ನೀವು ಈಗಷ್ಟೇ ಕೆಲಸಕ್ಕೆ ಸೇರಿ ಹಣ ಉಳಿಸುವ ಕುರಿತು ಯೋಚಿಸುತ್ತಿದ್ದರೆ ಈ ಲೇಖನ ಓದಿ ಬಿಡಿ..
ಸರಳವಾಗಿ ಹೇಗೆ ಉಳಿತಾಯ ಮಾಡಬಹುದು ಎಂಬುದೇ ಎಲ್ಲರನ್ನೂ ಕಾಡುವ ಪ್ರಶ್ನೆ. ನಾವೆಲ್ಲರೂ ಎಷ್ಟೇ ಆದಾಯ ಗಳಿಸಿದರೂ ತಿಂಗಳ ಕೊನೆಗೆ ಕೈಯಲ್ಲಿ ಹಣವೇ ಇಲ್ಲ ಎಂಬ ಪರಿಸ್ಥಿತಿಯ ಫಲಾನುಭವಿಗಳು. ಟಿವಿ9 ಕನ್ನಡ ಡಿಜಿಟಲ್ ಸರಳ ಉಳಿತಾಯದ ಮಾರ್ಗಗಳನ್ನು ತೆರೆದಿಟ್ಟಿದೆ. ಓದಿ, ಉಳಿತಾಯ ಮಾಡಿ!
ಪದವಿ ಮುಗಿಸಿ ಈಗಷ್ಟೇ ಕೆಲಸಕ್ಕೆ ಸೇರಿದ್ದೀರಿ, ಕೆಲಸ ಮಾಡುವ ಸಂಸ್ಥೆ ಪ್ರತಿ ತಿಂಗಳು ನಿಮ್ಮ ಖಾತೆಗೆ ತಪ್ಪದೇ ಸಂಬಳ ಹಾಕುತ್ತದೆ. ತಿಂಗಳು ತಿಂಗಳು ನಿಮ್ಮ ಖರ್ಚಿಗೆ ಒಂದಿಷ್ಟು ಹಣ ಅಗತ್ಯವಿದೆ. ಅಗತ್ಯಬಿದ್ದಾಗೆಲ್ಲ ಸಂಬಳ ಜಮಾ ಆಗುವ ಖಾತೆಯಿಂದಲೇ ಹಣ ತೆಗೆಯುತ್ತೀರಿ, ಯಾವಾಗ ಎಷ್ಟು ತೆಗೆದೆ, ಎಲ್ಲಿ ಎಷ್ಟು ಖರ್ಚು ಮಾಡಿದೆ ಎಂದು ಸೂಕ್ಷ್ಮವಾಗಿ ನೆನಪಿಡುವಷ್ಟು ಯಾರಿಗೆ ತಾನೇ ಗಮನದಲ್ಲಿರುತ್ತೆ ಹೇಳಿ..
ಛೆ! ಈ ತಿಂಗಳೂ ಹಣ ಉಳಿಸಲೇ ಆಗಿಲ್ಲ.. ಸಂಬಳದ ದಿನಕ್ಕಾಗಿ ಕಾದು ಕೂರುತ್ತೀರಿ.. ಹಣ ಉಳಿಸುವುದು ಹೇಗೆ, ಭವಿಷ್ಯಕ್ಕಾಗಿ ಎಲ್ಲಿ ಹೂಡಿಕೆ ಮಾಡಬೇಕು.. ಬ್ಯಾಂಕ್ ಠೇವಣಿ ಇಡಬೇಕಾ.. ಅಥವಾ ಮ್ಯೂಚುವಲ್ ಫಂಡಾ.. ಎಲ್ಲಿ ಹಣ ಹೂಡಿಕೆ ಮಾಡಿದರೆ ಲಾಭ? ಅಷ್ಟಕ್ಕೂ ಹಣ ಉಳಿಸುವುದಾದರೂ ಹೇಗೆ? ಇಂಥಾ ಪ್ರಶ್ನೆಗಳ ಮೂಡುತ್ತಿವೆಯಾ? ನೀವು ಈಗಷ್ಟೇ ಕೆಲಸಕ್ಕೆ ಸೇರಿ ಹಣ ಉಳಿಸುವ ಕುರಿತು ಯೋಚಿಸುತ್ತಿದ್ದರೆ ಈ ಲೇಖನ ಓದಿಬಿಡಿ.
ಹಣವನ್ನು ಉಳಿಸುವುದು ಹೇಗೆ ಎಂಬ ಪ್ರಶ್ನೆಗೆ ಸರಳ, ಸ್ಪಷ್ಟ ಉತ್ತರ ಹುಡುಕುತ್ತಾ ಈಗಷ್ಟೇ ಕೆಲಸಕ್ಕೆ ಸೇರಿರುವ ಈ ಲೇಖನದ ಬರಹಗಾರರು ವೈಯಕ್ತಿಕ ಹಣಕಾಸು ತಜ್ಞರನ್ನು ಸಂಪರ್ಕಿಸಿದರು. ಈಗಷ್ಟೇ ಕೆಲಸಕ್ಕೆ ಸೇರಿರುವ ಸಾವಿರಾರು ಯುವ ಜನರು ಸರಳವಾಗಿ ಹಣ ಉಳಿಸುವುದು ಹೇಗೆ ಎಂದು ಉತ್ತರಿಸಿದ ವೈಯಕ್ತಿಕ ಹಣಕಾಸು ತಜ್ಞ ರಾಘವೇಂದ್ರ ಭಟ್ ಅವರು ಈ ಮಾಹಿತಿ ನೀಡಿದರು.
ಪ್ರತಿಯೊಬ್ಬರದೂ ಮೂರು ಬ್ಯಾಂಕ್ ಅಕೌಂಟ್ ಇರಬೇಕು ಸಹಜವಾಗಿ ಕೆಲಸ ಮಾಡುವ ಸಂಸ್ಥೆ ಸಂಬಳಕ್ಕಾಗಿಯೇ ಒಂದು ಬ್ಯಾಂಕ್ ಅಕೌಂಟ್ ಮಾಡಿಸುತ್ತದೆ. ಅದೇ ಅಕೌಂಟ್ಗೆ ತಿಂಗಳ ನಿಗದಿತ ದಿನ ಸಂಬಳ ಪಾವತಿ ಮಾಡುತ್ತೆ. ನೀವು ಅದೇ ಅಕೌಂಟ್ನಿಂದ ಹಣ ವಿತ್ಡ್ರಾ ಮಾಡಿಕೊಳ್ಳುತ್ತಿದ್ದರೆ, ತಕ್ಷಣ ಹೀಗೆ ಮಾಡುವುದನ್ನು ನಿಲ್ಲಿಸಿ ಎನ್ನುತ್ತಾರೆ ವೈಯಕ್ತಿಕ ಹಣಕಾಸು ತಜ್ಞರು.
ಪ್ರತಿಯೊಬ್ಬರದೂ ಮೂರು ಬ್ಯಾಂಕ್ ಅಕೌಂಟ್ ಇರಬೇಕು ಎನ್ನುತ್ತಾರೆ ರಾಘವೇಂದ್ರ ಭಟ್. ಮೂರು ಬ್ಯಾಂಕ್ ಅಕೌಂಟ್ಗಳು ಹಣ ಉಳಿಸಲು ಅತ್ಯಂತ ಸರಳ ಮತ್ತು ಸ್ಪಷ್ಟ ಮಾರ್ಗ ಎನ್ನುತ್ತಾರವರು.
1. ಸಂಬಳ ಪಡೆಯಲು ಅಥವಾ ತಿಂಗಳ ಆದಾಯವನ್ನು ಕಾಪಿಡಲು ಒಂದು ಬ್ಯಾಂಕ್ ಅಕೌಂಟ್. 2. ತಿಂಗಳ ಖರ್ಚು ನಿಭಾಯಿಸಲು ಒಂದು ಅಕೌಂಟ್ 3. ಹಣ ಉಳಿಸಲು ಒಂದು ಅಕೌಂಟ್
ಆರ್ಥಿಕ ಶಿಸ್ತು ಮೈಗೂಡಿಸಿಕೊಳ್ಳಿ ಅರೇ! ಒಂದು ಅಕೌಂಟ್ ಅನ್ನೇ ನಿಭಾಯಿಸುವುದು ಕಷ್ಟವಾಗುತ್ತೆ.. ಇನ್ನು ಮೂರು ಅಕೌಂಟ್ಗಳಿಂದ ಹೇಗೆ ಹಣ ಉಳಿಸಬಹುದು ಎಂದು ಚಕಿತರಾದಿರಾ? ಇಲ್ಲೇ ಇದೆ ಮುಖ್ಯ ವಿಷಯ. ಈ ಅಕೌಂಟ್ಗಳನ್ನು ನಮ್ಮ ತಿಳಿವಳಿಕೆಗಾಗಿ ಸುಲಭವಾಗಿ ಆದಾಯ, ಖರ್ಚು ಮತ್ತು ಉಳಿತಾಯದ ಅಕೌಂಟ್ಗಳೆಂದು ಕರೆಯೋಣ.
ಮೊದಲ ಅಕೌಂಟ್ನಲ್ಲಿ ನಿಮ್ಮ ಆದಾಯದಿಂದ ಹುಟ್ಟಿದ ಹಣವಿರಲಿ. ಪ್ರತಿ ತಿಂಗಳೂ ನಿಮ್ಮ ಖರ್ಚೆಷ್ಟು ಎಂದು ಲೆಕ್ಕ ಹಾಕಿ. ಅಷ್ಟು ಮೊತ್ತವನ್ನು ಮಾತ್ರ ಆದಾಯದ ಅಕೌಂಟ್ನಿಂದ ಖರ್ಚಿನ ಅಕೌಂಟ್ಗೆ ವರ್ಗಾಯಿಸಿ. ಉಳಿತಾಯದ ಅಕೌಂಟ್ಗೆ ಬಾಕಿ ಮೊತ್ತವನ್ನು ವರ್ಗಾಯಿಸಿ. ಸಂಬಳದ ಅಕೌಂಟ್ನಲ್ಲಿ ಮಿನಿಮಮ್ ಬ್ಯಾಲೆನ್ಸ್ ಮಾತ್ರ ಇರಲಿ, ನೆನಪಿಡಿ.
ಉದಾಹರಣೆಗೆ ನಿಮ್ಮ ಸಂಬಳ 15 ಸಾವಿರ ಎಂದಿಟ್ಟುಕೊಳ್ಳಿ. ನಿಮ್ಮ ತಿಂಗಳ ಖರ್ಚು 10 ಸಾವಿರ. ಈ 10 ಸಾವಿರವನ್ನು ಖರ್ಚಿನ ಅಕೌಂಟ್ಗೆ ವರ್ಗಾಯಿಸಿ. ಇನ್ನೂ 5 ಸಾವಿರ ಉಳಿಯಿತು. ಅದರಲ್ಲಿ 4 ಸಾವಿರವನ್ನು ಉಳಿತಾಯದ ಅಕೌಂಟ್ಗೆ ವರ್ಗಾಯಿಸಿ. 1 ಸಾವಿರ ಮಾತ್ರ ಸಂಬಳದ ಅಕೌಂಟ್ನಲ್ಲೆ ಇರಲಿ.
ಮೂರು ಅಕೌಂಟ್, ಮುಂದೇನು?
ಈಗ ನೀವು ಮಾಡಬೇಕಾದ್ದಿಷ್ಟೇ – ‘ಖರ್ಚಿನ ಅಕೌಂಟ್ನಲ್ಲಿನ 10 ಸಾವಿರದಲ್ಲಿ ಇಡೀ ತಿಂಗಳಿನ ಖರ್ಚು ವೆಚ್ಚಗಳನ್ನು ನಿರ್ವಹಿಸಬೇಕು. ಯಾವ ಕಾರಣಕ್ಕೂ ಉಳಿತಾಯ ಮತ್ತು ಸಂಬಳದ ಅಕೌಂಟ್ಗೆ ಕೈಹಾಕಬಾರದು. ಮುಂದಿನ ಸಂಬಳದವರೆಗೆ ಅವೆರಡು ಅಕೌಂಟ್ಗಳಿವೆ ಎಂಬುದನ್ನು ಮರೆಯುವುದು ಸರ್ವೋತ್ತಮ ಎನ್ನುತ್ತಾರೆ ರಾಘವೇಂದ್ರ ಭಟ್. ಹೀಗೆ ಮಾಡುವುದರಿಂದ ನಿಮ್ಮ ಖರ್ಚಿನ ಮೇಲೆ ನೀವು ಸರಳವಾಗಿ ಹಿಡಿತ ಸಾಧಿಸುತ್ತೀರಿ.
ಪ್ರತಿ ತಿಂಗಳು ಕನಿಷ್ಠ 4 ಸಾವಿರವಂತೂ ಉಳಿತಾಯದ ಅಕೌಂಟ್ನಲ್ಲಿ ಜಮಾ ಆಗುತ್ತಿರುತ್ತದೆ. 10 ಸಾವಿರಕ್ಕಿಂತ ಕಡಿಮೆ ಖರ್ಚಿನಲ್ಲೇ ತಿಂಗಳ ವೆಚ್ಚವನ್ನು ನಿಭಾಯಿಸಲು ಕಲಿಯುತ್ತೀರಿ ಎಂದು ಅವರು ವಿವರಿಸುತ್ತಾರೆ. ಉಳಿತಾಯದ ಹಣವನ್ನು ಸರಿಯಾದ ಕಡೆ ಹೂಡಿಕೆ ಮಾಡುವುದರಿಂದಲೂ ಯುವಕರು ಆರ್ಥಿಕವಾಗಿ ಬಲಗೊಳ್ಳಬಹುದು.
ಹೇಗದು? ಚಿಕ್ಕ ಚಿಕ್ಕ ತಿಂಗಳ ಉಳಿತಾಯವನ್ನು ಎಲ್ಲಿ ಹೂಡಬೇಕು? ಬ್ಯಾಂಕ್ ಅಕೌಂಟ್ನಲ್ಲಿಟ್ಟರೆ ಸಾಕೇ.. ಅಥವಾ ಲಾಭದ ಹೂಡಿಕೆಗೆ ಇರುವ ಇತರ ಮಾರ್ಗಗಳೇನು? ಮುಂದಿನ ಸಂಚಿಕೆಯಲ್ಲಿ ಎಷ್ಟೆಲ್ಲ ವಿಷಯಗಳಿವೆ ತಿಳಿಯಲು..!
ಕೇಂದ್ರ ಬಜೆಟ್ 2021-22: ಚೇತರಿಸಿಕೊಳ್ಳುತ್ತಾ ಆರ್ಥಿಕತೆ? ದೇಶದ ಜನರ ನಿರೀಕ್ಷೆಗಳೇನು?
Published On - 6:45 am, Tue, 12 January 21