Sign In

By signing in or creating an account, you agree with Associated Broadcasting Company's Terms & Conditions and Privacy Policy.

Column: Gokak Falls; ಇದು ಘಟಪ್ರಭೆಯ ‘ಕೊನೆಯ ಹರಿವು’

Ghataprabha : ಅದೇ ಬಂಡೆಗಲ್ಲ ಮೇಲೆ ಕುಳಿತು ಕುತೂಹಲದಿಂದ ದಿಟ್ಟಿಸುತ್ತಲೇ ಆಕೆಯ ಭೋರ್ಗರೆತ, ವಯ್ಯಾರ, ಉತ್ಸಾಹ, ವ್ಯಂಗ್ಯ, ಮೌನ, ನಿರಾಸೆ ಎಲ್ಲದರಲ್ಲೂ ಅಡಗಿದ ಕಥೆಗಳನ್ನು ಕಿವಿಗೊಟ್ಟು ಕೇಳಿದ್ದೇನೆ. ಎದೆಗವಚಿ ಹಿಡಿದಿದ್ದೇನೆ. ಬಿಡದೇ ಕಾಡಿದ ಆ ಎಲ್ಲ ಕಥೆಗಳನ್ನು ನಿಮ್ಮೆದುರು ಸಾರಿದ್ದೇನೆ.

Column: Gokak Falls; ಇದು ಘಟಪ್ರಭೆಯ ‘ಕೊನೆಯ ಹರಿವು’
ಫೋಟೋ : ಡಾ. ನಿಸರ್ಗ
Follow us
ಶ್ರೀದೇವಿ ಕಳಸದ
|

Updated on:Aug 06, 2022 | 12:55 PM

ಗೋಕಾಕ ಫಾಲ್ಸ್ | Gokak Falls : ಘಟಪ್ರಭೆ ಎಂದಿನಂತೆ ಹರಿಯುತ್ತಿದ್ದಳು. ನಾನೂ ಎಂದಿನಂತೆ ಆಕೆಯ ಎದುರಿನ ಆ ಬಂಡೆಗಲ್ಲು ಮೇಲೆ ಮನಸೋತು ಸುಮ್ಮನೆ ಆಕೆಯನ್ನೇ ದಿಟ್ಟಿಸುತ್ತ ಕುಳಿತಿದ್ದೆ. ಎಂತ ಚೆಂದ ಆಕೆಯ ವಯ್ಯಾರದ ಹರಿವು. ನೋಡುತ್ತಲೇ ಇದ್ದೆ. ಆದರೆ ಹಾಳಾದ ಆ ಭೂತ ಮತ್ತು ಭವಿಷ್ಯದ ಹುಳುಗಳು ನಡುನಡುವೆ ನನ್ನ ತಲೆ ಹೊಕ್ಕು ನೆಮ್ಮದಿ ಭಂಗಪಡಿಸುತ್ತಿದ್ದವು. ಪಕ್ಕ ಕೊಂಚ ದೂರದಲ್ಲಿ ನನ್ನಂತೆ ಮತ್ತ್ಯಾರೋ ಕುಳಿತಿದ್ದರು, ಬೇಸರದ ಮುಖ ಹೊತ್ತು ಧುಮ್ಮಿಕ್ಕುವ ಘಟಪ್ರಭೆಯತ್ತ ನೋಡುತ್ತ. ನನ್ನಂತೆ ಭೂತ, ಭವಿಷ್ಯಗಳನ್ನು ಮರೆತು ವರ್ತಮಾನದ ನೆಮ್ಮದಿ ಅರಸಿ ಬಂದಿರಬಹುದೆಂದು ಊಹಿಸಿ ನುಡಿದೆ ಬಂಡೆಗಳ ಮೇಲಿಂದ ಜಾರುವ ಆ ಹಾಲ್ನೊರೆಯನ್ನೇ ನೋಡುತ್ತ “ಈ ಭೂತ, ಭವಿಷ್ಯಗಳನ್ನೆಲ್ಲ ಬದಿಗೊತ್ತಿ ಕೇವಲ ವರ್ತಮಾನದಲ್ಲೇ ಮನ ತೇಲಿದರೆ ಜೀವನ ಅದೆಷ್ಟು ಸರಾಗವಾಗಬಹುದು ಅಲ್ಲವೇ?!” “ಇಲ್ಲ.. ಬೇಡ..” ನಿಷ್ಠುರವಾಗಿ ನುಡಿದಳಾಕೆ. ನಾನು ಆಶ್ಚರ್ಯದಲ್ಲೇ ಆಕೆಯನ್ನು ನೋಡಿದೆ. ಅವಳೆ ಮುಂದುವರಿಸಿದಳು, “ಭೂತದ ನೆಮ್ಮದಿ ಮತ್ತು ವೈಭವ ಭವಿಷ್ಯದಲ್ಲಿ ಮರಳಿ ಬರಬಹುದು ಎಂಬ ಭರವಸೆಯಲ್ಲೇ ಇನ್ನೂ ಜೀವಂತವಾಗಿದ್ದೇನೆ. ವರ್ತಮಾನ ಬದುಕಬಹುದಾದ ಯಾವೊಂದು ನಂಬಿಕೆಯನ್ನು ಉಳಿಸಿಲ್ಲ ಆದರೂ ಊಸಿರಾಡುತ್ತಿದ್ದೇನೆ ನಾಳೆಯ ನಂಬಿಕೆಯ ಮೇಲೆ. ನಾಳೆ ಬೇಡ ಎನ್ನುವುದಾದರೆ ಇಂದು ಸಹಿಸುವ ಯಾವ ಅವಶ್ಯಕತೆಯೂ ನನಗಿಲ್ಲ. ಈಗಲೇ ಘಟಪ್ರಭೆಯ ಒಡಲು ಸೇರುತ್ತೇನೆ” ಎಂದಳು. ಸುಷ್ಮಾ ಸವಸುದ್ದಿ, ಪತ್ರಿಕೋದ್ಯಮ ವಿದ್ಯಾರ್ಥಿನಿ, ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ, ವಿಜಯಪುರ

(ಕೊನೆಯ ಹರಿವು)

“ವರ್ತಮಾನ ನಿನಗೆ ಅಷ್ಟು ಮೋಸ ಮಾಡುತ್ತಿದೆಯೇ?” ನನ್ನ ಆಶ್ಚರ್ಯದ ಪ್ರಶ್ನೆ. “ಮರುಳೆ ಕಾಲ ಎಂದಾದರೂ ಮೋಸ ಮಾಡುತ್ತದೆಯೇ? ಬದುಕಲು ಬೇಕಾದ ಕನಿಷ್ಟ ಭರವಸೆ ಮತ್ತು ಬೆಂಬಲವನ್ನು ಕೊಡದ ವರ್ತಮಾನದ ಕುರಿತು ನನಗಿರುವ ತಿರಸ್ಕಾರವಷ್ಟೆ” ಮರು ನುಡಿದಳು. ಒಂದೇ ಬಂಡೆಗಲ್ಲು ಮೇಲೆ ಕುಳಿತ ಇಬ್ಬರು. ಒಬ್ಬಳಿಗೆ ಭೂತ- ಭವಿಷ್ಯದ ತಿರಸ್ಕಾರ, ಮತ್ತೊಬ್ಬಳಿಗೆ ವರ್ತಮಾನದ ತಿರಸ್ಕಾರ. ಹಿಂದೆ ಆಗಿರುವುದನ್ನು ಮುಂದೆ ಆಗುವುದನ್ನು ಮರೆತು ಪ್ರಸ್ತುತವನ್ನು ಆನಂದಿಸಬೇಕೆಂದು ಸುಮಾರು ಸಾರಿ ಕೇಳಿದ್ದೆ. ಒಪ್ಪಿಕೊಂಡಿದ್ದೆ ಸಹ. ಆ ಮಾತಿಗೆ ಪಟ್ಟು ಬಿದ್ದೆ ಇಂದು ಇಲ್ಲಿಗೆ ಈ ಹೊತ್ತನ್ನು ಆನಂದಿಸಬೇಕೆಂದೆ ಕುಳಿತಿದ್ದೆ ಆದರೆ ಇಲ್ಲಿ ಯಾರದ್ದೋ ಸ್ಥಿತಿ ಅದರ ತದ್ವಿರುದ್ಧವಾಗಿದೆ. ಈಗ ನನ್ನೊಳಗೆ ನೂರು ಪ್ರಶ್ನೆ ಭೂತ, ವರ್ತಮಾನ, ಭವಿಷ್ಯ ಯಾವುದರ ಪರಿವೆಯೂ ತನಗಿಲ್ಲ ಎಂಬಂತೆ ಹರಿಯುತಿರುವ ಘಟಪ್ರಭೆಯೇ ಉತ್ತರಿಸಬೇಕಿಗ.

ಇದನ್ನೂ ಓದಿ
Image
Poetry: ಅವಿತಕವಿತೆ; ಮನುಷ್ಯ ಮಾತ್ರ ತನ್ನ ಸಹಜೀವಿಯನ್ನು ಮಾತಿನ ಮೂಲಕವೇ ಬಲಿ ಹಾಕಬಲ್ಲ
Image
Poetry : ಅವಿತಕವಿತೆ ; ತೀರಾ ಖಾಸಾ ಗೆಳೆಯ, ಗೆಳತಿಗೂ ಹೇಳಲು ಬಾರದವು…
Image
Poetry : ಅವಿತಕವಿತೆ ; ಗೀರು ಕಾಣದಂತೆ ಅವನು ಒಡಕು ಕಾಣದಂತೆ ಅವಳು
Image
Poetry : ಅವಿತಕವಿತೆ ; ಒದ್ದವನ ಕಾಲ ನಮಿಸುವೆ ಬಿದ್ದವನ ಎತ್ತಿ ನಿಲಿಸುವೆ

ಅವರವರ ಅಭಿಪ್ರಾಯ ನಿರ್ಧಾರವಾಗುವುದು ಅವರವರ ಪರಿಸ್ಥಿತಿ, ಅವರವ ಭಾವದ ಮೇಲೆ ಅಲ್ಲವೇ? ನನಗೆ ಸರಿಯಾಗಿದ್ದು ಮತ್ತೆ ಯಾರಿಗೋ ಸರಿಯಾಗಬೇಕೆಂಬ ನಿಯಮವೇನು ಇಲ್ಲ. ಆದರೆ ಅನೇಕ ಬಾರಿ ನಾವೆಲ್ಲ ನಮ್ಮ ಮೂಗಿನ ನೇರಕ್ಕೆ ಯೋಚನೆ ಮಾಡುವವರು. ಇನ್ನೊಬ್ಬರ ಪರಿಸ್ಥಿತಿ, ಮನಸ್ಥಿತಿಯನ್ನು ಅರ್ಥ ಮಾಡಿಕೊಳ್ಳುವ ಗೋಜಿಗೆ ಹೋಗದೇ ನಿರ್ಧಾರ ಹೊರಡಿಸಿ ಬಿಡುವವರು. ಪರಿಚಯಸ್ಥರೊಬ್ಬರು ತಾನು ವಿಚಾರ ಮಾಡಿದ ಹಾಗೇ ತನ್ನವರು ವಿಚಾರ ಮಾಡಲ್ಲ, ತನ್ನ ಮಾತಿಗೆ ವಾದ ಹಾಕ್ತಾರೆ ಅಂತ ಯಾವಾಗಲೂ ತನ್ನ ಸಂಗಾತಿಯನ್ನು ದೂರುತ್ತಿದ್ದರು. ಅವರನ್ನೊಮ್ಮೆ ಕೇಳಿದ್ದೆ. “ಅವರ ಮಾತನ್ನು ಒಮ್ಮೆ ಕೇಳಿಸಿಕೊಳ್ಳುವುದಲ್ಲವೇ? ಅವರ ವಿಚಾರ ನಿಮಗಿಂತ ಭಿನ್ನವಾಗಿ ಇರಬಹುದು. ಭಿನ್ನಾಭಿಪ್ರಾಯಗಳು ಸಹಜ ಅಲ್ಲವೇ? ಅದ್ಯಾಕೆ ನಿಮ್ಮ ಹಾಗೆಯೇ ಅವರು ವಿಚಾರ ಮಾಡಲಿ ಅಂತ ಬಯಸ್ತೀರಿ? ಒಂದು ವೇಳೆ ಅವರೇನಾದ್ರೂ ತಪ್ಪು ಮಾಡ್ತಾ ಇದ್ರೆ ತಿಳಿಸಿ ಬುದ್ಧಿ ಹೇಳಿ ಇಲ್ಲದಿದ್ದರೆ ಅವರದ್ದನ್ನು ಕೇಳಿಸಿಕೊಳ್ಳಿ, ಅವರ ಅಭಿಪ್ರಾಯಗಳಿಗೂ ಬೆಲೆ ಕೊಡಬೇಕು ಅಲ್ವಾ?”

ಅದಕ್ಕವರು ಉತ್ತರಿಸಿದರು- ಒಂದು ಸಂಬಂಧ ಚೆನ್ನಾಗಿ ಉಳಿಯಬೇಕೆಂದರೆ ಅದರಲ್ಲಿ ಭಿನ್ನಾಭಿಪ್ರಾಯಗಳು ಇರಲೇಬಾರದು. ಒಂದು ವೇಳೆ ಆ ತರಹದ ಭಿನ್ನ ಅಭಿಮತಗಳು ಬಂದಲ್ಲಿ ಇಬ್ಬರಲ್ಲಿ ಒಬ್ಬರು ಹೊಂದಾಣಿಕೆ ಮಾಡಿಕೊಳ್ಳಬೇಕು. ಹೆಣ್ಣಾದವಳೆ ಆ ಹೊಂದಾಣಿಕೆ ಮಾಡಿಕೊಳ್ಳುವುದು ಸಂಸ್ಕಾರ. ಆಗ ಯಾವ ಸಂಬಂಧಕ್ಕೂ ಹಾನಿ ಆಗುವುದಿಲ್ಲ.” ನಾನು ಅವರ ಈ ಮಾತಿಗೆ ಒಪ್ಪದೇ, ಭಿನ್ನಾಭಿಪ್ರಾಯಗಳ ಮಧ್ಯವೂ ಜೀವನವನ್ನು ಸುಂದರವಾಗಿಸಿಕೊಳ್ಳುವ ದಾರಿ ಇದೆ ಎಂದು ಹೇಳ ಹೊರಟೆ ಅದಕ್ಕೆ ಆ ಮನುಷ್ಯ “ನಿಮ್ಮಂಥವರು ಇದ್ರೆ ಮನೆ ಕುಟುಂಬ ಒಡೆದು ಹೋಗುತ್ತೆ ಹೋಗ್ರಿ” ಅಂದು ಬಿಡಬೇಕೇ?!

ಕರ್ಣ ಒಮ್ಮೆ ದುರ್ಯೋಧನನ ಎದುರು ಕೀರಿಟ ತೆಗೆದಿಟ್ಟು, ಪ್ರಭುವೇ ನನಗೆ ಅಂಗರಾಜ ಪಟ್ಟ ಬೇಡ ಎಂದು ತಿರಸ್ಕರಿಸಿ ಎಂದಿನಂತೆ ನದಿ ದಂಡೆಗೆ ಬಂದು ದಾನ ಮಾಡಲು ಮುಂದಾದಾಗ ಯಾವೊಬ್ಬ ಸನ್ಯಾಸಿಯೂ ಕರ್ಣನ ದಾನ ಸ್ವೀಕರಿಸಲು ಮುಂದೆ ಬರುವುದಿಲ್ಲ. ದಿನವೂ ಬಂದು ದಾನ ಸ್ವೀಕರಿಸುತ್ತಿದ್ದವರು ಇಂದು ಕರೆದರೂ ಹತ್ತಿರ ಬರುತ್ತಿಲ್ಲ. ಕಾರಣ ಕೇಳಿದ ಕರ್ಣನಿಗೆ ಸನ್ಯಾಸಿಗಳು “ನೀನೊಬ್ಬ ಕೆಳಜಾತಿಯವನು ನಿನ್ನ ದಾನ ನಮಗೆ ಬೇಡ” ಎನ್ನುತ್ತಾರೆ. “ಮತ್ತೆ ಇಷ್ಟು ದಿನ ಸ್ವೀಕರಿಸುತ್ತಿದ್ದಿರಲ್ಲ?” ಎಂದು ಪ್ರಶ್ನಿಸಿದಾಗ “ನೀನು ಇಷ್ಟು ದಿನ ಅಂಗರಾಜನಾಗಿದ್ದೇ ನಿನ್ನ ತಲೆ ಮೇಲಿರುವ ಕೀರಿಟದ ಅಧಿಕಾರಕ್ಕೆ ಹೆದರಿ ನಿನ್ನ ದಾನವನ್ನು ಸ್ವೀಕರಿಸುತ್ತಿದ್ದೆವು’’ ಎಂದಾಗ ಕರ್ಣ ಬಹುವಾಗಿ ನೊಂದುಕೊಳ್ಳುತ್ತಾನೆ. ಅಲ್ಲೇ ಇದ್ದು ಎಲ್ಲವನ್ನೂ ಗಮನಿಸಿದ ವೃಷಾಲಿ ಆ ಸನ್ಯಾಸಿಗಳಲ್ಲಿ ಕೇಳುತ್ತಾಳೆ, “ಯಾಕಾಗಿ ಕರ್ಣನಿಗೆ ಇಂತಹ ಸ್ಥಿತಿ, ಅವನದ್ದೇನು ತಪ್ಪು?” ಈ ಪ್ರಶ್ನೆಗೆ ಉತ್ತರಿಸಿದ ಸನ್ಯಾಸಿಗಳು, “ಕರ್ಣ ಒಳ್ಳೇಯವನೇ ಅವನು ಯಾವ ತಪ್ಪನ್ನು ಮಾಡಿದವನಲ್ಲ ಆದರೆ ಹಿಂದಿನ ಜನ್ಮದಲ್ಲಿ ಅವನು ಬೇರೆಯವರಿಗೆ ಹಿಂಸಿಸಿದ್ದಾನೆ, ನೋಯಿಸಿದ್ದಾನೆ ಅದಕ್ಕೆ ಈ ಜನ್ಮದಲ್ಲಿ ಹೀಗೆ ಹಿಂಸೆ ಅನುಭವಿಸುತ್ತಿದ್ದಾನೆ.”

ಆಗ ವೃಷಾಲಿ ವ್ಯಂಗನಗೆ ಬೀರುತ್ತ, “ಹಾಗಾದರೆ ನೀವು ಮುಂದಿನ ಜನ್ಮದಲ್ಲಿ ಕರ್ಣನಂತೆ ಪೀಡೆ ಅನುಭವಿಸುತ್ತಿರಿ ಎಂದಾಯಿತು.’’ ಆಶ್ಚರ್ಯಗೊಂಡ ಸನ್ಯಾಸಿಗಳು ಒಬ್ಬರಿಗೊಬ್ಬರಿಗೆ ಮುಖ ನೋಡಿಕೊಂಡರು. “ಎಲ್ಲ ತಿಳಿದಿರುವ ನೀವುಗಳು ಕರ್ಣನಿಗೆ ಹಿಂಸಿಸುತ್ತಿದ್ದೀರಿ ಎಂದರೆ ನೀವು ಮುಂದಿನ ಜನ್ಮದಲ್ಲಿ ಹಿಂಸೆ ಅನುಭವಿಸಲು ತಯಾರಿರಬೇಕು ಎಂತಲೆ ಅರ್ಥವಲ್ಲವೇ?” ಹೇಳಿದಾಗ, ಅವರೆಲ್ಲ ಮೌನ ತಾಳುತ್ತಾರೆ. ಅನೇಕ ಬಾರಿ ಹಾಗಾಗುತ್ತೆ. ಎದುರುಗಡೆ ಇರುವವರ ನ್ಯೂನತೆ, ತಪ್ಪುಗಳು ಮಾತ್ರ ನಮಗೆ ಕಾಣುತ್ತವೆ. ನಮ್ಮ ಬೆನ್ನು ನಮಗೆ ಕಾಣದಿದ್ದಾಗ ಮತ್ತೊಬ್ಬರ ಬೆನ್ನಿಗೆ ಅಂಟಿದ ಜಿಡ್ಡನ್ನೇ ಎತ್ತಿ ತೋರಿಸುವುದು ಒಂದು ತರಹದ ರೂಢಿ ಇದ್ದಿರಬೇಕು.

ನಿನ್ನ ಜಾಗದಲ್ಲಿ ನಾನಿದ್ದಿದ್ದರೆ ಹಾಗೇ ಮಾಡ್ತಿದ್ದೆ, ಹೀಗೇ ಮಾಡ್ತಿದ್ದೆ ಎನ್ನುವ ಮಾತಿಗೆ ಮಾತ್ರ ನಾನು ರೋಸಿ ಹೋಗುತ್ತೇನೆ. “ನೀನು ಹೀಗೂ ಯೋಚಿಸಬಹುದು, ನೀನು ಹೀಗೂ ಮಾಡಬಹುದು, ನೀನು ಮಾಡಿದ್ದು ತಪ್ಪು, ಹೀಗೆ ಮಾಡುವುದು ನನಗೆ ಸರಿ ಅನಿಸುತ್ತದೆ” ಈ ತರಹದ ಮಾತುಗಳನ್ನು ಹೇಳಿದಾಗ ಏನು ಮಾಡಬೇಕು, ಏನು ಮಾಡಬಹುದು ಎನ್ನುವ ಒಂದು ಅಂದಾಜು ಸಿಗುತ್ತೆ. ಅದು ಬಿಟ್ಟು “ನಾನಾಗಿದ್ರೆ’’ ಅಂತ ರಾಗ ಎಳೆದ್ರೆ! ಜಸ್ಟ್ ಪಾಸ್ ಆಗೊಕು ಒದ್ದಾಡ್ತಾ ಇರೋ ವಿದ್ಯಾರ್ಥಿ ಹತ್ರ ಹೋಗಿ ಪ್ರತಿ ಬಾರಿ ಗೋಲ್ಡ ಮೆಡಲ್ ತಗೊಳೋನು ನಾನು, ನಿನ್ನ ಜಾಗದಲ್ಲಿ ಇದ್ದಿದ್ರೆ ರ‍್ಯಾಂಕ್ ಬರತಾ ಇದ್ದೆ ಅಂದ್ರೆ? ಇನ್ನೊಬ್ಬರ ಸ್ಥಾನದಲ್ಲಿ ನಿಂತು ಯೋಚನೆ ಮಾಡಬೇಕು ಅಂದ್ರೆ ‘ನಾವಾಗಿ’ ಅವರ ಸ್ಥಾನದಲ್ಲಿ ನಿಲ್ಲುವುದಲ್ಲ. ‘ಅವರಾಗಿ’ ಅವರ ಸ್ಥಾನದಲ್ಲಿ ನಿಲ್ಲುವುದು. ಅವರ ಪರಿಸ್ಥಿತಿ, ಅವರ ಮನಸ್ಥಿತಿಗೆ ಇಳಿದು ಅವರ ಸ್ಥಾನದಲ್ಲಿ ನಿಲ್ಲುವುದಾದರೆ ಮಾತ್ರ ಇನ್ನೊಬ್ಬರು ನಿಜವಾಗಿಯುವ ಅನುಭವಿಸುತ್ತಿರುವುದನ್ನು ಅರ್ಥ ಮಾಡಿಕೊಳ್ಳಲು ಸಾಧ್ಯ ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ.

ಅನೇಕ ಸಲ ಅವರವರ ಪಾಯಿಂಟ್ ಆಫ್ ವ್ಯೂನಲ್ಲಿ ನೋಡಿದ್ರೆ ಎಲ್ಲರೂ ಸರಿಯಾಗೇ ಇರ‍್ತಾರೆ. ಇನ್ನೊಬ್ಬರ ಸ್ಥಾನದಲ್ಲಿ ನಿಂತು ನೋಡಿದಾಗ ಮಾತ್ರ ಅದು ಅಪರಾಧದಂತೆ ತೋರುತ್ತದೆ. ಕೆಲವೊಮ್ಮೆ ಕಾಲ, ಸನ್ನಿವೇಶ, ಸಂದರ್ಭಗಳು ಮಾಡುವ ತಪ್ಪಿಗೆ ನಾವು ಹೊಣೆಯಾಗಬೇಕಾಗುತ್ತದೆ. ಅದೆಲ್ಲದಕ್ಕೂ ತಾಯಿ ಘಟಪ್ರಭೆಯೇ ಉತ್ತರಿಸಬೇಕು. ದಣಿವಿಲ್ಲದ, ಕೊನೆಯಿಲ್ಲದ ಹರಿವು ಅವಳದು. ಅದೇ ಬಂಡೆಗಲ್ಲ ಮೇಲೆ ಕುಳಿತು ಅದೇ ಮಗುವಿನ ಕೂತುಹಲ ಹೊತ್ತು ದಿಟ್ಟಿಸುತ್ತಲೇ, ಆಕೆಯ ಭೋರ್ಗರೆತ, ವಯ್ಯಾರ, ಉತ್ಸಾಹ, ವ್ಯಂಗ್ಯ, ಮೌನ, ನಿರಾಸೆ ಎಲ್ಲದರಲ್ಲೂ ಅಡಗಿದ ಕಥೆಗಳನ್ನು ಕಿವಿಗೊಟ್ಟು ಕೇಳಿದ್ದೇನೆ. ಎದೆಗವಚಿ ಹಿಡಿದಿದ್ದೇನೆ. ಬಿಡದೇ ಕಾಡಿದ ಆ ಎಲ್ಲ ಕಥೆಗಳನ್ನು ನಿಮ್ಮೆದುರು ಸಾರಿದ್ದೇನೆ. ಈಗ ಎಲ್ಲವನ್ನೂ ಅವರವರ ಭಾವಕ್ಕೆ ಬಿಟ್ಟು ಎದ್ದು ಹೋಗುತ್ತಿದ್ದೇನೆ. ಅವಳು ಮಾತ್ರ ಹರಿಯುತ್ತಲೇ ಇದ್ದಾಳೆ. ಹೇಳಿದೇನಲ್ಲ ಅವಳದ್ದು ಕೊನೆಯಿರದ, ದಣಿವಿರದ ಹರಿವು. ಹರಿಯುತ್ತಲೇ ಇದ್ದಾಳೆ ಎದುರಾಗುವ ಎಲ್ಲವನ್ನೂ ಎದುರಿಸುತ್ತ!

ಈ ಅಂಕಣದ ಎಲ್ಲ ಬರಹಗಳನ್ನು ಓದಲು ಕ್ಲಿಕ್ ಮಾಡಿ

Published On - 12:54 pm, Sat, 6 August 22