Covid Diary : ಡಾ. ಎಚ್.ಎಸ್. ಅನುಪಮಾ ಅವರ ‘ಕವಲಕ್ಕಿ ಮೇಲ್’ ಸರಣಿ ನಾಳೆಯಿಂದ ಆರಂಭ

Coronavirus Stories : ‘ಅಂತೂ ಕೋವಿಡ್ ಕರುಣೆ ತೋರಿಸಿ ಆರೋಗ್ಯ ದೃಢವಾಗಿರುವುದರಿಂದ ದಿನನಿತ್ಯ ನೂರಾರು ರೋಗಿಗಳನ್ನು ನೋಡಲು ಸಾಧ್ಯವಾಗಿದೆ. ಸಂದಿಮೂಲೆಯಲ್ಲಿರುವ ಸಹನೆ, ವಿನಯಗಳನ್ನು ಎಳೆದು ತಂದು ರೋಗಿಗಳೊಡನೆ ಒಡನಾಡುವಾಗ ಭಯ, ಹತಾಶೆ, ಕೃತಜ್ಞತೆ, ಸುಳ್ಳು, ಪ್ರೀತಿ, ಸಹಾಯ, ಆರ್ದ್ರತೆಗಳೆಲ್ಲ ಬೆರಳಿಗಂಟುತ್ತವೆ. ಸಹಾಯದ ಅಗತ್ಯ ಎಷ್ಟೊಂದು ಇದೆ?! ಪ್ರೀತಿ, ಕಾಳಜಿಯ ಕೊರತೆ ಎಷ್ಟೊಂದು ಇದೆ? ಮಾಡಲು ಎಷ್ಟೊಂದು ಕೆಲಸವಿದೆ?’ ಡಾ. ಎಚ್. ಎಸ್. ಅನುಪಮಾ

Covid Diary : ಡಾ. ಎಚ್.ಎಸ್. ಅನುಪಮಾ ಅವರ ‘ಕವಲಕ್ಕಿ ಮೇಲ್’ ಸರಣಿ ನಾಳೆಯಿಂದ ಆರಂಭ
ಡಾ. ಎಚ್. ಎಸ್. ಅನುಪಮಾ
Follow us
ಶ್ರೀದೇವಿ ಕಳಸದ
|

Updated on:May 31, 2021 | 7:56 PM

ನಮ್ಮ ನಡುವಿನ ಕೆಲ ವೈದ್ಯರುಗಳು ಕೇವಲ ಔಷಧಿಚೀಟಿಗೆ, ಚಿಕಿತ್ಸೆಗೆ, ಬೋಧನೆಗೆ, ನಿರ್ವಹಣೆಗಷ್ಟೇ ಕರ್ತವ್ಯವನ್ನು ಸೀಮಿತಗೊಳಿಸಿಕೊಳ್ಳದೆ ತಮ್ಮ ಆಸಕ್ತಿ, ವೃತ್ತಿ ನೀಡುವ ಅವಕಾಶಗಳ ಮೂಲಕ ಸಮಾಜದ ತಂತುಗಳೊಂದಿಗೆ ಬೆಸೆದುಕೊಳ್ಳಲು ಸೂಕ್ತ ಅಭಿವ್ಯಕ್ತಿಗಳ ಹುಡುಕಾಟ ನಡೆಸುತ್ತಿರುತ್ತಾರೆ. ಈ ಹಾದಿಯಲ್ಲಿ ಕ್ರಮೇಣ ಅಧ್ಯಯನಶೀಲ ಪ್ರವೃತ್ತಿ ಮತ್ತು ಒಡನಾಟಗಳ ಮೂಲಕ ಅವರು ಮತ್ತಷ್ಟು ಚಲನಶೀಲರಾಗುತ್ತಾರೆ, ಜನಾನುರಾಗಿಯಾಗುತ್ತಾರೆ. ಇಂಥ ಮನೋಭಾವದಿಂದ ಕೂಡಿದ ವೈದ್ಯರುಗಳನ್ನು ಈ ಕೊರೋನಾ ಕಾಲ ಮತ್ತಷ್ಟು ಎಚ್ಚರದ ಸ್ಥಿತಿಯಲ್ಲಿರಿಸಿದೆ. ಅವರ ಒಳಗನ್ನು ಹೆಚ್ಚು ಸಂವೇದನೆಗೆ ಒಳಪಡಿಸಿದೆ. ಈ ಪೈಕಿ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ವೈದ್ಯೆಯಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ. ಎಚ್.ಎಸ್. ಅನುಪಮಾ ಅವರು ವಿಶೇಷವಾಗಿ ಗಮನ ಸೆಳೆಯುತ್ತಾರೆ. ಕವಿ, ಲೇಖಕಿ, ಸಂಘಟಕಿಯೂ ಆಗಿರುವ ಇವರು ‘ಟಿವಿ9 ಕನ್ನಡ ಡಿಜಿಟಲ್’​ ಗಾಗಿ ನಾಳೆ ಅಂದರೆ ಜೂನ್​ 1ರಿಂದ ಪ್ರತಿದಿನವೂ ‘ಕವಲಕ್ಕಿ ಮೇಲ್’ ಸರಣಿಯೊಂದಿಗೆ ನಿಮ್ಮನ್ನು ತಲುಪಲಿದ್ಧಾರೆ.   

ಹೂ ಅರಳಿದ್ದಕ್ಕೆ ಯಾಕೆ ಸಾಕ್ಷಿ, ಜೀವಕೋಶ, ಮಹಿಳಾ ಆರೋಗ್ಯ, ಅಸಮಾನ ಭಾರತ, ಮಹಿಳೆ: ದಲಿತತ್ವ ಮತ್ತು ರಾಜಕೀಯ ಪ್ರಜ್ಞೆ, ಭೀಮಯಾನ, ಉರಿಯ ಪದವು, ಅಂಬೇಡ್ಕರ್ ಮತ್ತು ಕಾರ್ಟೂನ್ ವಿವಾದ, ಮೋಟರ್ ಸೈಕಲ್ ಡೈರಿ ಹೀಗೆ ಹಲವು ಕೃತಿಗಳನ್ನು ಈತನಕ ಪ್ರಕಟಿಸಿರುವ ಇವರು, ಈ ಒಂದೂವರೆ ವರ್ಷದ ಕೊರೋನಾ ಅವಧಿಯಲ್ಲಿ ತಮ್ಮನ್ನು ಮೀಟಿದ ಅನುಭವ, ಹುಟ್ಟಿಕೊಂಡ ಪ್ರಶ್ನೆ-ವಿಚಾರ ಮತ್ತು ಅವುಗಳಿಗೆ ಸ್ಪಂದಿಸಿದ ರೀತಿಯನ್ನು ವಸ್ತುನಿಷ್ಠವಾಗಿ ಸೃಜನಾತ್ಮಕ ಚೌಕಟ್ಟಿನಲ್ಲಿ ಪ್ರಸ್ತುಪಡಿಸಲಿದ್ದಾರೆ. ಈ ಸರಣಿಯ ಪ್ರವೇಶಿಕೆ ನಿಮ್ಮ ಓದಿಗೆ.

* ಕೋವಿಡ್ ಎಂಬ ವಿಶ್ವಪಿಡುಗು ಆವರಿಸಿದ ಈ ಸಮಯದಲ್ಲಿ ಬಹುತೇಕ ವೈದ್ಯ, ಸಿಬ್ಬಂದಿಗಳಿಗೆ ಬೆಂಕಿಯೊಡನೆ ಸರಸವಾಡುತ್ತಿರುವ ಅನುಭವಾಗುತ್ತಿದೆ. ಒಂದೆಡೆ ವೃತ್ತಿಧರ್ಮದ ಜೊತೆ ಅನಿಶ್ಚಿತತೆ, ಭಯ ಸೇರಿಕೊಂಡಿವೆ. ಮಗದೊಂದು ಕಡೆ ಜನನಾಯಕರ ಬೇಜವಾಬ್ದಾರಿ, ಮೂರ್ಖತನಗಳು ಜನರ ಅಸಹಾಯಕತೆ, ಮೌಢ್ಯವನ್ನು ಹೆಚ್ಚಿಸುತ್ತಿವೆ. ಇವೆಲ್ಲ ಸೇರಿ ಎತ್ತ ಸಾಗಿದ್ದೇವೆ, ಏನಾಗುತ್ತಿದೆ, ನಾವು ಮಾಡುತ್ತಿರುವುದು ಸರಿಯೇ ಅಲ್ಲವೇ ಮುಂತಾಗಿ ಏನೊಂದೂ ಸ್ಪಷ್ಟವಿಲ್ಲದೆ ದಿಕ್ಕೆಟ್ಟ ಅನುಭವದಲ್ಲಿ ದಿನಗಳು ಓಡುತ್ತಿವೆ. ಅನಿಶ್ಚಿತತೆಯೇ ಪರಮ ಸತ್ಯವಾಗಿ ಯಾವುದರ ಮೇಲೂ ನಮ್ಮ ನಿಯಂತ್ರಣವಿಲ್ಲದ ಭಾವ ಮೂಡುತ್ತಿದೆ.

ಹಾಗೆ ನೋಡಿದರೆ ಈ ಋತುವಿನಲ್ಲಿ ಪ್ರತಿ ವರ್ಷವೂ ವೈದ್ಯರು ಸಿಕ್ಕಾಪಟ್ಟೆ ಬ್ಯುಸಿ. ಬೇಸಿಗೆ, ಮಳೆಯ ಕಾಲಗಳು ನಾನಾ ಬ್ಯಾಕ್ಟೀರಿಯಾ, ವೈರಸ್‍ಗಳ ವಂಶಾಭಿವೃದ್ಧಿಗೆ ಪೂರಕವಾಗಿರುವುದರಿಂದ ಆಸ್ಪತ್ರೆಗಳು ತುಂಬಿ ತುಳುಕುತ್ತವೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮದ ನನ್ನ ಕ್ಲಿನಿಕ್ ಕೂಡಾ ಇದರಿಂದ ಹೊರತಲ್ಲ. ಈ ಸಲವಂತೂ ಕೊರೋನಾ ಕಾರಣವಾಗಿ ಹಲವು ಹಲವು ವೈದ್ಯರು ತಮ್ಮ ಔಷಧೋಪಚಾರವನ್ನು ಒಂದೋ ನಿಲ್ಲಿಸಿದ್ದಾರೆ ಅಥವಾ ಆನ್‍ಲೈನ್ ಮಾಡಿದ್ದಾರೆ. ಜೊತೆಗೆ ಸರ್ಕಾರಿ ಆಸ್ಪತ್ರೆಗೆ ಹೋಗಲು ಜನ ಹಿಂದೇಟು ಹಾಕುತ್ತಿದ್ದಾರೆ. ದೊಡ್ಡ ಆಸ್ಪತ್ರೆ ಇರಲಿ, ತಾಲೂಕಾ ಕೇಂದ್ರಕ್ಕೆ ಹೋಗಲೂ ಹಳ್ಳಿಯ ಜನರಿಗೆ ವಾಹನ ಸೌಕರ್ಯ ಇಲ್ಲ. ಹಾಗಾಗಿ ಗ್ರಾಮೀಣ ಭಾಗದ ಆಸ್ಪತ್ರೆಗಳಲ್ಲಿ ರೋಗಿಗಳ ಸಂಖ್ಯೆ ಅತಿ ಹೆಚ್ಚಾಗಿಬಿಟ್ಟಿದೆ. ಈ ಇಪ್ಪತ್ತೆಂಟು ವರ್ಷಗಳಲ್ಲಿ ಎಂದೂ ಇಲ್ಲದಂತೆ ಒಣಗಿದ ಗಂಟಲು ಒದ್ದೆಯಾಗಲಿಕ್ಕೂ ನಮಗಿಲ್ಲಿ ಸಮಯ ಇಲ್ಲವಾಗಿದೆ.

ಚದರ ಕಿಲೋಮೀಟರಿಗೆ 140 ಜನರಿರುವ, ಊರು ಎಂದು ಜನ ಒಂದೇ ಕಡೆ ಜನ ನೆಲೆಯಾಗದ ಜಿಲ್ಲೆ ಉತ್ತರ ಕನ್ನಡ. ಇಲ್ಲಿನ ಕಾಡು, ಬೆಟ್ಟ, ನದಿ, ಸಮುದ್ರ, ಹಕ್ಕಿಗಳು, ಮಳೆ, ಜನ ನಮ್ಮನ್ನು ಸೆಳೆದ ಕಾರಣ ಮೂವತ್ತು ವರ್ಷ ಕೆಳಗೆ ಈ ಹಳ್ಳಿಗೆ ಬಂದವರು ಇದ್ದಲ್ಲೇ ಶಿವಾ ಎಂದು ಗಟ್ಟಿಯಾಗಿಬಿಟ್ಟೆವು. ಈ ಜಾಗ ಮೊದಲು ಕವುಲೆ ಹಕ್ಕಿಯ (ನವಿಲು) ಗುಡ್ಡೆಯಾಗಿತ್ತಂತೆ. ಗುಡ್ಡ ಕಡಿದು ಅದರ ನಟ್ಟನಡುವೆ ಬೆಂಗಳೂರಿಗೆ ಹೋಗುವ ರಸ್ತೆಯಾಗಿ ಅಲ್ಲೊಂದು ಸಣ್ಣ ಊರು ಎದ್ದಿದ್ದರಿಂದ ಕವಲಕ್ಕಿ ಎಂಬ ಹೆಸರು ಬಂದಿದೆ.

ನಾವು ಬಂದಕಾಲಕ್ಕೆ ಈ ಊರಿನಲ್ಲಿ ಏನಿತ್ತು? ನಾಲ್ಕೂ ಸುತ್ತು ಗುಡ್ಡಬೆಟ್ಟಗಳು. ಕಣಿವೆಯಲ್ಲಿ ಅಡಿಕೆ ತೋಟ, ಅವರವರ ತೋಟದಂಚಿಗೆ ಅವರವರ ಮನೆ. ಬೆಂಗಳೂರು ಮುಟ್ಟಲು ಒಂದು ರಸ್ತೆ. ಸುತ್ತಮುತ್ತಲ ಹಳ್ಳಿಗಳಿಗೆ ರಸ್ತೆಗೆ ಬರುವ ಅವಕಾಶ ಒದಗಿಸುವಂತೆ ಹೈಸ್ಕೂಲು, ಮೂರ್ನಾಲ್ಕು ಸಣ್ಣ ಕಿರಾಣಿ ಅಂಗಡಿಗಳು, ಗ್ರಾಮೀಣ ಬ್ಯಾಂಕು, ಚಿಕಿತ್ಸಾಲಯ ಶುರುವಾದವು. ಹಗಲು ಹೊತ್ತು ಶಾಲೆಗೆ ಬಂದು ಹೋಗುವ ಹುಡುಗರಿಂದ, ಅಡಿಕೆ ಬಾಳೆ ತೆಂಗು ವೀಳೆಯದೆಲೆ ಪೊಟ್ಲೆ ಹೊತ್ತು ಬರುವವರಿಂದ ಪೇಟೆ ಕಳೆಗಟ್ಟುತ್ತಿದ್ದರೆ; ಸಂಜೆ ಮೇಲೆ ಬೆಂಗಳೂರು ಬಸ್ಸಿಗೆ ಎಲೆ/ಹೂವು ಹಾಕುವವರು ಪ್ರತ್ಯಕ್ಷವಾಗುತ್ತಿದ್ದರು. ಒಂದು ಸಿನೆಮಾ ಟೆಂಟು ಆವಾಗೀವಾಗ ಸಿನಿಮಾ ತೋರಿಸತೊಡಗಿತು. ಇಷ್ಟೆಲ್ಲ ಇದ್ದಮೇಲೆ `ಅದು’ ಇಲ್ಲದಿದ್ದರೆ ಹೇಗೆ? ಒಂದು ಬಾರೂ ಆಯಿತು. ಅಲ್ಲಿಗೆ ಒಂದು ಹಂತದ ಅಭಿವೃದ್ಧಿ ಕಂಡು ಪೇಟೆ ತೃಪ್ತವಾಗಿತ್ತು. ಕೆಲವು ವರ್ಷಗಳ ಬಳಿಕ ಇದ್ದಕ್ಕಿದ್ದಂತೆ ಊರು ವೇಗವಾಗಿ ಬೆಳೆಯಿತು. ಎಲ್ಲೆಲ್ಲಿಂದಲೋ ಜನ ಇಲ್ಲಿಗೆ ಬಂದು ಅಂಗಡಿ, ಮಳಿಗೆ, ಏಜೆನ್ಸಿ, ಪಾರ್ಲರ್, ಜಿಮ್ ತೆರೆದರು. ಈಗಿದು 250 ಮನೆಗಳ ಊರು. ಇಲ್ಲಿರುವವರಿಗಿಂತ ಬಂದು ಹೋಗುವವರೇ ಹೆಚ್ಚಿರುವ ಊರು. ನಡುವೆ ಯಾವಾಗಲೋ ನಾವೂ ಕ್ಲಿನಿಕ್, ಆಸ್ಪತ್ರೆ, ಲ್ಯಾಬ್ ತೆರೆದೆವು. ಸಹಾಯಕಿ/ಕರ ಅಲಭ್ಯತೆ ಮತ್ತಿತರ ಕಾರಣಗಳಿಂದ ಒಳರೋಗಿಗಳ ವಿಭಾಗ ಮತ್ತು ಲ್ಯಾಬ್ ಅನ್ನು ಮುಚ್ಚಿದರೂ, ಹೊರರೋಗಿಗಳ ಕ್ಲಿನಿಕ್ ಪುರುಸೊತ್ತು ಸಿಗದಂತೆ ನಡೆಯುತ್ತಿದೆ.

ಮೂರು ದಶಕಗಳ ಪ್ರಾಕ್ಟೀಸಿನಲ್ಲಿ ದಿನನಿತ್ಯದ, ಮಾಮೂಲಿ ರೋಗಿಗಳಲ್ಲದೆ ಕೆಲವು ಸಾಂಕ್ರಾಮಿಕಗಳಿಗೆ ಸಾಕ್ಷಿಯಾಗಿದ್ದೇವೆ. ಋತುವಿಗನುಗುಣವಾಗಿ ವಾಂತಿಭೇದಿ, ಅರಿಶಿನ ಕಾಮಾಲೆ, ಟೈಫಾಯ್ಡ್, ಸಿಡುಬು, ದಡಾರ, ಫ್ಲೂಗಳು ಪ್ರತಿ ವರ್ಷವೂ ಕರೆಯದೆ ಬರುತ್ತವೆ. ಶರಾವತಿ ಟೇಲ್‍ರೇಸ್ ಯೋಜನೆಯ ರಸ್ತೆ-ಅಣೆಕಟ್ಟು ನಿರ್ಮಾಣದ ಸಂದರ್ಭದಲ್ಲಿ ಉತ್ತರ ಭಾರತದಿಂದ ಬಂದ ಫಾಲ್ಸಿಪಾರಂ ಮಲೇರಿಯಾ, ಆರಂಭದ ವರ್ಷಗಳಲ್ಲಿ ನಿದ್ದೆಗೆಡಿಸಿದ ಎಚ್ಐವಿ, ಕಾಡಿಗೆ ಹೋಗುವ ಶ್ರಮಜೀವಿಗಳನ್ನೇ ಬಾಧಿಸುವ ಮಂಗನ ಕಾಯಿಲೆ (ಕ್ಯಾಸನೂರು ಫಾರೆಸ್ಟ್ ಡಿಸೀಸ್), ಊರೂರುಗಳನ್ನೇ ಜ್ವರ ಗಂಟುನೋವಿನಲ್ಲಿ ನಲುಗಿಸಿದ ಚಿಕುನ್‍ಗುನ್ಯ, ಒಂದಷ್ಟು ಭಯ ಹುಟ್ಟಿಸಿ ಬಂದೆಬಂದೆ ಎಂದು ಹೆದರಿಸುವುದರಲ್ಲಿ ನಿಯಂತ್ರಣಕ್ಕೆ ಬಂದ ಹಂದಿಜ್ವರ, ಆಗೀಗ ಹೆಚ್ಚಾಗುವ ಆನೆಕಾಲು ರೋಗ/ಡೆಂಗಿ, ಹೊಸಕಾಯಿಲೆಯೊಂದು ಮಕ್ಕಳಲ್ಲಿ ಬಂದೇಬಿಟ್ಟಂತೆ ಕಾಣಿಸಿದ್ದ ಕಾಲೊಡೆ-ಬಾಯೊಡೆ ಜ್ವರ – ಇವೇ ಮುಂತಾಗಿ ಹಲವು ಸಾಂಕ್ರಾಮಿಕ ರೋಗಗಳು ನಾವು ಕಂಡಂತೆ ಬಂದು ಹೋಗಿವೆ. ಕೆಲವು ನಮ್ಮ ಜೊತೆಗೇ ಬದುಕಿವೆ. ಈ ಕಾಯಿಲೆಗಳಿಗಿಂತ ಕಡಿಮೆಯಿಲ್ಲದ ಕೋಮುದಂಗೆ, ನೆರೆ, ಚಂಡಮಾರುತಗಳೂ ಜನರು ದಣಿಯುವಂತೆ ಮಾಡಿವೆ.

ಆದರೆ ಇದುವರೆಗೆ ನಾವು ಅನುಭವಿಸಿದ್ದು ಒಂದು ತೂಕ. ಈಗ ಒಂದೂಕಾಲು ವರ್ಷದಿಂದ ಆಗುತ್ತಿರುವುದು ಒಂದು ತೂಕ. ಕಣ್ಣಿಗೆ ಕಾಣದ ವೈರಸ್ ತಂದೊಡ್ಡಿದ ಆತಂಕ-ಭಯ-ಕೇಡು-ಸಾವುಗಳು ಅದೆಷ್ಟೋ ರೀತಿಯಲ್ಲಿ ಬದುಕುಗಳನ್ನು ನಡುಗಿಸಿಬಿಟ್ಟಿದೆ. ಇದನ್ನು ಅರಗಿಸಿಕೊಳ್ಳಲು, ಸುಧಾರಿಸಿಕೊಳ್ಳಲು ಬಹುಕಾಲ ಹಿಡಿಯುತ್ತದೇನೋ ಅನಿಸಿದೆ. ಕೆಲವು ಕಲ್ಪಿತ ಬಿಕ್ಕಟ್ಟುಗಳು, ಹಲವು ನೈಜ ಬಿಕ್ಕಟ್ಟುಗಳನ್ನು ಜನ ಒಂದಾದಮೇಲೊಂದು ಅನುಭವಿಸುತ್ತಿದ್ದರು. ಅದೆಲ್ಲವನ್ನು ಮೀರಿಸುವಂತೆ ಕೊರೋನಾ ಬಂದೆರಗಿದೆ. ಈಗ ಎಲ್ಲವೂ ಅನಿಶ್ಚಿತ. ಭವಿಷ್ಯದ ಬಗೆಗೆ ಕನಸು ಕಾಣುವುದು ಬಿಡಿ, ಉಸಿರಾಡುವುದೂ ಕಷ್ಟವಾಗಿದೆ.

ರಾಜ್ಯದ ರಾಜಧಾನಿಯಿಂದ 420 ಕಿಮೀ ದೂರದಲ್ಲಿರುವ ಈ ಭಾಗವು ಪ್ರಮುಖ ದಿನಪತ್ರಿಕೆಗಳಿಗೆ ಸಂಪಾದಕ/ಉಪಸಂಪಾದಕ/ವರದಿಗಾರರನ್ನು ಕೊಟ್ಟಿದೆ. ಆದರೂ ಇಲ್ಲಿಯ ಕಷ್ಟನಷ್ಟಗಳ ವರದಿಯಾಗುವುದು ಕಡಿಮೆ. ಅದರಲ್ಲೂ ನಾವಿರುವ ಹೊನ್ನಾವರವು ಪತ್ರಿಕೆಗಳಲ್ಲಿ ಅತಿಕಡಿಮೆ ಕಾಣಿಸಿಕೊಳ್ಳುವ ಪ್ರದೇಶ. ನಮ್ಮೂರಿನದಷ್ಟೇ ಅಲ್ಲ, ಅಧಿಕಾರ ಕೇಂದ್ರದಿಂದ ದೂರ ಇರುವವರತ್ತ ಉಳಿದವರ ಚಿತ್ತ ಜಾಳಾಗಿ ಹರಿಯುವುದು ಸಾಮಾನ್ಯ. ಹಾಗೆ ನೋಡಿದರೆ ಇಲ್ಲಿನ ಬದುಕು, ಕಷ್ಟ, ಸಮಸ್ಯೆಗಳ ಸ್ವರೂಪವೇ ಬೇರೆ. ಇಲ್ಲಿ ಆಕ್ಸಿಜನ್ ಕೊರತೆ ಇಲ್ಲ. ಆಂಬುಲೆನ್ಸ್ ಕೊರತೆ ಇಲ್ಲ. ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ ಇಲ್ಲ. ಸುಲಿಗೆ ಮಾಡುವ ಆಸ್ಪತ್ರೆಗಳಿಲ್ಲ. ಹೆಣ ಸುಡಲು ಕ್ಯೂ ಇಲ್ಲ. ಕಟ್ಟಿಗೆಗೆ ಬರವಿಲ್ಲ. ಆದರೆ ಈ ಭಾರತ ಭಿನ್ನವಾಗಿದೆ. ಹಳ್ಳಿಹಳ್ಳಿಗಳಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಒಂದೇಸಮ ಏರುತ್ತಿದೆ. ಕಳೆದ ವರುಷ ಹೊರರಾಜ್ಯ, ಹೊರದೇಶದಿಂದ ಬಂದವರಿಂದ ರೋಗ ಬಂತೆಂದು ದೂರುತ್ತಿದ್ದರು. ಈಗ ನಮ್ಮ ಬೆಂಗಳೂರಿನಿಂದ ಬಂದವರೇ, ನಮ್ಮನೆಯ ಮದುವೆಗೆ ಬಂದ ಜನರೇ ಪಾಸಿಟಿವ್ ಆಗಿದ್ದಾರೆ. ಕೆಲವರು ಅಲ್ಲಿ ಬೆಡ್ ಸಿಗಲಿಲ್ಲವೆಂದು ಇಲ್ಲಿಗೆ ಬರುತ್ತಿದ್ದರೆ ಮತ್ತೆ ಕೆಲವರು ಮನೆವಾಸ ಎಂದುಕೊಂಡು ಬಂದು ಎರಡು ದಿನವೂ ಮನೆಯಲ್ಲಿ ಕೂರದೇ ಅಡ್ಡಾಡುತ್ತಿದ್ದಾರೆ. ಹತ್ತಿರದ ಕ್ಲಿನಿಕ್ಕಿಗೆ, ಮಿಕ್ಸೋಪತಿ ನಕಲಿ ವೈದ್ಯರ ಬಳಿಗೆ, ಕೊರೋನಾಗೆ ಔಷಧಿ ಕಂಡುಹಿಡಿದ ಮೂಲಿಕೆ ತಜ್ಞರ ಬಳಿಗೆ ಎಡತಾಕುತ್ತಿದ್ದಾರೆ. ಕೊರೋನಾ ಎಂದರೇನೆಂದು ಗೊತ್ತಿಲ್ಲದವರೂ ಅದಕ್ಕೆ ಔಷಧಿ ಕೊಡುತ್ತಿದ್ದಾರೆ!

Covid Dairy

ಕವಲಕ್ಕಿಯ ತಮ್ಮ ಕ್ಲಿನಿಕ್​ನಲ್ಲಿ ಡಾ. ಅನುಪಮಾ ಸಹಾಯಕಿಯೊಂದಿಗೆ

ಅತಿ ಆತಂಕಿತರ ಒಂದು ಗುಂಪನ್ನು ಹೊರತುಪಡಿಸಿದರೆ ಬಹುಪಾಲು ಭಾರತೀಯರು ಕೊರೊನಾ ತಮಗೆ ಬರುವುದಿಲ್ಲ, ಬಂದಿಲ್ಲ ಎಂದೇ ನಂಬಿದ್ದಾರೆ. ಭಾರತವಷ್ಟೇ ಅಲ್ಲ, ವಿಶ್ವದ ಹಲವೆಡೆ ರೋಗ ನಿರಾಕರಣೆ ಕಂಡುಬಂದಿದೆ. ಇಲ್ಲಂತೂ ಹೆಚ್ಚುಕಡಿಮೆ ಎಲ್ಲರೂ ಆಮೆಯ ಉಂಗುರ ಧರಿಸಿ, ಯಾವುದೋ ಕುಂಕುಮ ಢಾಳಾಗಿ ಹಣೆಗೇರಿಸಿ, ತಾಯಿತ ಕಟ್ಟಿಸಿಕೊಂಡು ತಮಗೆ ಕೊರೋನಾ ಬರುವುದಿಲ್ಲ ಎಂದು ದೃಢವಾಗಿ ನಂಬಿದ್ದಾರೆ!

ರೋಗಿಗಳ ತರಹವೇ ನಾನೂ ಈ ಕಾಯಿಲೆ ನನಗೆ ಬಾರದು ಎಂದು ಭಾವಿಸಿರುವೆನೆ ಎಂದು ಅಚ್ಚರಿಯಾಗುತ್ತದೆ. ಈ ಒಂದೂವರೆ ವರ್ಷದಲ್ಲಿ ಸಾವಿರಾರು ರೋಗಿಗಳನ್ನು ನೋಡಿದ್ದೇನೆ. ಕೆಲವರಿಗೆ ಬಂದಿರುವುದು ಕೋವಿಡ್ ಎಂದು ನನಗೆ ಧೃಢವಾಗಿ ಅನಿಸಿದೆ. ಅವರಲ್ಲಿ ಎಷ್ಟು ಹೇಳಿದರೂ ಕೋವಿಡ್ ಟೆಸ್ಟಿಗೆ ಹೋಗದೇ ಕೊಟ್ಟ ಔಷಧವೇ ಸಾಕು ಎಂದು ಕುಳಿತವರಿದ್ದಾರೆ. ಮತ್ತೆಮತ್ತೆ ಬರುವವರನ್ನು ‘ಟೆಸ್ಟ್ ಮಾಡಿಸಿಕೊಳ್ಳದೆ ಬರಬೇಡಿ’ ಎಂದರೆ ಯಾವತ್ತಿಂದ ನಿಮ್ಮನ್ನೇ ನಂಬಿದವರು ನಾವು ಎಂದು ಭಾವನಾತ್ಮಕ ಸಂಬಂಧ ನೆನಪಿಸಿ ನನ್ನನ್ನು ಸೋಲಿಸಿದ್ದಾರೆ. ದೂರದೂರದ ಯಾವ್ಯಾವುದೋ ಊರಿನಿಂದ ಹುಡುಕಿಕೊಂಡು ಬಂದವರು ಪಾಸಿಟಿವ್ ಆದರೂ ಹೇಳುತ್ತಿಲ್ಲ ಎಂದು ಅವರ ಚಹರೆ, ಮುಖಭಾವದಿಂದಲೇ ತಿಳಿಯುತ್ತದೆ. ಪಿಪಿಇ ಕಿಟ್ ಇಲ್ಲದೆ ಯಾವ ಧೈರ್ಯದ ಮೇಲೆ ಇವರನ್ನೆಲ್ಲ ನೋಡುತ್ತೇನೋ? ಇದುತನಕ ವೈರಸ್ ನನ್ನನ್ನು, ನನ್ನ ಸಹಾಯಕ/ಕಿಯರನ್ನು, ನನ್ನಂತಹ ಕೆಲವು ವೃತ್ತಿಬಾಂಧವರನ್ನೇಕೆ ಬಿಟ್ಟಿದೆಯೋ ಎಂದು ಆಶ್ಚರ್ಯವಾಗುತ್ತದೆ.

ಹಾಗೆಂದು ಅದ್ಯಾರೋ ಮೂರ್ಖ ವೈದ್ಯರ ಹಾಗೆ ಸುರಕ್ಷಾ ಕ್ರಮಗಳಿಲ್ಲದೆ ರೋಗಿಗಳನ್ನು ನೋಡಿಲ್ಲ. ಎರಡು ಡೋಸ್ ವ್ಯಾಕ್ಸೀನ್ ಆಗಿದೆ. ಪ್ಲಾಸ್ಟಿಕ್ ವಿರೋಧಿಯಾಗಿರುವುದರಿಂದ ಪ್ಲಾಸ್ಟಿಕ್‍ನ ಪಿಪಿಇ ಕಿಟ್ ಬದಲು ಹತ್ತಿಬಟ್ಟೆಯ ಓಟಿ ಗೌನ್-ಮಾಸ್ಕ್-ಕ್ಯಾಪ್‍ಗಳನ್ನೇ ಬಳಸಿ, ತೊಳೆದು ಮರು ಬಳಸುತ್ತೇನೆ. ಒಂದು ಮಾಸ್ಕ್​ನ  ಮೇಲೊಂದು ಎನ್ 95 ಮಾಸ್ಕ್ ಹಾಕುತ್ತೇನೆ. ನನ್ನ ಸಹಾಯಕಿಯರು ಇದೆಲ್ಲದರ ಜೊತೆಗೆ ಫೇಸ್ ಶೀಲ್ಡ್ ಹಾಕುತ್ತಾರೆ. ಪದೇಪದೆ ಕೈತೊಳೆಯುತ್ತೇವೆ. ಒಮ್ಮೆ ಏರಿಸಿದರೆ ಮುಗಿಯಿತು, ಮನೆಗೆ ಬರುವಾಗಲೇ ತೆಗೆಯುವುದು. ನಡುವೆ ನೀರು ಕುಡಿಯುವುದೂ ಇಲ್ಲ, ಟಾಯ್ಲೆಟ್ಟಿಗೂ ಅವಕಾಶ ಇಲ್ಲ.

ಅಂತೂ ಕೋವಿಡ್ ಕರುಣೆ ತೋರಿಸಿ ಆರೋಗ್ಯದೃಢವಾಗಿರುವುದರಿಂದ ದಿನನಿತ್ಯ ನೂರಾರು ರೋಗಿಗಳನ್ನು ನೋಡಲು ಸಾಧ್ಯವಾಗಿದೆ. ಸಂದಿಮೂಲೆಯಲ್ಲಿರುವ ಸಹನೆ, ವಿನಯಗಳನ್ನು ಎಳೆದು ತಂದು ರೋಗಿಗಳೊಡನೆ ಒಡನಾಡುವಾಗ ಭಯ, ಹತಾಶೆ, ಕೃತಜ್ಞತೆ, ಸುಳ್ಳು, ಪ್ರೀತಿ, ಸಹಾಯ, ಆರ್ದ್ರತೆಗಳೆಲ್ಲ ಬೆರಳಿಗಂಟುತ್ತವೆ. ಸಹಾಯದ ಅಗತ್ಯ ಎಷ್ಟೊಂದು ಇದೆ?! ಪ್ರೀತಿ, ಕಾಳಜಿಯ ಕೊರತೆ ಎಷ್ಟೊಂದು ಇದೆ? ಮಾಡಲು ಎಷ್ಟೊಂದು ಕೆಲಸವಿದೆ? ನಮಗೆ ಸಾಧ್ಯವಾಗಬಲ್ಲದ್ದು ಎಷ್ಟು ಕಿಂಚಿತ್? ನಮ್ಮ ಕೆಲಸದಿಂದ ಏನಾದರೂ ಉಪಯೋಗವಾಗುತ್ತಿದೆಯೇ? ಮುಂತಾದ ಭಾವನೆಗಳು ಪದೇಪದೆ ಬರುತ್ತವೆ.

ದಿನವೂ ಅದೇ ಗೌನು, ಕ್ಯಾಪು, ಮಾಸ್ಕು. ಅದೇ ಮಾತು. ಮನೆಗೆ ಬಂದರೂ, ಮಗಳು ಸಂಗಾತಿ ಅಮ್ಮ ಅಪ್ಪ ತಮ್ಮ ತಂಗಿ ಗೆಳೆಯ ಗೆಳತಿಯರೊಟ್ಟಿಗೆ ಮಾತನಾಡಿದರೂ ಅದೇ. ಎಲ್ಲರದೂ ಅದೇ ನೋವು. ಅದೇ ಆತಂಕ, ಗೊಂದಲ, ಹತಾಶೆ. ದಿನವಿಡೀ ಅತಿ ಜಾಗೃತಾವಸ್ಥೆಯಲ್ಲಿ, ತುದಿಗಾಲಲ್ಲಿ ನಿಂತು ರೋಗಿಗಳನ್ನು ನೋಡಿನೋಡಿ, ಮಾತಾಡಿ ಆಡಿ, ಹುರಿಗೊಂಡ ಜೀವವು ಸ್ವಿಚ್ ಆಫ್ ಆಗಲು ಒಮ್ಮೊಮ್ಮೆ ಕಷ್ಟ ಪಡುತ್ತದೆ. ನಿದ್ರೆ ನಡುನಡುವೆ ಕತ್ತರಿಸಲ್ಪಡುತ್ತದೆ. ಥಟ್ಟನೆ ಎಚ್ಚರವಾಗುತ್ತದೆ. ಮಾತು ಸಾಕು ಎಂದು ಮನೆಗೆ ಬಂದ ಮೇಲೆ ಮೌನವಾಗಿ ಕೂರುವ ಮನಸ್ಸಾಗುತ್ತದೆ. ಸುಮ್ಮನೇ ಮೌಂಟನ್ ಮ್ಯೂಸಿಕ್ ಅನ್ನೋ, ಟ್ರಾನ್ಸ್ ಸೈಬೀರಿಯನ್ ರೈಲುದಾರಿಯ ಅನುಭವವನ್ನೋ ಯೂಟ್ಯೂಬಿನಲ್ಲಿ ನೋಡುತ್ತ ಕೂರುತ್ತೇನೆ. ಕ್ವೀನ್ಸ್​ಟೌನಿನ ಹಿಮಶಿಖರದ ಮೇಲೆ ಪುಟ್ಟ ವಿಮಾನದಲ್ಲಿಳಿದ ಆ ಕ್ಷಣ, ಅಕ್ಕನ ಗುಹೆಯೊಳಗೆ ಕುಳಿತ ಅನುಭವ, ಖಟ್ಮಂಡುವಿನಿಂದ ವಿಮಾನದಲ್ಲಿ ನೋಡಿದ ಗೌರೀಶಂಕರಗಳನ್ನು ಕಣ್ಮುಚ್ಚಿ ನೆನಪಿಸಿಕೊಂಡು ತಂಪಾಗುತ್ತೇನೆ. ಈ ನಡುವೆ ಫೋನು ಎತ್ತದೆ, ಮರು ಕರೆ ಮಾಡಿ ಉತ್ತರಿಸದೆ ಎಷ್ಟು ಜೀವಗಳು ಬೇಸರಗೊಂಡಿರುವವೋ, ನೆಮ್ಮದಿ ಅವರಲ್ಲಿ ನೆಲೆಸಲಿ ಎಂದು ಪ್ರಾರ್ಥಿಸಿ ಸುಮ್ಮನಾಗಿದ್ದೇನೆ.

ಬದುಕೆಂಬ ಕೇದಿಗೆಯ ಬನ. ಇಷ್ಟು ಪರಿಮಳ. ಅಷ್ಟು ತರಚು ಗಾಯ. ಅದರ ನಡುವೆ ಬದುಕಿನ ಏಕತಾನತೆಯು ಉಸುಬಾಗಿ ಮುಳುಗಿಸದಿರಲು ಅಷ್ಟಿಷ್ಟು ಬರಹ.

ಮಿಕ್ಕಿದ್ದು ನಿಮ್ಮ ಅವಗಾಹನೆಗೆ.

ಇದನ್ನೂ ಓದಿ : Covid Warriors : ನಿಮ್ಮ ಧ್ವನಿಗೆ ನಮ್ಮ ಧ್ವನಿಯೂ ; ವಿಜ್ಞಾನವೂ ಕಾಣದ ಮುಖ ಮನಸ್ಸಿಗಿದೆ!

Published On - 7:47 pm, Mon, 31 May 21

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ