ಜೀವವೆಂಬ ಜಾಲದೊಳಗೆ; ಪ್ರಾಣಿಗಳಿಗಂತೂ ಬೋರ್ಡ್ ಓದಲು ಬರುವುದಿಲ್ಲ ಚಿಪ್ಸ್, ಕುರ್ಕುರೆ ಹಿಡಿದುಕೊಂಡು ಹೋಗುವ ನಮಗೆ?
Environmental Science : ನಾವು ಮಾನವರು ಬೇಡವಾಗಿರುವುದನ್ನೆಲ್ಲ ತಿಂದು ಲೆಕ್ಕವಿಲ್ಲದಷ್ಟು ಖಾಯಿಲೆಗಳನ್ನು ಪಡೆದಾಗಿದೆ. ಇನ್ನು ಈ ಪಾಪದ ಪ್ರಾಣಿಗಳಿಗೂ ಅದನ್ನು ದಾಟಿಸುವುದರಲ್ಲಿದ್ದೇವೆ. ನಾವು ನೀಡುವ ಆಹಾರಕ್ಕಾಗಿ ಅಸಹಜವಾಗಿ ಗುಂಪುಗೂಡುವ ಕಾಡುಪ್ರಾಣಿಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ.’ ಸುಮಾ ಸುಧಾಕಿರಣ
ಜೀವವೆಂಬ ಜಾಲದೊಳಗೆ | Jeevavemba Jaaladaloge : ತುಮಕೂರಿನ ಹತ್ತಿರವಿರುವ “ನಾಮದ ಚಿಲುಮೆ” ಎಂಬ ಪ್ರೇಕ್ಷಣೀಯ ಸ್ಥಳದಲ್ಲಿ ಪುಟ್ಟ ಜಿಂಕೆ ವನವಿದೆ. ವನವೆಂದರೆ ಅಲ್ಲಿ ಕೆಲವೇ ಮರಗಳಿವೆ, ಒಂದು ತಂತಿ ಬೇಲಿಯಿಂದ ಆ ಪ್ರದೇಶ ಸುತ್ತುವರೆದಿದೆ. ಅಲ್ಲಿ ಹಲವಾರು ಮುದ್ದು ಜಿಂಕೆಗಳಿವೆ. ಅಪ್ಪಿತಪ್ಪಿಯೂ ಅಲ್ಲಿ ಒಂದೆಸಳು ಹುಲ್ಲೂ ಬೆಳೆವ ಲಕ್ಷಣವಿಲ್ಲ. ಜಿಂಕೆಯ ಜೊತೆಗೊಂದಷ್ಟು ಮಂಗಗಳಿವೆ. ಪ್ರವಾಸಿಗರೂ ಬಹಳ ಕುತೂಹಲದಿಂದ ಬೇಲಿಯ ಬುಡದಲ್ಲಿ ನಿಂತು ಜಿಂಕೆಗಳನ್ನು ನೋಡುತ್ತಾರೆ. ನೋಡಲಿ ಸಂತೋಷ. ತಾವೇನೋ ಭಯಂಕರ ಪ್ರಾಣಿಪ್ರಿಯರೆನ್ನುವ ಹಾಗೆ ಕೈಯಲ್ಲಿರುವ ಬಿಸ್ಕೆಟ್, ಚಿಪ್ಸ್, ಕುರ್ಕುರೆ ಇತ್ಯಾದಿಗಳನ್ನು ಅವುಗಳಿಗೆ ಕೊಡುತ್ತಿದ್ದರೆ, ಅವು ಪೈಪೋಟಿಯಿಂದ ತಿಂಡಿ ತಿನ್ನುತ್ತಿದ್ದವು! ಅಲ್ಲಿ ಪ್ರಾಣಿಗಳಿಗೆ ಯಾವುದೇ ತಿಂಡಿಗಳನ್ನು ಕೊಡಬಾರದು ಎನ್ನುವ ಬೋರ್ಡೊಂದು ಅನಾಥವಾಗಿ ಒಂದು ಕಂಬದಲ್ಲಿ ತೂಗುತ್ತಿತ್ತು. ನಾವು ಮಾನವರು ಬೇಡವಾಗಿರುವುದನ್ನೆಲ್ಲ ತಿಂದು ಲೆಕ್ಕವಿಲ್ಲದಷ್ಟು ಖಾಯಿಲೆಗಳನ್ನು ಪಡೆದಾಗಿದೆ. ಇನ್ನು ಈ ಪಾಪದ ಪ್ರಾಣಿಗಳಿಗೂ ಅದನ್ನು ದಾಟಿಸುವುದರಲ್ಲಿದ್ದೇವೆ!
ಸುಮಾ ಸುಧಾಕಿರಣ, ಪರಿಸರ ವಿಜ್ಞಾನ ಲೇಖಕಿ
*
(ಜೀವಜಾಲ – 3)
ಈಗೊಂದು ನಾಲ್ಕಾರು ವರ್ಷಗಳ ಹಿಂದೆ ಹಳೆಬೀಡಿನಲ್ಲಿರುವ ಗೆಳೆಯರೊಬ್ಬರು ಅಲ್ಲಿನ ಇತಿಹಾಸ ಪ್ರಸಿದ್ಧ ದೇವಾಲಯದ ಬಳಿ ಸಾಕಷ್ಟು ಸಂಖ್ಯೆಯಲ್ಲಿದ್ದ ಅಳಿಲುಗಳು, ಪ್ರವಾಸಿಗಳು ಕೊಡುವ ಬಿಸ್ಕೆಟ್ ಚಿಪ್ಸ್ ಮೊದಲಾದ ತಿಂಡಿಗಳನ್ನು ತಿಂದ ಪರಿಣಾಮವಾಗಿ ಅವುಗಳ ಸಂಖ್ಯೆಯಲ್ಲಿ ಗಣನೀಯವಾಗಿ ಇಳಿಮುಖವಾಗಿದ್ದರ ಬಗ್ಗೆ ಬರೆದಿದ್ದರು.
ಇತ್ತೀಚೆಗೆ ನಮ್ಮ ಪಶ್ಚಿಮಘಟ್ಟಗಳ ನಿತ್ಯಹರಿದ್ವರ್ಣ ಕಾಡುಗಳಲ್ಲಿ ಮಾತ್ರ ವಾಸಿಸುವ ಅಪರೂಪದ “ಸಿಂಹದ ಬಾಲದ ಸಿಂಗಳೀಕ”ಗಳು ಆಗುಂಬೆ ಘಾಟಿನ ಬಳಿ ರಸ್ತೆಯಲ್ಲಿ ಕುಳಿತು ಪ್ರವಾಸಿಗರು ಕೊಡುವ ಆಹಾರಕ್ಕಾಗಿ ಕಾಯುವುದನ್ನು ದಿನಪತ್ರಿಕೆಯೊಂದು ಪ್ರಕಟಿಸಿತ್ತು. ಮಾನವರಿಂದ ಸಾಧ್ಯವಾದಷ್ಟು ದೂರ ಉಳಿಯಲು ಬಯಸುವ ಸಿಂಗಳೀಕಗಳು ಆಹಾರದ ವಿಷಯದಲ್ಲಿ ಬಹಳ ಕಟ್ಟುನಿಟ್ಟು ಎಂದು ಅಧ್ಯಯನಗಳು ಹೇಳುತ್ತವೆ. ಅವುಗಳು ಕೆಲವು ಜಾತಿಯ ಹಣ್ಣುಗಳು, ಅಪರೂಪಕ್ಕೆ ಕೆಲ ಕೀಟಗಳನ್ನು ಮಾತ್ರ ಹುಡುಕಿ ತಿನ್ನುವಂತಹ, ಜೀವಿತಾವಧಿಯ ಹೆಚ್ಚಿನ ಸಮಯ ಎತ್ತರದ ಮರದ ಮೇಲೆ ಕಳೆಯುವಂತಹ ಜೀವಿಗಳು. ನಾವು ಮಾನವರಿಂದಾದ ಕಾಡಿನ ನಾಶ, ಅವುಗಳಿಗೆ ಅತೀವ ತೊಂದರೆ ಉಂಟುಮಾಡಿದೆ. ಆಹಾರದ ಕೊರತೆ ಸೃಷ್ಟಿಸಿದೆ. ಹೀಗಾಗಿ ಸುಲಭವಾಗಿ ದೊರೆಯುವ ಆಹಾರಕ್ಕಾಗಿ ಅವು ಮಾನವರ ಬಳಿ ಬಂದಿರಬಹುದು. ಆದರೆ ಅವುಗಳ ಆಹಾರ ಪದ್ಧತಿಯ ಬಗ್ಗೆ ಅರಿವಿಲ್ಲದೆ ನಾವು ತಿನ್ನುವುದನ್ನೆಲ್ಲ ಕೊಟ್ಟರೆ ಈಗಾಗಲೇ ಕ್ಷೀಣಿಸಿರುವ ಅವುಗಳ ಸಂತತಿಯನ್ನು ಮತ್ತಷ್ಟು ಅಪಾಯಕ್ಕೆ ದೂಡಿದಂತಾಗುವುದಿಲ್ಲವೆ?
ಹೀಗೆ ತಿಂಡಿ ಕೊಡುವವರಿಗೂ ಪ್ರಾಣಿಗಳ ಮೇಲೆ ಪ್ರೀತಿಯೇ ಇರಬಹುದು. ಅವುಗಳಿಗೆ ಆಹಾರ ಕೊಟ್ಟು ಉಪಕಾರ ಮಾಡುತ್ತಿದ್ದೇನೆ ಎಂದುಕೊಂಡಿರಬಹುದು. ಆದರೆ ಅದರಿಂದ ಉಂಟಾಗುವ ವ್ಯತಿರಿಕ್ತ ಪರಿಣಾಮಗಳ ಅರಿವು ಹೆಚ್ಚಿನವರಿಗೆ ಇರುವುದಿಲ್ಲ.
ಪರಿಣಾಮಗಳೇನು?
ಕಾಡು ಪ್ರಾಣಿಗಳ ಮರಿಗಳಿಗೆ ಹೀಗೆ ಸುಲಭವಾಗಿ ಆಹಾರ ದೊರಕುವ ಅಭ್ಯಾಸವಾಗಿಬಿಟ್ಟರೆ, ತಾವಾಗಿ ಆಹಾರ ಹುಡುಕಿಕೊಳ್ಳುವ ಚಾತುರ್ಯವೇ ಕಡಿಮೆಯಾಗಿಬಿಡಬಹುದು. ದೊಡ್ಡವಾದ ಮೇಲೆ ಬೇರೆ ಪ್ರದೇಶಕ್ಕೆ ಹೋಗುವ ಅನಿವಾರ್ಯತೆ ಬಂದರೆ ಅಲ್ಲಿ ಸುಲಭವಾಗಿ ಆಹಾರ ಸಿಗದೆ ಬದುಕು ಕಷ್ಟವಾಗಬಹುದು.
ಅಗತ್ಯ ಪೋಷಕಾಶಂಗಳ ಕೊರತೆ – ಕಾಡು ಪ್ರಾಣಿಗಳು ಹಲವಾರು ರೀತಿಯ ಆಹಾರವನ್ನು ಹುಡುಕಿ ತಿನ್ನುತ್ತವೆ. ವರ್ಷದ ಬೇರೆ ಬೇರೆ ಸಮಯದಲ್ಲಿ ಸಿಗುವ ವಿವಿಧ ರೀತಿಯ ಆಹಾರಗಳನ್ನು ಅರಸಿ ತಿನ್ನುತ್ತವೆ. ನಾವು ಹಾಕುವ ಒಂದೇ ರೀತಿಯ ಆಹಾರದಿಂದಾಗಿ ಅವುಗಳಿಗೆ ಅಗತ್ಯವಿರುವ ಪೋಷಕಂಶಗಳ ಕೊರತೆ ಉಂಟಾಗಬಹುದು.
ರೋಗಗಳಿಗೊಳಗಾಗುವ ಭಯ – ಮಾನವರು ನೀಡುವ ಆಹಾರಕ್ಕಾಗಿ ಅಸಹಜವಾಗಿ ಗುಂಪುಗೂಡುವ ಕಾಡುಪ್ರಾಣಿಗಳಲ್ಲಿ ಸಾಂಕ್ರಾಮಿಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ.
ಸಾಮಾನ್ಯವಾಗಿ ಕಾಡು ಪ್ರಾಣಿಗಳು ಮಾನವರಿಂದ ಅಂತರ ಕಾಪಾಡಿಕೊಳ್ಳುತ್ತವೆ. ಆದರೆ ಹೀಗೆ ಅವರಿಂದ ಆಹಾರ ಪಡೆಯುವ ಪ್ರಾಣಿಗಳಲ್ಲಿ ಮಾನವರ ಬಗೆಗಿನ ಭಯವೇ ಹೊರಟುಹೋಗಿ, ಊರಿನೊಳಗೆ ಬಂದುಬಿಡಬಹುದು, ಆಗ ನಾವು ಅವುಗಳಿಂದ ತೊಂದರೆಯಾಗುತ್ತದೆ ಎಂದು ಕೊಲ್ಲುವುದಕ್ಕೂ ಹಿಂದೆಮುಂದೆ ನೋಡುವುದಿಲ್ಲ.
ಹೆಚ್ಚುವ ಸಂತಾನೋತ್ಪತ್ತಿ ಸಾಮರ್ಥ್ಯ – ಹೆಚ್ಚಿನ ಪ್ರವಾಸಿ ತಾಣದಲ್ಲಿ ಮಂಗಗಳ ಕಾಟ ವಿಪರೀತವೆನ್ನುವಷ್ಟು ಹೆಚ್ಚಿದೆ. ಇದಕ್ಕೂ ಸಹ ಪ್ರವಾಸಿಗರು ಕೊಡವ ಆಹಾರವೇ ಕಾರಣವಿರಬಹುದು. ಏಕೆಂದರೆ ಆಹಾರದ ಲಭ್ಯತೆ ಹೆಚ್ಚಿದಷ್ಟೂ ಪ್ರಾಣಿಗಳ ಸಂತಾನೋತ್ಪತ್ತಿಯ ಸಾಮರ್ಥ್ಯವೂ ಹೆಚ್ಚುತ್ತದೆ. ನಮ್ಮ ಮಲೆನಾಡಿನ ಊರುಗಳಲ್ಲಿ ಮೊದಲೆಲ್ಲ ಮನೆಗೆ ಬೇಕಾಗುವ ತರಕಾರಿ, ಹಣ್ಣುಗಳನ್ನು ಮನೆಯಲ್ಲೇ ಬೆಳೆದುಕೊಳ್ಳುವ ಅಭ್ಯಾಸವಿತ್ತು. ಆದರೀಗ ಹೆಚ್ಚಿನವರಿಗೆ ಇದು ಸಾಧ್ಯವಾಗುತ್ತಿಲ್ಲ. ಏಕೆಂದರೆ ಮಂಗಗಳ ಕಾಟ. ಹಿಂಡುಹಿಂಡಾಗಿ ಬಂದು ಮನೆಯಂಗಳ, ಕೈತೋಟಕ್ಕೆ ದಾಳಿಯಿಡುವ ಇವುಗಳು ತರಕಾರಿ ಗಿಡಗಳ ಚಿಗುರು, ಹೀಚು, ಕಾಯಿಗಳನ್ನೆಲ್ಲ ತಿನ್ನುತ್ತವೆ, ತಿನ್ನಲು ಬಾರದಿದ್ದರೂ ತರಿದು ಹಾಕಿ ಹಾಳುಗೆಡವುತ್ತವೆ!
ಜೀವಜಾಲ 1 : Jeevavemba Jaaladolage : ಅವರೆಚಪ್ಪರದಡಿ ಇರುವೆಬಳಗಕ್ಕೆ ಸಿಹಿಯೂಟ ನಡೆದ ಸಾಕ್ಷ್ಯಕಥನದೊಂದಿಗೆ ಸುಮಾ ಸುಧಾಕಿರಣ್
ಕಾಡಿನಲ್ಲಿ ಅವುಗಳಿಗೆ ಬೇಕಾದ ಆಹಾರ ಸಿಗದಿರುವುದರಿಂದ ಹೀಗೆ ಊರಿಗೆ ದಾಳಿ ಇಡುವ ಅಭ್ಯಾಸ ಮಾಡಿಕೊಂಡಿವೆ. ಅಲ್ಲದೆ ಅವುಗಳ ಸಂತತಿ ನಿಯಂತ್ರಿಸುತ್ತಿದ್ದ ಹದ್ದುಗಳು ಈಗ ಆ ಪ್ರದೇಶದಲ್ಲಿ ಕಡಿಮೆಯಾಗಿರುವುದು ಇದಕ್ಕೆ ಕಾರಣವಾಗಿರಬಹುದೆಂಬ ಅಭಿಪ್ರಾಯ ತಜ್ಞರದ್ದು.
ಬೀದಿನಾಯಿಗಳ ವಿಚಾರದಲ್ಲೂ ಸಹ ಇದು ಸತ್ಯ. ಬೇಕರಿ, ಮಾಂಸದಂಗಡಿ, ಕೋಳಿ ಫಾರಂ, ಹಾಲಿನ ವಿತರಕರು ಇಂತಹ ಕಡೆ ಹೆಚ್ಚಿನ ಬೀದಿನಾಯಿಗಳು ಕಾಣಸಿಗುತ್ತವೆ. ಅಲ್ಲದೆ ಕೆಲವು ಪ್ರಾಣಿಪ್ರಿಯರು ಬಿಸ್ಕೆಟ್ ಬನ್ ಗಳನ್ನು ಇವುಗಳಿಗೆಂದೇ ಕೊಂಡು ಹಾಕುತ್ತಾರೆ. ನಾಯಿ, ಬೆಕ್ಕುಗಳು ಸಹಸ್ರಾರು ವರ್ಷಗಳಿಂದ ಮಾನವರ ಆಹಾರ ಪದ್ಧತಿಗೆ ಹೊಂದಿಕೊಂಡಿರುವುದರಿಂದ ಅವುಗಳ ಆರೋಗ್ಯಕ್ಕೇನೂ ಸಮಸ್ಯೆ ಆಗುವುದಿಲ್ಲ, ಆದರೆ ಸುಲಭವಾಗಿ ಸಿಗುವ ಆಹಾರದಿಂದಾಗಿ ಅವುಗಳ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚುತ್ತದೆ ಎನ್ನುತ್ತಾರೆ ತಜ್ಞರು. ಪೇಟೆಗಳಲ್ಲಿ ಅತೀ ಎಂಬಷ್ಟು ಸಂಖ್ಯೆಯಲ್ಲಿ ಹೆಚ್ಚುತ್ತಿರುವ ಪಾರಿವಾಳಗಳಲ್ಲಿ ಕೂಡ ಹೀಗೆ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಿರುವುದನ್ನು ಗಮನಿಸಬಹುದು.
ಹಿಂದೆ ಒಂದು ಪಾರಿವಾಳ ಜೋಡಿ ಪ್ರತೀ ಚಳಿಗಾಲದಲ್ಲಿ ನಮ್ಮ ಊರಿನಲ್ಲಿನ ಮನೆಗೆ ಬರುತ್ತಿದ್ದವು. ಮಾಡಿನ ಅಂಚಿನಲ್ಲಿ ಗೂಡು ಕಟ್ಟಿ, 2-3 ಮೊಟ್ಟೆಯಿಟ್ಟು ಕಾವು ಕೊಡುತ್ತಿದ್ದವು. ಮರಿಯಾದೊಡನೆ ಅವುಗಳನ್ನು ಆರೈಕೆ ಮಾಡಿ ಬೆಳೆಸಿ, ಬೇಸಿಗೆ ಪ್ರಾರಂಭವಾಗುತ್ತದೆಯೆನ್ನುವಾಗ ಮರಿಗಳನ್ನೂ ಹಾರಿಸಿಕೊಂಡು ಎಲ್ಲಿಗೋ ಹೋಗುತ್ತಿದ್ದವು. ಹಿಂದೆ ಹೀಗೆ ವರ್ಷಕ್ಕೆ ಒಂದು ಬಾರಿ ಸಂತಾನೋತ್ಪತ್ತಿ ನಡೆಸುತ್ತಿದ್ದುದನ್ನು ಗಮನಿಸಿದ್ದೆವು. ಆದರೆ ಬೆಂಗಳೂರಿನ ನಮ್ಮ ಮನೆಯ ಬಾಲ್ಕನಿಯನ್ನು ತಮ್ಮ ಅಡ್ಡೆಯನ್ನಾಗಿಸಿಕೊಂಡಿರುವ ಪಾರಿವಾಳ ಜೋಡಿಯೊಂದು ವರ್ಷಕ್ಕೆ ಮೂರು ಬಾರಿ ಎರಡು ಮರಿಗಳನ್ನು ಸಾಕಿ, ಸಲಹಿ ದೊಡ್ಡ ಮಾಡುತ್ತವೆ! ಮೊದಮೊದಲು ನಮ್ಮ ಏರಿಯಾದಲ್ಲಿ ನಾಲ್ಕಾರು ಪಾರಿವಾಳಗಳಷ್ಟೇ ಕಾಣಿಸುತ್ತಿತ್ತು. ಈಗ ಒಂದು ದೊಡ್ಡ ಹಿಂಡು ಕಾಣಿಸುತ್ತಿದೆ.
ಹಾಗಾದರೆ ಪ್ರಾಣಿಗಳಿಗೆ ನಾವೇನೂ ಮಾಡಲೇ ಬಾರದೆ? ಪ್ರಾಣಿಗಳೆಂದರೆ ಇಷ್ಟ ಪಡುವ ಪ್ರಾಣಿಪ್ರಿಯರು ಅವುಗಳನ್ನು ನೋಡಿ, ಅವುಗಳಿಗೆ ಸಹಾಯ ಮಾಡಿ ಸಂತೋಷ ಪಡಬಾರದೆ?
ಪ್ರಕೃತಿಯಲ್ಲಿ ಒಂದು ಸಮತೋಲನವಿರುತ್ತದೆ. ಅಲ್ಲಿ ಪ್ರತಿಯೊಂದೂ ಕೀಲಿ ಕೊಟ್ಟಂತೆ ಲೆಕ್ಕಾಚಾರದಲ್ಲಿ ನಡೆಯುತ್ತಿರುತ್ತದೆ. ಪ್ರಾಣಿಯೊಂದರ ಸಂತತಿ ಹೆಚ್ಚಾದರೂ, ಕಡಿಮೆಯಾರೂ ಅದು ಅನೇಕ ಸರಣಿ ಅಪಾಯಗಳನ್ನು ತಂದೊಡ್ಡುತ್ತದೆ! ಈಗಾಗಲೇ ನಾವು ಪರಿಸರದ ಅಸಮತೋಲನಕ್ಕೆ ಬೇಕಾದಷ್ಟು ಕೊಡುಗೆ ಕೊಟ್ಟಾಗಿದೆ. ಪರಿಣಾಮವಾಗಿ ಹವಾಮಾನ ವೈಪರೀತ್ಯದಂತಹ ಏರುಪೇರುಗಳನ್ನೂ ಅನುಭವಿಸುತ್ತಿದ್ದೇವೆ. ಸ್ವಲ್ಪವಾದರೂ ಜವಾಬ್ದಾರಿಯಿಂದ ನಡೆದುಕೊಂಡರೆ ಮಾತ್ರ ಮುಂದೆ ಎದುರಾಗುವ ತೊಂದರೆಗಳಿಂದ ಪಾರಾಗಬಹುದು.
ಮುಂದಿನ ಜೀವಜಾಲ : 25.2.2022
ಹಿಂದಿನ ಜೀವಜಾಲ : ಜೀವವೆಂಬ ಜಾಲದೊಳಗೆ : ಈ ಪರಾವಲಂಬಿಗರು ನಿಮ್ಮ ಮಾವಿನಮರವನೇರಿ ಕುಳಿತಿದ್ದಾರಾ? ನೋಡಿ ಒಮ್ಮೆ