Explainer | ರೈಲ್ವೆ ಇಲಾಖೆಯ ಗ್ರೂಪ್​ ಸಿ ಅಧಿಕಾರಿಗೆ ಸೇನಾ ಮೆಡಲ್, ರಕ್ಷಣಾ ಇತಿಹಾಸದಲ್ಲಿದು ಮಹತ್ವದ ವಿದ್ಯಮಾನ

ಪುಲ್ವಾಮಾ ಬಾಂಬ್​ ಸ್ಫೋಟದ ನಂತರದ ಬೆಳವಣಿಗೆಗಳು ಮತ್ತು ಚೀನಾ ಗಡಿಯಲ್ಲಿ ತಲೆದೋರಿದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸೇನಾ ತುಕಡಿಗಳು ಕ್ಷಿಪ್ರಗತಿಯಲ್ಲಿ ಗಮ್ಯ ಸ್ಥಾನ ತಲುಪಲು ಶ್ರಮಿಸಿದ ಎಲೆಮರೆಯ ಸಾಧಕನೊಬ್ಬನ ಕರ್ತವ್ಯಪರತೆ ಮತ್ತು ದೇಶಭಕ್ತಿಯನ್ನು ಭೂಸೇನೆ ಗುರುತಿಸಿ, ಗೌರವಿಸಿದೆ.

  • TV9 Web Team
  • Published On - 17:53 PM, 19 Jan 2021
Explainer | ರೈಲ್ವೆ ಇಲಾಖೆಯ ಗ್ರೂಪ್​ ಸಿ ಅಧಿಕಾರಿಗೆ ಸೇನಾ ಮೆಡಲ್, ರಕ್ಷಣಾ ಇತಿಹಾಸದಲ್ಲಿದು ಮಹತ್ವದ ವಿದ್ಯಮಾನ
ಸೇನಾ ರೈಲು (ಸಂಗ್ರಹ ಚಿತ್ರ)

‘ಪೂರ್ವ ಪಾಕಿಸ್ತಾನದಲ್ಲಿ ರಕ್ತದ ಓಕುಳಿ ಹರಿಯುತ್ತಿದೆ, ಮಹಿಳೆಯರ ಮೇಲೆ ಅತ್ಯಾಚಾರಗಳು ಅವ್ಯಾಹತವಾಗಿ ನಡೆಯುತ್ತಿವೆ. ನಾನು ಈ ದೇಶದ ಪ್ರಧಾನಿ ಮಾತ್ರವೇ ಅಲ್ಲ, ಒಬ್ಬ ಹೆಣ್ಣೂ ಹೌದು. ನನಗೆ ಇನ್ನು ಸಹಿಸಲು ಸಾಧ್ಯವಿಲ್ಲ. ಈಗಿಂದೀಗಲೇ ಅಲ್ಲಿಗೆ ಸೇನೆ ನುಗ್ಗಿಸೋಣ. ಏನು ಹೇಳ್ತೀರಿ?’

ಅದು 1971ರ ಏಪ್ರಿಲ್ 23. ಭೂಸೇನಾ ಮುಖ್ಯಸ್ಥ ಜನರಲ್ ಮಾಣೆಕ್ ಷಾ ಎದುರು ಅಸ್ಸಾಂ, ಪಶ್ಚಿಮ ಬಂಗಾಳ ಮುಖ್ಯಮಂತ್ರಿಗಳು ಕಳಿಸಿದ್ದ ಟಿಪ್ಪಣಿಗಳನ್ನು ಓದಿದ ನಂತರ ಇಂದಿರಾ ಗಾಂಧಿ ಕೇಳಿದ್ದ ಪ್ರಶ್ನೆಯಿದು. ‘ಈಗ ಯುದ್ಧಕ್ಕೆ ನಾನು ಸಿದ್ಧನಿಲ್ಲ’ ಮಾಣೆಕ್​ ಷಾ ಸ್ಪಷ್ಟವಾಗಿ ಹೇಳಿದರು. ತನ್ನ ಅಭಿಪ್ರಾಯಕ್ಕೆ ಎದುರಾಡಿದ ಸೇನಾ ಮುಖ್ಯಸ್ಥರ ಮಾತುಗಳನ್ನು ಇಂದಿರಾಗಾಂಧಿ ತಾಳ್ಮೆಯಿಂದ ಕೇಳಿಸಿಕೊಂಡರು.  ಅಂದು ಅವರಿಬ್ಬರ ನಡುವೆ ನಡೆದ ಮಾತುಕತೆ ಮತ್ತು ಇಬ್ಬರೂ ಸೇರಿ ತೆಗೆದುಕೊಂಡ ನಿರ್ಧಾರಗಳು ಮುಂದಿನ ದಿನಗಳಲ್ಲಿ ಭಾರತೀಯ ಸೇನೆಯ ಭವಿಷ್ಯವನ್ನು ಹೊಸದಾಗಿ ಬರೆದಿದ್ದವು.

‘ಈಗಿಂದೀಗಲೇ ಏಕೆ ಯುದ್ಧ ಘೋಷಿಸಲಾರೆ’ ಎಂಬುದಕ್ಕೆ ಮಾಣೆಕ್​ ಷಾ ಕೊಟ್ಟಿದ್ದ ಕಾರಣಗಳ ಪೈಕಿ ‘ಈಗ ಕೃಷಿ ಉತ್ಪನ್ನಗಳ ಸಾಗಾಣಿಕೆಗೆ ರೈಲು ಗಾಡಿಗಳು ಬೇಕು. ಸೇನಾ ನಿಯೋಜನೆಗಾಗಿ ನನಗೆ ತಕ್ಕಷ್ಟು ರೈಲುಗಾಡಿಗಳು ಲಭ್ಯವಿಲ್ಲ’ ಎನ್ನುವುದೂ ಸೇರಿತ್ತು. ಯುಟ್ಯೂಬ್​ನಲ್ಲಿ ಲಭ್ಯವಿರುವ ವಿಡಿಯೊ ಸಂದರ್ಶನವೊಂದರಲ್ಲಿ ಫೀಲ್ಡ್​ ಮಾರ್ಷಲ್ ಮಾಣೆಕ್ ಷಾ ಈ ಬಗ್ಗೆ ಸುದೀರ್ಘವಾಗಿ ವಿವರಿಸಿದ್ದಾರೆ.

ಯುದ್ಧವೊಂದನ್ನು ನಿರ್ಣಾಯಕವಾಗಿ ಗೆಲ್ಲಲು ‘ಅಚ್ಚರಿ’ ಮತ್ತು ‘ಆಘಾತ’ಗಳೆಂಬ ತಂತ್ರಗಳ ಬಳಕೆಯಾಗಬೇಕು. ಎದುರಾಳಿಗಳು ನಿರೀಕ್ಷೆ ಮಾಡದಷ್ಟು ವೇಗದಲ್ಲಿ ನಮ್ಮ ಸೇನೆಯು ದಾಳಿಗೆ ಅಥವಾ ರಕ್ಷಣೆಗೆ ಗುರುತಿಸಿದ ಸ್ಥಳ ತಲುಪಬೇಕು. ಇದನ್ನು ಸಾಧ್ಯವಾಗಿಸಲು ಸೇನೆಗೆ ರೈಲ್ವೆ ಇಲಾಖೆ ಬೆನ್ನೆಲುಬಾಗಿ ನಿಲ್ಲಬೇಕು ಎಂಬ ಸೂಕ್ಷ್ಮವನ್ನು ಮಾಣೆಕ್ ಷಾ ಅಂದು ಪ್ರಧಾನಿಗೆ ಅರ್ಥ ಮಾಡಿಸಿದ್ದರು.

ಇದಾದ 8 ತಿಂಗಳ ನಂತರ ಭಾರತೀಯ ಸೇನೆ ಪಾಕಿಸ್ತಾನದ ಮೇಲೆ ಯುದ್ಧ ಘೋಷಿಸಿ, ಕೇವಲ 13 ದಿನಗಳಲ್ಲಿ ಬಾಂಗ್ಲಾ ವಿಮೋಚನೆ ಮಾಡಿತ್ತು. ಯುದ್ಧ ನಡೆದದ್ದು 13 ದಿನಗಳಾದರೂ, ಅದಕ್ಕೆ ಸಿದ್ಧತೆಗೆ ಸೇನಾ ಮುಖ್ಯಸ್ಥರು 8 ತಿಂಗಳ ಸಮಯ ಪಡೆದುಕೊಂಡಿದ್ದರು. ಅಂದಹಾಗೆ 50 ವರ್ಷಗಳ ನಂತರ, ಈಗ ಈ ಘಟನೆ ನೆನಪಾಗಲು ಕಾರಣವಿದೆ.

ರೈಲ್ವೆ ಇಲಾಖೆ ಅಧಿಕಾರಿಗೆ ಸೇನಾ ಮೆಡಲ್
ಪುಲ್ವಾಮಾ ಬಾಂಬ್​ ಸ್ಫೋಟದ ನಂತರದ ಬೆಳವಣಿಗೆಗಳು ಮತ್ತು ಗಾಲ್ವಾನ್​ ಕಣಿವೆ ಸಂಘರ್ಷದ ನಂತರ ಚೀನಾ ಗಡಿಯಲ್ಲಿ ತಲೆದೋರಿದ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಸೇನಾ ತುಕಡಿಗಳು ಕ್ಷಿಪ್ರಗತಿಯಲ್ಲಿ ಯೋಜಿತ ಗಮ್ಯ ಸ್ಥಾನ ತಲುಪಲು ಹಗಲಿರುಳು ಶ್ರಮಿಸಿದ ಎಲೆಮರೆಯ ಸಾಧಕನೊಬ್ಬನ ಕರ್ತವ್ಯಪರತೆ ಮತ್ತು ದೇಶಭಕ್ತಿಯನ್ನು ಭೂಸೇನೆ ಗುರುತಿಸಿ, ಗೌರವಿಸಿದೆ. ನಾಗರಿಕ ಸೇವೆಯ ಕಿರಿಯ ದರ್ಜೆ ಅಧಿಕಾರಿಯೊಬ್ಬರಿಗೆ ಈ ಗೌರವ ಸಿಕ್ಕಿರುವುದು ದೇಶದ ಇತಿಹಾಸದಲ್ಲಿ ಇದೇ ಮೊದಲು.

ಸಶಸ್ತ್ರಪಡೆಗಳ ಸೇವೆಯಲ್ಲಿರುವವರಿಗೂ ಅಪರೂಪ ಎನಿಸಿರುವ ಸೇನಾ ಮುಖ್ಯಸ್ಥರ ಪದಕವನ್ನು (Chief of Army Staff Commendation) ರೈಲ್ವೆ ಇಲಾಖೆಯ ಗ್ರೂಪ್​ ಸಿ ನೌಕರನಿಗೆ ಈಚೆಗೆ ನಡೆದ ಭೂಸೇನಾ ದಿನದಂದು (ಜ.15) ನೀಡಿ ಗೌರವಿಸಲಾಗಿದೆ. ಈ ಮೂಲಕ ದೇಶರಕ್ಷಣೆಯಲ್ಲಿ ರೈಲ್ವೆ ಇಲಾಖೆ ವಹಿಸುವ ಪಾತ್ರವನ್ನೂ ಭೂಸೇನೆಯು ಗೌರವಿಸಿದಂತೆ ಆಗಿದೆ.

ಇದೀಗ ಗೌರವಕ್ಕೆ ಪಾತ್ರವಾಗಿರುವ ರೈಲ್ವೆ ಇಲಾಖೆಯ ಸಿಬ್ಬಂದಿ ಸೇನಾಪಡೆಗೆ ಹೇಗೆ ನೆರವಾದರು? ರೈಲ್ವೆ ವ್ಯವಸ್ಥೆಯನ್ನು ಸೇನಾ ತುಕಡಿಗಳ ತ್ವರಿತ ಸಾಗಣೆಗೆ ಹೇಗೆ ಬಳಸಿಕೊಳ್ಳಲಾಯಿತು ಎಂಬ ಬಗ್ಗೆ ಭೂಸೇನೆ ಮತ್ತು ರೈಲ್ವೆ ಇಲಾಖೆಗಳು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು  ಬಹಿರಂಗಪಡಿಸಿಲ್ಲ. ದೇಶದ ರಕ್ಷಣೆ, ಭೂಸೇನೆ ಹಾಗೂ ಸೇನೆಯೊಂದಿಗೆ ಕಾರ್ಯನಿರ್ವಹಿಸುವ ರೈಲ್ವೆ ಇಲಾಖೆ ಸಿಬ್ಬಂದಿ ಮತ್ತು ಅವರ ಕುಟುಂಬದ ಸುರಕ್ಷೆ ದೃಷ್ಟಿಯಿಂದ ಈ ಮಾಹಿತಿಯನ್ನು ಅತ್ಯಂತ ಗೌಪ್ಯವಾಗಿರಿಸಲಾಗಿದೆ ಎಂದು ಉನ್ನತ ಮೂಲಗಳನ್ನು ಉಲ್ಲೇಖಿಸಿ ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

ಆದರೆ ಭೂಸೇನಾ ಮುಖ್ಯಸ್ಥರ ಮೆಡಲ್ ಪಡೆದವರ ಹೆಸರು ಮಾತ್ರ ಸಾರ್ವಜನಿಕವಾಗಿದೆ. ರೈಲ್ವೆ ಇಲಾಖೆ ಮತ್ತು ಮಿಲಿಟರಿ ನಡುವಿನ ಸಂಬಂಧದ ಬಗ್ಗೆ ಸಾರ್ವಜನಿಕವಾಗಿ ಲಭ್ಯವಿರುವ ಕೆಲ ಮಾಹಿತಿ ತುಣುಕುಗಳನ್ನು ಆಧರಿಸಿ ‘ದಿ ಪ್ರಿಂಟ್’ ಜಾಲತಾಣ ಪ್ರಕಟಿಸಿರುವ ವರದಿಯ ಪ್ರಕಾರ ಸೇನಾ ಮುಖ್ಯಸ್ಥರ ಮೆಡಲ್​ ಗೌರವ ಪಡೆದ ಸಿಬ್ಬಂದಿಯ ಹೆಸರು ಅಮರೇಶ್​ ಕುಮಾರ್ ಚೌಧರಿ. 50 ವರ್ಷದ ಅಮರೇಶ್ ಅವರು ರೈಲ್ವೆಯ ಮಿಲಿಟರಿ ವಿಭಾಗದ ಕಂಟ್ರೋಲ್​ ರೂಂ ಮುಖ್ಯಸ್ಥರಾಗಿ ಕೆಲಸ ಮಾಡುತ್ತಾರೆ. ಈ ವಿಭಾಗಕ್ಕೆ ರೈಲ್ವೆ ಮತ್ತು ಮಿಲಿಟರಿಯಲ್ಲಿ ‘ಮಿಲ್ ರೈಲ್’ ಎಂದು ಕರೆಯುತ್ತಾರೆ.

ಪುಲ್ವಾಮಾ ಬಾಂಬ್ ಸ್ಫೋಟ ಮತ್ತು ಲಡಾಖ್​ ಗಡಿಯಲ್ಲಿ ಚೀನಾ ಸೇನೆಯೊಂದಿಗೆ ಭಾರತೀಯ ಸೇನೆಯು ಮುಖಾಮುಖಿಯಾದ ನಂತರದ ಬೆಳವಣಿಗೆಗಳಿಂದಾಗಿ ಗಡಿಯಲ್ಲಿ ಸೇನಾ ನಿಯೋಜನೆಯನ್ನು ತುರ್ತಾಗಿ ಹೆಚ್ಚಿಸಬೇಕಾಯಿತು. ದೇಶದ ವಿವಿಧ ನೆಲೆಗಳಲ್ಲಿದ್ದ ದೊಡ್ಡಸಂಖ್ಯೆಯ ಸಿಬ್ಬಂದಿ ಮತ್ತು ಯುದ್ಧೋಪಕರಣಗಳನ್ನು ಗಡಿಗೆ ತುರ್ತಾಗಿ ರವಾನಿಸಬೇಕಾಯಿತು. ಸೇನೆಯ ಯೋಜನೆ ಕಾರ್ಯರೂಪಕ್ಕೆ ತರಲೆಂದು ಚೌಧರಿ ಹಗಲಿರುಳು ಶ್ರಮಿಸಿದರು ಎಂದು ಉನ್ನತ ಮೂಲಗಳು ಹೇಳಿವೆ.

‘ರೈಲ್ವೆ ಇಲಾಖೆಯ ಗ್ರೂಪ್​ ಸಿ ನೌಕರರನ್ನು ಭೂಸೇನೆ ಗೌರವಿಸಿರುವುದು ಇದೇ ಮೊದಲು. ಮಾತ್ರವಲ್ಲ, ಸಶಸ್ತ್ರಪಡೆಗಳ ಮಹತ್ವದ ಪುರಸ್ಕಾರವನ್ನು ಪಡೆದ ನಾಗರಿಕ ಸೇವೆಯ ಅಧಿಕಾರಿ ಅಪ್ರತಿಮ ಕರ್ತವ್ಯತತ್ಪರನೇ ಆಗಿರಬೇಕು. ಈ ಹಿಂದೆಯೂ ರೈಲ್ವೆಯ ಕೆಲ ಅಧಿಕಾರಿಗಳಿಗೆ ಇಂತ ಗೌರವ ಸಿಕ್ಕಿತ್ತು. ಆದರೆ ಅವರೆಲ್ಲರೂ ದೊಡ್ಡ ಹುದ್ದೆಯಲ್ಲಿದ್ದ ಹಿರಿಯ ಅಧಿಕಾರಿಗಳೇ ಆಗಿದ್ದರು’ ಎಂದು ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಹೇಳಿದರು.

ಮಿಲ್ ರೈಲ್ ಕಾರ್ಯನಿರ್ವಹಣೆ ಅತ್ಯಂತ ಗೌಪ್ಯ ವಿಷಯವಾದ ಕಾರಣ ಅದರ ಬಗ್ಗೆ ಹೊರಗೆಲ್ಲೂ ಮಾಹಿತಿ ಸಿಗುವುದೇ ಇಲ್ಲ. ಈ ಕುರಿತು ರೈಲ್ವೆ ಇಲಾಖೆಯ ವಕ್ತಾರ ಡಿ.ಜೆ.ನಾರಾಯಣ್ ಸಹ ಮಾಧ್ಯಮಗಳೊಂದಿಗೆ ಯಾವುದೇ ಮಾಹಿತಿ ಹಂಚಿಕೊಂಡಿಲ್ಲ.

ಏನಿದು ಮಿಲ್ ರೈಲ್
ಶಾಂತಿಕಾಲ, ಯುದ್ಧಕ್ಕೆ ಸಿದ್ಧತೆ ಮತ್ತು ಯುದ್ಧ ಘೋಷಣೆಯಾದ ನಂತರ ಸೇನಾ ಸಿಬ್ಬಂದಿ ಮತ್ತು ಯುದ್ಧೋಪಕರಣಗಳನ್ನು ಶಾಂತಿ ಕಾಲದ ನೆಲೆಗಳಿಂದ ಮುಂಚೂಣಿ ನೆಲೆಗಳಿಗೆ ನಿಗದಿತ ಅವಧಿಯಲ್ಲಿ ರವಾನಿಸುವುದು ಈ ವಿಭಾಗದ ಹೊಣೆಗಾರಿಕೆ. ಈ ವಿಭಾಗ ಅತ್ಯಂತ ಗೌಪ್ಯವಾಗಿ ಕಾರ್ಯನಿರ್ವಹಿಸುತ್ತದೆ. ರಕ್ಷಣಾ ಇಲಾಖೆ ರೈಲ್ವೆ ಇಲಾಖೆಯ ಉನ್ನತ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆ ಯಾರಿಗೂ ಈ ವಿಭಾಗದಲ್ಲಿ ಕೆಲಸ ಮಾಡುವ ಸಿಬ್ಬಂದಿಯ ಮಾಹಿತಿ ಮತ್ತು ಅವರು ನಿರ್ವಹಿಸುವ ಹೊಣೆಗಾರಿಕೆ ವಿವರಗಳು ಸಿಗುವುದಿಲ್ಲ.

ವಿಶೇಷವೆಂದರೆ ರೈಲ್ವೆಯ ಈ ವಿಭಾಗ ಸ್ವಾಯುತ್ತ ಸಂಸ್ಥೆಯ ರೀತಿಯಲ್ಲಿ ಕೆಲಸ ಮಾಡುತ್ತದೆ. ಈ ಸಿಬ್ಬಂದಿ ರೈಲ್ವೆ ಇಲಾಖೆಯ ಇತರರಂತೆ ರೈಲ್ವೆ ಮಂಡಳಿಗೆ ಅಧೀನರೂ ಆಗಿರುವುದಿಲ್ಲ. ಈ ವಿಭಾಗದ ಮುಖ್ಯ ಕಚೇರಿ ರೈಲು ಭವನ​ದ ಬದಲು, ಸೇನಾ ಭವನದಲ್ಲಿದೆ. ಸೇನಾ ತುಕಡಿಯೊಂದು ಗಡಿಯಲ್ಲಿ ಯಶಸ್ಸು ಕಾಣಲು ಈ ವಿಭಾಗ ಬೆನ್ನೆಲುಬಾಗಿ ಕೆಲಸ ಮಾಡುತ್ತದೆ. ಸಮರತಂತ್ರಗಳನ್ನು ರೂಪಿಸುವ ಹಿರಿಯ ಕಮಾಂಡರ್​ಗಳೂ ಯಾವ ಗಡಿಯಲ್ಲಿ ಎಷ್ಟು ಸಂಖ್ಯೆಯ ಸೈನಿಕರನ್ನು ಎಷ್ಟು ದಿನಗಳಲ್ಲಿ ನಿಯೋಜಿಸಲು ಸಾಧ್ಯ ಎಂಬ ಲೆಕ್ಕಾಚಾರ ಹಾಕುವಾಗ ಮಿಲ್​ ರೈಲ್​ನಲ್ಲಿ ಕಾರ್ಯನಿರ್ವಹಿಸುವವರ ಅಭಿಪ್ರಾಯ ಕೇಳುತ್ತಾರೆ.

ಲಡಾಖ್​ ಸಂಘರ್ಷದಂಥ ತುರ್ತು ಪರಿಸ್ಥಿತಿಯಲ್ಲಿ ಸೇನಾ ಸಿಬ್ಬಂದಿಯನ್ನು ವಾಯುಮಾರ್ಗದಲ್ಲಿ ಮುಂಚೂಣಿ ನೆಲೆಗಳಿಗೆ ನಿಯೋಜಿಸಲಾಗುತ್ತದೆ. ಆದರೆ ನೆಲೆಯನ್ನು ಹಿಡಿದುಕೊಂಡವರಿಗೆ ಬೆಂಬಲವಾಗಿ ಒದಗಿಸಬರುವ ಸಿಬ್ಬಂದಿ ಮತ್ತು ಯುದ್ಧೋಪಕರಣಗಳನ್ನು ರೈಲು ಮಾರ್ಗಗಳ ಮೂಲಕ ಕಳಿಸಿಕೊಡಲಾಗುತ್ತದೆ. ಅಲ್ಲಿಂದ ರಸ್ತೆ ಮಾರ್ಗಗಳಲ್ಲಿ ಗಮ್ಯ ನೆಲೆಗಳಿಗೆ ತಲುಪಿಸಲಾಗುತ್ತದೆ.

ಸೇನಾ ತುಕಡಿ ಮತ್ತು ಯುದ್ಧೋಪಕರಣಗಳನ್ನು ಸಾಗಿಸುತ್ತಿರುವ ರೈಲುಗಳ ಮಾಹಿತಿಯು ರೈಲ್ವೆ ವಿಭಾಗೀಯ ಕಚೇರಿಗೆ ಗೂಢ ಸಂಕೇತಗಳಲ್ಲಿ ರವಾನೆಯಾಗುತ್ತದೆ. ಆಯಾ ವಿಭಾಗೀಯ ಕಚೇರಿಗಳಲ್ಲಿರುವ ಸೈಬರ್​ ಸೆಲ್ ಸಿಬ್ಬಂದಿ ಈ ಗೂಢಲಿಪಿಯ ಸಂಕೇತಗಳನ್ನು ಬಿಡಿಸಿ, ಹಿರಿಯ ಅಧಿಕಾರಿಗಳ ಗಮನ ಸೆಳೆಯುತ್ತಾರೆ.

ಪುಲ್ವಾಮಾ ಕಾರ್ಯಾಚರಣೆಯ ನಂತರ
ರಕ್ಷಾ ಭವನದಲ್ಲಿರುವ ಜಂಟಿ ಕಾರ್ಯದರ್ಶಿ ದರ್ಜೆಯ ಆರ್​ಟಿಸಿ (ರೈಲ್ವೆ ಟ್ರಾಫಿಕ್​ ಸರ್ವೀಸ್​) ಅಧಿಕಾರಿಯ ಉಸ್ತುವಾರಿಯಲ್ಲಿ ಮಿಲ್ ರೈಲ್ ವಿಭಾಗ ಕಾರ್ಯನಿರ್ವಹಿಸುತ್ತದೆ. ಈ ಅಧಿಕಾರಿ ರೂಪಿಸಿಕೊಟ್ಟ ಯೋಜನೆಯ ಅನ್ವಯವೇ ಸೇನೆಯು ದೇಶದ ವಿವಿಧ ಭಾಗಗಳ ನೆಲೆಗಳಲ್ಲಿದ್ದ ಸಾವಿರಾರು ಸೈನಿಕರನ್ನು ಪಾಕಿಸ್ತಾನ ಮತ್ತು ಚೀನಾದ ಮುಂಚೂಣಿ ನೆಲೆಗಳಿಗೆ ರವಾನಿಸಿ, ಉಪದ್ರವ ಕೊಟ್ಟವರಿಗೆ ತಿರುಗೇಟು ನೀಡಲು ಸಾಧ್ಯವಾಯಿತು.

ಚೀನಾ ಗಡಿಯಲ್ಲಿ ಈಚಿನ ದಿನಗಳಲ್ಲಿ ತುರ್ತಾಗಿ ಅಭಿವೃದ್ಧಿಯಾಗಿರುವ ರಸ್ತೆಗಳೂ ದೇಶದ ಗಮನ ಸೆಳೆದಿವೆ. ಮಂಜುಸುರಿಯುವ, ಅತಿಶೀತದ ವಾತಾವರಣದಲ್ಲಿ ಅಸಾಧ್ಯ ಎನಿಸುವಂತಿದ್ದ ರಸ್ತೆ ನಿರ್ಮಾಣದಂಥ ಸವಾಲನ್ನು ಸಾಧ್ಯವಾಗಿಸಿದ್ದ ಬಿಆರ್​ಒ (ಬಾರ್ಡರ್​ ರೋಡ್ ಆರ್ಗನೈಸೇಶನ್). ಬಿಆರ್​ಒಗೆ ಬೆನ್ನೆಲುಬಾಗಿ ನಿಂತವರು ಜಾರ್ಖಂಡ್ ಮತ್ತು ಇತರ ರಾಜ್ಯಗಳ ಕಾರ್ಮಿಕರು. ಈ ಕಾರ್ಮಿಕರನ್ನು ಸಕಾಲಕ್ಕೆ, ಯಾವುದೇ ತೊಂದರೆಯಾಗದ ರೀತಿಯಲ್ಲಿ ಗಮ್ಯ ಸ್ಥಾನಕ್ಕೆ ತಲುಪಿಸಲು ನೆರವಾಗಿದ್ದು ಮಾತ್ರ ರೈಲ್ವೆ ಇಲಾಖೆಯ ಮಿಲ್ ರೈಲ್.

ಮಿಲ್ ರೈಲ್​ನಲ್ಲಿ ಕಾರ್ಯನಿರ್ವಹಿಸುವುದು ಸುಲಭದ ಮಾತಲ್ಲ. ಅಲ್ಲಿ ಕೆಲಸ ಮಾಡುವವರು ಏಕಕಾಲಕ್ಕೆ ವಿಭಾಗೀಯ ರೈಲ್ವೆ ಕಚೇರಿಗಳು, ಗೃಹ ಇಲಾಖೆ ಮತ್ತು ರಕ್ಷಣಾ ಇಲಾಖೆಯ ಉನ್ನತ ಅಧಿಕಾರಿಗಳ ಜೊತೆಗೆ ಸಂವಹನ ನಡೆಸುತ್ತಿರಬೇಕು. ಶಾಂತಿಕಾಲದಲ್ಲಿಯೂ ಈ ವಿಭಾಗದ ಸನ್ನದ್ಧ ಸ್ಥಿತಿಯಲ್ಲಿಯೇ ಇರಬೇಕು. ಯುದ್ಧಕಾಲದಲ್ಲಿಯಾದರೆ ಇದೂ ಒಂದು ವಾರ್​ರೂಮ್​ ಆಗಿಬಿಡುತ್ತದೆ. ಮಿಲಿಟರಿ ಕಾರ್ಯಾಚರಣೆಗಳ ಯಶಸ್ಸು ಎಷ್ಟೋ ಸಂದರ್ಭದಲ್ಲಿ ಸೇನಾ ತುಕಡಿ ಮತ್ತು ಯುದ್ಧೋಪಕರಣಗಳ ಸಂಚಾರದ ಗೌಪ್ಯತೆಯನ್ನು ಅವಲಂಬಿಸಿರುತ್ತದೆ. ಹೀಗಾಗಿ ಇಡೀ ಕಾರ್ಯವಿಧಾನ ಅತ್ಯಂತ ಗೌಪ್ಯವಾಗಿ ನಡೆಯಬೇಕಿದೆ ಎಂದು ಮತ್ತೋರ್ವ ಅಧಿಕಾರಿ ಹೇಳುತ್ತಾರೆ.

ಪುಲ್ವಾಮಾ ದಾಳಿಯ ನಂತರ ಆರ್ಟಿಲರಿ ಗನ್​ಗಳು ಮತ್ತು ಟ್ಯಾಂಕ್​ಗಳನ್ನು ಗಡಿಗೆ ನಿಯೋಜಿಸಲಾಯಿತು. ಸಾಗುತ್ತಿರುವ ರೈಲು ಗಾಡಿಯಲ್ಲಿ ಯುದ್ಧೋಪಕರಣಗಳು ಇರಬಹುದು ಎಂಬ ಅನುಮಾನವೂ ಬಾರದಂತೆ ಅವನ್ನು ಬಚ್ಚಿಟ್ಟು ರವಾನಿಸಲಾಯಿತು. ಇದು ಮಹತ್ವದ ಹೊಣೆಗಾರಿಕೆಯಲ್ಲವೇ?

ನಿಗೂಢ ಸಂಕೇತಗಳ ಮೂಲಕವೇ ಈ ವಿಭಾಗದ ಸಂವಹನ ನಡೆಯುತ್ತದೆ. ಮಾಹಿತಿ ರವಾನಿಸುವವರು ಮತ್ತು ಸ್ವೀಕರಿಸುವವರಿಗೆ ಸರಿಯಾದ ಸಂಕೇತಾಕ್ಷರಗಳು ಗೊತ್ತಿದ್ದರೆ ಮಾತ್ರ ಮಾಹಿತಿಯ ಹೂರಣ ಅರ್ಥವಾಗುತ್ತದೆ. ಇಲ್ಲವಾದರೆ ಜಂಕ್​ ಅಕ್ಷರಗಳಂತೆ ಅಡಸಾಬಡಸಾ ಭಾಷೆಯಾಗಿಯೇ ಉಳಿದುಬಿಡುತ್ತದೆ. ರೈಲ್ವೆ ಇಲಾಖೆ, ರಕ್ಷಣಾ ಇಲಾಖೆ ಅಥವಾ ಗುಪ್ತಚರ ಅಧಿಕಾರಿಗಳೆಂದು ಹೇಳಿಕೊಂಡು ಕರೆ ಮಾಡುವ ಯಾರಿಗೂ, ಎಂಥದ್ದೇ ಸನ್ನಿವೇಶದಲ್ಲಿಯೂ ಇಲ್ಲಿನ ಸಿಬ್ಬಂದಿ ಒಂದಿನಿತೂ ಮಾಹಿತಿ ಬಿಟ್ಟುಕೊಡುವುದಿಲ್ಲ.

ಭೂಸೇನೆಯು ಅಧಿಕೃತವಾಗಿ ಮಿಲ್​ ರೈಲ್ ಅಧಿಕಾರಿಯನ್ನು ಗೌರವಿಸುವವರೆಗೆ ಇಂಥದ್ದೊಂದು ವಿಭಾಗ ಇದೆಯೆಂಬುದೂ ದೇಶದ ಹಲವರಿಗೆ ತಿಳಿದಿರಲಿಲ್ಲ.

Budget Explainer | ವಿತ್ತೀಯ ಕೊರತೆ ಅಥವಾ ಹಣಕಾಸು ಕೊರತೆ ಎಂದರೇನು? ಸರ್ಕಾರಗಳ ಪಾಲಿಗೆ ಇದೇಕೆ ಹಗ್ಗದ ಮೇಲಿನ ನಡಿಗೆ?