D. R. bendre birthday ಹತ್ತರೀ ಸಾಧನಕೇರಿ ಬಸ್: ನೀವು ನಂಬಿಟ್ಟು ಹೋದ್ರಿ; ನಾವು ತಂಬಿಟ್ಟು ತಿಂದ್ವಿ

| Updated By: ಆಯೇಷಾ ಬಾನು

Updated on: Jan 31, 2022 | 11:32 AM

‘ಬ್ರಿಟಿಷರ ಕಂಗೆಣ್ಣಿಗೆ ಗುರಿಯಾದ ಕವಿತೆಯನ್ನು ರಚಿಸಿದಾಗ ಬೇಂದ್ರೆಯವರನ್ನು ವಿಚಾರಣೆಗೆ ಗುರಿಪಡಿಸಿ, ಅರೆಸ್ಟ್ ಮಾಡಲು ಬಂದ ಪೊಲೀಸ್ ಅಧಿಕಾರಿಗಳಿಗೆ, ‘ಕವಿತಾ ಬರದೋವ್ನು ಅಂಬಿಕಾತನಯದತ್ತ; ಬೇಂದ್ರೆ ಅಲ್ಲ; ಅಂಬಿಕಾತನಯದತ್ತನನ್ನು ಅರೆಸ್ಟ್ ಮಾಡ್ಕೋರಿ ಬೇಕಾದ್ರ’ ಅಂದ್ರಂತೆ! ಇಂಥ ಗಂಭೀರ ಸಂದರ್ಭದಲ್ಲೂ ಬೇಂದ್ರೆ ತಮ್ಮ Pun ಬಿಟ್ಟು ಕೊಡಲಿಲ್ಲ.‘ ಶ್ರೀಧರ ಬಳಗಾರ

D. R. bendre birthday ಹತ್ತರೀ ಸಾಧನಕೇರಿ ಬಸ್: ನೀವು ನಂಬಿಟ್ಟು ಹೋದ್ರಿ; ನಾವು ತಂಬಿಟ್ಟು ತಿಂದ್ವಿ
Follow us on

ದತ್ತಾತ್ರೇಯನೆಂಬ ಖಾಸಾದೋಸ್ತನಿಗೀಗ 126ರ ಹರೆಯ!
ಯಾರರೀ ಜುಬಿಲಿ ಸರ್ಕಲ್, ಯಾರರೀ ಕೆಸಿಡಿ, ಯಾರರೀ ದಾಸನಕೊಪ್ಪಾ, ನಾರಾಯಣಪುರ, ಕೆನರಾ ಬ್ಯಾಂಕ್, ಜರ್ಮನ್ ಹಾಸ್ಪಿಟಲ್, ಯಾರರೀ ಸಾಧನಕೇರಿ? ಹಿಂಗಂತ ಧಾರವಾಡ ಸಿಟಿ ಬಸ್ಸಿನ ಕಂಡಕ್ಟರ್ ಕರದಾಗೆಲ್ಲಾ ನಾವು ಉತ್ರಾ ಕೊಡ್ತೀವೇನು, ಸುಮ್ಮನ ಇಳದ ಹೋಗ್ತೀವಿಲ್ಲೋ? ಕಾವ್ಯ ಅಂದ್ರನೂ ಹಂಗ. ಸುಮ್ಮನ ಸುಮ್​ಸುಮ್ಮನ ಓದ್ಕೋತ ಓದ್ಕೋತ ಅದರೊಳಗ ಇಳಕೋತ ಕಳಕೋತ ಹೋಗೂದು. ಕಳದು ಕೂಡಿ, ಕೂಡಿ ಕಳದು ಕತ್ತಲದಾಗನ ಸಣ್ಣ ಸಣ್ಣ ಬೆಳಕಿನ ಮಿಣುಕಾ ಹಿಡಕೋತ ಉಸರ ತಂದ್ಕೋತ ಶಕ್ತಿ ತಂದ್ಕೋತ ಹೋಗುದು ಅಲ್ಲೇನು ಅಂತ, ಬರಹಾನ ಬದುಕು ಅನ್ಕೊಂಡಿರೂ ಮನಸಗೋಳಿಗೆ ಟಿವಿ9 ಕನ್ನಡ ಡಿಜಿಟಲ್ ಕೇಳಿದ್ದ ತಡಾ, 126ರ ವಯಸಿನ ಸಾಧನಕೇರಿಯ ಬೆಂದ ಹುಡುಗನ್ನ ಬಗಲಾಗ ಕೈಹಾಕಿ ಜೀವಾಮಾಡಿ ದರಾದರಾ ಅಂತ ಒಳಗೆಳ್ಕೊಂಡಬಿಟ್ರು. ಆಮ್ಯಾಲ ಖಾಲೀ ಹಾಳಿ ಮುಂದ  ಕುಂತಮ್ಯಾಲ ರಾಮಚಂದ್ರ ಮತ್ತ ಅಂಬಿಕಾ ಅವ್ರ ಮಗ ದತ್ತೂಬಾಳಾ ಏನಿದ್ದಾನಲ್ಲಾ… ಅವ ಅವರೊಳಗ ಇಳಕೋತ ಏನೇನ ನೆನಪ ಕೆದಕಿದ, ಅವು ಏನೇನು ವಿಚಾರಗೋಳ್ನ ಹುರಿಗೊಳಸ್ತಾ ಹೋದ್ವು ಅನ್ನೂದನ್ನ ನೀವ ಓದ್ರಿ, ಹಂಗಿದ್ರ ಹತ್ತರೀ ಸಾಧನಕೇರಿ ಬಸ್. 

ಪರಿಕಲ್ಪನೆ : ಶ್ರೀದೇವಿ ಕಳಸದ

ಕಥೆಗಾರ ಶ್ರೀಧರ ಬಳಗಾರ ಅವರು ಬೇಂದ್ರೆಯವರ ಪದ್ಯಪ್ರಸಂಗಗಳನ್ನು ಬರೆದಿದ್ದಾರೆ.

ಪದ್ಯರೂಪಿಯಾಗಿ ನಮ್ಮ ಮನೆಗೆ ಬಂದ ಮೊದಲ ಕವಿ ಬೇಂದ್ರೆ. ಸಾವಿರದ ಒಂಬೈನೂರಾ ಅರವತ್ಮೂರರಲ್ಲಿ ನಮ್ಮ ಮನೆಗೆ ರೇಡಿಯೋ ತರಲಾಯಿತು. ಅದು ಊರಿಗೇ ಮೊದಲ ರೇಡಿಯೊ! ಆಗಿನ್ನೂ ನಾನು ಸಣ್ಣ ಹುಡುಗ. ಎಪ್ಪತ್ತರ ದಶಕದಲ್ಲಿ ನನ್ನ ಶಾಲಾಯಾತ್ರೆ ಆರಂಭವಾಗಿ ಮಧ್ಯಾಹ್ನ ಊಟ ಮಾಡಿ ಶಾಲೆಗೆ ಹೋಗುತ್ತಿದ್ದಾಗ ಮನೆಯ ಜಗಲಿಯ ಗೋಡೆಯ ಕಪಾಟಿನಲ್ಲಿಟ್ಟಿದ್ದ ರೇಡಿಯೊದಲ್ಲಿ ಆಕಾಶವಾಣಿ ಧಾರವಾಡ ಕೇಂದ್ರದಿಂದ ಪ್ರಸಾರವಾಗುತ್ತಿದ್ದ ಚಿತ್ರಗೀತೆಗಳನ್ನು ಅಂಗಳ ದಾಟಿ ಎದುರಿನ ಕಾಲ್ದಾರಿ ಗುಂಟ ಘಟ್ಟದ ತುದಿಯವರೆಗೆ ನಡೆಯುತ್ತ ಆಲಿಸುತ್ತಿದ್ದೆ. ಅದಾಗಲೇ ‘ಬೆಳ್ಳಿಮೋಡ’ ಚಿತ್ರ ತೆರೆ ಕಂಡಿತ್ತು; ಅದರಲ್ಲಿ ಬೇಂದ್ರೆಯವರ ‘ಮೂಡಲ ಮನೆಯ ಮುತ್ತಿನ ನೀರಿನ…’ ಪದ್ಯವನ್ನು ಹಾಡಲಾಗಿತ್ತು. ಅದೊಂದು ಬೆಳಗಿನ ಚೆಲುವನ್ನು ವರ್ಣಿಸುವ ಪದ್ಯವೆಂದು ನಾನಾಗ ಅಂದುಕೊಂಡಿದ್ದೆ; ನಮ್ಮ ಮನೆಯ ಅಂಗಳದ ಬೆಳಗು, ಮುಸ್ಸಂಜೆ ಮತ್ತು ಬೆಳದಿಂಗಳು ಪ್ರತಿ ಸಲವೂ ವಿಚಿತ್ರ ಮಾಯಾ ಪರಿವೇಷದಲ್ಲಿ ಭಿನ್ನವಾಗಿರುತ್ತಿದ್ದವು; ಸೂರ್ಯ ಮತ್ತು ಚಂದ್ರ ಉದಯಿಸಿ ಕಂತುವ ದಿಕ್ಕು-ದಿಗಂತಗಳು, ಚೆಲ್ಲುವ ಬೆಳಕನ್ನು ಪಡೆದು ಹೊಳೆಯುತ್ತಿದ್ದ ಗದ್ದೆ-ಕಾಡು ಮರಗಳ ಭಂಗಿ, ನೆರಳುಗಳ ನೇಯ್ಗೆಯ ವಿನ್ಯಾಸ ಬದಲಾಗುತ್ತಲೆ ಇರುತ್ತಿದ್ದವು. ನಾನು ಈ ಮೂರು ಅಪೂರ್ವ ಮುಹೂರ್ತಗಳನ್ನು ಅವ್ಯಕ್ತ ಆನಂದದಿಂದ ಅನುಭವಿಸುತ್ತಿದ್ದೆ; ಅಭಿವ್ಯಕ್ತಿಗೆ ಸಿಗದ ಆನಂದ ಅದು; ಒಳಗಿನ ಆನಂದವನ್ನು ಗೆಳಯರಲ್ಲಿ ಹಂಚಿಕೊಳ್ಳುವ ಆಸೆಯಾಗುತ್ತಿತ್ತು; ಆದರೆ, ನನಗೆ ಅನುಭವಕ್ಕೆ ಆಕಾರ ಕೊಟ್ಟು ಬೇರೆಯವರಿಗೆ ತಲುಪಿಸುವ ಭಾಷೆ ಗೊತ್ತಿರಲಿಲ್ಲ. ಅನುಭವ ಅರ್ಥವಾಗಬೇಕಾದರೆ, ಆನಂದ ಇನ್ನಷ್ಟು ಉಕ್ಕಲು ಸಂವಹನದ ಅಗತ್ಯವಿದೆಯೇ ಎಂದು ಕೇಳಿದರೆ ನನಗೆ ಗೊತ್ತಿಲ್ಲ. ಆದರೆ, ಉಕ್ಕಿದ ಆನಂದ ಪರರಿಗೆ ತಲುಪಿಸಿದಾಗ ಉಂಟಾಗುವ ಸಂತೃಪ್ತಿ ಬೇರೆ ಬಗೆಯದ್ದು. ನನ್ನೊಳಗಿಂದ ಪ್ರಕಟವಾಗಲು ತವಕಿಸುತ್ತಿದ್ದ ಭಾವಕ್ಕೆ ಬಾಯಿ ಕೊಟ್ಟದ್ದು ಬೇಂದ್ರೆಯವರ ‘ಬೆಳಗು’ ಪದ್ಯ; ಪದ್ಯದ ಬೆಳಗಿನ ಚಿತ್ರ ವಿವರಗಳು ನನ್ನ ಬೆರಗಿನ ಅನುಭವದ ಬೆಳಕಾಗಿ ಅರಿವಾಗುತ್ತಲೆ ಬಿಡುಗಡೆಯ ಸುಖ ಉಂಟಾಯಿತು.

ಮೂಡಲ ಮನೆಯಾಗಿಸುವ, ನೀರು ಮುತ್ತಾಗಿಸುವ, ಬೆಳಕು ನೀರಿನಂತೆ ತೊಯ್ಯಿಸುವ, ಎರಕ ಹೊಯ್ಯುವ ಕಾಣದ ಶಿಲ್ಪಿಯನ್ನು ಸೂಚಿಸುವ ವಿಸ್ಮಯ ಜರುಗುತ್ತ ಬೆಳಗೇ ಪರ್ಸಾನಿಫಿಕೇಷನ್ ಆಗಿ ಬಿಡುತ್ತದೆ. ಅದಕ್ಕೊಂದು ಕಾಲ ಪುರುಷನ ವ್ಯಕ್ತಿತ್ವ ಆವಾಹನೆಯಾಗುತ್ತದೆ. ಬಾಡಿ ಹೋಗುವ ಹೂವು, ಉದುರಿ ಹೋಗುವ ಅಲ್ಪಾಯುಷಿ ಎಲೆಗಳ ಮೇಲೆ ಸಾವಿರದ(ಅಮೃತ) ಬಿಂದುವಿದೆ. ರೂಪ ಬದಲಾಯಿಸಿದರೂ ಅಮರವಾಗಿರುವ ಜಲ ತತ್ವ ಕ್ಷಣಭಂಗುರ ಭೌತಿಕ ಜಗತ್ತಿಗೆ ವೈರುಧ್ಯ ಸತ್ಯವಾಗಿ ಪ್ರತ್ಯಕ್ಷವಾಗಿದೆ. ‘ಗಿಡಗಂಟೆಗಳಾ ಕೊರಳೊಳಗಿಂದ ಹಕ್ಕಿಗಳಾ ಹಾಡು..’ ದೇವರು, ಪ್ರಕೃತಿ, ಮನುಷ್ಯ ಒಂದರೊಳಗೊಂದು ಬೆರೆತು ಅಲೌಕಿಕದಿಂದ ಸುರಿವ ಜೀವಲೋಕದ ಬೆಳಗಾಗಿ ಕಾಣಿಸುತ್ತದೆ. ಗಿಡಗಂಟೆಗಳು ಹಕ್ಕಿಗಳ ಕೊರಳಾದಾಗ ಹಾಡು ಯಾರದ್ದು? ಇಂದಿಗೂ ಮತ್ತೆ ಮತ್ತೆ ನನ್ನ ಕಾಡುವ, ಹೊಸತನ್ನೇ ಹುಡುಕಲು ಹಚ್ಚುವ ಅದ್ವೈತದ ಸಾಲು ಅದು.

ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಓದುತ್ತಿದ್ದ ದಿನಗಳವು. ಕನ್ನಡದ ಪಠ್ಯವಾಗಿ ಓದಿಕೊಂಡು, ಆಕಾಶವಾಣಿಯಲ್ಲಿ ಕೇಳಿಸಿಕೊಂಡ ‘ಅಂಬಿಕಾತನಯದತ್ತ’ ಬೇಂದ್ರೆ, ದಂತಕತೆಯಾಗಿ ಧಾರವಾಡದ ರಸ್ತೆಗಳಲ್ಲಿ ಕರಿಟೊಪ್ಪಿ, ಕೋಟು ಮತ್ತು ಕೊಡೆ ಹಿಡಿದು ನಡೆದಾಡುತ್ತಿದ್ದ ದೃಶ್ಯಗಳು ನನ್ನ ಕಣ್ಣ ಮುಂದಿಂದ ಹಾದು ಹೋಗುತ್ತಿದ್ದವು. ಅವರ ಕೆಲ ಪದ್ಯಗಳ ಭೂಗೋಲವಾಗಿರುವ ಸಾಧನಕೇರಿ, ಅತ್ತಿಕೊಳ್ಳ, ಸೋಮೇಶ್ವರ, ಮನೋಹರ ಗ್ರಂಥ ಮಾಲೆಯ ಅಟ್ಟ, ಅಲ್ಲೆ ಸನಿಹದ ಚೌಕದಲ್ಲಿರುವ ದತ್ತಾತ್ರೇಯ ಗುಡಿ, ಮಂಗಳವಾರದ ಸಂತೆ, ವಿದ್ಯಾವರ್ಧಕ ಸಂಘದ ಸಣ್ಣ ಸಭಾಭವನ ಪವಿತ್ರ ಕ್ಷೇತ್ರವಾಗಿದ್ದವು. ಕರ್ನಾಟಕ ಕಾಲೇಜಿನಲ್ಲಿ ಇಂಗ್ಲಿಷ್ ಸಾಹಿತ್ಯ ಪಾಠ ಮಾಡುತ್ತಿದ್ದ ಹಿರಿಯ ಪ್ರಾಧ್ಯಾಪಕರೊಬ್ಬರು ಬೇಂದ್ರೆಯವರನ್ನು ಅಗಾಗ ಉಲ್ಲೇಖಿಸುತ್ತಿದ್ದರು. ಬೇಂದ್ರೆಯವರ ಮಾತು ಮತ್ತು ಕವಿತೆಗಳಲ್ಲಿ ಸಹಜವಾಗಿ ಸ್ಫುರಿಸುತ್ತಿದ್ದ Pun ಸಾಲುಗಳನ್ನು ಅತ್ಯಂತ ಸ್ವಾರಸ್ಯಪೂರ್ಣವಾಗಿ ಅವರು ವಿವರಿಸುತ್ತಿದ್ದರು; ‘ನೆನೆನೆನೆದು ಅತ್ತಾಂಗ ಮಳೆಯು/ನಡನಡುವೆ ಹೊಂಬಿಸಲ ಕಳೆಯು’ ಅಂತಹ ಸಾಲುಗಳಲ್ಲಿ ಒಂದು.

ಧಾರವಾಡದಲ್ಲಿ ಬೇಂದ್ರೆಯವರ ಮನೆ

ಹಲವು ಪ್ರಸಂಗಗಳನ್ನು ಉದಾಹರಿಸುತ್ತಿದ್ದರು. ಒಮ್ಮೆ ನಮ್ಮ ಪ್ರಾಧ್ಯಾಪಕರು ನಾಗರಪಂಚಮಿಯ ಮರುದಿನ ಬೇಂದ್ರೆಯವರನ್ನು ಭೇಟಿಯಾಗಲು ಅವರ ಸಾಧನಕೇರಿಯ ಮನೆಗೆ ಹೋದಾಗ ನಡೆದ ಪ್ರಸಂಗ ಅದು: ಇವರು ಬಾಗಿಲಿಂದ ಒಳಕೋಣೆಯನ್ನು ಇಣುಕಿ ನೋಡಿದಾಗ ಅದಾಗಲೇ ಬಂದಿದ್ದ ಅತಿಥಿಯ ಜೊತೆ ಬೇಂದ್ರೆ ಮಾತಿಗೆ ತೊಡಗಿದ್ದರಂತೆ; ನಾಗರಪಂಚಮಿಯ ವಿಶೇಷ ಸಿಹಿ ತಿನಿಸು ತಂಬಿಟ್ಟನ್ನು ತಿನ್ನುತ್ತಿದ್ದರಂತೆ; ಪ್ರಾಧ್ಯಾಪಕರು ಬಾಗಿದಾಗ ಬೇಂದ್ರೆಯವರು ಅವರ ಮುಖವನ್ನು ನೋಡಿದ್ದಾರೆ; ಅವರ ಮಾತಿಗೆ ಭಂಗವನ್ನುಂಟು ಮಾಡಬಾರದೆಂದು ಇವರು ಹೊರಗೆ ಕಟ್ಟೆಯ ಮೇಲೆ ಅತಿಥಿಗಳ ನಿರ್ಗಮನವನ್ನು ಕಾಯುತ್ತ ಕೂತರು; ಸ್ವಲ್ಪ ಸಮಯದ ಬಳಿಕ ಅವರು ಹೊರಟು ಹೋದರು; ಪ್ರಾಧ್ಯಾಪಕರನ್ನು ಸ್ವಾಗತಿಸುತ್ತ ಬೇಂದ್ರೆಯವರು ತಮ್ಮ ಎಂದಿನ ಲಹರಿಯಲ್ಲಿ, ‘ನೀವು ನಂಬಿಟ್ಟು ಹೋದ್ರಿ; ನಾವು ತಂಬಿಟ್ಟು ತಿಂದ್ವಿ’ ಎಂದರಂತೆ. ‘ನಂಬಿಟ್ಟು’ ಮತ್ತು ‘ತಂಬಿಟ್ಟು’ ಈ ಎರಡೂ ಶಬ್ದಗಳಿಗೆ ಎರಡೆರಡು ಅರ್ಥಗಳು: ಮುಖ ಕಾಣಿಸಿ ಮಾತಾಡುತ್ತ ಸಿಹಿ ಚಪ್ಪರಿಸುತ್ತಿದ್ದ ನಮ್ಮನ್ನು ನೀವು ಬಿಟ್ಟು ಹೊರಗೆ ಹೋಗಿ ಕುಳಿತು ಬಿಟ್ಟಿರಿ ಎಂಬುದು ಒಂದರ್ಥ; ತಾವಿಬ್ಬರೂ ಸವಿಯುತ್ತಿದ್ದ ಸಿಹಿಯನ್ನು ತನಗೆ ಉಳಿಸುತ್ತೇವೆ ಎಂದು ನಮ್ಮನ್ನು ನಂಬಿ ಹೋದಿರಿ ಎಂಬುದು ಎರಡನೆಯ ಅರ್ಥ. ನಮ್ಮನ್ನು ಬಿಟ್ಟು ಮತ್ತು ನಮ್ಮ ಮೇಲೆ ನಂಬಿಕೆ ಇಟ್ಟು ಎಂಬೆರೆಡು ಶ್ಲೇಷಾರ್ಥಗಳು. ಅಂತೆಯೇ ‘ತಂಬಿಟ್ಟು’ ಎಂಬ ಶಬ್ದವೂ ಎರಡು ಅರ್ಥಗಳನ್ನು ಧ್ವನಿಸುತ್ತದೆ: ತಂಬಿಟ್ಟು ಎಂಬ ಸಿಹಿತಿನಿಸು ಎಂಬುದು ಒಂದು; ತಮ್ಮನ್ನು ಬಿಟ್ಟು ಎಂಬುದು ಇನ್ನೊಂದು; ತಮ್ಮನ್ನು ಬಿಟ್ಟು ತಂಬಿಟ್ಟು ತಿಂದೆವು ಎಂದು. ಹೀಗೆ ಶಬ್ದ ಒಡೆದು ದ್ವಿದಳಾರ್ಥಗಳನ್ನು ಧ್ವನಿಸುವುದು ಬೇಂದ್ರೆಯವರಿಗೆ ತಂತ್ರೋಪಾಯ ಮಾತ್ರವಾಗಿರದೆ ಬದುಕಿನ ಸಂದರ್ಭದ ಸಂಕೀರ್ಣ ಎಳೆಗಳನ್ನು ಹಿಂಜಿ ತೆಗೆಯುವ ಪ್ರತಿಭಾ ವಿಲಾಸವಾಗಿದೆ.

ಶಬ್ದಗಳೊಂದಿಗೆ ಆಟವಾಡುವ ಮಾಂತ್ರಿಕತೆಯಿಂದಾಗಿ ಬೇಂದ್ರೆಯವರನ್ನು ಶಬ್ದ ಗಾರುಡಿಗ ಎಂದು ಕರೆದರು ಎಂಬುದು ಅರ್ಧ ಸತ್ಯ. ಗಿರಡ್ಡಿಯವರು ‘ಗಾರುಡಿಗ’ ಎಂಬ ಶಬ್ದವನ್ನು ಬೇಂದ್ರೆಯವರ ಕಾವ್ಯ ಸಂದರ್ಭದಲ್ಲಿ ಬೇರೆ ರೀತಿಯಲ್ಲಿ ವಿವರಿಸುತ್ತಾರೆ. ಬೆಳಗಾವಿಯ ಸಾಹಿತ್ಯ ಸಮ್ಮೇಳನದಲ್ಲಿ ಬೇಂದ್ರೆಯವರು ಓದಿದ ‘ಹಕ್ಕಿ ಹಾರುತಿದೆ ನೋಡಿದಿರಾ…’ ಪದ್ಯ ಪ್ರಸಂಗ ಇತಿಹಾಸವಾಗಿದೆ. ಅವರ ಅಂದಿನ ವೇಷಭೂಷಣ, ಭಾವ-ಭಂಗಿ, ಧ್ವನಿ ಒಟ್ಟಂದದಲ್ಲಿ ಸಭಿಕರನ್ನು ಓದಿನಲ್ಲೇ ಮೋಡಿ ಮಾಡಿದ ಗಾರುಡಿಗನಂತೆ ಕಾಣುತ್ತಿದ್ದರು ಎಂಬ ಗಿರಡ್ಡಿಯವರ ವ್ಯಾಖ್ಯಾನದಲ್ಲಿ ‘ಗಾರುಡಿಗ’ ಶಬ್ದದ ಪನ್ ಹೊಳೆಯುತ್ತದೆ.

ಬ್ರಿಟಿಷರ ಕಂಗೆಣ್ಣಿಗೆ ಗುರಿಯಾದ ಕವಿತೆಯನ್ನು ರಚಿಸಿದಾಗ ಬೇಂದ್ರೆಯವರನ್ನು ವಿಚಾರಣೆಗೆಗುರಿ ಪಡಿಸಿ, ಅರೆಸ್ಟ್ ಮಾಡಲು ಬಂದ ಪೊಲೀಸ್ ಅಧಿಕಾರಿಗಳಿಗೆ, ‘ಕವಿತಾ ಬರದೋವ್ನು ಅಂಬಿಕಾತನಯದತ್ತ; ಬೇಂದ್ರೆ ಅಲ್ಲ; ಅಂಬಿಕಾತನಯದತ್ತನನ್ನು ಅರೆಸ್ಟ್ ಮಾಡ್ಕೋರಿ ಬೇಕಾದ್ರ’ ಅಂದ್ರಂತೆ! ಇಂಥ ಗಂಭೀರ ಸಂದರ್ಭದಲ್ಲೂ ಬೇಂದ್ರೆ ತಮ್ಮ Pun ಬಿಟ್ಟು ಕೊಡಲಿಲ್ಲ.


ಶ್ರೀಧರ ಬಳಗಾರ

ಹತ್ತರೀ ಸಾಧನಕೇರಿ ಬಸ್: ಸೂರ್ಯ ಮುಳುಗುವ ಮುನ್ನ ಓಡೋಡಿ ಬರುವ ಜನ, ಕೈ ಮುಗಿವ ಹಾಗೆ ಮುಳುಗಲ್ಲಿ ಮುಳುಗಿ…

Published On - 5:04 pm, Sun, 31 January 21