ನಾನೆಂಬ ಪರಿಮಳದ ಹಾದಿಯಲಿ: ನುಜ್ಜುಗುಜ್ಜಾಗದೆ ಆಸೆಯೆಂಬ ಕುದುರೆ ಏರಲಾದೀತೆ?

‘ಕಾಲೇಜಿನಲ್ಲಿ ನಡೆದ ಸ್ಥಳೀಯ ರಾಜಕಾರಣದಿಂದಾಗಿ ಕೆಲಸ ಬಿಡದಿದ್ದರೆ ಹುಚ್ಚು ಹಿಡಿಯುವುದು ಗ್ಯಾರಂಟಿ ಎನ್ನಿಸಿತು. ಒತ್ತಡಕ್ಕೆ ಬಿದ್ದ ನನಗೆ ಬರವಣಿಗೆಯೇ ಮದ್ದು ಎನ್ನಿಸಿತು, ಸಾಕಷ್ಟು ಲೇಖನಗಳು ಪತ್ರಿಕೆಗಳಲ್ಲಿ ಪ್ರಕಟವಾಗುತ್ತಾ ಹೋದವು. ಇದರಿಂದ ಮಾನಸಿಕ ಸ್ಥೈರ್ಯ ಹೆಚ್ಚುತ್ತಾ ಹೋಯಿತು. ಈಗ ಐವತ್ತುಮೂರರ ವಯಸ್ಸಿನಲ್ಲಿ ಮೊದಲ ಸಲ ಅಜ್ಜಿ ಆದ ಸಂಭ್ರಮ. ಅಮೆರಿಕಾಗೆ ಹೋಗಲು ರಜೆ ನೀಡಲು ನಿರಾಕರಿಸಿದ ಸಂಸ್ಥೆಯ ಬಗ್ಗೆ ಜಾಸ್ತಿ ಯೋಚಿಸದೆ ರಾಜೀನಾಮೆ ನೀಡಲು ಧೈರ್ಯ ತುಂಬಿದ್ದು, ಗಣಿತದಲ್ಲಿ ನಾ ಪಡೆದ ಡಾಕ್ಟೊರೇಟ್ ಮತ್ತು ನನ್ನ ಮೆಚ್ಚಿನ ಸಂಗಾತಿ ಬರವಣಿಗೆ.‘ ಡಾ. ಸಹನಾ ಪ್ರಸಾದ್

ನಾನೆಂಬ ಪರಿಮಳದ ಹಾದಿಯಲಿ: ನುಜ್ಜುಗುಜ್ಜಾಗದೆ ಆಸೆಯೆಂಬ ಕುದುರೆ ಏರಲಾದೀತೆ?
ಶ್ರೀದೇವಿ ಕಳಸದ | Shridevi Kalasad

|

Jan 27, 2021 | 1:35 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಬೆಂಗಳೂರಿನ ಡಾ. ಸಹನಾ ಪ್ರಸಾದ್ ಅವರ ಬರಹ ನಿಮ್ಮ ಓದಿಗೆ…

ಮೊಮ್ಮಗ ರಿಹಾನ್ ಅನ್ನು ತೊಡೆ ಮೇಲೆ ಮಲಗಿಸಿಕೊಂಡು ದೂರದ ಅಮೆರಿಕಾದಲ್ಲಿ, ಇಷ್ಟು ವರುಷ ಕೆಲಸ ಮಾಡಿದ ಸಂಸ್ಥೆಗೆ ರಾಜೀನಾಮೆ ಕೊಟ್ಟು, ಮಗಳ ಸಂಸಾರದ ಜತೆ ಹಾಯಾಗಿ ಇರುವ ನನ್ನ ಮನಸ್ಸಲ್ಲಿ ನೂರು ಭಾವನೆಗಳು. ಹೊಸದಾಗಿ ಅಜ್ಜಿ ಆಗಿರುವ ಸಂಭ್ರಮ, ಮನೆ, ಮಕ್ಕಳು, ಸಂಸಾರದ ಜತೆ ಯಶಸ್ವಿಯಾಗಿ ವೃತ್ತಿ ನಿಭಾಯಿಸಿದ ತೃಪ್ತಿ. ಏಳುಬೀಳಿನ ಐವತ್ತಮೂರು ವರ್ಷಗಳ ಜೀವನದಲ್ಲಿ ಕಂಡಿರುವ ನೋವು, ನಲಿವಿನ ಲೆಕ್ಕಾಚಾರ…

ಬದುಕು ಪ್ರತಿ ಹೆಜ್ಜೆಯಲ್ಲೂ ಪಾಠ ಕಲಿಸುತ್ತೆ, ಆದರೆ ಅದನ್ನು ಅರ್ಥ ಮಾಡಿಕೊಳ್ಳುವ ಜಾಣತನ ನಮ್ಮಲ್ಲಿರಬೇಕು. ಈಗಿನ ಕಾಲಕ್ಕೆ ಹೋಲಿಸಿದರೆ ಬೇಗ, ಆದರೆ ಮೂವತ್ತೊಂದು ವರುಷಗಳ ಹಿಂದಿನ ಕಾಲಕ್ಕೆ ‘ಸರಿಯಾದ ಸಮಯ’ ಅಂದರೆ ಇಪ್ಪತ್ತೆರಡು ಸಮೀಪಿಸುತ್ತಿದ್ದಂತೆ ಮದುವೆ ಆಯಿತು. ನಿಜ ಹೇಳಬೇಕೆಂದರೆ ‘ಮುಂದೇನು ಮಾಡಬೇಕೆಂದಿದ್ದೀ’ ಎಂದು ಯಾರಾದರೂ ಕೇಳಿದರೆ, ‘ಒಳ್ಳೆ ಹುಡುಗನನ್ನು ಮದುವೆ ಆಗಬೇಕೆಂದಿರುವೆ’ ಎಂದೇ ಹೇಳುತ್ತಿದ್ದೆ. ಹೌದು, ಮದುವೆಯೇ ಜೀವನದ ಗುರಿಯಾಗಿತ್ತು. ಸಾಕಷ್ಟು ಬುದ್ಧಿವಂತೆಯಾಗಿದ್ದರೂ ವೃತ್ತಿಜೀವನವನ್ನು ಕಟ್ಟಿಕೊಳ್ಳುವ ಬಗ್ಗೆ ಅಸಕ್ತಿ ಇರಲಿಲ್ಲ. ಆದರೆ ಮದುವೆ ಆದ ಮೇಲೆ ಹತ್ತಿರದ ಕಾಲೇಜಿನಲ್ಲಿ ಅಧ್ಯಾಪಕಿಯಾಗುವ ಅವಕಾಶ ಸಿಕ್ಕಿತು. ಆದರೆ ವಿದ್ಯಾರ್ಥಿಗಳು ನನಗಿಂತ ಮೂರುನಾಲ್ಕು ವರುಷವಷ್ಟೇ ಕಿರಿಯರು. ಕ್ಲಾಸ್ ಹಿಡಿತಕ್ಕೇ ಸಿಗುತ್ತಿರಲಿಲ್ಲ. ಸರಿಯಾಗಿ ಸೀರೆ ಉಡಲೂ ಬರುತ್ತಿರಲಿಲ್ಲ. ಹೇಗೋ ಸುತ್ತಿ, ಸೆರಗು ಹೊದ್ದರೂ ಯಾವ ಸ್ಟ್ರ್ಯಾಪ್ ಕಾಣುತ್ತೋ ಅನ್ನೊ ಭಯ, ಬ್ಲ್ಯಾಕ್ ಬೋರ್ಡಿಗೆ ಮುಖ ಮಾಡಿದರೆ ಬೆನ್ನ ಹಿಂದೆ ಜೋರು ಗಲಾಟೆ. ಪ್ರಾಂಶುಪಾಲರು ಬಂದು ಬದಂರೆ…

ಈ ಮಧ್ಯೆ ಮಗಳು ಹುಟ್ಟಿದಳು. ಮಗುವನ್ನು ತುಂಬಾ ಪ್ರೀತಿಯಿಂದ, ಜತನದಿಂದ ನೋಡಿಕೊಳ್ಳಬೇಕು ಅನ್ನೋ ಹಂಬಲ ಒಂದೆಡೆಯಾದರೆ, ಕೈಯಲ್ಲೊಂದು ಕೆಲಸ ಇರಬೇಕು ಅನ್ನೋ ಆಸೆಯೂ. ಪಾರ್ಟ್​ಟೈಮ್ ಕೆಲಸಕ್ಕೆ ಹೋಗಲು ಶುರು ಮಾಡಿದೆ. ಮುಂದೆ ಆರು ವರ್ಷಗಳ ತನಕ ಇದು ಹೀಗೇ ಸಾಗಿ ಸ್ನಾತ್ತಕೋತ್ತರ ಪದವಿಯೊಂದಿಗೆ ಎಮ್ ಫಿಲ್ ಮಾಡಬೇಕು ಎನ್ನಿಸಿತು. ಮನೆಗೆಲಸದೊಂದಿಗೆ ನಿತ್ಯ ಕಾಲೇಜು ಕೆಲಸ, ವಾರಕ್ಕೆ ಒಂದು ದಿನ ಯೂನಿವರ್ಸಿಟಿಗೆ ಹೋಗುವುದು, ಅಲ್ಲಿ ಗ್ರಂಥಾಲಯದಲ್ಲಿ ಅಧ್ಯಯನ ಮಾಡುವುದು, ಅಸೈನ್​ಮೆಂಟ್​ಗಳನ್ನು ಒಪ್ಪಿಸುವುದು. ಅವರ ಆಕ್ಷೇಪಣೆಗಳನ್ನು ಬಾಯಿ ಮುಚ್ಚಿ ಕೇಳಿಸಿಕೊಳ್ಳುವುದು. ಅಬ್ಬಾ ಯಾಕಪ್ಪಾ ಬೇಕು ಅನಿಸುವಷ್ಟರಲ್ಲಿ ಮಗ ಬರುವ ಸೂಚನೆ! ಇದಕ್ಕೆ ಮನಸ್ಥಿತಿ, ಸಮಯ ಹೇಗಿತ್ತು ಅಂತ ಬರೆಯಲೂ ಆಗದಂಥದ್ದು. ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಬಸ್ಸಿನಲ್ಲಿ ಪ್ರಯಾಣಿಸುವುದು ತ್ರಾಸದಾಯಕವೆನ್ನಿಸಿ ಎಂ.ಫಿಲ್ ಆಸೆಗೆ ಎಳ್ಳು ನೀರು ಬಿಟ್ಟೆ. ಆದೆರ ಮುಂದೆಂದಾದರೂ ಇದನ್ನು ಸಾಧ್ಯಮಾಡಿಕೊಳ್ಳಬೇಕೆಂಬುದು ಮನಸಲ್ಲಿ ಹಾಗೇ ಇತ್ತು.

ಈ ಮಧ್ಯೆಯೇ ಒಂದೆರಡು ಲೇಖನಗಳು ‘ವನಿತಾ’ ಪತ್ರಿಕೆಯಲ್ಲಿ ಪ್ರಕಟವಾದವು. ಆದರೆ ಹೆಚ್ಚು ಬರೆಯಲು ಆಗದಿದ್ದರೂ, ಓದುವುದನ್ನು ಬಿಡುತ್ತಿರಲಿಲ್ಲ. ಇಂಗ್ಲಿಷ್ ಮತ್ತು ಕನ್ನಡದಲ್ಲಿ ಪ್ರಕಟವಾಗುವ ಎಲ್ಲಾ ರೀತಿಯ ಪತ್ರಿಕೆಗಳನ್ನು ರಾತ್ರಿ ಮಲಗುವ ಮುಂಚೆ, ಕಾಲೇಜಿನ ಊಟದ ವೇಳೆಯಲ್ಲಿ ಓದುತ್ತಲೇ ಇರುತ್ತಿದ್ದೆ. ಬೆಳಗ್ಗೆ ೭.೧೫ ಹೊತ್ತಿಗೆ ಅಡುಗೆ, ತಿಂಡಿ ಮಾಡಿ, ಮಕ್ಕಳನ್ನು ರೆಡಿ ಮಾಡಿ ಶಾಲೆಗೆ ಕಳಿಸಿ, ನಾನು ಕಾಲೇಜಿಗೆ ಹೋಗಿ ಮಧ್ಯಾಹ್ನ ೨.೪೫ಕ್ಕೆ ಬಂದು, ಕೊಂಚ ರೆಸ್ಟ್ ಮಾಡುವುದು ನನ್ನ ದಿನಚರಿಯಾಗಿತ್ತು. ಇದೆಲ್ಲದರ ಮಧ್ಯೆ ವಾರಕ್ಕೆರಡು ದಿನ ಸಿಎ ಕ್ಲಾಸ್ ಕೂಡ ತೆಗೆದುಕೊಳ್ಳುತ್ತಿದ್ದೆ. ನನ್ನ ಅಪ್ಪ, ಅಮ್ಮ, ಮನೆಯವರ ಸಹಕಾರ ತೆಗೆದುಕೊಳ್ಳುತ್ತಿದ್ದೆ. ಹಾಗಂತ ಪೂರ್ತಿ ಅವರ ಮೇಲೆಯೇ ಭಾರ ಹೇರಲು ಮನಸ್ಸಾಗುತ್ತಿರಲಿಲ್ಲ. ಮನೆ ಸ್ವಚ್ಛಗೊಳಿಸುವುದು, ಅಡುಗೆ, ಮಕ್ಕಳಿಗೆ ಓದಿಸುವುದು, ಕಾಲೇಜಿನಲ್ಲಿ ಎಲ್ಲಾ ಚಟುವಟಿಕೆಗಳಲ್ಲೂ ಮುಂದಾಳತ್ವ ವಹಿಸುವುದು ಹೀಗೆ ಎಲ್ಲ ಕೆಲಸ ನಾನೇ ಮಾಡಬೇಕು, ಅದೂ ಅಚ್ಚುಕಟ್ಟಾಗಿಯೇ ಅನ್ನೋ ಭಾವನೆ ಯಾವಾಗಲೂ ಒಂದು ರೀತಿಯ ಒತ್ತಡದಲ್ಲಿ ನನ್ನನ್ನು ದೂಡುತ್ತಾ ಇದ್ದದ್ದೂ ನಿಜ.

ಒಂದು ಹಂತಕ್ಕೆ ಬಂದು ಕೈತುಂಬಾ ಸಂಬಳ, ಇಬ್ಬರು ಮಕ್ಕಳು, ಮತ್ತೆ ನಾಲ್ಕಾರು ಜನಕ್ಕೆ ಬೇಕಾಗಿ ನನ್ನನ್ನು ನಾನು ರೂಪಿಸಿಕೊಂಡಾಗ ಇನ್ನೂ ಏನೋ ಬೇಕಿದೆ ಅನ್ನಿಸಲು ಶುರುವಾಯಿತು. ಅಷ್ಟರಲ್ಲಿ ಕೆಲಸದ ಬದಲಾವಣೆಯೂ ಆಗಿ, ಹೊಸ ಪರಿಸರದಲ್ಲಿ ಬಹಳಷ್ಟು ಓದಿ, ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ, ಕಮ್ಮಟಗಳಲ್ಲಿ ಪೇಪರ್ ಮಂಡಿಸುತ್ತಿರುವ ಸಹೋದ್ಯೋಗಿಗಳನ್ನು ಕಂಡಾಗ ನಾನು ಬರೀ ಸಹನಾ ಆಗಿ ಉಳಿಯಬಾರದು, ಡಾಕ್ಟೊರೇಟ್ ಪದವಿ ಗಳಿಸಬೇಕು ಎಂಬ ಆಸೆಯೂ ಹುಟ್ಟಿದಾಗ ವಯಸ್ಸು ನಲವತ್ತನ್ನು ಸಮೀಪಿಸುತ್ತಿತ್ತು. ಅಷ್ಟರಲ್ಲಿ ಮಗಳು ಹೈ ಸ್ಕೂಲಿಗೆ ಬಂದಿದ್ದಳು. ಒಂದೂವರೆ ವರ್ಷದ ಎಂ.ಫಿಲ್ ಮುಗಿಸುವಷ್ಟರಲ್ಲಿ ಅವಳ ೧೦ನೇ ತರಗತಿ ಪರೀಕ್ಷೆ ಕೂಡ ಮುಗಿಯಿತು. ಮುಂದಿನ ೪ ವರುಷ ಮನೆ, ಮಕ್ಕಳಿಗೆ, ಕಾಲೇಜಿಗೆ ಮೀಸಲಿಟ್ಟೆ. ಆಗ ಬದುಕಿನ ದಿಕ್ಕು ಬದಲಾಗುವಂತಹ ಎರಡು ಘಟನೆಗಳು ನಡೆದವು.

ವಿದ್ಯಾರ್ಥಿಗಳೊಂದಿಗಿರುವ ಸುಖ…

ನಮ್ಮ ಕಾಲೇಜಿನ ಸಂಶೋಧನಾ ಕೇಂದ್ರದಿಂದ ಒಂದು ಪ್ರಾಜೆಕ್ಟ್ ಮಾಡಲು ಅನುಮತಿ ಮತ್ತು ಗ್ರ್ಯಾಂಟ್ ಸಿಕ್ಕಿತು. ಇದರೊಂದಿಗೆ ನನ್ನ ಸಹೊದ್ಯೋಗಿ ಚೆಂಗಪ್ಪ ಅವರು ನನ್ನನ್ನು ಲೇಖನಗಳನ್ನು ಬರೆಯುವಂತೆ ಉತ್ತೇಜಿಸಿದರು. ಬರೀ ಸಂಶೋಧನಾತ್ಮಕ ಲೇಖನಗಳು ಬರೆಯುತ್ತಿದ್ದ ನನಗೆ ಸೃಜನಾತ್ಮಕ ಪ್ರಕಾರ ಮತ್ತು ಶಿಕ್ಷಣಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುವ ಆಸಕ್ತಿ ಹುಟ್ಟಿತು. ೪೫ನೇ ವಯಸ್ಸಿಗೆ ಮತ್ತೆ ಬರವಣಿಗೆ ಶುರು ಮಾಡಿದ ನನಗೆ ಚೆಂಗಪ್ಪ ಹಾಗೂ ನನ್ನ ಪತಿ ಪ್ರಸಾದ್ ಟೀಕೆ, ಸಲಹೆಯೊಂದಿಗೆ ಪ್ರೋತ್ಸಾಹಿಸಿದರು. ಇದೇ ಸಮಯಕ್ಕೆ ಆಕಾಶವಾಣಿಯಲ್ಲಿ ‘ಶೋತೃ ಬೃಂದಾವನ’ ಎಂಬ ಕಾರ್ಯಕ್ರಮ ಕೂಡ ನಡೆಸಿಕೊಟ್ಟೆ. ಅದೂ ಸಹ ಬಹಳಷ್ಟು ಮೆಚ್ಚುಗೆ ಪಡೆಯಿತು. ರಿಸರ್ಚ್ ಗ್ರಾಂಟ್ ಮುಗಿಯುವ ಹೊತ್ತಿಗೆ ಸುಮಾರು ಲೇಖನಗಳನ್ನು ಕನ್ನಡ ಮತ್ತು ಇಂಗ್ಲಿಷ್ ಪತ್ರಿಕೆಗಳಿಗೆ ಬರೆದೆ. ಕೆಲವರು, ‘ ಡೆಕ್ಕನ್ ಹೆರಾಲ್ಡ್ ನಲ್ಲಿ ಮತ್ತೊಂದು ನೌಕರಿ ಇದೆಯೇನು ನಿನಗೆ? ಎಂದು ಕಿಚಾಯಿಸಿದರೆ, ಕೆಲವರು ‘ಕಾಲೇಜು, ಸಂಶೋಧನೆಯ ಕೆಲಸ ಬಿಟ್ಟು ಇದೆಲ್ಲಾ ಮಾಡುವುದೇ?’ ಎಂದು ಕಣ್ಣು ಕೆಂಪು ಮಾಡಿಕೊಂಡು.

ಹೊಸ ಕೆಲಸದಲ್ಲಿ ಬಡ್ತಿ ಸಿಕ್ಕು, ಮಕ್ಕಳು ಬೆಳೆಯುತ್ತಾ, ಸ್ವಂತ ಮನೆಯ ಕನಸು ನನಸಾಗಿ ಬದುಕಿನ ದಡ ಸೇರಿತು ಎನ್ನುವಾಗಲೇ ನನ್ನಮ್ಮ ಕಾಯಿಲೆ ಬಿದ್ದರು. ಅದೇ ಸಮಯಕ್ಕೆ ಪಿಎಚ್.​ಡಿ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣಳಾದೆ, ಸಂಖ್ಯಾಶಾಸ್ತ್ರದಲ್ಲಿ ಡಾಕ್ಟೊರೇಟ್ ಪದವಿ ಗಳಿಸುವುದಕ್ಕೆ ಕೆಲವೇ ಕೆಲವು ವಿಶ್ವವಿದ್ಯಾಲಯಗಳಲ್ಲಿ ಅವಕಾಶವಿದೆ. ಭಾರತಿಯಾರ್ ವಿಶ್ವವಿದ್ಯಾಲಯದ ಪರೀಕ್ಷೆಯಲ್ಲೂ ಉತ್ತೀರ್ಣಳಾಗಿದ್ದರೂ ಬಾರಿ ಬಾರಿ ಕೊಯಮತ್ತೂರಿಗೆ ಹೋಗಿ ಬರಲು ಕಷ್ಟ ಎಂದು ನಾನು ಕೆಲಸ ಮಾಡುತ್ತಿದ್ದ ವಿಶ್ವವಿದ್ಯಾಲಯದಲ್ಲೇ ಪ್ರವೇಶ ಪಡೆದುಕೊಂಡೆ. 2013-02018 ನನ್ನ ಅತ್ಯಂತ ಕಷ್ಟದ ದಿನಗಳು. ನನ್ನ ಬದುಕು ಮತ್ತೊಂದು ತಿರುವು ಪಡೆದುಕೊಂಡಿತು.  ಅಮ್ಮನ ಆರೋಗ್ಯ ಬಿಗಡಾಯಿಸಿದ್ದರಿಂದ ಅನಿವಾರ್ಯವಾಗಿ ಅಮ್ಮನನ್ನು ನೋಡಿಕೊಳ್ಳಲು ನರ್ಸ್ ಗೊತ್ತು ಮಾಡಬೇಕಾಯಿತು.

‘ಅಯ್ಯೋ, ನೀವು ನಿಮ್ಮ ಅಮ್ಮನ ಮನೆಗೇ ಶಿಫ್ಟ್​ ಆಗಬಹುದಲ್ಲ? ಕೆಲಸ, ದುಡ್ಡು, ಎರಡರ ವ್ಯಾಮೋಹ ಇಲ್ಲದಿದ್ದರೆ ತಾಯಿಯ ಸೇವೆ ಜಾಸ್ತಿ ಮಾಡಬಹುದು’ ಎಂಬ ಪುಕ್ಕಟ್ಟೆ ಸಲಹೆಗಳು ಬೇಕಾದಷ್ಟು ಸಿಕ್ಕವು. ಇನ್ನೊಂದೆಡೆ ಮಗಳು ಉನ್ನತ ವ್ಯಾಸಂಗಕ್ಕೆ ವಿದೇಶಕ್ಕೆ ಹೊರಟಳು, ಮಗ ದ್ವಿತೀಯ ಪಿಯೂಸಿ. ಇದೆಲ್ಲದರ ನಡುವೆ ನನ್ನ  ರೀಸರ್ಚ್ ಪ್ರಾಜೆಕ್ಟ್ ಮುಗಿದು, ಅದು ಪುಸ್ತಕ ರೂಪದಲ್ಲಿಯೂ ಬಂದು ಸಾಕಷ್ಟು ಮೆಚ್ಚುಗೆಯನ್ನೂ ಗಳಿಸಿತು. ಈಗಲೂ ಅದು ಬಹಳಷ್ಟು ಜನಕ್ಕೆ ರೆಫರೆನ್ಸ್​ ಬುಕ್ ಆಗಿದೆ. ನಂತರ ಮಗಳ ಮದುವೆ, ಮಗನ ಎಂಜಿನಿಯರಿಂಗ್ ಮುಗಿಯಿತು. ಅಮ್ಮನ ಆರೋಗ್ಯ ಮತ್ತಷ್ಟು ಹದಗೆಟ್ಟಿತು, ಪಿಎಚ್.​ಡಿ ದೊಡ್ಡ ತಲೆನೋವಾಗಿ, ಯಾವುದೇ ಮಾಡೆಲ್​ ಸೆಟ್ ಆಗದೆ, ನನ್ನ ಮಾರ್ಗದರ್ಶಕರಿಂದ ದಿನಾ ಬೈಗುಳ ತಿನ್ನುವುದೇ ಆಯಿತು.

ಹೀಗಿರುವಾಗಲೇ ಕಾಲೇಜಿನಲ್ಲಿ ಪಾಲಿಟಿಕ್ಸ್ ನಡೆದು, ಇನ್ನೇನು ಕೆಲಸ ಬಿಡದಿದ್ದರೆ ಹುಚ್ಚು ಗ್ಯಾರಂಟಿ ಎನ್ನುವವರೆಗೆ ಪರಿಸ್ಥಿತಿ ಬಿಗಡಾಯಿಸಿತು. ಆ ಸಮಯದಲ್ಲಿ ಒತ್ತಡಕ್ಕೆ ಬಿದ್ದು ಅದರಿಂದ ಹೊರಬರಲು ಮತ್ತೆ ಮತ್ತೆ ಬರೆದೆ. ಸಾಕಷ್ಟು ಲೇಖನಗಳು ಪ್ರಕಟಗೊಂಡವು. ಟಿವಿ ನೋಡುವುದು, ಶಾಪಿಂಗ್ ಮಾಡುವುದರಲ್ಲಿ ನನಗೆ ಆಸಕ್ತಿ ಇರದ ಕಾರಣ ಬರೆವಣಿಗೆಯಿಂದಲೇ ನನ್ನ ಮಾನಸಿಕ ಸ್ಥೈರ್ಯ ಹೆಚ್ಚುತ್ತ ಹೋಯಿತು. ಈಗ ಐವತ್ತುಮೂರರ ವಯಸ್ಸಿನಲ್ಲಿ ಮೊದಲ ಸಲ ಅಜ್ಜಿ ಆದ ಸಂಭ್ರಮ. ಅಮೆರಿಕಾಗೆ ಹೋಗಲು ರಜೆ ನೀಡಲು ನಿರಾಕರಿಸಿದ ಸಂಸ್ಥೆಯ ಬಗ್ಗೆ ಜಾಸ್ತಿ ಯೋಚಿಸದೆ ರಾಜೀನಾಮೆ ನೀಡಲು ಧೈರ್ಯ ತುಂಬಿದ್ದು, ಗಣಿತದಲ್ಲಿ ನಾ ಪಡೆದ ಡಾಕ್ಟೊರೇಟ್ ಮತ್ತು ನನ್ನ ಮೆಚ್ಚಿನ ಸಂಗಾತಿ ಬರವಣಿಗೆ.

*** ಪರಿಚಯ: ಡಾ. ಸಹನಾ ಪ್ರಸಾದ್ ಕ್ರೈಸ್ಟ್​ ಯೂನಿವರ್ಸಿಟಿ, ಜೈನ್ ಯೂನಿವರ್ಸಿಟಿ ಮತ್ತು ವಿವಿಧ ಕಾಲೇಜುಗಳಲ್ಲಿ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ಧಾರೆ ಮತ್ತು ಹವ್ಯಾಸಿ ಬರಹಗಾrರೂ ಆಗಿದ್ದಾರೆ.

ನಾನೆಂಬ ಪರಿಮಳದ ಹಾದಿಯಲಿ: ನೌಕರಿ ಮಾಡೂ ಜಗಾದಾಗ ಎಂದೂ ಮನಿ ಪರಿಸ್ಥಿತಿ ಹೇಳಬಾರದರೀ…

ತಾಜಾ ಸುದ್ದಿ

Follow us on

Most Read Stories

Click on your DTH Provider to Add TV9 Kannada