ನಾನೆಂಬ ಪರಿಮಳದ ಹಾದಿಯಲಿ: ಇದ್ದಲ್ಲಿ ಅಗಿ ಬಿದ್ದಲ್ಲಿ ಚಿಗಿ ಇದೇ ಬದುಕಿನ ‘ಆಸ್ವಾದ’

‘ಮೈಸೂರಿನಲ್ಲಿ ನಾಲ್ಕುನೂರು ರೂಪಾಯಿಗಳ ಸಂಬಳದ ಕೆಲಸ ಹಿಡಿದೆ. ಆರಂಭದಲ್ಲಿ ಅಣ್ಣ ನಾನು ಇಬ್ಬರೂ ಬಂಧುಗಳ ಮನೆಯಲ್ಲಿದ್ದೆವು. ಅರೆಹೊಟ್ಟೆ ಊಟ ರಟ್ಟೆಮುರಿಯ ಕೆಲಸ. ಅಷ್ಟೆಲ್ಲಾ ಮಾಡಿಯೂ ಮೂವತ್ತು ರೂಪಾಯಿಗಳ ಕಳ್ಳತನದ ಅಪವಾದ ಬಂದಾಗ ರಾತ್ರೋರಾತ್ರಿ ಆ ಮನೆ ತೊರೆದು ಸಣ್ಣ ಮನೆ ಬಾಡಿಗೆಗೆ ಹಿಡಿದಾಗಿನಿಂದ ಬದುಕಿನ ದೆಸೆ ಬದಲಾಯ್ತು. ಉತ್ತಮ ಕೆಲಸ, ಸಹೋದ್ಯೋಗಿಯೊಡನೆ ಮದುವೆ, ಮಗ, ಸುಂದರ ಸಂಸಾರ. ಹತ್ತಿರದಲ್ಲಿಯೇ ತವರು. ಬದುಕು ಕಳೆಗಟ್ಟಿತು.‘ ಶೈಲಜಾ ಮೈಸೂರು

ನಾನೆಂಬ ಪರಿಮಳದ ಹಾದಿಯಲಿ: ಇದ್ದಲ್ಲಿ ಅಗಿ ಬಿದ್ದಲ್ಲಿ ಚಿಗಿ ಇದೇ ಬದುಕಿನ ‘ಆಸ್ವಾದ’
Follow us
ಶ್ರೀದೇವಿ ಕಳಸದ
|

Updated on:Feb 03, 2021 | 5:15 PM

ಅಮ್ಮನಾಗುತ್ತಿದ್ದಂತೆ ತೆರೆದುಕೊಳ್ಳುವ ಪುಳಕ ಆವರಿಸಿಕೊಳ್ಳುವ ಜವಾಬ್ದಾರಿಗಳಲ್ಲಿ ನಿನ್ನೆಗಳ ವಜ್ಜೆಯೂ ಇರುತ್ತದೆ ನಾಳೆಗಳ ಆತಂಕವೂ ಸೇರಿರುತ್ತದೆ. ಆದರೂ ಒಂದೊಂದನ್ನೇ ಕೂಡಿಕಳೆದು ಅಷ್ಟಷ್ಟೇ ಒಳಗೊಳಗೆ ಚಿಗಿತುಕೊಂಡು ಮಾಗುವ ಪ್ರಕ್ರಿಯೆಯಲ್ಲಿ ನಮ್ಮನ್ನು ನಾವು ಕಂಡುಕೊಳ್ಳುವ ಪ್ರಯತ್ನ ನಿರಂತರ ಸಾಗಿರುತ್ತದೆ. ಬಯಸಿದ್ದು ಉಡಿಗೆ ಬಂದು ಬೀಳಲು ಇಲ್ಲಿ ಯಾವ ದೇವರೂ ಪ್ರತ್ಯಕ್ಷನಾಗಿ ವರ ನೀಡಲಾರ, ಹಾಗೆಯೇ ಕೈಹಿಡಿದು ಮುನ್ನಡೆಸಲಾರ. ನಮ್ಮ ಆಸಕ್ತಿಗಳಿಗೆ, ಆಕಾಂಕ್ಷೆಗಳಿಗೆ, ಹಂಬಲಗಳಿಗೆ ಅನುಗುಣವಾಗಿ ಒಳಗೊಳ್ಳುವ ನಿರಂತರ ಪ್ರಯತ್ನದಲ್ಲೇ ನಾವು ದೇವರನ್ನು ಕಾಣುವುದು. ಹೀಗಿರುವಾಗ ಎಲ್ಲರ ಮಧ್ಯೆಯೂ ನಾವು ನಾವಾಗಿ ಇರುವುದು, ನಮಗೂ ಒಂದು ವ್ಯಕ್ತಿತ್ವವಿದೆ, ಅಸ್ತಿತ್ವವಿದೆ ಎಂಬ ಎಚ್ಚರದೊಂದಿಗೆ ಚಲಿಸುವ ಹಾದಿ ಕೇವಲ ಹೂಹಾದಿಯೇ ಆಗಿರಲು ಸಾಧ್ಯವಾದೀತಾದರೂ ಹೇಗೆ? ಬೆರಳೆಣಿಕೆಯಷ್ಟು ಹೆಣ್ಣುಮಕ್ಕಳು ಈ ವಿಷಯದಲ್ಲಿ ಅದೃಷ್ಟವಂತರು. ಉಳಿದವರು? ಇರುವುದೊಂದೇ ಬದುಕು. ಎಡರುತೊಡರುಗಳನ್ನು ಬಿಡಿಸಿಕೊಂಡೇ ಸಾಗಬೇಕೆಂದರೆ ಚೂರಾದರೂ ಆಸರೆ ಬೇಕು ಹೆಚ್ಚು ಮನೋಬಲ ಬೇಕು. ಈ ಹಿನ್ನೆಲೆಯಲ್ಲಿ ವಿವಿಧ ಕ್ಷೇತ್ರಗಳಲ್ಲಿ ಈಗಾಗಲೇ ಗುರುತಿಸಿಕೊಂಡ ಹೆಣ್ಣುಮಕ್ಕಳನ್ನು ‘ನಾನೆಂಬ ಪರಿಮಳದ ಹಾದಿಯಲಿ’ ಸರಣಿಯಲ್ಲಿ ಪಾಲ್ಗೊಳ್ಳುವಂತೆ ಟಿವಿ9 ಕನ್ನಡ ಡಿಜಿಟಲ್ ಕೇಳಿಕೊಂಡಾಗ ಖುಷಿಯಿಂದ ತಮ್ಮ ಅನುಭವದ ಬುತ್ತಿಗಳನ್ನು ಬಿಚ್ಚಿಟ್ಟರು. ಓದುತ್ತಾ ಓದುತ್ತಾ ನಿಮಗೂ ಏನಾದರೂ ಹಂಚಿಕೊಳ್ಳಬೇಕೆನ್ನಿಸಿದಲ್ಲಿ ಖಂಡಿತ ಬರೆಯಿರಿ. tv9kannadadigital@gmail.com

ಪರಿಕಲ್ಪನೆ: ಶ್ರೀದೇವಿ ಕಳಸದ

ಧಾರವಾಡದಲ್ಲಿ ಆಸ್ವಾದ ಗೃಹೋದ್ಯಮದಲ್ಲಿ ತೊಡಗಿಕೊಂಡಿರುವ ಶೈಲಜಾ ಮೈಸೂರು ಅವರಿಗೆ ಪುಟ್ಟದೊಂದು ಹೋಟೆಲ್ ಮಾಡುವ ಕನಸಿದೆ. ಈ ಕನಸು ಕಾಣಲು ಅವರಲ್ಲಿನ್ನೂ ಕಸುವು ಉಳಿದಿದೆಯೆಂದರೆ ಅದಕ್ಕೆ ಕಾರಣವೇನಿರಬಹುದು? ಓದಿ…

ಅಪ್ಪ ಅಮ್ಮ, ನಾವು ಏಳು ಮಕ್ಕಳು ಜೊತೆಗೆ ಅಜ್ಜಿ ತಾತ ಮತ್ತು ಅಪ್ಪನ  ಸೋದರತ್ತೆ ಒಬ್ಬರು. ಆಕೆ ವಿಧವೆ ನಮ್ಮ ಸಾಕು ತಾಯಿ ಕೂಡ. ಸಂಕಷ್ಟದ ಕಾಲದಲ್ಲೂ ಬಯಸೀ ಬಯಸೀ ನಾಲ್ಕು ಹೆಣ್ಣುಮಕ್ಕಳನ್ನು ಪಡೆದ ನಮ್ಮಪ್ಪನಿಗೆ ಹೆಣ್ಣುಮಕ್ಕಳು ಧೈರ್ಯವಾಗಿರಬೇಕು. ಎಲ್ಲ ಕೆಲಸಗಳಿಗೂ ಮುನ್ನುಗ್ಗಬೇಕು ಅನ್ನುವ ಆಸೆ. ನಾನೋ ಹುಟ್ಟಾ ಅಳುಮುಂಜಿ. ಮಾತು ಕಡಿಮೆ ಅಳು ಜಾಸ್ತಿ. ಅಳುತ್ತೇನೆ ಅನ್ನುವ ಒಂದೇ ಕಾರಣಕ್ಕೆ ಅಪ್ಪನಿಗೆ ನನ್ನ ಕಂಡರೆ ಕೋಪ. ಅಪ್ಪನಿಗೆ ನನ್ನನ್ನು ಕಂಡರಾಗೋಲ್ಲ ಅನ್ನೋ ಭಾವನೆ ಆಗಲೇ ನನ್ನ ಮನದಲ್ಲಿ ಬೇರೂರಿತು. ನಾನು ಮತ್ತಷ್ಟು ಮೌನಿಯಾಗಿದ್ದೇ ಈ ಅನಾಥ ಭಾವದಿಂದ.

1986 ರ ಸಮಯ ಅಪ್ಪನಿಗೆ ಸದಾ ಕೆಮ್ಮು. ಊರಿನ ಡಾಕ್ಟರ್ ಏನೋ ಔಷಧಿ ಕೊಡೋರು, ಇವರು ತೊಗೊಳೋರು. ಸಂಪಾದನೆ ಇಲ್ಲ. ಜಮೀನಿಂದ ಬರ್ತಾ ಇದ್ದ ಬೆಳೆಯಲ್ಲಿ ಖರ್ಚು ಕಳೆದು ಹೊಟ್ಟೆಗಾಗೋದು ಬಟ್ಟೆ ವರ್ಷಕ್ಕೆರಡು. ಹೆಣ್ಣುಮಕ್ಕಳಿನ್ನೂ ಚಿಕ್ಕವರು. ಅಪ್ಪ ಚಿಂತೆಯಲಿ ಕರಗಲಾರಂಭಿಸಿದರು. ನಾನು ಅಕ್ಕ ಸೇರಿ ಅವರನ್ನು ಶಿವಮೊಗ್ಗದ ಡಾಕ್ಟರ್ ಒಬ್ಬರ ಬಳಿ ಕರೆದೊಯ್ದೆವು. ಎಲ್ಲ ಪರೀಕ್ಷೆಯ ಬಳಿಕ ಅಪ್ಪನನ್ನು ಹೊರಗೆ ಕಳಿಸಿ ಆ ಡಾಕ್ಟರ್ ಹೇಳಿದ ವಿಷಯ ನಮ್ಮನ್ನು ಪಾತಾಳಕ್ಕಿಳಿಸಿತು.

ಜೋಳದ ರೊಟ್ಟಿ ಊಟ

ಅಪ್ಪನಿಗೆ ಶ್ವಾಸಕೋಶದ ಕ್ಯಾನ್ಸರ್. ಅವರನ್ನು ಬೆಂಗಳೂರಿಗೆ ಕರೆದೊಯ್ಯಬೇಕು. ನನ್ನಕ್ಕನಿಗೆ ಇಪ್ಪತ್ತೆರಡು ನನಗೆ ಇಪ್ಪತ್ತು. ಆಗ ದುಃಖ ಆತಂಕಗಳನ್ನು ಅದುಮಿಟ್ಟುಕೊಂಡು ನಾವಿಬ್ಬರೂ ಆಚೆ ಬಂದೆವು. ಏನಂದ್ರು ಡಾಕ್ಟರ್ ಅಂತ ಕೇಳಿದ ಅಪ್ಪನಿಗೆ ಏನಿಲ್ಲಪ್ಪ ಔಷಧಿ ಬದಲಾಯಿಸಿದಾರೆ ಅಷ್ಟೇ ಅಂದೆವು. ಅಪ್ಪ ನಮ್ಮಿಬ್ಬರನ್ನೂ ಹೋಟೆಲ್​ಗೆ ಕರೆದೊಯ್ದರು. ಚೆನ್ನಾಗಿ ನೆನಪಿದೆ, ರವೆ ಇಡ್ಲಿ ಜಾಮೂನು ತರಿಸಿದರು . ಗಂಟಲಲ್ಲಿ ಇಳಿದೀತಾದರೂ ಹೇಗೆ? ತಿನ್ರಮ್ಮ ಏನ್ ಯೋಚ್ನೆ ಮಾಡ್ತೀರಿ, ನಂಗೇನು ಕ್ಯಾನ್ಸರ್ ಅಲ್ವಲ್ಲ. ಮಾಮೂಲಿ ಕೆಮ್ಮು ಸರಿ ಹೋಗತ್ತೆ ಅಂದಾಗ ನಾವಿಬ್ಬರೂ ಅಳು ತಡೆಯಲಾರದೇ ಬಿಕ್ಕಳಿಸಿದೆವು. ಗಟಗಟನೆ ನೀರು ಕುಡಿದು ನಕ್ಕೆವು. ನೀರಿಳಿಯದ ಗಂಟಲಲ್ಲಿ ಇಡ್ಲಿ ತುರುಕಿದೆವಾದರೂ ಜಾಮೂನು ಮಾತ್ರ ತಿನ್ನಲಾಗಲಿಲ್ಲ.

ಅವರನ್ನು ಕಿದ್ವಾಯಿಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದೆವಾದರೂ ಅಪ್ಪ ನಮ್ಮನ್ನು ಅನಾಥರನ್ನಾಗಿಸಿ ನಡೆದೇ ಬಿಟ್ಟರು. ಡಿಪ್ಲಮಾ ಕೊನೇವರ್ಷ. ಪರೀಕ್ಷೆಯ ಸಮಯ. ಗೆಳತಿಯರೆಲ್ಲ ಕೂಡಿ ಕಂಬೈನ್ಡ್ ಸ್ಟಡಿ ಮಾಡುತ್ತಾ ಇದ್ದೆವು. ಆರು ತಿಂಗಳಿಂದ ಶ್ವಾಸಕೋಶದ ಕ್ಯಾನ್ಸರ್​ನಿಂದ ನರಳ್ತಾ ಇದ್ದ ಅಪ್ಪ ಕೊನೆಯುಸಿರೆಳೆದರು. ಸಾಯುವ ಸಮಯದಲ್ಲಿ ಅಪ್ಪನಿಗೆ ಈ ಅಳುಮುಂಜಿ ಮಗಳು ಧೈರ್ಯವಾಗಿ ನಿಂತು ಬೆಂಗಳೂರಿನಂತಹ ನಗರದಲ್ಲಿ ಜೊತೆಗಿದ್ದು ಚಿಕಿತ್ಸೆ ಕೊಡಿಸಿದ ಬಗ್ಗೆ ಹೆಮ್ಮೆಯಿತ್ತು. ನನ್ನ ತಂಗಿಯರಿಬ್ರೂ ಇನ್ನೂ ಓದುತ್ತಾ ಇದ್ದರು. ದೊಡ್ಡಣ್ಣನಿಗೆ ಮದುವೆಯಾಗಿತ್ತು. ಸಂಸಾರದಲ್ಲಿ ಬಿರುಕಾಗಲೇ ಮೂಡಿತ್ತು. ಉಳಿದಿಬ್ಬರು ಅಣ್ಣಂದಿರು ದೂರದೂರುಗಳಲ್ಲಿ ಮೂನ್ನೂರು ನಾಲ್ಕುನೂರು ರೂಪಾಯಿಗಳ ಸಂಬಳಕ್ಕೆ ದುಡೀತಾ ಇದ್ದರು. ಈ ಸಮಯದಲ್ಲಿ ದಿಕ್ಕಾಗಿ ನಿಂತವಳು ಅಮ್ಮನಂಥ ಅಕ್ಕ. ಕೆಲಸ ಒಂದಿದ್ದರೆ ಎಂಥ ದುಃಖವೂ ಬಾಧಿಸದು ಅನ್ನುವ ಸತ್ಯವರಿತು ಉದ್ಯೋಗ ಅರಸಿ ಅಣ್ಣನೊಂದಿಗೆ ಮೈಸೂರು ಸೇರಿ ನಾಲ್ಕುನೂರು ರೂಪಾಯಿಗಳ ಸಂಬಳದ ಕೆಲಸ ಹಿಡಿದೆ. ಆರಂಭದಲ್ಲಿ ಅಣ್ಣ ನಾನು ಇಬ್ಬರೂ ಬಂಧುಗಳ ಮನೆಯಲ್ಲಿದ್ದೆವು. ಅರೆಹೊಟ್ಟೆ ಊಟ ರಟ್ಟೆಮುರಿಯ ಕೆಲಸ. ಅಷ್ಟೆಲ್ಲಾ ಮಾಡಿಯೂ ಮೂವತ್ತು ರೂಪಾಯಿಗಳ ಕಳ್ಳತನದ ಅಪವಾದ ಬಂದಾಗ ರಾತ್ರೋರಾತ್ರಿ ಆ ಮನೆ ತೊರೆದು ಸಣ್ಣ ಮನೆ ಬಾಡಿಗೆಗೆ ಹಿಡಿದಾಗಿನಿಂದ ಬದುಕಿನ ದೆಸೆ ಬದಲಾಯ್ತು. ಉತ್ತಮ ಕೆಲಸ, ಸಹೋದ್ಯೋಗಿಯೊಡನೆ ಮದುವೆ, ಮಗ, ಸುಂದರ ಸಂಸಾರ. ಹತ್ತಿರದಲ್ಲಿಯೇ ತವರು. ಬದುಕು ಕಳೆಗಟ್ಟಿತ್ತು.

ನಿಂತಲ್ಲಿ ನಿಲ್ಲದೆ…

ಮಗನಿಗಾಗ ನಾಲ್ಕು ವರ್ಷ. ಅತ್ತೆ ಇಲ್ಲವಾದರು. ಮಾವನವರ ಸೇವೆ ನನ್ನ ಕರ್ತವ್ಯವಾಗಿತ್ತು. ಹೊಂದಾಣಿಕೆ ಅಗತ್ಯವಾಗಿತ್ತು. ಇದ್ದ ಕೆಲಸ ಬಿಟ್ಟು ಮಗನೊಂದಿಗೆ ಮಾವನವರ ಸೇವೆಗಾಗಿ ಬೆಂಗಳೂರು ಸೇರಬೇಕಾಯ್ತು. ಎರಡೇ ವರ್ಷ. ಮಾವನವರು ಕೊನೆಯುಸಿರೆಳೆದರು  ಮೈಸೂರಿಗೆ ವಾಪಸಾಗಿ ಮಗ ಹೈಸ್ಕೂಲಿಗೆ ಬರುವವರೆಗೆ ಅವನ ಕಡೆ ಗಮನ ಹರಿಸಿದೆ.ಅವನು ದೊಡ್ಡವನಾದ. ಮತ್ತೆ ಉದ್ಯೋಗ ಅರಸಿ ಬಂತು. ವಿದೇಶದಲ್ಲಿ ತರಬೇತಿ ಒಳ್ಳೆಯ ಸಂಬಳ. ಅದೇ ಹಿಂದಿನ ಕಂಪೆನಿ. ಅದೃಷ್ಟದ ಜೊತೆಗೇ ಇತರರ ಅಸೂಯೆ ದ್ವೇಷ ಕೂಡಾ ಬೆನ್ನು ಹತ್ತಿತ್ತು. ಹಿಂದೆ ಆತ್ಮೀಯ ಸಹೋದ್ಯೋಗಿಗಳಾಗಿದ್ದವರೇ ವಿಪರೀತ ಕಿರುಕುಳ ಕೊಡಲಾರಂಭಿಸಿದರು. ನಾ ಮಾಡಿದ ಕೆಲಸಗಳಲ್ಲಿ ತಪ್ಪು ಹುಡುಕೋದು, ಅಧಿಕಾರಿಗಳೆದುರು ಚಾಡಿ, ದೂರು, ಕಾರ್ಮಿಕ ಸಂಘಟನೆಯಿಂದ ಕಿರುಕುಳ ಒಂದೇ ಎರಡೇ? ಎಲ್ಲದಕ್ಕೂ ಕಲ್ಲಾಗಿ ನನ್ನ ಕರ್ತವ್ಯ ಮಾತ್ರ ಮಾಡುತ್ತಾ ಸಾಗಿದೆ. ನನ್ನ ಪರ್ಫಾರ್ಮನ್ಸ್​ ಸರಿ ಇದ್ದರೂ ನನಗೆ ಸಿಗಬೇಕಾದ ಪ್ರೊಮೋಷನ್, ಬೋನಸ್ ಇವುಗಳನ್ನು ತಡೆಹಿಡಿದ ಮ್ಯಾನೇಜ್​ಮೆಂಟ್ ಕಾರ್ಮಿಕ ಸಂಘದ ಮುಖಂಡರ ಒತ್ತಡಕ್ಕೆ ಒಳಗಾಗಿ ನನಗೆ ಅನ್ಯಾಯವೆಸಗಿತ್ತು. ಈ ನಡುವೆ ಆಡಳಿತ ವರ್ಗದ ರಾಜಕೀಯ ದಾಳದಿಂದಾಗಿ ನನ್ನ ಪತಿಯೂ ಸೇರಿದಂತೆ ಹದಿನೈದು ಜನರ ಕೆಲಸಕ್ಕೆ ಕಲ್ಲು ಬಿತ್ತು. ಆರು ತಿಂಗಳುಗಳ ಕಾಲ ಹೋರಾಡಿದರೂ ಆಡಳಿತ ವರ್ಗದ ಹಣದಾಮಿಷದ ಮುಂದೆ ಕಾರ್ಮಿಕ ಕಾಯಿದೆಗೆ ಕಿಲುಬು ಕಾಸಿನ ಕಿಮ್ಮತ್ತು ಸಿಗಲಿಲ್ಲ.

ಶೈಲಜಾ ಪಾಕಶಾಲೆಯಿಂದ ಹಾಲುಕೋವ, ಈರುಳ್ಳಿ ಪಕೋಡ

ನನ್ನ ಪತಿ ಹೊಸ ವ್ಯವಹಾರ ಆರಂಭಿಸಿದರು. ನನ್ನ ಕರ್ತವ್ಯಪರತೆಗೆ ಅದೃಷ್ಟ ಕೈ ಹಿಡಿಯಿತು. ಕರುಬುವವರ ಎದುರಿಗೇ ಉನ್ನತ ಸ್ಥಾನ ಅರಸಿ ಬಂತು. ಮ್ಯಾನೇಜರ್ ಹುದ್ದೆಗೂ ಏರಿದೆ. ಮೂರು ವರ್ಷಗಳು ಹಗಲು ಇರುಳೆನ್ನದೇ ಆರೋಗ್ಯ ಪಣಕ್ಕಿಟ್ಟು ದುಡಿದೆ. ಆಗಲೂ ವಿಪರೀತ ದೌರ್ಜನ್ಯಗಳನೆದುರಿಸಿದೆ. ಎದುರಾಳಿಗಳ ಅಸೂಯೆ, ದ್ವೇಷದ ಕೈ ಮೇಲಾಯ್ತು. ನನ್ನ ಅದೃಷ್ಟ ಮತ್ತೆ ಕೈ ಕೊಟ್ಟಿತು. ವಿನಾಕಾರಣ ರಾಜಕೀಯದಾಟಕ್ಕೆ ನನ್ನ ಕೆಲಸವೂ ಹೋಯಿತು. ಮಗನಿನ್ನೂ ಓದುತ್ತಿದ್ದ. ನಾನೊಂದು ಸಣ್ಣ ಕೆಲಸಕ್ಕೆ ಸೇರಿಕೊಂಡೆ. ಬದುಕು ಸಹ್ಯವಾಗತೊಡಗಿತು. ನಂತರ ನನ್ನ ಐವತ್ತನೇ ವಯಸ್ಸಿನಲ್ಲಿ ನಿರೀಕ್ಷಿಸಿರದ ದೊಡ್ಡ ಹುದ್ದೆಯೊಂದು ದೊರಕಿತು, ಜನರಲ್ ಮ್ಯಾನೇಜರ್. ಐವತ್ತು ಸಾವಿರ ಸಂಬಳ, ದೇವರು ಕರುಣಾಮಯಿಯಾಗಿದ್ದ. ಅಲ್ಲಿಯೂ ಬೆನ್ನ ಹಿಂದೆ ಚೂರಿ ಮಸೆಯುವವರ ದಂಡೇ ಇತ್ತು. ಎಷ್ಟೆಲ್ಲ ಉತ್ತಮ ಕೆಲಸಗಳ ನಡುವೆಯೂ ಆಗದವರ ರಾಜಕೀಯದಾಟಕ್ಕೆ ನನ್ನ ಉದ್ಯೋಗದ ಜೀವನ ಮತ್ತೆ ಕೆಳಗೆ ಬಿತ್ತು ಅಮ್ಮನ ಅನಾರೋಗ್ಯ ನಂತರ ಅವಳ ಅಗಲಿಕೆ ಈ ಸಮಯದಲ್ಲಿ ಪದೇಪದೆ ಕಚೇರಿಗೆ ರಜೆ ಹಾಕಬೇಕಾಯ್ತು. ಈ ಸಮಯದ ಸದುಪಯೋಗ ಪಡೆದ ಬೆನ್ನ ಹಿಂದಿದ್ದ ಶತೃಗಳು ಅಧಿಕಾರಿಗೆ ಇಲ್ಲದ ಚಾಡಿ ಹೇಳಿ ಕಥೆ ಸೃಷ್ಟಿಸಿ ನನ್ನ ಕುರಿತು ಸಮರ ಸಾರಿದರು. ಮತ್ತೆ ಕೆಲಸ ಕಳೆದುಕೊಳ್ಳುವ ಸ್ಥಿತಿ ಎದುರಾದಾಗ ಮಾತ್ರ ಕುಸಿದುಹೋದೆ. ಆಗಷ್ಟೇ ಹೆತ್ತಮ್ಮನನ್ನು ಕಳೆದುಕೊಂಡ ದುಃಖ ಒಂದೆಡೆ. ಉದ್ಯೋಗ ಕಳೆದುಕೊಂಡ ನೋವು ಒಂದೆಡೆ. ಮನೆಯವರ ವ್ಯವಹಾರದಲ್ಲಿ ಅಪಾರ ನಷ್ಟ ಸಾಲದ ಬಾಧೆ. ಇದೇನಾಯಿತು ಜೀವನ ಸಾವೊಂದೇ ದಾರಿಯಾ, ನನ್ನ ಸಂತಸದ ದಿನಗಳು ಮುಗಿದುವಾ? ಎನ್ನುತ್ತಾ ಅಧೀರಳಾದೆ. ಆ ದುಃಖ ಮರೆಯಲು ಮನೆ ಮಾರಿ ಸಾಲ ತೀರಿಸಿ ಮೈಸೂರು ಬಿಟ್ಟು ಮಗ ಸೊಸೆ ಇದ್ದ ಧಾರವಾಡಕ್ಕೆ ಬಂದುದಾಯ್ತು.

ಬಿಗಿಮುಚ್ಚಳದ ಮುನ್ನ…

ಬಂದವಳಿಗೆ ಮಗನೆದುರು ಕೈ ಚಾಚಲು ಸಂಕೋಚವಾಯ್ತು. ಏನಾದರೂ ಮಾಡಬೇಕೆಂಬ ತುಡಿತ. 2019ರ ಜನವರಿಯಲ್ಲಿ ಆಸ್ವಾದ ಎನ್ನುವ ಮಸಾಲಾಪುಡಿಗಳ ಗೃಹೋದ್ಯಮ ಆರಂಭಿಸಿಯೇ ಬಿಟ್ಟೆ. ಮೊದಲ ತಿಂಗಳು ಕೇವಲ ಹನ್ನೆರಡು ಗ್ರಾಹಕರು. ಅಲ್ಪ ಲಾಭ. ನನ್ನ ಗ್ರಾಹಕರು ನನ್ನ ಫೇಸ್ಬುಕ್ ಬಂಧುಗಳು. ಅಂದು ಆರಂಭವಾದ ಈ ಉದ್ಯಮ ನನ್ನ ಕೈ ಹಿಡಿಯಿತು. ದಿನೇ ದಿನೆ ಗ್ರಾಹಕರ ಸಂಖ್ಯೆ ಬೆಳೆಯಿತು. ಇದರೊಡನೆಯೇ ಧಾರವಾಡದ ಜನರಿಗೆ ನನ್ನ ಕೈರುಚಿ ಪರಿಚಯಿಸಿದೆ. ನಿತ್ಯ ಐದಾರು ಜನರಿಗೆ ಊಟದ ಡಬ್ಬಿ ಕಳಿಸಿದೆ. ನನ್ನ ಖರ್ಚಿಗಷ್ಟೇ ಅಲ್ಲ. ಪೂರ್ಣ ಅಡುಗೆಮನೆಯ ಖರ್ಚು ನಾನೇ ವಹಿಸಿಕೊಳ್ಳುವಷ್ಟು ಸಾಮರ್ಥ್ಯ, ಆತ್ಮಸ್ಥೈರ್ಯ ಕೊಟ್ಡಿದ್ದು ಈ ನನ್ನ ಗೃಹೋದ್ಯಮ. ಇಂದಿಗೂ ಒಂದು ರೊಟ್ಟಿ ಮನೆ ಆರಂಭಿಸಿ, ಅಗತ್ಯ ಇರುವ ಹತ್ತಾರು ಜನರಿಗೆ ರುಚಿಶುಚಿಯಾದ ಊಟ ಒದಗಿಸಿ ಅವರು ಸಂತೃಪ್ತರಾಗಿ ಊಟ ಮಾಡುವುದನ್ನು ನೋಡುವ ಕನಸಿದೆ. ಆ ಕನಸು ನನಸು ಮಾಡಿಕೊಳ್ಳುವ ಕಡೆಗೆ ಪ್ರಯತ್ನ ಮಾಡಬೇಕಿದೆ.

ಈ ಬದುಕೆಂಬ ಹಾವು ಏಣಿ ಆಟದಲ್ಲಿ ಬಿದ್ದಾಗ ಅತ್ತಿದ್ದೇನೆ ಮತ್ತೆ ತಲೆ ಎತ್ತಿದ್ದೇನೆ. ಗೆದ್ದಾಗ ಖುಷಿ ಪಟ್ಟಿದ್ದೇನೆ. ಬದುಕೆಂದರೆ ನೇರ ಹಾದಿಯಲ್ಲ. ಅದೊಂದು ರೋಲರ್ ಕೋಸ್ಟರ್. ಏರಿಳಿತಗಳು ಸಹಜ. ಅದನ್ನೆದುರಿಸುತ್ತಾ ಸಮಚಿತ್ತದಿಂದ ಬಾಳುವುದು  ನಮಗಿರುವ ಒಂದೇ ಮಾರ್ಗ.

ನಾನೆಂಬ ಪರಿಮಳದ ಹಾದಿಯಲಿ: ಕಾಜಾಣ ಪ್ರೆಸೆಂಟ್ ಮೇಡಮ್ ಕೆಂಬೂತ ಪ್ರೆಸೆಂಟ್ ಮೇಡಮ್ ಗುಬ್ಬಚ್ಚಿ ಅಬ್ಸೆಂಟ್ ಮೇಡಮ್

Published On - 4:42 pm, Wed, 3 February 21

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ