Covid Diary : ಕವಲಕ್ಕಿ ಮೇಲ್ ; ‘ಡಾಕ್ಟರ್ ಸಾಹಿಬಾ, ರುಖೋ ರುಖೋ, ಆಪನೆ ಕ್ಯಾ ಲಿಖ್ರೇ ಹೈ ಥೋಡಾ ದಿಖಾವೋ’

Migrant : ಕಾಲ್ಬೆರಳ ಸಂದಿಯಲ್ಲಿ ಶಿಲೀಂಧ್ರ ಸೋಂಕಾಗಿತ್ತು. ದುರ್ವಾಸನಾಯುಕ್ತ ರಸಕ್ಕೆ ಆಕರ್ಷಿತಗೊಂಡು ನೊಣಗಳು ಮೊಟ್ಟೆ ಇಟ್ಟಿದ್ದವು. ಅವೀಗ ಹುಳವಾಗಿ ವಿಲವಿಲ ಅನ್ನುತ್ತಿರಲು ಟರ್ಪೆಂಟೈನ್ ಬಿಟ್ಟು ಒಂದೊಂದೇ ಹುಳ ಮೂತಿ ಹೊರಹಾಕುವುದನ್ನು ಕಾದು ಹೊರಗೆಳೆಯುತ್ತಿದ್ದೆ. ಒನಕೆ ಓಬವ್ವ ಶತ್ರು ಸೈನಿಕರಿಗಾಗಿ ಒನಕೆ ಹಿಡಿದು ಅಡಗಿ ಕಾದಂತೆ ನಾನು ಆರ್ಟರಿ ಫೋರ್ಸೆಪ್ಸ್ ಹಿಡಿದು ಹುಳ ಮೂತಿ ಹಾಕುವುದನ್ನೇ ಕಾಯುತ್ತಿದ್ದೆ.

Covid Diary : ಕವಲಕ್ಕಿ ಮೇಲ್ ; ‘ಡಾಕ್ಟರ್ ಸಾಹಿಬಾ, ರುಖೋ ರುಖೋ, ಆಪನೆ ಕ್ಯಾ ಲಿಖ್ರೇ ಹೈ ಥೋಡಾ ದಿಖಾವೋ’
Follow us
ಶ್ರೀದೇವಿ ಕಳಸದ
|

Updated on:Jun 24, 2021 | 11:46 AM

‘ಹಂ ಚಿಂತಾ ಬಹುತ್ ಕರತೇ ಹಾಯ್. ಮಹಿನೆ ಮಹಿನೆ ಪೈಸಾ ಭೇಜತೇ ಹಾಯ್’ ಎಂದು ಗಹಗಹಿಸುವ ನಗುವಿನೊಂದಿಗೆ ಉತ್ತರ ಬಂತು. ತಾವಿಲ್ಲಿ ಬಂದು ದುಡಿಯುವುದೇ ನಿಮಗೋಸ್ಕರ ಎಂದು ಮನೆಯವರಿಗೆ ಹೇಳಿ ಅಷ್ಟು ಹಣ ಕಳಿಸಿದರೆ ಆಯಿತು! ಅವರೇನಾದರೂ ದುಡ್ಡು ಉಳಿಸುತ್ತಾರಾ ಎಂದು ಇಲ್ಲಿಯ ಅವರ ಮಾಲೀಕರನ್ನು ಕೇಳಿದೆ. ವರ್ಷಕ್ಕೊಮ್ಮೆ ಊರಿಗೆ ಹೋಗುವಾಗ ಲೆಕ್ಕಾಚಾರವಾಗುವುದಂತೆ. ಹೆಚ್ಚಿನವರಿಗೆ ಲೆಕ್ಕವಿಡಲೂ ಬರುವುದಿಲ್ಲ. ತಮಗೆ ಬೇಕಾದಾಗೆಲ್ಲ ಒಂದಷ್ಟು ಪಡೆಯುತ್ತಾರೆ, ಖರ್ಚು ಮಾಡುತ್ತಾರೆ. ಪ್ರತಿ ತಿಂಗಳೂ ಅವರು ಕೊಡುವ ಒಂದು ಅಕೌಂಟಿಗೆ ಇವರೇ ಸ್ವಲ್ಪ ದುಡ್ಡು ಹಾಕುತ್ತಾರೆ. ಹೋಗುವಾಗಿನ ಲೆಕ್ಕಾಚಾರಕ್ಕೆ ಆ ದಲ್ಲಾಳಿ ಬರುತ್ತಾನೆ. ಲೆಕ್ಕವಾಗಿ ಕೆಲವು ಸಾವಿರ ಇವರ ಕೈಗೆ ಬಿದ್ದರೆ ಮುಗಿಯಿತು, ದಿಲ್ ಖುಷ್. ಅದರಲ್ಲಷ್ಟು ಕುಡಿದು, ಮತ್ತೇನನ್ನೋ ಕೊಂಡು, ಮನೆ ಮುಟ್ಟುವಾಗ ಕೈಯಲ್ಲಿ ದುಡ್ಡು ಉಳಿದಿರುವುದೋ ಇಲ್ಲವೋ ದೇವರಿಗೇ ಗೊತ್ತು ಎಂದರು.

*

‘ಡಾಕ್ಟರ್ ಸಾಹಿಬಾ ರುಖೋ ರುಖೋ, ಆಪನೆ ಕ್ಯಾ ಲಿಖ್ರೇ ಹೈ ಥೋಡಾ ದಿಖಾವೋ’

ಸದೃಢ ಮೈಕಟ್ಟಿನ ಎತ್ತರದ ವ್ಯಕ್ತಿ ತಾನು ಕರೆತಂದಿದ್ದ ಹುಡುಗನನ್ನು ನಾನು ಪರೀಕ್ಷಿಸಿ, ಔಷಧಿ ಕೊಟ್ಟು ಚೀಟಿ ಬರೆಯುವಾಗ ತಡೆದ. ಯಾಕೆಂದು ಕೇಳಿದರೆ ಏನೇನೋ ಬರೆದುಬಿಟ್ಟರೆ ಅವರಿಗೆ ಕಷ್ಟವಾಗುತ್ತದೆ; ಬರಿಯ ಮೈಕೈನೋವು, ಬೆನ್ನುನೋವು ಅಷ್ಟು ಬರೆದರೆ ಸಾಕು, ದುಡ್ಡು ಬೇಕಾದರೆ ಇನ್ನೂರು ರೂಪಾಯಿ ಹೆಚ್ಚಿಗೇ ತೋರಿಸಿ ಬರೆಯಿರಿ ಎಂದ. ಔಷಧಿ ಇಂಜೆಕ್ಷನ್ನಿನ ಚಾರ್ಜೇ ನೂರೈವತ್ತು ಆಗಿರುವಾಗ ಇನ್ನೂರು ಹೆಚ್ಚು ಮಾಡುವುದು ಹೇಗೆ? ಏನಿದೆಯೋ, ಎಷ್ಟು ಕೊಟ್ಟಿರುವೆನೋ ಅಷ್ಟೇ ಬರೆಯುವವಳು ನಾನು ಎಂದೆ. ನಾನೇನು ಬರೆದೆ ಎಂದೂ ಹೇಳಿದೆ. ಅದಾದಬಳಿಕ ನಡೆದ ಚರ್ಚೆ ಹಲವು ವಿಷಯಗಳ ಕಡೆಗೆ ನನ್ನ ಗಮನವನ್ನೆಳೆಯಿತು.

ಒಮ್ಮೊಮ್ಮೆ ಅಚ್ಚರಿಯೆನಿಸುತ್ತದೆ. ನಮ್ಮೂರ ತರುಣರು ಕೆಲಸ ಅರಸಿ ಗೋವಾ, ಬೆಂಗಳೂರು, ಮುಂಬಯಿ, ರತ್ನಗಿರಿಗಳಿಗೆ ಹೋದರೆ ಇಲ್ಲಿಯ ಕೆಲಸಗಳಿಗೆ ಹೊರರಾಜ್ಯದವರು ವಿಪುಲ ಸಂಖ್ಯೆಯಲ್ಲಿ ಬಂದಿದ್ದಾರೆ. ಮೀನುಗಾರಿಕೆಗೆ ಬಂಗಾಲ, ಒರಿಸ್ಸಾದವರು ಬಂದಿದ್ದರೆ; ಜಂಗಲ್ ಕಟಿಂಗ್, ರಸ್ತೆಯ ಕೆಲಸಕ್ಕೆ ಉತ್ತರ ಕರ್ನಾಟಕದವರು ಬಂದಿದ್ದಾರೆ. ಮರಳು ಎತ್ತುವಂತಹ ಅತಿ ಶ್ರಮದ ಕೆಲಸಕ್ಕೆ ಬಿಹಾರ, ಜಾರ್ಖಂಡ್, ಯುಪಿಗಳ ಎಳಸು ತರುಣರು ಬಂದಿದ್ದಾರೆ. ಚೈನೀ ರೆಸ್ಟೋರೆಂಟ್, ಫಾಸ್ಟ್​ಫುಡ್​ಗಳಿಗೆ ನೇಪಾಳಿಗಳು, ರಸ್ತೆಬದಿಯ ತಿನಿಸು ಬೊಂಬೆ ಮತ್ತಿನ್ನೇನೇನೋ ವ್ಯಾಪಾರ ಮಾಡುತ್ತ ರಾಜಾಸ್ಥಾನಿಗಳು ನೆಲೆಯಾಗಿದ್ದಾರೆ. ಅವರು ಬಂದು ಇಲ್ಲಿನವರ ಕೆಲಸ ಹೋಗಿದೆಯೋ? ಇಲ್ಲಿನವರು ಹೊರಗೆ ಹೋಗಿ, ಕೆಲಸ ಮಾಡುವವರಿಲ್ಲದೆ ಅವರನ್ನು ಸ್ವಾಗತಿಸುವಂತಾಗಿದೆಯೋ ತಿಳಿಯದು. ಅಂತೂ ಕಂಡರಿಯದ ಯಾವುದೋ ಹೊಸ ಊರಿಗೆ ವಲಸೆ ಹೋಗಿ ಕೆಲಸ ಮಾಡಬೇಕೆಂದು ಮನುಷ್ಯರಿಗೆ ಅನ್ನಿಸುವುದಾದರೂ ಏಕೋ? ಹೊಟ್ಟೆಬಟ್ಟೆ, ಉದ್ಯೋಗಾವಕಾಶಕ್ಕೇ? ಸಾಹಸ ಪ್ರಿಯತೆಯೆ? ಹೊಸನಾಡಿನ ಕುರಿತ ರೋಚಕ ಕಲ್ಪನೆಯೇ? ನಾವೂ ಸಹ ಹಾಗೆಯೇ ಮಾಡಿದೆವಲ್ಲ? ಹುಟ್ಟಿ ಬೆಳೆದ ಹಳ್ಳಿಗಳನ್ನು ಬಿಟ್ಟು ಯಾರೂ ನೆಂಟರಿಷ್ಟರು ಇರದ, ಒಮ್ಮೆಯೂ ಬಂದಿರದ ಈ ಜಿಲ್ಲೆಯ ಒಂದು ಹಳ್ಳಿಗೆ ಬರಲಿಲ್ಲವೇ? ನಮ್ಮದು ಆಯ್ಕೆಯಾಗಿತ್ತು. ಇವರಂಥ ಹಲವರಿಗೆ ಅನಿವಾರ್ಯವಾಗಿರಬಹುದು.

ಅವರನ್ನು ನೋಡುತ್ತ ಇವೆಲ್ಲ ವಿಚಾರಗಳು ಸುಳಿದುಹೋದವು.

ಅವರು ನಮ್ಮೂರ ನದಿಯ ಎರಡೂ ಇಕ್ಕೆಲಗಳಲ್ಲಿ ಹುಲುಸಾಗಿ ಬೆಳೆದಿರುವ ಮರಳು ವಹಿವಾಟಿನ ಕೆಲಸಗಾರರು. ನದಿಯಲ್ಲಿ ಮರಳು ತೆಗೆಯುವುದು ಎಂದರೆ ಸಸಾರವಲ್ಲ. ಕಡಲಿನ ಭರತ ಇಳಿತದ ಸಮಯ ನೋಡಿ ಮಾಡಬೇಕು. ನಡುರಾತ್ರಿಯಿಂದ ಬೆಳಕು ಹರಿಯುವ ತನಕ ನದಿಯಲ್ಲೇ ಮುಳುಗಿ, ತಳದಿಂದ ಮರಳು ಎತ್ತಿತಂದು ದೋಣಿಯಲ್ಲಿ ತುಂಬುವ ಕೆಲಸ. ನೀರೊಳಗಿದ್ದೂ ಬೆವರಿಳಿಸಬೇಕಾದ ಶ್ರಮದ ಕೆಲಸ. ಒಂದಕ್ಕೆ ಅನುಮತಿ ಪಡೆದು ನೂರನ್ನು ಹೊರತೆಗೆಯುವುದರಿಂದ ಹುಶ್‌ಹುಶ್ ಆಗಿ ಮಾಡಬೇಕು. ಗುಟ್ಟಿನ ಕೆಲಸಕ್ಕೆ ಹೇಳಿದಷ್ಟು ಮಾಡುವ ನಂಬಿಕಸ್ಥರು ಬೇಕು. ಅದಕ್ಕೆ ಭಾಷೆ ಬರದ ಹೊರರಾಜ್ಯದ ಹುಡುಗರಿಗಿಂತ ಉತ್ತಮ ಆಯ್ಕೆ ಇರಲಾರದು. ಇತರ ಶ್ರಮದ ಕೆಲಸಗಳಿಗೆ ಹೋಲಿಸಿದರೆ ದುಪ್ಪಟ್ಟು ಅಥವಾ ಅದಕ್ಕಿಂತ ಹೆಚ್ಚು ದುಡ್ಡು ಸಿಗುವುದರಿಂದ ಒಮ್ಮೆಲೇ ಆಕರ್ಷಿಸುವ ಉದ್ಯೋಗ ಇದು. ಹಾಗೆಂದು ವರ್ಷಾನುಗಟ್ಟಲೆ ಮಾಡಲು ಸಾಧ್ಯವಾಗದು. ಎಂದೇ ರಟ್ಟೆಬಲದ ಹುಡುಗರು ಎಲ್ಲೆಂಲ್ಲಿಂದಲೋ ಬಂದು ಒಂದೆರೆಡು ವರ್ಷ ನಮ್ಮ ನದಿಯ ಸಖ್ಯ ಬೆಳೆಸಿ ನಡೆದುಬಿಡುತ್ತಾರೆ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಹೀಗೆ ಹೊಟ್ಟೆಪಾಡು ಮತ್ತು ಬದುಕಿನ ಕನಸುಗಳ ಬೆಂಬತ್ತಿ ಗಂಗೆ ಯಮುನೆಯರ ಮಕ್ಕಳು ನಮ್ಮೂರ ಶರಾವತಿಯ ಎರಡೂ ದಂಡೆಗಳಲ್ಲಿ ತುಂಬಿಕೊಂಡಿದ್ದಾರೆ. ಒಬ್ಬಿಬ್ಬರಿಲ್ಲ, ಸಾವಿರಾರು ಜನರಿದ್ದಾರೆ. ಅವರಿಗೆ ಶೆಡ್ಡುಗಳಲ್ಲಿ ಉಳಿಯುವ ವ್ಯವಸ್ಥೆಯನ್ನು ಅವರವರ ಮಾಲೀಕರೇ ಮಾಡಿಕೊಡುತ್ತಾರೆ.

ಮರಳಿಗೆ ಇಲ್ಲಿ ಹೊಂಯ್ಞಿಗೆ ಎನ್ನುವರು. ‘ಹೊಂಯ್ಞಿಗಿ’ಯವರಿಗೆ ನೋವು, ಗಾಯದ ಬಾಧೆ ಹೆಚ್ಚು. ಗುಂಪುಗುಂಪಾಗಿ ಇರುವುದರಿಂದ ಸಾಂಕ್ರಾಮಿಕ ಬಂದರೆ ರ‍್ರನೇ ಎಲ್ಲರಿಗೂ ಬರುವುದು. ಅವರಿಗೆ ಪಟ್ಟನೆ ಗುಣವಾಗಬೇಕು. ಒಂದಲ್ಲ, ಎರಡು ಇಂಜೆಕ್ಷನ್ನನ್ನೇ ಕೊಡಬೇಕು. ಫಳಫಳಿಸುವ ಬಣ್ಣಬಣ್ಣದ ಗುಳಿಗೆ, ಮದ್ದು ಕೊಡಬೇಕು. ಕೂಡಲೇ ತಾಕತ್ತು ಬರುವಂತೆ ಏನಾದರೂ ಕೊಡಬೇಕು. ಕೊಟ್ಟದ್ದಕ್ಕೆ ಹೆಚ್ಚು ದುಡ್ಡೇ ಇರಬೇಕು. ಯಾಕೆಂದರೆ ಕೊಡುವವರು ಅವರಲ್ಲ, ಅವರ ಮ್ಯಾನೇಜರು! ಕೊಟ್ಟದ್ದಕ್ಕಿಂತ ಹೆಚ್ಚು ನಮೂದಿಸಿ ದುಡ್ಡು ಪಡೆದು, ಅದರಲ್ಲಿ ಅವರಿಗಷ್ಟು ಕೊಟ್ಟರೆ ಖುಷಿ.

ಇಂಥದೆಲ್ಲ ನಮ್ಮಂಥವರ ಬಳಿ ನಡೆಯದು. ಎಂದೇ ಸಾಧಾರಣವಾಗಿ ಅವರಿರುವ ಶೆಡ್ಡಿನ ಬಳಿಯೇ ತಮ್ಮ ಶೆಡ್ಡು ಹಾಕಿಕೊಂಡು ಹೆಚ್ಚು ದುಡ್ಡು ಸುಲಿಗೆ ಮಾಡಿ, ಮನಸ್ಸಿಗೆ ಬಂದದ್ದನ್ನೆಲ್ಲ ಜೋಡಿಸಿ ಕೊಡುವ ನಕಲಿ ವೈದ್ಯರೇ ಅವರಿಗೆ ಹೆಚ್ಚು ಪ್ರಿಯ. ಒಬ್ಬ ನಕಲಿ ವೈದ್ಯನಂತೂ ಹಸ್ತಸಾಮುದ್ರಿಕ ಬಲ್ಲವನಂತೆ. ಮದ್ದಿನ ಜೊತೆಗೆ ಉಚಿತವಾಗಿ ಕೈನೋಡಿ ಭವಿಷ್ಯ ಹೇಳುವನಂತೆ. ಕೇಳುವುದೇನು?! ಇದರ ಜೊತೆಗೆ ಕೊನೆಮೊದಲಿರದ ಬೇಸರ, ಗಾಯ, ನೋವು, ಏಕತಾನತೆಗಳಿಗೆ ಆಸ್ಪತ್ರೆ ಮದ್ದಿಗಿಂತ ಗಾಂಜಾ, ಕುಡಿತವೇ ಲೇಸೆಂದು ಅವರು ನಂಬಿದ್ದಾರೆ. ತಮ್ಮ ನೆಲದಿಂದ ತಂದ ಮಲೇರಿಯಾಗೆ ಯಾವ ಸಲಹೆಗಿಂತ ಮೊದಲೇ ಕ್ಲೋರೋಕ್ವಿನ್ ನುಂಗಲು ಕಲಿತುಬಿಟ್ಟಿದ್ದಾರೆ.

ಆದರೆ ಅವರೂ ನಮ್ಮಲ್ಲಿಗೆ ಆವಾಗೀವಾಗ ಬರುವುದಿದೆ. ಬಂದಾಗ ಇದ್ಯಾವ ತರಹದ ಹಿಂದಿ ಎಂದು ಅಚ್ಚರಿಪಟ್ಟು ಕೈಸನ್ನೆ ಬಾಯಿಸನ್ನೆಯಲ್ಲೇ ಹೆಚ್ಚು ಸಂಭಾಷಿಸುತ್ತೇನೆ. ಅವರನ್ನು ಕರೆತರುವ ಕನ್ನಡದ ಮ್ಯಾನೇಜರು ಸಹ ಕೈಸನ್ನೆ ಬಾಯಿಸನ್ನೆಯನ್ನೇ ಅವಲಂಬಿಸಿರುತ್ತಾರೆ. ಇಡಿಯ ಗುಂಪಿಗೊಬ್ಬ ಮುಂದಾಳು, ಸ್ವಲ್ಪ ಭಾಷೆ ಬಲ್ಲವ, ಹೇಳಿದ್ದು ಅರ್ಥಮಾಡಿಕೊಳ್ಳುವವ ಇರುತ್ತಾನೆ. `ಹ್ಯಾಂ ದರದ್ ಕರತಾ ಹಾಯ್’ ಎಂದು ಮಾತುಮಾತಿಗೆ ‘ಹಾಯ್’ ಸೇರಿಸುವ, ಮಿರಮಿರ ಮಿಂಚುವ ಚರ್ಮದ, ವಲಸಿಗರ ಗಾಢ ಕುರುಹುಗಳಿರುವ ಹುಡುಗರನ್ನು ನೋಡುವಾಗ ಫಲವತ್ತಾದ ಭೂಮಿ, ಗಣಿ, ಕಾಡು, ಪ್ರಕೃತಿ ಸಂಪನ್ಮೂಲ ಇರುವ ಗಂಗಾತಟವೇಕೆ ತನ್ನ ಮಕ್ಕಳನ್ನು ಇಷ್ಟು ನಿರ್ಗತಿಕರನ್ನಾಗಿಸಿದೆಯೋ ಎಂದು ಬೇಸರವಾಗುತ್ತದೆ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಕಳೆದ ಸಲ ಲಾಕ್‌ಡೌನಿನಲ್ಲಿ ಅವರು ಊರಿಗೆ ಹೋಗಲಿಲ್ಲ. ಕಟ್ಟಡ ಕೆಲಸಗಳಿಗೆ ವಿನಾಯ್ತಿ ಇದ್ದಿದ್ದರಿಂದ, ಮರಳು ಎಂದಿಗೂ ಬೇಕಾದ ವಸ್ತುವೇ ಆದ್ದರಿಂದ, ಮರಳನ್ನು ತೆಗೆದು ಬೃಹತ್ ಪ್ರಮಾಣದಲ್ಲಿ ಸಂಗ್ರಹಿಸಿದರು. ಮಾಡಲು ಕೆಲಸವಿದೆ, ಊಟತಿಂಡಿ ಸಿಗುತ್ತದೆ ಎಂದು ಊರಿಗೆ ಹೋಗದೆ ಉಳಿದಿದ್ದರು. ಒಂದು ಸಂತಸದ ಸಂಗತಿಯೆಂದರೆ ಮಾಸ್ಕ್ ನಿಯಮವನ್ನು ಈ ಊರವರಿಗಿಂತ ಚೆನ್ನಾಗಿ ಪಾಲಿಸಲು ಕಲಿತಿರುವುದು. ಒಂದುಸಲ ಬಂದಾಗ ತಮಗೆ ಈ ಸ್ವಲ ಯಾವ ಜ್ವರವೂ ಬರಲಿಲ್ಲ, ಕೋವಿಡ್ ಅಂತೂ ಬರಲೇ ಇಲ್ಲ ಎಂದರು. ವೇತನ, ವಸ್ತು ಪೂರೈಸುವ ಒಬ್ಬ ಮ್ಯಾನೇಜರಿನ ಸಂಪರ್ಕ ಬಿಟ್ಟರೆ ಹೊರಗೆ ಹೋಗುವುದು ಇಲ್ಲವಾಗಿ ಕೋವಿಡ್ ಬಾಧಿಸದೆ ದೂರವೇ ಉಳಿಯಿತೋ, ಅಥವಾ ಹೆಸರು, ಫೋನ್ ನಂಬರ್ ಬರೆದಿಟ್ಟುಕೊಳ್ಳುವ ಈ ಮೇಡಮ್ಮಿನ ಸಹವಾಸ ಬೇಡವೆಂದು ಇಲ್ಲಿ ಬರಲಿಲ್ಲವೋ ಶರಾವತಿಯೇ ಹೇಳಬೇಕು.

ಅವತ್ತು ಬಂದವ ಬಿಹಾರಿನ ಒಬ್ಬ ಹುಡುಗ. ಅವ ಬಂದದ್ದು ಕುತ್ತಿಗೆಯ ನೋವು ಎಂದು. ಅಂಗಿ ತೆಗೆಸಿ ನೋಡಿದರೆ ಕುತ್ತಿಗೆಯ ಒಂದು ಪಕ್ಕ ದೊಡ್ಡ ಗಂಟು ಇದೆ. ಬಹುದಿವಸಗಳಿಂದ ಇದೆ ಎನ್ನುತ್ತಿದ್ದಾನೆ. ಕೃಶಶರೀರಿ. ಕಳಾಹೀನ ಬಿಳಿ ಚರ್ಮ. ಅದು ಟಿಬಿಯೋ ಲಿಂಫೋಮವೋ ಇರಲೂಬಹುದು. ರಕ್ತ ತಪಾಸಣೆ, ಬಯಾಪ್ಸಿಯಾಗಬೇಕು. ಇಂಜೆಕ್ಷನ್ನಿನಿಂದ ಉಪಯೋಗವಿಲ್ಲ ಎಂದರೂ ಕೇಳರು. ಶೆಡ್ಡಿನ ಡಾಕ್ಟರು ಮೂರು ದಿನಕ್ಕೊಂದರಂತೆ ಹತ್ತು ಇಂಜೆಕ್ಷನ್ ಹಾಕಿ ಒಮ್ಮೆ ಕಡಿಮೆ ಮಾಡಿದ್ದರಂತೆ. ಇದು ಹಾಗೆ ಕಡಿಮೆಯಾಗುವುದಲ್ಲ, ನಿಮ್ಮ ಮ್ಯಾನೇಜರಿಗೆ ಹೇಳುತ್ತೇನೆ, ದೊಡ್ಡಾಸ್ಪತ್ರೆಗೆ ತೋರಿಸಲು ಚೀಟಿ ಬರೆದುಕೊಡುತ್ತೇನೆ ಎಂದು ಬರೆಯತೊಡಗಿದೆ.

ನಾನು ಹೀಗೆಂದದ್ದೇ ಅವರು ಬೆಚ್ಚಿಬಿದ್ದರು. ಏನು ಬರೆಯುತ್ತಿದ್ದೀರೆಂದು ಕೇಳಿದರು. ನಾನು ಹೇಳಿದಂತೆ ಬರೆಯಬಾರದಂತೆ. ಅವನಿಗೆ ಗಹನ ತೊಂದರೆ ಇದೆಯೆಂದು ಮ್ಯಾನೇಜರನಿಗೆ ಗೊತ್ತಾದರೆ ಮೊದಲು ಅವನನ್ನು ಮನೆಗೆ ಕಳಿಸುತ್ತಾನಂತೆ. ಗಟ್ಟಿ ಇರುವವರು ಮಾತ್ರ ಕೆಲಸಕ್ಕೆ ಬನ್ನಿ, ಕಾಯಿಲೆಯವರು ಬರುವುದೇ ಬೇಡ ಅನ್ನುತ್ತಾನಂತೆ. ಮೊದಲೇ ಈ ಹುಡುಗ ಸಣ್ಣವ. ಸುಳ್ಳು ದಾಖಲೆಯಲ್ಲಿ ಹದಿನೆಂಟು ಆಗಿದೆ. ಆದರೆ ಎಷ್ಟು ಎಳಸು ಮುಖ! ನನ್ನನ್ನು ದಿಟ್ಟಿಸಲೂ ಒಲ್ಲದ ಚಂಚಲ ಕಣ್ಣುಗಳು. ನಿಂತಲ್ಲೇ ನೆಟಿಕೆ ಮುರಿಯುವ ಚಡಪಡಿಕೆಯ ಕೈಗಳು. ಹದಿನೈದಾಗಿರಬಹುದು ಅನಿಸಿತು. ಯಾಕೋ ಅವನ ಮ್ಲಾನ ಮುಖ ನೋಡಿ ಅದು ಹಿಗ್ಗು ಮರೆತ ಬದುಕು ಎಂದು ಅನಿಸಿಬಿಟ್ಟಿತು.

ಅವನ ಜೊತೆ ಬಂದವನ ವಿಚಾರಿಸಿದೆ. ಆ ಹುಡುಗನ ಅಪ್ಪ ಗಂಗೆಗೆ ನೆರೆ ಬಂದಾಗ ಮುಳುಗಿ ಸತ್ತಿದ್ದಾನೆ. ಅವನ ಬಳಿಕ ಅವನಮ್ಮನಿಗೆ ಐದು ಮಕ್ಕಳಿವೆ. ಅಲ್ಲಿ ಕೂಲಿಯಿಲ್ಲ. ಎಲ್ಲೋ ಒಮ್ಮೆ ಸಿಗುವ ಕೂಲಿಗೆ ಹೋದರೂ ಹೊಟ್ಟೆ ತುಂಬುವುದಿಲ್ಲ. ಹಾಗಾಗಿ ಅವನು ಇಲ್ಲಿ ಬಂದು ದುಡಿಯಲೇಬೇಕು. ಅಲ್ಲಿ ಕೂಲಿಗೆ ಹೋಗುತ್ತಿದ್ದರೂ ದುಡಿದದ್ದನ್ನು ಮನೆಗೆ ಕೊಡುತ್ತಿರಲಿಲ್ಲವಂತೆ. ಗಾಂಜಾ ಹೊಡೆಯುತ್ತ ಯರ‍್ಯಾರ ಜೊತೆಯೋ ಓಡಿಹೋಗುತ್ತಿದ್ದನಂತೆ. ಅದಕ್ಕೇ ಅವಳಮ್ಮ ದಲ್ಲಾಳಿಯನ್ನು ಹಿಡಿದು ಇಲ್ಲಿಗೆ ಕಳಿಸಿಬಿಟ್ಟಿದ್ದಾಳೆ. ಮತ್ತೆ ಮನೆಗೆ ಬರುವುದೇ ಬೇಡ ಎಂದಿದ್ದಾಳೆ. ಅಲ್ಲಿಂದ ಹಲವರು ಕರ್ನಾಟಕಕ್ಕೆ ಬಂದು ಬೇರೆಬೇರೆ ಕಡೆ ಇದ್ದಾರೆ. ಜೊತೆ ಬಂದವ ಅವನ ಊರಿನವನೇ. ಸಡಿಲ ಬಿಟ್ಟರೆ ಓಡಿಹೋದಾನು, ಅವನನ್ನು ಎಲ್ಲಿಗೂ ಕಳಿಸಬೇಡ ಎಂದು ಈ ಕರೆತಂದವನಿಗೆ ಅವನಮ್ಮ ತಾಕೀತು ಮಾಡಿದ್ದಾಳೆ. ಅವನ ದುಡಿಮೆಯ ಸ್ವಲ್ಪ ಭಾಗ ಪ್ರತಿತಿಂಗಳು ಅಮ್ಮನಿಗೆ ಎಂಒ ಕಳಿಸುತ್ತಾರೆ. ಅವನ ಕತೆ ಹೇಳುತ್ತ ಹಿರಿಯನು ಆವಾಗೀವಾಗ ಅವನ ತಲೆಮೇಲೆ ಮೊಟಕುತ್ತಿದ್ದ. ಅವನಿಗೇಕೆ ಹೊಡೆಯುತ್ತೀರಿ ಎಂದರೆ, ‘ಯೆ ಭಾನಚೋದ್ ಹಾಯ್, ಖತರ‍್ನಾಕ್ ಆದಮಿ’, ಕುಡಿಯಲು ದುಡ್ಡು ಕೊಡದಿದ್ದರೆ ಓಡಿಹೋಗುತ್ತೇನೆ ಎನ್ನುತ್ತಾನೆಂದು ಮತ್ತೆ ಮೊಟಕಿದ.

ಅಯ್ಯೋ! ಇಷ್ಟು ಸಣ್ಣವ ಕುಡಿಯುವನೇ ಅಂದರೆ ಅವರು ಅವನ ತಲೆ ಮೇಲೆ ಮತ್ತೊಮ್ಮೆ ಮೊಟಕಿ ನಗಾಡಿದರು. ಅವರು ದೂಡಿದ ಹೊಡೆತಕ್ಕೆ ಅವ ಕೆಳಗೆ ಬಿದ್ದ. ಅವನಿಗಾಗಲೇ ಮದುವೆಯಾಗಿದೆಯಂತೆ. ಅವನ ಹೆಂಡತಿ ಅವನ ತಾಯಿಯ ಜೊತೆ ಇರುವಳಂತೆ! ಇವ ಹೋದಾಗ ಅವಳಿಗೆ ಸಿಕ್ಕಾಪಟ್ಟೆ ಹೊಡೆಯುವನಂತೆ. ಅಲ್ಲಿ ಸಣ್ಣ ವಯಸ್ಸಿಗೇ ಮದುವೆ ನಡೆಯುವುದಂತೆ. ಹುಡುಗಿಯರಿಗೆ ಹತ್ತು ಹನ್ನೆರೆಡಕ್ಕೆ, ಹುಡುಗರಿಗೆ ಹದಿನೈದರ ಹೊತ್ತಿಗೆ ಮದುವೆ ಮಾಡಿಬಿಡುವರಂತೆ.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಹೇ ರಾಮ್! ನಿನ್ನ ಗಂಗೆಯ ಮಡಿಲೇಕೆ ಉರಿವ ಚಿತೆಗಳ ನುಂಗಿ ಈ ಪರಿ ಕೊಳಕಾಗಿದೆ?

ಎಷ್ಟೋ ದಿನ ಅವನ ಮುಖ ಕಣ್ಣೆದುರು ಕುಣಿದು ತಳಮಳಗೊಳಿಸುತ್ತಿತ್ತು. ನಂತರ ಬೇರೆಬೇರೆ ತಂಡದವರು ಬಂದರು. ಈ ಇವ ಏನಾದನೋ ತಿಳಿಯಲಿಲ್ಲ. ಅವನಂಥ ಒಬ್ಬರಾದರೂ ಪ್ರತಿ ತಂಡದಲ್ಲಿದ್ದಾರೆ. ಅಂಥ ಹುಡುಗರು ಬಂದಾಗೆಲ್ಲ ಹೊಟ್ಟೆಯಲ್ಲಿ ತಳಮಳ ಏಳುತ್ತದೆ. ಹೀಗೆ ರಾಜ್ಯ ಬಿಟ್ಟು ಬರುವಂತೆ ಯಾಕೆ ಆಯಿತು ಎಂದು ಕೆಲವರನ್ನು ಕೇಳಿರುವೆ. ಇತ್ತೀಚೆಗೆ ಬಂದ ಒಂದು ತಂಡಕ್ಕೆ ನಿಮ್ಮ ಊರಿನ ಪರಿಸ್ಥಿತಿ ಹೇಗಿದೆಯೆಂದು ಕೇಳಿದರೆ, ತಮ್ಮ ಮನೆಯವರು ಅಲ್ಲಿ ಸಾಯಲು ಕ್ಯೂ ಹಚ್ಚಿದ್ದಾರೆಂದು ಹ್ಹಹ್ಹಹ್ಹ ಎಂದು ನಗಾಡಿದರು. ಇಂಥ ಸಂಕಟಕ್ಕೆ ನಗು ಬರುವುದು ಹೇಗೆ? ನಿಮಗೆ ಮನೆಯ ಚಿಂತೆಯೇ ಇಲ್ಲವೇ? ಅವರಲ್ಲಿ ಒದ್ದಾಡುವಾಗ ನೀವು ನಗುವಿರಲ್ಲ?

‘ಹಂ ಚಿಂತಾ ಬಹುತ್ ಕರತೇ ಹಾಯ್. ಮಹಿನೆ ಮಹಿನೆ ಪೈಸಾ ಭೇಜತೇ ಹಾಯ್’ ಎಂದು ಗಹಗಹಿಸುವ ನಗುವಿನೊಂದಿಗೆ ಉತ್ತರ ಬಂತು. ತಾವಿಲ್ಲಿ ಬಂದು ದುಡಿಯುವುದೇ ನಿಮಗೋಸ್ಕರ ಎಂದು ಮನೆಯವರಿಗೆ ಹೇಳಿ ಅಷ್ಟು ಹಣ ಕಳಿಸಿದರೆ ಆಯಿತು! ಅವರೇನಾದರೂ ದುಡ್ಡು ಉಳಿಸುತ್ತಾರಾ ಎಂದು ಇಲ್ಲಿಯ ಅವರ ಮಾಲೀಕರನ್ನು ಕೇಳಿದೆ. ವರ್ಷಕ್ಕೊಮ್ಮೆ ಊರಿಗೆ ಹೋಗುವಾಗ ಲೆಕ್ಕಾಚಾರವಾಗುವುದಂತೆ. ಹೆಚ್ಚಿನವರಿಗೆ ಲೆಕ್ಕವಿಡಲೂ ಬರುವುದಿಲ್ಲ. ತಮಗೆ ಬೇಕಾದಾಗೆಲ್ಲ ಒಂದಷ್ಟು ಪಡೆಯುತ್ತಾರೆ, ಖರ್ಚು ಮಾಡುತ್ತಾರೆ. ಪ್ರತಿ ತಿಂಗಳೂ ಅವರು ಕೊಡುವ ಒಂದು ಅಕೌಂಟಿಗೆ ಇವರೇ ಸ್ವಲ್ಪ ದುಡ್ಡು ಹಾಕುತ್ತಾರೆ. ಹೋಗುವಾಗಿನ ಲೆಕ್ಕಾಚಾರಕ್ಕೆ ಆ ದಲ್ಲಾಳಿ ಬರುತ್ತಾನೆ. ಲೆಕ್ಕವಾಗಿ ಕೆಲವು ಸಾವಿರ ಇವರ ಕೈಗೆ ಬಿದ್ದರೆ ಮುಗಿಯಿತು, ದಿಲ್ ಖುಷ್. ಅದರಲ್ಲಷ್ಟು ಕುಡಿದು, ಮತ್ತೇನನ್ನೋ ಕೊಂಡು, ಮನೆ ಮುಟ್ಟುವಾಗ ಕೈಯಲ್ಲಿ ದುಡ್ಡು ಉಳಿದಿರುವುದೋ ಇಲ್ಲವೋ ದೇವರಿಗೇ ಗೊತ್ತು ಎಂದರು.

ವಾರ ಕೆಳಗೆ ಒಂದು ತಂಡ ಬಂದಿತ್ತು. ಎಲ್ಲರಿಗೂ ಡಿಸೆಂಟ್ರಿ. ಅವರಿಗೆಂಥ ಆಹಾರ ಹೇಳುವುದು ಎಂದು ಮ್ಯಾನೇಜರನನ್ನು ಪ್ರತಿನಿತ್ಯ ಏನು ಉಣ್ಣುತ್ತಾರೆ ಎಂದೆ. ‘ಅವರಲ್ಲೇ ಒಬ್ರು ಅಡ್ಗೆ ಮಾಡ್ತಾರೆ. ಕೇಜಿಗಟ್ಲೇ ಉಣ್ತಾವೆ. ಅದೆಂಥ ಮಾಡ್ಕ ತಿಂತಾರೋ’ ಎಂದು ತಲೆಯಲ್ಲಾಡಿಸಿದ. ದಿನವೂ ಕೆಜಿಗಟ್ಟಲೆ ಮೀನು, ಡಜನುಗಟ್ಟಲೆ ಮೊಟ್ಟೆ ತಿನ್ನುವರಂತೆ. ತರಕಾರಿ, ಹಾಲು, ಹಣ್ಣು ತರುವುದಿಲ್ಲ. ವಾರಕ್ಕೊಮ್ಮೆ ಚಿಕನ್ನು. ತಿಂಡಿ, ಊಟ ಬೇರೆಬೇರೆ ಇಲ್ಲ. ದಿನಕ್ಕೆರಡು ಗಡದ್ದು ಊಟ. ಲೆಕ್ಕವಿಲ್ಲದಷ್ಟು ಸಲ ಚಾಯ್. ಎಲ್ಲಕ್ಕೂ ಅನ್ನವೇ, ಅಕ್ಕಿಯೇ ಅಂತೆ.

ನಮ್ಮೂರಿನಲ್ಲಿ ಬಿಳಿಯ ಶಿಲೀಂಧ್ರ ಕ್ಯಾಂಡಿಡಿಯಾಸಿಸ್ ತುಂಬ ಸಾಮಾನ್ಯ. ಮೀನುಗಾರಿಕೆಗೆ ಸಂಬಂಧಪಟ್ಟ ಕೆಲಸ, ಕೊಟ್ಟಿಗೆ ಕೆಲಸ, ಗದ್ದೆ ತೋಟದಲ್ಲಿ ಹಸಿಮಣ್ಣಿನಲ್ಲಿ ಕೆಲಸ, ಹಳ್ಳನದಿ ಕೆರೆಬಾವಿಗಳ ನೀರಲ್ಲಿ ನಿಂತು ಮಾಡುವ ಕೆಲಸ ಹೆಚ್ಚಿರುವುದರಿಂದ ಉಗುರುಸಂದಿ, ಬೆರಳು ಸಂದಿ, ತೊಡೆ ಕಂಕುಳು ಸಂದಿ, ಕಿವಿ, ಹೊಕ್ಕುಳು, ಯೋನಿಗಳಲ್ಲಿ ಈ ಸೋಂಕು ಬಾಧಿಸುವುದು ಜಾಸ್ತಿ. ಇವರಲ್ಲೊಬ್ಬನಿಗೆ ಒಂದೇಸಮ ನೀರಲ್ಲಿ ನಿಂತು ಕೆಲಸ ಮಾಡಿ ಕಾಳ್ಬೆರಳ ಸಂದಿಯಲ್ಲಿ ಶಿಲೀಂಧ್ರ ಸೋಂಕಾಗಿತ್ತು. ದುರ್ವಾಸನಾಯುಕ್ತ ರಸಕ್ಕೆ ಆಕರ್ಷಿತಗೊಂಡು ನೊಣಗಳು ಮೊಟ್ಟೆ ಇಟ್ಟಿದ್ದವು. ಅವೀಗ ಹುಳವಾಗಿ ವಿಲವಿಲ ಅನ್ನುತ್ತಿರಲು ಟರ್ಪೆಂಟೈನ್ ಬಿಟ್ಟು ಒಂದೊಂದೇ ಹುಳ ಮೂತಿ ಹೊರಹಾಕುವುದನ್ನು ಕಾದು ಹೊರಗೆಳೆಯುತ್ತಿದ್ದೆ. ಇದು ಸಮಯ ಹಿಡಿವ ಕೆಲಸ. ಒನಕೆ ಓಬವ್ವ ಶತ್ರು ಸೈನಿಕರಿಗಾಗಿ ಒನಕೆ ಹಿಡಿದು ಅಡಗಿ ಕಾದಂತೆ ನಾನು ಆರ್ಟರಿ ಫೋರ್ಸೆಪ್ಸ್ ಹಿಡಿದು ಹುಳ ಮೂತಿ ಹಾಕುವುದನ್ನೇ ಕಾಯುತ್ತಿದ್ದೆ. ಅಂಗಾಲು, ಹಿಮ್ಮಡಿ ಒಡೆದ ಒರಟು ಚರ್ಮದ ಪಾದಗಳು. ಇತ್ತ ಚೊಕ್ಕ ಮಾಡುವ ಕೆಲಸ ನಡೆಯುವಾಗ ಜೊತೆ ಬಂದವನೊಡನೆ ಹಿಂದಿಯಲ್ಲಿ ನಡೆದ ಸಂಭಾಷಣೆಯ ಕನ್ನಡ ರೂಪ ಇದು:

‘ಗಂಗಾನದೀಲಿ ಹೆಣಗಳು ತೇಲಿರ‍್ತಿದಾವಂತೆ? ಇಲ್ಲೀಗ ದೊಡ್ ಸುದ್ದಿ ಅದು’ ‘ನಮ್ಮಲ್ ಹಂಗೆಯ. ಅದೇನ್ ಹೊಸ್ದಲ್ಲ.’ ‘ಅಂದ್ರೆ ಯಾವಾಗ್ಲೂ ಹೆಣ ತೇಲಿ ರ‍್ತಾನೆ ರ‍್ತಾವಾ?’ ‘ಹೌದ್ ಮೇಡಮ್ಮು. ಅಲ್ಲಿ ಹ್ವಟ್ಟೀಗ್ ಕಷ್ಟ. ಮಕ್ಳು ಹೆಚ್ಚು. ಸಾಲ ಹೆಚ್ಚು. ಹಂಗಾಗಿ ಮನಿಗ್ ಮನಿನೇ ಹೊಳೀಗ್ ಹಾರುದ್ ಅದೆ.’ ‘ಅಯ್ಯೋ, ನಿಂ ಸಿಎಂ ಏನಾದ್ರು ಮಾಡಬೇಕಲ ಅದ್ಕೆ?’ ‘ಪಾಪ ಅವ್ರೇನು ಮಾಡ್ತಾರೆ? ಅವ್ರಿಗೆ ಅವ್ರುದ್ದೇ ಕಸ್ಟ, ನಂ ಕಸ್ಟ ತಿಳಿಯಲ್ಲ’ ‘ಮತ್ಯಾಕೆ ಅವ್ರನ್ನ ಕರ‍್ಸಿದಿರಿ?’ ‘ಒಂದೊಂದ್ಸಲ ಒಬ್ಬೊಬ್ರು ಕರ‍್ತಾರೆ ಅಷ್ಟೆ. ನಮ್ದು ತುಂಬ ಗರೀಬಿ ರಾಜ್ಯ ಮೇಡಮ್ಮು. ಯಾರ್ ಬಂದ್ರು ಏನೂ ಮಾಡಕ್ಕಾಗಲ್ಲ, ಅಷ್ಟು ಬಡವ್ರು.’ ‘ನೋಡಿ, ಈ ಕಾಲಲ್ಲಿ ಹುಳ ಆಗಿದೆ. ಏನೂ ಮಾಡಕ್ಕಾಗಲ್ಲ ಅಂದ್ರೆ? ನಂ ಕಷ್ಟಗಳೂ ಹಾಗೇ. ರ‍್ತಾವೆ, ಅದಕ್ಕೆ ಏನಾದ್ರೂ ಮಾಡಬೇಕು, ಸುಮ್ನಿದ್ರೆ ಹುಳ ಕಾಲುಬೆರಳನ್ನೇ ತಿಂದು ಹಾಕ್ತಾವೆ.’ ‘ನೀವ್ ಹೇಳೂದು ಪಕ್ಕಾ ಅದೆ. ಸಾಯ್ಲಿ. ಆದ್ರೆ ಅಲ್ಲಿ ಕೆಲ್ಸಾ ಇಲ್ಲಲ, ಜನ ಇಲ್ಲೀ ತರ ಅಲ್ಲ. ಮಾತಾಡಿದ್ರೆ ಬರೀ ಗುದ್ದಾಟನೆ. ಅದ್ಕೇ ಅಲ್ಲಿದ್ರೆ ಬದಕಕ್ಕಾಗಲ್ಲ ಅಂತ ಗೊತ್ತಾಗಿ ಊರು ಬಿಟ್ ಬಂದ್ವಿ’

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ತಾವು ಯಾವ ದುಃಸ್ಥಿತಿಯಲ್ಲಿದ್ದೇವೆ? ಏಕೆ ಹಾಗಿದ್ದೇವೆ ಎಂದರಿಯದ ಬಡತನ, ಅಮಾಯಕತನ, ಅಜ್ಞಾನ. ಕವಿ ನೆರೂಡನಿಗೆ ಚಿಲಿ ದೇಶದ ಗಣಿಕಾರ್ಮಿಕರ ಹಸ್ತರೇಖೆಗಳು ಅವನ ದೇಶದ ಭೂಪಟದಂತೆ ಕಂಡಿದ್ದರೆ; ವಲಸೆ ಬಂದ ಈ ಹೊಂಯ್ಞಿಗೆ ಕಾರ್ಮಿಕರ ದೇಹದೊಳಗೆ ಕುಳಿತು ಕಾಲು ತಿನ್ನುವ ಹುಳುಗಳನ್ನು ಎಳೆದು ಹಾಕುವುದರಲ್ಲಿ ದೇಶದ ಭವಿಷ್ಯವಿದೆ ಅನ್ನಿಸಿತು. ಹುಳಗಳು ಆಳದವರೆಗೂ ಬೀಡುಬಿಟ್ಟಿವೆ. ಕಾದು ಎಳೆಯಬೇಕು. ಒಳಗೆ ನುಲಿದು, ಕಿತ್ತೆಳೆದು, ನೋವು ಕೊಟ್ಟಾದರೂ ಪಾದಗಳನ್ನು ಎಚ್ಚರಿಸು ಹುಳುವೇ.

* ಫೋಟೋ : ಎಸ್. ವಿಷ್ಣುಕುಮಾರ್ * ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ – 25 : ‘ಜಾತಿ ಗೀತಿ ಸಾಯ್ಲಿ ನಂಗೆ ಮೀನ ಇಟ್ಟಿರು’  * ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ‘ನಂಗೆ ಅಯ್ಯೋ ಪಾಪ ಅಂದೋರೆಲ್ಲ ಸತ್ತೋಗ್ತಾರೆ’

Published On - 11:25 am, Thu, 24 June 21

ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ವೆಂಕಟೇಶ್ವರ ಸ್ವಾಮಿಗೆ 150 ಕೆಜಿ ಪುಳಿಯೋಗರೆಯಿಂದ ಅಲಂಕಾರ
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಬಿಗ್ ಬಾಸ್​ಗೆ ಬಂದಿದ್ದಕ್ಕೆ ಸಾರ್ಥಕ ಆಯ್ತು: ಸುದೀಪ್ ನೀಡಿದ ಸರ್ಪ್ರೈಸ್​
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಅಶೋಕ ಸಾರಿಗೆ ಸಚಿವರಾಗಿದ್ದಾಗ ಬಸ್ ಟಿಕೆಟ್ ದರ ಹೆಚ್ಚಿಸಿರಲಿಲ್ಲವೇ? ಸಿಎಂ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಸಿಖ್ಖರ ಮೆರವಣಿಗೆ ವೇಳೆ ಕಾರಿನಲ್ಲಿ ಡಿಕ್ಕಿ;ಜನರಿಂದ ಪೊಲೀಸ್ ಮಗನ ವಾಹನ ಪುಡಿ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಬಿಜೆಪಿ ನಾಯಕರೊಂದಿಗೆ ರಾಜ್ಯದ ಪ್ರಸಕ್ತ ವಿದ್ಯಮಾನಗಳ ಬಗ್ಗೆ ನಡ್ಡಾ ಚರ್ಚೆ
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸೊಸೆ ಇದೇ ರೀತಿ ಬಟ್ಟೆ ಹಾಕಬೇಕು: ಹನುಮಂತನ ತಾಯಿ ಹಾಕಿದ ಷರತ್ತು ಇದು
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಸಚಿನ್ ಸಾವಿನ ಪ್ರಕರಣದಲ್ಲಿ ಖರ್ಗೆ ಪಾತ್ರವಿಲ್ಲ, ರಾಜೀನಾಮೆ ಯಾಕೆ? ಸುರೇಶ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಚಪ್ಪಾಳೆ ಮತ್ತು ಶಿಳ್ಳೆ ಗಿಟ್ಟಿಸಲು ಸೂರಜ್ ರೇವಣ್ಣ ಮಾತಾಡಿದ್ದಾರೆ: ಶ್ರೇಯಸ್
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಕೇಂದ್ರ ಸರ್ಕಾರ ನಮಗೆ ಎಲೆಕ್ಟ್ರಿಕ್ ಬಸ್​​ಗಳನ್ನು ನೀಡುತ್ತಿಲ್ಲ: ಸಚಿವ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ
ಉದಯಪುರ ಘೋಷಣೆ ಕೆಲ ರಾಜ್ಯಗಳಲ್ಲಿ ಜಾರಿಯಾಗಿಲ್ಲ: ಸತೀಶ್ ಜಾರಕಿಹೊಳಿ