗದವರು. ಅಂಗಾಂಗಗಳ ಬಾಧೆ ಇರುವವರು, ವೃದ್ಧರು, ರೋಗಿಗಳು, ಒಂಟಿ ಜೀವಗಳು, ಒಂಟಿ ಪಾಲಕರು, ಸ್ವಂತ ವಾಹನವಿಲ್ಲದವರೆಲ್ಲ ಬಸ್ಸಿಲ್ಲದ ಕಾಲದಲ್ಲಿ ಮೈಲುಗಟ್ಟಲೇ ಕ್ರಮಿಸಿ ಕಿರಾಣಿ ಅಂಗಡಿ ಮುಟ್ಟುವುದು, ಸಾಮಾನು ತರುವುದು ಹೇಗೆ? ಹಾಗಾಗಿ ದುಡ್ಡು ಕೊಡುವುದಕ್ಕಿಂತ ಅಗತ್ಯ ವಸ್ತುಗಳನ್ನೇ ಕೊಡಬಹುದು ಎನಿಸಿ ಅದು ಗುಂಗಿಹುಳದಂತೆ ತಲೆ ಹೊಕ್ಕಿತು.

ಅದಕ್ಕಾಗಿ ಎಲ್ಲರೂ ಸೇರಿ ಯೋಚಿಸಿ ಯೋಜನೆ ರೂಪಿಸಿದರು. ಅವರ ಬಳಗವಾದ ಸುಬ್ರಾಯ, ನಾಗವೇಣಿ, ಸಾಂಡ್ರಾ, ಆಶಾ, ಸುಜಾತ ಎಲ್ಲರೂ ಒಬ್ಬರಿಗಿಂತ ಒಬ್ಬರು ಉತ್ಸಾಹಿ, ಉಮೇದಿನ ಜೀವಗಳು. ‘ಈರುಳ್ಳಿ ಜತೆ ಬಟಾಟೆನೂ ಸರ‍್ಸಿ’, ‘ಚಾಪುಡಿ ಬೇಕಿರೆ ಇನ್ನೊಂದ್ ಪ್ಯಾಕೆಟ್ ಹೆಚ್ಚೇ ಕೊಡಿ’, ‘ತೊಗ್ರಿಬ್ಯಾಳೆಗಿಂತ ಪಚ್ಚೆಸ್ರ ಬ್ಯಾಳೆನೇ ಬೇಕಾಗ್ತದೆ’, ‘ನೀವು ಅಲಸಂದೆ ಕೊಟ್ರೂ ಈ ಕಡೆ ಜನ ಯೂಸ್ ಮಾಡುದಿಲ್ಲ’, ‘ಒಬ್ಬೊಬ್ರೇ ಇರೋರಿಗೆ ಇದು ಹೆಚ್ಚಾಗ್ತದೆ, ಸ್ವಲ್ಪ ಕಮ್ಮಿ ಮಾಡಿ’ – ಮುಂತಾಗಿ ತಮ್ಮ ಲೋಕಾನುಭವ, ಅಡುಗೆಯ ಅನುಭವ ಸೇರಿಸಿ ವಸ್ತುಗಳ ಪಟ್ಟಿ ಮಾಡಿದರು. ಐದು ಕಿರಾಣಿ ಅಂಗಡಿಗಳಿಗೆ ಮೊದಲ ಲಿಸ್ಟು ಹೋಯಿತು. ನಂತರ ಒಂದೊಂದು ತಿಂಗಳು ಒಬ್ಬೊಬ್ಬರ ಬಳಿ ತೆಗೆದುಕೊಳ್ಳುವುದು ಎಂದಾಯಿತು. ಕೊಡುವುದೆಂದು ಎಂತೆಂಥದೋ ವಸ್ತು ಹಾಕಬಾರದೆಂದೂ, ವಸ್ತುಗಳು ಸರಿಯಾಗಿ ಪ್ಯಾಕ್ ಆಗಿರಬೇಕು ಎಂದೂ ಸೂಚನೆ ಹೋಯಿತು.

ಏನು ತಡ? ಕಿರಾಣಿ ಅಂಗಡಿಕಾರರ ಉತ್ಸಾಹವೂ ಸೇರಿ ಪಟಪಟ ಗಂಟುಗಳು ಬಂದು ಕೂತವು. ವಿಲೇವಾರಿ ಶುರುವಾಗುವ ಮೊದಲು ‘ಕೊಟ್ಟೆನೆಂಬ ಅಹಂಕಾರ’ ಬೆಳೆಯಬಾರದು ಎಂದು ಮತ್ತೊಮ್ಮೆ ಸೇರಿ ಚರ್ಚೆ ಮಾಡಿದರು.

‘ಇದು ಕೆರೆ ನೀರನ್ನ ಕೆರೆಗೆ ಚೆಲ್ಲೋದು. ಬಿರುಬೇಸಿಗೇಲಿ ಎಲ್ಲಕಡೆ ಕೆರೆ, ಹಳ್ಳ, ಬಾವಿ ಒಣಕ್ಕಂಡರ‍್ತಾವೆ. ಅವು ತುಂಬಕ್ಕೆ ಮಳೆನೇ ಸುರೀಬೇಕು. ನಾವು ನಮ್ಮ ಹಳ್ಳದ ನೀರು ಬತ್ತಿಲ್ಲದೇ ಇರೋದ್ರಿಂದ ಬೇಕಾದವ್ರು ಕುಡಿಯೋ ನೀರು ತಗಳಿ ಅಂದಂಗೆ ಇದು. ಗೊತ್ತಾಯ್ತಾ? ಅಷ್ಟಕ್ಕೂ ಈ ಹಳ್ಳದ ನೀರು ಯಾರ‍್ದು? ಇದರಲ್ಲಿ ನಿಮ್ಮೆಲ್ಲರ ಪಾಲೂ ಇದೆ. ಅದಕ್ಕೇ ನೀವೆ ಎಲ್ಲ ಹೋಗಿ ಕೊಟ್ಟು ಬರಬೇಕು. ಬಂಧುಗಳ ಮನೆಗೆ ಹೋಗ್ತಾ ಏನಾದರೂ ಒಯ್ಯಲ್ವ? ಇದೂ ಹಾಗೆ ಪ್ರೀತಿಯಿಂದ ಒಯ್ದಿರೋದು ಅಂತ ತಿಳೀಬೇಕು. ಇದು ನಮಗಷ್ಟೇ ಬಂದ ಯೋಚನೆ ಅಲ್ಲ. ಎಷ್ಟೆಷ್ಟು ಕಡೆ, ಎಷ್ಟೆಷ್ಟು ರೀತಿಯ ಸಹಾಯಗಳು ಹರಿದು ಬರ‍್ತಿದಾವೆ ವಾಟ್ಸಪ್ಪಿನಲ್ಲಿ ನೋಡ್ತೀರಲ? ಜಾತಿ, ಧರ್ಮ ಅಂತ ಜನರನ್ನ ಮೂರ್ಖರಾಗಿಸೋ ರಾಜಕಾರಣಿಗಳನ್ನ ಮೀರಿ ಆಸ್ಪತ್ರೆ ವಾರ್ಡುಗಳಲ್ಲಿ, ಶವಾಗಾರದಲ್ಲಿ, ಸ್ಮಶಾನದಲ್ಲಿ, ಅಪಾರ್ಟ್ಮೆಂಟುಗಳಲ್ಲಿ, ಊರುಕೇರೀಲಿ ಜನ ಒಳ್ಳೇತನ ತೋರಿಸ್ತಾ ಇದಾರೆ. ಕಷ್ಟ ಕಾಲದಲ್ಲೇ ಮನುಷ್ಯರ ಮನಸ್ಸಿನ ಮತ್ತೊಂದು ಒಳ್ಳೇ ಮುಖ ಹೊರಗೆ ಬರ‍್ತಾ ಇದೆ. ನಾವೂ ನಮ್ಮ ಕೈಲಾದ್ದು ಮಾಡಣ, ಅಡ್ಡಿಲ್ಲಲ?’

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಅಡ್ಡಿಲ್ಲ ಎನ್ನುವಷ್ಟು ಪುರುಸೊತ್ತೂ ಇಲ್ಲದೆ ಎಲ್ಲರೂ ಹುಕಿಯಿಂದ ತಯಾರಾದರು. ಕ್ಲಿನಿಕ್ಕಿನಲ್ಲಿದ್ದ ಗಂಟುಗಳು ಸರಸರ ವಿಲೇವಾರಿಯಾದವು. ಆದರೆ ತಮ್ಮ ಕ್ಲಿನಿಕ್ಕಿಗೆ ಬರುವವರಿಗಷ್ಟೇ ಕೊಟ್ಟರೆ ಪೇಶೆಂಟುಗಳನ್ನು ಸೆಳೆಯುವ ತಂತ್ರದಂತೆ ಆಗುತ್ತದೆ. ಹಾಗಾಗಬಾರದು ಅಂದರೆ ಅಗತ್ಯ ಇರುವವರ ಪಟ್ಟಿ ಮಾಡಿ ಕೊಡಬೇಕು ಎಂದುಕೊಂಡು ಊರಿಗೊಬ್ಬರು, ಕೇರಿಗೊಬ್ಬರನ್ನು ಸಂಪರ್ಕಿಸಿದರು. ಅವರ ಜೊತೆ ಸಿದ್ಧಪಡಿಸಿದ ಯಾದಿಯಂತೆ ವಿಲೇವಾರಿ ಶುರುವಾಯಿತು.

‘ಕೊಡುವಾಗ ಕೈನೋಡು, ತಗೊಳ್ಳುವಾಗ ಮುಖನೋಡು ಅಂತಿದ್ರು ನಮ್ಮಜ್ಜ. ಯಾರಿಗೆ ಕೊಟ್ಟೆ ಅನ್ನೋ ಗುರುತು ಮರೀಬೇಕು. ಯಾರಿಂದ ತಗಂಡೆ ಅಂತ ಮಾತ್ರ ಯಾವತ್ತೂ ನೆನಪಿಟ್ಟುಕೋಬೇಕು’ ಎಂದು ಹೇಳಿದ ಮೇಡಂ, ಇದನ್ನು ಪ್ರಚಾರ ಮಾಡಬಾರದು, ಕೊಡುತ್ತಿರುವ ಫೋಟೋ ಹಾಕಬಾರದು ಮುಂತಾದ ಶರತ್ತುಗಳನ್ನು ವಿಧಿಸಿದರು. ಆದರೆ ಜಾಲತಾಣದಲ್ಲಿ ಮಗ್ನರಾಗಿರುವ ಅವರ ಯುವಬಳಗವು, ‘ಒಂದು ಸಾಲು ಸ್ಟೇಟಸ್ ಮಾತ್ರ ಹಾಕ್ತಿವಿ, ಅದು ಬೇರೆಯೋರ ಒಳ್ಳೇ ಮುಖ ಹೊರಗೆ ಬರ‍್ಲಿಕ್ಕೆ’ ಎಂದು ಅವರ ಮಾತು ಅವರಿಗೇ ತಿರುಗಿಸಿ ಒಪ್ಪಿಗೆ ಪಡೆದವು.

***

ಅವ ಕೆಲವರಿಗೆ ಸುಬ್ಬಣ್ಣ, ದೋಸ್ತರಿಗೆ ಸುಬ್ಬು, ಉಳಿದಂತೆ ಸುಬ್ರಾಯ. ಯಾವುದೋ ಒಂದು ‘ಒಳ್ಳೆಯದು, ಸರಿ’ ಎಂದು ಅವನ ಮನಸ್ಸಿಗೆ ಹೊಕ್ಕರೆ ಮುಗಿಯಿತು, ಅವನದನ್ನು ಬಿಡುವವನಲ್ಲ. ಮೇಡಂಗೆ ಏನೇನೋ ಯೋಚನೆಗಳು ಬರುತ್ತಲೇ ಇರುತ್ತವೆ. ಕಸ ಎನ್ನುತ್ತಾರೆ, ಸಂಘಟನೆ ಎನ್ನುತ್ತಾರೆ. ಜಾಥಾ-ಪ್ರತಿಭಟನೆ ಪೋಸ್ಟರ್ ಅಂಟಿಸುವುದು, ನೋಟೀಸ್ ಬೋರ್ಡ್, ಪ್ರವಾಸಕ್ಕೆ ಕರೆದೊಯ್ಯುವುದು ಮುಂತಾಗಿ ಹೇಳಿಬಿಡುತ್ತಾರೆ. ಅವನ್ನೆಲ್ಲ ಆಗಮಾಡುವುದರಲ್ಲಿ ಇವನ ಪಾಲು ದೊಡ್ಡದಿದೆ. ಮೇಡಂ ಒಂದು ಯೋಚನೆಯಿಂದ ಇನ್ನೊಂದಕ್ಕೆ ಸರಸರ ಚಲಿಸಿಬಿಡುತ್ತಾರೆ. ಅದನ್ನೆಲ್ಲ ಮುಂದುವರೆಸಲು ಸುಬ್ರಾಯನೇ ಬೇಕಾಗುತ್ತದೆ.

ಅವನಿಗೆ ಮೇಡಂ ಕಿರಾಣಿಯ ಗಂಟು ಕೊಡುವ ಯೋಜನೆ ಹಾಕಿದಾಗ ಮೊದಲು ಸಾಧುವೋ, ಸಾಧ್ಯವೋ ಎಂಬ ಅನುಮಾನವಿತ್ತು. ಮೇಡಂ ಅವರ ತೆರಿಗೆ ಸಲಹಾಕಾರರು, ‘ನಿಂ ಮೇಡಂ ಸ್ವಲ್ಪ ಪ್ರಾಕ್ಟಿಕಲ್ ಅಲ್ಲ, ಎಲ್ರು ಕಮ್ಮಿ ಟ್ಯಾಕ್ಸ್ ತರ‍್ಸಿ ಅಂದ್ರೆ ಇವ್ರು ಜಾಸ್ತಿ ಕಟ್ಟತಿನಿ ಅಂತಾರಲ ಸುಬ್ರಾಯ?’ ಎಂದು ಹೀಗೇ ಹೇಳಿದಾಗ ಇವನಿಗೂ ಹೌದು ಎನಿಸಿದ್ದಿದೆ. ಕೆಲವೊಮ್ಮೆ ಅವರು ಹಿಂದೆಮುಂದೆ ನೋಡದೆ ಇದ್ದದ್ದು ಇದ್ದಷ್ಟು ಕೊಟ್ಟುಬಿಡುವಾಗ ಅದಕ್ಕೆಲ್ಲ ಸಾಕ್ಷಿಯಾಗಿರುವ ಇವನಿಗೆ, ‘ಅಂತರ‍್ಗೆಲ್ಲ ಹಂಗ್ ಕೊಟ್ರೆ ಏನುಪಯೋಗಿಲ್ಲ, ಮೇಡಂಗೆ ಗೊತ್ತಾಗಲ್ಲ’ ಅನಿಸಿದ್ದೂ ಇದೆ. ಆದರೆ ಅವನಿಗೆ ಒಂದು ಭರವಸೆ: ಅವರು ಯೋಚಿಸಿಯೇ ಮಾಡುತ್ತಾರೆ ಹಾಗಾಗಿ ಅದು ಸರಿಯಿರಬಹುದು ಎಂದು.

ಇವತ್ತು ಸುರಿಯುವ ಮಳೆಯಲ್ಲಿ ‘ಏಸ್ ಗಾಡಿಗೆ ಟಾರ್ಪಲ್ ಕಟ್ಕಬಾ’ರೆಂದು ತನ್ನ ದೋಸ್ತನಿಗೆ ಹೇಳಿ ಬೆಳಿಗ್ಗೆಯೇ ದೂರದೂರಿನ ಕೇರಿಯ ಕಡೆ ಹೊರಟಿದ್ದಾನೆ. ಒಂದೇಸಮ ಫೋನ್ ಮಾಡುತ್ತಿದ್ದರೂ ಅಲ್ಲಿನ ಸಂಪರ್ಕ ವ್ಯಕ್ತಿ ಗಿರೀಶನ ಫೋನ್ ತಾಗುತ್ತಿಲ್ಲ. ಏನು ಮಾಡುವುದು? ಬಾ ಎಂದು ಹೇಳಿ ಅದೆಲ್ಲಿ ಫೋನಿಟ್ಟು ಕೂತ ಅವ? ಏನಾದರಾಗಲೆಂದು ಸುಬ್ರಾಯ ಹೊರಟ. ಹೋಗುತ್ತಿರುವಾಗ ಅವನ ಮನದಲ್ಲಿ ಮಿಶ್ರ ಭಾವನೆಗಳು.

ಗ್ರಾಮಚಾವಡಿಗೆ ಅವನು ಏನನ್ನೇ ಕೇಳಿಕೊಂಡು ಹೋಗಲಿ,

‘ಈ ಸಲ್ಕೆ ಗ್ರಾಮಸಡಕ್ ಪರಿಶಿಷ್ಟಜಾತಿ ಕೇರಿಗೆ ಅಂತ ಸ್ಯಾಂಕ್ಷನ್ ಆಗದೆ’, ‘ಅದೂ, ಸುಬ್ರಾಯ, ಅಂಗಡಿ ತಗಿಯೂ ಸಾಲ ನಂ ಪಂಚಾತಿಗೆ ಬರ‍್ಡು ಬಂದದೆ, ಎಯ್ಡೂ ಎಸ್ಸಿ ಅಂತ ಬಂದದೆ’, ‘ಅದ್ ಹ್ಞಾಂಗೆಲ್ಲ ಕೊಡುಕ್ ಬರುದಿಲ್ವ, ನಾಗುಗೆ ಯಾರಿಲ್ಲ ಅದು ಬಡಾ ಹೆಂಗ್ಸು ಹೌದು, ಆದ್ರೆ ಈ ಸಲ ಇಂದಿರಾ ಆವಾಸ ಪ.ಜಾತಿ/ವರ್ಗ ಅಂತ ಬಂದದ್ಯ’

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಎಂಬಂತಹ ಉತ್ತರಗಳನ್ನು ಕೇಳಿ, ಕೇಳಿ ಈ ಪ.ಜಾತಿ/ವರ್ಗ ಅಂದರೆ ಸರ್ಕಾರದ ಎಲ್ಲಾ ಸವಲತ್ತುಗಳನ್ನೂ ಕಷ್ಟವಿಲ್ಲದೆ ಪಡೆಯುವವರು ಎಂದುಕೊಂಡದ್ದಿತ್ತು. ಆವಾಗೀವಾಗ ಮೇಡಂ, ‘ನಾವು ಮನುಷ್ಯರಾದರೆ ನಮ್ಮ ಸುತ್ತ ಇರುವ ಅವರ ಬಗ್ಗೆ ಮೊದಲು ಯೋಚಿಸಬೇಕು’ ಎಂದು ಹೇಳುವುದನ್ನು ಕೇಳಿದ್ದ. ಆ ಊರಿನ ಪ. ಜಾತಿಯ ಎರಡು ಮನೆಗಳ ತೆಂಗಿನಮರ ಹತ್ತಿ ಕಾಯಿ ಕೊಯ್ಯಲು ಯಾರೂ ಬರುತ್ತಿಲ್ಲವೆಂದಾದಾಗ ಪ್ರತಿತಿಂಗಳು ತಾನೇ ಕೊಯ್ದು ಕೊಡುತ್ತಿದ್ದ. ಅವರು ಜಾತಿ ಕಾರಣಕ್ಕೆ ಎದುರಿಸುವ ಅವಮಾನ ಹೇಗಿರಬಹುದೆಂದು ಊಹಿಸಿಕೊಂಡಿದ್ದ. ಆದರೆ ಅವನ ಬಂಧುಬಾಂಧವರ ಬಡತನ, ಕಷ್ಟಗಳು ಏನೂ ಕಡಿಮೆ ಇರಲಿಲ್ಲವಾಗಿ ಒಮ್ಮೊಮ್ಮೆ ರೇಜಿಗೆಯೆನಿಸಿದ್ದಿತ್ತು.

ಯೋಚಿಸುತ್ತ ಹೋಗುವಾಗ ಆ ಕೇರಿ ಬಂದಿತು. 45 ಮನೆಗಳ ಕೇರಿ. ಇಲ್ಲಿ ಗಿರೀಶನನ್ನು ಎಲ್ಲಿ ಹುಡುಕುವುದು ಎಂದು ನೋಡುತ್ತ ಸುರಿವ ಮಳೆಗೆ ಕೊಡೆ ಹಿಡಿದು ನಡೆದ. ಮನೆ ಮುಂದೆ ಚರಂಡಿ, ರಸ್ತೆಯಿರುವ ಚೊಕ್ಕ ಕೇರಿ. ಸಾಲಾಗಿ ಕಟ್ಟಿದ ಒಂದೇ ತರಹದ ಸಣ್ಣ ಮನೆಗಳು. ಸುಣ್ಣಬಣ್ಣ ಕಾಣದೇ ಎಷ್ಟು ದಿನಗಳಾದವೋ. ಮಳೆಯಲ್ಲಿ ತೋಯುವ ಹುಡುಗರು ಬಿಟ್ಟರೆ ಜನರಾರೂ ಕಾಣುತ್ತಿಲ್ಲ. ಸ್ವಲ್ಪ ದೂರ ಹೋದಮೇಲೆ ದೂರದಲ್ಲಿ ನದಿಯ ಕಡೆಯಿಂದ ಏನೋ ಹೊತ್ತು ತರುವುದು ಕಂಡಿತು. ‘ಯಾರ್ ಸತ್ರ ಹೆಂಗೆ?’ ಎಂದು ಜಾಗೃತನಾಗಿ ದಿಟ್ಟಿಸಿದ.

‘ಮಳೆಯಲ ಸುಬ್ರಾಯಣ್ಣ, ಹೊಳೆಯಾಗ್ ರಾಶೀ ಕಟಿಗಿ ಬತ್ತೇ ಅದೆ. ಕಟಿಗಿ ಹಿಡಿಯುಕ್ ಹೋಗಿದ್ರು’ ಎಂದು ಹುಡುಗರ ಒಂದು ತಂಡವೇ ಗಿರೀಶನೊಡನೆ ಬಂದಿತು. ನೆರೆಯಲ್ಲಿ ಕೊಚ್ಚಿಬರುವ ಮರದ ದಿಮ್ಮಿ ಎಳೆದು ತರುವುದು ಈ ಕಡೆಯ ತರುಣರಿಗೆ ಬಲು ಉತ್ಸಾಹದ, ಲಾಭದಾಯಕ ಮಳೆಗಾಲದ ಕೆಲಸ. ‘ಎಲ್ರ‍್ನು ಸಮುದಾಯ ಭವನದಾಗೆ ಕೂಡ್ಸಿಟ್ಟಿನ, ಬಂದ್ ಬಂದೆ’ ಎಂದು ಒಳಗೋಡಿದ ಗಿರೀಶ ತಲೆ ಉದ್ದಿಕೊಂಡು ಶರ್ಟೇರಿಸುತ್ತ ಬಂದ. ಅವನೊಡನೆ ಸಮುದಾಯ ಭವನಕ್ಕೆ ನಡೆದರೆ, ಇಡಿಯ ಕೇರಿಯೇ ಅಲ್ಲಿದೆ! ಚಳ್ಳೆಪಿಳ್ಳೆಗಳ ಜೊತೆಗೆ ಕೇರಿಯ ಹೆಂಗಸರೆಲ್ಲ ಅಲ್ಲಿದ್ದಾರೆ. ಅವ ಹೋದದ್ದೇ ಕಲಕಲ ನಿಂತಿತು. ‘ಎಲ್ಲ ಮಾಸ್ಕ್ ಹಾಕ್ಕಣಿ ಮತೆ’ ಎಂದು ದೂರದೂರ ನಿಲ್ಲಿಸಿ ಯಾದಿಯ ಪ್ರಕಾರ ಹಂಚಿಕೆ ಶುರುವಾಯಿತು.

‘ಇದ್ರಾಗ್ ಕಿರಾಣಿ ಸಾಮಾಣ ಬಂದದೆಯಾ?’ ‘ಪಾಮೈಲ್‌ನೂ ಅದ್ಯ?’ ‘ಮಾಗಣಪ್ತಿ ಒಳ್ಳೇದ್ ಮಾಡ್ಲಿ ನಿಮ್ಗೆ’ ‘ಈಗ ಆದ್ಮ್ಯಾಲೆ ಇನ್ನೇಷ್ಟ್ ದಿನ್ಕೆ ಬತ್ತದೆ?’ ‘ಮತ್ ಬಂದಾಗ್ ಹೇಳ್ರ’ ‘ಮತ್ ನನ್ನ ಹೆಸ್ರು ಮಾತ್ರ ಬಿಡಬ್ಯಾಡಿ, ಸುಕ್ರಿ ಹೇಳಿ, ನೆಪ್ಪಿರ್ಲಿ’ ‘ನನ್ ತಂಗಿ ವೋಮಿಗೂ ಕೆಟ್ ಪರುಸ್ತಿತಿ, ಗಂಡ ಇಲ್ಲ, ಹುಡ್ರು ಶಣ್‌ಶಣ್ಣ. ಅದ್ಕೂ ಒಂದ್ ಕೊಟ್ರಾಗ್ತಿತ್ತು’ ‘ಇದುತಂಕ ಯಾರೂ ಒಂದ್ ಜನ ಬರ‍್ನಿಲ್ಲ. ನಿಮುಗ್ ವಳ್ಳೇದಾಗ್ಲಿ’

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಮುಂತಾದ ಮಾತುಗಳು ಪ್ರೀತಿಯೇ ನಗೆಹೂವಾಗಿ ಮುಖತುಂಬ ಅರಳಿದ ಆ ಹೆಣ್ಣುಮಕ್ಕಳಿಂದ ಬಂದಾಗ ಅವನ ಶಂಕೆಗಳು ಬೆಣ್ಣೆಯಂತೆ ಕರಗಿಹೋದವು. ಸಮುದಾಯಭವನದಲ್ಲಿ ಹಾಕಿದ ಅಂಬೇಡ್ಕರ್ ಫೋಟೋ ನಸುನಗುತ್ತ ತನ್ನನ್ನೇ ದಿಟ್ಟಿಸಿದ ಅನುಭವವಾಯಿತು. ವಾಪಸು ಹೊರಡುವಾಗ ‘ನಿದಾನ, ಜ್ವಾಪಾನ, ಇಲ್ ಇಳೀಬ್ಯಾಡ್ರಿ ಜರ‍್ತದೆ, ಮಳಿಯಾಗ್ ಅಡ್ಯಾಡ್ಬ್ಯಾಡ್ರಿ ತಂಡಿಯಾದಾತು’ ಮುಂತಾದ ಕಾಳಜಿಯನ್ನು, ಪ್ರೀತಿಯನ್ನು ಹೀರಿಕೊಳ್ಳುತ್ತ ನಡೆವಾಗ ಗಿರೀಶ ಎಲ್ಲೋ ಹೋದವ ಕೂಗುತ್ತ ಬಂದ. ‘ಇದ್ ತಗಳಿ’ ಎಂದು ಮೊಟ್ಟೆ ತುಂಬಿದ ಕೊಟ್ಟೆ ಕೊಟ್ಟ. ಸರ್ಕಾರದ ಎಲ್ಲಾ ಸವಲತ್ತುಗಳನ್ನೂ ಕಸಿದುಕೊಳ್ಳುವರೆಂದು ಉಳಿದವರು ಹೇಳುವ ಜನರ ಬದುಕು, ನೈಜ ಪರಿಸ್ಥಿತಿಗಳು ‘ಒಹ್ಹೋ, ಇದೇನಪ್ಪ ಇದು’ ಎಂದು ಸುಬ್ರಾಯನಿಗೆ ಅಂಬೇಡ್ಕರ್‌ವಾದವನ್ನು ಅರ್ಥ ಮಾಡಿಸಿಬಿಟ್ಟವು.

ಹೆಚ್ಚುಕಮ್ಮಿ ಉಳಿದ ದಿನಗಳಲ್ಲಿ, ಉಳಿದ ಕಡೆಗಳಲ್ಲಿ, ಉಳಿದವರ ಅನುಭವವೂ ಇದೇ ಆಯಿತು. ‘ಮತ್ ಬಂದ್ರೆ ನಮ್ಗೂ ಹೇಳಿ ಅಕಾ’ ಎಂಬ ಮಾತು ಪದೇಪದೇ ಕೇಳಿಬಂತು. ‘ಇದು ಎಲ್ಲಿಂದನು ಬರುದಲ್ಲ ಮಾರಾಯ್ತಿ. ತರುದು ನಾವೆಯ’ ಎಂದರೂ, ‘ಹ್ಯಂಗಾರ ಆಗ್ಲಿ, ಮತ್ ಬಂದಾಗ ಹೇಳಿ ಅಕಾ?’ ಎಂಬ ಕೇಳಿಕೆಗಳು ಹೋದಲ್ಲಿಯವರೆಗೂ ಹಿಂಬಾಲಿಸಿದವು.

‘ಇದೆಲ್ಲ ಏನಂದ್ರೆ ತಮ್ಮ ಕಷ್ಟಕಾಲದಲ್ಲಿ ಯಾವ್ದೋ ಸಹಾಯ ಖಂಡಿತಾ ಸಿಗುತ್ತೆ ಅನ್ನೋ ಬಗ್ಗೆ ಜನರಿಗೆ ವಿಶ್ವಾಸನೇ ಹುಟ್ಟಿಲ್ಲ ಅಂತ ತೋರಿಸುತ್ತೆ. ಸರ್ಕಾರದಿಂದ್ಲೇ ಆಗ್ಲಿ, ಎಲ್ಲಿಂದನೇ ರ‍್ಲಿ, ಇಂಥದೇನೋ ಹನಿ ಪ್ರೀತಿ ಸಿಕ್ಕರೂ ಅದೇ ತಮ್ಮ ಪುಣ್ಯ ಅಂತ ಅಂದುಕೊಳ್ಳೋ ಹಾಗೇ ಅವ್ರನ್ನ ಸಮಾಜ ಇಟ್ಟಿದೆ. ಆದ್ರೆ ಅದು ಪುಣ್ಯಫಲ ಅಲ್ಲ, ನಂ ಹಕ್ಕು ಅನ್ನುಸ್ಬೇಕು. ಆಗ ಅಂಬೇಡ್ಕರ್ ನಿಜವಾಗ್ಲೂ ನಗ್ತಾರೆ’ ಎಂದು ಮೇಡಂ ಹೇಳುವಾಗ ಅವರಿಗೆಲ್ಲ ಹೊಸ ವಿಚಾರಲೋಕಕ್ಕೆ ಪ್ರವೇಶವಾಯಿತು.

ಈಗ ತರುಣಜೀವಗಳ ಅನುಭವ, ಪರಿಚಿತ ಲೋಕ ವಿಸ್ತಾರಗೊಳ್ಳುತ್ತಿದೆ. ಕೆಲವೆಡೆ ಇದ್ದವರೂ ಇಲ್ಲದವರಂತೆ ಕೇಳಿ ಪಡೆದ ಒಂದೆರೆಡು ಘಟನೆ ಸಂಭವಿಸಿತು. ಯಾರಿಗೇ ಆಗಲಿ, ಆಹಾರ ಪದಾರ್ಥ ಅನಗತ್ಯ ಎಂದಿಲ್ಲ, ಅರ್ಹರು ಅನರ್ಹರು ಎಂಬ ಗಡಿರೇಖೆ ಅಗತ್ಯವಿರುವವರನ್ನು ತಲುಪಲು ಅಡ್ಡಿಯಾಗಬಾರದೆಂದು ಮೇಡಂ ಹೇಳಿಬಿಟ್ಟ ಮೇಲೆ ನಿರಾಳವಾಗಿ ಹಸ್ತಾಂತರಿಸಿ ಬರುತ್ತಾರೆ.

ಉದಾರತೆ ಎನ್ನುವುದೂ ಸಾಂಕ್ರಾಮಿಕವೇ ಇರಬೇಕು. ಅಂಗಡಿಕಾರರೊಬ್ಬರು ಇಂಥ ಕೆಲಸದಲ್ಲಿ ತಮ್ಮ ಪಾಲೂ ಇರಲಿ ಎಂದು ಶೇ.10 ಬಿಲ್ ಕಡಿಮೆ ಮಾಡಿದರು. ಕಷ್ಟದಲ್ಲಿರುವ ಜನರು ತಮ್ಮಷ್ಟೇ ಕಷ್ಟದಲ್ಲಿರುವ ಮತ್ತೊಬ್ಬರಿಗೂ ಸಹಾಯ ಸಿಗಲೆಂದು ಜಾತಿಧರ್ಮ ಮೀರಿ ಯತ್ನಿಸುತ್ತ ಅಂಥವರ ಮಾಹಿತಿ ಒದಗಿಸುವರು. ಒಂದು ಧರ್ಮದ ಜಾಗೃತಿ ಸಮಿತಿಯ ಅಧ್ಯಕ್ಷರಾಗಿರುವವರೊಬ್ಬರು ‘ಇವರಿಗೂ ಕೊಡ್ತಿರಾ ನೋಡಿ’ ಎಂದು ಐದು ಜನರ ಲಿಸ್ಟ್ ಕಳಿಸಿದರು. ಆ ಐವರಲ್ಲಿ ಇಬ್ಬರು ಅವರ ಸಂಘಟನೆ ದ್ವೇಷಿಸುವ ಮತದವರೇ ಇದ್ದರು. ಕ್ಲಿನಿಕ್ಕಿನಲ್ಲಿಟ್ಟ ಗಂಟು ನೋಡಿ ಏನೆಂದು ವಿಚಾರಿಸಿ ಇಂಥ ಕೆಲಸಕ್ಕಿರಲಿ ಎಂದು ಶಾರದಕ್ಕೋರು ಐದುಸಾವಿರ ಕೊಟ್ಟು ಹೋದರು. ಸುಬ್ರಾಯ ತನ್ನ ಅರ್ಧ ವೇತನವನ್ನು ಕಿರಾಣಿ ಹಂಚಿಕೆಗೆ ಕೊಟ್ಟು ‘ಅದು ಈ ವರ್ಷದ ದೇವಕಾರ್ಯ’ ಎಂದುಬಿಟ್ಟ.

‘ಮನುಷ್ಯರೊಳಗೆ ಉದಾರತೆ, ಪ್ರೀತಿ, ಕರುಣೆಗಳೂ ಇವೆ. ಕೇಡಿಗತನವೂ ಇದೆ. ಯಾವ ಕಾಲ ಯಾವುದನ್ನು ಹೆಚ್ಚು ಮುನ್ನೆಲೆಗೆ ತಂದಿತು ಎನ್ನುವುದರ ಮೇಲೆ ಅದು ಸುವರ್ಣ ಯುಗವೋ, ಕತ್ತಲ ಯುಗವೋ ಎಂದು ನಿರ್ಧರಿಸಲ್ಪಡುತ್ತದೆ. ಕೋವಿಡ್ ಸಂಕಷ್ಟವು ಮನುಷ್ಯ ಮನದ ಸುಪ್ತ ಒಳ್ಳೆಯತನಗಳನ್ನು ಬಯಲಿಗೆಳೆದಿದೆ. ಎಲ್ಲೆಲ್ಲಿಂದಲೋ ಯಾವ್ಯಾವುದೋ ರೂಪದಲ್ಲಿ ಸಹಾಯದ ನದಿ ಗುಪ್ತಗಾಮಿನಿಯಾಗಿ ಹರಿಯತೊಡಗಿದೆ. ಆ ನಿಟ್ಟಿನಲ್ಲಿ ಇದು ಒಳ್ಳೆಯಕಾಲ. ನನಗಂತೂ ನಾಳಿನ ಬಗೆಗೆ ಭರವಸೆ ಮೂಡಿದೆ’ ಎಂದು ಮೇಡಂ ತಮ್ಮ ಡೈರಿಯಲ್ಲಿ ಬರೆದಿಟ್ಟುಕೊಂಡರು. * ಪದಗಳ ಅರ್ಥ ಕೊಚ್ಚು = ವಸ್ತು ರೂಪದ ಕೂಲಿ ಅಕಾ = ಆಯ್ತಾ ಕೊಟ್ಟೆ = ಪೊಟ್ಟಣ * ಫೋಟೋ : ಎಸ್. ವಿಷ್ಣುಕುಮಾರ್

* ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ ; ‘ನಂಗೆ ಅಯ್ಯೋಪಾಪ ಅಂದೋರೆಲ್ಲ ಸತ್ತೋಗ್ತಾರೆ’

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ‘ಮನೆ ಬೆಲೆ ಏನಂತ ಗೊತ್ತಾಗಕ್ಕೆ ಕೊರೊನಾ ಬರಬೇಕಾಯ್ತು’  

Published On - 11:50 am, Tue, 22 June 21

ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
ನನ್ನ ವಿರುದ್ಧ ವಿನಾಕಾರಣ ದೂರು ಸಲ್ಲಿಸಲಾಗಿದೆ: ರಾಕೇಶ್ ಮಲ್ಲಿ
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
‘ರಾಜ್​ಕುಮಾರ್ ಎಂಬ ಹೆಸರು ಕನ್ನಡ ಸಿನಿಮಾದ ಅಭಿವೃದ್ಧಿಗೆ ಕಾರಣ’: ಬರಗೂರು
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ರ‍್ಯಾಂಡಮ್ಮಾಗಿ ಗುಂಡು ಹಾರಿದ ಕಾರಣ ಪ್ರಾಣ ಉಳಿದಿದ್ದೇ ಹೆಚ್ಚು: ದೊಡ್ಡಬಸಯ್ಯ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಪಹಲ್ಗಾಮ್ ದಾಳಿ ಹಿನ್ನೆಲೆ ದೆಹಲಿಯಲ್ಲಿ ಸರ್ವ ಪಕ್ಷಗಳ ಸಭೆ ಆರಂಭ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಸಿಡಿದ ಒಂದೇ ಗುಂಡು ಕ್ಷಣಾರ್ಧದಲ್ಲಿ ಪತಿಯ ಪ್ರಾಣ ತೆಗೆದುಕೊಂಡಿತು: ಪಲ್ಲವಿ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಅಣ್ಣಾವ್ರ ಹುಟ್ಟುಹಬ್ಬವನ್ನು ಭಿನ್ನವಾಗಿ ಆಚರಿಸಿದ ‘ಸಿಟಿಲೈಟ್ಸ್’ ತಂಡ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಚೆನಾಬ್ ನದಿಗೆ ನಿರ್ಮಿಸಿದ ಬಾಗ್ಲಿಹಾರ್ ಡ್ಯಾಂ ವಿಡಿಯೋ ಇಲ್ಲಿದೆ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಭರತ್ ಭೂಷಣ್ ಅಂತಿಮ ಸಂಸ್ಕಾರವನ್ನು ನೆರವೇರಿಸಿದ ಸಹೋದರ ಪ್ರೀತಂ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಪಹಲ್ಗಾಮ್ ಸ್ವರ್ಗದಲ್ಲಿ ತೇಲಾಡುವಾಗ ಉಗ್ರರ ಭೀಕರತೆ ಬಿಚ್ಚಿಟ್ಟ ಪಲ್ಲವಿ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ
ಚಿತೆಯಲ್ಲಿ ಮಲಗಿದ ಪತಿಯ ಕೈ ಹುಡುಕಿ ಹಿಡಿದ ಪತ್ನಿ: ಹೃದಯ ಹಿಂಡುವ ದೃಶ್ಯ