ಹಾದಿಯೇ ತೋರಿದ ಹಾದಿ; ‘ನನ್ನ ಕೈಗಳಿಲ್ಲದ್ದನ್ನು ಅಮ್ಮನಿಗೆ ಹೇಳಬೇಡಿ’ ಹನ್ನೆರಡರ ಶುಭಜಿತ್ ವೈದ್ಯರಿಗೇ ಸಲಹೆ ನೀಡಿದ್ದ!

Subojit Bhattacharya : ಮಹಡಿ ಹತ್ತಿ ತೆಂಗಿನಕಾಯಿ ಕೀಳುವಾಗ ವಿದ್ಯುತ್ ತಂತಿ ತಾಗಿ ಅಪಘಾತ ಸಂಭವಿಸಿತು. ದೇಹದ ಎಲ್ಲ ಅಂಗಗಳೂ ಸುಸ್ಥಿತಿಯಲ್ಲಿದ್ದರೂ, ಕೈ ಮಾತ್ರ ಕತ್ತರಿಸಲೇಬೇಕು ಇಲ್ಲವಾದರೆ ಜೀವಕ್ಕೆ ಅಪಾಯ ಎಂದರು ಡಾಕ್ಟರ್. ಆದರೆ ಒಮ್ಮೆಲೇ ಕತ್ತರಿಸಲಿಲ್ಲ ಸ್ವಲ್ಪ ಸ್ವಲ್ಪವೇ ಕತ್ತರಿಸಿ ಹದಿಮೂರು ಬಾರಿ ಸರ್ಜರಿ ಮಾಡಿದರು.

ಹಾದಿಯೇ ತೋರಿದ ಹಾದಿ; ‘ನನ್ನ ಕೈಗಳಿಲ್ಲದ್ದನ್ನು ಅಮ್ಮನಿಗೆ ಹೇಳಬೇಡಿ’ ಹನ್ನೆರಡರ ಶುಭಜಿತ್ ವೈದ್ಯರಿಗೇ ಸಲಹೆ ನೀಡಿದ್ದ!
ಶುಭಜಿತ್ ಭಟ್ಟಾಚಾರ್ಯ ಪತ್ನಿ ಜ್ಯೂಲಿಯೊಂದಿಗೆ
ಶ್ರೀದೇವಿ ಕಳಸದ | Shridevi Kalasad

|

Feb 10, 2022 | 1:01 PM

ಹಾದಿಯೇ ತೋರಿದ ಹಾದಿ | Haadiye Torida Haadi : ‘ನನ್ನ ಸ್ನೇಹಿತರು ತಮ್ಮ ಸೈಕಲ್ಲಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಆಗ ನಾನೇಕೆ ನನಗೆ ಹೊಂದುವಂತಹ ಒಂದು ಸೈಕಲ್ಲನ್ನು ತಯಾರು ಮಾಡಬಾರದು ಎನ್ನಿಸಿತು. ಇದಕ್ಕಾಗಿ ಸೈಕಲ್ ಅಂಗಡಿ, ರಿಪೇರಿ ಅಂಗಡಿಗಳಲ್ಲಿ ಮಾತಾಡಿದೆ. ನಿಮಗೆ ಕೈ ಇಲ್ಲ ಸುಮ್ಮನೆ ನಿಮ್ಮ ಸಮಯವೂ ವ್ಯರ್ಥ, ನಮ್ಮ ಸಮಯವೂ ವ್ಯರ್ಥ ಹೋಗಿ ಎಂದರು. ತುಂಬಾ ನಿರಾಸೆಯೇನೋ ಆಯಿತು. ಆದರೆ ಇದನ್ನು ಸಾಧ್ಯವಾಗಿಸಿಕೊಳ್ಳಲೇಬೇಕು ಎಂಬ ಹಠ ಹುಟ್ಟಿತು. ಮನೆಯಲ್ಲೇ ಕೂತು ನನ್ನ ಕಲ್ಪನೆಯಲ್ಲೇ ಹಲವು ರೀತಿಯಲ್ಲಿ ಡಿಸೈನ್​ ಬಿಡಿಸಿ ಪೇಪರ್ ಕಟಿಂಗ್ ಮಾಡಿದೆ. ಕೊನೆಗೆ ನನಗೆ ಸರಿಹೊಂದಬಹುದಾದ ಸೈಕಲ್ ಮಾದರಿಯ ಡಿಸೈನ್​ ಅನ್ನು ಸೈಕಲ್ ಅಂಗಡಿಯ ಮಾಲೀಕರಿಗೆ ತೋರಿಸಿ ವಿವರಿಸಿದೆ. ಅವರು ಪ್ರಯತ್ನಿಸೋಣ ಎಂದರು. ನನ್ನ ತಂದೆಯ ಹಳೆಯ ಸೈಕಲ್ ತೆಗೆದುಕೊಂಡು ಹೋದೆ. ಅಂತೂ ಒಂದು ವಾರದಲ್ಲಿ ಸೈಕಲ್ ತಯಾರಾಯಿತು. 2013ರಿಂದ 2015ರವರೆಗೆ ಆ ಸೈಕಲ್ಲನ್ನು ಯಾರ ಅವಲಂಬನೆಯೂ ಇಲ್ಲದೆ ನಾನು ಕಾಲೇಜಿಗೆ ಹೋಗಿ ಬರಲು ಉಪಯೋಗಿಸಿದೆ’ ಎನ್ನುತ್ತಾರೆ ಶುಭಜಿತ್ ಭಟ್ಟಾಚಾರ್ಯ  (Subojit Bhattacharya).

ಜ್ಯೋತಿ ಎಸ್. ಸಿಟಿಝೆನ್ ಜರ್ನಲಿಸ್ಟ್​

*

ಹಾದಿ -5

ತನ್ನ ಅಂಗವೈಕಲ್ಯವನ್ನೇ ಸವಾಲಾಗಿಸಿಕೊಂಡ 32 ವರ್ಷದ ಶುಭಜಿತ್ ಭಟ್ಟಾಚಾರ್ಯ ಮೂಲತಃ ಪಶ್ಚಿಮ ಬಂಗಾಳದವರು. ಬೋಲಾನಾಥ್ ಮತ್ತು ಶಿವಾನಿಯವರ ಮುದ್ದಿನ ಮಗನಾದ ಇವರು 12ನೇ ವಯಸ್ಸಿನಲ್ಲಿ ಅಕ್ಕನ ಹೆರಿಗೆ ಸಮಯದಲ್ಲಿ ಅಮ್ಮನೊಂದಿಗೆ ಬೆಂಗಳೂರಿಗೆ ಬಂದರು. ಮಹಡಿ ಹತ್ತಿ ತೆಂಗಿನಕಾಯಿ ಕೀಳುವಾಗ ಆಕಸ್ಮಿಕವಾಗಿ ಇವರಿಗೆ ವಿದ್ಯುತ್ ತಂತಿ ತಾಗಿ ಯಾರೂ ಊಹಿಸದ ಅಪಘಾತವೊಂದು ಸಂಭವಿಸಿತು. ಕೈಗಳನ್ನು ಮಾತ್ರ ಕತ್ತರಿಸಲೇಬೇಕು ಇಲ್ಲವಾದರೆ ಜೀವಕ್ಕೆ ಅಪಾಯ ಎಂದರು ಡಾಕ್ಟರ್. ಆದರೆ ಒಮ್ಮೆಲೇ ಕತ್ತರಿಸಲಿಲ್ಲ ಸ್ವಲ್ಪ ಸ್ವಲ್ಪವೇ ಕತ್ತರಿಸಿ ಹದಿಮೂರು ಬಾರಿ ಸರ್ಜರಿ ಮಾಡಿದರು. ಹತ್ತು ತಿಂಗಳುಗಳ ಕಾಲ ಆಸ್ಪತ್ರೆಯಲ್ಲಿಯೇ ಇರಬೇಕಾಯಿತು. ನಂತರ ಆ ವಾತಾವರಣ ಮಾನಸಿಕ ಹಿಂಸೆಯಾಗಬಾರದೆಂದು, ಕುಟುಂಬ ಮತ್ತು ಸ್ನೇಹಿತರೊಂದಿಗೆ ಇದ್ದರೆ ಬೇಗ ಚೇತರಿಸಿಕೊಳ್ಳುತ್ತಾರೆ ಎಂಬ ಕಾರಣದಿಂದಾಗಿ ಡಾಕ್ಟರ್ ಅವರನ್ನು ಮನೆಗೆ ಕಳುಹಿಸಿದರು.

ಈ ಸಮಯದಲ್ಲಿ ಮಾನಸಿಕ ತಜ್ಞರೊಬ್ಬರು ಶುಭಜಿತರನ್ನು ಸಂದರ್ಶಿಸುತ್ತಾ ‘ನಿಮಗೆ ಎರಡೂ ಕೈಗಳಿಲ್ಲ. ಆತ್ಮಹತ್ಯೆಯಂತಹ ಕೆಟ್ಟ ವಿಚಾರಗಳೇನಾದರೂ ಬರುತ್ತಿವೆಯಾ’ ಎಂದು ಕೇಳಿದರಂತೆ. ಅದಕ್ಕೆ ಶುಭಜಿತ್ ‘ಭೂಮಿಯ ಮೇಲೆ ಎಷ್ಟೋ ಜನರಿಗೆ ಕಣ್ಣುಗಳಿಲ್ಲ, ಅವರಿಗೆ ಗಿಡ ಮರ ನದಿ ಸೂರ್ಯ ಈ ಸುಂದರವಾದ ಪ್ರಕೃತಿಯಲ್ಲಿರುವ ಏನನ್ನೂ ನೋಡೋಕಾಗಲ್ಲ. ನನಗೆ ಕಣ್ಣುಗಳಿವೆ ನಾನು ಅವನ್ನೆಲ್ಲ ನೋಡಬಹುದು ಹಾಗಾಗಿ ದೇವರಿಗೆ ಕೃತಜ್ಞತೆಗಳು’ ಎಂದರಂತೆ. ಆಗ ಆ ಡಾಕ್ಟರ್, ಶಿವಾನಿಯವರಿಗೆ ಹೇಳಿದರಂತೆ ನಿಮ್ಮ ಮಗನಿಗೆ ಯಾವ ಮಾನಸಿಕ ಸಮಸ್ಯೆಯಿಲ್ಲ ಅವನಿಗೆ ಯಾವ ಮಾನಸಿಕ ತಜ್ಞರ ಅವಶ್ಯಕತೆಯೂ ಇಲ್ಲ ಎಂದು. ಅದಲ್ಲದೆ ಆಪರೇಷನ್ ಆದಾಗ, ಕೈ ಕತ್ತರಿಸಿದ್ದನ್ನು ಅಮ್ಮನ ಬಳಿ ಹೇಳಬೇಡಿ ಸುಮ್ಮನೆ ಕೈ ಮಡಚಿ ಬ್ಯಾಂಡೇಜ್ ಹಾಕಿದ್ದೇವೆ ಎಂದು ಹೇಳಿ. ಇಲ್ಲವಾದರೆ ಅಮ್ಮ ನೊಂದುಕೊಳ್ಳುತ್ತಾರೆ ಎಂದರಂತೆ ಶುಭಜಿತ್.

ನಂತರ ಶುಭಜಿತ್​ರ ಜೀವನದಲ್ಲಿ ಸಾಲುಸಾಲು ಕಷ್ಟಗಳೇ ಬಂದವು. ಸೋಲದೆ ಗೆದ್ದ ಸೆಣಸಾಟದ ಹಾದಿಯನ್ನ ಅವರ ಮಾತಿನಲ್ಲೇ ಓದಿಕೊಳ್ಳಿ.

ಇದನ್ನೂ ಓದಿ : Citizen Journalist : ‘ಹಾದಿಯೇ ತೋರಿದ ಹಾದಿ’ ಜ್ಯೋತಿ ಎಸ್​. ಅಂಕಣ 

Haadiye Torida Haadi column Tow Wheeler Rider Without Tow Hands Subojit Bhattacharya by Citizen Journalist Jyothi S

‘ಇಂಡಿಯಾ ಬುಕ್ ಆಫ್ ರೆಕಾರ್ಡ್​-2021’  ಪುರಸ್ಕೃತ ಶುಭಜಿತ್

ಕೈ ಕಳೆದುಕೊಂಡಾಗ ಪ್ರಾರಂಭದಲ್ಲಿ ಕೃತಕ ಕೈ ಜೋಡಣೆ ಮಾಡಿದರು. ಆದರೆ ಅದು ಸರಿಹೋಗಲಿಲ್ಲ. ಆಗ ಅಮ್ಮನೊಂದಿಗೆ ಹುಟ್ಟೂರಾದ ಪಶ್ಚಿಮ ಬಂಗಾಳದ ಛಾತ್ರಾಗೆ ಹೋದೆ. ಅಲ್ಲಿ ಒಂದು ಶಾಲೆಯ ಮುಖ್ಯೋಪಾಧ್ಯಾಯರೊಂದಿಗೆ ಮಾತನಾಡಿ ಶಾಲೆಗೆ ದಾಖಲಾದೆ. ಆದರೆ ಓಡಾಡಲು ಕಷ್ಟವಾಗಿ, ವಾರಕ್ಕೊಂದು ಬಾರಿ ಮಾತ್ರ ಶಾಲೆಗೆ ಹೋಗತೊಡಗಿದೆ. 7,8,9 ನೇ ತರಗತಿ ಮುಗಿದ ನಂತರ ಹತ್ತನೇ ತರಗತಿಯ ಪರೀಕ್ಷೆಗೆ ಕೂರಲು ಹಾಜರಾತಿ ಕೊರತೆಯಿಂದ ನನಗೆ ಪರೀಕ್ಷಾ ಮಂಡಳಿ ಅನುಮತಿ ಕೊಡಲಿಲ್ಲ. ಏಕೆಂದರೆ, ನನ್ನ ಪರಿಸ್ಥಿತಿಯ ಬಗ್ಗೆ ಶಾಲೆಯವರು ಮೊದಲೇ ಬೋರ್ಡಿಗೆ ಮುಂಚಿತವಾಗಿ ತಿಳಿಸಿರಲಿಲ್ಲ. ನಿಯಮಗಳಿಗೆ ಮಾನವೀಯತೆ ಇಲ್ಲ ಇನ್ನು ಮುಂದೆ ನಾನು ಓದುವುದಿಲ್ಲ ಎಂದು ಅಮ್ಮನಿಗೆ ಹೇಳಿದೆ. ಇದು ತಿಳಿದು ನನಗೆ ಇತಿಹಾಸ ಪಾಠ ಮಾಡುತ್ತಿದ್ದ ಕಾರ್ತಿಕ್ ಎಂಬ ಗುರುಗಳೊಬ್ಬರು ನನಗೆ ಓಪನ್ ಸ್ಕೂಲ್ ಬಗ್ಗೆ ಹೇಳಿ ರವೀಂದ್ರನಾಥ ಓಪನ್ ಯುನಿವರ್ಸಿಟಿಯ ವಿಳಾಸ ಕೊಟ್ಟರು. ನಾನು ಅಲ್ಲಿ ಎಸ್ಸೆಸ್ಸೆಲ್ಸಿ, ಪಿಯುಸಿ ಮತ್ತು ಪದವಿಯನ್ನು ಮುಗಿಸಿಕೊಂಡೆ.

ಎರಡೂ ಕೈ ಇಲ್ಲದೆ ದೇಹವನ್ನು ಬ್ಯಾಲೆನ್ಸ್ ಮಾಡುವುದು ಕಷ್ಟವಾಗುತ್ತಿತ್ತು. ದೇಹವನ್ನು ಬ್ಯಾಲೆನ್ಸ್ ಮಾಡಲೆಂದು ಫುಟ್​ಬಾಲ್ ಆಡಲು ಹೋದಾಗ ಸ್ನೇಹಿತರು ನಿರಾಕರಿಸಿದರು, ಅವರಲ್ಲಿ ಕೇಳಿಕೊಂಡು ಆಡುವಾಗ ಪ್ರಜ್ಞೆ ತಪ್ಪಿ ಬಿದ್ದೆ. ಆದರೆ ಫುಟ್​ಬಾಲ್ ನನ್ನಿಷ್ಟದ ಆಟ. ಕಷ್ಟವಾದರೂ ಆಡಲೇಬೇಕೆಂದು ತೀರ್ಮಾನಿಸಿದೆ. ಸತತವಾಗಿ ಅದರ ಬಗ್ಗೆಯೇ ಮನನ ಮಾಡತೊಡಗಿದೆ. ಮರುದಿನ ಮೈದಾನಕ್ಕೆ ಹೋದೆ. ಆದರೆ ಸ್ನೇಹಿತರು ಹಿಂದಿನ ದಿನದ ಘಟನೆ ನೆನಪಾಗಿ ಒಪ್ಪಲಿಲ್ಲ. ನಾನು ತುಂಬಾ ವಿನಂತಿಸಿಕೊಂಡು ಆಡಲು ಪ್ರಾರಂಭಿಸಿದೆ. ಹಾಗೇ ಸತತವಾಗಿ ಮೂರ್ನಾಲ್ಕು ವರ್ಷ ಆಡಿದ ನಂತರ ದೈಹಿಕ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಯಿತು. ಸಾರ್ವಜನಿಕವಾಗಿ ಓಡಾಡಲು ಧೈರ್ಯಬಂತು. ಆದರೆ ಪ್ರಯಾಣ ಮಾಡಲು ಇನ್ನೊಬ್ಬರ ಮೇಲೆ ಅವಲಂಬಿತಾನಾಗಿದ್ದೆ, ಜೊತೆಗೆ ಯಾರಾದರೂ ಇರಬೇಕಿತ್ತು. ನನ್ನ ಸ್ನೇಹಿತರು ತಮ್ಮ ಸೈಕಲ್ಲಿನಲ್ಲಿ ಕೂರಿಸಿಕೊಂಡು ಹೋಗುತ್ತಿದ್ದರು. ಆಗ ನಾನೇಕೆ ನನಗೆ ಹೊಂದುವಂತಹ ಒಂದು ಸೈಕಲ್ಲನ್ನು ತಯಾರು ಮಾಡಬಾರದು ಎನ್ನುವ ಆಲೋಚನೆ ಬಂತು. ಇದಕ್ಕಾಗಿ ಸೈಕಲ್ ಅಂಗಡಿ, ರಿಪೇರಿ ಅಂಗಡಿಗಳಲ್ಲಿ ಮಾತಾಡಿದೆ. ನನಗೆ ಕೈ ಇಲ್ಲದ್ದರಿಂದ ನಿಮಗೆ ಕೈ ಇಲ್ಲ ಸುಮ್ಮನೆ ನಿಮ್ಮ ಸಮಯವು ವ್ಯರ್ಥ, ನಮ್ಮ ಸಮಯವೂ ವ್ಯರ್ಥ ಹೋಗಿ ಎಂದರು.

ಇದನ್ನೂ ಓದಿ : Citizen Journalism : ಹಾದಿಯೇ ತೋರಿದ ಹಾದಿ : ‘ಇಲ್ಲೊಂದು ಶವ ಸಿಕ್ಕಿದೆ ಬನ್ನಿ’ ಯಾವ ಹೊತ್ತಿನಲ್ಲಿಯೂ ಸಿದ್ಧ ಈ ಆಶಾ ವಿ. ಸ್ವಾಮಿ

Haadiye Torida Haadi column Tow Wheeler Rider Without Tow Hands Subojit Bhattacharya by Citizen Journalist Jyothi S

ಶುಭಜಿತ್ ಭಟ್ಟಾಚಾರ್ಯ

ಇದರಿಂದಾಗಿ ತುಂಬಾ ನಿರಾಸೆಯೇನೋ ಆಯಿತು. ಆದರೆ ಇದನ್ನು ಸಾಧ್ಯವಾಗಿಸಿಕೊಳ್ಳಲೇಬೇಕು ಎಂಬ ಹಠವಿತ್ತು. ಮನೆಯಲ್ಲೇ ಕೂತು ನನ್ನ ಕಲ್ಪನೆಯಲ್ಲೇ ಹಲವು ರೀತಿಯಲ್ಲಿ ಚಿತ್ರಗಳನ್ನು ಬಿಡಿಸಿ ಪೇಪರ್ ಕಟಿಂಗ್ ಮಾಡಿದೆ. ಕೊನೆಗೆ ನನಗೆ ಸರಿಹೊಂದಬಹುದಾದ ಸೈಕಲ್ ಮಾದರಿಯ ಪೇಪರ್ ಕಟಿಂಗ್ ತೆಗೆದುಕೊಂಡು ಸೈಕಲ್ ಶಾಪಿನ ಮಾಲೀಕರ ಬಳಿ ತೆಗೆದುಕೊಂಡು ಹೋಗಿ ನನ್ನ ಯೋಜನೆ ಮತ್ತು ಯೋಚನೆಯನ್ನು ಹೇಳಿದೆ. ಅವರು ಪ್ರಯತ್ನಿಸೋಣ ಬನ್ನಿ ಎಂದಾಗ ನನ್ನ ತಂದೆಯ ಹಳೆಯ ಸೈಕಲ್ಲನ್ನು ತೆಗೆದುಕೊಂಡು ಹೋಗಿ ಹ್ಯಾಂಡಲ್, ಬ್ರೇಕ್ ಹೇಗಿರಬೇಕೆಂಬ ಬಗ್ಗೆ ಅವರಿಗೆ ಹೇಳಿದೆ. ಅವರು ನಾನು ಹೇಳಿದಂತೆ ಮಾಡಿದರು. ಅಂತೂ ಒಂದು ವಾರದಲ್ಲಿ ಸೈಕಲ್ ತಯಾರಾಯಿತು. 2013ರಿಂದ 2015ರವರೆಗೆ ಆ ಸೈಕಲ್ಲನ್ನು ಯಾರ ಅವಲಂಬನೆಯೂ ಇಲ್ಲದೆ ನಾನು ಕಾಲೇಜಿಗೆ ಹೋಗಿ ಬರಲು ಉಪಯೋಗಿಸಿದೆ.

ಆ ಸಮಯದಲ್ಲಿ ಕಾಲೇಜಿನಲ್ಲಿ ಜೂಲಿ ಎಂಬುವರ ಜೊತೆ ಸ್ನೇಹವಾಗಿ ಅದು ಪ್ರೀತಿಗೆ ತಿರುಗಿ ಮದುವೆಯೂ ಆಯಿತು. ಮದುವೆಯ ನಂತರ ನಾವು ಬೆಂಗಳೂರಿಗೆ ಬರಲು ನಿರ್ಧರಿಸಿದೆವು. ಬೆಂಗಳೂರಿಗೆ ಬಂದು ಕೆಲಸ ಹುಡುಕಲು ಹೋದಲ್ಲೆಲ್ಲ ನನ್ನ ಅಂಗವೈಕಲ್ಯ ನೋಡಿ ಐದರಿಂದ ಏಳುಸಾವಿರದವರೆಗೆ ಸಂಬಳ ಕೊಡುತ್ತೇವೆಂದರು. ಇಷ್ಟು ಸಂಬಳದಲ್ಲಿ ಬೆಂಗಳೂರಿನಲ್ಲಿ ಹೇಗೆ ಜೀವನ ನಡೆಸುವುದು? ಬಂದು ಹದಿನೈದು ದಿನವಾದರೂ ಕೆಲಸವೂ ಸಿಗಲಿಲ್ಲ ಕೈಯಲ್ಲಿದ್ದ ಹಣವೂ ಖಾಲಿಯಾಯ್ತು. ಮೆಜೆಸ್ಟಿಕ್ ಬಸ್​ಸ್ಟಾಪಿನಲ್ಲಿ ಕೂತು ನಾನು ನನ್ನ ಹೆಂಡತಿ ಬೆಂಗಳೂರಿನಲ್ಲೇ ಇರುವ ನಿರ್ಧಾರಕ್ಕೆ ಬಂದೆವು. ಊರಿಗೆ ಹೋಗಲು ಬುಕ್ ಮಾಡಿದ್ದ ಟಿಕೆಟ್ ಕ್ಯಾನ್ಸಲ್ ಮಾಡಿದಾಗ ಆ ಹಣ ವಾಪಾಸು ಬಂದಿತು. ಅಮ್ಮನ ಕಡೆಯಿಂದಲೂ ಸ್ವಲ್ಪ ಹಣ ತರಿಸಿಕೊಂಡು, ಹೆಬ್ಬಾಳದ ಕೆಂಪಾಪುರದಲ್ಲಿ ಒಂದು ಬಾಡಿಗೆ ಮನೆ ಹುಡುಕಿದೆವು. ಅಲ್ಲಿಯವರೆಗೆ ಬಂಗಾಳಿ ಅಸೋಸಿಯೇಷನ್ನಲ್ಲಿ ಇದ್ದೆವು. ಮನೆ ಮಾಲೀಕರ ಬಳಿ ತುಂಬಾ ವಿನಂತಿಸಿಕೊಂಡು ನಮ್ಮ ಪರಿಸ್ಥಿತಿ ಹೇಳಿಕೊಂಡು ಮೂರು ಸಾವಿರ ರೂಪಾಯಿಗೆ ಬಾಡಿಗೆ ಮಾತಾಡಿದೆವು. ಹತ್ತು ಸಾವಿರ ರೂಪಾಯಿ ಅಡ್ವಾನ್ಸ್​ ಅನ್ನು ಕಂತುಗಳಲ್ಲಿ ತುಂಬಿದೆವು’.

ಇದನ್ನೂ ಓದಿ : Snake Catcher : ಹಾದಿಯೇ ತೋರಿದ ಹಾದಿ ; ‘ಹಾವು ಕಂಡರೆ ಕೊಲ್ಲಬೇಡಿ ನಮಗೆ ಫೋನ್ ಮಾಡಿ‘ ಸ್ನೇಕ್ ಮಹಾಂತೇಶ್

Haadiye Torida Haadi column Tow Wheeler Rider Without Tow Hands Subojit Bhattacharya by Citizen Journalist Jyothi S

ಪ್ರಯತ್ನದ ಫಲ

ಅಂಗವೈಕಲ್ಯ ಇರುವವರು, ದ್ವಿಚಕ್ರ ವಾಹನಕ್ಕೆ ಇನ್ನೆರೆಡು ಗಾಲಿಗಳನ್ನು ಸೇರಿಸಿ ಉಪಯೋಗಿಸುತ್ತಾರೆ. ಆದರೆ ಎರಡೂ ಕೈಗಳಿಲ್ಲದೆ ಬೈಕ್ ಓಡಿಸುವವರು ನನಗೆ ಯಾರೂ ಸಿಗಲಿಲ್ಲ. ಈ ರೀತಿಯ ಬೈಕ್ ತಯಾರಿಸುವ ಬಗ್ಗೆ ಒಂದು ದೊಡ್ಡ ಕಂಪನಿಯೊಂದಿಗೆ ಮಾತಾಡಿದೆ, ಏನೂ ಪ್ರಯೋಜನವಾಗಲಿಲ್ಲ. ಬೈಕುಗಳ ಗ್ಯಾರೇಜ್ ಹಾಗೂ ಬೈಕುಗಳನ್ನು ಮಾರ್ಪಾಡು (Modify) ಮಾಡುವ ಸ್ಥಳೀಯರಲ್ಲಿ ವಿಚಾರಿಸಿದಾಗ ನಿಮಗೆ ಕೈಗಳೇ ಇಲ್ಲ ನೀವು ಬೈಕ್ ಹೇಗೆ ಓಡಿಸ್ತೀರಿ… ಇದೆಲ್ಲ ಆಗೋದಿಲ್ಲ ಎಂದರು. ಕೆಲವರು, ಇರೋ ಕೆಲಸ ಮಾಡ್ಕೊಂಡಿರು ಎಂದು ಕೆಲಸಕ್ಕೆಬಾರದ ಬುದ್ಧಿಮಾತುಗಳನ್ನು ಹೇಳಿದರು. ಮಾತಾಡಿದವರಿಗೆಲ್ಲ ಕೆಲಸದಿಂದಲೇ ಉತ್ತರಿಸಬೇಕೆಂದು ಪಣತೊಟ್ಟೆ. ಒಂದು ಮೊಪೆಡ್ ಗಾಡಿಯನ್ನು ಖರೀದಿ ಮಾಡಿ ಅದನ್ನು ಒಬ್ಬ ಹುಡುಗನ ಜೊತೆ ನನಗೆ ಬೇಕಾದಂತೆ ಮಾರ್ಪಡಿಸಲು ಶುರು ಮಾಡಿದೆ. ಆದರೆ ಇದು ಅಷ್ಟು ಸುಲಭವಾದ್ದಾಗಿರಲಿಲ್ಲ. ಎಕ್ಸಿಲಿರೇಟರ್, ಬ್ರೇಕ್, ಹೆಡ್ಲೈಟ್ ಇಂಡಿಕೇಟರ್ ಬಟನ್ನುಗಳು ಕಾಲಿನಲ್ಲಿ ಬರುವಂತೆ ಹಾಕಬೇಕಿತ್ತು. ಹ್ಯಾಂಡಲ್ ವಿನ್ಯಾಸ ಕೂಡ ಬದಲಾಯಿಸಬೇಕಿತ್ತು. ಜೊತೆಗೆ ಬೆಳಿಗ್ಗೆಯಿಂದ ಸಂಜೆಯವರೆಗೆ ನನ್ನ ಕೆಲಸ ಮುಗಿಸಿಕೊಂಡು ಬಂದ ನಂತರ ಬೈಕಿನ ಕೆಲಸ ಮಾಡಬೇಕಿತ್ತು. ನನಗೆ ಗೊತ್ತಿಲ್ಲದ ವಿಷಯಗಳನ್ನು ತಿಳಿದುಕೊಳ್ಳಬೇಕಿತ್ತು. ತುಂಬಾ ಆಲೋಚಿಸಿ ಕಲ್ಪಸಿಕೊಂಡು ಹಲವಾರು ವಿನ್ಯಾಸಗಳನ್ನು ಚಿತ್ರ ಬಿಡಿಸಿ, ಪೇಪರ್ ಕಟಿಂಗ್ ಮಾಡಿ ಒಂದೊಂದು ಸಣ್ಣ ಕೆಲಸವನ್ನೂ ಬಹಳ ಎಚ್ಚರಿಕೆಯಿಂದ ನಿಭಾಯಿಸಬೇಕಿತ್ತು.

ಏಕೆಂದರೆ ಏನಾದರೂ ತೊಂದರೆ ಆದರೆ ನನಗೆ ಪದೇಪದೇ ಹಣಹಾಕುವ ಸಾಮರ್ಥ್ಯವಿರಲಿಲ್ಲ. ಹೀಗೆ ಒಂದು ತಿಂಗಳು ಇದಕ್ಕಾಗಿ ಸಮಯ ಕೊಟ್ಟ ನಂತರ ನನ್ನ ಆಲೋಚನೆಗಳು ನನ್ನಿಷ್ಟದ ಸ್ಕೂಟರಿನ ಪ್ರತಿರೂಪವಾಗಿ ಮೈದಳೆದಿತ್ತು. ಆ ಕ್ಷಣ ನನ್ನ ಖುಷಿಗೆ ಪಾರವೇ ಇರಲಿಲ್ಲ. ಒಂದು ವಾರ ಮುಖ್ಯರಸ್ತೆಗೆ ಬರದೇ ಮನೆಯ ಹತ್ತಿರ ಅಭ್ಯಾಸ ಮಾಡಿದೆ. ನಂತರ ಮೊದಲ ಬಾರಿಗೆ ಹೆಬ್ಬಾಳದಿಂದ ಲಿಂಗರಾಜಪುರಕ್ಕೆ ಹದಿನಾರು ಕಿಲೋಮೀಟರ್ ಹೋಗಿಬಂದೆ. ಹಾಗೆ ಸ್ಕೂಟರ್ ಓಡಿಸುವುದು ಅಭ್ಯಾಸವಾಯ್ತು. ಮೂರು ವರ್ಷಗಳಲ್ಲಿ ಸುಮಾರು ಮೂವತ್ತು ಸಾವಿರ ಕಿಲೋಮೀಟರ್ ಪ್ರಯಾಣ ಮಾಡಿದೆ.

ಇದನ್ನೂ ಓದಿ  : Folk Art : ಹಾದಿಯೇ ತೋರಿದ ಹಾದಿ : ಕಹಳೆಗೆ ಇವರ ಉಸಿರು, ಕಹಳೆ ಇವರಿಗೆ ಉಸಿರು, ಕೇಳುಗರಿದ್ದಲ್ಲಿ ಎಲ್ಲ ಹಸಿರು

Haadiye Torida Haadi column Tow Wheeler Rider Without Tow Hands Subojit Bhattacharya by Citizen Journalist Jyothi S

ಮುಂದೆ ಮುಂದೆ ಓಡಲು ಓದೂ ಬೇಕು

‘ಡ್ರೈವಿಂಗ್ ಲೈಸನ್ಸ್ ಮಾಡಿಸಲು ಒಮ್ಮೆ RTO ಆಫೀಸಿಗೆ ಹೋಗಿದ್ದೆ. ಅವರು ನನಗೆ ಕೈಯಿಲ್ಲವೆಂದು ಲೈಸನ್ಸ್ ಕೊಡಲು ನಿರಾಕರಿಸಿದರು. ನಾನು ಗಾಡಿ ಓಡಿಸುವುದನ್ನು ಮೊದಲು ನೋಡಿ ನಾನು ಸರಿಯಾಗಿ ಓಡಿಸದಿದ್ದರೆ ಲೈಸನ್ಸ್ ಕೊಡಬೇಡಿ ಎಂದೆ. ನಂತರ ಅವರ ಆಫೀಸಿಗೆ ಗಾಡಿ ಒಯ್ದು ಓಡಿಸಿ ತೋರಿಸಿದೆ. ಅವರು ಸರಿಯಾಗಿ ಸ್ಪಂದಿಸಲಿಲ್ಲ. ನನಗೆ ತಾಯಿ, ತಂದೆ ಹೆಂಡತಿ ಇದ್ದಾರೆ ಇಡೀ ಕುಟುಂಬದ ಜವಾಬ್ದಾರಿ ನನ್ನ ಮೇಲಿದೆ ದಯವಿಟ್ಟು ಲೈಸನ್ಸ್ ಮಾಡಿಕೊಡಿ ಎಂದು ಎಷ್ಟು ಕೇಳಿಕೊಂಡರೂ ನಾಲ್ಕೂವರೆ ವರ್ಷದಿಂದ ಅವರ ಆಫೀಸಿಗೆ ಎಷ್ಟು ಬಾರಿ ಎಡತಾಕಿದರೂ ಲೈಸನ್ಸ್ ಕೊಡಲಿಲ್ಲ. ಆಗ ಸರ್ಕಾರ ಅಥವಾ ಸಂಬಂಧಪಟ್ಟ ಇಲಾಖೆಯು ನಮ್ಮಂಥವರಿಗೆ ಲೈಸನ್ಸ್ ನಿಯಮಾವಳಿಗಳಿಗೆ ಅಗತ್ಯ ತಿದ್ದುಪಡಿ ತರಬೇಕು ಎನ್ನಿಸಿತು.

2020ರಲ್ಲಿ ನನ್ನ ಹೆಸರಿನಲ್ಲಿ ‘‘Tow Wheeler Rider Without Tow Hands’’ ಎಂದು India Book of Records’ ನಲ್ಲಿ ದಾಖಲಾಗಿದೆ. ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ(IGNOU)ದಿಂದ ‘‘Innovation Award’’ ಬಂದಿದೆ. ಈಗ BSW ಮುಗಿಸಿ MSW ಮಾಡುತ್ತಿದ್ದೇನೆ. ಬಾಣಸವಾಡಿಯಲ್ಲಿರುವ ಅಕ್ಷತಾ ಫೌಂಡೇಶನ್ನಿನಲ್ಲಿ ಪ್ರೋಗ್ರಾಂ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದು, ಅಲ್ಲಿ ವಿಶೇಷ ಮಕ್ಕಳಿಗೆ ತರಬೇತಿ ನೀಡುತ್ತಿದ್ದೇನೆ.  ದೆಹಲಿಯಿಂದ ಲಡಾಕಿನ ತನಕ ಬೈಕಿನಲ್ಲಿ ಪ್ರಯಾಣ ಮಾಡುವ ಆಸೆ ಹೊಂದಿದ್ದೇನೆ. ಆಶ್ರಮ ಕಟ್ಟಿಸಿ ಅನಾಥರು,  ಸಂತ್ರಸ್ತ ಹೆಣ್ಣುಮಕ್ಕಳು, ಮಕ್ಕಳ ಏಳಿಗೆಗಾಗಿ ಸೇವೆ ಮಾಡಬೇಕೆಂಬ ಕನಸು ಹೊಂದಿದ್ದೇನೆ.

(ಮುಂದಿನ ಹಾದಿ : 24.2.2022)

ಪ್ರತಿಕ್ರಿಯೆಗಳಿಗಾಗಿ : tv9kannadadigital@gmail.com

*

ಹಿಂದಿನ ಹಾದಿ : ಹಾದಿಯೇ ತೋರಿದ ಹಾದಿ ; ಬೀದಿಯನ್ನೇ ನೋಡದ ಮಂಡ್ಯದ 105ರ ನಿಂಗಮ್ಮ ಬೀದಿಯಲ್ಲಿಯೇ ಬದುಕುವಂತಾಯಿತು

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada