Indian Woman: ವೈಶಾಲಿಯಾನ; ತರಗತಿಯಲ್ಲಿ ಬಳೆಗಳ ಶಬ್ದದಿಂದಲೇ ಆಕೆ ತನ್ನ ಹಾಜರಾತಿ ಸೂಚಿಸಬೇಕಾಗಿತ್ತು

Indian Woman: ವೈಶಾಲಿಯಾನ; ತರಗತಿಯಲ್ಲಿ ಬಳೆಗಳ ಶಬ್ದದಿಂದಲೇ ಆಕೆ ತನ್ನ ಹಾಜರಾತಿ ಸೂಚಿಸಬೇಕಾಗಿತ್ತು
ಪ್ರಾತಿನಿಧಿಕ ಚಿತ್ರ

Woman and Education: ಬರಿಸಾಲ್‌ನ ಬ್ರಜ್‌ಮೋಹನ್ ಕಾಲೇಜಿನ ಪ್ರಥಮ ವಿದಾರ್ಥಿನಿ ಸಾವಿತ್ರಿ, ಕಾಲೇಜಿಗೆ ಮೇನೆಯಲ್ಲಿ ಅವಕುಂಠನವತಿಯಾಗಿ ಆಗಮಿಸುತ್ತಿದ್ದರಂತೆ. ಮರದಹಲಗೆ ನಿಲ್ಲಿಸಿ ಆಕೆಗೆ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಲಾಗುತ್ತಿತ್ತು. ಹಲಗೆಗೆ ಕೊರೆದ ಚಿಕ್ಕರಂಧ್ರದ ಮೂಲಕ ಆಕೆ ಪ್ರಾಧ್ಯಾಪಕರನ್ನು ವೀಕ್ಷಿಸಬಹುದಾಗಿತ್ತು.

ಶ್ರೀದೇವಿ ಕಳಸದ | Shridevi Kalasad

|

Apr 02, 2022 | 12:25 PM

ವೈಶಾಲಿಯಾನ | Vaishaliyaana : ಈ ಮೌಢ್ಯ, ಶಿಶುಕಾಮದ ದೌರ್ಜನ್ಯ, ಲೈಂಗಿಕ ಹಿಂಸೆ, ಅತ್ಯಾಚಾರಗಳಿಗೆ ಬಲಿಯಾಗಿ, ಪ್ರತಿಭಟಿಸಲೂ ಆಗದೆ ರಕ್ತಸ್ರಾವದಿಂದ ವಿಲ ವಿಲ ಒದ್ದಾಡಿ ಅಸುನೀಗಿದ ಮುಗ್ಧ ಹಸುಳೆಗಳೆಷ್ಟೋ? ಕೆಲವು ಪ್ರಕರಣಗಳಷ್ಟೇ ಪತ್ರಿಕೆಗಳಲ್ಲಿ ವರದಿಯಾಗಿದ್ದವಾದರೂ, ಇವುಗಳ ದಾಖಲೆಗಳು, ಸಾಕ್ಷಿದಾರರು ಒದಗಿಸಿದ ವೈವಾಹಿಕ ಅತ್ಯಾಚಾರದ, ನಮ್ಮ ರಕ್ಕವನ್ನೇ ಹೆಪ್ಪುಗಟ್ಟಿಸುವ ಸಾಕ್ಷಿಯ ವಿವರಗಳು, ಗೆಜೆಟ್ಟುಗಳಲ್ಲಿ, ಹಳೆಯ ದಾಸ್ತಾವೇಜುಗಳಲ್ಲಿ ಇಂದಿಗೂ ಲಭ್ಯ. ಈ ಇತಿಹಾಸದ ಪುಟಗಳನ್ನು ತಿರುವಿ ಹಾಕಲೂ ಕೂಡ ಧೈರ್ಯ ಬೇಕು. ಅವು ನಮ್ಮನ್ನು ಮರ್ಮಾಘಾತಗೊಳಿಸುವ ಕ್ಷಣಗಳು. ಇಂದು 2022ರಲ್ಲಿ ನಾವು ವೈವಾಹಿಕ ಅತ್ಯಾಚಾರದ ಬಗ್ಗೆ ಗಟ್ಟಿಯಾಗಿ ಮಾತನಾಡುತ್ತಿದ್ದೇವೆ ಎಂಬುದೇ ಮಹಿಳಾ ವಿಮೋಚನೆಯ ಪಥದಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಿಸಬೇಕಾದ ವಿಚಾರವೆಂದು ನನ್ನ ಅಭಿಪ್ರಾಯ. ಹಿಂದೂ ರಾಷ್ಟ್ರೀಯತಾವಾದಿಗಳಿಗೆ ಬ್ರಿಟಿಷ್ ಸರ್ಕಾರ ತಮ್ಮ ಹೆಣ್ಣುಮಕ್ಕಳ ಗರ್ಭದಾನ ಶಾಸ್ತ್ರದ ವಯಸ್ಸನ್ನು ನಿಗದಿಪಡಿಸುವುದು ತಮ್ಮ ಧಾರ್ಮಿಕ ಹಕ್ಕುಗಳ ಉಲ್ಲಂಘನೆಯಾಗಿ ಕಂಡಿತ್ತಷ್ಟೇ ಬಿಟ್ಟರೆ ಬಡಪಾಯಿ ಬಾಲಿಕಾವಧುವಿನ ಅರ್ತನಾದ, ಕರುಣಾಜನಕವಾದ ಆಕ್ರಂದನ ಬ್ರಿಟಿಷ್ ಸರ್ಕಾರಕ್ಕಾಗಲೀ, ಹಿಂದೂ ಪುರುಷ ಸಿಂಹಗಳಿಗಾಗಲೀ ಕೇಳಿಸಲೇ ಇಲ್ಲ. ಡಾ. ಕೆ. ಎಸ್. ವೈಶಾಲಿ (Dr. K. S. Vaishali)

(ಯಾನ 7, ಭಾಗ 2)

35 ವರ್ಷದ ಹರಿ ಮೈತಿ ತನ್ನ ಹನ್ನೊಂದು ವರ್ಷದ ಹೆಂಡತಿ ಫೂಲಮಣಿಯ ಮೇಲೆ ಅಮಾನುಷವಾಗಿ ಲೈಂಗಿಕ ಅತ್ಯಾಚಾರವೆಸಗಿದ್ದ. ಸಹಿಸಲಾರದ ನೋವಿನಿಂದ, ಅತೀವ ರಕ್ತಸ್ರಾವದಿಂದ ತತ್ತರಿಸಿದ ಬಾಲಕಿ ಮೈತಪಟ್ಟಿದ್ದಳು. ರಕ್ತದ ಮಡುವಿನಲ್ಲಿ ಜರ್ಝರಿತವಾಗಿ ಹಿಂಡಿಹಿಪ್ಪೆಯಾಗಿದ್ದ ಆಕೆಯ ಪುಟ್ಟ ಶವವನ್ನು ನೋಡಿದ್ದ ಆಕೆಯ ತಾಯಿ ರಾಧಾಮಣಿ, ಚಿಕ್ಕಮ್ಮ ಹಾಗೂ ಅಜ್ಜಿ, ನ್ಯಾಯಾಲಯದಲ್ಲಿ, ಮಂಚದ ಮೇಲೆ ಬಾಲಕಿಯ ನಿರ್ಜೀವ ಶವ ರಕ್ತ-ಸಿಕ್ತವಾಗಿ ಬಿದ್ದಿರುವುದನ್ನು, ಹಾಸಿಗೆಯ ಮೇಲೆ ಬಾಲಕಿಯ ಬಟ್ಟೆ, ಗಂಡ ಹರಿ ಮೈತಿಯ ಉಡುಪುಗಳು ರಕ್ತದಲ್ಲಿ ತೊಯ್ದುಹೋಗಿರುವುದ ಬಗ್ಗೆ ಸ್ಪಷ್ಟವಾಗಿ ಸಾಕ್ಷಿ ನೀಡಿದ್ದರು. ಮರಣೋತ್ತರ ಶವ ಪರೀಕ್ಷೆಯಲ್ಲಿ ಆಕೆ 13 ಗಂಟೆಗಳ ಯಮಯಾತನೆಯ ಬಳಿಕ, ಅತೀವ ರಕ್ತಸ್ರಾವದಿಂದ ಅಸುನೀಗಿದ್ದಳೆಂಬುದು ದೃಢಪಟ್ಟಿತ್ತು. ಬಹುಶಃ ವೈದ್ಯಕೀಯ ಪರಿಭಾಷೆಯ ನಿರ್ವಿಕಾರ ವರ್ಣನೆ, ದೌರ್ಜನ್ಯದ ಕರಾಳತೆಯನ್ನು ಇನ್ನೂ ಪರಿಣಾಮಕಾರಿಯಾಗಿ ಬಿಂಬಿಸಿತ್ತೆಂದು ತಾನಿಕಾ ಸರ್ಕಾರ್ ಅಭಿಪ್ರಾಯ ಪಡುತ್ತಾರೆ, “ಬಾಲಕಿಯ ಯೋನಿಯಲ್ಲಿ ಮೂರೂವರೆ ಇಂಚಿನಷ್ಟು ಉದ್ದ ಹಾಗೂ ಒಂದೂವರೆ ಇಂಚಿನಷ್ಟು ಅಗಲದ ರಕ್ತ ಹೆಪ್ಪುಗಟ್ಟಿದೆ. ಆಕೆಯ ಯೋನಿ, ಗರ್ಭಾಶಯ, ಅಂಡಾಶಯಗಳು ತುಂಬಾ ಚಿಕ್ಕದಾಗಿದ್ದು ಇನ್ನೂ ಬೆಳವಣಿಗೆಯ ಹಂತದಲ್ಲಿವೆ. ಈಕೆಯಲ್ಲಿ ಅಂಡೋತ್ಪತ್ತಿಯ ಯಾವ ಲಕ್ಷಣಗಳೂ ಕಂಡುಬರುತ್ತಿಲ್ಲ.”

ಫೂಲಮಣಿಯ ಪ್ರಕರಣವೇನೂ ಏಕೈಕ ಪ್ರಕರಣವಾಗಿರಲಿಲ್ಲ. ಚೀವರ್ ಎಂಬ ಬ್ರಿಟಿಷ್ ವೈದ್ಯನ ತನಿಖೆಯ ಪ್ರಕಾರ 1856ರಲ್ಲಿ ಈ ಬಗೆಯ 13 ಪ್ರಕರಣಗಳು ದಾಖಲಾಗಿದ್ದವು. ಅಪ್ರಾಪ್ತ ವಯಸ್ಸಿನ ಹೆಂಡತಿಯರೊಡನೆ ನಡೆಸಿದ ಬಲವಂತದ ಲೈಂಗಿಕ ಸಂಭೋಗದಿಂದಾಗಿ ಆ ಬಾಲಕಿಯರಿಗೆ ಮಾರಣಾಂತಿಕವಾದ, ಗಂಭೀರ ಗಾಯಗಳಾಗಿದ್ದವು. ಒಬ್ಬ ಭಾರತೀಯ ವೈದ್ಯನೂ ನ್ಯಾಯಾಲಯದಲ್ಲಿ ಸಾಕ್ಷಿ ನೀಡಿದ್ದ. ತಾನು ಚಿಕಿತ್ಸೆ ನೀಡಿದ ಎಳೆಯ ವಯಸ್ಸಿನ ಗರ್ಭಿಣಿಯರು, ಪ್ರಸವವೇದನೆಯಿಂದ ಬಳಲುತ್ತಿದ್ದ ಬಾಲಕಿಯರಲ್ಲಿ ಸುಮಾರು ಶೇ. 13ರಷ್ಟು ಜನ ಬಾಲಕಿಯರು 13 ವರ್ಷಕ್ಕಿಂತ ಚಿಕ್ಕವಯಸ್ಸಿನ ಪುಟ್ಟ ಬಾಲಕಿಯರೆಂದು ಆತ ಹೇಳಿಕೆ ನೀಡಿದ್ದ. ವಕೀಲರೂ ತಮ್ಮ ವಾದ ಮಂಡನೆಯಲ್ಲಿ, ಇನ್ನೂ ಋತುಮತಿಯಾಗದ ಹೆಂಡತಿಯೊಡನೆ ಸಂಭೋಗ ನಡೆಸುವುದು ಅಸಮ್ಮತವಾಗಿದ್ದರೂ, ಈ ಅಮಾನುಷವಾದ ಪದ್ಧತಿ ಎಷ್ಟರ ಮಟ್ಟಿಗೆ ಸಾರ್ವತ್ರಿಕವಾದ ಆಚರಣೆಯಾಗಿತ್ತೆಂದರೆ ನ್ಯಾಯಾಲಯದಲ್ಲಿ ಉಪಸ್ಥಿತರಿರುವ ಪುರುಷರೆಲ್ಲರೂ ಇದರಲ್ಲಿ ಭಾಗಿಯಾದವರೇ ತಾನೆ? ಎಂದು ಬಂಗಾಳದ ನ್ಯಾಯಾಲಯದಲ್ಲಿ ನ್ಯಾಯಾಧೀಶರಿಗೆ ಸವಾಲೆಸೆದಿದ್ದ.

1891ರ ಬಂಗಾಲೀ ಪತ್ರಿಕೆಯಲ್ಲಿ ತನ್ನ ವಯಸ್ಕ ಗಂಡನಿಂದ ಭೀಕರವಾಗಿ ಹಲ್ಲೆಗೊಳಗಾಗಿ ಗಾಯಗೊಂಡು, ಅತ್ಯಾಚಾರಕ್ಕೆ ಒಳಗಾಗಿದ್ದ ಪುಟ್ಟ ಬಾಲಕಿಯ ಹೇಳಿಕೆಯನ್ನು ಪ್ರಕಟಿಸಲಾಗಿತ್ತು. “ನನಗೆಷ್ಟು ವಯಸ್ಸು ಎಂಬುದು ನನಗೆ ತಿಳಿದಿಲ್ಲ. ನಾನು ಇನ್ನೂ ಋತುಮತಿಯಾಗಿಲ್ಲ. ನಾನು ಮಲಗಿದ್ದಾಗ ನನ್ನ ಗಂಡ ನನ್ನ ಕೈಹಿಡಿದು ಎಳೆದರು. ನಾನು ಚೀರಿದಾಗ ನನ್ನ ಬಾಯಿಯನ್ನು ಬಲವಾಗಿ ಮುಚ್ಚಿ ನನ್ನೊಡನೆ ಲೈಂಗಿಕ ಸಂಭೋಗ ನಡೆಸಿದರು. ನಾನು ಅಳತೊಡಗಿದಾಗ, ನನ್ನ ಕಿಬ್ಬೊಟ್ಟೆಗೆ ಬಲವಾಗಿ ಒದ್ದರು. ನನ್ನ ಗಂಡ ನನಗೆ ಯಾವ ಸಹಕಾರವನ್ನೂ ನೀಡುವುದಿಲ್ಲ. ನನಗೆ ಬೈದು , ಹೊಡೆದು ಹಿಂಸಿಸುತ್ತಾರೆ. ನಾನು ಅವರೊಂದಿಗೆ ಬಾಳಲು ಸಾಧ್ಯವಿಲ್ಲ” – ನನ್ನನ್ನು ಕಂಗಾಲಾಗಿಸಿದ ಬಾಲಕಿಯ ಹೇಳಿಕೆಯಿದು. ಇಷ್ಟು ಸ್ಪಷ್ಟವಾಗಿ ತನ್ನ ಮೇಲೆ ಗಂಡ ನಡೆಸಿದ ಲೈಂಗಿಕ ಹಿಂಸೆ , ದೌರ್ಜನ್ಯವನ್ನು ಹೇಳಿಕೊಂಡು ಅಂಗಲಾಚಿದ ಬಾಲಕಿಯ ಹೇಳಿಕೆಯನ್ನು ಆಲಿಸಿದ ಬಳಿಕ, ಬ್ರಿಟಿಷ್ ನ್ಯಾಯಾಧೀಶ ಆಕೆಯ ಗಂಡನನ್ನು ನಿರಪರಾಧಿಯೆಂದು ಘೋಷಿಸಿ ಬಿಡುಗಡೆ ಮಾಡಿದ್ದಷ್ಟೇ ಅಲ್ಲದೇ, ಬಾಲಕಿಯನ್ನೂ ಆ ಗಂಡನ ಸುಪರ್ದಿಗೇ ಒಪ್ಪಿಸಿದ್ದ ಎಂದು ತಮ್ಮ ಪುಸ್ತಕದಲ್ಲಿ ತಾನಿಕ ಸರ್ಕಾರ್ ದಾಖಲಿಸುತ್ತಾರೆ. ದಮನಿತ ಮಹಿಳೆಯ ಅಸಹಾಯಕ ಸ್ಥಿತಿಯ ( ಇಲ್ಲಿ ಅವಳು ಅಪ್ರಾಪ್ರ ವಯಸ್ಸಿನ ಬಾಲಕಿ ಎಂಬುದು ಗಮನಾರ್ಹ) ಅನಾವರಣ ಇದಕ್ಕಿಂತ ಹೆಚ್ಚು ಮಾರ್ಮಿಕವಾಗಿ, ಕರುಳು ಹಿಂಡುವಷ್ಟು, ಎದೆ ಬಿರಿಯುವಷ್ಟು, ಹೃದಯವಿದ್ರಾವಕವಾಗಿ ಆಗಲು ಸಾಧೃವೇ? Subalternity ಗೆ ಇದಕ್ಕಿಂತ ಸಮರ್ಪಕವಾದ ಉದಾಹರಣೆ ಲಭ್ಯವಾಗುವುದಾದರೂ ಶಕ್ಯವೇ ಎಂದು ನನಗನ್ನಿಸುತ್ತದೆ.

ಇದನ್ನೂ ಓದಿ : Feminism; ನಾನೆಂಬ ಪರಿಮಳದ ಹಾದಿಯಲಿ: ನಿರ್ದಿಷ್ಟ ಸಾಮಾಜಿಕ ಪ್ರಕ್ರಿಯೆಗಳಿಂದ ಆಕೆ ಹೆಣ್ಣಾಗುತ್ತಾಳೆ ವಿನಾ ಹುಟ್ಟಿನಿಂದಲ್ಲ

ತನ್ನ ಎರಡನೆಯ ಮಗಳಾದ ರೇಣುಕಾಳನ್ನು ಹನ್ನೊಂದು ವರ್ಷ ವಯಸ್ಸಿಗೇ ಮದುವೆ ಮಾಡಿ ಕಳುಹಿಸಿಕೊಟ್ಟದ್ದಕ್ಕೆ ತಂದೆಗೆ ಬಹಳ ಪಶ್ಚಾತ್ತಾಪವಾಗಿತ್ತು. ಆಕೆಗೆ ಅಷ್ಟು ಬೇಗ ಮದುವೆ ಮಾಡುವ ಬದಲು ವಿದ್ಯಾಭ್ಯಾಸ ಪೂರೈಸಲು ಅನುವು ಮಾಡಿಕೊಟ್ಟದ್ದರೆ, ಆಕೆಯ ಅಕಾಲಿಕ ಮರಣ ಸಂಭವಿಸುತ್ತಿರಲಿಲ್ಲವೆಂದು, ಗುರುದೇವ ರಬೀಂದ್ರನಾಥ ಟ್ಯಾಗೋರರ ಕೊನೆಯ ಮಗಳಾದ ಮೀರಾ ಬರೆದಿದ್ದರು. ಈ ಅನಿಷ್ಟ ಪದ್ಧತಿ ಎಷ್ಟರ ಮಟ್ಟಿಗೆ ಚಾಲ್ತಿಯಲ್ಲಿತ್ತೆಂದರೆ, ಪ್ರಗತಿಪರ ಮೌಲ್ಯಗಳ ಪ್ರತಿಪಾದಕರಾಗಿದ್ದ ಅನೇಕ ಪುರುಷರಿಗೆ ತಮ್ಮ ಹೆಣ್ಣುಮಕ್ಕಳ ವಿಷಯದಲ್ಲಿ ಉದಾರತೆ ತೋರಿಸಲು ಸಾಧ್ಯವಾಗಿರಲಿಲ್ಲ. ಬ್ರಹ್ಮೋ ಸಮಾಜದ ಮುಖ್ಯಸ್ಥರಾಗಿದ್ದ ಕೇಶಬ್ ಚಂದ್ರಸೇನರು ತಮ್ಮ 8 ವರ್ಷದ ಮಗಳ ಮದುವೆ ಮಾಡಿದ್ದರು. ಅವರ ತಾಯಿ ಶಾರದಾ ಸುಂದರಿಯವರು ತಮ್ಮ ಆತ್ಮಕಥನದಲ್ಲಿ “ಹಿಂದೂ ಧರ್ಮದ ಎಲ್ಲಾ ಕಟ್ಟಳೆಗಳೂ ಶ್ರೇಷ್ಠವೆಂದು ನಾನು ಮೊದಲು ನಂಬಿದ್ದೆ. ಆದರೆ ಈಗ ನನಗೆ ನಮ್ಮ ಬಾಲಕಿಯರಿಗೆ ಸ್ವಲ್ಪವಾದರೂ ತಿಳಿವಳಿಕೆ, ಪ್ರಬುದ್ಧತೆ ಮೂಡಿದ ಬಳಿಕವೇ ಮದುವೆ ಮಾಡುವುದು ಸೂಕ್ತವೆನಿಸತೊಡಗಿದೆ. ಏಕೆಂದರೆ ಆಗ ಅವರು ಈಗಿನ ಪರಿಸ್ಥಿತಿಯಲ್ಲಿದ್ದಷ್ಟು ಅಸಹಾಯಕರಾಗಿರುವುದಿಲ್ಲ” ಎಂದು ಬರೆಯುತ್ತಾರೆ.

“ನಾವೇಕೆ ಕಳ್ಳತನಮಾಡಿ ಸೆರೆಮನೆವಾಸ ಅನುಭವಿಸುವವರಂತೆ ಇಡೀ ಜೀವನಪರ್ಯಂತ ಈ ಕಾರಾಗೃಹವಾಸದಲ್ಲಿ ಕೊಳೆಯಬೇಕು? ನಮಗೆ ಶಿಕ್ಷಣದ ಹಕ್ಕು ಏಕಿಲ್ಲ? ನಾವು ಮಹಿಳೆಯರು ಎನ್ನುವ ಕಾರಣಕ್ಕಾಗಿಯೇ?” ಎನ್ನುವ ಮಾರ್ಮಿಕ ಪ್ರಶ್ನೆಯೆತ್ತುವ ರಸಸುಂದರೀದೇವಿಯವರ ಧೀಮಂತಿಕೆ ನಿಜಕ್ಕೂ ಸ್ತುತ್ಯಾರ್ಹ. ಕಲ್ಕತ್ತದ ಬೆಥ್ಯೂನ್ ಕಾಲೇಜಿಗೆ ಓದಲು ಹೋದ ಟಾಗೋರ್ ಮನೆತನದ ಮೊದಲಗಿತ್ತಿಯರಲ್ಲಿ ಒಬ್ಬರಾದ ಸರಳಾದೇವಿ ಚೌಧುರಾಣಿ 1932ರಲ್ಲಿ ಪ್ರಕಟಗೊಂಡ ತಮ್ಮ ಆತ್ಮಚರಿತ್ರೆ Leaves Shed From Life ನಲ್ಲಿ ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಾರೆ. ಆ ಕಾಲೇಜು ಕಲಾವಿಭಾಗಕ್ಕೆ ಮಾತ್ರ ಸೀಮಿತವಾಗಿತ್ತು. ಅಲ್ಲಿ ವಿಜ್ಞಾನವನ್ನು ಬೋಧಿಸುತ್ತಿರಲಿಲ್ಲ. ತರಗತಿಯನ್ನು ಪ್ರವೇಶಿಸುವ ಸಮಯದಲ್ಲಿ ಯಾವಾಗಲೂ ಆಕೆಯ ಸಹೋದರರು ಆಕೆಯೊಂದಿಗಿರುತ್ತಿದ್ದರು. ಎಲ್ಲರೂ ತನ್ನನ್ನು ಅಂಗರಕ್ಷಕರ ಪಡೆಯೊಂದಿಗೆ ಆಗಮಿಸುವ ವ್ಯಕ್ತಿಯೆಂದು ಗೇಲಿ ಮಾಡುತ್ತಿದ್ದರೆಂದು ಆಕೆ ಬರೆಯುತ್ತಾರೆ. ಬರಿಸಾಲ್‌ನ ಬ್ರಜ್‌ಮೋಹನ್ ಕಾಲೇಜಿನ ಪ್ರಥಮ ವಿದಾರ್ಥಿನಿಯೆಂಬ ಹೆಗ್ಗಳಿಕೆಗೆ ಪಾತ್ರರಾದ ಸಾವಿತ್ರಿಯವರು ಕಾಲೇಜಿಗೆ ಒಂದು ಮೇನೆಯಲ್ಲಿ ಅವಕುಂಠನವತಿಯಾಗಿ ಆಗಮಿಸುತ್ತಿದ್ದರಂತೆ. ಪ್ರವಚನ ಕೊಠಡಿಯಲ್ಲಿ ಮರದ ಹಲಗೆಯನ್ನು ನಿಲ್ಲಿಸಿ ಒಂದು ಪ್ರತ್ಯೇಕ ಭಾಗವನ್ನು ಆಕೆ ಕುಳಿತುಕೊಳ್ಳುವ ಸಲುವಾಗಿ ಮಾಡಲಾಗಿತ್ತು. ಹಲಗೆಯಲ್ಲಿ ಕೊರೆದಿದ್ದ ಒಂದು ಚಿಕ್ಕ ರಂಧ್ರದ ಮೂಲಕ ಆಕೆ ಪ್ರಾಧ್ಯಾಪಕರ ಮುಖವನ್ನು ವೀಕ್ಷಿಸಬಹುದಾಗಿತ್ತು. ಹಾಜರಾತಿ ಕರೆಯುವ ಸಮಯದಲ್ಲಿ ತನ್ನ ಹೆಸರು ಕರೆದಾಗ ತನ್ನ ಬಳೆಗಳ ಕುಲುಕಾಟದ ಶಬ್ದದಿಂದ ತನ್ನ ಉಪಸ್ಥಿತಿಯ ಬಗ್ಗೆ ಅವರ ಗಮನ ಸೆಳೆಯುತ್ತಿದೆನೆಂದು ಸಾವಿತ್ರಿ ಬರೆಯುತ್ತಾರೆ.

ವಿಸ್ಮೃತಿಗೆ , ನಿರ್ಲಕ್ಷ್ಯಕ್ಕೆ ಒಳಗಾಗಿರುವ ಈ ಮಹಿಳಾ ಸಂಕಥನಗಳು ನಿಸ್ಸಂದಹೇಹವಾಗಿಯೂ ರೋಮಾಂಚನೀಯ ಅನುಭೂತಿಯನ್ನು ನಮಗೆ ದಯಪಾಲಿಸಬಲ್ಲವು. ಗಾಯತ್ರಿ ಸ್ಪಿವಾಕ್‌ರವರು ಹೇಳುವಂತೆ ಲಿಂಗ ತಾರತಮ್ಯವನ್ನು ಮೀರಿದ ಸಾರ್ವತ್ರಿಕ ಸತ್ಯವೆಂದು ಬಿಂಬಿಸಲಾಗುವ ಡಾಂಭಿಕತೆಯ , ಸೋಗಿನ ಮಿಥ್ಯದ ಸೃಷ್ಟಿ, ಸಾರ್ವತ್ರಿಕವಾಗಿ ಕಂಡುಬರುವ ಪುರುಷಾಹಮಿಕೆಯ ಮುಖವಾಡವಷ್ಟೇ ಎಂಬ ವ್ಯಾಖ್ಯಾನದ ಪ್ರಸ್ತುತತೆಯನ್ನು ಮತ್ತೆ ಮತ್ತೆ ಕೂಗಿ ಹೇಳಬೇಕೆನಿಸುತ್ತದೆ.

(ಮುಗಿಯಿತು)

(ಮುಂದಿನ ಯಾನ : 16.4.2022)

ಭಾಗ 1 : Child Marriage: ವೈಶಾಲಿಯಾನ; ಇದು ಶಿಶುಕಾಮ ದೃಷ್ಟಿಕೋನದ ತಣ್ಣನೆಯ ಕ್ರೌರ್ಯದರ್ಶನ

ಈ ಅಂಕಣದ ಎಲ್ಲಾ ಬರಹಗಳನ್ನೂ ಇಲ್ಲಿ ಓದಿ : https://tv9kannada.com/tag/vaishaliyaana

Follow us on

Related Stories

Most Read Stories

Click on your DTH Provider to Add TV9 Kannada