AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?

ಕೃಷಿ ಉತ್ಪನ್ನಗಳ ಬೆಂಬಲ ಬೆಲೆ ಇದೀಗ ಪ್ರತಿಭಟನೆ ಮತ್ತು ಸಮರ್ಥನೆಗಳ ಕೇಂದ್ರಬಿಂದು ಎನಿಸಿದೆ. ಬೆಂಬಲ ಬೆಲೆಯನ್ನು ಲೆಕ್ಕ ಹಾಕುವ ಹಲವು ವಿಧಾನಗಳು ಮತ್ತು ದೇಶದ ಒಟ್ಟಾರೆ ಆರ್ಥಿಕತೆಗೆ ಬೆಂಬಲ ಬೆಲೆ ಎಷ್ಟು ಮುಖ್ಯ ಎಂಬುದನ್ನು ಸರಳವಾಗಿ ವಿವರಿಸುವ ಪ್ರಯತ್ನ ಇಲ್ಲಿದೆ.

Explainer | ಕನಿಷ್ಠ ಬೆಂಬಲ ಬೆಲೆ MSP ಎಂದರೇನು? ಪಂಜಾಬ್ ರೈತರಿಗೇಕೆ ಕೃಷಿ ಕಾಯ್ದೆಗಳ ಬಗ್ಗೆ ಇಷ್ಟು ಆತಂಕ?
ರೈತರ ಪ್ರತಿಭಟನೆ
Follow us
Ghanashyam D M | ಡಿ.ಎಂ.ಘನಶ್ಯಾಮ
|

Updated on:Dec 04, 2020 | 2:29 PM

ಕೇಂದ್ರ ಸರ್ಕಾರವು ಈಚೆಗೆ ಜಾರಿ ಮಾಡಿರುವ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿಭಟನೆ ತೀವ್ರಗೊಳಿಸಿವೆ. ಈ ಹೊಸ ಕಾಯ್ದೆಗಳು ಕನಿಷ್ಠ ಬೆಂಬಲ ಬೆಲೆ ನೀತಿಯನ್ನು ತೆಗೆದು ಹಾಕಲು ದಾರಿ ಮಾಡಿಕೊಡುತ್ತವೆ ಮತ್ತು ಈ ಮೂಲಕ ರೈತರನ್ನು ಕಾರ್ಪೊರೇಟ್ ಕಂಪನಿಗಳ ಅಡಿಯಾಳು ಮಾಡುವ ಹುನ್ನಾರ ನಡೆಯುತ್ತದೆ ಎಂಬುದು ರೈತ ಹೋರಾಟಗಾರರ ವಾದ.

ವಿಪಕ್ಷಗಳು ಮತ್ತು ಪಟ್ಟಭದ್ರ ಹಿತಾಸಕ್ತಿಗಳು ರೈತರಿಗೆ ತಪ್ಪಾದ ಮಾಹಿತಿ ನೀಡಿದ್ದರಿಂದಲೇ ರೈತರು ಈ ಪ್ರತಿಭಟನೆ ಮಾಡುತ್ತಿದ್ದಾರೆ. ಹೊಸ ಕೃಷಿ ಕಾಯ್ದೆಗಳು ಯಾವುದೇ ಕಾರಣಕ್ಕೂ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಇಲ್ಲದಂತೆ ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿಯ ಹಲವು ಹಿರಿಯ ನಾಯಕರು ಹೇಳಿದ್ದಾರೆ.

ಪ್ರತಿಭಟನೆ ಮತ್ತು ಸಮರ್ಥನೆಗಳ ಕೇಂದ್ರ ಎನಿಸಿರುವ ಬೆಂಬಲ ಬೆಲೆ ತುಂಬಾ ಸಂಕೀರ್ಣ ವಿಚಾರ. ಇದು ರಾಜ್ಯ ಮತ್ತು ಅಲ್ಲಿ ಬೆಳೆಯುವ ಉತ್ಪನ್ನಗಳನ್ನು ಆಧರಿಸಿರುತ್ತದೆ. ಬೆಂಬಲ ಬೆಲೆಯನ್ನು ಲೆಕ್ಕ ಹಾಕುವ ಹಲವು ವಿಧಾನಗಳಿವೆ. ಈ ಎಲ್ಲ ಅಂಶಗಳನ್ನು ಸರಳವಾಗಿ ವಿವರಿಸುವ ಪ್ರಯತ್ನ ಇಲ್ಲಿದೆ.

ಕನಿಷ್ಠ ಬೆಂಬಲ ಬೆಲೆ (MSP) ಎಂದರೆ ಏನು? ಅದನ್ನು ಹೇಗೆ ಲೆಕ್ಕ ಹಾಕುತ್ತಾರೆ?

ನಿರ್ದಿಷ್ಟ ಬೆಳೆಗಳನ್ನು ಬೆಳೆಯುವ ರೈತರಿಗೆ (ಹೆಚ್ಚಿನ ಇಳುವರಿ ಇರುವಾಗ) ಯೋಗ್ಯ ಬೆಲೆ ಸಿಗುವುದನ್ನು ಖಾತರಿಪಡಿಸಲು ಕೆಲ ಬೆಳೆಗಳ ಖರೀದಿಯ ನಂತರ ಸರ್ಕಾರಿ ಸಂಸ್ಥೆಗಳಿಂದ ಬೆಲೆ ಘೋಷಿಸಲಾಗುತ್ತದೆ. ಇದೇ ಕನಿಷ್ಠ ಬೆಲೆಯೇ ಕನಿಷ್ಠ ಬೆಂಬಲ ಬೆಲೆ (Minimum Support Price -MSP). ಬೆಲೆ ಕುಸಿತಕ್ಕೆ ಕಡಿವಾಣ ಹಾಕಿ, ಸರ್ಕಾರವೇ ನೇರವಾಗಿ ರೈತರ ನೆರವಿಗೆಂದು ಮಾರುಕಟ್ಟೆಗೆ ಧಾವಿಸುವ ಪ್ರಕ್ರಿಯೆ ಇದು. ಪಡಿತರ ವಿತರಣೆ ಮೂಲಕ ಸಾರ್ವಜನಿಕರಿಗೆ ತಲುಪಿಸುವ ಆಹಾರ ಧಾನ್ಯಗಳನ್ನು ಸರ್ಕಾರಗಳು ಇದೇ ಪ್ರಕ್ರಿಯೆಯಲ್ಲಿ ಸಂಗ್ರಹಿಸುತ್ತವೆ.

ಕೃಷಿ ಸಚಿವಾಲಯದ ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ (ಸಿಎಪಿಸಿ) ಶಿಫಾರಸು ಮೇರೆಗೆ ಬೀಜ ಬಿತ್ತನೆ ಮಾಡುವ ಹೊತ್ತಿನಲ್ಲಿ ಸರ್ಕಾರ ಇಂತಿಷ್ಟು ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸುತ್ತದೆ, ಸದ್ಯ ಸಿಎಪಿಸಿ 23 ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಶಿಫಾರಸು ಮಾಡಿದೆ.

ಯಾವೆಲ್ಲ ಕೃಷಿ ಉತ್ಪನ್ನಗಳಿಗಿದೆ ಕನಿಷ್ಠ ಬೆಂಬಲ ಬೆಲೆ?

7 ಧಾನ್ಯಗಳು (ಭತ್ತ, ಗೋಧಿ, ಮೈದಾ, ಸಣ್ಣ ಕಾಳು, ನವಣೆ, ಬಾರ್ಲಿ ಮತ್ತು ರಾಗಿ). 5 ದ್ವಿದಳ ಧಾನ್ಯ ( ಹೆಸರು, ತೊಗರಿ, ಕಡಲೆ, ಉರ್ದು, ಕಾಳುಗಳು), 7 ಎಣ್ಣೆ ಬೀಜಗಳು (ಕಡಲೆಬೀಜ, ಸಾಸಿವೆ, ಸೋಯಾಬೀನ್, ಎಳ್ಳು, ಸೂರ್ಯಕಾಂತಿ, ಕುಸುಂಬೆ ಬೀಜ, ಗುರೆಳ್ಳು), 4 ವಾಣಿಜ್ಯ ಬೆಳೆಗಳಿಗೆ (ಕೊಬ್ಬರಿ, ಕಬ್ಬು, ಹತ್ತಿ ಮತ್ತು ಸೆಣಬು) ಬೆಂಬಲ ಬೆಲೆ ಘೋಷಿಸಬಹುದು. ಉತ್ಪಾದನಾ ವೆಚ್ಚದ ಮೇಲಿನ ಲಾಭ ಖಚಿತಪಡಿಸಿಕೊಳ್ಳಲು ಕನಿಷ್ಠ ಬೆಂಬಲ ಬೆಲೆಯನ್ನು ಒಂದು ಮಟ್ಟದಲ್ಲಿ ನಿಗದಿಪಡಿಸಲಾಗಿದೆ.

2018-2019ರ ಕೇಂದ್ರ ಬಜೆಟ್​ನಲ್ಲಿ ಮಾಜಿ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಉತ್ಪಾದನಾ ವೆಚ್ಚಕ್ಕಿಂತ 1.5 ಪಟ್ಟು ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಲಾಗುವುದು ಎಂದು ಹೇಳಿದ್ದರು.

ಉತ್ಪಾದನಾ ವೆಚ್ಚ ಲೆಕ್ಕ ಹಾಕುವುದು ಹೇಗೆ?

ಉತ್ಪಾದನಾ ವೆಚ್ಚ ಲೆಕ್ಕ ಹಾಕಲು ಸಿಎಪಿಸಿ ಮೂರು ಸೂತ್ರಗಳನ್ನು ಬಳಸುತ್ತದೆ.

ಅವು A2, A2+FL ಮತ್ತು C2.

A2- ಅಂದರೆ ನಿಜವಾಗಿ ಪಾವತಿಸಿದ ವೆಚ್ಚ. A2+FL ಅಂದರೆ ನಿಜವಾಗಿ ಪಾವತಿಸಿದ ವೆಚ್ಚ ಮತ್ತು ಪಾವತಿ ಮಾಡದ ಕುಟುಂಬ ಕಾರ್ಮಿಕರ ಮೌಲ್ಯ. C2- ಉತ್ಪಾದನೆಯ ಸಮಗ್ರ ವೆಚ್ಚವನ್ನು ಸೂಚಿಸುತ್ತದೆ. ಇದರಲ್ಲಿ A2+FL ಜೊತೆಗೆ ಬಾಡಿಗೆ, ಒಡೆತನದ ಭೂಮಿ ಮತ್ತು ಬಂಡವಾಳದ ಮೇಲಿನ ಬಡ್ಡಿ ಇರುತ್ತದೆ.

ಏತನ್ಮಧ್ಯೆ, ಪ್ರೊಫೆಸರ್ ಎಂ.ಎಸ್.ಸ್ವಾಮಿನಾಥನ್ ನೇತೃತ್ವದ ರಾಷ್ಟ್ರೀಯ ರೈತರ ಆಯೋಗವು ಶಿಫಾರಸು ಮಾಡಿರುವ ಸಿ2 ಸೂತ್ರ ಬಳಸಿ ಕನಿಷ್ಠ ಬೆಂಬಲ ಬೆಲೆ ಲೆಕ್ಕ ಹಾಕುವುದಾದರೆ ಉತ್ಪಾದನಾ ವೆಚ್ಚಕ್ಕಿಂತ 50% ಲಾಭವನ್ನು ಖಾತರಿಪಡಿಸುತ್ತದೆ. ಆದರೆ ಕೇಂದ್ರ ಸರ್ಕಾರವು ಎ 2+ ಎಫ್ಎಲ್ ಸೂತ್ರವನ್ನು ಪರಿಗಣಿಸುತ್ತದೆ ಎಂದು ಜೇಟ್ಲಿ ಹೇಳಿದ್ದರು.

ರಾಜ್ಯ ಏಜೆನ್ಸಿಗಳು ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಿದ ನಂತರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ಅಧೀನದಲ್ಲಿರುವ ಭಾರತದ ಆಹಾರ ನಿಗಮ ಮತ್ತು ಇತರ ರಾಜ್ಯ ಏಜೆನ್ಸಿಗಳು ಶಿಫಾರಸು ಮಾಡಿದ ಕನಿಷ್ಠ ಬೆಂಬಲ ಬೆಲೆಯ ಬೆಳೆಗಳ ಸಂಗ್ರಹವನ್ನು ಕೈಗೊಳ್ಳುತ್ತವೆ. ಪ್ರಸ್ತುತ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮತ್ತು ಸಂಗ್ರಹವನ್ನು ಗೋಧಿ ಮತ್ತು ಭತ್ತದ ಬೆಳೆಗಳಿಗೆ ಮಾತ್ರ ಜಾರಿಗೆ ತರಲಾಗಿದೆ.

ಎಷ್ಟು ಧಾನ್ಯಗಳನ್ನು ಸಂಗ್ರಹಿಸಬೇಕು ಎಂಬುದು ಹೆಚ್ಚಾಗಿ ರಾಜ್ಯಮಟ್ಟದ ಅನುಷ್ಠಾನದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಆದ್ದರಿಂದ ರಾಜ್ಯದಿಂದ ರಾಜ್ಯಕ್ಕೆ ಇದು ಭಿನ್ನವಾಗಿರುತ್ತದೆ. ಈ ನಿಟ್ಟಿನಲ್ಲಿ ಪಂಜಾಬ್ ಇತರ ರಾಜ್ಯಗಳಿಗಿಂತ ಭಿನ್ನವಾಗಿದೆ.

ನಮ್ಮ ದೇಶದಲ್ಲಿ ಭತ್ತ ಉತ್ಪಾದಿಸುವ ರಾಜ್ಯಗಳಲ್ಲಿ ಪಶ್ಚಿಮ ಬಂಗಾಳ ಮೊದಲ ಸ್ಥಾನದಲ್ಲಿದ್ದರೆ, ಪಂಜಾಬ್ 2ನೇ ಸ್ಥಾನದಲ್ಲಿದೆ. ದೇಶದ ಒಟ್ಟು ಭತ್ತ ಉತ್ಪಾದನೆಯ ಶೇ 11.5ರಷ್ಟು ಭತ್ತ ಇಲ್ಲಿ ಬೆಳೆಯುತ್ತದೆ. ಉತ್ತರ ಪ್ರದೇಶದ ನಂತರದ ಅತಿ ಹೆಚ್ಚು ಗೋಧಿ ಉತ್ಪಾದಿಸುವ ರಾಜ್ಯ ಇದಾಗಿದೆ. ದೇಶದ ಒಟ್ಟು ಗೋಧಿ ಉತ್ಪಾದನೆಯಲ್ಲಿ ಶೇ 17.9 ರಷ್ಟು ಪಂಜಾಬ್​ನಿಂದ ಬರುತ್ತಿದೆ. ಪಂಜಾಬ್​ನಲ್ಲಿ ಉತ್ಪಾದನೆಯಾಗುವ ಶೇ 65 ರಷ್ಟು ಭತ್ತ ಮತ್ತು ಶೇ 32.6ರಷ್ಟು ಗೋಧಿಯನ್ನು ಸರ್ಕಾರವೇ ಖರೀದಿಸುತ್ತಿದೆ. 2020-2021ರ ಹಿಂಗಾರು ಹಂಗಾಮಿನಲ್ಲಿ ಮಧ್ಯಪ್ರದೇಶವು ಗೋಧಿ ಸಂಗ್ರಹಕ್ಕೆ ಶೇ 33.2ರಷ್ಟು ಗೋಧಿಯನ್ನು ನೀಡಿದೆ.

ಕನಿಷ್ಠ ಬೆಂಬಲ ಬೆಲೆ ಅನುಷ್ಠಾನ ಮತ್ತು ಸರ್ಕಾರವು ಧಾನ್ಯಗಳನ್ನು ಸಂಗ್ರಹಿಸುವ ವಿಧಾನ ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತದೆ. ಕನಿಷ್ಠ ಬೆಂಬಲ ಬೆಲೆಯಿರುವ ಈ ಬೆಳೆಗಳನ್ನು ಖರೀದಿಸುವುದರಿಂದ ಬೆಳೆಗಳ ಮಾರುಕಟ್ಟೆ ಬೆಲೆಯೂ ಪರಿಣಾಮ ಬೀರುತ್ತದೆ.

ಎಂಎಸ್‌ಪಿಯಲ್ಲಿ (ಪಂಜಾಬ್ ಮತ್ತು ಹರಿಯಾಣದಂತೆಯೇ) ಗಣನೀಯ ಪ್ರಮಾಣದಲ್ಲಿ ಗೋಧಿ ಮತ್ತು ಭತ್ತವನ್ನು ಸಂಗ್ರಹಿಸುವ ಸ್ಥಳಗಳಲ್ಲಿ, ಮಾರುಕಟ್ಟೆಯ ಬೆಲೆ ಕನಿಷ್ಠ ಬೆಂಬಲ ಬೆಲೆಗೆ ಅನುಗುಣವಾಗಿರುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಕಡಿಮೆ ಅಥವಾ ಸಂಗ್ರಹವಿಲ್ಲದ ಸ್ಥಳಗಳಲ್ಲಿ, ಮಾರುಕಟ್ಟೆ ಬೆಲೆ ಎಂಎಸ್‌ಪಿಗಿಂತಲೂ ಕಡಿಮೆಯಿರುತ್ತದೆ. ಖಾಸಗಿ ವ್ಯಾಪಾರಿಗಳ ದರನಿಗದಿಯು ಬಹುತೇಕ ಸಂದರ್ಭಗಳಲ್ಲಿ ಬೆಂಬಲ ಬೆಲೆಯನ್ನು ಗಮನದಲ್ಲಿರಿಸಿಕೊಂಡೇ ತಮ್ಮ ಕೊಳ್ಳುವ ದರವನ್ನು ಘೋಷಿಸುತ್ತಾರೆ. ಹೀಗಾಗಿ ರೈತರು ಕನಿಷ್ಠ ಬೆಂಬಲ ಬೆಲೆಗಾಗಿ ಒತ್ತಾಯಿಸುತ್ತಿದ್ದಾರೆ.

ರೈತರಿಗೆ ಕನಿಷ್ಠ ಬೆಂಬಲ ಬೆಲೆ ಬಗ್ಗೆ ಆತಂಕ ಯಾಕೆ?

ಈಗಾಗಲೇ ಅಂಗೀಕರಿಸಿದ ಕಾನೂನುಗಳಲ್ಲಿ ರೈತರ ಉತ್ಪಾದನಾ ವ್ಯಾಪಾರ ಮತ್ತು ವಾಣಿಜ್ಯ (ಪ್ರಚಾರ ಮತ್ತು ಸೌಲಭ್ಯ) ಕಾಯ್ದೆ ಎಂಬುದೊಂದಿದೆ. ಇದು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಆವರಣವನ್ನು ಹೊರತುಪಡಿಸಿದ ಸ್ಥಳಗಳಲ್ಲಿಯೂ ಮಾರುಕಟ್ಟೆಗಳನ್ನು ಸ್ಥಾಪಿಸಲು ಅನುಮತಿ ನೀಡುತ್ತದೆ. ಅಷ್ಟೇ ಅಲ್ಲದೆ ವ್ಯಾಪಾರಕ್ಕಾಗಿ ಹೊಸ ಜಾಗವನ್ನು ಸೃಷ್ಟಿಸುತ್ತದೆ ಮತ್ತು ಎಪಿಎಂಸಿ ಮಂಡಿಗಳ ಹೊರಗಿನ ಖರೀದಿಗಳಿಗಾಗಿ ರೈತರು ಮತ್ತು ವ್ಯಾಪಾರಿಗಳ ಮೇಲೆ ಈ ಹಿಂದೆ ರಾಜ್ಯದಿಂದ ವಿಧಿಸಲಾಗಿದ್ದ ತೆರಿಗೆಯನ್ನು ನಿಷೇಧಿಸುತ್ತದೆ.

ತೆರಿಗೆ ವಿಧಿಸುವ (ಎಪಿಎಂಸಿ ಮಾರುಕಟ್ಟೆಗಳು) ಮಾರುಕಟ್ಟೆ ಮತ್ತು ತೆರಿಗೆ ವಿಧಿಸದೇ ಇರುವ ಮಾರುಕಟ್ಟೆ ಎಂಬ ಎರಡು ಪ್ರಕಾರಗಳು ಚಾಲ್ತಿಗೆ ಬರಬಹುದು. ಇದು ಮುಂದುವರಿದರೆ ವ್ಯಾಪಾರವು ಎರಡನೆಯದಕ್ಕೆ ಬದಲಾಗುತ್ತದೆ. ರಾಜ್ಯ ಸರ್ಕಾರಗಳು ಮಂಡಿಯನ್ನು ನಿರ್ವಹಿಸಲು ಹೆಚ್ಚಿನ ತೆರಿಗೆಗಳನ್ನು ಸ್ವೀಕರಿಸದಿದ್ದರೆ, ಅದು ಎಪಿಎಂಸಿ ವ್ಯವಸ್ಥೆಯತ್ತ ನಿರ್ಲಕ್ಷ್ಯ ತೋರಬಹುದು. ಇವು ಪ್ರತಿಭಟನಾನಿರತ ರೈತರ ಆತಂಕ.

ಪ್ರತಿಭಟನಾನಿರತ ರೈತರಲ್ಲಿ ಎಪಿಎಂಸಿ ಮಂಡಿ ವ್ಯವಸ್ಥೆಗೆ (ವಿಶೇಷವಾಗಿ ಪಂಜಾಬ್ ಮತ್ತು ಹರಿಯಾಣದಲ್ಲಿ ಮಂಡಿಗಳು ಹೆಚ್ಚು ಸಕ್ರಿಯವಾಗಿವೆ) ಯಾವುದೇ ತೊಂದರೆಯಾಗದು ಎಂದು ಖಾತ್ರಿಪಡಿಸಲು ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ಯಾವುದೇ ನಿಯಮಗಳಿಲ್ಲದ ಪರಿಸರದಲ್ಲಿ ದೊಡ್ಡ ಕಾರ್ಪೊರೇಟ್ ಸಂಸ್ಥೆಗಳಿಂದ ತಮಗೆ ಮೋಸವಾಗಬಹುದು ಎಂಬ ರೈತರ ಆತಂಕ ಹೋಗಲಾಡಿಸಲು ಸರ್ಕಾರ ಇದುವರೆಗೂ ಮುತುವರ್ಜಿ ವಹಿಸಿಲ್ಲ.

ಇದಲ್ಲದೆ, ಈ ಉತ್ತರದ ರಾಜ್ಯಗಳ ಹೊಲಗಳಲ್ಲಿ ಪ್ರಾಬಲ್ಯ ಹೊಂದಿರುವ ಗೋಧಿ ಮತ್ತು ಭತ್ತದಂತಹ ಹೆಚ್ಚಿನ ಇಳುವರಿ ಬೆಳೆಗಳಿಗೆ ಸಂಗ್ರಹಣೆಯ ಭರವಸೆ ಇಲ್ಲ.

ಕನಿಷ್ಠ ಬೆಂಬಲ ಬೆಲೆ ಸ್ಥಗಿತಗೊಂಡರೆ ಆಹಾರ ಧಾನ್ಯಗಳ ಸಾರ್ವಜನಿಕ ವಿತರಣಾ ವ್ಯವಸ್ಥೆಗೂ (ಪಿಡಿಎಸ್) ಅಪಾಯ. ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆ 2013ರ ಪ್ರಕಾರ, ಸರ್ಕಾರವು ಕನಿಷ್ಠ ಶೇ 67ರಷ್ಟು ಜನಸಂಖ್ಯೆಗೆ ಸಬ್ಸಿಡಿ ಆಹಾರ ಧಾನ್ಯಗಳನ್ನು (ಮುಖ್ಯವಾಗಿ ಗೋಧಿ, ಅಕ್ಕಿ ಮತ್ತು ರಾಗಿ) ಒದಗಿಸಬೇಕಿದೆ.

ರೈತರ ಆತಂಕಗಳಿಗೆ ಪ್ರತಿಕ್ರಿಯಿಸಿದ ಮೋದಿ, ಕನಿಷ್ಠ ಬೆಂಬಲ ವ್ಯವಸ್ಥೆಯು ಉಳಿಯುತ್ತದೆ ಮತ್ತು ಸರ್ಕಾರದ ಖರೀದಿ ಮುಂದುವರಿಯುತ್ತದೆ ಎಂದು ಒತ್ತಿಹೇಳಿದ್ದಾರೆ.

ಆದಾಗ್ಯೂ, ಕೃಷಿ ಕಾನೂನುಗಳಲ್ಲಿಯೇ ಎಂಎಸ್‌ಪಿಯಲ್ಲಿ ಸಂಗ್ರಹಣೆಯ ಭರವಸೆಯನ್ನು ಸರ್ಕಾರ ನೀಡಬೇಕು ಎಂದು ರೈತ ಸಂಘಟನೆಗಳು ಒತ್ತಾಯಿಸುತ್ತಿವೆ.

– ರಶ್ಮಿ ಕೆ.

ಕೃಷಿ ಕಾಯ್ದೆಗಳ ಬಗ್ಗೆ ವಿದೇಶಗಳಲ್ಲೂ ಸ್ಪಷ್ಟನೆ ಕೊಡುತ್ತಿದೆ ಭಾರತ ಸರ್ಕಾರ

Published On - 2:26 pm, Fri, 4 December 20