Covid Diary : ಕವಲಕ್ಕಿ ಮೇಲ್ ; ‘ಇದ್ನ ನಿಮುಗ್ ಕೊಡ್ದೆ ಹ್ಯಾಂಗ್ ತಿಂಬುದು ಅಮಾ?‘

|

Updated on: Jun 04, 2021 | 1:40 PM

Hurricane : ‘ವೃಕ್ಷನಷ್ಟದ ಶೋಕದಲ್ಲಿ ಬದುಕೇ ಬೇಡವಾದ ಅವರಿಗೆ ಗ್ಲೂಕೋಸಿನಿಂದ ಸಮಾಧಾನ ಆಗುವುದಿಲ್ಲ ಎನಿಸಿತು. ಒಂದಷ್ಟು ತಂಪು ಮಾತುಗಳನ್ನೂ, ಆರ್ಥಿಕ ಸಹಾಯದ ಭರವಸೆಗಳನ್ನೂ ಕೊಟ್ಟಾಯಿತು. ಕಿರಾಣಿ ಸಾಮಾನಿನ ವ್ಯವಸ್ಥೆ ಮಾಡಿಯಾಯಿತು. ಮತ್ತೆ ಗಿಡ ಬೆಳೆಸುವ ಉಮೇದು ಚಿಗುರಿದಂತಹ ಸ್ಥಿತಿಯಲ್ಲಿ ಅವರು ಮನೆಗೆ ಹೊರಟರು.‘ ಡಾ. ಎಚ್. ಎಸ್. ಅನುಪಮಾ

Covid Diary : ಕವಲಕ್ಕಿ ಮೇಲ್ ; ‘ಇದ್ನ ನಿಮುಗ್ ಕೊಡ್ದೆ ಹ್ಯಾಂಗ್ ತಿಂಬುದು ಅಮಾ?‘
Follow us on

ಮಳೆಗಾಲ ಕಳೆದು ಚಳಿಗಾಲ ಬಂದಿತು. ಕೊರೋನ ಸ್ವಲ್ಪ ತಗ್ಗಿದಂತೆ ಕಂಡಿತು. ಆದರೆ ಬೇಸಗೆ ಎರಗಿದ್ದೇ ಮತ್ತೆ ಲಾಕ್‌ಡೌನ್ ಬಂದೆರಗಿತು. ನಡುವೆ ಎಂದೋ ಒಮ್ಮೆ ನಮ್ಮ ಮರದಮ್ಮನ ಪತ್ತೆ ಇಲ್ಲವಲ್ಲ ಎಂದು ನಾನೂ, ಸಾರಥಿ ಸುಬ್ರಾಯನೂ ನೆನಪಿಸಿಕೊಂಡಿದ್ದೆವು. ಅಷ್ಟೊತ್ತಿಗೆ ಮೊನ್ನೆ ಅವರು ಬಂದರು. ಕೈಯಲ್ಲಿ ಒಂದು ಚೀಲ. ಅವರು ನೆಟ್ಟ ಬಾಳೆಯ ಗಿಡದಲ್ಲಿ ಗೊನೆ ಬಂದು ಹಣ್ಣಾಗಿ ಅದರ ಫಲವನ್ನು ಗುಡ್ಡದ ಮೇಲಿನ ಬೆಳಿಯಮ್ಮನಿಗೆ ಒಪ್ಪಿಸಿ, ಗೊನೆ ಮುರಿಸಿ, ಪ್ರಸಾದ ಮಾಡಿಕೊಂಡು ಬಂದಿದ್ದರು. ನಮ್ಮ ಸಹಾಯಕ ಪಡೆ ಅವರ ಗುರುತು ಹಿಡಿಯದೆ ಚೀಟಿ ಮಾಡಿ ನಂಬರ್ ಪಡೆದು ಒಳಗೆ ಬನ್ನಿ, ಮಾಸ್ಕ್ ಹಾಕ್ಕೊಳಿ ಎಂದು ಕೂಗುತ್ತಿದ್ದರೂ ಕೇಳದೇ ಅವರನ್ನೆಲ್ಲ ಸೀಳುನೋಟದಿಂದ ಸೀಳುವಂತೆ ನೋಡಿ ಸೀದಾ ಒಳಬಂದರು. ನನ್ನ ಮೇಜಿನ ಮೇಲೆ ಧಪ್ಪನೆ ಬಾಳೆಹಣ್ಣಿನ ಗೊನೆ ಇಟ್ಟರು. ಅಯ್ಯೋ, ಇಲ್ಲೆಲ್ಲ ಹಣ್ಣಿಡಬೇಡಿ ಎನ್ನುತ್ತ ಸ್ಟೆಥ್ ಕೆಳಗಿಟ್ಟು ತಲೆಯೆತ್ತಿದರೆ ಇವರು!

*

ಕಳೆದ ಮಳೆಗಾಲದ ಒಂದು ದಿನ.

ನಡೆಯಲಾರದಷ್ಟು ಸೋತು ಹೋದ ಇಳಿವಯದ ಜೀವವನ್ನು ಆಚೀಚೆ ಇಬ್ಬರು ಕಂಕುಳಲ್ಲಿ ಹಿಡಿದು ಒಳಗೆ ಕರೆತಂದರು. ಹಿಡಿದುಕೊಂಡವರ ಮೇಲೇ ಭಾರ ಬಿಟ್ಟು ಜೋತಾಡುತ್ತ, ಸೀರೆ ಸೆರಗಿನ ಮೇಲೆ ನದರೇ ಇಲ್ಲದಂತೆ ಒಳಗೆ ಬಂದರು.

ಎಕ್ಸಾಮಿನೇಷನ್ ಟೇಬಲ್ ಮೇಲೆ ಮಲಗಿದವರನ್ನು ನೋಡುತ್ತೇನೆ, ಅರೆ, ಇವರು! ನಮ್ಮ ಆಸ್ಪತ್ರೆ, ಮನೆಗಳಿಗೆ ಕಾಯಂ ಮಡ್ಲ ಹಿಡಿ ಪೂರೈಸುವವರು. ಬರುವಾಗ ಮಗೆಕಾಯಿ ಬದನೆ ನುಗ್ಗೆ ಬೆಂಡೆ ಸುರಗಿ ಸೀಗುಂಬಳ ಕೇದಿಗೆ ತೆಂಗಿನಕಾಯಿ ಪಟ್ಲಕಾಯಿ ಮುಂತಾಗಿ ಏನನ್ನೋ ಒಂದು ಔಷಧಿಯ ವಿನಿಮಯಕ್ಕೆ ತರುತ್ತಿದ್ದವರು. ನಮ್ಮ ಸಾವಯವ ಆಹಾರದ ಮೂಲವಾದ ಇವರಿಗೆ ಏನಾಯಿತು, ಅವರ ಏಕಮಾತ್ರ ಪುತ್ರಿಗೇನಾದರೂ ಆಯಿತೆ, ಇದೇನಿದು? ಯಾರೂ ಮಾಸ್ಕ್ ಹಾಕದೇ ಬಂದಿದ್ದಾರಲ್ಲ ಎಂದು ಎಲ್ಲರಿಗೂ ಮುಖಗೌರವಕ್ಕೆ ಮಾಸ್ಕ್ ಕೊಟ್ಟು ಒಬ್ಬರನ್ನು ಒಳಗಿಟ್ಟುಕೊಂಡು ಉಳಿದವರನ್ನು ಹೊರ ಕಳಿಸಿದೆವು. ನನ್ನ ಕಂಡರೂ ಗೌನು, ಮಾಸ್ಕಿನ ಕಾರಣ ಗುರುತು ಸಿಗಲಿಲ್ಲ ಇರಬೇಕು. ‘ಆರಾಮಿಲ್ವ, ಏನಾಯ್ತು?’ ಎಂದ ನನ್ನ ದನಿ ಕೇಳಿ ಎರಡೂ ಕೈಗಳಿಂದ ಎದೆ ಬಡಿದುಕೊಳ್ಳತೊಡಗಿದರು. ಅವರ ಜೊತೆ ಬಂದವರು ಸಣ್ಣ ನಗುತ್ತ, ‘ಸುಮ್ನಿರ ಅತ್ತೆ, ಅದ್ಕ್ಯಾಕ್ ಹೀಂಗ್ ಮಾಡ್ತೆ, ಮತ್ ಶುರು ಮಾಡಬ್ಯಾಡ, ಏನಾಗ್ತದೆ ಹೇಳು’ ಎಂದು ಗದರಿದರು.

‘ಅಮಾ, ಓ ಅಮಾ, ತೆಂಗ್ನ ಮರ, ನನ್ನ ತೆಂಗ್ನ ಮರ. ತಡಕಳಕಾಗಲ್ಲ, ನಾ ಸಾಯ್ತೆ. ನಂಗಿನ್ನು ಬದ್ಕು ಇಚ್ಚೆನೇ ಇಲ್ಲ. ಅಯ್ಯಯ್ಯೋ ಮಾ ಗಣಪ್ತಿ’

ಅಂದರೆ ಮಗಳಿಗೇನು ಆಗಿಲ್ಲ ಎಂದಾಯಿತು. ಆಗಿದ್ದಾದರೂ ಏನು? ಅವರು ಹೇಳುವಂತೆ ಕಾಣದಿದ್ದಾಗ ಜೊತೆ ಬಂದವರು ನಡೆದದ್ದನ್ನು ವಿವರಿಸಿದರು.

ನಿನ್ನೆಯೆದ್ದ ಚಂಡಮಾರುತ, ಬಿರುಗಾಳಿಯ ಹೊಡೆತಕ್ಕೆ ಅವರ ಹಳೇ ಮನೆಯ ನೂರಾರು ಹೆಂಚು ಹಾರಿ ಹೋಗಿವೆ. ಹೆಚ್ಚುಕಮ್ಮಿ ಅವರದು ಸೂರಿಲ್ಲದ ಮನೆಯಾಗಿದೆ. ಮನೆಯೊಳಗೆ ನೀರು ನುಗ್ಗಿ ಕಾಗದಪತ್ರ ನಾಶವಾಗಿವೆ. ಭಾಗ್ಯಜ್ಯೋತಿ ಸ್ಕೀಮಿನ ಮೀಟರು ಸಿಡಿಲಿಗೆ ಸುಟ್ಟು ಹೋಗಿದೆ. ರಾತ್ರಿಯೆಲ್ಲ ನೀರು ಬಳಿಯಲೂ ಆಗದೇ, ಹೊರಹೋಗಿ ಯಾರನ್ನು ಕರೆಯಲೂ ಆಗದೇ, ಒಂದು ಕೋಣೆಯ ತಮ್ಮ ಗೂಡಿನಲ್ಲಿ ಅಬ್ಬೆ ಮಗಳು ನಿಂತೇ ರಾತ್ರಿ ಕಳೆದರಂತೆ. ಬೆಳಕು ಹರಿದದ್ದೇ ಮೇಲಿನ ಕೇರಿಗೆ ಸುದ್ದಿ ಮುಟ್ಟಿಸಿ ಹಂಚು ಹೊದೆಸಲು ಯಾರಾದರೂ ಸಿಕ್ಕಾರಾ ನೋಡುವ ಎಂದು ಹೊರಟವರು ಯಾಕೋ ನೋಡುತ್ತಾರೆ, ಅವರ ಪಾಲಿನ ಐದುಗುಂಟೆ ತೋಟದ ಹತ್ತು ತೆಂಗಿನ ಮರಗಳಲ್ಲಿ ಏಳು ಮರದ ಚಂಡುಗಳು ಕಾಯಿ, ಸೀಯಾಳ, ಹಿಳ್ಳೆ, ಹಿಂಗಾರ ಸಮೇತ ಮುರಿದು ಕೆಳಗೆ ಬಿದ್ದಿವೆ. ಅಯ್ಯೋ, ಅವರಿಗೆ ಆ ದೃಶ್ಯ ಕಂಡು ಎದೆ ಒಡೆದು ಹೋಯಿತು.

ಆ ಹತ್ತು ಮರಗಳು ಅವರ ಜೀವನಕ್ಕೆ ಆಧಾರವಾಗಿದ್ದವು. ಅದರ ಕಾಯಿ, ಸಿಪ್ಪೆ, ಕರಟ, ತೆಂಗಿನ ಗರಿಗಳನ್ನು ಒಂದುಚೂರೂ ದಂಡ ಮಾಡದೇ ಉಪಯೋಗಿಸುತ್ತಿದ್ದರು. ಅದರ ಒಂದು ಕುರುಬು ಕಳಚದಂತೆ ನೋಡಿಕೊಂಡಿದ್ದರು. ಕೈ ಮುಖ ಮಾರೆಯನ್ನೆಲ್ಲ ಮರಗಳ ಬುಡದಲ್ಲೇ ತೊಳೆದು, ಬಳಚಿನ ಚಿಪ್ಪನ್ನೆಲ್ಲ ಅವುಗಳ ಬುಡಕ್ಕೆ ಸುರಿದು, ಪೇಟೆಯ ಆಮ್ಲೆಟ್ ಅಂಗಡಿಯ ಚಂದ್ರುವಿನ ಬಳಿ ಒಡೆದ ಮೊಟ್ಟೆ ಓಡನ್ನು ಪ್ರತಿ ದಿನ ಕೇಳಿತಂದು ಮರದ ಬುಡಕ್ಕೆ ಹಾಕುತ್ತಿದ್ದರು. ದಿನಾ ಬೆಳಿಗ್ಗೆ ಸಂಡಾಸಿಗೆಂದು ಗುಡ್ಡೆಗೆ ಹೋಗುವಾಗ ತಂಬಿಗೆಯ ಜೊತೆಗೆ ಒಂದು ಜರಿಕೊಟ್ಟೆಯನ್ನೂ ಹಿಡಿದು, ಸಗಣಿ ಹೆಕ್ಕಿ ತಂದು ಹತ್ತು ಮರಗಳ ಸಲಹುತ್ತಿದ್ದರು. ಮರಗಳ ಬುಡಕ್ಕೆ ಸದಾ ಕೈ ಹಾಕಿಕೊಂಡೇ ಇರುವರು. ಹೆಚ್ಚು ದುಡ್ಡು ಖರ್ಚು ಮಾಡುವವರಲ್ಲ. ಪಚ್ಚೆಸರ (ಹೆಸರುಕಾಳು) ಪಾಯಸ ಮಾಡಿದ ದಿನ ಅವರಿಗೆ ದೊಡ್ಡ ಹಬ್ಬ. ಕೆಲಸದ ಭರದಲ್ಲಿ ಹಸಿವನ್ನೆಲ್ಲ ಚಾ ಕಣ್ಣಿನಲ್ಲೇ ತಣಿಸಿದ ಪರಿಣಾಮ ಕಣ್ಣುಗುಡ್ಡೆಗಳು ಹಿಂಗಿ ಒಳಹೋದಂತೆ ಕಾಣುವವು.

ಹೇಳಲಿಕ್ಕೆ ದೊಡ್ಡ ಜಾತಿ. ಏನೂ ಸ್ಥಿತಿವಂತರಲ್ಲದವರ ಮನೆಯದು. ಮೂಲ ಮನೆಯ ಅಂಗೈಯಗಲ ಆಸ್ತಿ ಪಾಲಾದಾಗ ಕಿರಿಯವನ ವಿಧವೆಗೆ ತೋಟದ ಮುಲ್ಲೆಯ ಹತ್ತು ತೆಂಗಿನಮರ ಅಷ್ಟೇ ಬಂದಿತ್ತು. ಹಳೆಯ ಮನೆಯಲ್ಲಿ ಉಳಿದವರ ಜೊತೆಯಿರಲಾರದೆ ತಮ್ಮ ಜಾಗದ ಮೂಲೆಯಲ್ಲೊಂದು ಬಿಡಾರ ಮಾಡಿಕೊಂಡಿದ್ದರು. ಗುಡ್ಡೆ ಮೇಲಿನ ಸೊಪ್ಪುಸದೆ ಕಾಯಿ ಹೂವು ತಂದು ಪೇಟೆಗೊಯ್ದು ಮಾರಿ ಎರಡು ಕಾಸು ಗಳಿಸುವರು. ಒಂದು ಕಾಲು ದುರ್ಬಲವಾಗಿರುವ, ಹೆಡ್ಡಿ ಎಂದು ಅವ್ವಿಯ ಬಳಿ ಬೈಸಿಕೊಳ್ಳುವ, ಪದೇಪದೇ ಫಿಟ್ಸ್ ಬಂದು ಬೀಳುವ ಒಬ್ಬಳೇ ಮಗಳು ಅವರಿಗೆ. ಐದನೆತ್ತೆ ತನಕ ಹೇಗೋ ಕಲಿತು ಬಳಿಕ ಶಾಲೆ ಬಿಟ್ಟಿದ್ದಳು. ಆದರೂ ಅವಳ ಅವ್ವಿ ಬದುಕಲು ಬೇಕಾದ ಕೆಲಸ ಕಲಿಸಿದ್ದಳು. ಈಗ ಕೂತಲ್ಲೇ ಮಡ್ಲು ಕಡ್ಡಿ ಸವರಿ ಪೊರಕೆ ಮಾಡುವುದು, ಬಾಳೆಪಟ್ಟೆಯಲ್ಲಿ ಮಲ್ಲಿಗೆ ಹೂವು ಹೆಣೆಯುವುದು ಅವಳ ಕೆಲಸ. ಅವಳಿಗೆ ಎಂದೋ ಒಮ್ಮೊಮ್ಮೆ ಬರುವ ವಿಶೇಷ ಚೇತನರ ಮಾಸಾಶನ ಅವಳ ಮದ್ದಿಗೆ ಸರಿ ಹೋಗುತ್ತದೆ. ಏನಾದರೂ ಉಳಿದದ್ದನ್ನು ಹುಡುಗಿಯ ಹೆಸರಿನಲ್ಲಿ ಇಟ್ಟುಕೊಳ್ಳಲು ತಮ್ಮ ಕಿರಾಣಿ ಅಂಗಡಿಯವರಾದ ಕಮ್ತಿಯರ ಬಳಿ ಅವ್ವಿ ಜಮಾ ಕೊಡುವಳು. ಹಾಗೆ ಉಳಿಸಿಟ್ಟ ದುಡ್ಡಿನಲ್ಲಿ ಹುಡುಗಿಗೊಂದು ಚಿನ್ನದ ಕುಡುಕು ಮಾಡಿಸಿದ್ದಾರೆ. ಆ ಹಣ ಬೆಳೆಬೆಳೆದು ಒಂದು ಎಮ್ಮೆ ಕೊಂಡು, ಕೊಟ್ಟಿಗೆ ಕಟ್ಟಿಸಿ, ಡಯರಿಗೆ ಹಾಲು ಹಾಕುವ ಕನಸು ಕಾಣುತ್ತಾರೆ.

ಅಂತಹವರಿಗೆ, ತಮ್ಮ ನಿನ್ನೆ ನಾಳೆಗಳಿಗೆಲ್ಲ ಹತ್ತು ತೆಂಗಿನಮರ ನೆಚ್ಚಿಕೊಂಡವರಿಗೆ, ಹತ್ತರಲ್ಲಿ ಏಳು ಚಂಡು ಮುರಿದು ಬಿದ್ದರೆ ಏನಾಗಬಹುದು?

‘ಮರದ್ ಸಲುವಾಗೇ ಒಂದ್ ಗಂಟಿ ಕಟ್ಬೇಕಂತ ಮಾಡಿದ್ದೆ. ಮಾಡಿನ ಇಳುಕಲಿಗೆ ಒಂದ್ ಕೊಟ್ಗೆ ಮಾಡಬೇಕಂತ ಮಡ್ಲು, ಗಳ ಎಲ್ಲ ತಕಬಂದ್ ಹಾಕಿದ್ದೆ. ಈಗ್ನೋಡಿರೆ ಹಿಂಗಾತು’

ಒತ್ತೊತ್ತಿ ಬರುವ ದುಃಖಕ್ಕೆ ಅವರಿಗೆ ಏನು ಮಾತನಾಡುವುದು ತಿಳಿಯುತ್ತಿಲ್ಲ. ಅವರು ಇವತ್ತಿಡೀ ಏನೂ ತಿಂದಿಲ್ಲ, ನೀರೂ ಕುಡಿದಿಲ್ಲ. ಯಾವ ವೈಭೋಗಕ್ಕೆ ಊಟ ಮಾಡುವುದು ಎಂದು ಎದೆ ಬಡಿದುಕೊಂಡಿದ್ದರಂತೆ. ನೆರೆಯವರಿಗೆ ಬುದ್ಧಿ ಹೇಳಿಹೇಳಿ ಸಾಕಾಗಿ ಕೊನೆಗೆ ಮೇಲಿನ ಕೇರಿಯ ಇಬ್ಬರು ಆಸ್ಪತ್ರೆಗೆ ಕರೆ ತಂದಿದ್ದರು. ‘ತೆಂಗ್ನಮರ ಹೋದ್ರೇನು, ಮತ್ ನೆಟ್ರಾಗ್ತದೆ. ಊಟ ಬಿಟ್ರೆ ವೀಕ್ನೆಸ್ ಆಗ್ತು ಅಂತ ಹೇಳಿ ಮೇಡಂ’; ‘ಬಗೇಲಿ ಶಕ್ತಿ ಆಗು ಹಂಗೆ, ಮನ್ಸಿಗೆ ಸಮಾದಾನ ಆಗು ಹಂಗೆ ಏನಾರ ಒಂದ್ ಗ್ಲುಕೋಸ್ ಹಾಕ್ತಿರ ನೋಡಿ.’ ಎಂದರು.

ವೃಕ್ಷನಷ್ಟದ ಶೋಕದಲ್ಲಿ ಬದುಕೇ ಬೇಡವಾದ ಅವರಿಗೆ ಗ್ಲೂಕೋಸಿನಿಂದ ಸಮಾಧಾನ ಆಗುವುದಿಲ್ಲ ಎನಿಸಿತು. ಒಂದಷ್ಟು ತಂಪು ಮಾತುಗಳನ್ನೂ, ಆರ್ಥಿಕ ಸಹಾಯದ ಭರವಸೆಗಳನ್ನೂ ಕೊಟ್ಟಾಯಿತು. ಕಿರಾಣಿ ಸಾಮಾನಿನ ವ್ಯವಸ್ಥೆ ಮಾಡಿಯಾಯಿತು. ಮತ್ತೆ ಗಿಡ ಬೆಳೆಸುವ ಉಮೇದು ಚಿಗುರಿದಂತಹ ಸ್ಥಿತಿಯಲ್ಲಿ ಅವರು ಮನೆಗೆ ಹೊರಟರು.

ಇದು ಕಳೆದ ಕೊರೊನಾ ಕಾಲದ, ಮಳೆಗಾಲದ ಕತೆ. ಅಷ್ಟಾದಮೇಲೆ ಶರಾವತಿಯಲ್ಲಿ ಸುಮಾರು ಕೆನ್ನೀರು ಹರಿಯಿತು. ಆಧಾರ ಕಾರ್ಡೂ ನಾಶವಾದ ಅವರು ಗ್ರಾಮಚಾವಡಿಗೆ ಎಷ್ಟುಸಲ ಹೋದರೂ ಒಂದು ರೂಪಾಯಿ ಪರಿಹಾರ ಸಿಕ್ಕಲಿಲ್ಲ. ಈಗ ಬಾ, ಆಗ ಬಾ ಎಂದು ತಿರುಗಿದ್ದೇ ಆಯಿತು. ಅವರ ಮಗಳಿಗೂ ಮಾಸಾಶನ ಬರದೆ ಒಂದು ವರ್ಷ ಆಗಿದೆ. ಈಗ ಕೊರೊನಾ ಬಿಟ್ಟರೆ ಮತ್ತೆ ಯಾವುದಕ್ಕೂ ದುಡ್ಡಿಲ್ಲ ಎಂದು ಪೋಸ್ಟ್​ಮ್ಯಾನ್ ಹೇಳುವುದು ಕೇಳಿ, ‘ಕೊರೊನ ಅಂತೆ ಕೊರೊನ, ಅದ್ರ ಹುಲಿ ಹಿಡಿಯ’ ಎಂದು ಶಾಪ ಹಾಕಿದ್ದರು. ಮಳೆ ಸ್ವಲ್ಪ ಹಿಂದಾದಾಗ ಚಂಡು ಮುರಿದ ಮರಗಳ ಕಾಂಡಕ್ಕೆ ಸಗಣಿ, ಮಣ್ಣು, ಬೂದಿ, ಉಮಿ, ಮದ್ದು ಕಲೆಸಿ ಕಟ್ಟಿಸಿದರು. ಚೌತಿಯ ಮರುದಿನ ಮತ್ತೆ ನಾಕು ಹೊಸ ಗಿಡಗಳನ್ನು ಅಲ್ಲೇ ಸಂದಿಗೊಂದಿ ಹುಡುಕಿ ನೆಡಿಸಿದ್ದರು.

ಇಲ್ಲಸ್ಟ್ರೇಷನ್ : ಡಾ. ಕೃಷ್ಣ ಗಿಳಿಯಾರ್

ಮಳೆಗಾಲ ಕಳೆದು ಚಳಿಗಾಲ ಬಂದಿತು. ಕೊರೋನ ಸ್ವಲ್ಪ ತಗ್ಗಿದಂತೆ ಕಂಡಿತು. ಆದರೆ ಬೇಸಗೆ ಎರಗಿದ್ದೇ ಮತ್ತೆ ಲಾಕ್‌ಡೌನ್ ಬಂದೆರಗಿತು. ನಡುವೆ ಎಂದೋ ಒಮ್ಮೆ ನಮ್ಮ ಮರದಮ್ಮನ ಪತ್ತೆ ಇಲ್ಲವಲ್ಲ ಎಂದು ನಾನೂ, ಸಾರಥಿ ಸುಬ್ರಾಯನೂ ನೆನಪಿಸಿಕೊಂಡಿದ್ದೆವು. ಅಷ್ಟೊತ್ತಿಗೆ ಮೊನ್ನೆ ಅವರು ಬಂದರು. ಕೈಯಲ್ಲಿ ಒಂದು ಚೀಲ. ಅವರು ನೆಟ್ಟ ಬಾಳೆಯ ಗಿಡದಲ್ಲಿ ಗೊನೆ ಬಂದು ಹಣ್ಣಾಗಿ ಅದರ ಫಲವನ್ನು ಗುಡ್ಡದ ಮೇಲಿನ ಬೆಳಿಯಮ್ಮನಿಗೆ ಒಪ್ಪಿಸಿ, ಗೊನೆ ಮುರಿಸಿ, ಪ್ರಸಾದ ಮಾಡಿಕೊಂಡು ಬಂದಿದ್ದರು. ನಮ್ಮ ಸಹಾಯಕ ಪಡೆ ಅವರ ಗುರುತು ಹಿಡಿಯದೆ ಚೀಟಿ ಮಾಡಿ ನಂಬರ್ ಪಡೆದು ಒಳಗೆ ಬನ್ನಿ, ಮಾಸ್ಕ್ ಹಾಕ್ಕೊಳಿ ಎಂದು ಕೂಗುತ್ತಿದ್ದರೂ ಕೇಳದೇ ಅವರನ್ನೆಲ್ಲ ಸೀಳುನೋಟದಿಂದ ಸೀಳುವಂತೆ ನೋಡಿ ಸೀದಾ ಒಳಬಂದರು. ನನ್ನ ಮೇಜಿನ ಮೇಲೆ ಧಪ್ಪನೆ ಬಾಳೆಹಣ್ಣಿನ ಗೊನೆ ಇಟ್ಟರು. ಅಯ್ಯೋ, ಇಲ್ಲೆಲ್ಲ ಹಣ್ಣಿಡಬೇಡಿ ಎನ್ನುತ್ತ ಸ್ಟೆಥ್ ಕೆಳಗಿಟ್ಟು ತಲೆಯೆತ್ತಿದರೆ ಇವರು!

‘ಇದ್ನ ನಿಮುಗ್ ಕೊಡ್ದೆ ಹ್ಯಾಂಗ್ ತಿಂಬುದು ಅಮಾ? ದೇವ್ರು ನಿಮ್ಗೆ ಆಯುರಾರೋಗ್ಯ ಕೊಡ್ಲಿ’ ಎಂದು ಕೈ ಮೇಲೆತ್ತಿ ಕಾಯಿಕಡಿಗೆ ಒತ್ತಿಕೊಂಡು ಬಂದಿದ್ದ ಕುಂಕುಮವನ್ನು ನನ್ನ ಹಣೆಗೆ ಬಳಿದರು. ‘ಇದ್ಯಂಥದ್ರಾ ಹೀಂಗ್ ಯಾಸ ಮಾಡ್ಕಂಡಿದಿರಿ?’ ಎಂದು ನಮ್ಮ ಮಾಸ್ಕು, ಗೌನು, ಕ್ಯಾಪು ನೋಡಿ ಕೈಯಾಡಿಸಿ ನಕ್ಕರು.

‘ವೇಷ ಹಾಕೋ ಕಾಲ ಬಂದಿದೆ. ನಿಮ್ಮ ತೆಂಗಿನ ಮಕ್ಳು ಚೆನಾಗಿದಾವಾ?’ ಎಂದೆ ನಗುತ್ತ.

‘ಗ್ರಾಮ ಚಾವಡಿಯೋರು ಒಂದ್ ದಮ್ಡಿ ಕೊಡಲಿಲ್ಲ. ಉಳುದ್ ದ್ಯಾವ್ರಿಗೆಲ್ಲ ಎಷ್ಟ್ ಹರ‍್ಕೆ ಕಟ್ಕಂಡೆ, ಉಪೇಗಿಲ್ಲ. ಎಲ್ಲೋದ್ರು ಕೊರೊನ ಕೊರೊನ! ಸಾಯ್ಲಿ ಅಂದು ಇದ್ಕೆಲ್ಲ ಅಮ್ನೋರೇ ಸೈಯಿ ಅಂತ ಕಡೀಗ್ ಹೊಳೀತು. ಬೆಳಿಯಮ್ಮಂಗೆ ಬಾಳೆಗೊನೆ ಕೊಡ್ತೆ ಅಂತ ಹೇಳ್ಕಂಡೆ. ಎಲ್ಲಾ ದೇವ್ರಿಗೂ ಹೇಳ್ಕಂಡಿದ್ದೆ, ಏನೂ ಆಗಿರ್ಲಿಲ್ಲ. ದೇವ್ರಾಟ, ಅಮ್ನರಿಗೆ ಹೇಳ್ಕಂಡುದ್ದೇ ಸುಳಿ ಒಡೀತು. ಸಿಡ್ಲು ಬಡ್ದು ಚಂಡು ಮರ‍್ದ ಏಳು ಮರ‍್ದಲ್ಲಿ ನಾಕಕ್ಕೆ ಸುಳಿ ಒಡಿಬೇಕ ಅಮಾ? ಶಕ್ತಿ ಅಂದ್ರೆ ಅಮ್ನೋರರ‍್ದೇ ಸೈ. ಅದ್ಕೆ ನಿಮ್ಗೆ ಕೊಟ್ಟೋಗಣ ಅಂತ ಬಂದೆ. ಏನ್ ಹೆದರ‍್ಕಬೇಡಿ, ಕೊರೊನನು ಇಲ್ಲ, ಅದ್ರ ಅಜ್ಜನೂ ಇಲ್ಲ. ಎಲ್ಲಾದ್ಕು ಅಮ್ಮ ಅವ್ಳೆ, ನಮ್ನು ನಿಮ್ನು ಕಾಯುಕೆ’ ಎಂದು ನಗುತ್ತ ಹಾರುಗಾಲಲ್ಲಿ ಕ್ಲಿನಿಕ್ ಹೊಸಿಲು ದಾಟಿ ನಡೆದೇಬಿಟ್ಟರು, ಮಾಸ್ಕ್ ಇಲ್ಲದೆ!

ಅವರು ಕೊಟ್ಟ ಬಾಳೆಯ ಹಣ್ಣಿನಲ್ಲಿ ಮುಳುಕ, ಸೀರೊಟ್ಟಿ, ಬನ್ಸು ಮಾಡಿ ಸವಿದು ನಾನೂ ಧೈರ್ಯವಾಗಿರುವೆ ಕೊರೊನಾ ಎಂದರೆ ಏನೋ ಎನ್ನುವಂತೆ!
*
ಪದಗಳ ಅರ್ಥ

ನದರು = ಗಮನ
ಓಡು = ಸಿಪ್ಪೆ, ಕವಚ
ಬಳಚು = ಚಿಪ್ಪು
ಮಡ್ಲ ಹಿಡಿ = ತೆಂಗಿನಗರಿಯ ಕಸಬರಿಗೆ
ಜರಿ ಕೊಟ್ಟೆ = ಪ್ಲಾಸ್ಟಿಕ್ ಕವರ್
ಚಾ ಕಣ್ಣು = ಡಿಕಾಕ್ಷನ್
ಉಮಿ = ಭತ್ತದ ಹೊಟ್ಟು
ಮುಳುಕ = ಸುಟ್ಟೇವು, ಅಕ್ಕಿ ನೆನೆಸಿ ಹಣ್ಣು, ಕಾಯಿಬೆಲ್ಲದೊಡನೆ ರುಬ್ಬಿ ಕರಿದು ಮಾಡುವ ತಿಂಡಿ.
ಬನ್ಸು = ಬಾಳೆಯಹಣ್ಣಿನಲ್ಲಿ ಮೈದಾ+ಸಕ್ಕರೆ ಕಲೆಸಿ ಪೂರಿಯಂತೆ ಕರಿದು ಮಾಡುವ ತಿಂಡಿ.
*

ಫೋಟೋ : ಎಸ್. ವಿಷ್ಣುಕುಮಾರ್

ನಾಳೆ ನಿರೀಕ್ಷಿಸಿ; ಕವಲಕ್ಕಿ ಮೇಲ್ – 5 : ಏಳ್ನೂರು ಕಿಲೊಮೀಟರ್ ನಡದ್ವಿ ಸುರಂಗದಾಗ ಬೆಳಕಿಲ್ಲ ಕೈಯ್ಯಾಗ ಬಿಸ್ಕೀಟಿಲ್ಲ 

ಇದನ್ನೂ ಓದಿ : Covid Diary : ಕವಲಕ್ಕಿ ಮೇಲ್ : ‘ಅವ್ರಿಗೊಂದ್ ಸಕ್ತಿ ಇಂಜೆಷನ್ ಹಾಕ್ರ, ಬಿಟ್ ಹೋಗುಕಾರು ಸಕ್ತಿ ಬೇಕಲೆ’

Published On - 1:35 pm, Fri, 4 June 21