Covid Diary : ಕವಲಕ್ಕಿ ಮೇಲ್ ; ಕೊರೊನಾ ಮಗಳು ಭವಿಷ್ಯ ಹೇಳಲು ಕಲಿತಿದ್ದು

Covid19 : ‘ಊರಿಗೂರೇ ಆಶ್ಚರ್ಯ ಪಟ್ಟಿತು. ಈ ಹೆಂಗಸಿಗೆ ಇಷ್ಟು ಮಾತಾಡಲು ಬಂದೀತು, ಹಾಡಲು ಬಂದೀತು ಎಂದು ಮೊದಲೇ ತಿಳಿದಿರಲಿಲ್ಲವಲ್ಲ ಎಂದು. ಅವಳ ಮನೆಯವರೂ ಈ ಇದು ತಮ್ಮನೆಯ ಬಡ್ಡು ಹೆಂಗಸೇ ಎಂದು ನಂಬಲಾರದಂತೆ ನೋಡಿದರು. ಅವರು ಹಾಗೆ ಅಚ್ಚರಿಯಲ್ಲಿರುವಾಗ ತನ್ನ ಮನೆ ಮುಂದೆ ನಿಂತು ಪೇಪರ್ ತುಂಡು ಹಿಡಿದು ಓದಿದಳು.’

Covid Diary : ಕವಲಕ್ಕಿ ಮೇಲ್ ; ಕೊರೊನಾ ಮಗಳು ಭವಿಷ್ಯ ಹೇಳಲು ಕಲಿತಿದ್ದು
Follow us
|

Updated on: Jun 09, 2021 | 7:02 AM

ಹೀಗೇ ಅವಳು ಹಗಲು ರಾತ್ರಿಗಳು ಕಳೆಯುತ್ತಿರುವಾಗ ಒಂದು ದಿನ ಸಂಜೆ ಐದು ಗಂಟೆಗೆ ಎಲ್ಲರೂ ಮನೆಯಿಂದ ಹೊರಗೆ ಬಂದು ಸದ್ದು ಮಾಡತೊಡಗಿದರು. ಇದ್ದಕ್ಕಿದ್ದಂತೆ ಎದ್ದ ಸದ್ದಿಗೆ ಲೋಕ ಬೆಚ್ಚಿ ಬಿತ್ತು. ಮಂಗಗಳು ಮರದಿಂದ ಮರಕ್ಕೆ ಜಿಗಿದವು. ಕಾಗೆಗಳು ಕಾಕಾ ಎನ್ನುತ್ತ ಹಾರತೊಡಗಿದವು. ಏನಾಯಿತೆಂದು ತಿಳಿಯದೆ ದನಗಳು ಗಾಬರಿ ಬಿದ್ದು ಬಾಲಯೆತ್ತಿ ಗಂಜಲ ಸುರಿಸಿದವು. ಮೊದಲೇ ಮನೆಯಲ್ಲಿ ಏನೂ ಮಾಡದೇ ಕೂತು ಕೂತು ಕೈ ಕೆರೆಯುತ್ತಿದ್ದ ದೇಶಭಕ್ತರ ಆ ಊರಿನಲ್ಲಿ, ಜನರೆಲ್ಲ ಬಾಗಿಲು ತೆರೆದು ಹೊರಗೆ ಬಂದರು. ಕೆಲವರು ಜಾಗಂಟೆ ಬಡಿದರೆ ಮತ್ತೆ ಕೆಲವರು ತಮಟೆ ಬಡಿದರು. ತಾಳ ಕುಟ್ಟಿದರು. ತಟ್ಟೆ ಬಡಿದರು, ಪ್ಲಾಸ್ಟಿಕ್ ಡಬ್ಬವನ್ನು ಜಪ್ಪಿ ಸದ್ದು ಹೊರಡಿಸಿದರು. ಒಟ್ಟಿನಲ್ಲಿ ಒಂದೇ ಬಾರಿ ಡಮಡಮ ಡಬಡಬ ಪಡಪಡ ಧಡಧಡ ಮುಂತಾಗಿ ನಾನಾ ಲಯ ಶೃತಿಗಳೊಂದಿಗೆ ಬಂದ ಸದ್ದಿಗೆ ನಮ್ಮ ಇವಳು ತಲೆಯನ್ನು ಕಿವಿಯನ್ನು ಕಣ್ಣನ್ನು 360 ಡಿಗ್ರಿ ತಿರುಗಿಸಿ ಶಬ್ದವನ್ನು ಗ್ರಹಿಸಿದಳು.

*

ಈಗ ನಮ್ಮೂರ ಬೆತ್ತಲೆ ರಸ್ತೆ ಮೇಲೊಬ್ಬಳು ಹುಚ್ಚಿ ಕಾಣುತ್ತಾಳೆ. ಅಯ್ಯಯ್ಯೋ, ತಪ್ಪಾಯ್ತು ತಪ್ಪಾಯ್ತು, ಅವಳು ಮೊದಲು ಹುಚ್ಚಿ ಆಗಿದ್ದಳು, ಆದರೆ ಈಗಲ್ಲ. ಈಗವಳು ಪೂರಾ ಸರಿಯಾಗೇ ಮಾತನಾಡುತ್ತಾಳೆ. ಸರಿ ದಾರಿಯಲ್ಲೇ ನಡೆಯುತ್ತಿದ್ದಾಳೆ. ನಿಜವನ್ನೇ ಎತ್ತಿ ಆಡುತ್ತಾಳೆ. ಊರು ಅವಳನ್ನು ಮಂಡೆ ಪಿರ್ಕಿ, ಹುಚ್ಚಿ ಎನ್ನುವುದು. ಅವಳು ತಾನು ಕೊರೋನಾದ ಮಗಳು ಎನ್ನುವಳು.

ಅವಳಾದರೂ ಯಾಕೆ ಹುಚ್ಚಿಯಾಗಿದ್ದಳು?

ಅವಳು ಜನಜಂಗುಳಿ ಕಂಡು ಕಂಡು ಹುಚ್ಚಿಯಾಗಿದ್ದಳು. ಅವಳು ಕಿವಿಗಡಚಿಕ್ಕುವ ಸದ್ದು ಕೇಳಿಕೇಳಿ ಹುಚ್ಚಿಯಾಗಿದ್ದಳು. ಅವಳು ಇದ್ದೆಯಾ ಬಂದೆಯಾ ಕೇಳುವವರಿಲ್ಲದೆ ಹುಚ್ಚಿಯಾಗಿದ್ದಳು. ಅವಳು ಅಲ್ಲಿ ಇಲ್ಲಿ ಎಲ್ಲೆಲ್ಲು ಕೈಚಾಚಿ ದುಡಿದು ದಣಿದು ಹುಚ್ಚಿಯಾಗಿದ್ದಳು. ಸೂರ್ಯಚಂದ್ರರ ಬೆಳಕು ಮೈಮೇಲೆ ಬೀಳದೇ ಹುಚ್ಚಿಯಾಗಿದ್ದಳು. ಅವಳು ಏಕಾಂತ ಸಿಗದೆ ಹುಚ್ಚಿಯಾಗಿದ್ದಳು. ರಸ್ತೆ ನೋಡದೇ ಹುಚ್ಚಿಯಾಗಿದ್ದಳು. ಹಕ್ಕಿ ಕಾಣದೇ ಹುಚ್ಚಿಯಾಗಿದ್ದಳು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ನ್ಯಾಯ ಎನ್ನುವ ಪದ ತನ್ನಂಥ ಹೆಣ್ಣುಗಳಿಗೆ ಸಂಬಂಧ ಪಡುವುದಿಲ್ಲ ಎಂದು ತಿಳಿದು ಹುಚ್ಚಿಯಾಗಿದ್ದಳು.

ಅಂಥವಳು ಒಂದು ದಿನ ಎದ್ದು ನೋಡುತ್ತಾಳೆ, ಕಣ್ಣನ್ನು ನಂಬಲೇ ಆಗುತ್ತಿಲ್ಲ. ಕಣ್ಣು ಉಜ್ಜಿ ತಿಕ್ಕಿ ತಿಕ್ಕಿ ನೋಡಿದಳು. ರಸ್ತೆ ಬದಿ ಇರುವ ತನ್ನ ಮನೆಯಿಂದ ನೋಡಿದರೆ ರಸ್ತೆ ಪೂರಾ ಖಾಲಿ ಬಿದ್ದಿದೆ. ನೆಲದ ಮೇಲೆ ಉದ್ದಾನುದ್ದಕ್ಕೆ ಟಾರು ರಸ್ತೆ ಹಾಸಿಕೊಂಡಂತೆ ಮಲಗಿದೆ. ಪೀಪೀ ಪ್ಯಾಂಪ್ಯಾಂ ಯಾವ ಸದ್ದೂ ಇಲ್ಲ. ಆಹಾ, ಈ ಹಾದಿಯೇ ತನ್ನ ಮನೆಯಾದರೆ ಎಂದು ಒಂದುಸಲ ಇದ್ದಕ್ಕಿದ್ದಂತೆ ಜ್ಞಾನೋದಯವಾಗಿ ಕೈಕಾಲು ಹಿಗ್ಗಿಸಿ, ಕಟ್ಟಿದ್ದನ್ನು ಕಿತ್ತು ಹಾಕಿದಳು. ಮನೆಯೆಂಬ ಜೈಲಿಗೆ ದೂಡಲ್ಪಟ್ಟವಳು ಹಾದಿ ಮೇಲೆ ಸ್ವತಂತ್ರಳಾದಳು. ಬೈಗುಳಕೆ ಬಗ್ಗದೇ, ಬಡಿತಕ್ಕೆ ಭಯಪಡದೇ ಆದದ್ದಾಗಲಿ ಎಂದು ಹೊಸಿಲು ದಾಟಿಯೇ ಬಿಟ್ಟಳು. ಮನೆಯೊಳಗಿನ ಕೂಗು, ಸದ್ದುಗಳಿಗೆ ಕಿವುಡಾದಳು. ಬೆದರಿಸುವ ಕಣ್ಣುಗಳಿಗೆ ಕುರುಡಾದಳು.

ಈಗವಳು ಹಗಲು ಹೊತ್ತು ಹಾದಿಯ ಮಗಳು. ಇರುಳು ತನ್ನ ಮನೆಯ ಜಗಲಿಯ ನೆರಳು. ಈಗವಳು ಕಾಣುವ ನೋಟವೇ ಬೇರೆ, ಕೇಳುವ ಸದ್ದುಗಳೇ ಬೇರೆ.

ಬೆಳಕು ಹರಿದದ್ದೇ ಅವಳ ಸರ್ಕೀಟ್ ಹೊರಡುವುದು. ಹಾಲು, ತರಕಾರಿ, ಪೇಪರು ಮಾರುವ ಓ ಅಲ್ಲಿಂದ ಒಂದು ದಿನಪತ್ರಿಕೆ ಎತ್ತಿಕೊಂಡು ಹೊರಡುವಳು. ಮನೆಮನೆಯೆದುರು ನಿಂತು ಪತ್ರಿಕೆ ಓದುತ್ತಾಳೆ. ಅದರಲ್ಲಿದ್ದದ್ದನ್ನು ಓದುತ್ತಾಳೋ, ತನ್ನ ಮನಸ್ಸಿಗೆ ಬಂದದ್ದನ್ನು ಹೇಳುತ್ತಾಳೋ ಯಾರು ತಾಳೆ ಹಾಕಿ ನೋಡಿದವರು? ಓದಿನ ಕೆಲಸ ಮುಗಿದ ಮೇಲೆ ಸುಮ್ಮನೆ ಯಾವುದೋ ಒಂದು ಮನೆಯ ಹೊಳ್ಳಿ ಮೇಲೆ ಕೂತು ತನ್ನಷ್ಟಕ್ಕೆ ಮಾತನಾಡುತ್ತ ಇರುತ್ತಾಳೆ. ಕೊಟ್ಟದ್ದು ತಿನ್ನುತ್ತಾಳೆ. ಕೊಡದಿದ್ದರೆ ಕೇಳುತ್ತಾಳೆ. ಇಂಪಾಗಿ ಹಾಡುತ್ತಾಳೆ, ಗಹಗಹಿಸಿ ನಗುತ್ತಾಳೆ. ಕೆಲವಕ್ಕೆ ಮನುಷ್ಯ ಕೇಳುಗರು ಇರುವರು. ಹಲವಕ್ಕೆ ಮರ, ಗಾಳಿ, ಪಕ್ಷಿ, ಪ್ರಾಣಿಗಳೇ ಶ್ರೋತೃಗಳು.

ಎಷ್ಟೋ ಸಲ ಜನರನ್ನು ಮನೆಯೊಳಗೆ ಕೂರಿಸಲು ಲಾಠಿ ಹಿಡಿದು ಬಂದ ಪೊಲೀಸರು ಅವಳನ್ನು ಮನೆಯೊಳಗೆ ಕಳಿಸಲು ಯತ್ನಿಸಿ ವಿಫಲರಾದರು. ಲಾಠಿಯೆತ್ತಲು ಹೋದ ಒಬ್ಬ ಮೀಸೆ ಮೂಡದ ಕಾನ್‍ಸ್ಟೇಬಲ್ಲು ತನ್ನ ಕಂಡು ಖಿಲ್ ಎಂದು ನಕ್ಕ ಅವಳ ನಿರ್ಭಯಕ್ಕೆ, ನಗೆಗೆ ಎತ್ತಿದ ಕೈ ಇಳಿಸಿದ. ಅವಳ ಮಾತು ಕೇಳಿ ತಾನೂ ಹಗುರಾಗಿ ನಕ್ಕು ಹೋದ. ನಗು ಬರಿಸುವ, ಅಳು ಬರಿಸುವ, ಮತ್ತು ಏರಿಸುವ, ತಿಳಿವು ಆಗುವ ಅಂತಹ ಯಾವ ಮಾತುಗಳನ್ನು ಅವಳು ಆಡುತ್ತಿದ್ದಳು ಎನ್ನುತ್ತೀರಾ? ಅವಳು ಏನು ತಿಂದಳೋ, ಎಲ್ಲಿ ನೀರು ಕುಡಿದಳೋ, ಗೊತ್ತಿಲ್ಲ. ಆದರೆ ಅವಳು ಏನು ಹೇಳಿದಳು, ಏನು ಕೇಳಿದಳು ಎನ್ನುವುದು ಒಂದಕ್ಷರ ಬಿಡದೆ ಗಾಳಿ ವರದಿ ಮಾಡಿ ಸುದ್ದಿಯಾಗಿದೆ. ಅದು ಹೀಗಿದೆ, ನೀವೂ ಕೇಳಿ:

ಬೆಳಗಾತ ಒಂದು ಮನೆಯೆದುರು ನಿಂತು ಹೇಳಿದಳು:

‘ಕೊರೊನಾ ಬಂದು ಎಲ್ಲಾ ಬದಲಾಯ್ತು ತಂಗೀ. ಇಟ್ಟ ಮೂರ್ತ ಎಲ್ಲ ಕೆಟ್ಟೋದವು. ಕೊಟ್ ಸಾಲ ಎಲ್ಲ ಬಿಟ್ಟೋದವು. ನಿಂ ಕೈ ಇದ್ದಲ್ಲೆ ಇದ್ರು ಹಸ್ತರೇಖೆಗಳು ಬ್ಯಾರೇ ದಾರಿ ಹಿಡಿದವು. ಈಗ ಹಳೇ ಭವಿಷ್ಯ ನಂಬೇಡಿ. ನಾ ಹೇಳ್ತೆ ಕೇಳಿ ನಿಮ್ಮ ಈ ವಾರದ ಕಂಪ್ಯೂಟರ್ ಭವಿಷ್ಯ: ಮೇಷ ರಾಶಿ – ಈ ವಾರ ಮನೆಯಲ್ಲಿ ಕೂತುಣ್ಣುವಿರಿ ವೃಷಭ – ವಾರ ಕಾಲ ಮನೆಯಲ್ಲಿ. ಮಿಥುನ – ವಾರವಿಡೀ ಕುಟುಂಬದ ಜೊತೆ. ಕಟಕ – ವಾರವಿಡೀ ಮನೆಯಲ್ಲಿ ಕುಟುಕಿಸಿಕೊಳ್ಳುವಿರಿ ಸಿಂಹ – ಒಂದು ವಾರ ಮನೆಯಲ್ಲಿ ಬೋನಿನೊಳಗಿನ ಸಿಂಹದಂತೆ ಓಡಾಟ ಕನ್ಯಾ – ಏಳು ದಿನ ಮನೆಯಲ್ಲಿ ಮದುವೆ ಚಿಂತನೆ ತುಲಾ – ರವಿವಾರದಿಂದ ಶನಿವಾರದ ತನಕ ಮನೆಯಿಂದಲೇ ಷೇರು ವ್ಯವಹಾರ ಧನು – ಚಾಟರಿಬಿಲ್ಲಿನಲ್ಲಿ ಬಿಲ್ವಿದ್ಯೆ ಕಲಿಯುವ ಸಪ್ತಾಹ. ಮಕರ – ಜಲ ಸಪ್ತಾಹ..’

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

‘ಏಯ್, ಸುಮ್ನಿರು ಮಾರಾಯ್ತಿ, ಏನ್ ವಟವಟ ನಿಂದು’

ಆ ಮನೆಯ ಯಜಮಾನ ಹೊರಬಂದು ನಿಂತಾಗ ‘ರಾಜಣ್ಣ, ಈ ಸಲ ನಿಂಗೆ ರಾಜಯೋಗ ಇದೆ. ಕೂತು ಉಣ್ತೀ’ ಎಂದು ಸಾಭಿನಯವಾಗಿ ಹೇಳಿ ಮುಂದೆ ಹೋದಳು.

ಮತ್ತೊಂದು ಪುಟ್ಟ ಮನೆ ತುಂಬ ಮಕ್ಕಳು ಮೊಮ್ಮಕ್ಕಳು ಕೂತಿದ್ದವು. ಅಜ್ಜಿಯೊಬ್ಬಳೇ ಏಕಾಂಗಿ ಇದ್ದ ಹಳ್ಳಿಯ ಮನೆಗೆ ಬೆಂಗಳೂರೆಂಬ ಮಾಯಾ ನಗರಿಯಿಂದ ಎಲ್ಲರೂ ಬಂದುಬಿಟ್ಟಿದ್ದಾರೆ. ‘ಅಪ್ಪ ಸತ್ತಾಗ ಮನೆಗೆ ಬಾರದಿದ್ದೋರು ಸಹಾ ಈಗ ತಾವು ಸಾಯ್ಲಿಕ್ ಆದಾಗ ಬಂದಿದಾರೆ ನೋಡಿ’ ಎಂದು ಗೊಣಗಿಕೊಳ್ಳುತ್ತ ಮುಂದೆ ಹೋದಳು.

ಅಲ್ಲಿ ಒಂದಷ್ಟು ಜನ ಗುಟ್ಟುಗುಟ್ಟಾಗಿ ಕಳ್ಳರಂತೆ ಓಡಾಡುತ್ತಿದ್ದರು. ಮೀಸೆ ಮೂಡದ ಹುಡುಗರೇ ಹೆಚ್ಚಿದ್ದರು. ಅವರ ಕಳ್ಳಾಟ, ಸಂಭ್ರಮ ನೋಡೇ ಏನಂತ ಗೊತ್ತಾಗಿ ಅಷ್ಟು ದೂರ ನಿಂತು ಕೇಳಿದಳು.

‘ಏ ಅಪ್ಪಿ, ಈ ಊರನಾಗೆ ಕರೊನದಿಂದ ಸತ್ತವರು ಮೂರು ಜನ. ಎಣ್ಣೆ ಇಲ್ದೆ ಸತ್ತೋರು ಮುನ್ನೂರು, ಅಲ್ವ? ಕೊರೊನದಿಂದ ನರಳದೋರು ಮುನ್ನೂರು ಜನ. ಎಣ್ಣೆ ಇಲ್ದೆ ನರಳಿದೋರು ಮೂರು ಸಾವ್ರ. ಹೌದಾ ಅಲ್ವ? ಇದು ಎಂಥಾ ಕಾಲವಯ್ಯ!?’

ಅವಳು ಹಾಡತೊಡಗಿದ್ದೇ ಈ ಹುಚ್ಚು ಹೆಂಗಸು ಪೊಲೀಸಿನವರಿಗೆ ಹೇಳಿದರೆ ಗತಿ ಏನೆಂದು ಅವರೆಲ್ಲ ಲಗುಬಗೆಯಿಂದ ಕೊಟ್ಟೆ, ಬಾಟಲಿಗಳ ತುಂಬಿಕೊಂಡು ಅಲ್ಲಿಂದ ಕಾಲ್ತೆಗೆದರು. ಅವರು ಹೋದಮೇಲೂ ಅರಳೀಕಟ್ಟೆ ಮೇಲೆ ಕೂತು ಗಮಕ ಹಾಡುವಂತೆ ತಾನು ಹಾಡಿಕೊಳ್ಳುತ್ತಲೇ ಇದ್ದಾಳೆ.

ಊರುತುಂಬ ಹೊಗೆ ತುಂಬಿ ಉಸ್ರು ಕಟ್ತಿತ್ತು ಮಾರಮ್ಮ ಕರೋನಮ್ಮ ನಿರಾಳ ಮಾಡಿದ್ಲು ಕೊಚ್ಚೆ ಕಸ ತುಂಬಿ ಗಟಾರ ಗಬ್ಬು ನಾರ್ತಿತ್ತು ಕೆಪ್ಪೆಗ್ ಹೊಡ್ದು ಕರೋನಾ ಚೊಕ್ ಮಾಡಿಸ್ತು ಕೂತಲ್ಲಿ ಕೂರಲ್ಲ ತಿಕ ಬೆಂದ ಹಕ್ಕಿಗಳು ರೆಕ್ಕೆ ಕತ್ತರ್ಸಿ ಕರೋನಾ ಸರೀ ಬಾರುಸ್ತು ಒಳ್ಳೇದು ಯಾವ್ದು ಕೆಟ್ಟದ್ ಯಾವ್ದು ಗೊತ್ತೇ ಆಗ್ತಿಲ್ಲ ಆ ಕನ್ನಡಿನ ಮೊದ್ಲು ನಿನ್ನ ಮಕಕ್ಕೆ ತಿರುಗುಸ್ಕ

ಊರಿಗೂರೇ ಆಶ್ಚರ್ಯ ಪಟ್ಟಿತು. ಈ ಹೆಂಗಸಿಗೆ ಇಷ್ಟು ಮಾತಾಡಲು ಬಂದೀತು, ಹಾಡಲು ಬಂದೀತು ಎಂದು ಮೊದಲೇ ತಿಳಿದಿರಲಿಲ್ಲವಲ್ಲ ಎಂದು. ಅವಳ ಮನೆಯವರೂ ಈ ಇದು ತಮ್ಮನೆಯ ಬಡ್ಡು ಹೆಂಗಸೇ ಎಂದು ನಂಬಲಾರದಂತೆ ನೋಡಿದರು. ಅವರು ಹಾಗೆ ಅಚ್ಚರಿಯಲ್ಲಿರುವಾಗ ತನ್ನ ಮನೆ ಮುಂದೆ ನಿಂತು ಪೇಪರ್ ತುಂಡು ಹಿಡಿದು ಓದಿದಳು.

‘ಕೇಳ್ರಪೋ ಕೇಳಿ. ಈ ವಾರದ ಪೊಲೀಸ್ ವರದಿ. ಕೊಲೆ = 0 ದರೋಡೆ = 0 ಹಲ್ಲೆ = 0 ರಸ್ತೆ ಅಪಘಾತ = 0 ಜಾತಿ ನಿಂದನೆ = 0 ದೇಶದ್ರೋಹ = 0 ಗಂಡಹೆಂಡತಿ ಜಗಳ = 1, 75, 428 ಗೊತ್ತಾಯ್ತಲ ನಿಮ್ಗೆ? ನಿಜವಾಗಿ ಅಪರಾಧ ಯಾವ್ದು, ಎಲ್ಲಿ ಆಗ್ತವೆ ಅಂತ? ಹ್ಞಂ..’

ಅಷ್ಟೊತ್ತಿಗೆ ಆ್ಯಂಬುಲೆನ್ಸಿನ ಸೈರನ್ ಕೇಳಿತು. ಕೂಡಲೇ, ‘ಮನುಷ್ರು ಈಗ ಮೂರೇ ಕಡೆ ಇರಬೋದು. ಒಂದಾ ಮನೆ, ಇಲ್ಲಾ ಆಸ್ಪತ್ರೆ ಇಲ್ಲಾ ಸ್ನಾನ ಕಾಯುವ ಹೆಣವಾಗಿ ಆ್ಯಂಬುಲೆನ್ಸಿನಲ್ಲಿ’ ಎಂದು ಹೇಳಿಕೊಂಡು ಸಾಗಿದಳು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಹೀಗೇ ಅವಳ ಹಗಲು ರಾತ್ರಿಗಳು ಕಳೆಯುತ್ತಿರುವಾಗ ಒಂದು ದಿನ ಸಂಜೆ ಐದು ಗಂಟೆಗೆ ಎಲ್ಲರೂ ಮನೆಯಿಂದ ಹೊರಗೆ ಬಂದು ಸದ್ದು ಮಾಡತೊಡಗಿದರು. ಇದ್ದಕ್ಕಿದ್ದಂತೆ ಎದ್ದ ಸದ್ದಿಗೆ ಲೋಕ ಬೆಚ್ಚಿ ಬಿತ್ತು. ಮಂಗಗಳು ಮರದಿಂದ ಮರಕ್ಕೆ ಜಿಗಿದವು. ಕಾಗೆಗಳು ಕಾಕಾ ಎನ್ನುತ್ತ ಹಾರತೊಡಗಿದವು. ಏನಾಯಿತೆಂದು ತಿಳಿಯದೆ ದನಗಳು ಗಾಬರಿ ಬಿದ್ದು ಬಾಲಯೆತ್ತಿ ಗಂಜಲ ಸುರಿಸಿದವು. ಮೊದಲೇ ಮನೆಯಲ್ಲಿ ಏನೂ ಮಾಡದೇ ಕೂತು ಕೂತು ಕೈ ಕೆರೆಯುತ್ತಿದ್ದ ದೇಶಭಕ್ತರ ಆ ಊರಿನಲ್ಲಿ, ಜನರೆಲ್ಲ ಬಾಗಿಲು ತೆರೆದು ಹೊರಗೆ ಬಂದರು. ಕೆಲವರು ಜಾಗಂಟೆ ಬಡಿದರೆ ಮತ್ತೆ ಕೆಲವರು ತಮಟೆ ಬಡಿದರು. ತಾಳ ಕುಟ್ಟಿದರು. ತಟ್ಟೆ ಬಡಿದರು, ಪ್ಲಾಸ್ಟಿಕ್ ಡಬ್ಬವನ್ನು ಜಪ್ಪಿ ಸದ್ದು ಹೊರಡಿಸಿದರು. ಒಟ್ಟಿನಲ್ಲಿ ಒಂದೇ ಬಾರಿ ಡಮಡಮ ಡಬಡಬ ಪಡಪಡ ಧಡಧಡ ಮುಂತಾಗಿ ನಾನಾ ಲಯ ಶೃತಿಗಳೊಂದಿಗೆ ಬಂದ ಸದ್ದಿಗೆ ನಮ್ಮ ಇವಳು ತಲೆಯನ್ನು ಕಿವಿಯನ್ನು ಕಣ್ಣನ್ನು 360 ಡಿಗ್ರಿ ತಿರುಗಿಸಿ ಶಬ್ದವನ್ನು ಗ್ರಹಿಸಿದಳು. ಗಾಳಿಯ ಬಳಿ ಏನು ಎಂದು ಕೇಳಲು, ಜನನಾಯಕರು ಗಂಟೆ ಬಡಿದು ಕೊರೊನಾ ಗೆದ್ದವರಿಗೆ ಧನ್ಯವಾದ ಹೇಳಲು ಸೂಚಿಸಿರುವರು ಎಂಬ ಸಂಗತಿ ತಿಳಿದು ಬಂತು.

‘ಗತಿಗೇಡಿ ಪ್ರಜೆಗಳಿಗೆ ಮತಿಹೀನ ಅರಸನಾದೊಡೆ ಅತಿ ಕೇಡುಗಾಲಕ್ಕೆ ಗಂಟೆ ಬಡಿವರಯ್ಯ’ ಎಂದವಳು ಹಾಡುವಾಗ ಅವಳಿಗೇ ಜೋರಾಗಿ ನಗು ಬಂತು. ‘ಅವರು ಅರವತ್ತೊರ್ಷ ಮಾಡದೇ ಇದ್ದಿದ್ದನ್ನ ಇವರು ಆರು ವರ್ಷದಲ್ಲಿ ಮಾಡಕ್ಕಾಗ್ತದ? ಹ್ಞಂ?’ ಎಂದು ಮನೆಯೊಳಗೆ ಯಾರೋ ಫೋನಿನಲ್ಲಿ ಜೋರಾಗಿ ಹೇಳುವುದು ಕೇಳಿ ಮತ್ತೂ ನಗು ಬಂತು. ‘ಆರುನೂರು ವರುಷ ಮಾಡದೇ ಇದ್ದಿದ್ದನ್ನು ಆರು ತಿಂಗಳಲ್ಲಿ ಕೊರೋನಾ ಮಾಡ್ತಿಲ್ಲವೇ ಅಣ್ಣಾ?’ ಎಂದು ಕೇಳುತ್ತಾ ಹ್ಹಹ್ಹಹ್ಹ ಎಂದು ನಕ್ಕಳು. ಗಾಳಿಯಲ್ಲೊಂದು ದನಿ ತೇಲಿಬಂದು ‘ಇಂಥ ಮಾತಾಡಿದರೆ ದೇಶದ್ರೋಹದ ಆಪಾದನೆಗೆ ನಿನ್ನನ್ನು ಒಳಗೆ ಕೂಡಿ ಹಾಕ್ತಾರೆ, ನೀನು ನನ್ನ ಸಹವಾಸಿಯಾಗುವೆ ಸಂಗಾತಿ’ ಎಂದು ಪಿಸು ನುಡಿದು ಜೈಲಿಗೆ ವಾಪಸಾಯಿತು.

‘ನಗೋರ್ನ ಕೂಡಿ ಹಾಕ್ತಾರೋ? ಅಳೋರ್ನ ಕೂಡಿ ಹಾಕ್ತಾರೋ? ನಗುವನ್ನು ಕೂಡಿ ಹಾಕ್ತಾರೋ? ಅಳುವನ್ನು ಕೂಡಿ ಹಾಕ್ತಾರೋ? ನಗುಅಳು ತೋರಿಸೋ ಮುಖಾನ ಕೂಡಿ ಹಾಕ್ತಾರೋ? ಮನಸನ್ನು ಕೂಡಿ ಹಾಕ್ತಾರೋ? ಕೂಡುವುದು, ಹಾಕುವುದು. ಕಳೆಯುವುದು ಹಾಕುವುದು. ಕೂಡು, ಹಾಕು, ಕಳೆ, ಹಾಕು’ ಮುಂತಾಗಿ ಪದಗಳ ಜೊತೆ ಆಟವಾಡುತ್ತ, ಪದಬಂಧ ಬಿಡಿಸುತ್ತಿರುವಳೋ ಎಂಬಂತೆ ಬಿಡಿಬಿಡಿ ಪದಗಳನ್ನುಚ್ಚರಿಸುತ್ತ ಅವಳು ನಗತೊಡಗಿದಳು.

ನಗುವಿನಮ್ಮ ಅವಳು. ನಕ್ಕಳು, ಗಹಗಹಿಸಿ ನಕ್ಕಳು. ಬಿದ್ದು ಬಿದ್ದು ನಕ್ಕಳು. ಕಣ್ಣೀರು ಬರುವಷ್ಟು ನಕ್ಕಳು. ಹಾರಿಹಾರಿ ನಕ್ಕಳು. ಹೊಟ್ಟೆ ಹಿಡಿದುಕೊಂಡು ನಕ್ಕಳು. ಎದೆನೋವು ಬರುವಷ್ಟು ನಕ್ಕಳು. ಅವಳು ನಗುವುದು ನೋಡಿ ಗಿಡಮರ ಪಕ್ಷಿಪ್ರಾಣಿಗಳೂ ನಗಲು ಮೊದಲು ಮಾಡಿದವು. ನದಿ ನಕ್ಕಿತು. ಅಮ್ಮನೋರ ಮನೆಯ ಬೆಟ್ಟ ನಕ್ಕಿತು. ರಸ್ತೆ ನಕ್ಕಿತು. ಮೂಲೆಯಲ್ಲಿ ನಿಂತುನಿಂತು ಧೂಳು ಹಿಡಿದ ಕಾರು ನಕ್ಕಿತು. ಅರಳಲಿರುವ ಮೊಗ್ಗು ನಕ್ಕಿತು. ಉದುರಲಿರುವ ಎಲೆ ನಕ್ಕಿತು. ನಿಲ್ಲದ ಆ ನಗುವಿನಲ್ಲಿ ಲೋಕಕ್ಕೆ ನಗೆ ಸಾಕ್ಷಾತ್ಕಾರವಾಯಿತು. ಅವಳಿಗೆ ಲೋಕ ಸಾಕ್ಷಾತ್ಕಾರವಾಯಿತು. ನಗೆಹಬ್ಬದಲ್ಲಿ ಆತ್ಮ ಸಾಕ್ಷಾತ್ಕಾರವಾಯಿತು.

covid diary

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಅವಳೀಗ ಊರ ಹುಚ್ಚಿಯಲ್ಲ, ಊರ ಮಗಳು. ಪೊರೆ ಕಳಚಿ ಹೊಸ ಜನ್ಮ ತಳೆದ ಸತ್ಯ ಹೇಳುವ ಮಗಳು. ಎದ್ದುಬಂದು ಎದೆಗೊದೆವವರು ದಂಡಿಯಾಗಿರವ ಊರಿನಲ್ಲಿ ಇದ್ದದ್ದನ್ನು ಇದ್ದ ಹಾಗೆ ಹೇಳುವ ಉಸಿರು. ಅವಳೀಗ ಗೂಡಿನೊಳಗಿದ್ದರೂ ಬಯಲ ಹಕ್ಕಿಯಾಗಿರುವಳು. * ಪದ ಅರ್ಥ ಹೊಳ್ಳಿ = ಜಗಲಿ * ಫೋಟೋ : ಎಸ್. ವಿಷ್ಣುಕುಮಾರ್ * ನಾಳೆ ನಿರೀಕ್ಷಿಸಿ : ಕವಲಕ್ಕಿ ಮೇಲ್ -10 ; ‘ನಿಮ್ಮುನ್ನ ಬಿಟ್ರೆ ಮುಟ್ಟಿ ನೋಡೋ ಡಾಕ್ಟ್ರೇ ಇಲ್ಲಾಗಿದೆ ಇಡೀ ತಾಲೂಕಲ್ಲಿ’ * ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ ; ‘ಈ ಲೇಡೀಸನ್ನ ನಂಬಬಾರದು ಲವ್ ಅಂತೂ ಮಾಡಲೇಬಾರದು’ 

ತಾಜಾ ಸುದ್ದಿ
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್