ಮರಗಳಿಗೆ ಪೆನ್ಶನ್ ಕೊಡಲು ನಿರ್ಧರಿಸಿದ ಹರಿಯಾಣ ಸರ್ಕಾರ; ಪರಿಸರ ರಕ್ಷಣೆಗೆ ಹೊಸ ಮಾರ್ಗ

ಮರಗಳಿಗೆ ಪೆನ್ಶನ್ ಕೊಡಲು ನಿರ್ಧರಿಸಿದ ಹರಿಯಾಣ ಸರ್ಕಾರ; ಪರಿಸರ ರಕ್ಷಣೆಗೆ ಹೊಸ ಮಾರ್ಗ
ಪ್ರಾತಿನಿಧಿಕ ಚಿತ್ರ

World Environment Day 2021: ತಮ್ಮ ಜೀವಮಾನಪೂರ್ತಿ ಆಮ್ಲಜನಕದ ಉತ್ಪಾದನೆ ಮಾಡಿದ, ಮಾಲಿನ್ಯ ನಿಯಂತ್ರಕ ಮರಗಳ ನಿರ್ವಹಣೆಗಾಗಿ ಪ್ರತಿ ವರ್ಷ ₹2500 ಹಣವನ್ನು ನೀಡುವುದೇ ಈ ಯೋಜನೆಯ ಉದ್ದೇಶ. ವಯೋವೃದ್ಧರಿಗೆ ನೀಡುವ ಪಿಂಚಣಿಯಂತೆಯೇ ಮರಗಳಿಗೂ ಪಿಂಚಣಿ ನೀಡಲಾಗುತ್ತದೆ.

Guruganesh Bhat

| Edited By: Skanda

Jun 07, 2021 | 8:42 AM

ಮೆಡಿಕಲ್ ಆಕ್ಸಿಜನ್ ಕೊರತೆ ದೇಶದ ಎಲ್ಲೆಲ್ಲೂ ಎದ್ದುಕಾಣುತ್ತಿದೆ. ಆಸ್ಪತ್ರೆಗಳ ಮುಂದೆ ರೋಗಿಗಳ ಕುಟುಂಬದ ಸರತಿ ಸಾಲು. ವೈದ್ಯಕೀಯ ಆಮ್ಲಜನಕ ಇಲ್ಲದೇ ಮೃತಪಟ್ಟವರ ದುರಂತದ ಕಥೆಗಳು ಪ್ರತಿದಿನದ ಶೀರ್ಷಿಕೆ. ಇದೇ ಸಮಯದಲ್ಲಿ ಕಾಡುಗಳ ಮಹತ್ವ, ಗಿಡಮರಗಳಿಂದ ನೈಸರ್ಗಿಕ ಆಮ್ಲಜನಕದ ಉತ್ಪಾದನೆಯ ಕುರಿತು ಒಂದು ಚಿತ್ರ ವಾಟ್ಸಾಪ್ ಸ್ಟೇಟಸ್​ಗಳಲ್ಲಿ ಹರಿದಾಡುತ್ತಿದೆ. ಮೆಡಿಕಲ್ ಆಕ್ಸಿಜನ್​ಗೂ ನೈಸರ್ಗಿಕ ಆಮ್ಲಜನಕಕ್ಕೂ ಹೋಲಿಕೆ ಅಷ್ಟು ಸರಿ ಬರದಿದ್ದರೂ ಅರಣ್ಯ ಸಂರಕ್ಷಣೆ ಮಹತ್ವವಂತೂ ಸಾಬೀತಾಗಿದ್ದು ಖರೆ.

ಇದೇ ಹೊತ್ತಲ್ಲಿ ಸರ್ಕಾರಗಳು, ಆಡಳಿತಗಳು ನಗರಗಳಲ್ಲಿ ಅರಣ್ಯ ಅಭಿವೃದ್ಧಿಯತ್ತ ತೀವ್ರ ಗಮನಹರಿಸವಂತೆ ಕೂಗು ಬಲಗೊಂಡಿತ್ತು. ಆದರೆ ಈ ಕುರಿತು ಯೋಚಿಸಲು ಮಿಕ್ಕಾವ ಸರ್ಕಾರಗಳಿಗೂ ಸಮಯ ದೊರೆಯದಿದ್ದರೂ ಹರಿಯಾಣದ ಮುಖ್ಯಮಂತ್ರಿ ಮನೋಹರ್​ಲಾಲ್ ಖಟ್ಟರ್ ಮಾತ್ರ ಈ ಮಾತನ್ನು ಅನುಷ್ಠಾನಕ್ಕೆ ತಂದಿದ್ದಾರೆ. ಅವರು ಜಾರಿಗೆ ತಂದ ಎರಡು ಯೋಜನೆಗಳೇ ಪ್ರಾಣವಾಯು ದೇವತಾ ಪೆನ್ಶನ್ ಯೋಜನೆ ಮತ್ತು ಆಕ್ಸಿವನ್. ಜೂನ್ 5ರ ವಿಶ್ವ ಪರಿಸರ ದಿನದಂದು ಮನೋಹರ್​ಲಾಲ್ ಖಟ್ಟರ್ ಈ ಎರಡು ಮಹತ್ವದ ಯೋಜನೆಗಳನ್ನು ಘೋಷಿಸಿದ್ದಾರೆ.

ಮರಗಳಿಗೆ ಪೆನ್ಶನ್! 75 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಮರಗಳಿಗೆ ಪೆನ್ಶನ್ ನೀಡುವುದೇ ಪ್ರಾಣವಾಯು ದೇವತಾ ಪೆನ್ಶನ್ ಯೋಜನೆ. ತಮ್ಮ ಜೀವಮಾನಪೂರ್ತಿ ಆಮ್ಲಜನಕದ ಉತ್ಪಾದನೆ ಮಾಡಿದ, ಮಾಲಿನ್ಯ ನಿಯಂತ್ರಕ ಮರಗಳ ನಿರ್ವಹಣೆಗಾಗಿ ಪ್ರತಿ ವರ್ಷ ₹2500 ಹಣವನ್ನು ನೀಡುವುದೇ ಈ ಯೋಜನೆಯ ಉದ್ದೇಶ. ವಯೋವೃದ್ಧರಿಗೆ ನೀಡುವ ಪಿಂಚಣಿಯಂತೆಯೇ ಮರಗಳಿಗೂ ಪಿಂಚಣಿ ನೀಡಲಾಗುತ್ತದೆ. ಮರಗಳ ಸುತ್ತ ಗ್ರಿಲ್ಸ್​ಗಳನ್ನು ನಿರ್ಮಿಸಲು, ಅವುಗಳಿಗೆ ಅಗತ್ಯ ಸುರಕ್ಷತೆ ಒದಗಿಸಲು ಪಿಂಚಣಿ ಹಣವನ್ನು ಬಳಸಲಾಗುತ್ತದೆ. ಗ್ರಾಮ ಪಂಚಾಯಿತಿಗಳಿಗೆ ಮರಗಳ ಪಾಲನೆಗಾಗಿ ಪಿಂಚಣಿ ಹಣವನ್ನು ನೀಡಲಾಗುತ್ತದೆ. ಮರಗಳ ಜವಾಬ್ದಾರಿ ಪಂಚಾಯತ್ ಮತ್ತು ಸ್ಥಳೀಯರದು.

3 ಕೋಟಿ ಗಿಡಗಳನ್ನು ಬೆಳೆಸುವ ಸಂಕಲ್ಪ ಆಕ್ಸಿ ವನ್ ಎಂಬುದು ಹರಿಯಾಣ ಸರ್ಕಾರ ಹಮ್ಮಿಕೊಂಡ ಇನ್ನೊಂದು ಯೋಜನೆ. 3 ಕೋಟಿ ಗಿಡಗಳನ್ನು ಬೆಳೆಸಿ ಮರವಾಗುವವರೆಗೆ ಬೆಳೆಸುವುದೇ ಈ ಯೋಜನೆಯ ಹೂರಣ. ಇಡೀ ಹರಿಯಾಣ ರಾಜ್ಯದ ಶೇಕಡಾ 10ರಷ್ಟು ಭೂಭಾಗದಲ್ಲಿ ಆಕ್ಸಿ ವನ್ ಯೋಜನೆಯಡಿ ಮರಗಳನ್ನು ಬೆಳೆಸಲು ಉದ್ದೇಶಿಸಿಲಾಗಿದೆ. ಅಲ್ಲದೇ ವಿವಿಧ ಸಸಿಗಳನ್ನು ಬೆಳೆಸಿ ತಮ್ಮ ಮನೆಗಳಲ್ಲಿ ಬೆಳೆಸಲು ಸಾರ್ವಜನಿಕರಿಗೆ ಸಬ್ಸಿಡಿ ಆಧಾರದ ಮೇಲೆ ಮಾರಾಟವನ್ನೂ ಮಾಡಲಾಗುವುದು ಎಂದು ತಿಳಿಸಿದೆ.

ಅಶೋಕ ವೃಕ್ಷ, ಬಿಲ್ವಪತ್ರೆಯ ಗಿಡ, ತುಳಸಿ, ಅಶ್ವಗಂಧ, ಬೇವು, ಆಲೋವೆರಾ, ನೆಲ್ಲಿಯೂ ಸೇರಿದಂತೆ ವಿವಿಧ ಹೂವಿನ ಗಿಡಗಳು, ಔಷಧೀಯ ಗಿಡಗಳು, ಹೆಚ್ಚು ಆಮ್ಲಜನಕ ಉತ್ಪಾದಿಸುವ ಗಿಡಗಳನ್ನು ಬೆಳೆಸಲು ಉದ್ದೇಶಿಲಾಗಿದೆ. ಮುಂದಿನ ದಿನಗಳಲ್ಲಿ ಸಾಮಾನ್ಯ ವಾತಾವರಣದಲ್ಲೂ ಆಮ್ಲಜನಕದ ಕೊರತೆ ಉಂಟಾಗಲಿದೆ. ನಗರಗಳಲ್ಲಿ ಈಗಲೇ ಶ್ವಾಸಕೋಶ ಸಂಬಂಧಿತ ರೋಗಗಳಿಂದ ಬಳಲುವವರ ಸಂಖ್ಯೆ ಎಂದಿಗಿಂತಲೂ ಹೆಚ್ಚುತ್ತಿದೆ. ಕೊವಿಡ್ ಎರಡನೇ ಅಲೆ ನಮಗೆ ಆಮ್ಲಜನಕದ ಮಹತ್ವವನ್ನು ಅತ್ಯಂತ ಆಳವಾಗಿ ಮನದಟ್ಟು ಮಾಡಿದೆ ಎಂದು ಹರಿಯಾಣ ಮುಖ್ಯಮಂತ್ರಿ ಮನೋಹರ್​ಲಾಲ್ ಖಟ್ಟರ್ ತಿಳಿಸಿದ್ದಾರೆ.

ಇದನ್ನೂ ಓದಿ: World Environment Day 2021: ಟೆರೇಸ್​ ಮೇಲೆ ಪುಟ್ಟ ಕಾಡು ನಿರ್ಮಾಣ ಮಾಡಿದ ಮಧ್ಯಪ್ರದೇಶದ ವ್ಯಕ್ತಿ..2500ಕ್ಕೂ ಹೆಚ್ಚು ಮರಗಳು

Catch the Rain: ನಮಗೆ ನಮ್ಮದೇ ನೆಲದ ನೀರಿನ ಎಂಜಿನಿಯರ್​ಗಳು ಬೇಕು; ಪರಿಸರ ಕಾರ್ಯಕರ್ತ ಶಿವಾನಂದ ಕಳವೆ ಬರಹ (Haryana CM Manohar Lal Khattar announce scheme for pension for trees Oxy Van project on World Environment day 2021)

Follow us on

Related Stories

Most Read Stories

Click on your DTH Provider to Add TV9 Kannada