AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Covid Diary : ಫೆನ್ನಿರಾಯನೆಂಬ ಸಮಾಜಸೇವಕನೂ ಮತ್ತವನ ‘ಅದು’ ಕ್ಲಿನಿಕ್ಕಿಗೆ ಬಂದ ದಿನ

ಅವನ ವಿಳಾಸ, ವಯಸ್ಸು, ಫೋನ್ ನಂಬರುಗಳನ್ನು ಸಹಾಯಕಿ ಸಾಂಡ್ರಾ ಕೇಳಿದರೆ ರೊಂಯ್ಞನೆ ತನ್ನ ಫೀಚರ್ ಫೋನನ್ನೆತ್ತಿ ಟೇಬಲ್ ಮೇಲೆ ಒಗೆದ. ಅದು ಅವನ ಇಂಥ ಎಷ್ಟು ಒದೆತಗಳನ್ನು ಸಹಿಸಿದೆಯೋ, ಕೆಳಗೆ ಬಿದ್ದು ಇಬ್ಭಾಗವಾದದ್ದು ಜೋಡಿಸಿದ ಕೂಡಲೇ ಸರಿಯಾಯಿತು! ನಂಬರು ಬರೆದುಕೊಂಡು, ತೇಲುಗಣ್ಣು ಬಿಡುತ್ತಿದ್ದವನಿಗೆ ಹೇಳಿದ್ದನ್ನೆ ಮತ್ತೆ ಹೇಳಿ, ಯಾವುದಕ್ಕೂ ‘ಅದರ’ ಹತ್ತಿರ ಹೇಳಿಕಳಿಸೆಂದು ಮನೆಗೆ ಕಳಿಸಿದೆವು.

Covid Diary : ಫೆನ್ನಿರಾಯನೆಂಬ ಸಮಾಜಸೇವಕನೂ ಮತ್ತವನ ‘ಅದು’ ಕ್ಲಿನಿಕ್ಕಿಗೆ ಬಂದ ದಿನ
ಶ್ರೀದೇವಿ ಕಳಸದ
|

Updated on:Jun 01, 2021 | 6:09 PM

Share

ಕುಡಿತವಿಲ್ಲದ ವಿತ್‌ಡ್ರಾವಲ್ ಮತ್ತು ವಾಂತಿಯಿಂದ ತುಂಬ ನಿತ್ರಾಣವಾಗಿದ್ದ. ರಿಕ್ಷಾದಲ್ಲಿ ತಾಲೂಕಾಸ್ಪತ್ರೆಗೆ ಹೋಗಿ ಎಂದೆವು. ರಿಕ್ಷಾದವ ಅಲ್ಲಿಗೆ ಬರುವುದಿಲ್ಲ ಎಂದು ಹೆದರಿದ. ‘ದುಡ್ ಸಾಕಾಗುದಿಲ್ಲ’ ಎಂದು ಅವಳೂ ಹೋಗಲು ನಿರಾಕರಿಸಿದಳು. ಆಂಬುಲೆನ್ಸಿಗೆ ಫೋನು ಮಾಡುತ್ತೇವೆ ಎಂದೆವು. ‘ನಂಗೊಂದು ಗ್ಲುಕೋಸ್ ಹಚ್ತಿರ ಇಲ್ವ? ಮದ್ಲೆಲ್ಲ ಹಿಂಗೆ ಆಗಿದ್ದೇ ಅಲ್ವ? ಏನ್ ಇವತ್ತ ಬಂದುದ್ದು ನಾನು?’ ಎಂದು ತನ್ನ ಸಾರಾಯಿ ಚರಿತ್ರೆಯನ್ನು ನನಗೆ ನೆನಪಿಸಿ ಕೂತಲ್ಲೇ ಗುಟುರು ಹಾಕಿದ. ಅವನಿಗೊಂದು ಗ್ಲುಕೋಸ್ ಏರಿಸದಿದ್ದರೆ ನಮಗೇ ಹೊಡೆಯುವಂತೆ ಕಾಣಿಸಿತು. ಆಕ್ಸಿಜನ್ ಚೆನ್ನಾಗಿದೆ. ಬಿಪಿ ಸರಿ ಇದೆ. ಏರುಜ್ವರಕ್ಕೆ ಪಲ್ಸ್ ಓಡುತ್ತಿದೆ. ಬೇರೆ ದಾರಿಯಿಲ್ಲ. ಅವನಿಗೆ ತಿಳಿಸಿ, ಬುದ್ಧಿ ಹೇಳಿ, ಮತ್ತೆ ಬರುವಂತಿಲ್ಲ ಎಂಬ ಷರತ್ತಿನೊಂದಿಗೆ ಆಚೆ ಕೋಣೆಯಲ್ಲಿ ಮಲಗಿಸಿ ಸಲೈನ್ ಹಚ್ಚಿದೆವು. ಆಸ್ಪತ್ರೆಯಲ್ಲಿ ನಾವು ಸಿದ್ಧವಿಟ್ಟುಕೊಳ್ಳುವ ಕಿರಾಣಿ ಸಾಮಾನುಗಳ ಒಂದು ಗಂಟನ್ನು ಅವಳಿಗೆ ಕೊಟ್ಟು ಇನ್ನು ಹತ್ತು ದಿನ ಅವನನ್ನು ಬೇರೆ ಕೋಣೆಯಲ್ಲಿ ಒಳಗೆ ಇಡಬೇಕು, ನೀನೂ ಟೆಸ್ಟ್ ಮಾಡಿಸಬೇಕು, ಹೊರಗೆ ಬರಬೇಡಿ ಎಂದೆವು.

*

`ಅಮಾ, ಏನೂ ತೊಂದ್ರೆ ಇಲ್ಲಲ?’

ಅದೆಷ್ಟನೆಯದೋ ಬಾರಿ ಅವಳು ಈ ಪ್ರಶ್ನೆ ಕೇಳಿದಳು. ಅವಳ ಜೊತೆ ನಿಂತಿದ್ದ ಐದು ವರ್ಷದ ಮಗಳು ಪಿಳಿಪಿಳಿ ಕಣ್ಣು ಬಿಡುತ್ತಿದೆ. ಹೊಟ್ಟೆಗೆ ಎಷ್ಟು ಅಗುಳು ಅನ್ನ ತಿನ್ನುವನೋ ಅದರ ಎರಡರಷ್ಟು ಹನಿ ಹೆಂಡ ಕುಡಿದು ಕೃಶನಾದ ಅವಳ ಗಂಡನ ಕೈ ತರತರ ನಡುಗುತ್ತಿದೆ. ಒಂದು ಹನಿ ನೀರು ದಕ್ಕುತ್ತಿಲ್ಲ, ಆ ಪರಿ ವಾಂತಿ ಮಾಡುತ್ತಿದ್ದಾನೆ. ಮೈಮೇಲೆ ಕೈಯಿಟ್ಟರೆ ಜ್ವರ ಸುಟ್ಟು ಹೋಗುತ್ತಿದೆ. ಅವಳು ಮಾತ್ರ ಜ್ವರದ ಮಾತೇ ಹೇಳುವುದಿಲ್ಲ. ಒಂದು ಗ್ಲುಕೋಸ್ ಹಾಕಿ ಹಾಕಿ ಎನ್ನುತ್ತಿದ್ದಾಳೆ.

ಅವನ ಉದ್ಯೋಗ ಕಳ್ಳಭಟ್ಟಿ ತಯಾರಿಸುವುದು. ಅದರಲ್ಲಿ ಅವ ಸ್ಪೆಷಲಿಸ್ಟ್. ಲಾಕ್‌ಡೌನ್ ಸಮಯದಲ್ಲಿ ಅವನಿಗೆ ಕೆಲಸ ಹೆಚ್ಚು. ಬಾರ್ ಕ್ಲಬ್ಬುಗಳನ್ನು ಹುಡುಕಿ ಹೋಗುವಂತಿಲ್ಲ. ಸರಾಗವಾಗಿ ಓಡಾಡಲು ವಾಹನ ಬಿಡುತ್ತಿಲ್ಲ. ಹಾಗಾಗಿ ವಿದೇಶೀ ಮದ್ಯ ಕುಡಿಯುವವರಿಂದ ಹಿಡಿದು ಕೊಟ್ಟೆ ಸಾರಾಯಿ ಇಳಿಸುವವರ ತನಕ ಎಲ್ಲರಿಗೂ ಇವನೇ ಸ್ಫೂರ್ತಿದಾತ. ಬಡವರಿಗೆ ಉದ್ರೆ ಕೊಡುತ್ತಾನೆ. ಮುಂದೆ ಒಳ್ಳೆಯ ಕಾಲ ಬಂದಾಗ, ದುಡಿಮೆ ಇರುವಾಗ ಅವರು ಹೆಂಡದ ಸಾಲ ತೀರಿಸುತ್ತಾರೆ. ಕಳೆದ ವರ್ಷದ ಲಾಕ್‌ಡೌನ್ ಅನುಭವದ ಹಿನ್ನೆಲೆಯಲ್ಲಿ ಇವ ಈ ಸಲ ಹೆಚ್ಚು ಬೆಲ್ಲದ ಕೊಳೆ ನೆಲದಲ್ಲಿ ಹೂತಿಟ್ಟಿದ್ದಾನೆ. ಗೇರು ಪ್ಲಾಂಟೇಷನ್‌ಗಳನ್ನು ಸುತ್ತಿ, ಬೀಜ ಕೊಯ್ದ ಗೇರುಹಣ್ಣು ತುಂಬಿ ತಂದು ಹೆಚ್ಚೆಚ್ಚು ಫೆನ್ನಿ ತಯಾರಿಸಿದ್ದಾನೆ. ಅವ ಮಾಡುತ್ತಿರುವ ಕಾಯಕ ಸಮಾಜ ಸೇವೆ ಎಂದು ಅವನೂ, ಅವನ ಗಿರಾಕಿಗಳೂ ದೃಢವಾಗಿ ನಂಬಿದ್ದಾರೆ. ಅದಕ್ಕೆ ಸರಿಯಾಗಿ ಸರ್ಕಾರವೂ ತಾನು ನಡೆಯುವುದು ಮದ್ಯದ ಮಾರಾಟದಿಂದಲೇ ಎಂದು ಹೇಳಿದ ಮೇಲೆ ಅವನಿಗೆ ಮದ್ಯದಿಂದಲೇ ಜಗತ್ತು ನಡೆಯುವುದು ಎಂದು ಖಾತ್ರಿಯಾಗಿದೆ.

ಅಂಥವ ನಾಲ್ಕು ದಿನದ ಕೆಳಗೆ ಬಂದಿದ್ದ. ಬೆಲ್ಲದ ಕೊಳೆ ಹುಗಿಸಿಟ್ಟ ಜಾಗಗಳನ್ನು ಅಬಕಾರಿಯವರು ಪತ್ತೆ ಹಚ್ಚಿ ರೈಡ್ ಮಾಡಿದ್ದರು. ಇವ ಎದುರು ಹೇಳಿದನೆಂದೋ, ಮಾಮೂಲು ಗಿಟ್ಟಲಿಲ್ಲವೆಂದೋ ಮುಖಮಾರೆ ನೋಡದೆ ಚಚ್ಚಿದ್ದರು. ಹೊಡೆತ ತಿಂದವ ಮೈಯೆಲ್ಲ ನುಜ್ಜುಗುಜ್ಜಾಗಿ ಬಂದಿದ್ದ. ನಾನು ಜ್ವರ ಬಂದಿದೆಯಲ್ಲ ಎಂದಾಗ ಅವ ಆದದ್ದನ್ನು ಬಿಡಿಸಿ ಹೇಳಿದ್ದ. ಆದರೆ ಜ್ವರ ಬಿಡಲಿಲ್ಲ. ಗಂಟಲುನೋವು ಶುರುವಾಯಿತು. ಕೆಮ್ಮು ಹೆಚ್ಚಾಯಿತು. ಕೆಮ್ಮುದಮ್ಮಿಗೆ ಒಳ್ಳೆಯದೆಂದು ತಾನೇ ತಯಾರಿಸಿದ ಗೇರು ಸಾರಾಯಿಯನ್ನು ಹೊಟ್ಟೆ ತುಂಬ ಕುಡಿದ. ಗೇರು ಗುಡ್ಡೆಗಳಲ್ಲಿ ಬಿಸಿಲಲ್ಲಿ ತಿರುಗಿ ಮನೆಗೆ ಬಂದಾಗ ಬುದ್ಧಿ ಇಲ್ಲದ ‘ಅದು’ (ಅವನ ಹೆಂಡತಿ) ಪಚ್ಚೆಸ್ರು ನೀರು, ಎಳ್ಳು ನೀರು ಮಾಡಿ ತಂಪು ಅಂತ ಕೊಟ್ಟಿತು. ಇವನೂ ಬಾಯಾರಿಕೆ ಆಗಿದ್ದು ತಡೆಯಲಾಗದೇ ಕುಡಿದು ಬಿಟ್ಟ. ತಗ, ಅದ್ಕೇ ಕಫ ಗಟ್ಟಿಯಾಗಿ ಜ್ವರ ಬಂದಿದೆ ಎನ್ನುವುದು ಅವನ ವಾದ. ‘ಯಾವಾಗ್ಗೂ ಈ ಕಾಲ್ಕೆ ಜರ ಬರುದೆಯ ನಂಗೆ. ನೀವ್ ಮುಟ್ಟಿರೆ ಸಾಕು, ಇನ್ ಗುಣ’ ಎಂದು ಬಂದವನೇ ನಂಬರೂ ತೆಗೆದುಕೊಳ್ಳದೇ ಸೀದಾ ಒಳಬಂದ. ತೇಲಾಡುವ ಅವನನ್ನು ಬೇಗ ಕಳಿಸದಿದ್ದರೆ ಇಲ್ಲೇ ಬೆಂಚಿನ ಮೇಲೇ ಮಲಗಿ ನಾಳೆಯ ತನಕ ನಿದ್ದೆ ಹೊಡೆದಾನು ಎನಿಸಿ ಒಳಗೆ ಬಿಟ್ಟೆವು. ಮಾಸ್ಕ್ ಹಾಕಿಸಿ, ಮಾತ್ರೆ ಇಂಜೆಕ್ಷನ್ ಕೊಟ್ಟು, ಮನೆಯಲ್ಲೂ ಕೆಮ್ಮುವಾಗ ಮಾಸ್ಕ್ ಹಾಕಿಕೊಳ್ಳಬೇಕು ಎಂದು ತಿಳಿಸಿ, ಸರ್ಕಾರಿ ಆಸ್ಪತ್ರೆಗೆ ಹೋಗಿ ಕೋವಿಡ್ ಟೆಸ್ಟಿಗೆ ಕೊಟ್ಟು ಬರಬೇಕು ಎಂದು ಮತ್ತೆಮತ್ತೆ ಹೇಳಿ ಕಳಿಸಿದೆವು. ಅವನ ವಿಳಾಸ, ವಯಸ್ಸು, ಫೋನ್ ನಂಬರುಗಳನ್ನು ಸಹಾಯಕಿ ಸಾಂಡ್ರಾ ಕೇಳಿದರೆ ರೊಂಯ್ಞನೆ ತನ್ನ ಫೀಚರ್ ಫೋನನ್ನೆತ್ತಿ ಟೇಬಲ್ ಮೇಲೆ ಒಗೆದ. ಅದು ಅವನ ಇಂಥ ಎಷ್ಟು ಒದೆತಗಳನ್ನು ಸಹಿಸಿದೆಯೋ, ಕೆಳಗೆ ಬಿದ್ದು ಇಬ್ಭಾಗವಾದದ್ದು ಜೋಡಿಸಿದ ಕೂಡಲೇ ಸರಿಯಾಯಿತು! ನಂಬರು ಬರೆದುಕೊಂಡು, ತೇಲುಗಣ್ಣು ಬಿಡುತ್ತಿದ್ದವನಿಗೆ ಹೇಳಿದ್ದನ್ನೆ ಮತ್ತೆ ಹೇಳಿ, ಯಾವುದಕ್ಕೂ ‘ಅದರ’ ಹತ್ತಿರ ಹೇಳಿಕಳಿಸೆಂದು ಮನೆಗೆ ಕಳಿಸಿದೆವು.

ಮರುದಿನ ‘ಅದು’ ಬಂದಿತು. ಏನೂ ಊಟ ಮಾಡುವುದಿಲ್ಲ, ಗಂಟಲು ನೋವು. ‘ಅವರಿಗೆ ಇಷ್ಟ ಇರೂ ಪದಾರ್ಥ ಹ್ಯಾಂಗೇ ಮಾಡ್ ಹಾಕಿರೂ ಉಂಬುದಿಲ್ಲ. ಎಲ್ಲೆಲ್ಲು ಸಿಗುದಿಲ್ಲಾದ್ರು ಮೊಗೇರ ತಾರಿಗ್ ಹೋಗಿ ಗೌಲು ತಕಬಂದೆ. ಆದ್ರೂ ಬಾಯಿ ರುಚಿ ಇಲ್ಲ. ಅದ್ ಹ್ಯಾಂಗ್ ಮಾಡಿದೆ ಅಂತ ಹೊಡುಕ್ ಇರ್ತರೆ. ಅನ್ನ ತಿಂದ್ರೆ ಕತ್ತ ಜಗ್ದಂಗಾಗ್ತದೆ ಅಂತಾರೆ’ ಎಂದಳು. ಅವಳಿಗೆ ಕೋವಿಡ್ ಬಗೆಗೆ, ಟೆಸ್ಟ್ ಮಾಡಿಸುವ ಬಗೆಗೆ ಹೇಳಿದೆವು. ಆಸ್ಪತ್ರೆಗೆ ಬರುತ್ತ ಈ ಮಗಳನ್ನೂ ಯಾಕೆ ಜೊತೆಗೆ ತರುತ್ತೀ ಮರಾಯ್ತಿ ಎಂದೂ ಕೇಳಿದೆವು. ‘ಮನ್ಲಿರ ಅಂದ್ರೆ ಬಾಲ ಹಿಡ್ಕ ಬತ್ತದೆ’ ಎಂದು ಅದರ ತಲೆ ಮೇಲೊಂದು ಜಪ್ಪಿದಳು. ಅದು ಕುಂಯ್ಞ್ ರಾಗ ಹಾಡಲು ಶುರುಮಾಡಿತು.

Kavalakki Mail

ಕಲೆ : ಡಾ. ಕೃಷ್ಣ ಗಿಳಿಯಾರ್

ಅಂತೂ ನಾವು ಹೇಳಿದ್ದು ಅರ್ಥವಾಯಿತು ಎಂದು ನಾಕು ದಿನ ಬಿಟ್ಟು ತಿಳಿದುಬಂತು. ಸಂಜೆ ಹೊತ್ತಿಗೆ ಮೊಬೈಲು ಹಿಡಿದು ಬಂದಳು. ಅದರಲ್ಲಿ ಬಂದ ಮೆಸೇಜು ಅವಳಿಗೂ, ಅವಳ ಗಂಡನಿಗೂ ಅರ್ಥವಾಗಿಲ್ಲ. ಇಂಗ್ಲಿಷಿನಲ್ಲಿ ಪಾಸಿಟಿವ್ ಎಂದು ಹೇಳುವ ಮೆಸೇಜು ಅದು. ತನ್ನ ಜೊತೆಗೆ ಗಂಡನನ್ನೂ ಕರೆ ತಂದಿದ್ದಾಳೆ. ಕೊರೊನಾ ಬಂದವರು ಮನೆಯಿಂದ ಹೊರಗೆ ಬರಬಾರದು, ಕೋವಿಡ್ ಆಸ್ಪತ್ರೆ ಇದೆ, ಅಲ್ಲಿಗೆ ಮಾತ್ರ ಹೋಗಬೇಕೇ ಹೊರತು ಹೀಗೆಲ್ಲ ಬರಬಾರದು ಎಂದೆ. ‘ಕೊರೊನನು ಇಲ್ಲ, ಮಣ್ಣಿಲ್ಲ, ಎಷ್ಟ್ ವರ್ಷಲಿದ ನೋಡ್ತಿದಿರ ನಮ್ನ’ ಎಂದು ಕೂತಲ್ಲಿಂದಲೇ ಅವ ಗುಟುರು ಹಾಕಿದ. ತಾನು ನಮ್ಮ ಮೇಲಿಟ್ಟ ವಿಶ್ವಾಸಕ್ಕೆ ಬೆಲೆಯೇ ಇಲ್ಲ ಎಂಬ ಅಸಮಾಧಾನ ಅವನ ಕಣ್ಣುಗಳನ್ನು ಮತ್ತಷ್ಟು ಕೆಂಪಾಗಿಸಿತು. ‘ಅವ್ರಿಗೆ ಕೊರೊನ ಅಂದ್ರೆ ಸಿಟ್ ಬತ್ತದೆ. ಆ ಆಶಾ ಕಾರಕರ್ತೆ ಬಂದು ಮನಿಂದ ಹೊರಗ್ ಬರುಕಿಲ್ಲ ಅಂತು. ಇರ‍್ದಿದ್ರೆ ನಮ್ಗೆ ಸಾಮಾನ ಯಾರು ತಂದುಕೊಡ್ತು ಅಂತ ಕೇಳಿ ಅದ್ಕೆ ಹೊಡ್ದು ಕಳಸಾರೆ’ ಎಂದಳು. ಐನೂರು ರೂಪಾಯಿ ರಿಕ್ಷಾ ಬಾಡಿಗೆ ಕೊಟ್ಟು ಬಂದಿದ್ದೇವೆ, ಒಂದು ಇಂಜೆಕ್ಷನ್ ಹಾಕಿ, ಶಕ್ತಿಗೆ ಗ್ಲುಕೋಸ್ ಹಾಕಿ ಕಳಿಸಿ ಎನ್ನುವುದು ಅವಳ ಒತ್ತಾಯ. ‘ಏನೂ ತೊಂದ್ರೆ ಇಲ್ಲಲ?’ ಎಂಬ ಆತಂಕ.

ಉಳಿದ ರೋಗಿಗಳ ದೃಷ್ಟಿಯಿಂದ, ನಮ್ಮ ಹಿತದೃಷ್ಟಿಯಿಂದ ಹಾಗೆಲ್ಲ ಆಗದೆಂದು ಹೊರಗೆ ಸಾಗಹಾಕಿದರೆ ರಿಕ್ಷಾ ಬರಲಿಲ್ಲವೆಂದು ಕಟ್ಟೆ ಮೇಲೆ ಮಲಗಿದ. ಸ್ವಲ್ಪ ಹೊತ್ತಿಗೆ ಜೀವವೇ ಬಾಯಿಂದ ಹೊರ ಹೋಗುತ್ತಿದೆಯೇನೋ ಎಂಬಂತೆ ವಾಂತಿ ಮಾಡಿದ ಸದ್ದು ಕೇಳಿಸಿತು. ಉಳಿದವರು ದೂರದಿಂದ ನೋಡುತ್ತ ಬೈದರೇ ಹೊರತು ಯಾರೂ ಮಾತಾಡಲಿಲ್ಲ. ಅವ ಮುಟ್ಟಿಸಿಕೊಳ್ಳಬಾರದವ ಎಂದವರು ಗುರುತಿಸಿದ್ದರು. ಎಷ್ಟು ಕಳ್ಳಭಟ್ಟಿ ಮಾಡಿ ಯರ‍್ಯಾರಿಗೆ ಮಾರಿದ್ದನೋ? ಅವನ ಹೆಂಡ ಒಯ್ಯುವಾಗ ಇಲ್ಲದ ಮಡಿವಂತಿಕೆ ಅವ ವಾಂತಿ ಮಾಡಿದಾಗ ಧುತ್ತನೆ ಎದುರು ಬಂದಿತು.

ಕುಡಿತವಿಲ್ಲದ ವಿತ್‌ಡ್ರಾವಲ್ ಮತ್ತು ವಾಂತಿಯಿಂದ ತುಂಬ ನಿತ್ರಾಣವಾಗಿದ್ದ. ರಿಕ್ಷಾದಲ್ಲಿ ತಾಲೂಕಾಸ್ಪತ್ರೆಗೆ ಹೋಗಿ ಎಂದೆವು. ರಿಕ್ಷಾದವ ಅಲ್ಲಿಗೆ ಬರುವುದಿಲ್ಲ ಎಂದು ಹೆದರಿದ. ‘ದುಡ್ ಸಾಕಾಗುದಿಲ್ಲ’ ಎಂದು ಅವಳೂ ಹೋಗಲು ನಿರಾಕರಿಸಿದಳು. ಆಂಬುಲೆನ್ಸಿಗೆ ಫೋನು ಮಾಡುತ್ತೇವೆ ಎಂದೆವು. ‘ನಂಗೊಂದು ಗ್ಲುಕೋಸ್ ಹಚ್ತಿರ ಇಲ್ವ? ಮದ್ಲೆಲ್ಲ ಹಿಂಗೆ ಆಗಿದ್ದೇ ಅಲ್ವ? ಏನ್ ಇವತ್ತ ಬಂದುದ್ದು ನಾನು?’ ಎಂದು ತನ್ನ ಸಾರಾಯಿ ಚರಿತ್ರೆಯನ್ನು ನನಗೆ ನೆನಪಿಸಿ ಕೂತಲ್ಲೇ ಗುಟುರು ಹಾಕಿದ. ಅವನಿಗೊಂದು ಗ್ಲುಕೋಸ್ ಏರಿಸದಿದ್ದರೆ ನಮಗೇ ಹೊಡೆಯುವಂತೆ ಕಾಣಿಸಿತು. ಆಕ್ಸಿಜನ್ ಚೆನ್ನಾಗಿದೆ. ಬಿಪಿ ಸರಿ ಇದೆ. ಏರುಜ್ವರಕ್ಕೆ ಪಲ್ಸ್ ಓಡುತ್ತಿದೆ. ಬೇರೆ ದಾರಿಯಿಲ್ಲ. ಅವನಿಗೆ ತಿಳಿಸಿ, ಬುದ್ಧಿ ಹೇಳಿ, ಮತ್ತೆ ಬರುವಂತಿಲ್ಲ ಎಂಬ ಷರತ್ತಿನೊಂದಿಗೆ ಆಚೆ ಕೋಣೆಯಲ್ಲಿ ಮಲಗಿಸಿ ಸಲೈನ್ ಹಚ್ಚಿದೆವು. ಆಸ್ಪತ್ರೆಯಲ್ಲಿ ನಾವು ಸಿದ್ಧವಿಟ್ಟುಕೊಳ್ಳುವ ಕಿರಾಣಿ ಸಾಮಾನುಗಳ ಒಂದು ಗಂಟನ್ನು ಅವಳಿಗೆ ಕೊಟ್ಟು ಇನ್ನು ಹತ್ತು ದಿನ ಅವನನ್ನು ಬೇರೆ ಕೋಣೆಯಲ್ಲಿ ಒಳಗೆ ಇಡಬೇಕು, ನೀನೂ ಟೆಸ್ಟ್ ಮಾಡಿಸಬೇಕು, ಹೊರಗೆ ಬರಬೇಡಿ ಎಂದೆವು. ಸೀಕು ಕಡಿಮೆಯಾಗದಿದ್ದರೆ ಅಂದೇ ತಾಲೂಕಾಸ್ಪತ್ರೆಯ ಕೋವಿಡ್ ವಾರ್ಡಿಗೆ ಸೇರಿಸು ಎಂದು ಹೇಳಿದರೆ, `ಅಯ್ಯಯ್ಯ, ಜೀಂವಾ ಹೋದ್ರು ಅಡ್ಡಿಲ್ಲ, ಅಲ್ಲಿಗ್ ಮಾತ್ರ ಬ್ಯಾಡರೋ. ತಗ್ದುಬಿಡ್ತರಂತೆ ಹೋರ‍್ನ. ಸತ್ ಹೆಣುದ್ ಕಣ್ಣು ಕಿಡ್ನಿ ತೆಗಿತರಂತೆ. ಅಲ್ಲಿಗ್ ಹೋಗು ಸುದ್ದಿ ಒಂದ್ ಹೇಳಬೇಡಿ’ ಎನ್ನುತ್ತ ಎದ್ದು ಹೋದಳು. ಯಾವುದೋ ಚಂಡಮಾರುತ ಬರಲಿದೆಯೆಂದು, ಅತಿ ಜೋರು ಗಾಳಿ ಬೀಸಿ ಮಳೆ ಸುರಿಯಲಿದೆಯೆಂದು ಕುಳಿತವರು ಹೇಳಿದ ಸುದ್ದಿ ಕೇಳಿ ಹೊಳೆಪಕ್ಕದ ತಮ್ಮ ಹಟ್ಟಿಗೆ ನೀರು ನುಗ್ಗಿದರೆ ಈ ರಾತ್ರಿ ಏನು ಗತಿ ಎಂಬ ಚಿಂತೆಯೊಂದಿಗೆ ಗಂಡ, ಮಗಳನ್ನು ರಿಕ್ಷಾ ಹತ್ತಿಸಿ ಅವಳು ಹೊರಟಳು. ಅವಳ ಧೈರ್ಯ, ಅಜ್ಞಾನದ ಎದುರು ಕೊರೊನಾ ವೈರಸ್ ತೀರಾ ಕ್ಷುದ್ರ ಕಣವಾಗಿ ತೋರಿತು!

ಅವನ ಬಳಿ ಸೈಕಲ್ ಕೂಡಾ ಇಲ್ಲ. ಏನಾದರೂ ಆದರೆ ತಾಲೂಕಾ ಕೇಂದ್ರದ ಆಸ್ಪತ್ರೆಗೆ ಕರೆದೊಯ್ಯುವವರು ಯಾರು? ಗೊತ್ತಿದ್ದರೆ ಕೋವಿಡ್ ಪೇಶೆಂಟುಗಳಿಗೆ ಇಟ್ಟಿರುವ ಆಂಬುಲೆನ್ಸಿನ ನಂಬರನ್ನಾದರೂ ಕೊಡಬಹುದಿತ್ತಲ್ಲ? ಇವರಿಗೆ ಕೊರೊನಾ ಹಿಂದುಮುಂದನ್ನು ಅರ್ಥ ಮಾಡಿಸುವುದಾದರೂ ಹೇಗೆ? ಎಂದೆಲ್ಲ ಯೋಚಿಸುತ್ತ ನಾವು ನಮ್ಮ ಶುದ್ಧಿ, ಆ ಸ್ಥಳದ ಶುದ್ಧಿಯಲ್ಲಿ ತೊಡಗಿದಾಗ ಗುಡುಗು, ಮಳೆ ಶುರುವಾಗಿ ಕರೆಂಟು ಹೋಯಿತು.

*

ಪದ ಅರ್ಥ ಉದ್ರೆ = ದುಡ್ಡಿಲ್ಲದೆ ಕೊಡುವುದು, ಸಾಲ ಗೌಲು = ವಾಸನೆ (ವಾಸನೆ ಇರುವುದರಿಂದ ಮೀನು?) ಕತ್ತ = ತೆಂಗಿನ ನಾರು ಬೆಲ್ಲದ ಕೊಳೆ = ಕಾಕಂಬಿ)

(ಫೋಟೋ ಸೌಜನ್ಯ : ಎಸ್. ವಿಷ್ಣುಕುಮಾರ್)

*

(ನಿರೀಕ್ಷಿಸಿ ‘ಕವಲಕ್ಕಿ ಮೇಲ್​ – 2’ : ‘ಏಯ್ ತಮಾ, ಮಾಸ್ಕ್ ಅಂದ್ರ ಚಡ್ಡಿ ತರಹ ನಮ್ದನ್ನೇ ನಾವು ಹಾಕಬೇಕು ಗೊತ್ತಾಯ್ತ?’) 

*

ಪರಿಚಯ : ಉತ್ತರ ಕನ್ನಡದ ಹೊನ್ನಾವರ ತಾಲೂಕಿನ ಕವಲಕ್ಕಿಯಲ್ಲಿ ವೈದ್ಯೆಯಾಗಿರುವ ಡಾ. ಎಚ್.ಎಸ್. ಅನುಪಮಾ ಕವಿ, ಲೇಖಕಿ ಸಂಘಟಕಿಯೂ. ಹೂ ಅರಳಿದ್ದಕ್ಕೆ ಯಾಕೆ ಸಾಕ್ಷಿ, ಜೀವಕೋಶ, ಮಹಿಳಾ ಆರೋಗ್ಯ, ಅಸಮಾನ ಭಾರತ, ಮಹಿಳೆ: ದಲಿತತ್ವ ಮತ್ತು ರಾಜಕೀಯ ಪ್ರಜ್ಞೆ, ಭೀಮಯಾನ, ಉರಿಯ ಪದವು, ಅಂಬೇಡ್ಕರ್ ಮತ್ತು ಕಾರ್ಟೂನ್ ವಿವಾದ, ಮೋಟರ್ ಸೈಕಲ್ ಡೈರಿ ಹೀಗೆ ಹಲವು ಕೃತಿಗಳನ್ನು ಈತನಕ ಪ್ರಕಟಿಸಿದ್ದಾರೆ.

ಇದನ್ನೂ ಓದಿ : Covid Diary : ಡಾ. ಎಚ್.ಎಸ್. ಅನುಪಮಾ ಅವರ ‘ಕವಲಕ್ಕಿ ಮೇಲ್’ ಸರಣಿ ನಾಳೆಯಿಂದ ಆರಂಭ 

Published On - 4:40 pm, Tue, 1 June 21